An unconventional News Portal.

ಎಲ್ಲವೂ ಹಳದಿಮಯವಾಗಿರುವ ಈ ಹೊತ್ತಲ್ಲಿ ‘ಯಲ್ಲೋ ಕಿಡ್’ನಿಂದ ಹುಟ್ಟಿದ ‘ಪೀತ ಪತ್ರಿಕೋದ್ಯಮ’ದ ಕತೆ!

ಎಲ್ಲವೂ ಹಳದಿಮಯವಾಗಿರುವ ಈ ಹೊತ್ತಲ್ಲಿ ‘ಯಲ್ಲೋ ಕಿಡ್’ನಿಂದ ಹುಟ್ಟಿದ ‘ಪೀತ ಪತ್ರಿಕೋದ್ಯಮ’ದ ಕತೆ!

‘ಯಲ್ಲೋ ಜರ್ನಲಿಸಂ’ ಅಥವಾ ‘ಪೀತ ಪತ್ರಿಕೋದ್ಯಮ’…ಹಾಗೆಂದರೇನು? ಅದೇನು ಬೈಗುಳನಾ?

ಪತ್ರಿಕೋದ್ಯಮದ ಕೆಟ್ಟ ಉದಾಹರಣೆಗಳಿಗೆ, ಅನಿಷ್ಟಗಳನ್ನು ಹೇಳಲು ಬಳಸುವ ಈ ಪದದ ಮೂಲವನ್ನು ಹುಡುಕಿಕೊಂಡು ಹೊರಟರೆ ಶತಮಾನಗಳ ಹಿಂದೆ ಅಮೆರಿಕಾದ ಪತ್ರಿಕೋದ್ಯಮದ ಅನೈತಿಕ ಪೈಪೋಟಿಗೆ ಸಾಕ್ಷಿಯಾದ ಹಳದಿ ಅಂಗಿಯ ಪುಟ್ಟ ಬಾಲಕನೊಬ್ಬ ಸಿಗುತ್ತಾರೆ. ಆತನೇ ಯಲ್ಲೋ ಕಿಡ್, ಯಲ್ಲೋ ಪತ್ರಿಕೋದ್ಯಮ ಎಂಬ ಪದದ ಮೂಲಧಾತು. ಯಲ್ಲೋ ಕಿಡ್ ಒಂದು ಕಾರ್ಟೂನ್ ಕ್ಯಾರೆಕ್ಟರ್.

ಈ ಹಿಂದೆ ‘ಸಮಾಚಾರ’ ಸರಣಿಯ ಪತ್ರಿಕೋದ್ಯಮಿ ವಿಲಿಯಂ ರಾಂಡೋಲ್ಫ್ ಹರ್ಸ್ಟ್ ಬಗ್ಗೆ ಸರಣಿ ಲೇಖನಗಳನ್ನು ಪ್ರಕಟಿಸಿದ್ದೆವು. ಶತಮಾನಗಳ ಹಿಂದೆಯೇ ಪತ್ರಿಕೆಗಳ ಮಾನ ಮರ್ಯಾದೆಯನ್ನು ಬೀದಿಯಲ್ಲಿ ಹರಾಜಿಗಿಟ್ಟವನಿಗೆ ಹರ್ಸ್ಟ್. ಎಲ್ಲ ವಿಧದಲ್ಲೂ ಪಕ್ಕಾ ವ್ಯವಹಾರಸ್ಥನಂತೆ ಆಲೋಚಿಸುತ್ತಿದ್ದ. ತನ್ನ ಉದ್ಯಮ ವಿಸ್ತರಣೆಗೆ ಬೇಕಾದ ಎಲ್ಲಾ ತಂತ್ರ-ಕುತಂತ್ರಗಳನ್ನೂ ಶ್ರದ್ಧೆಯಿಂದ ಮಾಡುತಿದ್ದ. ಲಂಡನಿನ ಮುಂಜಾನೆಯ ಪತ್ರಿಕೆಗಳ ಸುದ್ದಿಯನ್ನೇ ಈತ ಪುನಃ ಬರೆದು ತನ್ನ ಸಂಜೆಯ ಪತ್ರಿಕೆಗಳಲ್ಲಿ ಪ್ರಕಟಿಸುತ್ತಿದ್ದ. ಯಾರು ಯಾರದ್ದೋ ಸುದ್ದಿ ಕದ್ದು ತನ್ನ ‘ನ್ಯೂಸ್ ಏಜೆನ್ಸಿ’ಯಲ್ಲಿ ಬೇರೆಯದೇ ಬೈಲೈನ್ ನೀಡಿ ಪ್ರಕಟಿಸುತ್ತಿದ್ದ. ಜನರ ಭಾವನೆಗಳನ್ನು ಕೆರಳಿಸುವ ಸುದ್ದಿಗಳನ್ನು ಅಚ್ಚು ಹಾಕಿಸಿ ಪತ್ರಿಕೆಗಳನ್ನು ಬಿಸಿದೋಸೆಯಂತೆ ಮಾರುತ್ತಿದ್ದ. ಅಲ್ಲಿ ಯಾವತ್ತೂ ಕೊಲೆ, ಸುಲಿಗೆ, ದರೋಡೆಯಂತ ಅಪರಾಧ ಲೋಕದ ಸುದ್ದಿಗಳಿರುತ್ತಿದ್ದವು. ಸೆಕ್ಸ್, ಲಂಚದ ಸುದ್ದಿಗಳು ಆತನ ಪತ್ರಿಕೆಯ ಜೀವಾಳವಾಗಿತ್ತು. ಈತನ ಪತ್ರಿಕೆಗಳಲ್ಲಿ ಸಂದರ್ಶನ ನಡೆಸದೆ ಪ್ರಕಟವಾದ ಸಂದರ್ಶನಗಳಿರುತ್ತಿದ್ದವು. ನಕಲಿ ಚಿತ್ರಗಳನ್ನು ಲಗತ್ತಿಸಿ, ಅಸಲಿ ಘಟನೆಗಳನ್ನೇ ವಿಕೃತಗೊಳಿಸುತ್ತಿದ್ದ. ಒಂದಾ ಎರಡಾ… ಇಷ್ಟಕ್ಕೆಲ್ಲಾ ಕಾರಣ ಆತನಿಗೆ ಪತ್ರಿಕೋದ್ಯಮದಲ್ಲಿ ಪೈಪೋಟಿ.

ಹರ್ಸ್ಟ್ ನ್ಯೂಯಾರ್ಕ್ನಲ್ಲಿ ಪ್ರಕಟಿಸುತ್ತಿದ್ದ ಪತ್ರಿಕೆ ಹೆಸರು ‘ನ್ಯೂಯಾರ್ಕ್ ಮಾರ್ನಿಂಗ್ ಜರ್ನಲ್’. ಈತನಿಗೆ ಪೈಫೋಟಿ ಒಡ್ಡುತ್ತಿದ್ದ ಪತ್ರಿಕೆ, ಅವತ್ತಿನ ಮಾಧ್ಯಮದ ಅನಭಿಷಿಕ್ತ ದೊರೆ ಜೋಸೆಫ್ ಪುಲಿಟ್ಜರ್ ಒಡೆತನದ ‘ನ್ಯೂಯಾರ್ಕ್ ವರ್ಲ್ಡ್’. post248.8ಇದರಲ್ಲಿ ಒಂದು ಕಾರ್ಟೂನು ಪಾತ್ರ ಜನಪ್ರಿಯವಾಗಿತ್ತು. ‘ಹೋಗನ್ಸ್ ಆಲೇ’ ಎಂಬ ಹೆಸರಿನಲ್ಲಿ ರಿಚರ್ಡ್ ಎಫ್ ಔಟ್ಕಾಲ್ಟ್ ರಚಿಸುತ್ತಿದ್ದ ಕಾರ್ಟೂನ್ ಸರಣಿಯಲ್ಲಿ ಈ ‘ಯಲ್ಲೋ ಕಿಡ್’ ಒಂದು ಪಾತ್ರವಾಗಿತ್ತು.

ಬಕ್ಕ ತಲೆ, ಮುಂದೆ ಬಾಗಿದ ಎರಡು ಹಲ್ಲುಗಳು, ಚಪ್ಪಲಿಯಿಲ್ಲದ ಕಾಲುಗಳು, ಮೇಲೊಂದು ದೊಗಲೆ ಅಂಗಿ ಈತನ ಯೆಲ್ಲೋ ಕಿಡ್ನ ವಿಶೇಷತೆಗಳು. ಈ ಹುಡುಗ(ಕಿಡ್) ಹಳದಿ ಅಂಗಿ ತೊಟ್ಟು 1895ರಿಂದ 1898ರವರೆಗೆ ನ್ಯೂಯಾರ್ಕ್ ವರ್ಲ್ಡ್ ಪತ್ರಿಕೆಯ ವ್ಯಂಗ್ಯ ಚಿತ್ರಗಳಲ್ಲಿ ಮಿಂಚುತ್ತಿದ್ದ. ವಾರದ ರಜಾದಿನದಲ್ಲಿ ಪೂರ್ತಿ ಒಂದು ಪುಟದ ಕಾರ್ಟೂನ್ ಪ್ರಕಟವಾಗುತ್ತಿತ್ತು. ಅದಕ್ಕೆಲ್ಲ ಈ ಯೆಲೋ ಕಿಡ್ ಬಾಸ್ ಆಗಿದ್ದ. ಯಾವಾಗ ಹರ್ಸ್ಟ್ ಪತ್ರಿಕೆ ಯಶಸ್ಸಿನ ಹಾದಿ ಹಿಡಿಯಿತೂ ಈ ‘ಯಲ್ಲೋ ಕಿಡ್’ ಬರೆಯುತ್ತಿದ್ದ ವ್ಯಂಗ್ಯ ಚಿತ್ರಕಾರನ ಮೇಲೆ ಆತನ ಕಣ್ಣು ಬಿತ್ತು. 1896ರಲ್ಲೇ ರಿಚರ್ಡ್ ಎಫ್ ಔಟ್ಕಾಲ್ಟ್ ನನ್ನು ಹರ್ಸ್ಟ್ ತನ್ನ ಪತ್ರಿಕೆಗೆ ಕರೆ ತಂದ. ಆದರೆ ಈ ಯಲ್ಲೋ ಕಿಡ್ ಕಾಪಿರೈಟ್ ಮಾತ್ರ ಪುಲಿಟ್ಜರ್ ಪತ್ರಿಕೆ ಬಳಿಯಲ್ಲೇ ಉಳಿದಿತ್ತು.

ಹರ್ಸ್ಟ್ ಪತ್ರಿಕೆಗಾಗಿ ರಿಚರ್ಡ್ ಇನ್ನೊಂದು ಪಾತ್ರ ಸೃಷ್ಟಿಸಿದ. ‘ಯಲ್ಲೋ ಕಿಡ್’ ನನ್ನು ನಕಲು ಮಾಡಲು ಹೋಗಿ, ಅದು ವಿಕಾರವಾಗಿ ಮೆಚ್ಚುಗೆ ಗಳಿಸುವುದು ಬಿಡಿ ಜನ ಉಗಿಯುವಂತಾಯ್ತು. ಹರ್ಸ್ಟ್ ಪತ್ರಿಕೆ ‘ನ್ಯೂಯಾರ್ಕ್ ಮಾರ್ನಿಂಗ್ ಜರ್ನಲ್’ನಲ್ಲಿ ರಿಚರ್ಡ್ ಮೂರು ಕಾರ್ಟೂನ್ ಸರಣಿಗಳನ್ನು ರಚಿಸಿದ ಆದರೆ ಒಂದೂ ಕ್ಲಿಕ್ ಆಗಲಿಲ್ಲ.

ಅದೇ ಕಾಲಕ್ಕೆ ಪ್ರಸಾರ ಸಂಖ್ಯೆ ಏರಿಕೆಗಾಗಿ ಎರಡೂ ಪತ್ರಿಕೆಗಳು ಬಡಿದಾಡಿಕೊಳ್ಳುತ್ತಿದ್ದವು. ಮೇಲೆ ವಿವರಿಸಿದ ಪತ್ರಿಕೋದ್ಯಮದ ನಾನಾ ತಂತ್ರಗಳನ್ನು ಹರ್ಸ್ಟ್ ಬಳಸುತ್ತಿದ್ದ. ಇಷ್ಟಾದರೂ ಯುದ್ಧ ಮುಗಿದಾಗ ಎರಡೂ ಪತ್ರಿಕೆಗಳ ಪ್ರಸಾರವೂ ಕ್ಷೀಣಿಸಿತು. ಕೊನೆಗೆ 23 ಜನವರಿ 1898ರಲ್ಲಿ ಕೊನೆಯ ಬಾರಿಗೆ ಈ ‘ಯಲ್ಲೋ ಕಿಡ್’ ಕಾಣಿಸಿಕೊಂಡ. ಎರಡೂ ಪತ್ರಿಕೆಗಳು ತಮ್ಮ ವ್ಯಂಗ್ಯ ಚಿತ್ರಗಳನ್ನು ನಿಲ್ಲಿಸಿದವು.

ಆದ್ರೆ ಆ ಹಳದಿ ಅಂಗಿಯ ಬಾಲಕ ‘ಯಲ್ಲೋ ಜರ್ನಲಿಸಂ’ ಹೆಸರನ್ನು ಮಾತ್ರ ಶಾಶ್ವತವಾಗಿ ಬಿಟ್ಟು ಹೋದ. ಅವತ್ತಿನಿಂದ ಪತ್ರಿಕೋದ್ಯಮದ ಈ ಹೊಸ ಪ್ರಕಾರಕ್ಕೆ ಯಲ್ಲೋ ಜರ್ನಲಿಸಂ ಎನ್ನುವ ಹೊಸ ಹೆಸರು ಬಂತು. ಆರಂಭದಲ್ಲಿ ಪುಲಿಟ್ಜರ್ ಮತ್ತು ಹರ್ಸ್ಟ್ ಇಬ್ಬರ ಪತ್ರಿಕೆಗಳನ್ನೂ ಯಲ್ಲೋ ಕಿಡ್ ಪತ್ರಿಕೆಗಳು ಎಂದು ಕರೆಯಲಾಗುತ್ತಿತ್ತು. ಕೊನೆಗೆ ಅದೇ ‘ಯಲ್ಲೋ ಕಿಡ್ ಜರ್ನಲಿಸಂ’ ಎಂದಾಯಿತು. ಈಗ ಮಧ್ಯದ ಬಾಲಕ (ಕಿಡ್) ಪದ ಹೋಗಿ ‘ಯಲ್ಲೋ ಜರ್ನಲಿಸಂ’ ಮಾತ್ರ ಉಳಿದುಕೊಂಡಿದೆ. ಕನ್ನಡದಲ್ಲಿ ಇದರ ಭಾವಾರ್ಥವನ್ನು ನೀಡಿದರು ‘ಪೀತ ಪತ್ರಿಕೋದ್ಯಮ’ ಎಂದು ಕರೆದಿರಬಹುದು.

ಇವತ್ತೂ ಇಟಲಿಯ ವ್ಯಂಗ್ಯ ಚಿತ್ರ ಪ್ರದರ್ಶಕರು ‘ಯೆಲ್ಲೋ ಕಿಡ್’ ಹೆಸರಿನಲ್ಲಿ ವ್ಯಂಗ್ಯ ಚಿತ್ರ ವಿಭಾಗದಲ್ಲಿ ಪ್ರಶಸ್ತಿಗಳನ್ನು ನೀಡುತ್ತಿದ್ದಾರೆ ಎಂಬುದು ನಿಮ್ಮ ಮಾಹಿತಿಗಾಗಿ ಅಷ್ಟೆ.

Top