An unconventional News Portal.

ವನಿ ಎಂಬ 21ರ ತರುಣ: ನಮ್ಮ ಪಾಲಿನ ಈ ಭಯೋತ್ಪಾದಕ ಕಾಶ್ಮೀರಿಗಳ ಕಣ್ಣಲ್ಲಿ ಹೀರೊ ಆಗಿದ್ದೇಕೆ?

ವನಿ ಎಂಬ 21ರ ತರುಣ: ನಮ್ಮ ಪಾಲಿನ ಈ ಭಯೋತ್ಪಾದಕ ಕಾಶ್ಮೀರಿಗಳ ಕಣ್ಣಲ್ಲಿ ಹೀರೊ ಆಗಿದ್ದೇಕೆ?

 

ಜುಲೈ 8, 2016..

ಬೆಳಗ್ಗೆ 4. 30ರ ನಸುಕನ ವೇಳೆಯಲ್ಲಿ ಕಾಶ್ಮೀರಾದ ಆ ಪುಟ್ಟ ಹಳ್ಳಿಯ ಮಿಲಿಟರಿ ಪಡೆಗಳಿಂದ ಸುತ್ತುವರಿದಿತ್ತು. ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಕಮಾಂಡರ್ ಬುರ್ಹಾನ್ ವನಿ ಹಾಗೂ ಆತನ ಸಹಚರರ ಚಹರೆಗಳನ್ನು ಮಿಲಿಟರಿ ಬಂದೂಕುಗಳು ಹುಡುಕಲು ಶುರುಮಾಡಿದವು. ಊರಿನ ಜನ ಕೈಲಿ ಕಲ್ಲುಗಳನ್ನು ಹಿಡಿದುಕೊಂಡು ಸೇನೆಯ ವಿರುದ್ಧ ಅಖಾಡಕ್ಕೆ ಇಳಿದರು. ಎರಡೂವರೆ ಗಂಟೆಗಳ ಈ ಕಾರ್ಯಚರಣೆ, ಅದಕ್ಕೆ ಸ್ಥಳೀಯ ವಿರೋಧ, ಕೊನೆಯಲ್ಲಿ ಮೂರು ಹೆಣಗಳು. ಅದರಲ್ಲಿ ಒಂದು ವನಿಯದ್ದು.

ಆತನ ವಯಸ್ಸು ಕೇವಲ 21. ಮನೆ ಬಿಟ್ಟು ಪ್ರತ್ಯೇಕ ಕಾಶ್ಮೀರಕ್ಕಾಗಿ ಹೋರಾಟ ಮಾಡುತ್ತೀನಿ ಎಂದು ವನಿ ಹೊರಬಿದ್ದಾಗ ಆತನ ವಯಸ್ಸು 15 ಮಾತ್ರ. ನೋಡಲು ಬಾಲಿವುಡ್ ಹೀರೊಗಳನ್ನು ನೆನಪಿಸುವ ಮೈಕಟ್ಟು, ಕಾಶ್ಮೀರಾದ ಸಹಜ ಸೌಂದರ್ಯವಂತ. ಈತನಿಂಗಲೂ ಮುಂಚೆ, ಸ್ವಾತಂತ್ರ್ಯ ಬಂದಾಗಿನಿಂದಲೂ ಪ್ರತ್ಯೇಕ ಕಾಶ್ಮೀರಕ್ಕಾಗಿ ಹೋರಾಟ ನಡೆದುಕೊಂಡೇ ಬಂದಿದೆ. ನೆಹರೂ ಜನಾಭಿಪ್ರಾಯ ಸಂಗ್ರಹದ ಮಾತು ನೀಡಿದ್ದರು. ಆದರೆ, ಕಳೆದ 6 ದಶಕಗಳು ಕಳೆದ ಮೇಲೂ ಜನಾಭಿಪ್ರಾಯದ ಸಂಗ್ರಹದ ಮಾತು ಹಾಗೆಯೇ ಉಳಿದುಕೊಂಡಿದೆ. ಇದರ ನಡುವೆ ಕಾಶ್ಮೀರಿ ಪಂಡಿತರ ಮೇಲೆ ನಡೆದ ಅಮಾನುಷ ದಾಳಿಗಿಂದಾಗಿ ಅವರು ಕಣಿವೆ ರಾಜ್ಯದಿಂದ ಹೊರಬೀಳಬೇಕಾಯಿತು. ನೆಲೆ ಕಳೆದುಕೊಳ್ಳುವಂತಾಯಿತು. ಹೀಗೆ, ಇಲ್ಲಿಯೂ ಒಂದಷ್ಟು ಪರ, ಇನ್ನೊಂದಿಷ್ಟು ವಿರೋಧಗಳ ವಾಗ್ವಾದಗಳ ನಡುವೆಯೇ ವನಿಯಂತಹ ಕಾಶ್ಮೀರಿ ತರುಣರು ಪ್ರತ್ಯೇಕತಾ ಹೋರಾಟದ ಮೂಲಕ ಬದುಕು ಕಳೆದುಕೊಳ್ಳುವ ಹಾದಿಯಲ್ಲಿ ನಡೆದುಕೊಂಡು ಬರುತ್ತಿದ್ದಾರೆ.

ಕೃಪೆ: ಕಾಶ್ಮೀರಿ ರೀಡರ್.

ಕೃಪೆ: ಕಾಶ್ಮೀರಿ ರೀಡರ್.

ವನಿ ಸಾಂಪ್ರದಾಯಿಕ ಪ್ರತ್ಯೇಕ ಕಾಶ್ಮೀರಿ ಹೋರಾಟಗಾರರಂತಿರಲಿಲ್ಲ. ಆತನ ಹಾದಿ, ಆಡುತ್ತಿದ್ದ ಮಾತುಗಳು ಹಾಗೂ ಜನರ ಜತೆಗೆ ಆತ ಹೊಂದಿದ್ದ ಸಂಬಂಧ ಏನು ಎಂಬುದನ್ನು ಆತನ ಸಾವಿನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ 20ಕ್ಕೂ ಸಾವಿರಕ್ಕೂ ಹೆಚ್ಚು ಜನರೇ ಸಾಕ್ಷಿ. ಇಷ್ಟಕ್ಕೂ ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿ ಜನ ಬೆಂಬಲ ಗಳಿಸಲು ಈ ಬಂಡುಕೋರ ನಾಯಕರಿಗೆ ಸಾಧ್ಯವಾಗಿದ್ದು ಹೇಗೆ? ಅದು ಈ ಹೊತ್ತಿನ ಕುತೂಹಲಕಾರಿ ಪ್ರಶ್ನೆ.

 

ಜಮ್ಮು ಮತ್ತು ಕಾಶ್ಮೀರ ರಾಜ್ಯದ ಪುಲ್ವಾಮಾ ಜಿಲ್ಲೆಯ ದಾದಸರ ವನಿಯ ಹುಟ್ಟೂರು. ಈತನ ತಂದೆ ಮುಝಾಫರ್ ಅಹ್ಮದ್ ವನಿ ಹೈಸ್ಕೂಲೊಂದರ ಪ್ರಿನ್ಸಿಪಾಲ್. 16 ಅಕ್ಟೋಬರ್ 2010ರಲ್ಲಿ ಈತ ಮನೆ ಬಿಟ್ಟು ಓಡಿ ಹೋದವ ನೇರ ಸೇರಿದ್ದು ಪ್ರತ್ಯೇಕತಾವಾದಿ ಬಂಡುಕೋರ ಸಂಘಟನೆಯನ್ನು. ಸಾಮಾಜಿಕ ಜಾಲತಾಣದಲ್ಲಿ ಈತ ಅವತ್ತಿಗೇ ತುಂಬಾ ಜನಪ್ರಿಯನಾಗಿದ್ದ. ಪ್ರತ್ಯೇಕ ಕಾಶ್ಮೀರ, ಭಾರತೀಯ ಸೇನೆಯ ದೌರ್ಜನ್ಯಗಳು ಹಾಗೂ ಸಾಮಾನ್ಯ ಕಾಶ್ಮೀರಿಗಳ ಬದುಕಿನ ಕುರಿತು ಆತನ ವಿಡಿಯೋಗಳು ಸ್ಥಳೀಯ ಜನರ ಮನಸ್ಸನ್ನು ಗೆದ್ದಿದ್ದವು. ಹೀಗಾಗಿ, ಹಿಜ್ಬುಲ್ ಮುಜಾಹಿದೀನ್ ಸಂಘಟನೆ ಆತನಿಗೆ ಮಣೆ ಹಾಕಿತು. ಈತ ಕೂಡ ಸಂಘಟನೆ ಸೇರಿದ ಆರು ವರ್ಷಕ್ಕೆಲ್ಲಾ ಕಮಾಂಡರ್ ಸ್ಥಾನಕ್ಕೆ ಬಂದು ನಿಂತಿದ್ದ.

ವನಿ ಹಿಜ್ಬುಲ್ ಸಂಘಟನೆಯಲ್ಲಿ ಇರುವಾಗಲೇ 2015ರಲ್ಲಿ ಈತನ ಅಣ್ಣ ಖಲೀದ್ ಮುಝಾಫರ್ ಖಾನ್ ತನ್ನ ಮೂವರು ಸ್ನೇಹಿತರೊಂದಿಗೆ ತಮ್ಮನನ್ನು ಭೇಟಿಯಾಗಲು ಹೋಗುತ್ತಿದ್ದಾಗ ಸೇನಾಪಡೆ ಗುಂಡಿಕ್ಕಿ ಹತ್ಯೆ ಮಾಡಿತ್ತು. ಆಗ ಸೇನೆ, ‘ಈತ ಬಂಡುಕೋರರ ಬಗ್ಗೆ ಅನುಕಂಪ ಇಟ್ಟುಕೊಂಡಿದ್ದ. ಸಂಘಟನೆಗೆ ಯುವಕರನ್ನು ಸೇರಿಸಲು ತೆರಳುತ್ತಿದ್ದ,’ ಎಂದು ಕಾರಣ ನೀಡಿತ್ತು. ಜತೆಗಿದ್ದ ಮೂವರನ್ನು ಬಂಧಿಸಲಾಯಿತು. ಇದಾದ ಬೆನ್ನಿಗೆ ಜಮ್ಮು ಕಾಶ್ಮೀರ ಪೊಲೀಸರು ಇಡೀ ಘಟನೆ ಬಗ್ಗೆ ಮುಗುಮ್ಮಾಗಿಯೇ ಉಳಿದುಕೊಂಡರು. ವನಿಯ ಅಣ್ಣ ಬಂಡುಕೋರನಾಗಿದ್ದ ಎಂಬ ಆರೋಪವನ್ನು ಆತನ ಕುಟುಂಬ ಮತ್ತು ಗ್ರಾಮಸ್ಥರು ನಿರಾಕರಿಸಿದರು. ಖಾಲೀದ್ ಮೈಯಲ್ಲಿ ಗುಂಡು ಹೊಕ್ಕಿದ್ದ ಸೂಚನೆಗಳು ಇರಲಿಲ್ಲ. ಬದಲಿಗೆ ಮಿಲಿಟರಿ ದೌರ್ಜನ್ಯದ ಕುರುಹುಗಳಿದ್ದದ್ದು ಗ್ರಾಮಸ್ಥರನ್ನು ಕೆರಳಿಸಿತ್ತು.

ಮೊದಲ ಬಾರಿಗೆ ಬುರ್ಹಾನ್ ಹೆಸರು ದೊಡ್ಡ ಮಟ್ಟದಲ್ಲಿ ಕೇಳಿಬಂತು. ನಂತರ ಆತನ ತಲೆಗೆ ಭಾರತ ಸರ್ಕಾರ 10 ಲಕ್ಷ ಬೆಲೆ ನಿಗದಿ ಮಾಡಿತು. ಬುರ್ಹಾನ್ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಪರಿಣತನಾಗಿದ್ದ. ವಿಡಿಯೋ, ಮತ್ತು ಪೋಸ್ಟ್ ಗಳನ್ನು ಹಾಕುತ್ತಲೇ ಕಾಶ್ಮೀರದ ಯುವ ಮನಸ್ಸುಗಳನ್ನು ಪ್ರತ್ಯೇಕತಾ ಹೋರಾಟದ ಹುಚ್ಚು ಹತ್ತಿಸಿದ್ದ.

ಹೀಗೆ ಬಿಡುಗಡೆ ಮಾಡಿದ್ದ ಒಂದು ವೀಡಿಯೋದಲ್ಲಿ ಆತ ಕಾಶ್ಮೀರದ ಯುವಕರಿಗೆ ಹಿಜ್ಬುಲ್ಲಾ ಮುಜಾಹಿದ್ದೀನ್ ಬಂದು ಸೇರುವಂತೆ ಕರೆ ನೀಡಿದ್ದ. ದಕ್ಷಿಣ ಕಾಶ್ಮೀರದಿಂದಲೇ 30 ಜನರನ್ನು ಸೇರಿಸಿಕೊಳ್ಳುತ್ತೇವೆ ಎಂದು ಹೇಳಿದ್ದ. ಇತ್ತೀಚೆಗೆ ಜೂನ್ 2016ರಲ್ಲಿ ಬಿಡುಗಡೆ ಮಾಡಿದ ವೀಡಿಯೋ ಒಂದರಲ್ಲಿ ಅಮರನಾಥ ಯಾತ್ರಿಕರನ್ನು ಬಂಡುಕೋರರು ಕೊಲ್ಲುವುದಿಲ್ಲ ಎಂದು ಭರವಸೆ ನೀಡಿದ್ದ. ಬದಲಾಗಿ ಕಾಶ್ಮೀರ ಕಣಿವೆಯಲ್ಲಿ ಬದಲಾವಣೆ ತರಲು ಸೇನೆಯ ವಿರುದ್ಧ ದಾಳಿ ನಡೆಸುತ್ತೇನೆ ಎನ್ನುವ ಸಾಲುಗಳು ಆ ವೀಡಿಯೋದಲ್ಲಿದ್ದವು. ಕಾಶ್ಮೀರ ಪಂಡಿತರಿಗೆ ಬೇರೆಯೇ ಕಾಲೋನಿಗಳು ಬೇಕಾಗಿಲ್ಲ, ಅವರೆಲ್ಲಾ ಬಂದು ಅವರ ನೆಲದಲ್ಲಿ ಒಟ್ಟಿಗೆ ಬದುಕಬಹುದು. ಆದರೆ ಇಸ್ರೇಲ್ ರೀತಿಯಲ್ಲಿ ಬದುಕುವುದು ಸಾಧ್ಯವಿಲ್ಲ ಎಂದಿದ್ದ.

ಆತ ಯೂನಿಫಾರ್ಮ್ ಹಾಕಿದ ಮಂದಿಯನ್ನು ಇನ್ನಷ್ಟು ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದ. ಕಾಶ್ಮೀರ ಪೊಲೀಸರಿಗೆ ನಮ್ಮ ದಾರಿಯಿಂದ ದೂರವಿರಿ ಸಾಕು ಎಂದಿದ್ದ.

ಹಾಗೆ, ಭಾರತೀಯ ಸೇನೆಯ ಹಿಟ್ ಲಿಸ್ಟ್ಗೆ ಸೇರಿದ್ದ ವನಿ, ಚಿಕ್ಕ ವಯಸ್ಸಿನಲ್ಲಿಯೇ ತಾನು ನಂಬಿದ ಸಿದ್ಧಾಂತವನ್ನು ಪ್ರತಿಪಾದಿಸುವ ವೇಳೆಯಲ್ಲಿಯೇ ಹತನಾಗಿ ಹೋಗಿದ್ದಾನೆ. ಆತ ಭಾರತೀರ ಪಾಲಿಗೆ ಇವತ್ತು ಭಯೋತ್ಪಾದಕ. ಪಾಕಿಸ್ತಾನಿ ಪ್ರೇರಿತ ಹಿಬ್ಜುಲ್ ಸಂಘಟನೆಯ ಕಮಾಂಡರ್. ಆತನ ಸಾವು ದೇಶದ ಸಾರ್ವಭೌಮತೆಗೆ ಅನಿವಾರ್ಯ. ಹೀಗೆ ವಾದಗಳು ಜಾರಿಯಲ್ಲಿವೆ.

ಎಲ್ಲಾ ವಿಷಯಗಳಲ್ಲಿ ನಡೆಯುವಂತೆ ಇಲ್ಲಿಯೂ ಪರ ಮತ್ತು ವಿರೋಧದ, ದೇಶ ಭಕ್ತಿ ಹಾಗೂ ದೇಶ ದ್ರೋಹದ ಲೇಪವೊಂದು ವನಿ ಸಾವಿನ ನಂತರ ಘಟನೆಗಳಿಗೂ ಮೆತ್ತಿಕೊಳ್ಳುತ್ತಿದೆ. ಅದು ಸಹಜ ಕೂಡ. ಆದರೆ ನಮ್ಮದೇ ಅಂಗ ರಾಜ್ಯವೊಂದರ ಜನರ ಪಾಲಿಗೆ ಆತ ಸತ್ತ ನಂತರ ದೊಡ್ಡ ಹೀರೊ ಆಗುತ್ತಾನೆ ಎಂದರೆ, ತಳಮಟ್ಟದ ಪರಿಸ್ಥಿತಿ ಬೇರೆಯದ್ದೇ ಇದೆ ಎಂಬುದು ಕೂಡ ಅಷ್ಟೆ ಸಹಜ ಸತ್ಯ.

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top