An unconventional News Portal.

ಕರಿ ಕೋಟಿಗೆ ಕಾರುಣ್ಯ ತುಂಬಿದ ಕಪಿಲಾ ಹಿಂಗೊರಾನಿ: ದೇಶ ಕಂಡ ಅಪರೂಪದ ವಕೀಲೆಯ ಪರಿಚಯ

ಕರಿ ಕೋಟಿಗೆ ಕಾರುಣ್ಯ ತುಂಬಿದ ಕಪಿಲಾ ಹಿಂಗೊರಾನಿ: ದೇಶ ಕಂಡ ಅಪರೂಪದ ವಕೀಲೆಯ ಪರಿಚಯ

ಪುಷ್ಪಾ ಕಪಿಲಾ ಹಿಂಗೊರಾನಿ…

ದೇಶ ಕಂಡ ಅಪರೂಪದ ವಕೀಲೆ. ಅವರ ಭಾವಚಿತ್ರವೊಂದನ್ನು ಸುಪ್ರಿಂ ಕೋರ್ಟ್‌ನ ಗ್ರಂಥಾಲಯದಲ್ಲಿ ಮಂಗಳವಾರ ಅನಾವರಣಗೊಳಿಸಲಾಯಿತು. ಇದು ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ವಕೀಲೆಯೊಬ್ಬರಿಗೆ ಸಿಕ್ಕಿರುವ ಅಪರೂಪದ ಹಾಗೂ ಅನನ್ಯ ಗೌರವ. ಇಷ್ಟಕ್ಕೂ ಹಿಂಗೊರಾನಿ ಯಾರು? ಅವರ ಹಿನ್ನೆಲೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (Mother of Public Interest Litigation)ಗಳ ತಾಯಿ ಎಂದೇ ಕರೆಯಲ್ಪಡುವ ಪುಷ್ಪಾ ಕಪಿಲಾ ಹಿಂಗೊರಾನಿ ನೊಂದ ಕೈದಿಗಳ ಕಣ್ಣೀರೊರೆಸಿದ ಮಹಾತಾಯಿ. ವಕೀಲೆಯಾಗಿ ಸುಮಾರು 50 ವರ್ಷಗಳ ಕಾಲ ಸೇವೆ ಸಲ್ಲಿಸಿದ ಇವರು, ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಪರವಾಗಿ ಸುಪ್ರಿಂ ಕೋರ್ಟ್‌ನಲ್ಲಿ ದೊಡ್ಡ ಮಟ್ಟಿಗೆ ಧ್ವನಿ ಎತ್ತಿದವರು. ಇಡೀ ಕಾನೂನು ಕ್ಷೇತ್ರದಲ್ಲಿಯೇ ಈ ಪಿಐಎಲ್‌ಗಳ ಕ್ರಾಂತಿಗೆ ಹರಿಕಾರರು ಇವರು.

ಹುಟ್ಟು, ವಿದ್ಯಾಭ್ಯಾಸ ಮತ್ತು ವೃತ್ತಿ:

ಇವರು 1927ರಲ್ಲಿ ನೈರೋಬಿಯದಲ್ಲಿ ಜನಿಸಿದರು. ಆದರೆ ಇವರು ಜೀವಿಸಲು ಆಯ್ದುಕೊಂಡಿದ್ದು ಭಾರತ ಎನ್ನುವುದು ಮತ್ತೊಂದು ಕುತೂಹಲಕಾರಿ ಕಥೆ. ಇವರ ತಂದೆ ಕೃಷ್ಣನ್ ದೇವ್ ಕಪೀಲ್. ಹಿಂಗೊರಾನಿ 1947ರಲ್ಲಿ ತಮ್ಮ ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸುತ್ತಾರೆ. ಅಲ್ಲಿನ ಕಾರ್ಡಿಫ್ ಕಾನೂನು ಶಾಲೆಯಲ್ಲಿ (Cardiff Law School) ಅಧ್ಯಯನ ಮಾಡಿದ ಮೊದಲ ಭಾರತೀಯ ಮಹಿಳೆ ಇವರನ್ನು ಕರೆಯಲಾಗುತ್ತದೆ. ಸೀರೆ ಧರಿಸಿ ಕಾಲೇಜಿಗೆ ಹೋಗುವಾಗ ಅಲ್ಲಿನ ಚಿಕ್ಕಮಕ್ಕಳು ಇವರನ್ನು ಕುತೂಹಲದಿಂದ ನೋಡುತ್ತಿದ್ದರಂತೆ. ತಮ್ಮ ಅಧ್ಯಯನದ ಸಮಯದಲ್ಲಿ  ಗಾಂಧಿಯಿಂದ ಪ್ರಭಾವಿತರಾಗಿದ್ದರು. ಇಂಗ್ಲೆಂಡ್‌ನಲ್ಲಿ ತಮ್ಮ ಕಾನೂನು ಪದವಿ ಪಡೆದ ನಂತರ 1961ರಲ್ಲಿ ಭಾರತಕ್ಕೆ ಕಾಲಿಟ್ಟರು. ಸರ್ವೋಚ್ಚ ನ್ಯಾಯಾಲದಲ್ಲಿ ತಮ್ಮ ವಕೀಲಿ ವೃತ್ತಿಯನ್ನು ಪ್ರಾರಂಭಿಸಿದರು. ಭಾರತದ ಸುಪ್ರೀಂ ಕೋರ್ಟ್ನಲ್ಲಿ  ವಕೀಲಿ ವೃತ್ತಿ ಅಬ್ಯಾಸ ಮಾಡಿದ ಮಹಿಳಾ ವಕೀಲರಲ್ಲಿ ಇವರು ಪ್ರಥಮರು ಎನ್ನುತ್ತವೆ ದಾಖಲೆಗಳು.

ಮಾನವ ಹಕ್ಕುಗಳ ರಕ್ಷಣೆಯೇ ಇವರು ವೃತ್ತಿಯ ಧ್ಯೇಯವಾಗಿತ್ತು. ಮಾನವ ಹಕ್ಕುಗಳ ರಕ್ಷಣೆಗಾಗಿಯೇ ತಮ್ಮ ಜೀವನ ಪೂರ್ತಿ ಹೋರಾಡಿದರು. ಬಡವರಿಗೆ ಸಿಗಬೇಕಾದ ನ್ಯಾಯಕ್ಕಾಗಿ ಮೊದಲ ಹೋರಾಟವನ್ನು ಆರಂಭಿಸಿದ ಅವರು ಇಡೀ ಕಾನೂನು ರಂಗದಲ್ಲಿಯೇ ದೊಡ್ಡ ಬದಲಾವಣೆಯನ್ನು ತರುತ್ತಾರೆ. ಅದನ್ನೇ ನಾವು ಇವತ್ತು ‘ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಎಂದು ಕರೆಯುತ್ತೇವೆ.

ವಿಚಾರಣಾದೀನ ಕೈದಿಗಳಿಗೆ ನ್ಯಾಯ:

ಜನವರಿ 1979 ರಲ್ಲಿ ಹಿಂಗೊರಾನಿಯ  ಪತಿ ನಿರ್ಮಲ್ ಹಿಂಗೊರಾನಿ (ಅವರೂ ವಕೀಲರು) ದಿನ ಪತ್ರಿಕೆಯ ವರದಿಯನ್ನು ಓದುವಾಗ ಒಂದು ಕುತೂಹಲಕಾರಿ ಅಂಶವನ್ನು ಗಮನಿಸುತ್ತಾರೆ.

ಆ ವರದಿಯ ಪ್ರಕಾರ ವಿಚಾರಣೆ ಎದುರಿಸುತ್ತಿರುವ ಕೈದಿಗಳು ತಪ್ಪಿತಸ್ಥರೆಂದು ಸಾಭೀತಾಗದಿದ್ದರೂ, ಅವರು ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುತ್ತಾರೆ. ಅವಧಿಗೂ ಮೀರಿ ಅವರನ್ನು ಜೈಲಿನಲ್ಲಿ ಇಟ್ಟುಕೊಳ್ಳಲಾಗಿರುತ್ತದೆ. ಮತ್ತೆ ಕೆಲವರನ್ನು ಟಿಕೇಟು ರಹಿತ ಪ್ರಯಾಣ ಮಾಡಿದ್ದಕ್ಕೆ ಹತ್ತು ವರ್ಷಗಳಿಗಿಂತಲೂ ಹೆಚ್ಚು ಅವಧಿಗೆ ಜೈಲಿನಲ್ಲಿ ಕೂಡಿ ಹಾಕಲಾಗಿರುತ್ತದೆ. ಕೆಲವು ಸಂದರ್ಭಗಳಲ್ಲಿ ಜೈಲಿನಲ್ಲಿರುವ ಮಹಿಳೆಯರಿಗೆ ಮಕ್ಕಳು ಜನಿಸಿ ಅಲ್ಲಿಯೇ ಬೆಳೆಯುತ್ತಿರುತ್ತಾರೆ. ಇದನ್ನೆಲ್ಲ ಗಮನಿಸಿದ ದಂಪತಿಗಳು ಇದರ ವಿರುದ್ಧ ಕಾನೂನು ರೀತಿಯಲ್ಲಿಯೇ ಪರಿಹಾರ ಒದಗಿಸಲು ಮುಂದಾಗುತ್ತಾರೆ.

ಆಗ ಚಾಲ್ತಿಯಲ್ಲಿದ್ದ ಕಾನೂನುಗಳ ಪ್ರಕಾರ, ಆರೋಪಿ ಅಥವಾ ಅವರ ಸಂಬಂಧಿ ಮಾತ್ರ ನ್ಯಾಯಾಲಯಕ್ಕೆ ನ್ಯಾಯಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿತ್ತು. ಅಂತಹ ಸಂದರ್ಭದಲ್ಲಿ ಕಪಿಲಾ ಮತ್ತು ಪತಿ ನಿರ್ಮಲ್ ಹಿಂಗೊರಾನಿ ಬಿಹಾರದ ಕೈದಿಗಳ ಪರ ನಿಂತು ಅವರನ್ನು ಪ್ರತಿನಿಧಿಸಲು ಬಯಸುತ್ತಾರೆ. ಈ ದಂಪತಿಗಳು  ಭಾರತದ ಸರ್ವೋಚ್ಚ ನ್ಯಾಯಾಲದಲ್ಲಿ ಕೈದಿಗಳ ಪರವಾಗಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸುತ್ತಾರೆ. ನ್ಯಾಯಾಲಯದಲ್ಲಿ ಕಪಿಲಾ ಹಿಂಗೊರಾನಿ ವಾದ ಮಂಡಿಸಿದ ಎರಡು ವಾರಗಳ ನಂತರ ಈ ಪ್ರಕರಣದಲ್ಲಿ ಬಲಿಪಶುಗಳಾದ ಕೈದಿಗಳನ್ನು ಬಿಡುಗಡೆಗೆ ಮಾಡುವಂತೆ ಸುಪ್ರೀಂ ಕೋರ್ಟ್ ಬಿಹಾರ ಸರಕಾರಕ್ಕೆ ನೋಟಿಸ್ ನೀಡುತ್ತದೆ. ಮತ್ತು ಅಂತಿಮವಾಗಿ ಸಂವಿಧಾನದ 21 ನೇ ಅಧಿನಿಯಮದ ಪ್ರಕಾರ ವಿಚಾರಣೆಗೊಳಗಾದ ಸುಮಾರು 40,000 ಮಂದಿ ಕೈದಿಗಳ ಬಿಡುಗಡೆಯಾಗುತ್ತದೆ. ಈ ಪ್ರಕರಣವು ಭಾರತೀಯ ಕಾನೂನು ವ್ಯವಸ್ಥೆಯಲ್ಲಿ ಹೊಸ ಶಖೆಗೆ ಕಾರಣವಾಗುತ್ತದೆ.

“ದೊಡ್ಡ ಸಂಖ್ಯೆಯಲ್ಲಿ ಜನರನ್ನು ವಿಚಾರಣೆಯಿಲ್ಲದೆಯೇ ಇರಿಸಿಕೊಳ್ಳುವ ಕಾರ್ಯವಿಧಾನ ನ್ಯಾಯಯುತ ಎಂದು ಪರಿಗಣಿಸಲಾಗುವುದಿಲ್ಲ. ಏಕೆಂದರೆ ಅದು ಅನುಚ್ಛೇದ 21ರ ಪ್ರಕಾರ ಬದುಕುವ ಹಕ್ಕನ್ನು ಅದು ಕಸಿದುಕೊಳ್ಳುತ್ತದೆ. ಹಾಗಾಗಿ ಶಾಸಕಾಂಗವು ಜಾರಿಗೊಳಿಸಿದ ಕಾನೂನು ಮತ್ತು ನ್ಯಾಯಾಲಯಗಳು ಆಡಳಿತ ನಡೆಸುವ ಕಾನೂನನ್ನು ಬದಲಾಯಿಸಿ ನ್ಯಾಯಯುತ ಕಾರ್ಯವಿಧಾನವನ್ನು ಖಚಿತಪಡಿಸಿಕೊಳ್ಳಬೇಕು ಎಂದು 1979 ರಲ್ಲಿ ನ್ಯಾಯಾಲಯವು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೊಳಗಾದ ಖೈದಿಗಳ ಕುರಿತು ಪ್ರಮುಖ ಮಾರ್ಗಸೂಚಿಗಳನ್ನು ನೀಡುತ್ತದೆ.

ತ್ವರಿತಗತಿಯ ವಿಚಾರಣೆಯು ಕ್ರಿಮಿನಲ್ ನ್ಯಾಯದ ಮೂಲಭೂತ ಅಗತ್ಯವಾಗಿದ್ದು, ಒಂದುವೇಳೆ ವಿಚಾರಣೆಯ ವಿಳಂಬವಾದರೆ ನ್ಯಾಯದ ನಿರಾಕರಣೆಯಾದಂತೆ. ಮುಖ್ಯವಾಗಿ, ನ್ಯಾಯ ವ್ಯವಸ್ಥೆಯು ಜನರ ಹಕ್ಕುಗಳ ರಕ್ಷಣೆಗಾಗಿ ಬಡವರಿಗೆ ಉಚಿತ ಕಾನೂನು ನೆರವಿನ ಅಗತ್ಯದ ಕುರಿತು ಸುಪ್ರೀಂ ಕೋರ್ಟ್ ಈ ಪ್ರಕರಣದ ಮೂಲಕ ಮಾತನಾಡುತ್ತದೆ. “ಬಡವರಿಗೆ ಉಚಿತ ಕಾನೂನು ಸೇವೆ, ಸಮಂಜಸವಾದ, ನ್ಯಾಯಯುತ ಮತ್ತು ಅಗತ್ಯವಾದ ಕಾರ್ಯವಿಧಾನವಾಗಿದೆ. ಒಂದುವೇಳೆ ಖೈದಿಯು ನ್ಯಾಯಾಲಯದ ಕಾನೂನಿನ ಅಡಿಯಲ್ಲಿಯೇ ವಿಮೋಚನೆಗಳಗಾಗಲು ಪ್ರಯತ್ನಿಸಿದರೆ ಅವರಿಗೆ ಅಗತ್ಯ ಉಚಿತ ಕಾನೂನು ಸೇವೆಯನ್ನು ನೀಡಬೇಕೆನ್ನುತ್ತದೆ.

1979 ರಲ್ಲಿನ ದೇಶದಲ್ಲಿನ ಈ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (PIL) ಕಾನೂನಿನ ಮೂಲಕ ಸಮಾಜಕ್ಕೆ ನೀಡಿದ ಅತ್ಯಂತ ಗಮನಾರ್ಹ ಕೊಡುಗೆಯಾಗಿದೆ. ಭಾರತದಲ್ಲಿ ಮೊದಲ ಸಾರ್ವಜನಿಕ ಮೊಕದ್ದಮೆಯನ್ನು ಸುಪ್ರಿಂ ಕೋರ್ಟ್ನಲ್ಲಿ ದಾಖಲಿಸಿ ಅದಕ್ಕಾಗಿ ವಾದಿಸಿದ ಮೊದಲಿಗರು ಎಂದು ಕಪಿಲಾ ಹಿಂಗರಾನಿ ಹೆಸರುವಾಸಿಯಾಗುತ್ತಾರೆ.

ದೀರ್ಘಕಾಲದವರೆಗೆ ಜೈಲಿನಲ್ಲಿ ಕೊಳೆಯುತ್ತಿದ್ದ ಕೈದಿಗಳ ಬಾಳಿಗೆ ಬೆಳಕು ಮೂಡಿಸುತ್ತಾರೆ.  ಹಿಂಗೊರಾನಿಯವರ ಈ ಸೇವೆಯನ್ನು ಗುರುತಿಸಿದ ಸುಪ್ರೀಂ ಕೋರ್ಟ್ ಬಾರ್ ಅಸೋಶಿಯೇಷನ್ ಕಪಿಲಾ ಹಿಂಗೊರಾನಿಯವರನ್ನು ಮಾರ್ಚ್ 2, 1979 ರಲ್ಲಿ ಪ್ರಶಂಶಿಸುತ್ತದೆ. ಅಲ್ಲಿಂದೀಚೆಗೆ, ಶ್ರೀಮತಿ ಹಿಂಗೊರಾನಿ, ಅವರ ಪತಿ ನಿರ್ಮಲ್ ಹಿಂಗೋರಾನಿ ಅವರೊಂದಿಗೆ ಸುಮಾರು 100 ಪಿಐಎಲ್ ಪ್ರಕರಣಗಳನ್ನು ಪ್ರಾಯೋಗಿಕವಾಗಿ ತೆಗೆದುಕೊಂಡು ಲಕ್ಷಾಂತರ ಜನರಿಗೆ ಬಿಡುಗಡೆಯ ಭಾಗ್ಯ ಒದಗಿಸುತ್ತಾರೆ.

ಆರಂಭದಲ್ಲಿ ಅವರು ಕಾನೂನಿನ ತೊಡಕುಗಳಿಂದ ಹೊಸ ದಾರಿಯನ್ನು ಕಂಡುಕೊಂಡು ಜಯಿಸಿದ ನಂತರ ಇವರನ್ನು ಕಾಲಕಾಲಕ್ಕೆ ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟದಲ್ಲಿ ಗುರುತಿಸಿ ಮೆಚ್ಚುಗೆಯನ್ನು ಸೂಚಿಸಲಾಗುತ್ತದೆ. ಇದಕ್ಕೆ ಒಂದು ಉದಾಹರಣೆ ಎಂದರೆ ಕಾರ್ಡಿಫ್ ಯುನಿವರ್ಸಿಟಿಯು 2007 ರಲ್ಲಿ ವಿಶ್ವವಿದ್ಯಾನಿಲಯದ ಗೌರವಾನ್ವಿತ ಫೆಲೋಷಿಪ್ ಅನ್ನು ಕಪಿಲಾ ಹಿಂಗೊರಾನಿಯವರಿಗೆ ನೀಡಿ ಗೌರವಿಸುತ್ತದೆ. ಮತ್ತು ಸರ್ವೋಚ್ಚ ನ್ಯಾಯಾಲಯ ಬಾರ್ ಅಸೋಸಿಯೇಷನ್ 2011 ರಲ್ಲಿ ಅವರ 50 ವರ್ಷಗಳ ಸೇವೆಯನ್ನು ಗುರುತಿಸಿ ಗೌರವ ಸೂಚಿಸುತ್ತದೆ.

ಬಿಹಾರದ ವಿಚಾರಣಧೀನ ಕೈದಿಗಳ ಪರವಾಗಿ ಮೂರು ದಶಕಗಳ ಹಿಂದೆಯೇ  ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿ ಅವರನ್ನು ಬಿಡುಗಡೆಗೊಳಿದ ಮೊದಲ ಮಹಿಳಾ ವಕೀಲರಾಗಿ ಕಪಿಲಾ ಹಿಂಗೊರಾನಿ ಅವರನ್ನು ‘ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ತಾಯಿ’ ಎಂದು ಕರೆಯಲಾಗುತ್ತದೆ.

ಬಿಹಾರ ಸರಕಾರವು ತನ್ನ ಸಾವಿರಾರು ಉದ್ಯೋಗಿಗಳಿಗೆ 4 ತಿಂಗಳಿನಿಂದ 94 ತಿಂಗಳ ವರೆಗೆ ಸಂಬಳ ನೀಡದೇ ವಿಳಂಬ ಮಾಡಿದುದಕ್ಕೆ  ಸಂಬಂಧಿಸಿದಂತೆ ಹಿಂಗೊರಾನಿ ಸ್ವತಃ ಸುಪ್ರೀಂ ಕೋರ್ಟ್ನಲ್ಲಿ ಎರಡನೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುತ್ತಾರೆ. ಇದರಲ್ಲಿ ಅವರು ‘ನೂರಾರು ಸರ್ಕಾರಿ ಉದ್ಯೋಗಿಗಳು ಸಂಬಳವಿಲ್ಲದೇ ಬಡತನದಿಂದ ಮೃತಪಟ್ಟಿದ್ದಾರೆ’ ಎಂದು ಅವರು ಆರೋಪಿಸುತ್ತಾರೆ. ಈ ಮೂಲಕ ಸುಪ್ರೀಂ ಕೋರ್ಟ್ ಮನವೊಲಿಸಲು ಯಶಸ್ವಿಯಾಗಿ ಸುಪ್ರೀಂ ಕೋರ್ಟ್ ಬಿಹಾರ್ ಸರಕಾರವನ್ನು ತರಾಟೆಗೆ ತೆಗೆದುಕೊಂಡು ‘ನೌಕರರ ಬಾಕಿ ಇರುವ ಸಂಬಳವನ್ನು ಆದಷ್ಟು ಬೇಗ ಪಾವತಿಸುವಂತೆ’ ತಾಕೀತು ಮಾಡುತ್ತದೆ. ಇದು ಹಿಂಗೊರಾನಿಯವರ ಎರಡನೇ ಜಯವಾಗಿ ದಾಖಲಾಗುತ್ತದೆ.

ಮತ್ತೊಂದು ಪ್ರಕರಣವನ್ನು ಗಮನಿಸಿದಾಗ, ಪೊಲೀಸರು 33 ಶಂಕಿತ ಅಪರಾಧಿಗಳ ಮೇಲೆ ಆಸಿಡ್ ಬಳಸಿ ಅವರ ದೃಷ್ಟಿಯನ್ನು ಕಳೆದಿರುತ್ತಾರೆ. ಆಗ ಈ ಕುರಿತು ಹಿಂಗೋರಾನಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿ ಅವರಿಗೆ ವೈದ್ಯಕೀಯ ನೆರವು, ಪರಿಹಾರ ಮತ್ತು ಪಿಂಚಣಿಯನ್ನು ಕಾನೂನು ಹೋರಾಟದಿಂದ ಕೊಡಿಸಲು ಯಶಸ್ವಿಯಾಗುತ್ತಾರೆ. ಹೀಗೆ ನೊಂದವರ ಪರವಾಗಿ ನಿಂತು ಕಾನೂನಿನ ಮೂಲಕ ಮಾನವ ಹಕ್ಕುಗಳ ರಕ್ಷಣೆ ಮಾಡುತ್ತಾರೆ.

ಹೀಗೆ ಇವರು ಕಾನೂನಿನ ಮೂಲಕ ಹೋರಾಡಿ ಧ್ವನಿ ಇಲ್ಲದವರಿಗೆ ಧ್ವನಿಯಾಗಿ ನಿಂತು, ಮಾನವ ಹಕ್ಕುಗಳ ರಕ್ಷಣೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟು, ಡಿ. 31, 2013ರಲ್ಲಿ ತಮ್ಮ 86ನೇ ವಯಸ್ಸಿಗೆ ಸಾವನ್ನಪ್ಪುತ್ತಾರೆ. ಆದರೆ ಅವರು ಸಮಾಜಕ್ಕೆ ಕೊಟ್ಟ ಕೊಡುಗೆ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ. ಇದೀಗ ಸುಪ್ರಿಂ ಕೋರ್ಟ್‌ನ ಗ್ರಂಥಾಲಯದಲ್ಲಿ ಅವರ ನೆನಪನ್ನು ಶಾಶ್ವತಗೊಳಿಸುವ ಪ್ರಯತ್ನ ನಡೆದಿದೆ.

Leave a comment

Top