An unconventional News Portal.

ಪರ ವಿರೋಧಗಳ ನಡುವೆಯೇ ‘ಉಕ್ಕಿನ ಮೇಲ್ಸೇತುವೆ’ಗೆ ಗುದ್ದಲಿ ಪೂಜೆ: ಮನಸ್ಸು ಮಾಡಿದರೆ ಕೋಟಿ ಉಳಿಸಬಹುದು!

ಪರ ವಿರೋಧಗಳ ನಡುವೆಯೇ ‘ಉಕ್ಕಿನ ಮೇಲ್ಸೇತುವೆ’ಗೆ ಗುದ್ದಲಿ ಪೂಜೆ: ಮನಸ್ಸು ಮಾಡಿದರೆ ಕೋಟಿ ಉಳಿಸಬಹುದು!

ಒಂದು ಕಾಲದಲ್ಲಿ ಬೆಂಗಳೂರಿನ ಅಭಿವೃದ್ಧಿಯ ಮುನ್ನೋಟವನ್ನು ಮುಂದಿಟ್ಟಿದ್ದ ಜನರಿಂದಲೇ ವಿರೋಧಕ್ಕೆ ಒಳಗಾಗಿರುವ ‘ಉಕ್ಕಿನ ಮೇಲ್ಸೇತುವೆ’ ಕಾಮಗಾರಿಯ ಗುದ್ದಲಿ ಪೂಜೆಗೆ ದಿನಗಣನೆ ಶುರುವಾಗಿದೆ.

ಕಳೆದ ಒಂದು ತಿಂಗಳ ಅಂತರದಲ್ಲಿ ರಾಜಧಾನಿ ಬೆಂಗಳೂರಿನ ಬಸವೇಶ್ವರ/ ಚಾಲುಕ್ಯ ವೃತ್ತದಿಂದ ಹೆಬ್ಬಾಳ ಸಂಪರ್ಕಿಸುವ ಉಕ್ಕಿನ ಮೇಲ್ಸೇತುವೆ ಯೋಜನೆ ಸುದ್ದಿಕೇಂದ್ರದಲ್ಲಿದೆ. ಮಾಧ್ಯಮಗಳು, ಐಟಿ- ಬಿಟಿ ಉದ್ಯಮಗಳ ಪ್ರಮುಖರು, ಪರಿಸರವಾದಿಗಳು ಹಾಗೂ ಸರಕಾರೇತರ ಸಂಸ್ಥೆಗಳು ಯೋಜನೆಗೆ ವಿರೋಧವನ್ನು ದಾಖಲಿಸಿವೆ. ಅದೇ ವೇಳೆ, ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಕಾಣಿಸುವ ಸಲುವಾಗಿ ಹೀಗೊಂದು ಯೋಜನೆ ಅಗತ್ಯವಿದೆ ಎಂದು ಕೆಲವರ ಪ್ರತಿಭಟನೆಗಳು ನಡೆದಿವೆ. ಹೀಗೆ, ಪರ ಮತ್ತು ವಿರೋಧ ಎರಡೂ ಆಯಾಮಗಳು ಪಡೆದುಕೊಂಡಿರುವ ಯೋಜನೆಯನ್ನು ಅನುಷ್ಠಾನ ಮಾಡೇ ಮಾಡುವುದಾಗಿ ಸರಕಾರ ಪಟ್ಟು ಹಿಡಿದು ಕುಳಿತಿದೆ. ಜನಪ್ರತಿನಿಧಿಗಳಿಗೆ ಯೋಜನೆ ಆಳ ಮತ್ತು ಅಗಲಗಳನ್ನು ಅರ್ಥಪಡಿಸಲು ಯೋಜನೆ ರೂಪುಗೊಂಡಿದೆ. ಮೊದಲ ಹಂತದಲ್ಲಿ ಸುಮಾರು 90 ಕೋಟಿ ರೂಪಾಯಿಗಳನ್ನು ಯೋಜನೆಯ ಅನುಷ್ಠಾನದ ಹೊಣೆಯನ್ನು ಹೊತ್ತುಕೊಂಡಿರುವ ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ’ (ಬಿಡಿಎ) ನೀಡಿಯಾಗಿದೆ. ಯೋಜನೆಯ ‘ವಿಸ್ತೃತ ಅಧ್ಯಯನ ವರದಿ’ (ಡಿಪಿಆರ್)ಯನ್ನು ತನ್ನ ವೆಬ್ಸೈಟಿನಲ್ಲಿ ಪ್ರಕಟಿಸಿದೆ. ಜತೆಗೆ, ಯೋಜನೆಯನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ‘3ಡಿ’ ವಿಡಿಯೋವನ್ನು ಬಿಡಿಎ ಬಿಡುಗಡೆ ಮಾಡಿದೆ.

ಯಾವುದೇ ‘ಅಭಿವೃದ್ಧಿ’ ಯೋಜನೆಯಾದರೂ ಮೊದಲು ಎದುರಾಗುವುದು ವಿರೋಧವೇ. “ಹಿಂದೆ ವಿಧಾನಸೌಧ ಕಟ್ಟುವ ಸಮಯದಲ್ಲಿಯೂ ವಿರೋಧ ವ್ಯಕ್ತವಾಗಿತ್ತು. ಶಾಸಕರ ಭವನ ಕಟ್ಟುವಾಗಲೂ ಅಪಸ್ವರದ ಮಾತುಗಳು ಕೇಳಿ ಬಂದಿದ್ದವು. ಈಗಲೂ ಹಾಗೆ, ಉಕ್ಕಿನ ಬ್ರಿಡ್ಜ್ ಯೋಜನೆಗೆ ವಿರೋಧ ಬಂದಿದೆ,” ಎನ್ನುತ್ತಾರೆ ಹಿರಿಯ ಪತ್ರಕರ್ತ ಕೆ. ಎನ್. ನಾಗೇಶ್.

ಉಕ್ಕಿನ ಮೇಲ್ಸೇತುವೆಗೆ ವಿರೋಧ ವ್ಯಕ್ತವಾಗುತ್ತಿರುವುದಕ್ಕೆ ನಿರ್ದಿಷ್ಟ ಕಾರಣ ಇದೆ. “ನಾನು ಉಕ್ಕಿನ ಸೇತುವೆ ಕಟ್ಟಲು ವಿರೋಧ ಮಾಡುತ್ತಿಲ್ಲ. ಯಾವುದೇ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗೂ ನಮ್ಮ ವಿರೋಧ ಇಲ್ಲ. ಆದರೆ, ಬೆಂಗಳೂರು ನಗರ ಸೌಂದರ್ಯವನ್ನು ಕೆಲವು ಯೋಜನೆ (ಮೆಟ್ರೊ ರೈಲು)ಗಳಿಗಾಗಿ ಹಾಳು ಮಾಡಿಕೊಂಡಿದ್ದೇವೆ. ಈಗ ಚಾಲುಕ್ಯದಿಂದ ಹೆಬ್ಬಾಳ ಮಾರ್ಗದಲ್ಲಿ ಉಕ್ಕಿನ ಮೇಲ್ಸೇತುವೆ ಕಟ್ಟಿದರೆ ಅದೇ ಆಗುತ್ತದೆ. ಅದಕ್ಕಿಂತ ಹೆಚ್ಚಾಗಿ, ಅದರಿಂದ ಟ್ರಾಫಿಕ್ ಸಮಸ್ಯೆ ಪರಿಹಾರ ಆಗುತ್ತೆ ಎಂಬ ಖಾತ್ರಿಯೂ ಇಲ್ಲ,” ಎನ್ನುತ್ತಾರೆ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜೈಂದಾರ್ ಶಾ.

ಹಿಂದೆ, ಬೆಂಗಳೂರು ವಿಶನ್ ಗ್ರೂಪ್ ಹೆಸರಿನಲ್ಲಿ ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿಗಾಗಿ ಎಸ್. ಎಂ. ಕೃಷ್ಣಾ ಸರಕಾರದಲ್ಲಿ ರಚಿಸಿದ್ದ ಸಮಾಜದ ಗಣ್ಯರ ತಂಡದಲ್ಲಿ ಕಿರಣ್ ಪ್ರಮುಖ ಪಾತ್ರವಹಿಸಿದ್ದವರು. ಮೆಟ್ರೋ ಯೋಜನೆಯ 2ನೇ ಹಂತವನ್ನು ಆದಷ್ಟು ಬೇಗ ಅನುಷ್ಠಾನಕ್ಕೆ ತರುವಂತೆ ಹಾಗೂ ಬೆಂಗಳೂರಿನ ರಾತ್ರಿ ವಹಿವಾಟಿನ ಸಮಯವನ್ನು ವಿಸ್ತರಿಸುವಂತೆ ಒತ್ತಾಯಿಸಿದ ಪ್ರಮುಖರಲ್ಲಿ ಒಬ್ಬರು. ಉಕ್ಕಿನ ಮೇಲ್ಸೇತುವೆ ಯೋಜನೆ ಕುರಿತು ‘ಸಮಾಚಾರ’ದ ಜತೆ ಸೋಮವಾರ ಬೆಳಗ್ಗೆ ವಿಸ್ತಾರವಾಗಿ ಮಾತನಾಡಿದ ಅವರು, ಹಲವು ಸಂಗತಿಗಳ ಕುರಿತು ಗಮನ ಸೆಳೆದರು.

“ಮೇಲ್ಸೇತುವೆ ಪರವಾಗಿಯೂ ಜನ ಪ್ರತಿಭಟನೆ ಮಾಡುತ್ತಿದ್ದಾರೆ. ಹೀಗಾಗಿ,  ಪರ ಮತ್ತು ವಿರೋಧಗಳು ಬಂದಾಗ ಅದನ್ನು ನ್ಯಾಯಾಲಯವೇ ತೀರ್ಮಾನ ತೆಗೆದುಕೊಳ್ಳಬೇಕು. ಆದರೆ, ಇದೊಂದು ಯೋಜನೆ ವಿಚಾರದಲ್ಲಿ ಸರಕಾರ ಯಾಕೆ ಗಡಿಬಿಡಿ ಮಾಡುತ್ತಿದೆ ಎಂದು ಅರ್ಥವಾಗುತ್ತಿಲ್ಲ,” ಎನ್ನುತ್ತಾರೆ ಕಿರಣ್ ಮಜುಂದಾರ್ ಶಾ.

ಲಾಜಿಕ್ ಎಂಡ್ ಏನು?: 

ಬಿಡಿಎ ನಿರ್ಮಿಸಲಿರುವ ಉಕ್ಕಿನ ಸೇತುವೆ ಯೋಜನೆ ಕುರಿತು ಹಲವು ಮುದ್ರಣ ಮಾಧ್ಯಮಗಳು ಮತ್ತು ಸುದ್ದಿ ವಾಹಿನಿಗಳು ಆರಂಭದಿಂದಲೂ ವರದಿ ಮಾಡಿಕೊಂಡು ಬಂದಿವೆ. ಜನರ ಪರ ಮತ್ತು ವಿರೋಧದ ನಿಲುವುಗಳಿಗೆ ವೇದಿಕೆ ಕಲ್ಪಿಸಿವೆ. ಹೀಗೆ, ಕನ್ನಡ ಪ್ರಮುಖ ಪತ್ರಿಕೆಯೊಂದಕ್ಕೆ ಈ ಕುರಿತು ಹಲವು ವರದಿಗಳನ್ನು ಬರೆದ ಪತ್ರಕರ್ತರೊಬ್ಬರು ಹೊಸ ಆಯಾಮವೊಂದನ್ನು ತೆರೆದಿಡುತ್ತಾರೆ. “ಸಂಸದ ರಾಜೀವ್ ಚಂದ್ರಶೇಖರ್, ಚಿಂತಕರಾದ ರಾಮಚಂದ್ರ ಗುಹಾ ಸೇರಿದಂತೆ ಹಲವರು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಸರಕಾರ ಮಾತ್ರ ಯೋಜನೆಯನ್ನು ಅನುಷ್ಠಾನ ಮಾಡಿಯೇ ಸಿದ್ಧ ಎಂದು ಹೊರಟಿದೆ. ಇದರಿಂದ ಅವರಿಗೆ ಏನು ಲಾಭ ಎಂಬುದನ್ನು ಜನರೇ ಅರ್ಥ ಮಾಡಿಕೊಳ್ಳಬೇಕು. ನಾವು ಮಾಹಿತಿ ಕೊಡುವ ಕೆಲಸವನ್ನು ಮಾಡಿದ್ದೀವಿ,” ಎನ್ನುತ್ತಾರೆ ಅವರು.

“ಈ ಯೋಜನೆಗೆ ಆರಂಭದ ವಿರೋಧ ಬಂದಿದ್ದೇ ಗಾಲ್ಫ್ ಕ್ಲಬ್ ಕಡೆಯಿಂದ. ಗಾಲ್ಫ್ ಆಡುವವರು ಯಾರು ಎಂಬುದು ಯಾರು ಎಂಬುದು ಗೊತ್ತಿದೆ. ಹಿಂದೆ, ಯಾವುದಕ್ಕೂ ವಿರೋಧ ವ್ಯಕ್ತಪಡಿಸದವರು ಗಾಲ್ಫ್ ಕ್ಲಬ್ ವಿಚಾರ ಬಂದಾಗ ಬೀದಿಗೆ ಇಳಿದಿದ್ದಾರೆ. ಯೋಜನೆಗೆ ವಿರೋಧ ವ್ಯಕ್ತಪಡಿಸುವ ಚಿಂತನೆಯನ್ನು ಹುಟ್ಟು ಹಾಕುತ್ತಿದ್ದಾರೆ,” ಎನ್ನುತ್ತಾರೆ ಇನ್ನೊಬ್ಬರು ವರದಿಗಾರರು.

ಸದ್ಯ ಪರ- ವಿರೋಧಗಳ ಆಚೆಗೆ, ಬೆಂಗಳೂರಿನ ಅತಿ ಹೆಚ್ಚು ಟ್ರಾಫಿಕ್ ಹೊಂದಿರುವ ರಸ್ತೆಗಳ ಪೈಕಿ ಒಂದಾದ ‘ಏರ್ ಪೋರ್ಟ್ ರಸ್ತೆ’ಯಲ್ಲಿ ಉಕ್ಕಿನ ಸೇತುವೆ ನಿರ್ಮಾಣದ ಕಾರ್ಯ ಆರಂಭವಾಗಲಿದೆ. “ಮುಂದಿನ ತಿಂಗಳ ಹೊತ್ತಿಗೆ ಯೋಜನೆಗೆ ಗುದ್ದಲಿ ಪೂಜೆ ಮಾಡಲಾಗುತ್ತಿದೆ,” ಎನ್ನುತ್ತವೆ ಸರಕಾರಿ ಮೂಲಗಳು. ಅದರಿಂದ ಬೆಂಗಳೂರಿನ ಸಂಚಾರಿ ಸಮಸ್ಯೆಗೆ ತಾರ್ಕಿಕ ಅಂತ್ಯ ಅಥವಾ ಪರಿಹಾರ ಸಿಗಬಹುದಾ? ಅದಕ್ಕೆ ಇತಿಹಾಸದಲ್ಲಿ ಹಲವು ಪಾಠಗಳಿವೆ.

ಟ್ರಾಫಿಕ್ ಮಾಫಿಯಾ:

ಸಾಮಾನ್ಯವಾಗಿ ನಗರಗಳು ಬೆಳೆಯುತ್ತಿದ್ದಂತೆ ಅದರ ಸಂಚಾರ ವ್ಯವಸ್ಥೆ ಎಂಬುದು ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸುವ ಉದ್ಯಮವಾಗಿ ಮಾರ್ಪಾಡಾಡುತ್ತದೆ. ಪಾದಾಚಾರಿಗಳಿಂದ ಆರಂಭವಾಗಿ, ನಗರದೊಳಗೆ ಸಂಚಾರ ನಡೆಸುವ ಪ್ರತಿಯೊಬ್ಬರೂ ಗ್ರಾಹಕರಾಗಿ ಬದಲಾಗುತ್ತಾರೆ. ಕೋಟಿ ಮೀರಿರಿರುವ ಬೆಂಗಳೂರಿನ ಜನಸಂಖ್ಯೆ, ಟ್ರಾಫಿಕ್ ಹಾಗೂ ಟ್ರಾನ್ಸ್ಪೋರ್ಟ್ ವಿಚಾರಕ್ಕೆ ಬಂದರೆ, ದೊಡ್ಡ ಮಟ್ಟದ ಹೂಡಿಕೆಯನ್ನು ಬೇಡುತ್ತಿದ್ದಾರೆ. ಹೀಗಾಗಿ, ಇಲ್ಲಿನ ಟ್ರಾಫಿಕ್ ವಿಚಾರ ಅಂತರಾಷ್ಟ್ರೀಯ ಮಾಫಿಯವಾಗಿ ಬದಲಾಗಿದೆ. ಐಐಎಂಬಿ, ಐಐಎಸ್ಸಿಯಂತ ಜ್ಞಾನಶಾಖೆಗಳೂ ಕೂಡ ಇದರ ಭಾಗವಾಗಿವೆ.

“2005ರಲ್ಲಿ ಆರಂಭವಾದ ಮೆಟ್ರೊ ಯೋಜನೆ ಇವತ್ತಿಗೂ ಮಗಿದಿಲ್ಲ. ಈ ಯೋಜನೆಗೆ ಈಗಾಗಲೇ 13 ಸಾವಿರ ಕೋಟಿಗೂ ಹೆಚ್ಚು ಹಣ ಸುರಿಯಾಗಿದೆ. ಆರಂಭದಲ್ಲಿ ಇದನ್ನೂ ಬೆಂಗಳೂರಿನ ಟ್ರಾಫಿಕ್ ಜಂಜಾಟಕ್ಕೆ ಪರಿಹಾರ ಎಂದೇ ಬಿಂಬಿಸಲಾಗಿತ್ತು. ಇದರ ಜತೆಗೆ, ಜನಸಾಮಾನ್ಯರು ಓಡಾಡುವ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾದ ಬಸ್ ಕೂಡ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಅದಕ್ಕೂ ಸರಕಾರ ಸೂಕ್ತ ನೆರವು, ಅನುದಾನ ನೀಡಬೇಕಾದ ಅಗತ್ಯವಿದೆ. ಹೀಗಿರುವಾಗ, ಉಕ್ಕಿನ ಸೇತುವೆ ಮಾತ್ರವೇ ಪರಿಹಾರ ನೀಡುತ್ತೆ ಎಂಬ ಗ್ಯಾರೆಂಟಿ ಏನಿಲ್ಲ,” ಎನ್ನುತ್ತಾರೆ ಬಸ್ ಪ್ರಯಾಣಿಕರ ವೇದಿಕೆಯ ವಿನಯ್ ಶ್ರೀನಿವಾಸ್.

ಬಿಡಿಎ ಪ್ರಕಟಿಸಿರುವ ಉಕ್ಕಿನ ಮೇಲ್ಸೇತುವೆಯ ಡಿಪಿಆರ್ ಪ್ರಕಾರ ಯೋಜನೆಗಾಗಿ ಸುಮಾರು 1350 ಕೋಟಿ ರೂಪಾಯಿ ವೆಚ್ಚವಾಗಲಿದೆ. ಇದರಲ್ಲಿ ಭೂ ಸ್ವಾಧೀನ ಪ್ರಕ್ರಿಯೆಗೆ ತಗಲುವ ವೆಚ್ಚ ಪ್ರತ್ಯೇಕ ಎಂಬುದನ್ನು ಗಮನಿಸಬೇಕಿದೆ. ಅಂತಿಮವಾಗಿ 1800 ಕೋಟಿ ಯೋಜನೆ ಇದು ಎಂದು ಅಂದಾಜಿಸಲಾಗಿದೆ.

steel-bridge-proposed-cost-1

ಸಾಮಾನ್ಯವಾಗಿ ಯೋಜನೆಗಳು ಅನುಷ್ಠಾನದ ಸಮಯವನ್ನು ಹೆಚ್ಚಿಗೆ ತೆಗೆದುಕೊಂಡರೆ, ಅದರ ಯೋಜನಾ ವೆಚ್ಚವೂ ಹೆಚ್ಚಾಗಲಿದೆ. ಈ ಸಮಯದಲ್ಲಿ ಯೋಜನೆಯ ಮೂಲದಲ್ಲಿಯೇ ಸಣ್ಣ ಪುಟ್ಟ ಬದಲಾವಣೆ ಮಾಡಿ, ಯೋಜನಾ ಮೊತ್ತವನ್ನೂ ಹೆಚ್ಚಿಸಲಾಗುತ್ತದೆ. ಈ ಉಕ್ಕಿನ ಸೇತುವೆ ವಿಚಾರದಲ್ಲಿಯೂ ಇದರ ಸಾಧ್ಯತೆಗಳಿವೆ. ಈ ಕುರಿತು ಬಿಡಿಎ ಆಯುಕ್ತ ರಾಜಕುಮಾರ್ ಖತ್ರಿ ಅವರಿಗೆ ‘ಸಮಾಚಾರ’ ಎಸ್ಎಂಎಸ್ ಕಳಿಸಿದೆಯಾರೂ, ಇನ್ನೂ ಉತ್ತರ ಬಂದಿಲ್ಲ.

ಒಂದು ಮಾದರಿ:

ರಾಯಚೂರು- ಮಂತ್ರಾಲಯ ಸಂಪರ್ಕಿಸುವ ಉಕ್ಕಿನ ಸೇತುವೆ.

ರಾಯಚೂರು- ಮಂತ್ರಾಲಯ ಸಂಪರ್ಕಿಸುವ ಉಕ್ಕಿನ ಸೇತುವೆ.

ಉಕ್ಕಿನ ಮೇಲ್ಸೇತುವೆ ವಿಚಾರ ಬಂದರೆ, ರಾಜ್ಯದಲ್ಲಿ ಈಗಾಗಲೇ ಅತ್ಯಂತ ಕಡಿಮೆ ಅವಧಿಯಲ್ಲಿ ಉಕ್ಕಿನ ಸೇತುವೊಂದನ್ನು ನಿರ್ಮಿಸಿದ ಉದಾಹರಣೆಯೊಂದಿದೆ. 2009ರಲ್ಲಿ ಪ್ರವಾಹ ಬಂದ ಸಮಯದಲ್ಲಿ ರಾಯಚೂರು- ಮಂತ್ರಾಲಯವನ್ನು ಸಂಪರ್ಕಿಸುವ ಸೇತುವೆ ಕೊಚ್ಚಿ ಹೋಗಿತ್ತು. ಮರು ವರ್ಷ ತುಂಗ- ಭದ್ರಾ ನದಿಗೆ ಅಡ್ಡವಾಗಿ ಉಕ್ಕಿನ ಸೇತುವೆಯನ್ನು ನಿರ್ಮಿಸಲು ‘ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ’ ಟೆಂಡರ್ ಕರೆದಿತ್ತು. ಹೈದ್ರಾಬಾದ್ ಮೂಲದ ಖಾಸಗಿ ಕಂಪನಿಯೊಂದು 2011ರ ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ಸುಮಾರು 600 ಮೀಟರ್ ಉದ್ದದ, 12 ಮೀಟರ್ ಅಗಲದ ಉಕ್ಕಿನ ಸೇತುವೆಯನ್ನು 43 ಕೋಟಿ ವೆಚ್ಚದಲ್ಲಿ ನಿರ್ಮಿಸಿತ್ತು.

ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಮೇತ್ಸೇತುವೆ ಉದ್ದವೇ ಸುಮಾರು 6. 7 ಕಿ. ಮೀ (6700 ಮೀಟರ್)ಗಳಷ್ಟಿದೆ. 2011ಕ್ಕೆ ಹೋಲಿಸಿದರೆ ಉಕ್ಕಿನ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೇ ಕುಸಿದಿದೆ. ಹೀಗಾಗಿ, ಸರಕಾರ ಮನಸ್ಸು ಮಾಡಿದರೆ, ಯೋಜನೆಯ ವೆಚ್ಚದಲ್ಲಿಯೇ ಸಾಕಷ್ಟು ಹಣವನ್ನು ಉಳಿಸಬಹುದು ಎನ್ನುತ್ತಾರೆ ತಜ್ಞರು. ಈಗಾಗಲೇ ಮೇಲ್ಸೇತುವೆ ನಿರ್ಮಾಣ ಕಾರ್ಯದಲ್ಲಿ 300 ಕೋಟಿಯನ್ನು ಉಳಿಸಿದ ದಿಲ್ಲಿ ಸರಕಾರ, ಆ ಹಣವನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನು ತೆರೆಯಲು ಬಳಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Leave a comment

Top