An unconventional News Portal.

ಬೆಳಗಾವಿ ಅಧಿವೇಶನಕ್ಕೆ ಪ್ರತಿಭಟನೆಗಳ ಸ್ವಾಗತ: ವಿರೋಧ ಪಕ್ಷಗಳ ಸ್ಥಾನದಲ್ಲಿ ಹೋರಾಟಗಾರರು

ಬೆಳಗಾವಿ ಅಧಿವೇಶನಕ್ಕೆ ಪ್ರತಿಭಟನೆಗಳ ಸ್ವಾಗತ: ವಿರೋಧ ಪಕ್ಷಗಳ ಸ್ಥಾನದಲ್ಲಿ ಹೋರಾಟಗಾರರು

ಸೋಮವಾರದಿಂದ ಆರಂಭವಾಗಲಿರುವ ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಸ್ವಾಗತ ಕೋರಲು ಪ್ರತಿಭಟನಾಕಾರರು ಸಿದ್ಧವಾಗಿದ್ದಾರೆ. ಸರಕಾರಕ್ಕೆ ಚಾಟಿ ಬೀಸಲು ಹಲವು ಜನಪರ ಸಂಘಟನೆಗಳು ತಯಾರಾಗಿದ್ದು ಮತ್ತೊಂದು ಸುತ್ತಿನ ‘ಭೂಮಿ ಹೋರಾಟ’ ಆರಂಭವಾಗಿದೆ.

ಮುಖ್ಯವಾಗಿ ನೂರಾರು ಸಂಘಟನೆಗಳು ಒಟ್ಟಾಗಿ ‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ ಹೆಸರಿನಲ್ಲಿ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿಯವರ ಮುಂದಾಳತ್ವದಲ್ಲಿ ಎಡಬಿಡದೆ ಅಹೋರಾತ್ರಿ ಹಕ್ಕೊತ್ತಾಯ ಧರಣಿ ನಡೆಸಲು ಉದ್ದೇಶಿಸಿದ್ದಾರೆ. ದೇವರಾಜ ಅರಸು ಜಾರಿಗೆ ತಂದಿದ್ದ ‘ಭೂ ಸುಧಾರಣೆ ಕಾಯ್ದೆ’ಯ ಪರಿಣಾಮಕಾರಿ ಜಾರಿಗೆ ಒತ್ತಾಯಿಸಿ ನಡೆಸುತ್ತಿರುವ ಎರಡನೇ ಹೋರಾಟ ಇದಾಗಿದ್ದು, ಸರಕಾರದಿಂದ ಸ್ಪಷ್ಟ ಅಭಿಪ್ರಾಯ ವ್ಯಕ್ತವಾಗದಿದ್ದರೆ ಧರಣಿ ಹಿಂತೆಗೆದುಕೊಳ್ಳುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.Protest 08

ಈ ಹಿಂದೆ ‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ ಆಗಸ್ಟ್ 20ರಂದು ಬೆಂಗಳೂರಿನಲ್ಲಿ ‘ವಿಧಾನಸೌಧ ಚಲೋ’ ಹೋರಾಟ ಹಮ್ಮಿಕೊಂಡಿತ್ತು. ಅವತ್ತು ಪ್ರತಿಭಟನಾ ಸ್ಥಳಕ್ಕೇ ಮನವಿ ಸ್ವೀಕರಿಸಲು ಬಂದಿದ್ದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, “ಸಮಿತಿಯ ಬೇಡಿಕೆಗಳನ್ನು ಜಾರಿ ಮಾಡುವುದಾಗಿ,” ನಗುಮುಖದಿಂದಲೇ ಭರವಸೆ ನೀಡಿದ್ದರು.

ಸ್ಪಷ್ಟ ತೀರ್ಮಾನಕ್ಕೆ ಒತ್ತಾಯ:

“ಆದರೆ ಈ ಬಗ್ಗೆ ಇವತ್ತಿನವರೆಗೂ ಸರಕಾರ ಸ್ಪಷ್ಟ ತೀರ್ಮಾನ ತೆಗೆದುಕೊಂಡಿಲ್ಲ. ತೀರ್ಮಾನ ಬಿಡಿ, ಕ್ಯಾಬಿನೆಟ್ ಸಭೆ ಬಿಟ್ಟಾಕಿ ಅಧಿಕಾರಿಗಳ ಸಭೆಯನ್ನೂ ನಡೆಸಿಲ್ಲ. ಅವರು (ಸರಕಾರ) ಎಲ್ಲರೂ ಈ ರೀತಿ ಪ್ರತಿಭಟನೆ ನಡೆಸುತ್ತಾರೆ ಸುಮ್ಮನಾಗುತ್ತಾರೆ ಎಂದುಕೊಂಡಿದ್ದಾರೆ. ಆದರೆ ನಾವು ಹಾಗೆ ಮಾಡುವವರಲ್ಲ. ಈಗ ಎರಡನೇ ಹಂತದ ಹೋರಾಟಕ್ಕೆ ಇಳಿದಿದ್ದೇವೆ,” ಎನ್ನುತ್ತಾರೆ ‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ಯ ಸಂಘಟಕರಾದ ನೂರ್ ಶ್ರೀಧರ್.

ನವೆಂಬರ್ 20ರ ಸಂಜೆಯಿಂದ ಆರಂಭಿಸಿ ಸರಕಾರ ಅಧಿವೇಶನದಲ್ಲಿ ಸಕಾರಾತ್ಮಕ ತೀರ್ಮಾನ ತೆಗೆದುಕೊಳ್ಳುವವರೆಗೆ ಈ ಧರಣಿ ಮುಂದುವರಿಯಲಿದೆ. ಅದಕ್ಕಾಗಿ ಬೇಕಾದ ಎಲ್ಲಾ ಸಿದ್ಧತೆಗಳನ್ನು ಹೋರಾಟ ಸಮಿತಿಯವರು ಮಾಡಿಕೊಂಡಿದ್ದಾರೆ. “ಬಜೆಟ್ ಕಾರಣಕ್ಕೆ ನಾವು ಧರಣಿಯನ್ನು 500 ಜನರಿಗೆ ಮಿತಿಗೊಳಿಸಿದ್ದೇವೆ. ಆದರೆ ಅದಕ್ಕಿಂತ ಹೆಚ್ಚಿನ ಜನ ಪಾಲ್ಗೊಳ್ಳಲಿದ್ದಾರೆ. ಮಿನಿ ವಿಧಾನಸೌಧ ಸುತ್ತ ಮುತ್ತ ಒಂದು ಕಿಲೋಮೀಟರ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಹೇರಲಾಗಿದೆ. ಆದರೆ ನಾವು ಹೊರಗಡೆಯೇ ಪ್ರತಿಭಟನೆ ನಡೆಸುತ್ತೇವೆ. ನಮಗೇನೂ ಸಮಸ್ಯೆ ಇಲ್ಲ,” ಎನ್ನುತ್ತಾರೆ ಶ್ರೀಧರ್.

Belagavi land protest

“ಅಧಿವೇಶನದಲ್ಲಿ ಈ ವಿಚಾರವನ್ನು ಸರಕಾರ ಚರ್ಚೆಗೆ ಎತ್ತಿಕೊಳ್ಳಬೇಕು. ಉನ್ನತ ಮಟ್ಟದ ಸಮಿತಿ ರಚಿಸಬೇಕು. ನಮ್ಮ ಬೇಡಿಕೆಯನ್ನು ಈಡೇರಿಸಲು ಆಗುತ್ತಾ ಇಲ್ವಾ ಎಂದು ಸ್ಪಷ್ಟವಾಗಿ ಹೇಳಬೇಕು. ಬೇಡಿಕೆ ಈಡೇರಿಸಲು ಆಗದಿದ್ದರೆ ಆಗುವುದಿಲ್ಲ ಎಂದು ಮುಕ್ತವಾಗಿ ಹೇಳಲಿ. ಆದರೆ ಪ್ರತಿಕ್ರಿಯೆ ನೀಡದೇ ಇರಲು ಸಾಧ್ಯವಿಲ್ಲ,” ಎನ್ನುತ್ತಾರೆ ನೂರ್ ಶ್ರೀಧರ್. ಅಧಿವೇಶನದಲ್ಲಿ ವಿಪಕ್ಷಗಳು ಬೇರೆ ವಿಚಾರ ಪ್ರಸ್ತಾಪಿಸಿ ವಿಷಯಾಂತರ ಮಾಡಿದರೂ ನಾವು ಬಿಡುವುದಿಲ್ಲ. ಒಂದು ವೇಳೆ ಸರಕಾರ ಇದಕ್ಕೂ ಜಗ್ಗದಿದ್ದರೆ ಇನ್ನೂ ತೀವ್ರರೂಪದ ಹೋರಾಟಗಳಿಗೂ ಇಳಿಯಲು ಸಮಿತಿ ತೀರ್ಮಾನಿಸಿದೆ ಎಂದು ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಸಮಿತಿಯು, ‘ಮೊದಲನೆ ಸುತ್ತಿನ ಹೋರಾಟದ ಮೂಲಕ ಭೂಮಿ ಮತ್ತು ವಸತಿ ಪ್ರಶ್ನೆಯನ್ನು ಮತ್ತೊಮ್ಮೆ ಬಲವಾದ ರೀತಿಯಲ್ಲಿ ಸಮಾಜದ ಅಜೆಂಡದಲ್ಲಿ ತರುವುದರಲ್ಲಿ ನಾವು ಯಶಸ್ವಿಯಾದೆವು. ಆದರೆ ಅದಿನ್ನು ಸರ್ಕಾರದ ಅಜೆಂಡ ಆಗಿಲ್ಲ. ಭಂಡ ಸರ್ಕಾರ ಜನರ ಈ ಮೂಲಭೂತ ಸಮಸ್ಯೆಯನ್ನು ಚರ್ಚೆಗೆ ಕೈಗೆತ್ತಿಕೊಳ್ಳಲಿಕ್ಕೇ ಸಿದ್ಧವಿಲ್ಲ. ಹಾಗಾಗಿ ಈ ಬಾರಿ ಅದಕ್ಕೆ ಚುರುಕು ಮುಟ್ಟಿಸಲೇಬೇಕಿದೆ. ಭೂಮಿ ಮತ್ತು ವಸತಿ ಪ್ರಶ್ನೆಗೆ ಅದು ಉತ್ತರಿಸಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಬೇಕಿದೆ,’ ಎಂದು ಹೇಳಿದೆ. ಭೂಮಿ ಹೋರಾಟಕ್ಕೆ ಹಲವು ಸ್ಥಳೀಯ ಸಂಘಟನೆಗಳೂ ಬೆಂಬಲ ಸೂಚಿಸಿವೆ.

ಅಧಿವೇಶನದಲ್ಲಿ ಪ್ರಸ್ತಾಪ:

ಅಧಿವೇಶನದಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಸಮಸ್ಯೆಯನ್ನು ಹಲವು ಶಾಸಕರು ಎತ್ತುವ ಭರವಸೆಯನ್ನೂ ಈಗಾಗಲೆ ನೀಡಿದ್ದಾರೆ. ಕುಡಿಚಿ ಶಾಸಕ ಪಿ. ರಾಜೀವ್, ರೈತ ಸಂಘದ ಪುಟ್ಟಣ್ಣಯ್ಯ, ರಾಯಚೂರು ಶಾಸಕ ಡಾ. ಶಿವರಾಜ್ ಪಾಟೀಲ್ ಸಮಿತಿಯವರಿಗೆ ಈ ಭರವಸೆ ನೀಡಿದ್ದಾರೆ.

ನವೆಂಬರ್ 24ರಂದು ಅಧಿವೇಶನದಲ್ಲಿ ರೈತಸಂಘದ ಪುಟ್ಟಣ್ಣಯ್ಯ ಖಾಸಗಿ ಮಸೂದೆಯನ್ನೂ ಮಂಡಿಸಲಿದ್ದಾರೆ. ಈಗಾಗಲೇ ಮಸೂದೆ ಮಂಡನೆಗೆ ಸ್ಪೀಕರ್ ಒಪ್ಪಿಗೆ ಸೂಚಿಸಿದ್ದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಈ ಮಸೂದೆ ಮಂಡಿನೆಯಾಗಲಿದೆ.

ಸರಣಿ ಪ್ರತಿಭಟನೆಗಳು:

ಒಂದೆಡೆ ‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ ನವೆಂಬರ್ 20ರ ಸಂಜೆ 5 ಗಂಟೆಯಿಂದ ಪ್ರತಿಭಟನೆಗೆ ಇಳಿದಿದ್ದರೆ, ಅತ್ತ ಇನ್ನೊಂದು ಭಾಗದಲ್ಲಿ ಇತರ ಹಲವು ಸಂಘಟನೆಗಳು ವಿವಿಧ ವಿಚಾರಗಳಿಗೆ ಹೋರಾಟ ಹಮ್ಮಿಕೊಂಡಿವೆ.

Belgavali Land Protest

ಪ್ರತಿಭಟನೆಯ ಸಿದ್ಧತಾ ಸಭೆ

‘ಚಲೊ ಉಡುಪಿ’ ಸಮಾವೇಶ ನಡೆಸಿ ಯಶಸ್ವಿಯಾಗಿದ್ದ ‘ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ’ಯ ನವೆಂಬರ್ 21 ರಂದು ಆಹಾರದ ಆಯ್ಕೆಗಾಗಿ ಹಾಗೂ ಭೂಮಿಯ ಹಕ್ಕಿಗಾಗಿ ಬೃಹತ್ ನಿಯೋಗ ಕೊಂಡೊಯ್ಯಲಿದೆ. ಅವತ್ತೇ ಬರ ನಿರ್ವಹಣೆ ಮತ್ತು ಸಾಲಮನ್ನಾಕ್ಕಾಗಿ ಒತ್ತಾಯಿಸಿ ಸ್ವರಾಜ್ ಅಭಿಯಾನ, ರಾಜ್ಯ ರೈತ ಸಂಘ, ಕರ್ನಾಟಕ ಜನಶಕ್ತಿ ಮುಂತಾದ ಸಂಘಟನೆಗಳು ಪ್ರತಿಭಟನೆ ನಡೆಸಲಿದ್ದಾರೆ.

ನವೆಂಬರ್ 22ರಂದು ಬೆಳಗಾವಿಯಲ್ಲಿ ‘ಮದ್ಯಪಾನ ವಿರೋಧಿ ಆಂದೋಲನ’ದ ವತಿಯಿಂದ  ಮದ್ಯಪಾನದ ವಿರುದ್ಧ  ಪ್ರದರ್ಶನ ನಡೆಯಲಿದೆ. ಅವತ್ತೇ ಅಂಗನವಾಡಿ ಕಾರ್ಯಕರ್ತರೂ ತಮ್ಮ ಹಕ್ಕುಗಳಿಗಾಗಿ ಬೆಳಗಾವಿಯಲ್ಲಿ ಜಮಾಯಿಸಲಿದ್ದಾರೆ.

“ಜನಪರವಾಗಿ ಹೋರಾಟ ಮಾಡುವ ಎಲ್ಲಾ ಸಂಘಟನೆಗಳ ಜತೆ ನಾವಿದ್ದು, ಎಲ್ಲಾ ಸಂಘಟನೆಗಳು ಒಟ್ಟಾಗಿ ‘ಮಹಾಮೈತ್ರಿ’ ಮಾಡಿಕೊಂಡಿದ್ದೇವೆ. ಇದರ ವತಿಯಿಂದ ಎಸ್.ಆರ್.ಹಿರೇಮಠ್ ಮತ್ತು ದೇವನೂರು ಮಹಾದೇವ ಅವರೂ ನವೆಂಬರ್ 22ರಂದು ಬೆಳಗಾವಿಗೆ ಭೇಟಿ ನೀಡಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ,” ಎಂದು ನೂರ್ ಶ್ರೀಧರ್ ಮಾಹಿತಿ ನೀಡಿದ್ದಾರೆ.

ಇನ್ನು 26ರಂದು ಸಮಾನ ಶಿಕ್ಷಣಕ್ಕಾಗಿ ಶಿಕ್ಷಣ ಮಂತ್ರಿಗೆ ಘೇರಾವ್ ಹಾಕಲು ಒಂದಷ್ಟು ಸಂಘಟನೆಗಳು ಸಿದ್ಧವಾಗಿವೆ.

ಹೀಗೆ ಸಾಲು ಸಾಲು ಪ್ರತಿಭಟನೆಗಳ ಮೂಲಕ ಬೆಳಗಾವಿಯಲ್ಲಿ ಸೋಮವಾರದಿಂದ ಆರಂಭವಾಗಲಿರುವ ಚಳಿಗಾಲದ ವಿಶೇಷ ಅಧಿವೇಶನಕ್ಕೆ ಸ್ವಾಗತ ದೊರೆಯಲಿದೆ.

Leave a comment

Top