An unconventional News Portal.

ಮತ್ತೆ ಮಿಸ್ ಹೊಡೆದ ಪಿಯು ಬೋರ್ಡ್ ‘ಕೆಮಿಸ್ಟ್ರಿ’; ಪರೀಕ್ಷೆಗೆ ಮುನ್ನವೇ ಪ್ರಶ್ನೆ ಪತ್ರಿಕೆ ಬಹಿರಂಗ

ಮತ್ತೆ ಮಿಸ್ ಹೊಡೆದ ಪಿಯು ಬೋರ್ಡ್ ‘ಕೆಮಿಸ್ಟ್ರಿ’; ಪರೀಕ್ಷೆಗೆ ಮುನ್ನವೇ ಪ್ರಶ್ನೆ ಪತ್ರಿಕೆ ಬಹಿರಂಗ

pu students-board

ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಗುರುವಾರ ಮತ್ತೊಮ್ಮೆ ಸೋರಿಕೆಯಾಗುವ ಮೂಲಕ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು.

ಮಾ. 21ರಂದು ನಡೆಯಬೇಕಿದ್ದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಈ ವಿಚಾರ ಬಹಿರಂಗವಾಗುತ್ತಿದ್ದಂತೆ ಪಿಯು ಮಂಡಳಿ ಮರು ಪರೀಕ್ಷೆಯನ್ನು ಮಾ. 30ಕ್ಕೆ ಮುಂದೂಡಿತ್ತು. ರಾಜ್ಯಾದ್ಯಂತ ಸುಮಾರು 1. 45 ಲಕ್ಷ ವಿದ್ಯಾರ್ಥಿಗಳು ರಸಾಯನ ಶಾಸ್ತ್ರ ಪರೀಕ್ಷೆಯನ್ನು ತೆಗೆದುಕೊಂಡಿದ್ದರು.

ಪರೀಕ್ಷೆ ಆರಂಭಕ್ಕೂ ಮುನ್ನವೇ ಮಧ್ಯರಾತ್ರಿ ಮೂರು ಗಂಟೆ ವೇಳೆಗೆ ಬೆಂಗಳೂರು, ತುಮಕೂರುಗಳಲ್ಲಿ ಕೈ ಬರಹದಲ್ಲಿ ಬರೆದ ಪ್ರಶ್ನೆ ಪತ್ರಿಕೆ ಹರಿದಾಡಲಾರಂಭಿಸಿತು. ಬೆಳಗೆ ನಸಕು ಹರಿಯುವ ವೇಳೆಗೆ ದೃಶ್ಯ ಮಾಧ್ಯಮಗಳಲ್ಲಿ ಪ್ರಶ್ನೆ ಪತ್ರಿಕೆ ಭಿತ್ತರಗೊಳ್ಳತೊಡಗಿತು. ಈ ಸಮಯದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಪಲ್ಲವಿ ಅಕುರಾತಿ, ‘ಸೇಫ್ ರೂಮ್ಗಳಿಂದ ಪಶ್ನೆ ಪರೀಕ್ಷೆಯನ್ನು ಹೊರತೆಗೆಯದಂತೆ’ ನಿರ್ದೇಶನ ನೀಡಿದರು. ಜತೆಗೆ, ಪರೀಕ್ಷೆಯನ್ನು ಮುಂದೂಡಿರುವುದಾಗಿ ಅಧಿಕೃತವಾಗಿ ಪ್ರಕಟಿಸಿದ್ದರು.

ರಾಜ್ಯಾದ್ಯಂತ ರಾತ್ರಿ ಇಡೀ ಓದಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದ ವಿದ್ಯಾರ್ಥಿಗಳ ಆಕ್ರೋಶದ ಕಟ್ಟೆ ಒಡೆಯಿತು. ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆಗಳು ಆರಂಭವಾದವು. ಎಲ್ಲಾ ಕಡೆಯಲ್ಲೂ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತವಾಯಿತು.

ಹೀಗಿರುವಾಗಲೇ, ಹುಬ್ಬಳ್ಳಿಯಲ್ಲಿ ನಡೆಯುತ್ತಿದ್ದ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಪಾಲ್ಗೊಂಡರು. “ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು ರಾಜೀನಾಮೆ ನೀಡುವವರೆಗೂ ಪ್ರತಿಭಟನೆ ಮುಂದುವರಿಯಲಿದೆ,” ಎಂದು ಗುಡುಗಿದರು. ಇತ್ತ ವಿಧಾನಸೌಧದಲ್ಲಿ ಪ್ರತಿಪಕ್ಷಗಳು ಸಿಎಂ ಕಚೇರಿ ಮುಂದೆ ಪ್ರತಿಭಟನೆ ಆರಂಭಿಸಿದರು. ಸ್ಥಳಕ್ಕೆ ಬಂದ ಸಿಎಂ ಸಿದ್ದರಾಮಯ್ಯರಿಗೆ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅಧಿಕಾರಿ ಅಜಯ್ ಸೇಠ್ ವಿರುದ್ಧ ದೂರು ನೀಡಿದರು. ವಿಧಾನಸೌಧದ ಹೊರಗೆ ಮಾತನಾಡಿದ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಕೂಡ, ‘ನೈತಿಕ ಹೊಣೆಹೊತ್ತು ರಾಜೀನಾಮೆ’ ನೀಡಬೇಕು ಎಂದು ಆಗ್ರಹಿಸಿದರು. ಪಿಯು ಮಂಡಳಿ ಮುಂದೆ ನಡೆಯುತ್ತಿದ್ದ ಪ್ರತಿಭಟನೆ ನಡುವೆ ಜೆಡಿಎಸ್ ಅಧ್ಯಕ್ಷ ಕುಮಾರಸ್ವಾಮಿ ಕಾಣಿಸಿಕೊಂಡರು.

ಮತ್ತೊಂದೆಡೆ ವಿಧಾನಸೌಧದಲ್ಲಿ ಸ್ಮೀಕರ್ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಸಭೆ ನಡೆಯಿತು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಪಲ್ಲವಿ ಅಕುರಾತಿ, ಪ್ರತಿಪಕ್ಷದ ನಾಯಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಸಿ. ಟಿ. ರವಿ, ಸಿಐಡಿ ಡಿಐಜಿ ಸೋನಿಯಾ ನಾರಂಗ್ ಸಭೆಯಲ್ಲಿ ಪಾಲ್ಗೊಂಡು ವಿಷಯ ಕುರಿತು ಚರ್ಚೆ ನಡೆಸಿದರು.

ವಿಧಾನಸಭೆ ಆರಂಭವಾಗುತ್ತಿದ್ದಂತೆ ಸದನದ ಒಳಗೆ ಪ್ರತಿಪಕ್ಷದ ನಾಯಕರು ಸಚಿವ ಕಿಮ್ಮನೆ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ಬಾವಿಗಿಳಿದು ಘೋಷಣೆ ಕೂಗತೊಡಗಿದರು. ಇದರ ನಡುವೆಯೇ ಸದನಕ್ಕೆ ಮಾಹಿತಿ ನೀಡಿದ ಸಚಿವ ಕಿಮ್ಮನೆ ರತ್ನಾಕರ್, ”ರಸಾಯನ ಶಾಸ್ತ್ರ ವಿಷಯದ ಮರು ಪರೀಕ್ಷೆಯನ್ನು ಏ. 12ಕ್ಕೆ ಮುಂದೂಡಲಾಗಿದೆ. ಮುಂದಿನ ಪರೀಕ್ಷೆ ಸುಗಮವಾಗಿ ನಡೆಯಲು ಪಿಯು ಮಂಡಳಿಯ ಹಿಂದಿನ ನಿರ್ದೇಶಕ ರಾಮೇಗೌಡ ಹಾಗೂ ಸರ್ವ ಶಿಕ್ಷಣ ಯೋಜನೆಯ ರಾಜ್ಯ ನಿರ್ದೇಶಕರನ್ನು ಒಳಗೊಂಡ ಮೂವರ ಸಮಿತಿ ರಚಿಸಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಪದವಿ ಪೂರ್ವ ಶಿಕ್ಷಣ ಇಲಾಖೆ, ಪರೀಕ್ಷಾಂಗ ವಿಭಾಗದ 40 ಜನರನ್ನು ಅಮಾನತು ಮಾಡಲಾಗಿದೆ. ಸದರಿ ಪ್ರಕರಣದ ತನಿಖೆಗೆ ಸಿಐಡಿಗೆ ವಹಿಸಲಾಗಿದೆ” ತಿಳಿಸಿದರು.

ಸಂಜೆ ವೇಳೆಗೆ, ಮಲ್ಲೇಶ್ವರದಲ್ಲಿರುವ ಪಿಯು ಮಂಡಳಿಗೆ ಭೇಟಿ ನೀಡಿದ ಸಿಐಡಿ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಮಾ. 21ರಂದು ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ತನಿಖೆ ಈಗಾಗಲೇ ಶುರುವಾಗಿ ವಾರ ಕಳೆದಿದೆ. ಈವರೆಗೆ ಪ್ರಕರಣ ಸಂಬಂಧ ಯಾರನ್ನೂ ಬಂಧಿಸಲಾಗಿಲ್ಲ.

“ಪ್ರತಿ ವರ್ಷವೂ ಪರೀಕ್ಷೆಗಳು ಹತ್ತಿರ ಬಂದಾಗ ಇಂತಹ ಅಪಸವ್ಯಗಳು ನಡೆಯುತ್ತಲೇ ಇರುತ್ತವೆ. ಸೋರಿಕೆ ನಂತರ ತಮ್ಮ ಮುಖ ಉಳಿಸಿಕೊಳ್ಳಲು ಹಿರಿಯ ಅಧಿಕಾರಿಗಳು, ಸಚಿವರು ಡಿ- ಗ್ರೂಪ್ ನೌಕರರ ಅಮಾನತು ನಾಟಕ ಮಾಡುತ್ತಾರೆ. ಈ ಬಾರಿಯೂ ಇದೇ ನಡೆದಿದೆ. ಇದಕ್ಕೆ ಬೇಕಿರುವುದು ವ್ಯವಸ್ಥೆಯಲ್ಲಿ ಬದಲಾವಣೆ,” ಎಂಬ ಆಶಯ ವ್ಯಕ್ತವಾಗುತ್ತಿದೆ.

Leave a comment

Top