An unconventional News Portal.

ಸ್ಮಶಾನದ ನಡುವೆ ರಸ್ತೆ ನಿರ್ಮಾಣ: ಬಿಡಿಎ ವಿರುದ್ಧ ಹಳ್ಳಿಗರ ಆಕ್ರೋಶ

ಸ್ಮಶಾನದ ನಡುವೆ ರಸ್ತೆ ನಿರ್ಮಾಣ: ಬಿಡಿಎ ವಿರುದ್ಧ ಹಳ್ಳಿಗರ ಆಕ್ರೋಶ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ. (ಚಿತ್ರ: ದಿ ಹಿಂದೂ)

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ. (ಚಿತ್ರ: ದಿ ಹಿಂದೂ)

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಈಗ ಸ್ಮಶಾನಕ್ಕೆ ಮೀಸಲಿಟ್ಟ ಜಾಗವನ್ನು ಆಕ್ರಮಿಸಿಲು ಹೋಗಿ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾದ ಘಟನೆ ಸಿಲಿಕಾನ್ ಸಿಟಿಯ ಹೊರವಲಯದಲ್ಲಿ ವರದಿಯಾಗಿದೆ.

ಇಲ್ಲಿನ ಕುಂಬಳಗೋಡು ಗ್ರಾಮದ ವ್ಯಾಪ್ತಿಯಲ್ಲಿ ಕಣಿಮಿಣಕಿ ಗ್ರಾಮಸ್ಥರೀಗ ಬಿಡಿಎ ವಿರುದ್ಧ ತಿರುಗಿ ಬಿದ್ದಿದ್ದಾರೆ. ಊರ ಜನರಿಗಾಗಿ 2004ರಲ್ಲಿ ಸುಮಾರು ನಾಲ್ಕು ಎಕರೆ ಪ್ರದೇಶವನ್ನು ಸ್ಮಶಾನ ಜಾಗ ಎಂದು ಮಂಜೂರು ಮಾಡಲಾಗಿತ್ತು. ಅದರ ಪಕ್ಕದಲ್ಲಿಯೇ ಬಿಡಿಎ 50 ಎಕರೆ ಪ್ರದೇಶದಲ್ಲಿ ನಿವಾಸಗಳನ್ನು ನಿರ್ಮಿಸುತ್ತಿದೆ. ಇದಕ್ಕಾಗಿ ಸ್ಮಶಾನಕ್ಕೆ ಮೀಸಲಿಟ್ಟ ಜಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ ಎಂಬುದು ಗ್ರಾಮಸ್ಥರ ಆರೋಪ.

ಈಗಾಗಲೇ ಬಿಡಿಎ ರಸ್ತೆ ನಿರ್ಮಾಣ ನಡೆಸಿದೆ. ಇದಕ್ಕಾಗಿ ಗ್ರಾಮಸ್ಥರ ಸುಮಾರು 10 ಗೋರಿಗಳನ್ನು ಅಗೆದು ಹಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪಕ್ಕದಲ್ಲಿರುವ ಭದ್ರಾಪುರ ಮತ್ತು ಕಬ್ಬಾಳನಪಾಳ್ಯ ಹಳ್ಳಿಯಲ್ಲಿ ಯಾರಾದರೂ ಸತ್ತರೆ ಈ ಸ್ಮಶಾನದಲ್ಲೇ ಹೂಳಬೇಕು. ಆದರೆ, ಬಿಡಿಎ ಅಧಿಕಾರಿಗಳು ಮೊದಲು ಕಾಲು ದಾರಿ ಮಾಡಿಕೊಂಡು, ಈಗ ಸ್ಮಶಾನದ ಒಳಗಿನ ಸಮಾಧಿ ಮೇಲೆಯೇ ರಸ್ತೆ ನಿರ್ಮಿಸಿದ್ದಾರೆ. ಇದನ್ನು ಕೇಳಿದರೆ ಇಡೀ ಸ್ಮಶಾನವನ್ನೇ ಎತ್ತಂಗಂಡಿ ಮಾಡಿಸುತ್ತೇವೆ ಅಂತಿದ್ದಾರೆ ಅಂತ ಗ್ರಾಮಸ್ಥರು ಹೇಳ್ತಿದ್ದಾರೆ.

ಬಿಡಿಎ ಸ್ಮಶಾನ ಜಾಗವನ್ನು ಅತಿಕ್ರಮ ಮಾಡಿಕೊಳ್ಳುತ್ತಿದೆ ಅಂತ ಕಳೆದ ವರ್ಷವೇ ಊರಿನ ಗ್ರಾಮಸ್ಥರು ತಹಶೀಲ್ದಾರರಿಗೆ ದೂರು ನೀಡಿದರೂ ಯಾವುದೇ ಸರ್ವೆ ಕಾರ್ಯ ಮಾಡಿಲ್ಲ. ಈಗ ಸ್ಮಶಾನದ ಜಾಗ ಬಿಡಿಎ ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ಜಗಳಕ್ಕೆ ಕಾರಣವಾಗಿದೆ. ಕೂಡಲೇ ಸರ್ಕಾರ ಆ ಜಾಗದ ಸರ್ವೆ ಕಾರ್ಯ ಮಾಡಿ ಸ್ಮಶಾನದ ಜಾಗ ಉಳಿಸಿಕೊಡಬೇಕು ಅಂತ ಗ್ರಾಮಸ್ಥರು ಒತ್ತಾಯಿಸ್ತಿದ್ದಾರೆ.

Top