An unconventional News Portal.

‘ಅದು ಅನ್ನ ನೀಡುವ ಮನೆ; ಕನ್ನ ಹಾಕುವ ಜಾಗ ಅಲ್ಲ…’: ಆರೋಪಿ ಆಂಜನಪ್ಪ ಹೇಳಿದ್ದೇನು?

‘ಅದು ಅನ್ನ ನೀಡುವ ಮನೆ; ಕನ್ನ ಹಾಕುವ ಜಾಗ ಅಲ್ಲ…’: ಆರೋಪಿ ಆಂಜನಪ್ಪ ಹೇಳಿದ್ದೇನು?

ಪ್ರಕರಣದ ಎರಡನೇ ಆರೋಪಿ ಆಂಜನಪ್ಪ.

ಪ್ರಕರಣದ ಎರಡನೇ ಆರೋಪಿ ಆಂಜನಪ್ಪ.

ಮಲೆನಾಡಿನ ಸುಡು ಬಿಸಿಲಿನ ದಿನದ ಒಂದು ಮುಂಜಾನೆ ನಿಧಾನಕ್ಕೆ ತೆರೆದುಕೊಳ್ಳುತ್ತಿತ್ತು. ಬೆಳಗ್ಗೆ 7 ಗಂಟೆಯ ಸಮಯ. ರಾಷ್ಟ್ರಕವಿ ಕುವೆಂಪು ಅವರ ಊರು ಕುಪ್ಪಳ್ಳಿಯಿಂದ ಕೆಲವೇ ಮೀಟರುಗಳ ಅಂತರದಲ್ಲಿರುವ ಗಡಿಕಲ್ಲಿನಲ್ಲಿ ಆಂಜನಪ್ಪ ಎಂದಿನಂತೆ ಅಂಗಡಿಯಿಂದ ಹಾಲು ತೆಗೆದುಕೊಂಡು ಮನೆಯ ಕಡೆ ಹೆಜ್ಜೆ ಹಾಕುತ್ತಿದ್ದ. ಆತ ಜೈಲಿನಿಂದ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಹೊಂದಿ ಕೆಲವೇ ದಿನಗಳಾಗಿದ್ದವು…ಭಾರಿ ಸದ್ದು ಮಾಡಿದ್ದ ಮೇರು ಕವಿಯ ಪದಕ ಕಳವು ಪ್ರಕರಣದ ಎರಡನೇ ಆರೋಪಿ ಈತ.

ಪರಿಸರದ ಕತೆಆಂಜನಪ್ಪ‘!

ಆಂಜನಪ್ಪ ಮೂಲತಃ ದಾವಣಗೆರೆಯವನು. ಆದರೆ ಆತ ಹಾಗನ್ನಿಸುವುದಿಲ್ಲ. ಮಲೆನಾಡಿನಲ್ಲಿಯೇ ಹುಟ್ಟಿ ಬೆಳೆದ ಹಿನ್ನೆಲೆಯಲ್ಲಿ ಆತನ ಮಾತುಕತೆ, ಹಾವಭಾವಗಳು ಇಲ್ಲಿನ ಪರಿಸರಕ್ಕೆ ಒಗ್ಗಿ ಹೋದಂತೆ ಅನ್ನಿಸುತ್ತದೆ. ದನಿಯಲ್ಲೂ ಮಲೆನಾಡಿನ, ಅದರಲ್ಲೂ ‘ಕವಿಮನೆ’ ಪರಿಸರದ ಪ್ರಭಾವ ದಟ್ಟವಾಗಿದೆ.

ಆಂಜನಪ್ಪ ತಂದೆ ತುಂಬಾ ಹಿಂದೆಯೇ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೂಕಿನ ಹಾರೋಗೊಳಿಗೆ ಎಂಬ ಪುಟ್ಟ ಊರಿಗೆ ಬಂದು ನೆಲೆಸಿದ್ದವರು. ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ಆಂಜನಪ್ಪ ಹುಟ್ಟಿದ್ದು ಅಲ್ಲಿಯೇ. ”ಡಿಗ್ರಿ ಮುಗಿಸಿ ಅಲ್ಲಿಯೇ ಎಲೆಕ್ಟ್ರಿಷಿಯನ್,” ಎಂದು ಆಂಜನಪ್ಪ ಹೇಳಿಕೊಳ್ಳುತ್ತಾನೆ. ಇದೇ ಹಾರೋಗೊಳಿಗೆಯಿಂದ ಚಿಕ್ಕದೊಂದು ಇಳಿಜಾರು ಇಳಿದು, ಬಲಭಾಗದ ಭತ್ತದ ಗದ್ದೆಗಳನ್ನು ದಾಟಿ ನೋಡಿದರೆ ರಾಜ್ಯದ ನಿಯೋಜಿತ ಮಾಜಿ ಮುಖ್ಯಮಂತ್ರಿ ಕಡಿದಾಳು ಮಂಜಪ್ಪ ಅವರ ಮನೆ ಕಾಣಿಸುತ್ತದೆ. ಅದರ ಎದುರಿಗೇ ಅವರ ಸಮಾಧಿಯೂ ಇದೆ. ಇಂತಹ ಊರಿನಲ್ಲಿ ಬೆಳೆದ ಆಂಜನಪ್ಪನನ್ನು ಕುಪ್ಪಳ್ಳಿಯ ಮನೆಗೆ ಕರೆದುಕೊಂಡು ಬಂದವರು, ಕುಪ್ಪಳ್ಳಿ ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳು ಪ್ರಕಾಶ್ ಅವರು.

ಮೃದು ಸ್ವಭಾವದ ಕಡಿದಾಳ್ ಪ್ರಕಾಶ್ ಅವರ ಬಗ್ಗೆ ಸುತ್ತಮುತ್ತ ಒಳ್ಳೆಯ ಮಾತುಗಳಿವೆ. ಕುಪ್ಪಳ್ಳಿಯನ್ನು ರಾಷ್ಟ್ರೀಯ ಸ್ಮಾರಕವಾಗಿ ಮಾರ್ಪಡಿಸುವ ಹಿಂದೆ ಅವರ ಶ್ರಮವಿದೆ ಎನ್ನುತ್ತಾರೆ ಜನ. ಆದರೆ, “ಕುಪ್ಪಳ್ಳಿಗೆ ಸಾಂಸ್ಕೃತಿಕ ಸಾಂಸ್ಥಿಕ ರೂಪ ಕೊಡುವಲ್ಲಿ ಸೋತು ಹೋದರು,” ಎನ್ನುವ ಅಭಿಪ್ರಾಯವನ್ನು ಸ್ಥಳೀಯ ಪ್ರಕಾಶಕಿಯೊಬ್ಬರು ಹೇಳುತ್ತಾರೆ. ಇಂತಹ ಪ್ರಕಾಶ್, ಊರಲ್ಲಿ ಎಲೆಕ್ಟ್ರಿಕಲ್ ತರದ ಕೆಲಸ ಮಾಡಿಕೊಂಡು ಇದ್ದ ಆಂಜನಪ್ಪನಿಗೆ ಕುಪ್ಪಳ್ಳಿಯಲ್ಲೇ ನೆಲೆ ನಿಲ್ಲಲು ನೆರವಾಗುತ್ತಾರೆ.

“2001ರಲ್ಲಿ ನಾನು ಕುಪ್ಪಳ್ಳಿ ಟ್ರಸ್ಟ್ಗೆ ಕೆಲಸಕ್ಕೆ ಸೇರಿಕೊಂಡೆ. ತಿಂಗಳಿಗೆ 1800 ರೂಪಾಯಿ ಸಂಬಳ. ಅಲ್ಲಿಯೇ ಕ್ವಾಟ್ರಸ್ ನೀಡಿದ್ದರು. ಅದರಲ್ಲಿಯೇ ಕುಟುಂಬವನ್ನು ಕಟ್ಟಿಕೊಂಡು, ಕಷ್ಟಪಟ್ಟು ಬದುಕು ಕಟ್ಟಿಕೊಂಡೆ,” ಎನ್ನುತ್ತಾನೆ ಆಂಜನಪ್ಪ. ‘ಕವಿಮನೆ ಕಳ್ಳತನ ಪ್ರಕರಣ’ದ ಎರಡನೇ ಆರೋಪಿಯಾದ ಆತನ ಸಾಮಾಜಿಕ ಬದುಕು ಛಿದ್ರಗೊಂಡಿದೆ. ಹೆಂಡತಿ ಮತ್ತು ಇಬ್ಬರು ವಯಸ್ಸಿಗೆ ಬಂದ ಮಕ್ಕಳ ಜತೆ ಮತ್ತೆ ಎಂದಿನಂತೆ ತಲೆ ಎತ್ತಿ ನಡೆಯುವ ಗಟ್ಟಿ ಮನಸ್ಸು ಇಟ್ಟುಕೊಂಡಿದ್ದಾನೆ. ದಿನಾ ಬೆಳಗ್ಗೆ ತಾನೇ ನೀಟಾಗಿ ಇಸ್ತ್ರಿ ಮಾಡಿಕೊಂಡ ಬಟ್ಟೆ ಹಾಕಿಕೊಂಡು ಮನೆ ಹತ್ತಿರದ ಅಂಗಡಿಯಿಂದ ಹಾಲು ತರುತ್ತಾನೆ. ಪ್ರಕರಣಕ್ಕೂ ಮುನ್ನ ಊರಿನ ಅಂಚಿಗಿದ್ದ ಮನೆಯನ್ನು 1700 ರೂಪಾಯಿ ಮಾಸಿಕ ಬಾಡಿಗೆಯ, ಊರ ನಡುವೆ ಇರುವ ಮನೆಗೆ ಸ್ಥಳಾಂತರಿಸಿದ್ದಾನೆ.

ಮಾತುಕತೆ

ಅದು ಗಡೀಕಲ್ಲಿನಿಂದ ಆಗುಂಬೆ- ಶಿವಮೊಗ್ಗ ರಸ್ತೆಯನ್ನು ಸೇರುವ ರಸ್ತೆಯ ತಗ್ಗಿನಲ್ಲಿರುವ ಮನೆ. ನಾಲ್ಕು ಅಂಕಣದ ಮನೆಯಲ್ಲಿ ಬೇರೆಯವರು ವಾಸವಿದ್ದಾರೆ. ಪಕ್ಕದ ಎರಡು ಅಂಕಣದಲ್ಲಿ ಆಂಜನಪ್ಪ ಹೊಸತಾಗಿ ಬಾಡಿಗೆಗೆ ಬಂದಿದ್ದಾನೆ. ಮನೆಯೆ ಮುಂದೆ ಹೂವಿನ ಗಿಡಗಳು, ಮನೆಯ ಮೊದಲ ಕೋಣೆಯಲ್ಲಿ ಕೂರಲು ಒಂದು ಪ್ಲಾಸ್ಟಿಕ್ ಖುರ್ಚಿ ಹಾಗೂ ಮರದ ಒಂದು ಮಂಚ. ಪಕ್ಕದ ಮತ್ತೊಂದು ಚಿಕ್ಕ ಹಾಲೇ ಅಡುಗೆ ಕೋಣೆ. ಎರಡನ್ನೂ ಸಂಪರ್ಕಿಸುವ ಕಿಟಕಿಯ ಮೇಲೆ ಎರಡು ಕುವೆಂಪು ಭಾವಚಿತ್ರ ಹಾಗೂ ಧರ್ಮಸ್ಥಳದ ವೀರೇಂದ್ರ ಹೆಗಡೆ ದಂಪತಿ ಕವಿಶೈಲದಲ್ಲಿ ತೆಗೆಸಿಕೊಂಡ ಭಾವಚಿತ್ರ.

‘ಸಮಾಚಾರ ತನಿಖಾ ತಂಡ’ ಅಲ್ಲಿಗೆ ಭೇಟಿ ನೀಡುವ ಕೆಲವು ಕ್ಷಣ ಮುಂಚೆಯಷ್ಟೆ ಅಂಗಡಿಯಿಂದ ಹಾಲು ತಂದು ಕೊಟ್ಟಿದ್ದ ಆಂಜನಪ್ಪ. ”ನಾವು ಬೆಂಗಳೂರಿನಿಂದ ಬಂದಿದ್ದೀವಿ. ಇಡೀ ಪ್ರಕರಣದಲ್ಲಿ ಪೊಲೀಸರು ಹೇಳಿದ್ದನ್ನು, ಇತರರು ಮಾತನಾಡಿದ್ದನ್ನು ಕೇಳಿಸಿಕೊಂಡಿದ್ದೇವೆ. ಆದರೆ ನಿಮ್ಮ ಕಡೆಯಿಂದ ಈ ಬಗ್ಗೆ ಕೇಳಿಸಿಕೊಳ್ಳಣ ಎಂದು ಬಂದಿದ್ದೀವಿ,” ಎನ್ನುತ್ತಲೇ ನಮ್ಮನ್ನು ಪರಿಚಯಿಸಿಕೊಂಡೆವು. ಕೊಂಚ ಆತಂಕದ ಭಾವದಿಂದಲೇ ಮಾತು ಶುರುಮಾಡಿದ ಆಂಜನಪ್ಪ, ತನ್ನ ಬಾಲ್ಯ, ಕುಪ್ಪಳ್ಳಿಯಲ್ಲಿ ಕೆಲಸ ಆರಂಭಿಸಿದ ದಿನಗಳು, ಮಲೆನಾಡಿನ ಪರಿಸರ, ಕುವೆಂಪು ಎಂಬ ರಾಷ್ಟ್ರ ಕವಿ, ಪ್ರಕರಣದಲ್ಲಿ ತನ್ನ ಪಾತ್ರ, ಪೊಲೀಸರ ಹೊಡೆತಕ್ಕೆ ಮುರಿದ ಹೆಬ್ಬೆರಳು ಹಾಗೂ ಕುಟುಂಬ ಅನುಭವಿಸುತ್ತಿರುವ ಸಾಮಾಜಿಕ ಅವಮಾನ, ಆರ್ಥಿಕ ಸಂಕಷ್ಟಗಳ ಬಗ್ಗೆ ವಿವರವಾಗಿ ಮಾತನಾಡಿದ್ದಾನೆ.

ಪ್ರಮುಖ ಆರೋಪಿ ರೇವಣ್ಣ ಸಿದ್ದಪ್ಪ ಬಗ್ಗೆ:

ಆ ವ್ಯಕ್ತಿ ಯಾರು ಅಂತಲೇ ನನಗೆ ಗೊತ್ತಿರಲಿಲ್ಲ. ಆತನ ಹೆಸರು ನನಗೆ ಗೊತ್ತಿದ್ದರೆ ಪೊಲೀಸರು ಪ್ರತಿಷ್ಠಾನದ ಸಿಬ್ಬಂದಿಗಳಿಗೆ ಸಿಸಿಟಿವಿ ತೋರಿಸಿದ ದಿನವೇ ನಾನು ಗುರುತಿಸಿ ಹೇಳಿ ಬಿಡುತ್ತಿದ್ದೆ. ಕುಪ್ಪಳ್ಳಿಗೆ ದಿನವೂ ಸಾವಿರಾರು ಜನ ಬರುತ್ತಾರೆ. ವಾರದ ಕೊನೆಯ ದಿನಗಳಲ್ಲಿ ಜನಜಾತ್ರೆಯೇ ಇರುತ್ತದೆ. ಅಂತಹ ಸ್ಥಳಕ್ಕೆ ಬರುವವರನ್ನು ಅನುಮಾನದಿಂದ ನೋಡುವುದು ಕಷ್ಟ. ಅದರಲ್ಲಿ ಗುರುತು ಇಟ್ಟುಕೊಳ್ಳುವುದೂ ಕಷ್ಟ. ಹೀಗಿರುವಾಗ ನಾನು ರೇವಣ್ಣ ಸಿದ್ದಪ್ಪನ ಜತೆ ಮಾತನಾಡಿದೆ ಎಂದು ಕೆಲವರು ಪೊಲೀಸರಿಗೆ ಸಾಕ್ಷ್ಯ ಹೇಳಿದ್ದಾರಂತೆ. ಹಾಗಿದ್ದರೆ ಮನೆ ಎಲ್ಲಾ ಕಡೆಗಳಲ್ಲೂ ಸಿಸಿಟಿವಿ ಇವೆ. ಅವುಗಳನ್ನು ಪರಿಶೀಲಿಸಲಿ. ಆತನದ್ದೂ, ನಂದೂ ಒಂದೇ ಊರಾದ್ದರಿಂದ ಸುಲಭಕ್ಕೆ ಜನ ಹಾಗೂ ಪೊಲೀಸರು ಆತ ಕಟ್ಟಿದ ಕತೆಯನ್ನು ನಂಬಿದ್ದಾರೆ. ಯಾರೋ ಹೇಳಿಕೊಟ್ಟು ನನ್ನ ಹೆಸರು ಹೇಳಿಸಿದ್ದಾರೆ. ಇದರ ಹಿಂದೆ ಯಾರದ್ದೋ ಕೈವಾಡ ಇದೆ.

ಪದ್ಮವಿಭೂಷಣ ಪ್ರಶಸ್ತಿ ಬಗ್ಗೆ:

ಪದಕ ಕದಿಯಲು ಬಂದವರು ಬೀಳಿಸಿಕೊಂಡು ಹೋಗ್ತಾರಾ? ಪದಕ ರೇವಣ್ಣ ಸಿದ್ದಪ್ಪನ ಬಳಿಯೇ ಇರಬೇಕು. ನಾನು ಜೈಲಿನಲ್ಲಿ ಇರುವಾಗ ಲೈಬ್ರರಿ ಮಾಸ್ಟರ್ ಒಬ್ಬರಿದ್ದರು. ನನಗೆ ಪತ್ರಿಕೆ, ಪುಸ್ತಕಗಳನ್ನು ಓದುವ ಹುಚ್ಚಿದ್ದರಿಂದ ದಿನಾ ಅಲ್ಲಿಯೇ ಕಾಲ ಕಳೆಯುತ್ತಿದ್ದೆ. ಆಗ ಅವರೂ ಕೂಡ, ‘ಪದಕ ಇದ್ದರೆ ಕೊಟ್ಟು ಬಿಡಿ,’ ಎಂದು ತಿಳಿ ಹೇಳಿದ್ದರು. ನಾನು ಅವರಿಗೆ ಅದು ರಾಷ್ಟ್ರೀಯ ಸ್ವತ್ತು. ಕದಿಯುವ ಮಾಲು ಅಂತ ಹೇಳಿದ್ದೆ. ರೇವಣ್ಣ ಸಿದ್ದಪ್ಪನ ಬಳಿಯೂ, ಪದಕ ಇದ್ದರೆ ಕೊಟ್ಟುಬಿಡುವಂತೆ ಕೇಳಿಕೊಂಡಿದ್ದೆ.

ಕುಪ್ಪಳ್ಳಿ ಬಗ್ಗೆ:

ಇಂತಹ ಜಾಗದಲ್ಲಿ ಕೆಲಸ ಮಾಡಲು ಪುಣ್ಯ ಮಾಡಿರಬೇಕು. ನನಗೆ ಅಂತಹ ಅವಕಾಶ ಸಿಕ್ಕಿತ್ತು. ಅಲ್ಲಿ ವಿದ್ಯಾರ್ಹತೆ ಮೇಲೆ ಕೆಲಸ ಏನು ನಿಗಧಿ ಮಾಡಿಲ್ಲ. ನಾನು ಅಟೆಂಡರ್ ಆಗಿದ್ದವನು. ಇಂತಹದೇ ಕೆಲಸ ಅಂತೇನಿರಲಿಲ್ಲ. ಟಾಯ್ಲೆಟ್ ತೊಳೆಯುವುದರಿಂದ ಹಿಡಿದು ಬಂದವರಿಗೆ ಕುವೆಂಪು ಬಗ್ಗೆ ವಿವರಣೆ ನೀಡುವ ಕೆಲಸವನ್ನೂ ಮಾಡುತ್ತಿದ್ದೆ. ಸೇರಿದಾಗ ಇದ್ದ ಸಂಬಳ 1600 ರೂಪಾಯಿ. ವರ್ಷಕ್ಕೆ 10% ಸಂಬಳ ಹೆಚ್ಚು ಮಾಡಿಕೊಂಡು ಬಂದಿದ್ದರು. ಈಗ ಇದ್ದಿದ್ದರೆ 11 ಸಾವಿರ ಸಂಬಳ ಬರಬೇಕಿತ್ತು. 16 ವರ್ಷದಿಂದ ಈ ಜಾಗದಲ್ಲಿ ಕುಟುಂಬ ಕಟ್ಟಿಕೊಂಡು ಅನ್ನ ತಿಂದುಕೊಂಡು ಬಂದಿದೀನಿ. ಇದು ಅನ್ನ ತಿನ್ನುವ ಮನೆ, ಕನ್ನ ಹಾಕುವ ಮನೆ ಅಲ್ಲ.

ಟ್ರಸ್ಟ್ ಬಗ್ಗೆ:

ಅವರಿಗೆ ನನ್ನ ಮೇಲೆ ನಂಬಿಕೆ ಇದೆ. ಕಡಿದಾಳ್ ಪ್ರಕಾಶ್ ಜನವರಿ 8 (ಅಥವಾ 9)ರಂದು ನನ್ನನ್ನು ಕರೆಸಿದ್ದರು. ಅವರಿಗೂ ತಲೆ ಬಿಸಿ ಆಗಿದೆ. ಇದು ಹೆಂಗೆ ಆಯ್ತು ಅಂತ ಯೋಚನೆ ಮಾಡುತ್ತಿದ್ದಾರೆ. ನನಗೆ ಬದುಕು ಕಟ್ಟಿಕೊಳ್ಳಲು ನೆರವಾದವರು ಅವರು. ಅವರಿಗೂ ನಾನು ದ್ರೋಹ ಬಗೆಯುವುದಿಲ್ಲ ಎಂಬ ನಂಬಿಕೆ ಇದೆ.

ಕುಟುಂಬದ ಬಗ್ಗೆ:

ಪೊಲೀಸರು ನನ್ನ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ಇದರಿಂದ ನಾನು ಹೊರಗೆ ಕೆಲಸ ಮಾಡುವುದು ಕಷ್ಟವಾಗಿದೆ. ಈ ಕೈ (ಎಡಗೈ) ಹೆಬ್ಬೆರಳು ಹಂದಾಡಿಸಲು ಆಗುವುದಿಲ್ಲ.  ಮಗ ತಮಿಳುನಾಡಿನಲ್ಲಿ ಕಾಫಿ ಡೇಯಲ್ಲಿ ಕೆಲಸ ಮಾಡುತ್ತಿದ್ದ. ನನ್ನ ಕತೆ ಗೊತ್ತಾಗಿ ಈಗ ಇಲ್ಲಿಯೇ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾನೆ. ಮಗಳು ಬಿ.ಕಾಂ ಓದುತ್ತಿದ್ದಾಳೆ. ಅವಳಿಗೂ ಹೊರಗೆ ತಲೆ ಎತ್ತಿ ಓಡಾಡುವುದು ಕಷ್ಟವಾಗಿದೆ. ಈ ಮನೆಗೆ ತಿಂಗಳಿಗೆ 1700 ರೂಪಾಯಿ ಬಾಡಿಗೆ. ಮನೆ ಖರ್ಚು, ಕೋರ್ಟ್ ಫೀಸು ಎಲ್ಲವನ್ನೂ ಸಂಬಾಳಿಸುವುದೇ ಕಷ್ಟವಾಗಿದೆ.

ಇಷ್ಟು ಹೇಳಿ ಮಾತು ಮುಗಿಸಿದ ಆಂಜನಪ್ಪ ಇನ್ನೂ ತನ್ನ ಕುಪ್ಪಳ್ಳಿ ದಿನಗಳ ಹ್ಯಾಂಗೋವರ್’ನಿಂದ ಹೊರಬಂದ ಹಾಗೆ ಅನ್ನಿಸುತ್ತಿಲ್ಲ. “ಮೊನ್ನೆ ಬೆಂಗಳೂರಿನಿಂದ ಆಂಟಿಯೊಬ್ಬರು ಫೋನ್ ಮಾಡಿ ಕಣ್ಣೀರು ಹಾಕಿದರು. ನಿಮ್ಮಂತವರಿಗೆ ಇಂಥ ಸ್ಥಿತಿ ಬರಬಾರದಿತ್ತು. ಅವರ ಹಾಗೆ ಒಂದು ಲಕ್ಷ ಜನರಿಗೆ ನಾನು ಕುವೆಂಪು ಬಗ್ಗೆ, ಕುಪ್ಪಳ್ಳಿ ಬಗ್ಗೆ ಗೈಡ್ ಮಾಡಿರಬಹುದು. ಅವರೂ ಅದನ್ನೇ ಹೇಳಿ ಅತ್ತುಕೊಂಡು ಬಿಟ್ಟರು,” ಎಂದು ನಿಟ್ಟುಸಿರು ಬಿಟ್ಟ.

ENTER YOUR E-MAIL

Name
Email *
February 2017
M T W T F S S
« Jan    
 12345
6789101112
13141516171819
20212223242526
2728  

Top