An unconventional News Portal.

‘ಇದು ಜಪಾನ್ ವಿಶೇಷ’: ಭಾರಿ ಭೂಕಂಪ, ಸುನಾಮಿಗೂ ಅಲ್ಲಾಡದ ಪುಟ್ಟ ದೇಶ

‘ಇದು ಜಪಾನ್ ವಿಶೇಷ’: ಭಾರಿ ಭೂಕಂಪ, ಸುನಾಮಿಗೂ ಅಲ್ಲಾಡದ ಪುಟ್ಟ ದೇಶ

ಮಂಗಳವಾರ ಮುಂಜಾನೆ ರಿಕ್ಟರ್ ಮಾಪಕದಲ್ಲಿ 7.4 ತೀವ್ರತೆಯ ಭೂಕಂಪ ಉತ್ತರ ಜಪಾನಿನಲ್ಲಿ ಸಂಭವಿಸಿದೆ. ಪರಿಣಾಮ ಪೆಸಿಫಿಕ್ ಮಹಾಸಾಗರಕ್ಕೆ ಹೊಂದಿಕೊಂಡ ಕರಾವಳಿಯಲ್ಲಿ 1 ಮೀಟರ್ ಎತ್ತರದ ಸುನಾಮಿ ಅಲೆಗಳು ಎದ್ದಿವೆ. ಹೀಗಿದ್ದರೂ ಯಾವುದೇ ಜೀವಹಾನಿಯ ವರದಿಯಾಗಿಲ್ಲ; ಇದು ಜಪಾನ್ ವಿಶೇಷ.

ಮಾರ್ಚ್ 2011ರಲ್ಲಿ ಜಪಾನಿನಲ್ಲಿ ಭೀಕರ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 9 ತೀವ್ರತೆಯ ಭೂಕಂಪಕ್ಕೆ ಭಾರೀ ಸುನಾಮಿ ಅಲೆಗಳು ಎದ್ದು ಅಪಾರ ಜೀವ ಆಸ್ತಿ-ಪಾಸ್ತಿ ಹಾನಿ ಸಂಭವಿಸಿತ್ತು. ಅದೇ ಭೂಕಂಪದ ನಂತರ ನಿರಂತರ ಕಂಪನಗಳು ಜಪಾನಿನಲ್ಲಿ ಸಂಭವಿಸುತ್ತಿವೆ, ಇದೂ ಅದೇ ಸಾಲಿಗೆ ಸೇರಿದ ಕಂಪನವಾಗಿದೆ ಎಂದು ಜಪಾನ್ ಹವಾಮಾನ ಇಲಾಖೆ ತಿಳಿಸಿದೆ. ಜುಲೈ 2014ರ ನಂತರ ಜಪಾನಿನಲ್ಲಿ ನಡೆದ 7 ತೀವ್ರತೆಯ ಮೊದಲ ಭೂಕಂಪ ಇದಾಗಿದೆ.

ಭಾರಿ ಭೂಕಂಪವಾದರೂ ಜೀವಹಾನಿಯಿಲ್ಲ!

ಇಷ್ಟು ದೊಡ್ಡ ಭೂಕಂಪ ಸಂಭವಿಸಿದರೂ ಜಪಾನ್ ಜನಜೀವನದಲ್ಲಿ ಸ್ವಲ್ಪವೇ ಸ್ವಲ್ಪ ಏರುಪೇರಾಗಿದೆ ಅಷ್ಟೆ. ಭೂಕಂಪದಿಂದ ಫುಕುಶಿಮಾದಲ್ಲಿ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಸ್ಳಳೀಯ ಅಗ್ನಿಶಾಮಕದವರು ಹೇಳಿದ್ದಾರೆ.

ಮಿಯಾಗಿಯ ಸೆಂಡೈ ಬಂದಿರಿನಲ್ಲಿ 1.4 ಮೀಟರ್ ಎತ್ತರದ ಅಲೆ ಎದ್ದಿದ್ದರೆ, ಫುಕುಶಿಮ ಮತ್ತು ಇಬರಾಕಿ ಕರಾವಳಿ ಪ್ರದೇಶಗಳಲ್ಲಿ 0.9 ಮೀಟರ್ ಎತ್ತರ ಅಲೆಗಳು ಎದ್ದಿವೆ. ಫುಕುಶಿಮಾದಲ್ಲಿ 3 ಮೀಟರ್ ಎತ್ತರದ ಅಲೆಗಳು ಏಳಬಹುದು ಎಂದು ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

japan-tsunamiಜಪಾನಿನ ಸ್ಥಳೀಯ ಕಾಲಮಾನ ಬೆಳಿಗ್ಗೆ 5.59ಕ್ಕೆ ಭೂಕಂಪ ಸಂಭವಿಸಿದೆ. ಟೋಕಿಯೋ ಭಾಗದಲ್ಲಿ 5 ತೀವ್ರತೆಯ ಭೂಕಂಪ ಸಂಭವಿಸಿದ್ದರೆ, ಫುಕುಶಿಮಾ ಭಾಗದಲ್ಲಿ 7 ತೀವ್ರತೆಯ ಭೂಕಂಪ ಸಂಭವಿಸಿದೆ. 2011ರಲ್ಲಿ ನಡೆದ ಭೂಕಂಪದ ನಂತರ ಸರಣಿ ಕಂಪನಗಳು ಸಂಭವಿಸುತ್ತಿದ್ದರೂ, 2012ರ ನಂತರ ಇದೇ ಮೊದಲ ಬಾರಿಗೆ ಅಲ್ಲಿನ ಹವಮಾನ ಇಲಾಖೆ ಸುನಾಮಿ ಮುನ್ನೆಚ್ಚರಿಕೆ ನೀಡಿತ್ತು.

ತಕ್ಷಣ ಅಲ್ಲಿನ ಜನ ಮತ್ತು ರಕ್ಷಣಾ ಇಲಾಖೆಗಳು ಜಾಗೃತವಾಗಿದ್ದು ಯಾವುದೇ ಜೀವ ಹಾನಿ ಸಂಭವಿಸಿಲ್ಲ.

ಫೆಸಿಫಿಕ್ ಸಾಗರದಲ್ಲಿ ಭೂಕಂಪದ ಕೇಂದ್ರ:

ಫೆಸಿಪಿಕ್ ಸಾಗರದೊಳಗೆ 25 ಕಿಲೋಮೀಟರ್ ಆಳದಲ್ಲಿ ಭೂಕಂಪದ ಕೇಂದ್ರವಿತ್ತು. ಇಲ್ಲಿಂದ ಫುಕುಶಿಮಾ ಕೇವಲ 90 ಕಿಲೋಮೀಟರ್ ದೂರದಲ್ಲಿದೆ. ಭೂಕಂಪ ಮತ್ತು ಸುನಾಮಿಯ ಎಚ್ಚರಿಕೆಯಿಂದಾಗಿ ಫುಕುಶಿಮಾದ 2 ಮತ್ತು 3ನೇ ರಿಯಾಕ್ಟರಿನ ಕೂಲಿಂಗ್ ವ್ಯವಸ್ಥೆಯನ್ನು ಸದ್ಯಕ್ಕೆ ನಿಲ್ಲಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಆದರೆ ಇದರಿಂದ ಗಂಭೀರ ಸಮಸ್ಯೆಗಳು ಉದ್ಭವಿಸುವುದಿಲ್ಲ ಎಂದೂ ಅಧಿಕಾರಿಗಳು ಹೇಳಿದ್ದಾರೆ.

2011ರ ಭೂಕಂಪದಲ್ಲಿ ಇದೇ ಫುಕುಶಿಮಾ ಅಣು ಸ್ಥಾವರಕ್ಕೆ ಹಾನಿಯಾಗಿ ವಿಕಿರಣಗಳು ಹೊರಸೂಸಿದ್ದವು.

ಉಳಿದ ನ್ಯೂಕ್ಲಿಯರ್ ಪ್ಲಾಂಟ್ಗಳಲ್ಲಿ ಸದ್ಯ ಏನೂ ಸಮಸ್ಯೆಯಾಗಿಲ್ಲ. ಜಪಾನ್ ಪ್ರಧಾನಿ ಶಿಂಜೋ ಅಬೆ ಮಾಧ್ಯಮಗಳ ಜತೆ ಮಾತನಾಡಿ, “ಜನರಿಗೆ ನಾವು ಮಾಹಿತಿಗಳನ್ನು ನೀಡುತ್ತಿದ್ದೇವ. ಮತ್ತು ಭೂಕಂಪದಿಂದಾದ ಹಾನಿಗೆ ಪರಿಹಾರ ನೀಡಲಿದ್ದೇವೆ,” ಎಂದು ತಿಳಿಸಿದ್ದಾರೆ.

ಭೂಕಂಪ ಮತ್ತು ಸುನಾಮಿ ಪೀಡಿತ ಪ್ರದೇಶಗಳಲ್ಲಾಗಿರಬಹುದಾದ ಹಾನಿ ಪರಿಶೀಲನೆಗೆ ರಕ್ಷಣಾ ಮಂತ್ರಿ ವಿಮಾನ ಮತ್ತು ಹೆಲಿಕಾಫ್ಟರ್ಗಳನ್ನು ಕಳುಹಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಅಲ್ಲಿನ ಬುಲೆಟ್ ಟ್ರೇನುಗಳು ಸದ್ಯಕ್ಕೆ ಸಂಚಾರ ನಿಲ್ಲಸಿವೆ. ಸೆಂಡೈ ವಿಮಾನ ನಿಲ್ದಾಣದಲ್ಲಿ ಕೆಲವು ವಿಮಾನಗಳ ಸಂಚಾರವನ್ನೂ ನಿಲ್ಲಿಸಲಾಗಿದೆ. ಹಲವು ಕಡೆ ರೈಲ್ವೇ ಸೇವೆಯನ್ನು ಸ್ಥಗಿತಗೊಳಿಸಲಾಗಿದ್ದು ಕೇವಲ 5600 ಜನರಿಗೆ ಮಾತ್ರ ತೊಂದರೆಯಾಗಿದೆ ಎಂದು ಕೇಂದ್ರ ರೈಲ್ವೇ ಇಲಾಖೆ ಹೇಳಿದೆ.

ಸದ್ಯಕ್ಕೆ ಇಲ್ಲೀವರೆಗೆ ಭೂಕಂಪ ಮತ್ತು ಸುನಾಮಿಯಿಂದ ಯಾವುದೇ ಜೀವಹಾನಿಯಾಗಿಲ್ಲ.

2011ರ ಸುನಾಮಿಯಿಂದ ಜಪಾನ್ ದೊಡ್ಡ ಮಟ್ಟಕ್ಕೆ ಎಚ್ಚೆತ್ತುಕೊಂಡಿದ್ದು, ಭೂಕಂಪ ಮತ್ತು ಸುನಾಮಿಗೆ ಸಡ್ಡು ಹೊಡೆದು ನಿಂತಿದೆ. ಅದು ಮಂಗಳವಾರದ ಈ ನೈಸರ್ಗಿಕ ವಿಕೋಪದಲ್ಲಿ ಸಾಬೀತಾಗಿದೆ.

ENTER YOUR E-MAIL

Name
Email *
September 2017
M T W T F S S
« Aug    
 123
45678910
11121314151617
18192021222324
252627282930  

Top