An unconventional News Portal.

‘ನಾಸ್ತಿಕವಾದದಿಂದ ಆಸ್ತಿಕತೆ ಕಡೆಗೆ’: ಮೌಢ್ಯ ನಿಷೇಧ, ಲಿಂಬೆ ಹಣ್ಣು ಮತ್ತು ಸಿಎಂ ಸಿದ್ದರಾಮಯ್ಯ!

‘ನಾಸ್ತಿಕವಾದದಿಂದ ಆಸ್ತಿಕತೆ ಕಡೆಗೆ’: ಮೌಢ್ಯ ನಿಷೇಧ, ಲಿಂಬೆ ಹಣ್ಣು ಮತ್ತು ಸಿಎಂ ಸಿದ್ದರಾಮಯ್ಯ!

ಅದು 1996ರ ಸಮಯ. ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅವರ ಅಧಿಕೃತ ನಿವಾಸದಲ್ಲಿ ಪೂಜೆ, ಹೋಮವನ್ನು ಕುಟುಂಬದ ಸದಸ್ಯರು ಆಯೋಜನೆ ಮಾಡಿದ್ದರು. ಅತ್ತ ಪೂಜೆ ನಡೆಯುತ್ತಿದ್ದರೆ, ಸಿದ್ದರಾಮಯ್ಯ ವಿಧಾನಸೌಧದ ಕೊಠಡಿಯಲ್ಲಿ ಕುಳಿತಿದ್ದರು. ಅವರನ್ನು ಹತ್ತಿರದಿಂದ ಬಲ್ಲ ಪತ್ರಕರ್ತರೊಬ್ಬರು, “ಯಾಕೆ ಮನೆಗೆ ಹೋಗಲ್ವಾ?,” ಎಂದು ಕೇಳಿದರು. “ನಂಗೆ ಪೂಜೆ ಪುನಸ್ಕಾರ ಎಲ್ಲಾ ಆಗಿ ಬರೋಲ್ಲರಿ. ಅವರೇನೋ ಮಾಡಿಕೊಳ್ತಿದಾರೆ. ನಾನು ಅದಕ್ಕೆ ಇಲ್ಲೇ ಇದೀನಿ,” ಎಂದು ಉತ್ತರ ನೀಡಿದ್ದರು ಸಿದ್ದರಾಮಯ್ಯ.

ಅದಾಗಿ ಇಪ್ಪತ್ತು ವರ್ಷಗಳ ಕಳೆದಿವೆ. ಇವತ್ತು ಸಿದ್ದರಾಮಯ್ಯ ಅದೇ ವಿಧಾನಸೌಧದ ಮೂರನೇ ಮಹಡಿಯಲ್ಲಿ ರಾಜ್ಯದ ಅತ್ಯಂತ ಪ್ರಭಾವಶಾಲಿ ಹುದ್ದೆಯನ್ನು ಅಲಂಕರಿಸಿದ್ದಾರೆ. ಅವರೀಗ ಮುಖ್ಯಮಂತ್ರಿ ಸಿದ್ದರಾಮಯ್ಯ. ಶುಕ್ರವಾರ ಉಡುಪಿ ಜಿಲ್ಲೆಯಲ್ಲಿ ಅವರು ಮತ್ತೊಮ್ಮೆ “ನಾನು ನಾಸ್ತಿಕನಲ್ಲ,” ಎಂದು ಪುನರುಚ್ಚರಿಸಿದ್ದಾರೆ.

'ಟಿಓಐ' ಪತ್ರಕರ್ತ ಕೆವಿನ್ ಎಫ್‌ಬಿ ಪೋಸ್ಟ್.

‘ಟಿಓಐ’ ಪತ್ರಕರ್ತ ಕೆವಿನ್ ಎಫ್‌ಬಿ ಪೋಸ್ಟ್.

ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ನಂತರ ಸಿದ್ದರಾಮಯ್ಯ ಅವರ ನಂಬಿಕೆಗಳಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಕಂಡು ಬರುತ್ತಿವೆ. ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಪೂಜಾರಿಗಳಿಂದ ಆಶೀರ್ವಾದವನ್ನು ಪಡೆದುಕೊಳ್ಳುತ್ತಿದ್ದಾರೆ. 2016ರಿಂದ ಈಚೆಗೆ ಅವರು ಪದೇ ಪದೇ, “ನಾನು ನಾಸ್ತಿಕನಲ್ಲ. ಹಾಗಂತ ಎಲ್ಲಿಯೂ ಹೇಳಿಕೊಂಡಿಲ್ಲ. ನನಗೆ ದೇವರ ಬಗ್ಗೆ ನಂಬಿಕೆ ಇದೆ. ದೇವರ ಹೆಸರಿನಲ್ಲಿ ನಡೆಯುವ ಮೌಢ್ಯವನ್ನು ವಿರೋಧಿಸುತ್ತೇನೆ. ಎಲ್ಲವನ್ನೂ ನಾನು ವೈಜ್ಞಾನಿಕ ದೃಷ್ಟಿಯಿಂದ ನೋಡುತ್ತೇನೆ,” ಎಂದು ಸಾರಿ ಹೇಳುತ್ತಿದ್ದಾರೆ. ಒಂದು ಕಾಲದಲ್ಲಿ ರಾಜಕಾರಣದಲ್ಲಿರುವ ಕೆಲವೇ ನಾಸ್ತಿಕರ (ದೇವರನ್ನು ನಂಬದ) ಪಟ್ಟಿಯಲ್ಲಿ ಅವರ ಹೆಸರಿತ್ತು. ಸಮಾಜವಾದಿ, ಲೋಹಿಯಾವಾದಿ, ಪ್ರಗತಿಪರ ಚಿಂತನೆಯ ಅಪ್ರತಿಮ ವ್ಯಕ್ತಿತ್ವ ಅವರದ್ದು ಎಂಬ ಮಾತುಗಳಿದ್ದವು. ಈಗಲೂ ಅವುಗಳಲ್ಲಿ ಕೆಲವು ಅಂಶಗಳು ಸಿದ್ದರಾಮಯ್ಯ ಅವರ ಹೆಸರಿನ ಜತೆಗೇ ತಳಕು ಹಾಕಿಕೊಂಡಿವೆ ಕೂಡ. ಈ ಕಾರಣಕ್ಕಾದರೂ, ಅವರ ವೈಯಕ್ತಿಕ ಧಾರ್ಮಿಕ ನಂಬಿಕೆಗಳಲ್ಲಿ ಬಂದಿರುವ ಈ ಬದಲಾವಣೆಯನ್ನು ಓರೆಗೆ ಹಚ್ಚುವ ಕೆಲಸ ಮಾಡಬೇಕಿದೆ.

ಒಬ್ಬ ವ್ಯಕ್ತಿಯ ನಂಬಿಕೆ ಮತ್ತು ಆಲೋಚನೆ, ಕಾಲಾನುಕ್ರಮದಲ್ಲಿ ಬದಲಾಗುತ್ತಾ? ರಾಜ್ಯದ ಪ್ರಭಾವಶಾಲಿ ಹುದ್ದೆಯನ್ನು ಅಲಂಕರಿಸಿರುವ ಸಿದ್ದರಾಮಯ್ಯ ನಿಜಕ್ಕೂ ನಾಸ್ತಿಕ ಎಂದು ಎಲ್ಲಿಯೂ ಹೇಳಿಕೊಂಡಿಲ್ಲವಾ? ಅವರೇ ಹೇಳುವ ಹಾಗೆ ಅವರು ಮೌಢ್ಯಕ್ಕೆ ನಿಜಕ್ಕೂ ವಿರೋಧ ವ್ಯಕ್ತಪಡಿಸುತ್ತಾರಾ? ಅವರ ಆಚರಣೆಗಳ ಹಿಂದೆ ಇತರೆ ಕಾರಣಗಳೂ ಇದಾವಾ?

ಇಂತಹ ಪ್ರಶ್ನೆಗಳನ್ನು ಅವರ ಒಂದು ಕಾಲದ ಒಡನಾಡಿಗಳ ಮುಂದಿಟ್ಟರೆ ಸಾಕಷ್ಟು ಒಳಸುಳಿಗಳು ಬಿಚ್ಚಿಕೊಳ್ಳುತ್ತವೆ. ಅದರಲ್ಲಿ ಕೆಲವರು ತಮ್ಮ ಹೆಸರನ್ನೂ ಯಾವುದೇ ಕಾರಣಕ್ಕೂ ಬಳಸಬೇಡಿ ಎಂಬ ವಿನಂತಿಯನ್ನು ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಸಿದ್ದರಾಮಯ್ಯ ಅವರ ಆಂತರಿಕ ಬದಲಾವಣೆಗೆ ಸಕಾರಣಗಳನ್ನೂ ಕಂಡುಕೊಂಡಿದ್ದಾರೆ. ಇದು ಅವರೆಲ್ಲರ ಅಭಿಪ್ರಾಯಗಳನ್ನು ಒಳಗೊಂಡ, ಸಿದ್ದರಾಮಯ್ಯ ಅವರ ದೇವರು- ದಿಂಡರ ಬಗೆಗಿನ ನಂಬಿಕೆಯ ಹಾದಿಯನ್ನು ದಾಖಲಿಸುವ ವರದಿ.

ಬದುಕು ಬದಲಿಸಿದ ರಾಜಕೀಯ:

'ಆ ದಿನಗಳಲ್ಲಿ' ಸಿದ್ದರಾಮಯ್ಯ.

‘ಆ ದಿನಗಳಲ್ಲಿ’ ಸಿದ್ದರಾಮಯ್ಯ.

ಈಗಾಗಲೇ ಗೊತ್ತಿರುವಂತೆ ಸಿದ್ದರಾಮಯ್ಯ ಕುರುಬ ಸಮುದಾಯದ ಕುಟುಂಬವೊಂದರಲ್ಲಿ ಹುಟ್ಟಿ ಬೆಳೆದವರು. ಮೈಸೂರಿನಲ್ಲಿ ಕಾನೂನು ಪದವಿ ಮುಗಿಸಿದ ನಂತರ ವಕೀಲಿಕೆ ವೃತ್ತಿಯನ್ನು ಆರಂಭಿಸಿದರು. ಹಾಗೋ ಹೀಗೋ ಸಾಗಿ ಬರುತ್ತಿದ್ದ ಅವರ ಬದುಕು ಬದಲಾಗಿದ್ದು 1978ರಲ್ಲಿ ತಾಲೂಕು ಅಭಿವೃದ್ಧಿ ಮಂಡಳಿ (ಇವತ್ತಿನ ತಾಲೂಕು ಪಂಚಾಯ್ತಿ) ಯ ಸದಸ್ಯರಾಗಿ ಆಯ್ಕೆಯಾಗುವ ಮೂಲಕ. ಸ್ವತಂತ್ರವಾಗಿ ಅವರ ಗೆದ್ದು ಬಂದ ನಂತರ, 1981ರಲ್ಲಿ ಲೋಕಸಭಾ ಚುನಾವಣೆಗೆ ನಿಂತು ಗಮನ ಸೆಳೆಯುವ ಮತಗಳನ್ನು ಪಡೆದುಕೊಂಡಿದ್ದರು. 1983ರಲ್ಲಿ ವಿಧಾನಸಭಾ ಚುನಾವಣೆ ಎದುರಾದಾಗ ಚಾಮುಂಡೇಶ್ವರಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಜಯದೇವರಾಜ್ ಅರಸ್‌ ಅವರನ್ನು ಸೋಲಿಸಲು ಒಂದು ಗುಂಪು ಅಣಿಯಾಗಿತ್ತು. ಅವರ ನೆರವಿನಿಂದಲೇ ಸಿದ್ದರಾಮಯ್ಯ ಮೊದಲ ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸಿದರು.

ಮುಂದೆ, ಸಮಾಜವಾದಿ ಚಳುವಳಿಯ ಸಂಪರ್ಕ, ಲೋಹಿಯಾವಾದದ ಪ್ರಭಾವದಿಂದ ಸಿದ್ದರಾಮಯ್ಯ ಹಂತಹಂತವಾಗಿ ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬಂದರು. ಈ ಸಮಯದಲ್ಲಿ ಎಲ್ಲಿಯೂ ಕೂಡ ಅವರು ದೇವರ ಅಥವಾ ನಂಬಿಕೆಗಳ ಕುರಿತು ಮಾತನಾಡಲಿಲ್ಲ. “ನಾನು ನೋಡಿದ ರಾಜಕಾರಣಿಗಳ ಪೈಕಿ ಅತ್ಯಂತ ನಿಗೂಢ ವ್ಯಕ್ತಿತ್ವ ಸಿದ್ದರಾಮಯ್ಯ ಅವರದ್ದು,” ಎನ್ನುತ್ತಾರೆ ಮೈಸೂರು ಮೂಲದ ಹಿರಿಯ ಪತ್ರಕರ್ತರೊಬ್ಬರು. ಅವತ್ತಿಗೆ ಸಿದ್ದರಾಮಯ್ಯ ಅವರ ವೈಯಕ್ತಿಕ ನಂಬಿಕೆಗಳೇನಿತ್ತು ಎಂಬುದು ಎಲ್ಲಿಯೂ ಬಹಿರಂಗವಾಗಿ ಅವರು ಹೇಳಿಕೊಳ್ಳದಿದ್ದರೂ, ಅವರ ಒಡನಾಟ ಮತ್ತು ಸುತ್ತಮುತ್ತಲಿನ ಪ್ರಭಾವಳಿಯಿಂದಾಗಿ ‘ಸಿದ್ದರಾಮಯ್ಯ ಸಮಾಜವಾದಿ’ ಎಂಬ ತೀರ್ಮಾನಕ್ಕೆ ಸಮಾಜ ಬಂದಿದ್ದು ಸಹಜವೇ ಆಗಿತ್ತು ಕೂಡ.

ಬದಲಾದ ನಂಬಿಕೆಗಳು:

ಸಿದ್ದರಾಮಯ್ಯ ಅವರ ಧಾರ್ಮಿಕ ನಂಬಿಕೆಗಳಲ್ಲಿ ಮೊದಲ ಬಾರಿಗೆ ದೊಡ್ಡ ಮಟ್ಟದ ಬದಲಾವಣೆ ಬಹಿರಂಗವಾಗಿ ಕಂಡು ಬಂದಿದ್ದು ಅವರು ಜನತಾ ಪರಿವಾರದಿಂದ ಹೊರಕ್ಕೆ ಬಿದ್ದ ನಂತರ ಎನ್ನುತ್ತಾರೆ ಅವರ ಇನ್ನೊಬ್ಬ ಮೈಸೂರಿನ ಒಡನಾಟಿಯೊಬ್ಬರು. “ಆ ಸಮಯದಲ್ಲಿ ಸಿದ್ದರಾಮಯ್ಯ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಅವರ ಪತ್ನಿಯ ಒತ್ತಾಸೆ ಮೇರೆಗೆ ದೇವಸ್ಥಾನಗಳಿಗೆ ಭೇಟಿ ನೀಡತೊಡಗಿದರು. 2006ರಲ್ಲಿ ಕೊಲ್ಲೂರು ಮೂಕಾಂಬಿಕ ದೇವಸ್ಥಾನಕ್ಕೆ ಹೋದರು. ಅಲ್ಲಿ ಬಟ್ಟೆಯನ್ನು ಬಿಚ್ಚಿಟ್ಟು (ಅಲ್ಲಿನ ನಿಯಮ) ದೇವಿಯ ದರ್ಶನವನ್ನು ಪಡೆದರು,” ಎಂದು ಮಾಹಿತಿ ನೀಡುತ್ತಾರೆ ಅವರು.

“ಸಿದ್ದರಾಮಯ್ಯ ಸಮಾಜವಾದಿ ಇರಬಹುದು. ಲೋಹಿಯಾವಾದಿಯಾಗಿಯೂ ಗುರುತಿಸಬಹುದು. ಆದರೆ ಅದು ಗಟ್ಟಿ ಸೈದ್ಧಾಂತಿಕ ಹಿನ್ನೆಲೆಯಿಂದ ಬಂದ ತಿಳಿವಳಿಕೆ ಅಲ್ಲ. ಮುಖ್ಯವಾಗಿ ಸಿದ್ದರಾಮಯ್ಯಗೆ ಸ್ವತಂತ್ರವಾದ ಓದಿನ ಹಿನ್ನೆಲೆಯೂ ಇಲ್ಲ,” ಎನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲವರು.

ಹೀಗೆ, ಬಹಿರಂಗವಾಗಿ ಆರಂಭವಾದ ಸಿದ್ದರಾಮಯ್ಯ ಅವರ ದೇವಸ್ಥಾನಗಳ ಭೇಟಿ ಆ ಸಮಯದಲ್ಲಿ ಹೆಚ್ಚಿನ ಗಮನ ಸೆಳೆಯಲಿಲ್ಲ; ಕಾರಣ ಅವರು ಆಗ ಅಧಿಕಾರದಲ್ಲಿಯೂ ಇರಲಿಲ್ಲ. ಹೀಗಿರುವಾಗಲೇ 2006ರ ಕೊನೆಯಲ್ಲಿ ಚಾಮುಂಡೇಶ್ವರಿ ಉಪಚುನಾವಣೆ ಎದುರಾಯಿತು. “ಸಿದ್ದರಾಮಯ್ಯ ವಿರುದ್ಧ ಅವತ್ತಿನ ಜೆಡಿಎಸ್‌- ಬಿಜೆಪಿ ಸಮ್ಮಿಶ್ರ ಸರಕಾರ ಕಣಕ್ಕಿಳಿತು. ರಾಜ್ಯದ ಭಾರಿ ಕುತೂಹಲಕ್ಕೆ ಕಾರಣವಾದ ಈ ಚುನಾವಣೆ ಸಮಯದಲ್ಲಿ ಸಿದ್ದರಾಮಯ್ಯ ಪೇಜಾವರ ಸ್ವಾಮಿಗಳ ಕಾಲಿಗೆ ಬಿದ್ದರು,” ಎಂದು ನೆನಪಿಸಿಕೊಳ್ಳುತ್ತಾರೆ ಬೆಂಗಳೂರಿನ ಹಿರಿಯ ರಾಜಕೀಯ ವರದಿಗಾರರೊಬ್ಬರು.

ಮುಖ್ಯಮಂತ್ರಿಯಾದ ನಂತರ:

siddu-temple-visit-1

ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಗೆದ್ದ ನಂತರ ರಾಜಕೀಯದಲ್ಲಿ ಮರುಹುಟ್ಟು ಪಡೆದರು ಸಿದ್ದರಾಮಯ್ಯ. ಅಲ್ಲಿಂದ ಒಂದು ದಶಕದ ಅಂತರದಲ್ಲಿ ಅವರು ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದರು. 2016ರ ಫೆಬ್ರವರಿಯಲ್ಲಿ ಮೈಸೂರು ಸಮೀಪದ ಟಿ. ನರಸೀಪುರದಲ್ಲಿ ನಡೆದ ಕುಂಭಮೇಳದಲ್ಲಿ ಅವರು ಪಾಲ್ಗೊಂಡಿದ್ದು ಮಾಧ್ಯಮಗಳ ಗಮನ ಸೆಳೆಯಿತು. ಈ ಸಮಯದಲ್ಲಿ ಅವರು “ನಾನು ನಾಸ್ತಿಕನಲ್ಲ….” ಎಂದು ಹೇಳಿಕೊಂಡರು. ಅದೇ ವರ್ಷ ಜೂನ್ ತಿಂಗಳಿನಲ್ಲಿ ಅವರ ಸರಕಾರಿ ಕಾರಿನ ಮೇಲೆ ಕಾಗೆ ಕುಳಿತ ಸುದ್ದಿ ಭಿತ್ತರವಾಯಿತು. ನಂತರ ಅವರು ಕಾರನ್ನು ಬದಲಾಯಿಸಿದರು. ಅದಕ್ಕೆ ಅವರು ಸಮಜಾಯಿಷಿಯನ್ನೂ ನೀಡಿದರು. ಜುಲೈ ತಿಂಗಳಿನಲ್ಲಿ ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದರು. ನವೆಂಬರ್ ತಿಂಗಳಿನಲ್ಲಿ ಹೊಸತಾಗಿ ನಿರ್ಮಿಸಿದ್ದ ತಮ್ಮ ಫಾರಂ ಹೌಸ್‌  ಒಳಗೆ ಹೋಮ ಹವನಗಳ ಮೂಲಕ ‘ಗೃಹ ಪ್ರವೇಶ’ವನ್ನು ನೆರವೇರಿಸಿದರು. ಅದಕ್ಕೂ ಮುಂಚೆ, ‘ಅವರ ಹಳೆಯ ನಿವಾಸವನ್ನು ವಾಸ್ತು ಸರಿ ಇಲ್ಲ ಎಂದು ಬದಲಾಯಿಸಲಾಯಿತು’ ಎಂಬ ಸುದ್ದಿಯಾಗಿತ್ತು. ಹೀಗೆ, ಸಿದ್ದರಾಮಯ್ಯ ವೈಯಕ್ತಿಕವಾದ ದೇವರ ನಂಬಿಕೆ ಸುತ್ತ ಒಂದಷ್ಟು ಘಟನಾವಳಿಗಳು ನಡೆದವು.

“ಸಿದ್ದರಾಮಯ್ಯ ಅವರ ಬಳಿ ಎರಡು ವ್ಯಕ್ತಿತ್ವಗಳಿವೆ. ಒಂದು ಅವರೊಬ್ಬ ವ್ಯಕ್ತಿಯಾಗಿ ಅವರ ನಂಬಿಕೆಗಳನ್ನು ನಾವು ಗಮನಿಸಬೇಕು. ಇನ್ನೊಂದು ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಜನರ ನಂಬಿಕೆಗಳನ್ನು ಗೌರವಿಸುವ ಅಗತ್ಯವನ್ನೂ ನಾವು ಗುರುತಿಸಬೇಕು. ಬಹುಶಃ ಅವರ ಈ ಆಸ್ತಿಕತೆಯ ಹಿಂದೆ ಬಹುಸಂಖ್ಯಾತ ಜನರ ನಂಬಿಕೆಗಳನ್ನು ಗೌರವಿಸುವ ನಡೆ ಇದ್ದರೂ ಇರಬಹುದು,” ಎನ್ನುತ್ತಾರೆ ಮೈಸೂರು ಮೂಲದ ಕಲಾವಿದ, ರಂಗಾಯಣ ಸಂಸ್ಥೆಯ ನಿರ್ದೇಶಕ ಜೆನ್ನಿ.

ಸಿದ್ದರಾಮಯ್ಯ ದೇವರ ಎಡೆಗೆ ತಮ್ಮ ನಂಬಿಕೆಯನ್ನು ಮುಂದಿಡುತ್ತಿದ್ದಾರೆ. ಅದೇ ಹೊತ್ತಿಗೇ ಅವರು “ಮೌಢ್ಯದ ವಿರೋಧಿ ನಾನು” ಎಂದೂ ಹೇಳುತ್ತಿದ್ದಾರೆ. ಮುಖ್ಯಮಂತ್ರಿಯಾದ ನಂತರ ಅವರು ಅಪನಂಬಿಕೆಯ ಮೌಢ್ಯಕ್ಕೆ ಬಲಿಯಾಗಿರುವ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಆದರೆ, ಮೌಢ್ಯ ನಿಷೇಧ ಕಾಯ್ದೆ ಅವರ ಅವಧಿಯಲ್ಲಿ ನನೆಗುದಿಗೆ ಬಿದ್ದಿದೆ.

ಇಂತಹದೊಂದು ಗೊಂದಲಮಯ ಪರಿಸ್ಥಿತಿಯಲ್ಲಿ ನಿಜಕ್ಕೂ ಸಿದ್ದರಾಮಯ್ಯ ಅವರ ನಂಬಿಕೆಗಳೇನು ಎಂಬುದು ಮಾತ್ರ ನಿಗೂಢವಾಗಿಯೇ ಇದೆ.  ಅವರ ಕೈಲಿ ಕಾಣಿಸಿಕೊಳ್ಳುವ ಲಿಂಬೆ ಹಣ್ಣು ಮಾತ್ರ ಆಗಾಗ್ಗೆ ಸದ್ದು ಮಾಡುತ್ತಲೇ ಇದೆ.

Leave a comment

Top