An unconventional News Portal.

ಸೇನೆಗೆ ಸೇರ್ಪಡೆಯಾಯ್ತು ಮುಧೋಳದ ನಾಯಿ

ಸೇನೆಗೆ ಸೇರ್ಪಡೆಯಾಯ್ತು ಮುಧೋಳದ ನಾಯಿ

dscn5049ಉದ್ದನೆ ಸಣಕಲು ದೇಹ. ಆದ್ರೆ ಅತ್ಯಂತ ಚುರುಕು. ಅಷ್ಟೇ ಚಾಣಾಕ್ಷ. ಇದು ಮುಧೋಳ ಎಂಬ ಪಕ್ಕಾ ದೇಸೀ ತಳಿಯ ನಾಯಿಯ ಲಕ್ಷಣಗಳು. ಬೇಟೆಗೆಂದೇ ಹೆಸರಾಗಿರುವ ಈ ತಳಿಯ ನಾಯಿಗಳು ಗಂಟೆಗೆ 50 ಕಿಮೀ ವೇಗದಲ್ಲಿ ಓಡುವ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿಯೇ ವಿದೇಶೀಯ ನಾಯಿಗಳನ್ನು ಮಾತ್ರ ಹೊಂದಿರುತ್ತಿದ್ದ ಸೇನೆಯಲ್ಲಿ ದೇಸೀ ತಳಿಯ ನಾಯಿಗಳಿಗೂ ಕಾಲ ಬಂದಂತಾಗಿದೆ.

ಕಳೆದ ಹಲವಾರು ತಿಂಗಳಿಂದ  ಮುಧೋಳ ತಳುಯ ನಾಯಿಗಳನ್ನು ಸೇನೆಗೆ ಸೇರ್ಪಡೆಗೊಳಿಸುವ ಬಗ್ಗೆ ಚರ್ಚೆಗಳು ನಡೀತಿತ್ತು. ಆದ್ರೆ ಈಗ  ಹಿಮಪಾತದಲ್ಲಿ ಸಿಲುಕಿ ಹುತಾತ್ಮರಾದ ಬೆಟದೂರಿನ ಸೈನಿಕ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಸ್ಮರಣಾರ್ಥ ಆರು ನಾಯಿಗಳನ್ನು ಸೇನೆಗೆ ಸೇರ್ಪಡೆಗೊಳಿಸಲಾಗಿದೆ. ಕರ್ನಾಟಕ ಪಶು ವೈದ್ಯಕೀಯ ವಿವಿ ವ್ಯಾಪ್ತಿಯ ಮುಧೋಳದ ಶ್ವಾನ ಸಂಶೋಧನಾ ಕೇಂದ್ರ ವತಿಯಿಂದ ನಾಯಿಗಳನ್ನು ಹಸ್ತಾಂತರಿಸಲಾಗಿದೆ. ಕೇಂದ್ರದಲ್ಲಿ ಬೆಳೆದ 3 ಗಂಡು ಮತ್ತು 3 ಹೆಣ್ಣು  ಶ್ವಾನಗಳನ್ನು ಬೆಂಗಳೂರಿನ ಹೆಬ್ಟಾಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಯಿತು.

ಸಣಕಲು ಮತ್ತು ನೀಳ ದೇಹದ ಈ ಮುಧೋಳ, ಬೇಟೆ ನಾಯಿ ಅಂತಾನೆ ಫೇಮಸ್. ದೇಶ ವಿದೇಶಗಳಲ್ಲೂ ಹೆಸರುವಾಸಿ .ಇದು ಈ ನೆಲದ ಹೆಮ್ಮೆಯ ಪ್ರತೀಕವೂ ಹೌದುಕೆಣಕಿದ್ರೆ ಪಕ್ಕನೆ ಹಿಡಿಯುವ, ಎಷ್ಟೇ ದೂರವಿದ್ರೂ ಕ್ಷಣಮಾತ್ರದಲ್ಲಿ ಬೇಟೆ ಆಡುವ ಸಾಮರ್ಥ್ಯ ಹೊಂದಿರೋ ಏಕೈಕ ಶ್ವಾನ ಇದು. ಒಮ್ಮೆ ವಾಸನೆ ಹಿಡಿದು ಓಡಿದ್ರೆ ಆಯ್ತು ಎಂತಹವರನ್ನು ಮೀರಿಸಿ ಬೇಟೆ ಆಡೋ ಶಕ್ತಿ ಇದಕ್ಕಿದೆ.

ಬೇರೆ ನಾಯಿಗಳಿಗೆ ಹೋಲಿಸಿದ್ರೆ ಮುಧೋಳ ನಾಯಿಗಳು ತುಂಬಾ ಚುರುಕು. ಅಲ್ಲದೆ ಅಷ್ಟು ಸಲೀಸಾಗಿ ಲ್ಲರೊಂದಿಗೆ ಬೆರೆಯೋದಿಲ್ಲ  ನಾಯಿಗಳು. ಇನ್ನು ನಿಯತ್ತಿನ ವಿಷ್ಯಕ್ಕೆ ಬಂದ್ರೂ ಅಷ್ಟೆ. ಊಟ ತಂದಿಟ್ಟ್ರೂ ಮಾಲೀಕನ ಆಜ್ಞೆಯಿಲ್ಲದೆ ಒಂದು ತುತ್ತೂ ತಿನ್ನದ ಸ್ವಾಮಿನಿಷ್ಠ ಈ  ಮುಧೋಳ ತಳಿಯ ನಾಯಿಗಳು.

ಈ ಮುಧೋಳ ನಾಯಿಗಳ ಇತಿಹಾಸ ನೋಡೋದಾದ್ರೆ ಇದು ಔರಂಗಜೇಬನ ಕೊಡುಗೆ ಅಂತ ಹೇಳಲಾಗುತ್ತೆ. ಮುಧೋಳವನ್ನು ಆಳುತ್ತಿದ್ದ  ಘೋರ್ಪಡೆ ವಂಶದ ರಾಜರಿಗೆ ನಾಯಿಗಳಂದ್ರೆ ತುಂಬಾ ಪ್ರೀತಿ ಇತ್ತಂತೆ. ಹಾಗಾಗಿ ಔರಂಗಜೇಬನು ಮುಧೋಳದ ಅರಸರಿಗೆ ಈ ತಳಿಯ ನಾಯಿಗಳನ್ನು ನೀಡಿದ್ದನಂತೆ. ನಂತ್ರ ಇದೇ ಮುಧೋಳ ತಳಿ ಎಂದು ಪ್ರಸಿದ್ದವಾಯ್ತು ಎಂಬ ಇತಿಹಾಸವಿದೆ.

ಇನ್ನು ಸೇನೆಗೆ ಆಯ್ಕೆಯಾಗಿರುವ ನಾಯಿಗಳಿಗೆ ಉತ್ತರ ಪ್ರದೇಶದ ಮೇರಾಠ್ ನಲ್ಲಿರುವ ಭಾರತೀಯ ಸೇನೆಯ ಶ್ವಾನ ತರಬೇತಿ ಘಟಕದಲ್ಲಿ ತರಬೇತಿಯನ್ನು ನೀಡಲಾಗುತ್ತದೆ. ಇಲ್ಲಿ ಶ್ವಾನಗಳಿಗೆ ಬಾಂಬ್ ಪತ್ತೆ ಹಚ್ಚುವಿಕೆ, ಪತ್ತೆದಾರಿ ಚಟುವಟಿಕೆ, ರಕ್ಷಣಾ ಕಾರ್ಯದ ಕುರಿತು ತರಬೇತಿ ನೀಡಲಾಗುತ್ತೆ. ತರಬೇತಿ ಮುಗಿಯುತ್ತಿದ್ದಂತೆ ಮುಧೋಳ ಸೇನೆಯ ಜೊತೆ ಕಾರ್ಯಾಚರಣೆಗೆ ಸಜ್ಜಾಗಲಿದೆ.

ಭಾರತೀಯ ಸೇನೆಯಲ್ಲಿ ಈವರೆಗೆ ಲ್ಯಾಬ್ರಡಾರ್‌, ಜರ್ಮನ್‌ ಶಫರ್ಡ್‌, ಬೆಲ್ಜಿಯನ್‌ ಶಫರ್ಡ್‌ನಂತಹ ವಿದೇಶಿ ಶ್ವಾನ ತಳಿಗಳನ್ನು ಬಳಸಲಾಗುತ್ತಿದೆ. ಇವುಗಳ ಜೊತೆಗೆ ಸೇನೆಯಲ್ಲಿ ಮುಧೋಳ ತಳಿಯ ನಾಯಿಗಳ ಕರಾಮತ್ತು ಹೇಗಿರುತ್ತೆ ಅನ್ನೋ  ಕುತೂಹಲ ಎಲ್ಲರಿಗೂ ಇದೆ.

Top