An unconventional News Portal.

ಉತ್ತರ ಕೋರಿಯಾದಿಂದ ‘ಹೊಸ ಬಾಂಬ್’; ಹ್ಯಾಂಗೋವರ್ ಫ್ರೀ ಮದ್ಯ!

ಉತ್ತರ ಕೋರಿಯಾದಿಂದ ‘ಹೊಸ ಬಾಂಬ್’; ಹ್ಯಾಂಗೋವರ್ ಫ್ರೀ ಮದ್ಯ!

maxresdefault

ಜಗತ್ತಿನ ಇತರ ದೇಶಗಳ ಪಾಲಿಗೆ ಇದು ಅಂತರಂಗ ಬಿಟ್ಟುಕೊಡದ ಕರ್ಮಠ ಸಾಮ್ರಾಜ್ಯ. ಮೊನ್ನೆ ಮೊನ್ನೆ ಹೈಡ್ರೂಜನ್ ಬಾಂಬ್ ಸಿಡಿಸುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾದ ಪುಟ್ಟ ದೇಶವಿದು. ಹೌದು, ನಾವು ಮಾತಾಡ್ತಿರೋದು ನಾರ್ತ ಕೋರಿಯಾ ಬಗ್ಗೆ. ಸದ್ಯ ಅಲ್ಲಿಂದ ಮದ್ಯ ಪ್ರಿಯರಿಗೊಂದು ಹೊಸ ಸುದ್ದಿ ಹೊರಬಿದ್ದಿದೆ. ಉತ್ತರ ಕೋರಿಯಾದ ಸರಕಾರಿ ಮದ್ಯ ತಯಾರಿಕ ಘಟಕ ಹ್ಯಾಂಗೋವರ್ ಕಷ್ಟ ನೀಡದ ಮದ್ಯವೊಂದನ್ನು ತಯಾರಿಸಿದೆಯಂತೆ. ಹಾಗಂತ ಅಲ್ಲಿನ ಸರಕಾರಿ ಸ್ವಾಮ್ಯದ ‘ದಿ ಪ್ಯಾಂಗ್ಯಾಂಗ್ ಟೈಮ್ಸ್’ ವರದಿ ಮಾಡಿದೆ.

ವರದಿಯ ಪ್ರಕಾರ, ಉತ್ತರ ಕೋರಿಯಾ ಅಲ್ಲಿನ ಆಹಾರ ಉತ್ಪನ್ನಗಳ ಮೇಲೆ ನಿರಂತರವಾಗಿ ಸಂಶೋಧನೆ ನಡೆಯುತ್ತಿದೆ. ಅಲ್ಲಿನ ತಿಯೋಡಗ್ಯಾಂಗ್ ಫುಡ್ ಫ್ಯಾಕ್ಟರಿಯಲ್ಲಿ ಅಮಲು ಏರಿಸುವ ಆದರೆ ಬೆಳಗ್ಗೆ ತಲೆ ಸಿಡಿಯದಂತೆ ಮಾಡುವ ಮದ್ಯವೊಂದನ್ನು ಕಂಡು ಹಿಡಿಯಲಾಗಿದೆ.

2_North-Korea-hangover-free-alcohol

 

ಇದಕ್ಕೆ ಸ್ಥಳೀಯವಾಗಿ ಸಿಗುವ ಇನ್ಸಾಮ್ ಎಂಬ ಔಷಧೀಯ ಗುಣವುಳ್ಳ ಸಸ್ಯವನ್ನು ಬಳಸಲಾಗುತ್ತಿದೆ. ಹಿಂದೆ ಇದೇ ಇನ್ಸಾಮ್ ಬಳಸಿ ಮದ್ಯ ತಯಾರಿಕೆ ನಡೆಯುತ್ತಿತ್ತು. ಇದರಲ್ಲಿರುವ ಕಹಿಯನ್ನು ಕಡಿಮೆ ಮಾಡಲು ಸಕ್ಕರೆಯನ್ನು ಬಳಸಲಾಗುತ್ತಿತ್ತು. ಹೀಗಾಗಿ, ಮದ್ಯ ಕುಡಿದವರು ಬೆಳಗ್ಗೆ ತಲೆಬೇನೆಯಿಂದ ನರಳುತ್ತಿದ್ದರು. ಇದೀಗ ಇನ್ಸಾಮ್ ಕಹಿಯನ್ನು ಕಡಿಮೆ ಮಾಡಲು ಸ್ಥಳೀಯವಾಗಿ ಕೀಟನಾಶಕ ಬಳಸದೇ ಬೆಳೆದ ಭತ್ತದ ಅಕ್ಕಿಯನ್ನು ಬಳಸಲು ಶುರುಮಾಡಿದ್ದಾರೆ.

 

5c

ಇದರಿಂದಾಗಿ, ಮದ್ಯದ ಅಮಲು ಏರಿದರೂ ಬೆಳಗ್ಗೆ ಹ್ಯಾಂಗೋವರ್ ಚಿಂತೆ ಇರುವುದಿಲ್ಲವಂತೆ. ಉತ್ತರ ಕೋರಿಯಾ ಈ ಹಿಂದೆ ಇಂತಹ ಗಿಡಮೂಲಿಕೆಗಳಿಂದ ತಯಾರಿಸಿದ ಔಷಧಿಯಿಂದ ಏಡ್ಸ್ ಮತ್ತಿತರ ಕಾಯಿಲೆಗಳನ್ನು ಗುಣಪಡಿಸಲಾಗುತ್ತಿದೆ ಎಂದು ಹೇಳಿಕೊಂಡಿತ್ತು. ಇದೀಗ ಹ್ಯಾಂಗೋವರ್ ಮದ್ಯದ ಬಾಟಲಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸದ್ಯ ಇದು ಉತ್ತರ ಕೋರಿಯಾ ಬಿಟ್ಟು ಹೊರ ಜಗತ್ತಿನಲ್ಲಿ ಸಿಗುವುದಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಂತರಾಷ್ಟ್ರೀಯ ಮದ್ಯ ತಯಾರಕರ ಸಂಸ್ಥೆ, “ನೋಡದೆ ಏನೂ ಹೇಳಲು ಸಾಧ್ಯವಿಲ್ಲ. ಇದು ಉತ್ತರ ಕೋರಿಯಾ ಇಮೇಜ್ ಬಿಲ್ಡಿಂಗಾಗಿ ಹೇಳುತ್ತಿರುವ ಮತ್ತೊಂದು ಸುಳ್ಳು ಇರಬಹುದು,’’ ಎಂದು ತಿಳಿಸಿದೆ.

ಅದೇನೆ ಇರಲಿ, ಹ್ಯಾಂಗೋವರ್ ಇಲ್ಲದ ಮದ್ಯ ಮಾರುಕಟ್ಟೆಗೆ ಬಂದರೆ, “ಚಿಂತೆ ಬಿಟ್ಟು ಇನ್ನೊಂದು ಎಕ್ಟ್ರಾ ಪೆಗ್ ಏರಿಸಬಹುದು,” ಎಂದು ಅನಧಿಕೃತ ಕುಡುಕರ ಸಂಘ ಪ್ರತಿಕ್ರಿಯಿಸಬಹುದೇನೋ?!

Photo: Internet

Top