An unconventional News Portal.

‘ಪಂಜಾಬ್ ಕಾಲುವೆ ವಿವಾದ’: ವಿರೋಧ ಪಕ್ಷದ ಎಲ್ಲಾ 42 ಕಾಂಗ್ರೆಸ್ ಶಾಸಕರು ರಾಜೀನಾಮೆ!

‘ಪಂಜಾಬ್ ಕಾಲುವೆ ವಿವಾದ’: ವಿರೋಧ ಪಕ್ಷದ ಎಲ್ಲಾ 42 ಕಾಂಗ್ರೆಸ್ ಶಾಸಕರು ರಾಜೀನಾಮೆ!

ದೇಶದಲ್ಲಿ ಮತ್ತೊಂದು ಸುತ್ತಿನ ಜಲವಿವಾದವೊಂದು ಉತ್ತರ ಭಾರತದ ಪಂಜಾಬ್ ರಾಜ್ಯದಲ್ಲಿ ಹುಟ್ಟಿಕೊಂಡಿದೆ.

ಶುಕ್ರವಾರ ಸಂಜೆ ವೇಳೆಗೆ, ಪಂಜಾಬ್ ರಾಜ್ಯದ ವಿರೋಧ ಪಕ್ಷದ ಎಲ್ಲಾ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿರುವ ಸುದ್ದಿ ಹೊರಬಿದ್ದಿದೆ. 117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯೆ 42. ‘ಇವರೆಲ್ಲರೂ ಹಾಲಿ ಆಡಳಿತ ನಡೆಸುತ್ತಿರುವ ಶಿರೋಮಣಿ ಅಕಾಲಿ ದಳ ಪಕ್ಷದ ಪ್ರಕಾಶ್ ಸಿಂಗ್ ಬಾದಲ್ ವಿರುದ್ಧ ತಳಮಟ್ಟದಲ್ಲಿ ಹೋರಾಟ ನಡೆಸಲು ಜನರ ಬಳಿ ಹೋಗುತ್ತಿದ್ದಾರೆ’ ಎಂದು ಕಾಂಗ್ರೆಸ್ ಘೋಷಿಸಿದೆ.

ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಅಮರಿಂದರ್ ಸಿಂಗ್, “ಜನರ ಹಿತ ಕಾಯುವಲ್ಲಿ ವಿಫಲರಾಗಿದ್ದಾರೆ” ಎಂದು ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ವಿರುದ್ಧ ಆರೋಪಗಳನ್ನು ಶುರುಮಾಡಿದ್ದಾರೆ. ಚುನಾವಣೆ ಹೊಸ್ತಿಲಿನಲ್ಲಿದ್ದ ರಾಜ್ಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ ರಾಜಕೀಯ ಆರೋಪ- ಪತ್ಯಾರೋಪಗಳು ನಡೆಯುತ್ತಲೇ ಇವೆ. ಇದೀಗ ವಿರೋಧ ಪಕ್ಷದ ಶಾಸಕರು ರಾಜೀನಾಮೆ ನೀಡಿ, ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರಿಂ ಕೋರ್ಟ್ ನೀಡಿರುವ ತೀರ್ಪಿಗೆ ಪ್ರತಿಭಟನೆ ರೂಪದಲ್ಲಿ ಅಖಾಡಕ್ಕೆ ಇಳಿಯುವ ಸೂಚನೆ ನೀಡಿದ್ದಾರೆ. ಅದರ ಭಾಗವಾಗಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ನೀಡಿರುವ ಹೇಳಿಕೆಗಳು ಮಹತ್ವ ಪಡೆದುಕೊಂಡಿವೆ.

“ನಾನು ಪಾರ್ಲಿಮೆಂಟಿನಲ್ಲಿಯೂ ಇಲ್ಲ. ನಮ್ಮ ಶಾಸಕರು ವಿಧಾನ ಸಭೆಯೊಳಗೂ ಇಲ್ಲ. ನಾವು ಜನರ ಬಳಿ ಹೋಗುತ್ತೇವೆ. ಜನರ ಹಿತ ಕಾಯುವಲ್ಲಿ ವಿಫಲವಾದ ಸರಕಾರದ ಪ್ರತಿಕೃತಿಯನ್ನು ದಹಿಸುತ್ತೇವೆ,” ಎಂದು ಶಾಸಕರು ಸ್ಪೀಕರ್ಗೆ ರಾಜೀನಾಮೆ ನೀಡಿ ಹೊರಬಂದ ಸಮಯದಲ್ಲಿ ಜತೆಗಿದ್ದ ಅಮರಿಂದರ್ ತಿಳಿಸಿದರು ಎಂದು ‘ಎಕನಾಮಿಕ್ ಟೈಮ್ಸ್’ ವರದಿ ಮಾಡಿದೆ.

ಎಲ್ಲಾ ಕಾಲುವೆಗಾಗಿ:

ವಿವಾದದ ಟೈಮ್ ಲೈನ್ (ಕೃಪೆ: ದಿ ಹಿಂದೂ ಗ್ರಾಫಿಕ್ಸ್)

ವಿವಾದದ ಟೈಮ್ ಲೈನ್ (ಕೃಪೆ: ದಿ ಹಿಂದೂ ಗ್ರಾಫಿಕ್ಸ್)

1981ರಲ್ಲಿ ಹರ್ಯಾಣ, ಪಂಜಾಬ್ ಮತ್ತು ರಾಜಸ್ಥಾನ ಸರಕಾರಗಳು ಸಟ್ಲೇಜ್-ಯಮುನಾ ನದಿ ನೀರನ್ನು ಕ್ಯಾನಲ್ (ಕಾಲುವೆ)ಗಳ ಮೂಲಕ ಹಂಚಿಕೊಳ್ಳುವ ಒಪ್ಪಂದಕ್ಕೆ ಬಂದಿದ್ದವು. ಹೀಗಾಗಿ, ‘ಸಟ್ಲೇಜ್ ಯಮುನಾ ಲಿಂಕಿಂಗ್ (ಎಸ್.ವೈ.ಎಲ್) ಕ್ಯಾನಲ್ ಪ್ರಾಜೆಕ್ಟ್’ 1996ರಲ್ಲಿ ಆರಂಭವಾಯಿತು. ಆದರೆ ಇದು ಸುಪ್ರಿಂ ಕೋರ್ಟ್ ಮೆಟ್ಟಿಲೇರಿ 2004ರಲ್ಲಿ ಸರ್ವೋಚ್ಛ ನ್ಯಾಯಾಲಯ ಕಾಮಾಗಾರಿ ಆರಂಭಿಸಬೇಕು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತೀರ್ಪು ನೀಡಿತು. ಇದಕ್ಕೆ ಸಡ್ಡು ಹೊಡೆದ ಪಂಜಾಬ್ ಎಲ್ಲಾ ಒಪ್ಪಂದಗಳನ್ನು ರದ್ದು ಮಾಡಿ ‘ಪಂಜಾಬ್ ಟೆರ್ಮಿನೇಷನ್ ಅಗ್ರೀಮೆಂಟ್ ಆಕ್ಟ್-2004’ನ್ನು ವಿಧಾನಸಭೆಯಲ್ಲಿ ಪಾಸು ಮಾಡಿತು.

ತೀರ್ಪನ್ನು ಧಿಕ್ಕರಿಸಿದ ಪಂಜಾಬ್ ಅಸೆಂಬ್ಲಿಯ ನಡೆಯ ಬಗ್ಗೆ ಸರ್ವೋಚ್ಛ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಯಿತು. ಇದರ ಮಧ್ಯೆಯೇ ಕಳೆದ ಮಾರ್ಚಿನಲ್ಲಿ ಪಂಜಾಬ್ ಸರಕಾರ ‘ಪಂಜಾಬ್ ಸಟ್ಲೇಜ್-ಯಮುನಾ ಲಿಂಕ್ ಕ್ಯಾನಲ್ ಲ್ಯಾಂಡ್ (ಟ್ರಾನ್ಸ್ ಫರ್ ಆಫ್ ಪ್ರಾಪರ್ಟಿ ರೈಟ್ಸ್) ಬಿಲ್ – 2016’ನ್ನು ಜಾರಿಗೆ ತಂದಾಗ, ಇದಕ್ಕೂ ಸುಪ್ರಿಂ ಕೋರ್ಟ್ ತಡೆ ನೀಡಿ ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶ ನೀಡಿತ್ತು. ಇದೀಗ 2004 ಪ್ರಕರಣದಲ್ಲಿ ತೀರ್ಪು ನೀಡಿರುವ ಅನಿಲ್ ಆರ್ ದವೆ ನೇತೃತ್ವದ ಸುಪ್ರಿಂ ಕೋರ್ಟ್ ನ ಐದು ನ್ಯಾಯಮೂರ್ತಿಗಳ ಪೀಠ, 2004ರಲ್ಲಿ ಸಟ್ಲೇಜ್-ಯಮುನಾ ನದಿ ನೀರಿನ ಒಪ್ಪಂದವನ್ನು ಪಂಜಾಬ್ ತಿರಸ್ಕರಿಸಿದ್ದು ಕಾನೂನು ಬಾಹಿರ ಎಂದು ಗುರುವಾರ ತೀರ್ಪು ನೀಡಿತ್ತು. ಇದು ಹರ್ಯಾಣ ಪರವಾಗಿದ್ದು ಪಂಜಾಬಿಗೆ ಹಿನ್ನಡೆ ಎನ್ನುವ ಅಭಿಪ್ರಾಯಗಳು ಪಂಜಾಬಿನಲ್ಲಿ ವ್ಯಕ್ತವಾಗಿವೆ.

ಪ್ರತಿಭಟನೆ ರೂಪವಾಗಿ ಈಗ ಪಂಜಾಜ್ ವಿರೋಧ ಪಕ್ಷದ ಶಾಸಕರು ರಾಜೀನಾಮೆ ನೀಡಿದ್ದಾರೆ. ಚುನಾವಣೆಯ ಹೊಸ್ತಿಲಿನಲ್ಲಿರುವ ರಾಜ್ಯದಲ್ಲಿ ಈ ಬೆಳವಣಿಗೆ ಸಹಜವಾಗಿಯೇ ಕುತೂಹಲ ಮೂಡಿಸಿವೆ.

ENTER YOUR E-MAIL

Name
Email *
September 2017
M T W T F S S
« Aug    
 123
45678910
11121314151617
18192021222324
252627282930  

Top