An unconventional News Portal.

ಬೀದಿ ಸಂಗೀತಕ್ಕೆ ಮಾರುಕಟ್ಟೆ ಸೃಷ್ಟಿಸಿದ ಈ 4 ಬೆಕ್ಕಿನ ಮರಿಗಳು!

ಬೀದಿ ಸಂಗೀತಕ್ಕೆ ಮಾರುಕಟ್ಟೆ ಸೃಷ್ಟಿಸಿದ ಈ 4 ಬೆಕ್ಕಿನ ಮರಿಗಳು!

ಇವತ್ತಿನ ಅಂತರ್ಜಾಲ ಯುಗದಲ್ಲಿ ಎಲ್ಲಿ, ಯಾವಾಗ, ಯಾವುದು ಸುದ್ದಿಯಾಗಬಲ್ಲದು ಎಂಬುದನ್ನು ಗುರುತಿಸುವುದು ಕಷ್ಟ. ಸಾಮಾನ್ಯವಾಗಿ ಕಾಣಿಸುವ ಕೆಲವೊಂದು ವಿಚಾರಗಳು, ಕೆಲಮೊಮ್ಮೆ ದೊಡ್ಡ ಸುದ್ದಿಯಾಗಿ ಬಿಡುತ್ತವೆ. ಹೀಗಾಗಿ, ಆಧುನಿಕ ಜನರ ಅಭಿರುಚಿಯನ್ನು, ಆಲೋಚನೆಗಳನ್ನು ತಟ್ಟುವುದು ಸವಾಲಿನ ಕೆಲಸವೇ.

ಬಹುಶಃ, ಮಲೇಶಿಯಾದ ಬೀದಿಯಲ್ಲಿ ಕುಳಿತು ಗಿಟಾರ್ ನುಡಿಸುತ್ತಿದ್ದ ಈ ಸಂಗೀತಗಾರನ ದಿನಚರಿಯಲ್ಲಿ ಅದೊಂದು ದಿನ ನಡೆದ ಈ ಘಟನೆ ಇವತ್ತು ನಮ್ಮ ಗಮನ ಸೆಳೆದಿದ್ದರ ಹಿಂದಿರುವ ಮರ್ಮ ಕೂಡ ಇದೇ ಅನ್ನಿಸುತ್ತದೆ. ಆತ ಎಂದಿನಂತೆ ಬೀದಿಯ ಪಕ್ಕದಲ್ಲಿ ಕುಳಿತು ತನ್ನ ಗಿಟಾರ್ ನುಡಿಸುತ್ತಿದ್ದ. ಒಂದಷ್ಟು ಜನ ತಮ್ಮ ಗಡಿಬಿಡಿಯಲ್ಲಿ ಗಮನಿಸಿ ಮುಂದೆ ಹೋದರು. ಕೆಲವರು ನಾಣ್ಯಗಳನ್ನು ಎಸೆದು ಆತನ ಕಲಾಭಿವ್ಯಕ್ತಿಗೆ ಬೆಂಬಲ ಸೂಚಿಸಿದರು. ಆದರೆ, ಈ ಮೂರು ತಿಂಗಳ 4 ಚಿಕ್ಕ ಬೆಕ್ಕಿನ ಮರಿಗಳು ಆತನ ಸಂಗೀತವನ್ನು ಜಗತ್ತಿನಾದ್ಯಂತ ಪಸರಿಸುವಂತೆ ಮಾಡಿದವು.

ಕೆಲವು ತಿಂಗಳ ಹಿಂದೆ ಆತ ಸಂಗೀತ ನುಡಿಸುತ್ತಿದ್ದಾಗ ಎಲ್ಲಿಂದಲೋ ಬಂದ ಬೆಕ್ಕಿನ ಮರಿಗಳು ಪ್ರೇಕ್ಷಕರಂತೆ ಎದುರಿಗೆ ಕುಳಿತುಕೊಂಡವು. ದಾರಿ ಹೋಕರು ತಮ್ಮ ಪಾಡಿಗೆ ತಾವು ಹೊರಟು ಹೋದರೂ, ಬೆಕ್ಕಿನ ಮರಿಗಳಿಗೆ ಸಂಗೀತದಲ್ಲಿ ಅದೇನೊ ಸೆಳೆತ ಕಂಡು ಬಂದಿತೋ. ಅವು ಆತ ಗಿಟಾರ್ ನುಡಿಸಿ ಮುಗಿಯುವವರೆಗೂ ಸ್ಥಳ ಬಿಟ್ಟು ಕದಲಲಿಲ್ಲ. ಅದನ್ನು ಗಮನಿಸುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದರು.

ಆ ದೃಶ್ಯವೀಗ ಎಲ್ಲರ ಗಮನ ಸೆಳೆಯುತ್ತಿದೆ. ಅದಕ್ಕೆ ಹೇಳಿದ್ದು, ಆಧುನಿಕ ಜಗತ್ತಿನಲ್ಲಿ ಯಾವುದು, ಹೇಗೆ ಸುದ್ದಿಯಾಗುತ್ತದೆ, ಜನರ ಗಮನವನ್ನು ಸೆಳೆಯಬಲ್ಲದು ಎಂಬುದನ್ನು ಗುರುತಿಸುವುದು ಕಷ್ಟ.

ವಿಡಿಯೋ ಇಲ್ಲಿದೆ. ಬೆಕ್ಕಿನ ಮರಿಗಳ ಸಂಗೀತಾಸಕ್ತಿಯನ್ನು ನೀವೂ ಒಮ್ಮೆ ನೋಡಿ…

 

Top