An unconventional News Portal.

ಎಂಡೋಸಲ್ಫಾನ್ ಪೀಡಿತರ ಆತ್ಮಹತ್ಯೆ; ಊರಿಗೆ ಬಂದರೂ ‘ಸಾವಿಗೆ ಮಿಡಿಯದ’ ಸಿದ್ಧರಾಮಯ್ಯ

ಎಂಡೋಸಲ್ಫಾನ್ ಪೀಡಿತರ ಆತ್ಮಹತ್ಯೆ; ಊರಿಗೆ ಬಂದರೂ ‘ಸಾವಿಗೆ ಮಿಡಿಯದ’ ಸಿದ್ಧರಾಮಯ್ಯ

ಗುರುವಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ದಕ್ಷಿಣ ಕನ್ನಡಕ್ಕೆ ಭೇಟಿ ನೀಡಿದ್ದರು. ಅಬುದಾಭಿ ಮೂಲದ ಉದ್ಯಮಿ ಬಿ.ಆರ್.ಶೆಟ್ಟಿ ಮಗನ ಮದುವೆ ಅವರ ಭೇಟಿ ಉದ್ದೇಶವಾಗಿತ್ತು. ಮಂಗಳೂರಿನಲ್ಲಿ ಮುಖ್ಯಮಂತ್ರಿ ಇಳಿಯುವ ಹೊತ್ತಿಗೆ, ಜಿಲ್ಲೆಯ ಇನ್ನೊಂದು ಮೂಲೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತ ಕುಟುಂಬದ ನಾಲ್ವರು ಆತ್ಮಹತ್ಯೆಯ ಸುದ್ದಿಯೂ ಬಂದಿತ್ತು. ಆದರೆ ಮಂಗಳೂರಿನಲ್ಲಿ ಮದುವೆಯಲ್ಲಿ ಭಾಗವಹಿಸಿದ ‘ಜನರ ಮುಖ್ಯಮಂತ್ರಿ’ ಸಿದ್ಧರಾಮಯ್ಯ, ಎಂಡೋ ಸಂತ್ರಸ್ತರತ್ತ ಕಣ್ಣೆತ್ತಿಯೂ ನೋಡದೇ ಬಂದ ಹಾದಿಯಲ್ಲೇ ಸಂಜೆ ವೇಳೆಗೆ ವಿಮಾನ ಹತ್ತಿ ವಾಪಾಸಾಗುತ್ತಾರೆ.

ತಮ್ಮದಲ್ಲದ ತಪ್ಪಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ಅನುಭವಿಸುತ್ತಾ, ನಾಲ್ಕು ಗೋಡೆಗಳ ಮಧ್ಯೆ ಬಿಕ್ಕಳಿಸುತ್ತಿರುವ ಸಾವಿರಾರು ಕುಟುಂಬಗಳ ನೋವಿನ ಕತೆಗೆ ದಕ್ಷಿಣ ಕನ್ನಡದ ಕೊಕ್ಕಡದಲ್ಲಿ ಗುರುವಾರ ನಡೆದ ಆತ್ಮಹತ್ಯೆ ಘಟನೆ ಕನ್ನಡಿ ಹಿಡಿದಿದೆ.

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ:

ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಆಲಡ್ಕದ ಎಂಡೋಸಲ್ಫಾನ್ ಪೀಡಿತ ಕುಟುಂಬದ ನಾಲ್ಕು ಜನ ಗುರುವಾರ ಆತ್ಯಹತ್ಯೆಗೆ ಶರಣಾಗಿದ್ದಾರೆ. ನಾಲ್ವರೂ ಕೆರೆಗೆ ಹಾರಿ ಜೀವ ಬಿಟ್ಟಿದ್ದಾರೆ. ಎಂಡೋಸಲ್ಫಾನ್ ಸಮಸ್ಯೆಗೆ ಸರಕಾರ ಇಲ್ಲಿವರೆಗೆ ಶಾಶ್ವತ ಪರಿಹಾರ ಕೈಗೊಳ್ಳದೇ ಇರುವುದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ ಎನ್ನಲಾಗಿದೆ.

ಮೃತರನ್ನು ಬಾಬುಗೌಡ(62), ಗಂಗಮ್ಮ (55),  ಸದಾನಂದಗೌಡ (32) ಮತ್ತು ನಿತ್ಯಾನಂದ(30) ಎಂದು ಗುರುತಿಸಲಾಗಿದೆ. ಸದಾನಂದ ಗೌಡ ಎಂಡೋಸಲ್ಫಾನ್ ಪೀಡಿತರಾಗಿದ್ದು ‘ಬುದ್ದಿ ಮಾಂದ್ಯತೆ’ಯಿಂದ ಬಳಲುತ್ತಿದ್ದರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ| ರಾಮಕೃಷ್ಣ ರಾವ್ ಹೇಳಿದ್ದಾರೆ. ಬುದ್ಧಿ ಮಾಂದ್ಯತೆಗೆ ಸರಿಯಾದ ಚಿಕಿತ್ಸೆಯೂ ಇಲ್ಲದೆ, ಮಗನ ಆರೈಕೆಯಲ್ಲಿ ಸೊರಗಿ ಕುಟುಂಬ ಆತ್ಮಹತ್ಯೆಗೆ ಶರಣಾಗಿರಬಹುದು ಎಂದುಕೊಳ್ಳಲಾಗಿದೆ. ಎಂಡೋಸಲ್ಫಾನ್ ಸಂತ್ರಸ್ತ ಸದಾನಂದ ಗೌಡ ಕತ್ತು ಹಿಡಿದುಕೊಂಡು ಬಾಬು ಗೌಡ ಕೆರೆಗೆ ಹಾರಿದ್ದಾರೆ ಎಂಬ ಅನುಮಾನಗಳಿದ್ದು, ಅವರ ಜತೆ ಪತ್ನಿ ಗಂಗಮ್ಮ ಮತ್ತು ಇನ್ನೊಬ್ಬ ಮಗ ನಿತ್ಯಾನಂದ ಕೂಡಾ ಹಾರಿ ಪ್ರಾಣ ಬಿಟ್ಟಿದ್ದಾರೆ. ಮೃತ ದಂಪತಿಗಳಿಗೆ ಮತ್ತೊಬ್ಬ ಮಗ ಇದ್ದು, ಘಟನೆ ವೇಳೆ ಅವರು ಮಂಗಳೂರಿಲ್ಲಿದ್ದರು.

ಘಟನೆ ಕುರಿತು ಬೆಂಗಳೂರಿಗೆ ವಾಪಾಸಾಗುವ ಮೊದಲು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ಧರಾಮಯ್ಯ, “ಒಂದೇ ಮನೆಯ ನಾಲ್ವರು ಅತ್ಮಹತ್ಯೆ ಮಾಡಿರುವ ಘಟನೆ ಬೇಸರ ಮೂಡಿಸಿದೆ. ಎಂಡೋಸಲ್ಫಾನ್ ಪೀಡಿತರಿಗೆ ರಾಜ್ಯ ಸರಕಾರ ಮಾಸಿಕ ಪಿಂಚಣಿ ಸೇರಿದಂತೆ ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ,” ಎಂದರು.

ಎಂಡೋ ಸಂತ್ರಸ್ತರಿಗಿಲ್ಲ ನೆರವಿನ ಹಸ್ತ:

ಒಟ್ಟಾರೆ ರಾಜ್ಯದಲ್ಲಿ 6,000 ಎಂಡೋಸಲ್ಫಾನ್ ಸಂತ್ರಸ್ತರಿದ್ದಾರೆ. ಇದರಲ್ಲಿ ಕೊಕ್ಕಡದಲ್ಲೇ ಸುಮಾರು 350 ಎಂಡೋಸಲ್ಫಾನ್ ಕುಟುಂಬಗಳಿದ್ದು ಶಾಶ್ವತ ಪುನರ್ವಸತಿಗಾಗಿ ಸರಕಾರಕ್ಕೆ ಕಾಲ ಕಾಲಕ್ಕೆ ಮೊರೆ ಇಡುತ್ತಾ ಬಂದಿವೆ. ಆದರೆ ಪುನರ್ವಸತಿಯನ್ನು ಮಾತ್ರ ಯಾವ ಸರಕಾರಗಳೂ ಈವರೆಗೆ ಒದಗಿಸಿಲ್ಲ. ಪ್ರತಿ ಬಾರಿ ಈ ರೀತಿಯ ಘಟನೆಗಳಾದಾಗಲೂ ಸರಕಾರ ನಿದ್ದೆಯಿಂದ ಎದ್ದು ಒಂದಷ್ಟು ಪರಿಹಾರ ನೀಡಿ ಮತ್ತೆ ಮಲಗಿಕೊಳ್ಳುತ್ತದೆ. ಈ ಕುರಿತು ಮೃತರ ಮನೆಯಲ್ಲಿದ್ದ ಎಂಡೋಸಲ್ಫಾನ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ, ಕೊಕ್ಕಡ ನಿವಾಸಿ ಶ್ರೀಧರ ಗೌಡ ಕೆಂಗುಡೇಲು ಹತಾಶರಾಗಿದ್ದರು. “ಇದೇ ರೀತಿ ಆದರೆ, ಮುಂದೆ ಎಲ್ಲಾ  ಕುಟುಂಬಗಳು ಆತ್ಮಹತ್ಯೆಗೆ ಶರಣಾಗಬೇಕಾಗುತ್ತದೆ..,” ಎಂದು ಅವರು ಅಳಲು ತೋಡಿಕೊಂಡರು . ಸ್ವತಃ ಎಂಡೋಸಲ್ಫಾನಿನಿಂದ ದೃಷ್ಟಿ ಕಳೆದುಕೊಂಡಿರುವ ಅವರು ಎಂಡೋ ಸಂತ್ರಸ್ಥರ ಪರವಾಗಿ ಹಲವು ವರ್ಷಗಳಿಂದ ಹೋರಾಡುತ್ತಾ ಬಂದಿದ್ದಾರೆ.

ಕೊಕ್ಕಡದಲ್ಲಿಎಂಡೋಸಲ್ಫಾನ್ ಪೀಡಿತರಿಗಾಗಿ ಇರುವ ತಾತ್ಕಾಲಿಕ ಪರಿಹಾರ ಕೇಂದ್ರ

ಕೊಕ್ಕಡದಲ್ಲಿಎಂಡೋಸಲ್ಫಾನ್ ಪೀಡಿತರಿಗಾಗಿ ಇರುವ ತಾತ್ಕಾಲಿಕ ಪರಿಹಾರ ಕೇಂದ್ರ

ಇನ್ನು ಈ ಎಂಡೋ ಸಂತ್ರಸ್ತರಿಗೆ ಸರಿಯಾದ ಆರೋಗ್ಯ ಸೌಲಭ್ಯಗಳೂ ಸಿಗುತ್ತಿಲ್ಲ ಎಂಬ ದೂರುಗಳೂ ಕೇಳಿ ಬಂದಿವೆ. ಈ ಕುರಿತು ‘ಸಮಾಚಾರ’ದ ಜತೆ ಮಾತನಾಡಿದ ಆರ್ಟಿಐ ಕಾರ್ಯಕರ್ತ ಸಂಜೀವ್ ಕಬಕ, “ಕ್ಯಾನ್ಸರ್ ನಂಥಹ ಮಾರಣಾಂತಿಕ ಖಾಯಿಲೆಗಳಿಗೆ ಸರಕಾರ ಉಚಿತವಾಗಿ ಔಷಧಿಗಳನ್ನು ನೀಡಬೇಕು ಎಂದು ಹೈಕೋರ್ಟ್ ಹೇಳಿದೆ. ಆದರೆ ಅದು ಪಾಲನೆಯಾಗುತ್ತಿಲ್ಲ. ಇನ್ನು ದಕ್ಷಿಣ ಕನ್ನಡದಲ್ಲಿ 207 ಕುಟುಂಬಗಳಲ್ಲಿ ಹಾಸಿಗೆ ಹಿಡಿದ ರೋಗಿಗಳಿದ್ದು, ಅವರಿಗೆ ಮನೆಗೇ ಹೋಗಿ ಚಿಕಿತ್ಸೆ ನೀಡಬೇಕು ಎಂಬ ನಿಯಮಗಳಿವೆ. ಅದನ್ನು ಪಾಲಿಸುತ್ತಿಲ್ಲ. ಸಾಮಾನ್ಯ ಔಷಧಿಗಳನ್ನೆಲ್ಲಾ ವೈದ್ಯ ವಿದ್ಯಾರ್ಥಿಗಳೇ ಬಂದು ವಿತರಿಸಿ ಹೋಗುತ್ತಾರೆ. ವೈದ್ಯರು ನಿಯಮಿತವಾಗಿ ಬರುತ್ತಿಲ್ಲ,” ಎನ್ನುತ್ತಾರೆ. ಇದೇ ರೀತಿ ಹಲವು ಸೌಲಭ್ಯಗಳನ್ನು ನೀಡಬೇಕು ಎಂದು ಸರಕಾರಿ ಆದೇಶವಿದ್ದರೂ, ಯಾವುದೂ ಪಾಲನೆಯಾಗುತ್ತಿಲ್ಲ ಎಂದು ಅವರು ಬೊಟ್ಟು ಮಾಡುತ್ತಾರೆ.

ಈ ಕುರಿತು ಜಿಲ್ಲಾ ವೈಧ್ಯಾಧಿಕಾರಿ ರಾಮಕೃಷ್ಣ ರಾವ್ ಹೇಳುವುದೇ ಬೇರೆ, “ನಾವು ರೋಗಿಗಳ ಚಿಕಿತ್ಸೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದೇವೆ. ಎಲ್ಲಾ ಸಂತ್ರಸ್ತರಿಗೂ ಐಡೆಂಟಿಟಿ ಕಾರ್ಡುಗಳನ್ನು ನೀಡಲಾಗಿದೆ. ಸರಕಾರ ಇಲ್ಲಿನ ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಜತೆ ಟೈ ಅಪ್ ಮಾಡಿಕೊಂಡಿದೆ. ಈ ಐಡಿ ಕಾರ್ಡುಗಳನ್ನು ತೋರಿಸಿದರೆ ಅವರಿಗೆ ಈ ಆಸ್ಪತ್ರೆಗಳಲ್ಲಿ ಎಲ್ಲಾ ಚಿಕಿತ್ಸೆಗಳು ಉಚಿತವಾಗಿ ಸಿಗುತ್ತವೆ. ಇನ್ನೂ ಹಾಸಿಗೆ ಹಿಡಿದ ರೋಗಿಗಳಿಗೆ ಮನೆಗೆ ಹೋಗಿ ಸ್ಟಾಫ್ ನರ್ಸ್ ವಾರಕ್ಕೊಮ್ಮೆ ಚಿಕಿತ್ಸೆ ನೀಡುತ್ತಿದ್ದಾರೆ. ಕೊಕ್ಕಡದಲ್ಲಿರುವ ತಾತ್ಕಾಲಿಕ ಪುನರ್ವಸತಿ ಕೇಂದ್ರಕ್ಕೆ ಸುಮಾರು 40 ಜನ ಬರುತ್ತಾರೆ. ಅಲ್ಲಿಯೇ ಕೆಲವರಿಗೆ ಚಿಕಿತ್ಸೆ ನೀಡಲಾಗುತ್ತದೆ. ಗಂಭೀರ ಸಮಸ್ಯೆಗಳು ಇಲ್ಲದಾಗ ಮಾತ್ರ ಆ ರೀತಿ ವಿದ್ಯಾರ್ಥಿಗಳು ಹೋಗಿ ಔಷಧಿ ನೀಡಿ ಬರುತ್ತಾರೆ ಅಷ್ಟೆ,” ಎಂದು ಮಾಹಿತಿ ನೀಡಿದ್ದಾರೆ. ಇನ್ನು, “ಸಾವಿಗೀಡಾದ ವ್ಯಕ್ತಿಯೂ ಅಷ್ಟೆ, ‘ಬುದ್ಧಿ ಮಾಂದ್ಯತೆ’ಯಿಂದ ಬಳಲುತ್ತಿದ್ದರು. ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲ. 10-15 ವರ್ಷದ ಒಳಗಿನವರಾದರೆ ಸೂಕ್ತ ಚಿಕಿತ್ಸೆ ಮಾಡಿದರೆ ಸರಿ ಹೋಗುವ ಸಾಧ್ಯತೆಗಳಿರುತ್ತವೆ. ಆದರೆ ಆ ವಯಸ್ಸು ದಾಟಿದರೆ ಸಮಸ್ಯೆ ಸರಿ ಹೋಗುವ ಸಾಧ್ಯತೆಗಳಿಲ್ಲ. ಇಲ್ಲಿ ಆರೋಗ್ಯ ಇಲಾಖೆಯ ಸಮಸ್ಯೆ ಏನೂ ಇಲ್ಲ,” ಎನ್ನುತ್ತಾರೆ ಅವರು.

ಪದ್ಮಾವತಿ

ಸಮಸ್ಯೆಯ ನೈಜ ದರ್ಶನ:

ಈ ಚಿತ್ರದಲ್ಲಿರುವಾಕೆ ಪುಷ್ಪಾವತಿ; ಆಕೆಗೀಗ 32ವರ್ಷ. ಪುತ್ತೂರು ತಾಲೂಕಿನ, ಒಳಮೊಗ್ರು ಗ್ರಾಮದ ಚಿಲ್ಮೆತಾರ್ ಮನೆಯಲ್ಲಿ ಈಗ ಈಕೆ ಮಲಗಿದ ಸ್ಥಿತಿಯಲ್ಲೇ ಇದ್ದಾರೆ. ಈಕೆಗೆ ತಂದೆ ಇಲ್ಲ. ಇರುವ ತಾಯಿಯೇ ಹಣ ಹೊಂದಿಸಿ ಖಾಸಗಿಯಾಗಿ ಔಷಧಿಗಳನ್ನು ಕೊಳ್ಳುತ್ತಾರೆ. ಈಕೆಗೆ ಬೇಕಾದ ಔಷಧಿಗಳು ಸರಕಾರದಿಂದ ಸಿಕ್ಕಿಲ್ಲ. “ಒಂದು ವರ್ಷದ ಹಿಂದೆ ಮನೆಗೆ ಸರಕಾರಿ ವೈದ್ಯರು ಬಂದು ಹೋಗಿದ್ದರು. ನೀರಿನ ಹಾಸಿಗೆ ಕೋಡುತ್ತೇವೆಂದು ಹೇಳಿ ಹೋಗಿದ್ದರು. ಆದರೆ ಇಲ್ಲಿವರೆಗೆ ನೀರಿನ ಹಾಸಿಗೆಯನ್ನೂ ನೀಡಿಲ್ಲ. ವೈದ್ಯರೂ ಪತ್ತೆಯಾಗಿಲ್ಲ,” ಎಂದು ಪುಷ್ಪಾವತಿ ತಾಯಿ ಹೇಳುತ್ತಾರೆ

ಅಮಾಯಕರ ಜೀವ ನುಂಗಿದ ಎಂಡೋಸಲ್ಫಾನ್:

ಗೇರು ಅಭಿವೃದ್ಧಿ ನಿಗಮ ತನ್ನ ಅಧೀನದ ಗೇರುತೋಟಗಳಿಗೆ ಸಿಂಪಡಿಸಿದ (ಏರಿಯಲ್ ಸಿಂಪಡಣೆ) ಎಂಡೋಸಲ್ಫಾನ್ ಕೀಟನಾಶಕ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಬೆಳಾಲು, ಬಂದಾರು, ಬಾರ್ಯ, ಇಳಂತಿಲ, ಕರಾಯ, ಕೊಕ್ಕಡ, ಪಟ್ರಮೆ, ನಿಡ್ಲೆ, ಪುತ್ತೂರು ತಾಲ್ಲೂಕಿನ ಗೋಳಿತೊಟ್ಟು, ಹಳೆನೆರಂಕಿ, ರಾಮಕುಂಜ, ಆಲಂಕಾರು, ಕೊಂತೂರು, ಹೀರೇಬಂಡಾಡಿ ಮತ್ತಿತರ ಗ್ರಾಮಗಳಲ್ಲಿ ವಿಷದ ಮಳೆಯಾಗಿ ಪರಿಣಮಿಸಿದ್ದು ಈಗ ಇತಿಹಾಸ. 1980ರಿಂದ 2000ವರೆಗೂ ಪ್ರತಿ ಡಿಸೆಂಬರ್‌ನಲ್ಲಿ ತಲಾ ಎರಡು ಬಾರಿಯಂತೆ ಈ ಸಿಂಪಡಣೆ ನಡೆದಿತ್ತು. ಅದರ ಮಾರಕ ಪರಿಣಾಮಗಳಾದ ಬುದ್ಧಿಮಾಂಧ್ಯತೆ, ಕ್ಯಾನ್ಸರ್, ಬಂಜೆತನ, ಹುಟ್ಟುವಾಗಲೇ ಅಂಗವಿಕಲತೆ ಮುಂತಾದ ಆರೋಗ್ಯ ಸಮಸ್ಯೆಯನ್ನು ಇಲ್ಲಿನ ಕುಟುಂಬಗಳು ಈಗಲೂ ಉಣ್ಣುತ್ತಿವೆ.

ಎಂಡೋಸಲ್ಫಾನ್ ವಿರೋಧಿ ಹೋರಾಟವೊಂದರ ಚಿತ್ರ

ಎಂಡೋಸಲ್ಫಾನ್ ವಿರೋಧಿ ಹೋರಾಟವೊಂದರ ಚಿತ್ರ

ಕೇರಳದ ಕಾಸರಗೋಡಿನ ಗೇರು ಅಭಿವೃದ್ಧಿ ನಿಗಮ ಪ್ರದೇಶದ ನಿವಾಸಿಗಳು ಎಂಡೋಸಲ್ಫಾನ್ ವಿರುದ್ಧ ಪ್ರತಿಭಟನೆಗೆ ಮುಂದಾದ ಸಂದರ್ಭದಲ್ಲಿಯೇ ದಕ್ಷಿಣ ಕನ್ನಡ ಭಾಗದಲ್ಲೂ ಪ್ರತಿಭಟನೆ ಆರಂಭವಾಗಿತ್ತು. ಕೇರಳ ಮಾದರಿಯಲ್ಲಿ ಇಲ್ಲೂ ಶಾಶ್ವತ ಪುನರ್ವಸತಿಗೆ ಒತ್ತಾಯಿಸಿ ಅವರೆಲ್ಲಾ ಪ್ರತಿಭಟನೆ ನಡೆಸಿದ್ದರು. ಒಟ್ಟಾರೆ ರಾಜ್ಯದಲ್ಲಿ 6,000 ಕ್ಕೂ ಹೆಚ್ಚು ಸಂತ್ರಸ್ತರಿದ್ದರೂ, ತನ್ನದೇ ತಪ್ಪಿನ ಬಗ್ಗೆ ರಾಜ್ಯ ಸರಕಾರ ಗಮನ ಹರಿಸಿದ್ದು ತೀರಾ ಕಡಿಮೆ. ಒಂಭತ್ತು ವರ್ಷ ಸತತವಾಗಿ ಜನಪ್ರತಿನಿಧಿಗಳ ಬೆನ್ನುಬಿದ್ದ ಪರಿಣಾಮ 2010ರಲ್ಲಿ ಸರಕಾರ ಕಣ್ಣು ತೆರೆದಿತ್ತು. ಸಮೀಕ್ಷೆ ಮೂಲಕ ಸಂತ್ರಸ್ತ ಕುಟುಂಬಗಳನ್ನು ಗುರುತಿಸಿ ಪರಿಹಾರಧನ ನೀಡುವ ಮೂಲಕ ನೆರವಿನ ಹಸ್ತ ಚಾಚಿತ್ತು.

2011 ಫೆಬ್ರವರಿ 11 ರಂದು ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊಕ್ಕಡಕ್ಕೆ ಭೇಟಿ ನೀಡಿದ್ದರು. ಆಗ ಇಲ್ಲಿನ ಕೊಕ್ಕಡ, ಪಟ್ರಮೆ, ನಿಡ್ಲೆ ಗ್ರಾಮದ 211 ಕುಟುಂಬಗಳಿಗೆ ತಲಾ ಕೇವಲ 50 ಸಾವಿರ  ಪರಿಹಾರಧನ ವಿತರಿಸಲಾಗಿತ್ತು. ಅಂಗವಿಕಲತೆಯ ಪ್ರಮಾಣಕ್ಕೆ ಅನುಗುಣವಾಗಿ 232 ಮಂದಿಗೆ ಮಾಸಾಶನ ವಿತರಿಸಲು ಆದೇಶಿಸಿದ್ದರು.

ಆದರೆ ಸಂತ್ರಸ್ತರಿಗೆ ಪುನರ್ವಸತಿ ಕೇಂದ್ರ ಕಲ್ಪಿಸುವ ಭರವಸೆ ಮಾತ್ರ ಇಂದಿಗೂ ಇನ್ನೂ ಸಾಕಾರಗೊಂಡಿಲ್ಲ.

Leave a comment

Top