An unconventional News Portal.

‘ಹ್ಯಾಪಿ ಬರ್ತ್‌ಡೆ ಡಿಮೋ’: ಕಪ್ಪು ಹಣವನ್ನು ಅನಾಯಾಸವಾಗಿ ಬದಲಿಸಿಕೊಂಡ ಕುಳಗಳ ಕತೆ!

‘ಹ್ಯಾಪಿ ಬರ್ತ್‌ಡೆ ಡಿಮೋ’: ಕಪ್ಪು ಹಣವನ್ನು ಅನಾಯಾಸವಾಗಿ ಬದಲಿಸಿಕೊಂಡ ಕುಳಗಳ ಕತೆ!

ನವೆಂಬರ್ 8, 2016..

ನಾಳೆಗೆ ಸರಿಯಾಗಿ ಒಂದು ವರ್ಷ. ದೇಶದ ಜನಪ್ರಿಯ ಪ್ರಧಾನಿ ನರೇಂದ್ರ ಮೋದಿ ಆರ್ಥಿಕ ವ್ಯವಸ್ಥೆಯ ಬದಲಾವಣೆಗೆ ಮಹತ್ವದ ತೀರ್ಮಾನವೊಂದನ್ನು ತೆಗೆದುಕೊಂಡ ದಿನ. ಚಲಾವಣೆಯಲ್ಲಿದ್ದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಮಾನ್ಯತೆಯನ್ನು ತತಕ್ಷಣದಿಂದಲೇ ರದ್ಧುಗೊಳಿಸಿದರು.

ರಾತ್ರಿ ಎಂಟು ಗಂಟೆ ಸುಮಾರಿಗೆ ಪ್ರಧಾನಿ ಅವರ ಘೋಷಣೆ ಹೊರಬೀಳುತ್ತಿದ್ದಂತೆ ಬೆಂಗಳೂರಿನ ಬಿಲ್ಡರ್‌ ಒಬ್ಬರ ಮನೆಯಲ್ಲಿ ಸಂಚಲನ ಸೃಷ್ಟಿಯಾಯಿತು. ಆ ಹೊತ್ತಿಗೆ ಅವರ ಮನೆಯಲ್ಲಿ ಇದ್ದದ್ದು ಸುಮಾರು 15 ಕೋಟಿ ನಗದು ಹಣ ಮತ್ತು ಅದರಲ್ಲಿ ಬಹುತೇಕ ನೋಟುಗಳು 500 ಹಾಗೂ 1000 ರೂಪಾಯಿ ಮುಖಬೆಲೆಯವು. ಅವರು ತಕ್ಷಣ ಕರೆ ಮಾಡಿದ್ದು ಸಂಪರ್ಕದಲ್ಲಿದ್ದ ಪ್ರಮುಖ ಪಕ್ಷವೊಂದರ ರಾಜ್ಯ ನಾಯಕರಿಗೆ. ಅವರ ಸಹಾಯದಿಂದ ಮಾರನೇ ದಿನ ಬೆಳಗ್ಗೆಯೇ ಸುಮಾರು 5 ಕೋಟಿಯಷ್ಟು ನಗದನ್ನು ಸ್ಯಾಂಕಿ ರಸ್ತೆಯಲ್ಲಿರುವ ರಿಯಲ್‌ ಎಸ್ಟೇಟ್‌ ಕಚೇರಿಗೆ ಕಳುಹಿಸಿದರು.  ಮುಂದಿನ ಒಂದು ವಾರದ ಅಂತರದಲ್ಲಿ ಅವರ ಅಷ್ಟೂ 15 ಕೋಟಿ ನಗದು ಹಣ, ಅದೇ ಸ್ಯಾಂಕಿ ರಸ್ತೆಯ ರಿಯಲ್‌ ಎಸ್ಟೇಟ್‌ ಕಚೇರಿ ಸಹಾಯದಿಂದ ಹೊಸ ನೋಟುಗಳಾಗಿ ಬದಲಾದವು. ಇದಕ್ಕಾಗಿ ಅವರು ಮಧ್ಯವರ್ತಿಗೆ ನೀಡಿದ್ದು 5% ಹಾಗೂ ಪಕ್ಷದ ಫಂಡ್‌ ಎಂದು ನೀಡಿದ್ದು 25% ಕಮಿಷನ್.

‘ಸಮಾಚಾರ’ಕ್ಕೆ ಲಭ್ಯವಾಗಿರುವ ಈ ಖಚಿತ ಮಾಹಿತಿ ಒಬ್ಬ ಶ್ರೀಮಂತ ಉದ್ಯಮಿ ತನ್ನ ಮನೆಯಲ್ಲಿದ್ದ ‘ಕಪ್ಪು ಹಣ’ವನ್ನು ಹೇಗೆ ಬದಲಾಯಿಸಿಕೊಂಡರು ಎಂಬುದಕ್ಕೆ ನಿದರ್ಶನ. ಇವತ್ತಿಗೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ನೀಡಿರುವ ಮಾಹಿತಿ ಪ್ರಕಾರವೇ, ಹಳೇ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಪೈಕಿ ಶೇ. 99ರಷ್ಟು ನೋಟುಗಳು ಬ್ಯಾಂಕ್‌ಗಳಿಗೆ ವಾಪಾಸ್ ಬಂದಿವೆ. ಅಂದರೆ, ಕಪ್ಪು ಹಣ ಇಟ್ಟಲ್ಲೇ ಕೊಳೆತು ಹೋಗುತ್ತದೆ ಎಂಬ ಪರಿಕಲ್ಪನೆ ಹುಸಿಯಾಗಿದೆ.

ನೋಟು ಅಮಾನ್ಯೀಕರಣದಿಂದ ದೇಶದ ಆರ್ಥಿಕ ಸ್ಥಿತಿಯ ಮೇಲೆ ಆಗಿರುವ ಪರಿಣಾಮಗಳೇನು ಎಂಬುದಕ್ಕೆ ಸಾಕಷ್ಟು ಅಂಕಿ ಅಂಶ ಸಾಕ್ಷಿ ಒದಗಿಸುತ್ತಿವೆ. ಉದ್ಯೋಗ ಕಳೆದುಕೊಂಡವರ ಸಂಕಷ್ಟಗಳು ಕಣ್ಣೆದುರಿಗೆ ಇವೆ. ಯಾವ ಕಾರಣಗಳನ್ನು ನೀಡಿ, ಚಲಾವಣೆಯಲ್ಲಿದ್ದ ನೋಟಗಳನ್ನು ನಿಷೇಧ ಮಾಡಲಾಗಿತ್ತೋ, ಆ ಉದ್ದೇಶಗಳು ಹುಸಿಯಾಗಿವೆ. ಆದರೆ, ಇವೆಲ್ಲವನ್ನೂ ಮೀರಿದ್ದು, ನೋಟ್‌ ಬ್ಯಾನ್‌ ಆಗುತ್ತಿದ್ದಂತೆ ನಗದು ಹಣವನ್ನು ಶೇಖರಿಸಿಟ್ಟುಕೊಂಡವರು ಅವುಗಳನ್ನು ಬದಲಾಯಿಸಿಕೊಳ್ಳಲು ಕಂಡುಕೊಂಡ ಅಕ್ರಮ ಮಾರ್ಗಗಳು. ಇವೊಂತರ ಚಾಪೆ- ರಂಗೋಲಿಯ ಕತೆಗಳು.

ಅಕ್ರಮದ ಮಾರ್ಗಗಳು: 

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

ಚಲಾವಣೆಯಲ್ಲಿದ್ದ ನೋಟುಗಳನ್ನು ನಿಷೇಧ ಮಾಡಿ ಹೊಸ ನೋಟುಗಳನ್ನು ನೀಡುತ್ತೀವಿ ಎಂದು ಸರಕಾರ ಘೋಷಣೆ ಮಾಡುತ್ತಲೇ ಭ್ರಷ್ಟಾಚಾರ ಎಂಬುದು ಸಾಮಾನ್ಯರ ಮಟ್ಟಕ್ಕೆ ಇಳಿಯಿತು. “ಅಮ್ಮನ ಹೆಸರಿನಲ್ಲಿ ಕೃಷಿ ಸಾಲ ತೆಗೆಯಲು ಹಳ್ಳಿಯ ಬ್ಯಾಂಕ್‌ ಒಂದರಲ್ಲಿ ಅಕೌಂಟ್‌ ತೆರೆದಿದ್ದೆವು. ನೋಟ್‌ ಬ್ಯಾನ್‌ ಆಗುತ್ತಲೇ ನನ್ನ ಓನರ್ ಐದು ಲಕ್ಷ ಕೊಟ್ಟು ಬ್ಯಾಂಕ್‌ಗೆ ಕಟ್ಟು ಎಂದರು. ಅಮ್ಮನನ್ನು ಕರೆದುಕೊಂಡು ಮೂರು ದಿನಗಳಲ್ಲಿ ಐದು ಲಕ್ಷ ಡೆಪಾಸಿಟ್‌ ಮಾಡಿದೆ. ಅದಕ್ಕೆ ಬದಲಾಗಿ ಹೊಸ ನೋಟ್‌ಗಳನ್ನು ಕಂತುಗಳಲ್ಲಿ ನೀಡಿದರು. ಅದನ್ನು ನನ್ನ ಮಾಲೀಕರಿಗೆ ವಾಪಾಸ್ ಕೊಟ್ಟೆ. ಅವರು ನಮ್ಮ ಬಾಕಿ ಸಾಲ 15 ಸಾವಿರ ತೀರಿಸಿದರು,” ಎಂಬುದು ವಿನಾಯಕನಗರ ಸ್ಲಂನಲ್ಲಿ ವಾಸ ಇರುವ ಯುವಕನೊಬ್ಬನ ಹೇಳಿಕೆ. ಈತ ವಿಲ್ಸನ್‌ ಗಾರ್ಡನ್‌ನ ಅಂಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಕೊಳ್ಳೆಗಾಲ ಸಮೀಪದ ಹಳ್ಳಿಯೊಂದರಲ್ಲಿ ಈತನ ತಾಯಿ ವಾಸವಾಗಿದ್ದಾರೆ.

ಹೀಗೆ, ಸಾಮಾನ್ಯ ಜನರ ಅಕೌಂಟ್‌ ಬಳಸಿಕೊಂಡು ಒಂದಷ್ಟು ಸಣ್ಣ ಪ್ರಮಾಣದ ‘ಕಪ್ಪು ಹಣ’ ಅನಾಯಾಸವಾಗಿ ಹೊಸ ನೋಟುಗಳಾಗಿ ಬದಲಾಯಿತು. ಇನ್ನೊಂದು ಕಡೆ, ದೊಡ್ಡ ಉದ್ಯಮಿಗಳು ತಮಿಳುನಾಡಿನ ಪೆಟ್ರೋಲ್‌ ಬಂಕ್‌ಗಳ, ಗಡಿ ಭಾಗದ ಬ್ಯಾಂಕ್‌ಗಳ ಸಂಪರ್ಕದೊಂದಿಗೆ ಕೋಟಿ ಕೋಟಿ ಹಣವನ್ನು ಬದಲಾಯಿಸಿಕೊಳ್ಳುವ ದಂಧೆಗೆ ಇಳಿದರು. ಇದಕ್ಕೆ ನಿದರ್ಶನ ಬೆಂಗಳೂರಿನಲ್ಲಿ ಬಂಧನಕ್ಕೆ ಒಳಗಾದ ರೌಡಿ ನಾಗರಾಜ್‌ ಪ್ರಕರಣ. ಇವುಗಳ ಜತೆಗೆ, ಒಂದಷ್ಟು ಜನ ಕಮಿಷನ್ ಆಸೆಗೆ ಬಿದ್ದು ಕಪ್ಪು ಹಣವನ್ನು ಬದಲಾಯಿಸಿಕೊಡುತ್ತೀವಿ ಎಂದು ಓಡಾಡತೊಡಗಿದರು. ನೋಡು ನೋಡುತ್ತಿದ್ದಂತೆ ವ್ಯವಸ್ಥೆಯೊಂದು ಭ್ರಷ್ಟಚಾರಕ್ಕೆ, ಹಣದಾಸೆಗೆ ಇನ್ನಷ್ಟು ಕೆಳಮಟ್ಟಕ್ಕೆ ಇಳಿದು ಹೋಯಿತು.

ಒಂದು ಕಡೆಯಲ್ಲಿ ಕಪ್ಪು ಹಣ ಬ್ಯಾಂಕ್‌ಗಳ, ಮದ್ಯವರ್ತಿಗಳ ಸಹಾಯದಿಂದ ಹೊಸ ನೋಟುಗಳಿಗೆ ಬದಲಾಗುತ್ತಿತ್ತು. ಅದೇ ವೇಳೆಯಲ್ಲಿ ಸಾಮಾನ್ಯ ಜನ ಬ್ಯಾಂಕ್‌ಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದರು. ತಮ್ಮ ಬಳಿ ಇದ್ದ ಅಲ್ಪಸ್ವಲ್ಪ ಹಣವನ್ನು ಬದಲಾಯಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಸುಮಾರು 149 ಜನ ಸಾವನ್ನಪ್ಪಿದರು. ದೇಶಾದ್ಯಂತ ‘ಅಘೋಷಿತ ಆರ್ಥಿಕ ತುರ್ತು ಪರಿಸ್ಥಿತಿ’ ನಿರ್ಮಾಣವಾಗಿತ್ತು. ನಗದು ಹಣವನ್ನು ಇಟ್ಟುಕೊಂಡ ಶ್ರೀಮಂತರು ತಮ್ಮ ಸಂಪರ್ಕದ ಮೂಲಕ ಹಳೇ ನೋಟುಗಳನ್ನು ಹೊಸ 2000 ರೂ ಮುಖಬೆಲೆಯ ನೋಟುಗಳನ್ನಾಗಿ ಬದಲಾಯಿಸಿಕೊಳ್ಳುತ್ತಿದ್ದರೆ, ಜನ ಸಾಮಾನ್ಯರ ನಡುವೆ ಕೋಲಾಹಲ ಎದ್ದಿತ್ತು. ತೃಣಮೂಲ ಕಾಂಗ್ರೆಸ್‌, ಎಡ ಹಾಗೂ ಎಎಪಿಯಂತಹ ಪಕ್ಷಗಳು ಬೀದಿಗೆ ಇಳಿದವು.

ಕೌಂಟರ್‌ ನರೇಶನ್‌:

ನೋಟುಗಳ ಅಮಾನ್ಯೀಕರಣ ಘೋಷಣೆಯಾದ ತಕ್ಷಣ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ ಕೂಡ ಉಸಿರೆತ್ತದ ಸ್ಥಿತಿಯಲ್ಲಿತ್ತು. ದೇಶಾದ್ಯಂತ ಹೊಸ ಶಖೆಯೊಂದು ನಿರ್ಮಾಣ ಆಗಿಯೇ ಬಿಟ್ಟಿತು ಎಂದು ಬಿಂಬಿಸುವ ಪ್ರಯತ್ನಗಳು ಶುರುವಾದವು. ಮೋದಿ ಅವರ ಕ್ರಮ, ಅರ್ಥ ವ್ಯವಸ್ಥೆಯ ಕ್ರಾಂತಿ ಎಂದು ಪುಕ್ಕಟೆ ಭಾ‍ಷಣಗಳು ಆರಂಭವಾದವು. ಜನ ಸಾಮಾನ್ಯರ ಸಂಕಷ್ಟಗಳನ್ನು ಮುಂದಿಟ್ಟರೆ, “ಏನ್ರಿ ಇದು, ನಮ್ಮ ಸೈನಿಕರು ದೇಶದ ಗಡಿಯಲ್ಲಿ ಚಳಿಯಲ್ಲಿ ಜೀವದ ಹಂಗು ತೊರೆದು ಕಾವಲು ನಿಂತಿದ್ದಾರೆ. ಇಲ್ಲಿ ದೇಶ ಉದ್ಧಾರಕ್ಕಾಗಿ ನೋಟ್‌ ಬ್ಯಾನ್‌ ಮಾಡಿದ್ರೆ ಬ್ಯಾಂಕ್‌ಗಳ ಮುಂದೆ ಕ್ಯೂ ನಿಲ್ಲೋಕೆ ಆಗಲ್ವಾ?” ಎಂಬ ವಾದಗಳ ಮೂಲಕ ಕೌಂಟರ್‌ ಮಾಡಲಾಯಿತು. ಪಾನೀಪೂರಿ ತಿನ್ನಲು, ಶಾಪಿಂಗ್‌ ಮಾಲ್‌ಗಳ ಡಿಸ್ಕೌಂಟ್‌ ಸೇವೆ ಪಡೆದುಕೊಳ್ಳಲು ಜನ ಸರತಿ ಸಾಲಿನಲ್ಲಿ ನಿಂತ ಚಿತ್ರಗಳನ್ನು ಉಪಯೋಗಿಸಿಕೊಂಡು, “ನೋಡಿ ಜನ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಅದೇ ದೇಶ ಸೇವೆಗಾಗಿ ನಿಲ್ಲಲು ತಯಾರಿಲ್ಲ,” ಎಂದು ವ್ಯಂಗ್ಯವಾಡಲಾಯಿತು.

ಕಪ್ಪು ಹಣ ಅಕ್ರಮದ ಮಾರ್ಗಗಳ ಮೂಲಕ ಸಕ್ರಮಗೊಳ್ಳುತ್ತಿದ್ದ ವೇಳೆಯಲ್ಲಿಯೇ ಹೊರಗೆ ಅಪ್ಪಟ ದೇಶ ಭಕ್ತಿಯ ಮಾತುಗಳನ್ನು ತೂರಿಬಿಡುವ ಕೆಲಸ ನಡೆಯುತ್ತಿತ್ತು. ಹೀಗೆ ಕೌಂಟರ್‌ ನರೇಶನ್‌ಗೆ ಇಳಿದವರ ಮಾತುಗಳು ಉದ್ದೇಶ ಪೂರ್ವಕನಾ? ಪೂರ್ವನಿಯೋಜಿತನಾ? ಇದು ಇವತ್ತಿಗೆ ಕಾಡುವ ಪ್ರಶ್ನೆಗಳು. 

ಕಪ್ಪು ಹಣವನ್ನು ಮಟ್ಟಹಾಕಲು, ಭಯೋತ್ಪಾದನೆಯನ್ನು ತೊಡೆದು ಹಾಕಲು ಹಾಗೂ ಖೋಟಾ ನೋಟುಗಳನ್ನು ನಿರ್ನಾಮ ಮಾಡಲು ನೋಟುಗಳ ಅಮಾನ್ಯೀಕರಣ ಎಂದು ಹೇಳಿಕೊಳ್ಳಲಾಗಿತ್ತು. ಈ ಮೂರು ಪ್ರಮುಖ ಉದ್ದೇಶಗಳು ಈಡೇರಿಲ್ಲ ಎಂಬುದನ್ನು ಗಮನಿಸಬೇಕಿದೆ. ಇದಾದ ನಂತರ, ಕೇಳಿಬಂದಿದ್ದು ಕ್ಯಾಶ್‌ ಲೆಸ್‌ ಇಂಡಿಯಾದ ಮಾತು. ಅದೂ ಕೂಡ ಮೇಲ್ಮಟ್ಟದ ಗ್ರಹಿಕೆ.

ಅಸಲಿ ಪ್ರಶ್ನೆ: 

ಸರಿಯಾಗಿ ಒಂದು ವರ್ಷದ ನಂತರ ಕಾಡುತ್ತಿರುವ ಪ್ರಶ್ನೆ; ಇಷ್ಟಕ್ಕೂ ಡಿಮಾನಟೈಸೇಶನ್‌ ಘೋಷಣೆ ಯಾಕಾಯ್ತು? ಎಂಬುದು.

ನೋಟು ಅಮಾನ್ಯೀಕರಣದ ಸಮಯದಲ್ಲಿ ಸರಕಾರ ಸಾರ್ವಜನಿಕವಾಗಿ ಹೇಳಿಕೊಂಡು ಉದ್ದೇಶಗಳು ಈಡೇರಿಲ್ಲ. ಅದಕ್ಕೆ ಕಾರಣ, ಯೋಜನೆಯೊಂದರ ಅನುಷ್ಠಾನದಲ್ಲಾದ ಸಮಸ್ಯೆ ಎಂದುಕೊಳ್ಳಬಹುದು. ಅದನ್ನು ಪಕ್ಕಕ್ಕಿಟ್ಟು, ನೋಟುಗಳ ಅಮಾನ್ಯೀಕರಣದಿಂದ ಯಾರಿಗೆ ಲಾಭವಾಗಿ? ಯಾರಿಗೆ ನಷ್ಟವಾಗಿದೆ? ಎಂಬುದನ್ನು ನೋಡಿದರೆ ಪ್ರಶ್ನೆಗೆ ನಿಚ್ಚಳ ಉತ್ತರವೊಂದು ದೊರಕುತ್ತದೆ.

ನಷ್ಟವಾಗಿರುವುದು ದೇಶದ ಸಾಮಾನ್ಯ ಜನರಿಗೆ. ಲಾಭಗಳಾಗಿರುವುದು ಬೃಹತ್ ಕಾರ್ಪೊರೇಟ್‌ ಕಂಪನಿಗಳಿಗೆ. ನೋಟ್‌ ಬ್ಯಾನ್‌ ನಂತರದ ಆರ್ಥಿಕ ವರ್ಷದಲ್ಲಿ ರಿಲಯನ್ಸ್‌ ಕಂಪನಿ ಲಾಭವನ್ನು ಘೋಷಣೆ ಮಾಡಿಕೊಂಡಿದೆ. ಪೇಟಿಎಂನಂತಹ ಕಂಪನಿಗಳು ಹಿಂದೆಂದೂ ಕಾಣದ ವಹಿವಾಟನ್ನು ಕಾಣುವಂತಾಗಿದೆ. ಹೀಗಾಗಿ, ಉದ್ದೇಶಗಳ ಸಫಲತೆ ಮತ್ತು ವಿಫಲತೆಯ ಚರ್ಚೆಯ ಆಚೆಗೆ, ಸರಕಾರದ ಕ್ರಮ ಯಾರಿಗೆ ನಷ್ಟವನ್ನು ಉಂಟುಮಾಡಿತು ಮತ್ತು ಯಾರಿಗೆ ಲಾಭ ತಂದುಕೊಟ್ಟಿತು ಎಂಬುದನ್ನು ಗಮನಿಸಿದರೆ ನೋಟ್‌ ಬ್ಯಾನ್‌ನಂತಹ ಯೋಜನೆಯ ಹಿಂದಿರುವ ಉದ್ದೇಶ ಏನಿರಬಹುದು ಎಂಬುದು ನಿಚ್ಚಳವಾಗುತ್ತದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಾಗಿಲ್ಲ ಕೂಡ.

Leave a comment

FOOT PRINT

Top