An unconventional News Portal.

‘ಪ್ಯಾರಡೈಸ್‌ ಪೇಪರ್ಸ್‌’: ಭಾರಿ ಕುಳಗಳ ಅವ್ಯವಹಾರದ ಮಾಹಿತಿ ಬಿಚ್ಚಿಟ್ಟ ತನಿಖೆ ಒಳಗೆ ಏನೇನಿದೆ?

‘ಪ್ಯಾರಡೈಸ್‌ ಪೇಪರ್ಸ್‌’: ಭಾರಿ ಕುಳಗಳ ಅವ್ಯವಹಾರದ ಮಾಹಿತಿ ಬಿಚ್ಚಿಟ್ಟ ತನಿಖೆ ಒಳಗೆ ಏನೇನಿದೆ?

‘ತೆರಿಗೆದಾರರ ಸ್ವರ್ಗ’ ಎಂದು ಕರೆಸಿಕೊಳ್ಳುವ ದ್ವೀಪ ರಾಷ್ಟ್ರಗಳಲ್ಲಿ ಹಣಕಾಸಿನ ಅವ್ಯವಹಾರಕ್ಕಿಳಿದ ಇನ್ನಷ್ಟು ಕುಳಗಳ ಮಾಹಿತಿಯನ್ನು ‘ಪ್ಯಾರಡೈಸ್ ಪೇಪರ್ಸ್‌’ ಹೊರಹಾಕಿವೆ.

ಕಳೆದ ವರ್ಷ ‘ಪನಾಮಾ ಪೇಪರ್ಸ್‌’ ಹೆಸರಿನಲ್ಲಿ ಬೇನಾಮಿ ಕಂಪನಿಗಳನ್ನು ಸೃಷ್ಟಿಸಿ ಹಣ ಹೂಡಿಕೆ ಮಾಡುವ ಮೂಲಕ ತೆರಿಗೆ ವಂಚನೆಗೆ ಮುಂದಾಗಿದ್ದ ಕಂಪನಿಗಳು ಹಾಗೂ ಶ್ರೀಮಂತರ ಹೆಸರುಗಳನ್ನು ‘ಅಂತರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ’ (ಐಸಿಐಜೆ) ಹೊರಹಾಕಿತ್ತು.

ಪಾಕಿಸ್ತಾನ ಮಾಜಿ ಪ್ರಧಾನಿ ನವಾಝ್‌ ಷರೀಪ್‌ ಪದಚ್ಯುತಿಗೊಂಡು ಜೈಲು ಪಾಲಾಗಲು ಇದು ಕಾರಣವಾಗಿತ್ತು. ಹಲವು ದೇಶಗಳಲ್ಲಿ ಪನಾಮ ಪೇಪರ್ಸ್‌ಗಳಿಂದ ಹೊರಬಿದ್ದ ಮಾಹಿತಿ ಅಲ್ಲಿನ ರಾಜಕೀಯ ಬದಲಾವಣೆಗೆ ನಾಂದಿ ಹಾಡಿತ್ತು. ಅದೇ ವೇಳೆ, ಭಾರತದ ಉದ್ಯಮಿಗಳು, ಚಿತ್ರರಂಗದ ಗಣ್ಯರು ಸೇರಿದಂತೆ ಹಲವು ಪ್ರಮುಖರ ಅನುಮಾನಾಸ್ಪದ ವ್ಯವಹಾರಗಳು ಬಯಲಿಗೆ ಬಂದಿದ್ದವು. ಕೇಂದ್ರ ಸರಕಾರ ಈ ಕುರಿತು ತನಿಖೆಗೆ ‘ವಿಶೇಷ ತನಿಖಾ ತಂಡ’ವೊಂದನ್ನು ರಚಿಸಿ ಕೈತೊಳೆದುಕೊಂಡಿತ್ತು.

ಇದೀಗ, ಮತ್ತೆ ಐಸಿಐಜೆ ‘ಪ್ಯಾರಡೈಸ್‌ ಪೇಪರ್ಸ್‌’ ಹೆಸರಿನಲ್ಲಿ ಆಪಲ್‌ಬೇ ಎಂಬ ಮಾರಿಷಿಯಸ್‌ ಮೂಲದ ಕಾನೂನು ಸಲಹಾ ಕಂಪನಿಯ ದಾಖಲೆಗಳನ್ನು ಜನರ ಮುಂದಿಟ್ಟಿವೆ. ಸದ್ಯ ಬಿಡುಗಡೆ ಮಾಡಿರುವ ಹಾಗೂ ಮುಂದಿನ ಒಂದು ವಾರಗಳ ಕಾಲ ಬಿಡುಗಡೆಯಾಗಲಿರುವ ಸುಮಾರು 13.4 ಮಿಲಿಯನ್‌ ದಾಖಲೆಗಳಲ್ಲಿ, 6.8 ಮಿಲಿಯನ್‌ ದಾಖಲೆಗಳು ಆಪಲ್‌ಬೇ ಕಾನೂನು ಸಲಹಾ ಸಂಸ್ಥೆಗೆ ಸೇರಿವೆ.

1950ರಿಂದ 2016ರ ನಡುವೆ ನಡೆದ ವ್ಯವಹಾರಗಳ ಮಾಹಿತಿ ಈ ದಾಖಲೆಗಳಲ್ಲಿ ಲಭ್ಯವಾಗುತ್ತಿದೆ. ಆಂಟಿಗುವಾ, ಬರ್ಬುದಾ, ಅರುಬಾ, ಬಹಾಮಾ, ಬರ್ಬಾದೋಸ್‌, ಬರ್ಮುಡಾ, ಕೇಮ್ಯಾನ್‌ ಐಲ್ಯಾಂಡ್‌, ಕುಕ್ ಐಲ್ಯಾಂಡ್‌, ಡೊಮಿನಿಕ್ ಗ್ರೆನಾಡಾ, ಲಾಬೌನ್‌, ಲೆಬೆನಾನ್‌, ಮಾಲ್ಟಾ, ಮಾರ್ಶಲ್ ಐಲ್ಯಾಂಡ್‌, ಸೈಂಟ್ ಕಿಟ್ಸ್‌ ಮತ್ತು ನೆವೀಸ್‌, ಸೈಂಟ್‌ ಲೂಸಿಯಾ, ಸೈಂಟ್ ವಿನ್ಸೆಂಟ್‌, ಸಮೋಆ, ಟ್ರಿನಿಡಾಡ್‌, ಟಾಬಾಗೋ ಹಾಗೂ ವ್ಯಾನೌಟು ಕಡೆಗಳಲ್ಲಿ ಗೌಪ್ಯವಾಗಿ ನೋಂದಣಿಗೊಂಡ ಸುಮಾರು 19 ಕಾರ್ಪೊರೇಟ್‌ ರಿಜಿಸ್ಟ್ರಿಗಳ ಮಾಹಿತಿಯೂ ಇದರಲ್ಲಿ ಸಿಗುತ್ತಿದೆ.

ದಿ ಗಾರ್ಡಿಯನ್‌ ಸೇರಿದಂತೆ 67 ದೇಶಗಳ 96 ಮಾಧ್ಯಮ ಸಂಸ್ಥೆಗಳು ಹಾಗೂ 381 ಪತ್ರಕರ್ತರು ಕೋಟ್ಯಾಂತರ ದಾಖಲೆಗಳನ್ನು ಪರಿಷ್ಕರಿಸಿ ಮಾಹಿತಿಯನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಇವರೆಲ್ಲರಿಗೂ ಐಸಿಐಜೆ ವೇದಿಕೆ ಒದಗಿಸಿದೆ.

ಕಳೆದ ವರ್ಷ ಹೊರಬಿದ್ದ ‘ಪನಾಮ ಪೇಪರ್ಸ್‌’ ಮೊಸಾಕ್ ಫೋನ್ಸೆಕಾ ಎಂಬ ಕಾನೂನು ಸಲಹಾ ಕಂಪನಿಯ ದಾಖಲೆಗಳಾಗಿದ್ದವು. ಇವು ಮೊದಲ ಜರ್ಮನ್‌ ಮೂಲದ ಪತ್ರಿಕೆಯೊಂದಕ್ಕೆ ಲಭ್ಯವಾಗಿದ್ದವು. ಅವುಗಳನ್ನು ಪತ್ರಿಕೆ, ಐಸಿಐಜೆ ಜತೆ ಹಂಚಿಕೊಂಡಿತ್ತು. ಇದೀಗ ಬಿಡುಗಡೆಯಾಗಿರುವ ‘ಪ್ಯಾರಡೈಸ್‌ ಪೇಪರ್ಸ್‌’ ಒಟ್ಟು ಒಟ್ಟು 1.4 ಟಿಬಿಯಷ್ಟು ದಾಖಲೆಗಳ ಸಂಗ್ರಹವಾಗಿದ್ದು, ಈವರೆಗೆ ಬಿಡುಗಡೆಗೊಂಡ ದಾಖಲೆಗಳ ಗಾತ್ರದಲ್ಲಿ ಅತಿ ದೊಡ್ಡ ಮಾಹಿತಿ ಗುಚ್ಚ ಎನ್ನಿಸಿಕೊಂಡಿದೆ.

ಪನಾಮಾ ಪೇಪರ್ಸ್‌ ಹಾಗೂ ಪ್ಯಾರಡೈಸ್‌ ಪೇಪರ್ಸ್‌ಗಳ ನಡುವೆ ಇರುವ ಸಾಮ್ಯತೆ ಎಂದರೆ, ಎರಡೂ ಕೂಡ ಹಣದ ಸುತ್ತಲೇ ತನಿಖೆಗೆ ಒಳಪಟ್ಟ ಮಾಹಿತಿ ಆಗಿದೆ. ಜತೆಗೆ, ಬಹುರಾಷ್ಟ್ರೀಯ ಕಂಪನಿಗಳಿಂದ ಹಿಡಿದು, ಜಗತ್ತಿನ ಪವರ್‌ಫುಲ್‌ ರಾಜಕಾರಣಿಗಳವರೆಗೆ, ರಾಜಮನೆತನಗಳಿಂದ ಹಿಡಿದು ಸೆಲೆಬ್ರಿಟಿ ಉದ್ಯಮಿಗಳವರೆಗೆ ನಡೆಸಿದ ಹಣದ ಅವ್ಯವಹಾರದ ಮಾಹಿತಿಯನ್ನು ಈ ತನಿಖೆಗಳು ಜನರ ಮುಂದಿಟ್ಟಿವೆ. ಇವತ್ತಿನ ಪ್ಯಾರಡೈಸ್‌ ಪೇಪರ್ಸ್‌, ಕಳೆದ ವರ್ಷ ಹೊರಬಿದ್ದ ಪನಾಮ ಪೇಪರ್ಸ್‌ಗಳ ಮುಂದುವರಿ ಭಾಗ ಎನ್ನಬಹುದು.

ಸ್ವರ್ಗದ ಪೇಪರ್‌ಗಳಲ್ಲಿ ಭಾರತೀಯರು: 

ಇದೀಗ ಬಿಡುಗಡೆಯಾಗುತ್ತಿರುವ ‘ಪ್ಯಾರಡೈಸ್‌ ಪೇಪರ್ಸ್‌’ಗಳಲ್ಲಿ ಸುಮಾರು 180 ದೇಶಗಳ ರಾಜಕಾರಣಿಗಳು, ಉದ್ಯಮಿಗಳು, ಸೆಲೆಬ್ರಿಟಿಗಳು, ಅಧಿಕಾರದ ಕೇಂದ್ರದ ಸುತ್ತಮುತ್ತಲಿನ ಒಡನಾಡಿಗಳ ಹೆಸರುಗಳಿವೆ. ಪಟ್ಟಿಯಲ್ಲಿ 714 ಭಾರತೀಯರ ಹೆಸರುಗಳಿವೆ. ಹೀಗಾಗಿ ದೇಶ ತೆರಿಗೆದಾರರ ಸ್ವರ್ಗದಲ್ಲಿ ಅವ್ಯವಹಾರ ನಡೆಸಿದ ಪಟ್ಟಿಯಲ್ಲಿ 19ನೇ ಸ್ಥಾನವನ್ನು ಪಡೆದುಕೊಂಡಿದೆ.

ಕೇಂದ್ರ ಸರಕಾರ ಕಪ್ಪುಹಣದ ವಿರುದ್ಧ ಸಮರದ ಹೆಸರಿನಲ್ಲಿ ಚಲಾವಣೆಯಲ್ಲಿದ್ದ 500ರೂ ಹಾಗೂ 1000ರೂ ಮುಖಬೆಲೆಯ ನೋಟುಗಳ ನಿಷೇಧ ಘೋಷಿಸಿ ನ. 8ಕ್ಕೆ ಒಂದು ವರ್ಷ ತುಂಬುತ್ತಿದೆ. ಇನ್ನೂ ಪರಿಣಾಮಗಳ ರೂಪದಲ್ಲಿ ಜೀವಂತವಾಗಿರುವ ಡಿಮಾನಟೈಸೇಶನ್‌ಗೆ ವರ್ಷ ತುಂಬುತ್ತಿರುವ ವೇಳೆಯಲ್ಲಿಯೇ ಪ್ಯಾರಡೈಸ್‌ ಪೇಪರ್ಸ್‌ 714 ಭಾರತೀಯರ ಹೆಸರುಗಳನ್ನು ಹೊರಹಾಕಿದೆ. ಇವರ ಮೇಲೆ ‘ಕಪ್ಪು ಹಣ’ ವ್ಯವಹಾರದ ಆರೋಪಗಳನ್ನು ದಾಖಲೆಗಳು ಮಾಡುತ್ತಿವೆ.

‘2ಜಿ ತರಂಗ ಹಂಚಿಕೆ ಅವ್ಯವಹಾರದಲ್ಲಿ ಸಿಬಿಐನ ಗೌಪ್ಯ ದಾಖಲೆಗಳು ತೆರಿಗೆದಾರರ ಸ್ವರ್ಗದಲ್ಲಿ ನೆಲೆಸಿದ ಕಾನೂನು ಸಲಹಾ ಕಂಪನಿಯ ಕೈ ಸೇರಿವೆ. ಕಾರ್ಪೊರೇಟ್‌ ಕುಳ ಜತೆಗೆ ಅಮಿತಾಬ್‌ ಬಚ್ಚನ್‌, ನೀರಾ ರಾಡಿಯಾ, ನಟ ಸಂಜಯ್‌ ದತ್‌ ಪತ್ನಿ ದಿಲ್‌ನಶೀನ್‌, ಕೇಂದ್ರ ಸಚಿವ ಜಯಂತ್‌ ಸಿನ್ಹಾ, ರಾಜ್ಯಸಭಾ ಸದಸ್ಯ ಆರ್‌. ಕೆ. ಸಿನ್ಹಾ ಮತ್ತಿತರರ ಹೆಸರುಗಳನ್ನು ಈ ಸೋರಿಕೆ ಒಳಗೊಂಡಿವೆ’ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆ ವರದಿ ಮಾಡಿದೆ.

ಕರ್ನಾಟಕ ಮೂಲದ ಮಾಜಿ ಕೇಂದ್ರ ಸಚಿವ ವೀರಪ್ಪ ಮೋಯ್ಲಿ ಪುತ್ರ ಹರ್ಷಾ ಮೋಯ್ಲಿ ಅವರ ಹೆಸರನ್ನು ‘ಪ್ಯಾರಡೈಸ್‌ ಪೇಪರ್ಸ್‌’ ಒಳಗೊಂಡಿದೆ. ಹರ್ಷಾ ಮೋಯ್ಲಿ ಇತ್ತೀಚೆಗೆ ಅಷ್ಟೆ ‘ದಿ ಸ್ಟೇಟ್‌ ಡಾಟ್ ನ್ಯೂಸ್‌’ ಹೆಸರಿನ ಪೋರ್ಟಲ್‌ ಮೂಲಕ ಕನ್ನಡ ಡಿಜಿಟಲ್ ಮಾಧ್ಯಮ ಲೋಕಕ್ಕೆ ಕಾಲಿಟ್ಟಿದ್ದಾರೆ.

Leave a comment

FOOT PRINT

Top