An unconventional News Portal.

ಮಂಜುನಾಥನ ಹೆಸರಿನಲ್ಲಿ ‘ರಿಯಲ್‌ ಎಸ್ಟೇಟ್’: ಹೆಗ್ಗಡೆ ಕುಟುಂಬದ ಭೂದಾಹದ ಕತೆಗಳು!

ಮಂಜುನಾಥನ ಹೆಸರಿನಲ್ಲಿ ‘ರಿಯಲ್‌ ಎಸ್ಟೇಟ್’: ಹೆಗ್ಗಡೆ ಕುಟುಂಬದ ಭೂದಾಹದ ಕತೆಗಳು!

ನಾವು ಹೇಳಲು ಹೊರಟಿರುವ ಕತೆ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದಿಂದ ಸುಮಾರು 8 ಕಿ. ಮೀ ದೂರದಲ್ಲಿರುವ ಸಣ್ಣ ಊರಿನದ್ದು; ಹೆಸರು ನೀರಚಿಲುಮೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಶೈಕ್ಷಣಿಕ ಸಾಮ್ರಾಜ್ಯ ಹರಡಿಕೊಂಡಿರುವ ಉಜಿರೆಗೆ ಹೊಂದಿಗೊಂಡ ಸಣ್ಣ ಪ್ರದೇಶವಿದು. ಇಲ್ಲೊಂದು ಜಮೀನು; ಆ ಜಮೀನಿನಲ್ಲಿ ಈಗಲೂ ಇಬ್ರಾಹಿಂ ತಮ್ಮ ಪತ್ನಿ ರಶೀದಾ ಮತ್ತು ಇಬ್ಬರು ಮಕ್ಕಳೊಂದಿಗೆ ಪುಟ್ಟ ಮನೆಯೊಂದರಲ್ಲಿ ವಾಸವಿದ್ದಾರೆ. ಇಬ್ರಾಹಿಂ ಸಣ್ಣ ವ್ಯಾಪಾರಿ; ಕರಾವಳಿಯ ಬೇಸಿಗೆಯ ಬೇಗೆಯಲ್ಲಿ  ಸೈಕಲ್ ಮೇಲೆ ಐಸ್ ಕ್ಯಾಂಡಿ ಡಬ್ಬ ಇಟ್ಟು ಊರೂರು ತಿರುಗಿ, ತಣ್ಣನೆಯ ಕುಲ್ಫಿಗಳನ್ನು ಮಾರುವುದು ಇವರ ಕಸುಬು.

ಈ ಘಟನೆ ನಡೆದಿದ್ದು 2010ರಲ್ಲಿ. ಉಜಿರೆ ಸುತ್ತ ಮುತ್ತಾ ಒಂದೊಂದೇ ಜಮೀನುಗಳನ್ನು ಕಬ್ಜ ಮಾಡಿಕೊಂಡು ಶಾಲೆ, ಕಾಲೇಜು, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಕಟ್ಟುತ್ತಾ ಬಂದ ಧರ್ಮಸ್ಥಳ ಸಂಸ್ಥಾನದವರ ಕಣ್ಣಿಗೆ ಇಬ್ರಾಹಿಂ ಮನೆ ಮತ್ತು ಅದರ ಪಕ್ಕದ ಜಾಗ ಕಾಣಿಸಿತುಇವರ ಮನೆ ಸುತ್ತ ಮುತ್ತಲಿನ ಜಮೀನುಗಳನ್ನೆಲ್ಲಾ ಖರೀದಿ ಮಾಡುವ ಸಮಯದಲ್ಲಿಯೇ ಇಬ್ರಾಹಿಂ ಇದ್ದ ಮನೆಯ ಜಾಗವನ್ನೂ ಕೇಳಿದರು; ಆದರೆ ಅವರು ಕೊಡಲು ಸಿದ್ಧರಿರಲಿಲ್ಲ. ಸುತ್ತ ಮುತ್ತಲಿನ ಜಮೀನಗಳನ್ನು ವಶ ಮಾಡಿಕೊಂಡು, ಕೊನೆಗೆ “ನಿಮ್ಮ ಜಾಗವನ್ನೂ 2 ಲಕ್ಷ ರೂಪಾಯಿಗೆ ಕೊಡಬೇಕು,” ಎಂದು ಇಬ್ರಾಹಿಂಗೆ ಗದರಿಸಿದರು. “ನಿಮ್ಮ ಮನೆಗೆ ಹೋಗಲು ದಾರಿಯೂ ಇರುವುದಿಲ್ಲ ಏನು ಮಾಡುತ್ತೀರೋ ನೋಡುತ್ತೇವೆ,” ಎಂಬ ಬೆದರಿಕೆಯೂ ಬೆನ್ನಿಗೆ ಕೇಳಿ ಬಂತು.

ನಮ್ಮ ಮನೆ ಪಕ್ಕದಲ್ಲಿ ನಮ್ಮ ಮಾವನವರ ಜಾಗ ಇತ್ತು. ಅದರಲ್ಲಿ 35 ಸೆಂಟ್ಸ್ ಜಾಗವನ್ನು ಕೇರಳದವರಿಗೆ ಅವರು ಹಿಂದೆಯೇ ಮಾರಿದ್ದರು. ಮತ್ತೆ 11 ಸೆಂಟ್ಸ್ ಉಳಿದಿತ್ತು. ಧರ್ಮಸ್ಥಳದವರು ಬಂದಾಗ ಅವರೆಲ್ಲಾ ಜಾಗ ಕೊಟ್ಟು ಹೊರಟು ಹೋದರು. ಕೊನೆಗೆ ಉಳಿದಿದ್ದು ನಮ್ಮದು ಮಾತ್ರ,” ಎಂದು ಅವತ್ತಿನ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ಇಬ್ರಾಹಿಂ ಪತ್ನಿ ರಶೀದಾ.

ನೀರಚಿಲುಮೆಯಲ್ಲಿರುವ ಇಬ್ರಾಹಿಂ-ರಶೀದಾ ದಂಪತಿಯವರ ಮನೆ

ನೀರಚಿಲುಮೆಯಲ್ಲಿರುವ ಇಬ್ರಾಹಿಂ-ರಶೀದಾ ದಂಪತಿಯವರ ಮನೆ

ಇಬ್ರಾಹಿಂ ಜಾಗ ಕೊಡಲು ಒಪ್ಪದಿದ್ದಾಗ ಅವರ ಮನೆಗೆ ಹೋಗಲು ಇದ್ದ ಏಕೈಕ ರಸ್ತೆಗೆ ಒಂದು ಬೆಳಿಗ್ಗೆ “ಇದು ಶ್ರೀ ಕ್ಷೇತ್ರ ಧರ್ಮಸ್ಥಳದ ಶಿಕ್ಷಣ ಸಂಸ್ಥೆಗೆ ಸೇರಿದ ಜಮೀನಿಗೆ ಹೋಗಲು ಇರುವ ಖಾಸಗಿ ರಸ್ತೆ,” ಎಂಬ ಬೋರ್ಡು ಬಂದು ಬಿತ್ತು. “ಅವತ್ತು ದಾರಿ ಬದಿಗೆ ಪೂರ್ತಿ ಬೇಲಿ ಹಾಕಿದ್ದರು, ಆದರೆ ನಾನು ಬೇಲಿ ಮುರಿದು ಗಟ್ಟಿಯಾಗಿ ನಿಂತು ಬಿಟ್ಟೆ. ನಮ್ಮನ್ನು ಹೋಗಿ ಎಂದರೆ ನಾವೆಲ್ಲಿಗೆ ಹೋಗುವುದು,” ಎಂದು ಅವತ್ತು ನಡೆದಿದ್ದನ್ನು ವಿವರಿಸಿದರು ರಶೀದಾ.

ದಾರಿ ಬಂದ್ ಮಾಡಿದರೆ ಜಾಗ ಬಿಟ್ಟು ಹೋಗಿಯೇ ಹೋಗುತ್ತಾರೆ ಎಂಬ ಹುನ್ನಾರ ಹೆಗ್ಗಡೆ ಸಂಸ್ಥಾನದವರದಾಗಿತ್ತು. ಆದರೆ ಇಬ್ರಾಹಿಂಗೆ ಬೇರೆ ದಾರಿ ಇರಲಿಲ್ಲ. ಅವರೇನು ಹೆಲಿಕಾಪ್ಟರ್ ತಂದು ನೇರ ತಮ್ಮ ಜಾಗಕ್ಕೆ ಇಳಿಯುವಷ್ಟು ಶ್ರೀಮಂತರಲ್ಲ. ಹಾಗೆಂದು ಹೇಳಿದ ಜುಜುಬಿ ಬೆಲೆಗೆ ತಮ್ಮ ಜಾಗ ಮಾರಿ ಹೋಗಲು ಅವರಿಗೆ ಬೇರಾವ ಸೈಟು ಮನೆಗಳೂ ಇರಲಿಲ್ಲ. ಕೊನೆಗೆ ಇಬ್ರಾಹಿಂ ಹೆಂಡತಿ ರಶೀದಾ ಪೊಲೀಸ್ ಠಾಣೆಗೆ ದೂರು ನೀಡಿದರು. ಹಲವು ಸಾರ್ವಜನಿಕ ಸಂಘಟನೆಗಳು ಅವರ ಬೆಂಬಲಕ್ಕೆ ನಿಂತಿದ್ದರಿಂದ ದಬ್ಬಾಳಿಕೆಯಲ್ಲಿ  ಜಮೀನನ್ನು ವಶಕ್ಕೆ ಪಡೆಯುವ ಧರ್ಮಸ್ಥಳದವರ ಕನಸು ನನಸಾಗಲಿಲ್ಲ.

ಅವತ್ತು ನಾವು ಪೊಲೀಸ್ ದೂರು ಕೊಟ್ಟು ಗಟ್ಟಿಯಾಗಿ ನಿಂತಿದ್ದರಿಂದ ನಮ್ಮ ಮನೆ ಉಳಿದುಕೊಂಡಿತು. ನಮ್ಮ ಐದು ಸೆಂಟ್ಸ್ ಮನೆಯ ಜಾಗವೂ ಕೂಡ,” ಎಂದು ಹೇಳುತ್ತಾರೆ ರಶೀದಾ.

ಇದು ಹೋರಾಡಿ ತಮ್ಮ ಜಮೀನು ಉಳಿಸಿಕೊಂಡ ಕುಟುಂಬವೊಂದರ ಯಶಸ್ಸಿನ ಕತೆ ಅಷ್ಟೆ. ಹಾಗೆ ನೋಡಿದರೆ ಇದನ್ನೂ ಮೀರಿಸುವ ಪ್ರಕರಣಗಳು ಈ ಭಾಗದಲ್ಲಿ ಕಾಣಸಿಗುತ್ತವೆ; ದಾಖಲೆಗಳು ಲಭ್ಯ ಇವೆ. ಕೊನೆಯ ಕ್ಷಣದವರೆಗೂ ಬಡಿದಾಡಿ ಜಮೀನು ಕಳೆದುಕೊಂಡವರು ಇದ್ದಾರೆ. ಕಣ್ಣೀರು ಹಾಕಿ ತಮ್ಮ ಜಮೀನನ್ನು ಡಾಡಿ. ವೀರೇಂದ್ರ ಹೆಗ್ಗಡೆಯವರ ಕೈಗಿತ್ತವರು ಹಲವು ಜನರಿದ್ದಾರೆ.

ಧಾರ್ಮಿಕ ಭಾವನೆ ಹೊಂದಿರುವ ಭಕ್ತರ ಸಮೂಹ, ಸಾಮಾಜಿಕ ಕೆಲಸಗಳ ಹೆಸರಿನಲ್ಲಿ ಗಳಿಸಿರುವ ಕೀರ್ತಿ, ಅಧಿಕಾರ ಕೇಂದ್ರದೊಂದಿಗೆ ಒಡನಾಟ, ಆರ್ಥಿಕವಾಗಿಯೂ ಬೆಟ್ಟದೆತ್ತರ ಬೆಳೆದು ನಿಂತ ಸಂಸ್ಥೆಯ ಮುಂದೆ ನಮ್ಮಿಂದ ಹೋರಾಡಲು ಸಾಧ್ಯವಿಲ್ಲ ಎಂದು ಬಾಯಿ ಮುಚ್ಚಿಕೊಂಡು ತಮ್ಮ ಮನೆಮಠವಿದ್ದ ಜಾಗವನ್ನು ಮಾರಿದವರ ಸಂಖ್ಯೆಯೂ ದೊಡ್ಡದಿದೆ.

ಡಾ. ಡಿ ವೀರೇಂದ್ರ ಹೆಗ್ಗಡೆಯವರ ‘ಶ್ರೀ ಕ್ಷೇತ್ರ ಧರ್ಮಸ್ಥಳ’ ಸಂಸ್ಥೆಗಳ ಭೂ ದಾಹ ಹೇಗಿದೆ ಎಂಬುದಕ್ಕೆ ಇದೊಂದು ಸಣ್ಣ ನಿದರ್ಶನ ಮಾತ್ರ. ಈವರೆಗೆ ಧರ್ಮಸ್ಥಳ ಸಂಸ್ಥಾನದ ಕಡೆಯಿಂದ ಖಾಸಗಿ ಭೂಮಿಯ ಖರೀದಿಗಳು ನಡೆದ ಕತೆಗಳದ್ದು ಒಂದು ತೂಕವಾದರೆ, ಸರಕಾರಿ ಭೂಮಿಯನ್ನು ಪಡೆದುಕೊಂಡ ಕತೆಗಳದ್ದು ಇನ್ನೊಂದು ತೂಕ. 

ತಾನು ‘ಭೂರಹಿತ, ಬಡವ’ ಎಂದು ಹೇಳಿ ವೀರೇಂದ್ರ ಹೆಗ್ಗಡೆಯವರ ಸ್ವಂತ ತಮ್ಮ, ಇವತ್ತಿನ ಧರ್ಮಸ್ಥಳದ ಸಮಸ್ತ ವ್ಯವಹಾರಗಳ ಸೂತ್ರದಾರ ಡಿ. ಹಷೇಂದ್ರ ಕುಮಾರ್ 1972ರಲ್ಲಿ 7.59 ಎಕರೆ ದರ್ಖಾಸ್ತು ಭೂಮಿ ಮಂಜೂರು ಮಾಡಿಸಿಕೊಂಡಿದ್ದಾರೆ. ಇದೊಂದು ಪ್ರಕರಣದಲ್ಲಿ ಇನ್ನಷ್ಟು ಆಳಕ್ಕಿಳಿದರೆ ಹೇಗೆಲ್ಲಾ ಸರಕಾರಿ ಭೂಮಿಯನ್ನು ಹೆಗ್ಗಡೆ ಕುಟುಂಬ ವಶಕ್ಕೆ ಪಡೆಯುತ್ತದೆ ಎಂಬುದಕ್ಕೆ ಒಂದಷ್ಟು ಸಾಕ್ಷಿಗಳು ಸಿಗುತ್ತವೆ. 

D harshendra Kumar Dharmastala

‘ಭೂ ರಹಿತ’.. ಜಮೀನಿಗಾಗಿ ಹರ್ಷೇಂದ್ರ ಕುಮಾರ್ ಸಲ್ಲಿಸಿದ ಅರ್ಜಿಯ ಪ್ರತಿ

ಈ ಜಮೀನಿನ ಕತೆ ನಡೆದು ಬಂದಿದ್ದು ಹೀಗೆ. 1972 ಮಾರ್ಚ್‌ 10ರಂದು ಡಿ. ಹರ್ಷೇಂದ್ರ ಕುಮಾರ್ 10 ಎಕರೆ ದರ್ಖಾಸ್ತು ಕೇಳಿ ಅರ್ಜಿಯೊಂದನ್ನು ಸಲ್ಲಿಸುತ್ತಾರೆ. ಆಗಿನ್ನೂ ಅವರಿಗೆ 20 ವರ್ಷ ವಯಸ್ಸು. ಆ ಸಂದರ್ಭ ತನಗೆ ‘ಆದಾಯವೇ ಇಲ್ಲ’ ಎಂದು ಹೇಳಿ ಹರ್ಷೇಂದ್ರ ಕುಮಾರ್ ಅರ್ಜಿಯಲ್ಲಿ ಉಲ್ಲೇಖಿಸುತ್ತಾರೆ. ಮಾತ್ರವಲ್ಲ ತಾನೊಬ್ಬ ‘ಭೂ ರಹಿತ’ ಎಂಬುದನ್ನೂ ಅರ್ಜಿಯಲ್ಲಿ ದಾಖಲಿಸುತ್ತಾರೆ. ತನಗೆ ‘ಪಿತ್ರಾರ್ಜಿತ ಆಸ್ತಿಯೂ ಇಲ್ಲ. ಸ್ವಯಾರ್ಜಿತ ಆಸ್ತಿಯೂ ಇಲ್ಲ’ ಎಂದು ಹರ್ಷೇಂದ್ರ ಹೆಗ್ಗಡೆ ಲಿಖಿತವಾಗಿ ದೃಢೀಕರಣವನ್ನೂ ಸಲ್ಲಿಸುತ್ತಾರೆ.

ಈ ಜಾಗಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ ವಾರದ ನಂತರ, ಅಂದರೆ ಮಾರ್ಚ್‌ 17ರಂದು ಧರ್ಮಸ್ಥಳದ ಶ್ಯಾನುಭೋಗರು ಡಿ. ವೀರೇಂದ್ರ ಹೆಗ್ಗಡೆಯವರ ಬಳಿ ಹೇಳಿಕೆಯೊಂದನ್ನು ಬರೆಸಿಕೊಳ್ಳುತ್ತಾರೆ. ಆ ಹೇಳಿಕೆ ಪ್ರಕಾರ “..ಅರ್ಜಿದಾರ ಹರ್ಷೇಂದ್ರ ಕುಮಾರ್ ಹೆಸರಿಗೆ ದರ್ಖಾಸ್ತು ಕೊಡುವಲ್ಲಿ ನನ್ನ ಆಕ್ಷೇಪವಿರುವುದಿಲ್ಲ. ಅಲ್ಲದೆ ಒಪ್ಪಿಗೆ ಇರುತ್ತದೆ,” ಎಂದು ಹೇಳಿ ವೀರೇಂದ್ರ ಹೆಗ್ಗಡೆ ಖುದ್ದು ಸಹಿ ಮಾಡಿದ್ದಾರೆ.

Veerendra Heggade Dharmastala land mafia

ದರ್ಖಾಸ್ತು ನೀಡಲು ನನ್ನ ಆಕ್ಷೇಪವಿಲ್ಲ.. ವೀರೇಂದ್ರ ಹೆಗ್ಗಡೆ ಹೇಳಿಕೆ ಮತ್ತು ಸಹಿ

ಈ ಎಲ್ಲಾ ಹೇಳಿಕೆ, ಅರ್ಜಿ, ದೃಢೀಕರಣ ದಾಖಲೆಗಳನ್ನು ಸಲ್ಲಿಸಿದ ನಂತರ ಅದೇ ತಿಂಗಳ ಕೊನೆಯಲ್ಲಿ ಹರ್ಷೇಂದ್ರ ಕುಮಾರ್ ಸೇರಿದಂತೆ ಒಟ್ಟು 13 ಜನರಿಗೆ ದರ್ಖಾಸ್ತು ಮಂಜೂರು ಮಾಡಲಾಗುತ್ತದೆ. ಇದರಲ್ಲಿ ಹರ್ಷೇಂದ್ರ ಕುಮಾರ್‌ಗೆ ಧರ್ಮಸ್ಥಳ ಗ್ರಾಮದ ಸರ್ವೆ ಸಂಖ್ಯೆ 61/1A ನಲ್ಲಿ 7.59 ಎಕರೆ ಮಂಜೂರು ಮಾಡಲಾಗುತ್ತದೆ.

ಇಷ್ಟೂ ದಾಖಲೆಗಳು ‘ಸಮಾಚಾರ’ದ ಬಳಿಯಲ್ಲಿವೆ.

D harshendra Kumar Dharmastala 02

7.59 ಎಕರೆ ಜಾಗ ಮಂಜೂರು..

ಹೀಗೆ, 7.59 ಎಕರೆ ಜಮೀನು ಪಡೆಯುವಾಗ ಹರ್ಷೇಂದ್ರ ಕುಮಾರ್ ಹಲವು ನಿಯಮಗಳನ್ನು ಮುರಿದಿದ್ದಾರೆ ಎಂಬ ಆರೋಪಗಳಿವೆ. ತಾನು ‘ಭೂ ರಹಿತ, ಬಡವ’ ಎಂದು ಹೇಳಿ ಹರ್ಷೇಂದ್ರ ಕುಮಾರ್ ‘ಸುಳ್ಳು ದೃಢೀಕರಣ ಪತ್ರ’ ಸಲ್ಲಿಸಿದ್ದಾರೆ ಎಂಬುದು ಮೊದಲ ಗಂಭೀರ ಆರೋಪ.

ಹಾಗೆ ನೋಡಿದರೆ ಇಂಥಹದ್ದೊಂದು ಅನುಮಾನ ಹುಟ್ಟು ಹಾಕಿದವರು ಬೇರೆ ಯಾರೂ ಅಲ್ಲ. ಸ್ವತಃ ಧರ್ಮಸ್ಥಳದ ಧರ್ಮಾಧಿಕಾರಿ, ಹರ್ಷೇಂದ್ರ ಹೆಗ್ಗಡೆಯವರ ಅಣ್ಣ ಡಾ. ಡಿ ವೀರೇಂದ್ರ ಹೆಗ್ಗಡೆ. ‘ನುಡಿದಂತೆ ನಡೆಯುವ ಮಂಜುನಾಥ’ ಎಂಬ ಬಿರುದು ಪಡೆದುಕೊಂಡಿರುವ ವೀರೇಂದ್ರ ಹೆಗ್ಗಡೆ ವಿಭಿನ್ನ ಹೇಳಿಕೆ ನೀಡಿ ತಾವೂ ಇಕ್ಕಟ್ಟಿಗೆ ಸಿಲುಕುತ್ತಾರೆ; ತಮ್ಮನನ್ನೂ ಅಡಕತ್ತರಿಯಲ್ಲಿ ಸಿಕ್ಕಿಸಿ ಹಾಕುತ್ತಾರೆ.

ಒಂದೇ ಜಾಗ, ಎರಡು ಹೇಳಿಕೆ!:

ಮುಂದೆ 1974 ರಲ್ಲಿ ಭೂ ಸುಧಾರಣಾ ಕಾಯ್ದೆ ಜಾರಿಯಾದಾಗ ಭೂ ನ್ಯಾಯ ಮಂಡಳಿಗೆ ಕುಟುಂಬದ ಯಜಮಾನನ ನೆಲೆಯಲ್ಲಿ ವೀರೇಂದ್ರ ಹೆಗ್ಗಡೆ ಘೋಷಣಾ ಪತ್ರವೊಂದನ್ನು ನೀಡಿದ್ದರು. ಅದರಲ್ಲಿ (ಕಡತ ಸಂಖ್ಯೆ: L.R.Y. 72/74-75) ಅವರಿಗಿದ್ದ 4,671 ಎಕ್ರೆ ಕೃಷಿ ಭೂಮಿ ‘ನೆಲ್ಯಾಡಿ ಬೀಡು ಅವಿಭಕ್ತ ಹೆಗ್ಗಡೆ ಕುಟುಂಬ’ದ ಆಸ್ತಿ ಎಂದಿದ್ದಾರೆ. ಹಾಗಾದರೆ 1972ರಲ್ಲಿ ಹೆಗ್ಗಡೆ ಅವಿಭಕ್ತ ಕುಟುಂಬದ ಹೆಸರಿನಲ್ಲಿ 4671 ಎಕ್ರೆ ಭೂಮಿ ಇತ್ತು. ಈ ದಾಖಲೆಗಳ ಪ್ರಕಾರ ಇದರಲ್ಲಿ 1/4 ಅಂಶದ ಹಕ್ಕು ಹಷೇಂದ್ರರದ್ದು (ವೀರೇಂದ್ರ ಹೆಗ್ಗಡೆ ತಂದೆ ರತ್ನವರ್ಮ ಹೆಗ್ಗಡೆ ಅವರಿಗೆ ಒಟ್ಟು ನಾಲ್ವರು ಮಕ್ಕಳು). ಇವರ ಕೃಷಿ ಆದಾಯವೂ ಕಡಿಮೆ ಇರಲಿಲ್ಲ.

ಹೀಗಿದ್ದೂ ತಾನು “ಭೂರಹಿತ, ಬಡವ, ಪಿತ್ರಾರ್ಜಿತ ಆಸ್ತಿ ಇಲ್ಲ” ಎಂದು ಸುಳ್ಳು ಅರ್ಜಿಯನ್ನೂ ಮತ್ತು ಇದರೊಂದಿಗೆ ಸುಳ್ಳು ಪ್ರಮಾಣ ಪತ್ರವನ್ನೂ ಸಲ್ಲಿಸಿದ್ದಾರೆ ಎಂಬ ಆರೋಪ ಹರ್ಷೇಂದ್ರ ಹೆಗ್ಗಡೆಯವರ ಮೇಲಿದೆ. ಮಾತ್ರವಲ್ಲ ‘ಹಷೇಂದ್ರರಿಗೆ ದರ್ಖಾಸ್ತು ಮಂಜೂರಾತಿಗೆ ತನ್ನ ಆಕ್ಷೇಪವಿಲ್ಲ, ಮಾತ್ರವಲ್ಲ ಒಪ್ಪಿಗೆ ಇದೆ,’ ಎಂದು ಸ್ವತಃ ವೀರೇಂದ್ರ ಹೆಗ್ಗಡೆಯವರು ಕಂದಾಯ ಇಲಾಖೆಯ ಧರ್ಮಸ್ಥಳ ಶ್ಯಾನುಭೋಗರಿಗೆ ಲಿಖಿತ ಹೇಳಿಕೆ ನೀಡಿದ್ದಾರೆ. ಈ ಮೂಲಕ ಅವರೂ ‘ಸುಳ್ಳು ಹೇಳಿಕೆ ನೀಡಿ ಜಮೀನು ಮಂಜೂರಿಗೆ ಸಹಕರಿಸಿದ್ದಾರೆ’ ಎಂದು ದಾಖಲೆಗಳು ಹೇಳುತ್ತಿವೆ.

ಯಾವಾಗ ಈ ವಿಚಾರ ಆರೋಪಕ್ಕೆ ಗುರಿಯಾಯಿತೋ, 2015ರ ಮೇ 8ರಂದು ಪುತ್ತೂರು ಸಹಾಯಕ ಆಯುಕ್ತರಿಗೆ ವೀರೇಂದ್ರ ಹೆಗ್ಗಡೆಯವರು ಪ್ರಮಾಣ ಪತ್ರವೊಂದನ್ನು ನೀಡುತ್ತಾರೆ. ಅದರಲ್ಲಿ ‘ಈ ಭೂಮಿಯಲ್ಲಿ ಕುಟುಂಬದ ಇತರರಿಗೆ ಹಕ್ಕಿಲ್ಲ. ಇದು ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನದ ಆಸ್ತಿ ಎಂದು’ ಎಂದು ವ್ಯತಿರಿಕ್ತ ಮಾಹಿತಿ ನೀಡಿದ್ದಾರೆ. ಹೀಗೆ ಒಂದೇ ಜಾಗಕ್ಕೆ ಎರಡು ರೀತಿಯ ಹೇಳಿಕೆಯನ್ನು ವೀರೇಂದ್ರ ಹೆಗ್ಗಡೆಯವರು ನೀಡಿದ್ದರೆ, ಅತ್ತ ಹರ್ಷೇಂದ್ರ ಕುಮಾರ್ 7.59 ಎಕರೆ ಜಮೀನು ಪಡೆದುಕೊಂಡು ಅದರ ಹಕ್ಕನ್ನು 1972ರಿಂದ ಇಲ್ಲಿಯವರೆಗೆ ಅನುಭವಿಸುತ್ತಾ ಬಂದಿದ್ದಾರೆ.

Dharmastala Land

1974 ರಲ್ಲಿ ಭೂ ಸುಧಾರಣಾ ಕಾಯ್ದೆ ಜಾರಿ ಸಂದರ್ಭ ಭೂ ನ್ಯಾಯ ಮಂಡಳಿಗೆ ನೀಡಿದ ಹೇಳಿಕೆ (ಎಡ) ಮತ್ತು 8.5.2015 ರಂದು ಪುತ್ತೂರು ಸಹಾಯಕ ಆಯುಕ್ತರಿಗೆ ಇದೇ ವೀರೇಂದ್ರ ಹೆಗ್ಗಡೆಯವರು ನೀಡಿದ ವ್ಯತಿರಿಕ್ತ ಹೇಳಿಕೆ

ಈ ಜಮೀನಿನ ಕುರಿತು ಪುತ್ತೂರು ಸಹಾಯಕ ಆಯುಕ್ತರಿಗೆ ದೂರು ಸಲ್ಲಿಕೆಯಾಗಿತ್ತು. ದೂರು ಸಲ್ಲಿಕೆಯಾದ ನಂತರ ತನಿಖೆಗೆ ಸಹಾಯಕ ಆಯುಕ್ತರು ಆದೇಶ ನೀಡಿದ್ದರು. “ಎರಡು ಮೂರು ಬಾರಿ ಪುತ್ತೂರು ಎಸಿ ನ್ಯಾಯಾಲಯದಲ್ಲಿ ವಿಚಾರಣೆಯೂ ನಡೆದಿತ್ತು. ಅದಾದ ನಂತರ ಅವರು (ಡಿ. ಹರ್ಷೇಂದ್ರ ಕುಮಾರ್) ಹೈಕೋರ್ಟಿನಿಂದ ತಡೆ ತಂದಿದ್ದಾರೆ. ಸದ್ಯ ಇದರ ವಿಚಾರಣೆಗೆ ತಡೆ ಇದೆ,” ಎಂದು ಪುತ್ತೂರು ಸಹಾಯಕ ಆಯುಕ್ತರ ಮೂಲಗಳು ‘ಸಮಾಚಾರ’ಕ್ಕೆ ಮಾಹಿತಿ ನೀಡಿವೆ.

ಹೀಗೆ ಸತ್ಯ, ಧರ್ಮವನ್ನು ಪ್ರತಿನಿಧಿಸುವವರೇ ತನಿಖೆಗೆ ಹೈಕೋರ್ಟಿನಿಂದ ತಡೆ ತಂದಿದ್ದಾರೆ. ಸದ್ಯ ಹೈಕೋರ್ಟಿನಿಂದ ಪಡೆದುಕೊಂಡಿರುವ ತಡೆ ತೆರವುಗೊಳಿಸಿ ವಿಚಾರಣೆ ಮುಂದುವರಿಸಬೇಕಾಗಿದೆ. ಈ ಕೆಲಸವನ್ನು ಸರಕಾರ ಮಾಡಬೇಕಿದೆ. ಆದರೆ, ಸರಕಾರದ ಪ್ರತಿನಿಧಿ ಸಿಎಂ ಸಿದ್ದರಾಮಯ್ಯ ಈಗಾಗಲೇ ಧರ್ಮಸ್ಥಳಕ್ಕೆ ಭೇಟಿ ನೀಡಿ, ಅವರ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಬಂದಿದ್ದಾರೆ. ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು  ಭೇಟಿ ನೀಡಲಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರಕಾರದ ಪ್ರಮುಖ ಪ್ರತಿನಿಧಿಗಳೇ ಶ್ರೀ ಕ್ಷೇತ್ರದ ಮಹಿಮೆಗೆ ಒಳಗಾದ ಮೇಲೆ, ಸರಕಾರದ ಭೂಮಿಯನ್ನು ಹೆಗ್ಗಡೆ ಕುಟುಂಬದಿಂದ ಮರಳಿ ಪಡೆಯಲು ಪ್ರಕ್ರಿಯೆಗಳು ಪಾರದರ್ಶಕವಾಗಿ ನಡೆಯುತ್ತವೆ ಎಂದು ನಿರೀಕ್ಷಿಸಲು ಹೇಗೆ ಸಾಧ್ಯ? 

ಸಾಮಾನ್ಯ ಜನರ ಸಂಕಷ್ಟ: 

ಒಂದು ಕಡೆ ಸರಕಾರಿ ಜಾಗದ ವಿಚಾರ ಹೀಗಾದರೆ, ಧರ್ಮಸ್ಥಳ ಸಂಸ್ಥಾನದ ಸಾಮ್ರಾಜ್ಯ ವಿಸ್ತರಣೆಗೆ ಖಾಸಗಿ ಜಮೀನುಗಳನ್ನು ಮಾರಿಕೊಂಡವರ ಪರಿಸ್ಥಿತಿ ಘೋರವಾಗಿದೆ. ಮೇಲೆ ನಿರೂಪಿಸಿದ ಇಬ್ರಾಹಿಂ ಹಾಗೂ ರಶೀದಾ ಕುಟುಂಬದ್ದು ಒಂದು ಯಶಸ್ವಿ ಹೋರಾಟದ ಕತೆ. ಆದರೆ ಹೋರಾಟ ಮಾಡಲಾರದೆ ಜಮೀನು ಮಾರಿಕೊಂಡು, ಕೊನೆಗೆ ಭರವಸೆ ನೀಡಿದಷ್ಟು ಹಣವೂ ಸಿಗದೆ, ಇವತ್ತು ರಾಜ್ಯ ಸರಕಾರ ನೀಡುವ ‘ಅನ್ನಭಾಗ್ಯ’ ಯೋಜನೆಯ ಅಕ್ಕಿಯನ್ನು ನಂಬಿಕೊಂಡು ಬದುಕುತ್ತಿರುವವರ ಕತೆಗಳನ್ನು ಕೇಳಿದರೆ ಕಣ್ಣಂಚಿನಲ್ಲಿ ನೀರು ಮೂಡುವಂತಿದೆ.

ಮಹಾಬಲ ಭಂಡಾರಿ; ಬೆಳ್ತಂಗಡಿ ತಾಲೂಕಿನ ಅಂಡಿಂಜೆ ಗ್ರಾಮದವರು. ಅಲ್ಲಿನ ನೆಲ್ಲಿಂಗೇರಿ ಎಂಬಲ್ಲಿ ಅವರ ಸುಮಾರು ಹತ್ತು ಎಕರೆ ಜಾಗ, ಒಂದಷ್ಟು ಖುಮ್ಕಿ ಭೂಮಿ, ಮನೆ ಇತ್ತು. “50-60 ತೆಂಗಿನ ಮರಗಳು ಜಾಗದಲ್ಲಿದ್ದವು. 2 ಕ್ವಿಂಟಾಲ್ ಅಡಿಕೆಯಾಗುತ್ತಿತ್ತು. ಈ ಜಾಗವನ್ನು 8 ಲಕ್ಷ ರೂ. ಹಣ ಹಾಗೂ ಮನೆ ಕಟ್ಟಲು ನೆರವು ನೀಡುತ್ತೇವೆ ಎಂಬ ಭರವಸೆ ಮೇಲೆ ಡಿ. ಹರ್ಷೇಂದ್ರ ಕುಮಾರ್ ಡೀಲ್ ಮಾಡಿದರು,” ಎನ್ನುತ್ತಾರೆ ಮಹಾಬಲ ಭಂಡಾರಿ. 4-5 ವರ್ಷ ಹಿಂದೆ ಹೀಗೆ ಜಾಗ ಮಾರಿದ ಭಂಡಾರಿಯವರ ಕೈಗೆ ಅಗ್ರೀಮೆಂಟ್ ಆಗಿ ಕೊನೆಗೂ ಕೈ ಸೇರಿದ ಹಣ ಐದು ಕಾಲು ಲಕ್ಷ ರೂಪಾಯಿ ಮಾತ್ರ.

“ಉಳಿದ ಹಣಕ್ಕಾಗಿ ನಾನು ವೀರೇಂದ್ರ ಹೆಗ್ಗಡೆಯವರ ಬಳಿ ಎರಡು ಬಾರಿ ಹೋದೆ. ಮೊದಲ ಬಾರಿ ಹೋದಾಗ ಅವರ ಅಧಿಕಾರಿಯ ಬಳಿ ಮಾತನಾಡಬೇಕು. ‘ಮತ್ತೆ ಬಾ’ ಎಂದರು. ಎರಡನೇ ಬಾರಿ ಹೋದಾಗ ‘ಅದು ಹರ್ಷೇಂದ್ರರ ಹತ್ತಿರವೇ ಆಗಬೇಕು’ ಎಂದವರೇ ಕುಳಿತುಕೊಳ್ಳಲು ಹೇಳಿದರು. ಕೊನೆಗೆ ಸೇನರು ಬಂದು (ವೀರೇಂದ್ರ ಹೆಗ್ಗಡೆಯವರ ಸೇವೆ ಮಾಡುವ ಸಿಬ್ಬಂದಿಗಳಿಗೆ ಇರುವ ರೂಢಿಗತ ಹೆಸರು) ನೀವು ಹೋಗಿ ಅಂದರು. ಹಾಗೆ ನಾನು ವಾಪಾಸ್ ಬಂದೆ. ಮತ್ತೆ ನಾನು ಹಣ ಕೇಳಲಾಗಲಿ ನನ್ನ ಜಾಗದ ಬಳಿಯಾಗಲಿ ಹೋಗಲಿಲ್ಲ. ಹೇಗೆ ನಂಬುವುದು ಅವರು ಪ್ರಾಣ ತೆಗೆಯಲೂ ಹಿಂದೆ ಮುಂದೆ ನೋಡುವವರಲ್ಲ,” ಎಂದಾಗ ಭಂಡಾರಿಯವರ ಧ್ವನಿ ಗಡುಸಾಯಿತು.

“ಅವತ್ತು ವೀರೇಂದ್ರ ಹೆಗ್ಗಡೆಯವರಿಗೆ ನಾನು ಮನವಿ ಪತ್ರ ನೀಡಿದ್ದೆ. ಆ ಪತ್ರದ ಕಾಪಿ ನನ್ನ ಬಳಿ ಇವತ್ತೂ ಇದೆ. ನಾನು ನನ್ನ ಬಳಿ ಇದ್ದ ಹಾಗೂ ಅವರು ನೀಡಿದ ಅಲ್ಪ ಸ್ವಲ್ಪ ಹಣ ಸೇರಿಸಿ ಹೇಗೋ ಮೂಡಬಿದಿರೆಯ ವಾಲ್ಪಾಡಿಯಲ್ಲೊಂದು 10 ಸೆಂಟ್ಸ್ ಜಾಗ ತೆಗೆದು ಮನೆ ಕಟ್ಟಿಕೊಂಡೆ. ಮನೆ ಕಟ್ಟುವಾಗಲೂ ಮೊದಲು ಹೇಳಿದಂತೆ ನೆರವು ನೀಡಲಿಲ್ಲ. ಅವತ್ತು ನಾನು ಕೊಟ್ಟ ಜಾಗದಲ್ಲಿ ಧರ್ಮಸ್ಥಳದವರು ತೋಟ ಮಾಡಿದ್ದಾರೆ. ನನ್ನ ಬಳಿಯಲ್ಲಿ ಮಾತ್ರ ಐದು ಪೈಸೆ ಹಣವೂ ಇಲ್ಲ,” ಭಂಡಾರಿ ಅವರ ಮಾತು ನೋವಿನಿಂದ ಮುಂದುವರಿಯುತ್ತಿತ್ತು.

“ಇವತ್ತು ಊಟಕ್ಕೆ ‘ಅನ್ನಭಾಗ್’ಯದ ಅಕ್ಕಿ ಬರುತ್ತದೆ. ಬದುಕಲು ಏನು ಮಾಡಬೇಕು ಎಂದು ಗೊತ್ತಾಗುತ್ತಿಲ್ಲ. ಈಗಲೋ ಆಗಲೋ ಸಾಯುವಂತೆ ಇದ್ದೇನೆ. ಬದುಕಲು ಮತಾಂತರವಾಗುವುದೊಂದೇ ದಾರಿ” ಎಂದವರೇ ಸ್ವಲ್ಪ ಸಾವರಿಸಿಕೊಂಡರು. ಮುಂದಿನ ಒಂದಷ್ಟು ಹೊತ್ತು ಅವರು ಮಾತನಾಡುತ್ತಲೇ ಇದ್ದರು. ಧರ್ಮಸ್ಥಳದವರ ಮೇಲಿನ ನಂಬಿಕೆಯಿಂದ ಕೈಯಲ್ಲಿದ್ದ ಜಾಗ ಮಾರಿದವರು ಇವರು.

ನೇತ್ರಾವತಿಯಲ್ಲಿ ನೀರು ಹರಿದು ಹೋಗುತ್ತಲೇ ಇದೆ. ಇಲ್ಲಿನ ಜನರ ಕಣ್ಣೀರು ಕೂಡ. ಧಾರ್ಮಿಕ ಕ್ಷೇತ್ರವೊಂದರ ಆಡಳಿತ ಚುಕ್ಕಾಣಿಯನ್ನು ಹಿಡಿದ ಕುಟುಂಬ ತನ್ನ ಸಂಸ್ಥಾನದ ವಿಸ್ತರಣೆಗೆ ಇಳಿದರೆ ಏನಾಗಬಹುದು ಎಂಬುದಕ್ಕೆ ಇವೊಂದಿಷ್ಟು ಉದಾಹರಣೆಗಳು.

ಈ ಕುರಿತು ಪ್ರತಿಕ್ರಿಯೆಗಾಗಿ ‘ಸಮಾಚಾರ’ ಡಿ. ಹರ್ಷೇಂದ್ರ ಹೆಗ್ಗಡೆ ಅವರ ಕಚೇರಿಯನ್ನು ಸಂಪರ್ಕಿಸಿತು. ನಮ್ಮ ಕಡೆಯಿಂದ ಶುಕ್ರವಾರ ಕಳುಹಿಸಲಾದ ಪ್ರಶ್ನೆಗಳಿಗೆ ಉತ್ತರ ಬಂದಿಲ್ಲ. ಒಂದು ವೇಳೆ, ಬಂದರೆ ಅದನ್ನು ಇದೇ ವರದಿಯ ಜತೆ ಅಪ್‌ಡೇಟ್‌ ಮಾಡಲಾಗುವುದು.

Leave a comment

FOOT PRINT

Top