An unconventional News Portal.

ಧರ್ಮ ಮೀರಿಸಿದ ಜಾತಿ ಅಜೆಂಡಾ: ಮೋದಿ- ಶಾ ಜೋಡಿಗೆ ಈ ಬಾರಿ ಗುಜರಾತ್‌ ಸುಲಭದ ತುತ್ತಲ್ಲ

ಧರ್ಮ ಮೀರಿಸಿದ ಜಾತಿ ಅಜೆಂಡಾ: ಮೋದಿ- ಶಾ ಜೋಡಿಗೆ ಈ ಬಾರಿ ಗುಜರಾತ್‌ ಸುಲಭದ ತುತ್ತಲ್ಲ

“ನನ್ನ 30 ವರ್ಷಗಳ ಪತ್ರಿಕೋದ್ಯಮದ ಅನುಭವದಲ್ಲಿ ಇಂತಹದೊಂದು ಚುನಾವಣೆಯ ಅಖಾಡವನ್ನು ನೋಡಿರಲಿಲ್ಲ,” ಎಂದರು ಆಶಿಶ್ ಅಮಿನ್.

ಅಹಮದಬಾದ್‌ನಲ್ಲಿರುವ ‘ನವ ಗುಜರಾತ್‌ ಸಮಯ್‌’ ಪತ್ರಿಕೆಯ ರಾಜಕೀಯ ವಿಭಾಗದಲ್ಲಿ ಅವರೀಗ ಪ್ರಧಾನ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಮುಂಬರುವ ಗುಜರಾತ್‌ ಚುನಾವಣೆಯ ಹಿನ್ನೆಲೆಯಲ್ಲಿ ಅನುಭವಿ ವರದಿಗಾರ ಅಮಿನ್‌ ಸಾಕಷ್ಟು ಒಳನೋಟಗಳೊಂದಿಗೆ ಮಾತನಾಡುತ್ತಿದ್ದಾರೆ. “ಇದೇ ಮೊದಲ ಬಾರಿಗೆ ಜಾತಿ ವಿಚಾರ ಚುನಾವಣೆಯ ಕೇಂದ್ರಸ್ಥಾನಕ್ಕೆ ಬಂದಿದೆ. ಕಳೆದ 22 ವರ್ಷಗಳಲ್ಲಿ ಗುಜರಾತ್‌ ಚುನಾವಣೆಗಳು ನಡೆದಿದ್ದು ಧರ್ಮ ಮತ್ತು ಅಭಿವೃದ್ಧಿಯ ತಳಹದಿಯ ಮೇಲೆ. ಆದರೆ ಇದೇ ಮೊದಲ ಬಾರಿಗೆ ಜಾತಿ ಸಮುದಾಯಗಳು ತಮ್ಮ ಬೇಡಿಕೆಗಳ ಅನುಸಾರ ಚುನಾವಣೆಯ ಅಜೆಂಡಾವನ್ನು ಮುಂದಿಟ್ಟಿವೆ. ಇದು ನಮ್ಮ ಪಾಲಿಗೆ ಅಪರೂಪದ ಬೆಳವಣಿಗೆ,” ಎಂದರು.

‘ಸಮಾಚಾರ’ದ ಜತೆ ದೂರವಾಣಿ ಮೂಲಕ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಹೋಮ್‌ಗ್ರೌಂಡ್‌ ಗುಜರಾತ್‌ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಬದಲಾದ ಬಗೆಯನ್ನು ವಿವರಿಸಿದರು.

ಚುನಾವಣಾ ಆಯೋಗ ಡಿಸೆಂಬರ್‌ 19ರ ಒಳಗೆ ಗುಜರಾತ್‌ ವಿಧಾನಸಭೆ ಚುನಾವಣೆ ನಡೆಯಲಿದೆ ಎಂಬ ಮುನ್ಸೂಚನೆ ನೀಡಿದೆ. ಇನ್ನೂ ಅಧಿಕೃತವಾಗಿ ಅಧಿಸೂಚನೆ ಹೊರಬೀಳದಿದ್ದರೂ, ಇಲ್ಲಿನ ಚುನಾವಣಾ ಅಖಾಡ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ ಕಳೆದ ವಾರದ ಕೊನೆಯಲ್ಲಿ ಪಾಟೀದಾರ್‌ ಅನಾಮತ್ ಆಂದೋಲನ್ ಸಮಿತಿ (ಪಾಸ್‌)ನ ಇಬ್ಬರು ಪ್ರಮುಖ ನಾಯಕರು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಸಮ್ಮಿಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು. ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಇನ್ನೊಬ್ಬ ಪಾಸ್‌ನ ನಾಯಕ ನರೇಂದ್ರ ಪಟೇಲ್ ಬಿಜೆಪಿ ಸೇರ್ಪಡೆಗೊಂಡರು. ಅದಾಗಿ ಎರಡು ಗಂಟೆ ಒಳಗೆ 10 ಲಕ್ಷ ರೂಪಾಯಿ ನಗದನ್ನು ಇಟ್ಟುಕೊಂಡು ಪತ್ರಿಕಾಗೋಷ್ಠಿ ಕರೆದರು. “ಬಿಜೆಪಿ ಪಾಸ್‌ ಹೋರಾಟವನ್ನು ಮುರಿಯಲು ಹಣದ ಆಮಿಷ ಒಡ್ಡುತ್ತಿದೆ. ನನಗೆ 1 ಕೋಟಿ ನೀಡುವ ಆಮಿಷವನ್ನು ಒಡ್ಡಿದೆ. ಮುಂಗಡವಾಗಿ 10 ಲಕ್ಷ ರೂಪಾಯಿಗಳನ್ನು ಬಿಜೆಪಿ ಕಚೇರಿಯಲ್ಲಿಯೇ ನೀಡಲಾಯಿತು,” ಎಂದು ಆರೋಪಿಸಿದರು. ಸಂಜೆ ವೇಳೆಗೆ, ಇಲ್ಲಿನ ದೃಶ್ಯ ಮಾಧ್ಯಮಗಳು ರಾಹುಲ್‌ ಗಾಂಧಿ ಉಳಿದುಕೊಂಡಿದ್ದ ಪಂಚತಾರಾ ಹೋಟೆಲ್‌ಗೆ ಪಾಸ್‌ನ ಮುಂದಾಳು ಹಾರ್ದಿಕ್ ಪಟೇಲ್ ಭೇಟಿ ನೀಡಿದ ಸಿಸಿಟಿವಿ ದೃಶ್ಯಾವಳಿಗಳನ್ನು ತೋರಿಸುತ್ತಿದ್ದವು.

ಕಳೆದ ನಾಲ್ಕೈದು ದಿನಗಳಿಂದ ಇಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಆಚೆಗೆ ಗುಜರಾತ್‌ನಲ್ಲಿ ಆರಂಭವಾಗಿರುವ ಜಾತಿ ಸಮುದಾಯಗಳ ಹೋರಾಟದ ಪ್ರಾಮುಖ್ಯತೆಯನ್ನು ಬಿಂಬಿಸುತ್ತಿವೆ.

ಮೂರು ಯುವ ನಾಯಕರು: 

ಗುಜರಾತ್‌ ಯಾವತ್ತಿಗೂ ದ್ವಿಪಕ್ಷೀಯ ಕಾದಾಟಕ್ಕೆ ಸಾಕ್ಷಿಯಾದ ರಾಜಕೀಯ ವ್ಯವಸ್ಥೆ. 1962ರಲ್ಲಿ ಇಲ್ಲಿ ನಡೆದ ಎರಡನೇ ವಿಧಾನಸಭಾ ಚುನಾವಣೆಯಿಂದ ಹಿಡಿದು 90ರ ದಶಕದವರೆಗೆ ನಿರಂತರವಾಗಿ ಅಧಿಕಾರದಲ್ಲಿದ್ದ ಪಕ್ಷ ಕಾಂಗ್ರೆಸ್. ಈ ಸಮಯದಲ್ಲಿ ಪ್ರತಿಪಕ್ಷದ ಸ್ಥಾನದಲ್ಲಿ ಸ್ವತಂತ್ರ ಪಕ್ಷ ಹಾಗೂ ಇತರೆ ಪಕ್ಷಗಳು ಜನಾಭಿಪ್ರಾಯ ಪಡೆದುಕೊಂಡಿದ್ದವು. ಮೂರನೇ ಪಕ್ಷಕ್ಕೆ ಜನ ಸ್ಥಾನಮಾನ ನೀಡಿದ ಉದಾಹರಣೆಯೇ ಇಲ್ಲ. 1990ರಲ್ಲಿ ನಡೆದ ಎಂಟನೇ ವಿಧಾನಸಭಾ ಚುನಾವಣೆಯಲ್ಲಿ ಒಮ್ಮೆ ಮಾತ್ರ ಜನತಾದಳ ಅಧಿಕಾರಕ್ಕೇರಿತು. ಈ ಸಮಯದಲ್ಲಿ ಪ್ರತಿಪಕ್ಷದ ಸ್ಥಾನದಲ್ಲಿ ಬಿಜೆಪಿ ಸ್ಥಾನಪಡೆದುಕೊಂಡು, ಕಾಂಗ್ರೆಸ್‌ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಇದೊಂದು ಚುನಾವಣೆ ಹೊರತುಪಡಿಸಿದರೆ, ನಡೆದ ಅಷ್ಟೂ ಚುನಾವಣೆಗಳಲ್ಲಿ ಎರಡು ಪ್ರಮುಖ ಪಕ್ಷಗಳು ಮಾತ್ರವೇ ಚುನಾವಣೆಯ ಫಲಿತಾಂಶದ ಪಟ್ಟಿಯಲ್ಲಿ ಗಮನಾರ್ಹ ಸಾಧನೆ ಮಾಡಿರುವುದು ಎದ್ದು ಕಾಣಿಸುತ್ತಿದೆ. 2002 ಹಾಗೂ ನಂತರ ನಡೆದ ನಾಲ್ಕು ಚುನಾವಣೆಗಳಲ್ಲಿ ಬಿಜೆಪಿ ಅಧಿಕಾರವನ್ನು ಪಡೆದುಕೊಂಡಿದೆ. ಕಾಂಗ್ರೆಸ್ ಪ್ರತಿಪಕ್ಷ ಸ್ಥಾನದಲ್ಲಿಯೇ ಉಳಿದುಕೊಂಡಿದೆ. ಈ ಬಾರಿಯೂ ಕೂಡ, ಇಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ನೇರ ಹಣಾಹಣಿಯೇ ಹೊರತು, ಮೂರನೇ ಪಕ್ಷದ ಸಾಧ್ಯತೆ ಕಾಣಿಸುತ್ತಿಲ್ಲ.

“ಈವರೆಗೂ ನಡೆದ ಚುನಾವಣೆಗಳಲ್ಲಿ ಗುಜರಾತ್‌ ಮತದಾರರು ಪಕ್ಷಗಳು ಮುಂದಿಡುತ್ತಿದ್ದ ಅಭಿವೃದ್ಧಿಯ ಅಜೆಂಡಾಕ್ಕೆ ಮತ ಹಾಕುತ್ತ ಬಂದವರು. ಬಿಜೆಪಿ ಅಧಿಕಾರಕ್ಕೆ ಬರುವ ಆರಂಭದಲ್ಲಿಯೂ ಇದೇ ಅಜೆಂಡಾ ಇತ್ತು. ಜತೆಗೆ ಧಾರ್ಮಿಕ ಸ್ವರೂಪವೂ ಚುನಾವಣೆಗಳಿಗೆ ಸಿಕ್ಕಿತ್ತು. ಆದರೆ ಇದೇ ಮೊದಲ ಬಾರಿಗೆ ಜಾತಿ ವಿಚಾರ, ಅದರಲ್ಲೂ ಪ್ರಮುಖವಾಗಿ ಜಾತಿವಾರು ಮೀಸಲಾತಿ ಪಾತ್ರವಹಿಸುತ್ತಿದೆ,” ಎನ್ನುತ್ತಾರೆ ಆಶಿಶ್ ಅಮಿನ್.

ಜಿಗ್ನೇಶ್ ಮೇವಾನಿ- ಅಲ್ಪೇಶ್ ಠಾಕೂರ್- ಹಾರ್ದಿಕ್ ಪಟೇಲ್

ಜಿಗ್ನೇಶ್ ಮೇವಾನಿ- ಅಲ್ಪೇಶ್ ಠಾಕೂರ್- ಹಾರ್ದಿಕ್ ಪಟೇಲ್

ವಿಶೇಷ ಅಂದರೆ, ಗುಜರಾತ್‌ನ ಜಾತಿ ಚಳುವಳಿಗಳು ಮೂರು ಪ್ರಮುಖ ಕವಲುಗಳಾಗಿ ವಿಭಾಗಗೊಂಡಿವೆ ಮತ್ತು ಅವು ಯುವ ನಾಯಕರ ಕೈಲಿವೆ. ಪಾಟೀದಾರ್‌ ಆಂದೋಲದವನ್ನು ಮುನ್ನಡೆಸುತ್ತಿರುವ ಹಾರ್ದಿಕ್ ಪಟೇಲ್, ಹಿಂದುಳಿದ ವರ್ಗಗಳ ಬೇಡಿಕೆಯನ್ನು ಮುಂದಿಟ್ಟುಕೊಂಡು ಚಳವಳಿ ರೂಪಿಸಿರುವ ಅಲ್ಪೇಶ್ ಠಾಕೂರ್ ಹಾಗೂ ದಲಿತ ಚಳವಳಿಯನ್ನು ಮುನ್ನಡೆಸುತ್ತಿರುವ ಜಿಗ್ನೇಶ್ ಮೇವಾನಿ ಅವರುಗಳ ಕೈಲಿ ಚುನಾವಣೆಯ ಭವಿಷ್ಯ ಇರುವಂತೆ ಕಾಣಿಸುತ್ತಿದೆ. ಈ ಮೂರು ನಾಯಕರು ಪ್ರತ್ಯೇಕ ಜಾತಿ ಚಳುವಳಿಗಳನ್ನು ಸಂಘಟಿಸಿಕೊಂಡು ಬಂದರೂ, ಪರಸ್ಪರ ಸಂಪರ್ಕದಲ್ಲಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಈ ಮೂವರನ್ನೂ ಕಾಂಗ್ರೆಸ್ ವಿಶ್ವಾಸಕ್ಕೆ ತೆಗೆದುಕೊಂಡಿದೆ. ಅಧಿಕಾರಕ್ಕೆ ಬಂದರೆ ಜಾತಿವಾರು ಮೀಸಲಾತಿಯನ್ನು ನೀಡುವ ಭರವಸೆ ನೀಡಿದೆ. ರಾಜ್ಯಸಭಾ ಚುನಾವಣೆಯಲ್ಲಿ ಕೂದಲೆಳೆಯ ಅಂತರದಿಂದ ಗೆದ್ದು ಬಂದ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಈ ವಿಚಾರದಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ.

ಮೋದಿ ಅಲೆಯ ಸಮಸ್ಯೆ:

2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನಡೆದ ದಿಲ್ಲಿ ವಿಧಾನಸಭಾ ಚುನಾವಣೆಯೊಂದನ್ನು ಹೊರತುಪಡಿಸಿದರೆ, ಉಳಿದ ಪ್ರಮುಖ ಚುನಾವಣೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ಕೇಂದ್ರ ಬಿಂದುವಾಗಿದ್ದರು. ಬಿಜೆಪಿ ಪಾಲಿಗೆ ಅವರೇ ‘ತಾರಾ ಪ್ರಚಾರಕರು’. ಆದರೆ, ಇದೀಗ ಅವರ ತವರು ಕ್ಷೇತ್ರ ಗುಜರಾತ್‌ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್ ಚೌಹಾಣ್ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರು ಭೇಟಿ ಪದೇ ಪದೇ ನೀಡುತ್ತಿದ್ದಾರೆ. ಇಂತಹದೊಂದು ವಿದ್ಯಮಾನ ಸಹಜವಾಗಿಯೇ ಮೋದಿ- ಶಾ ಜೋಡಿಗೆ ಗುಜರಾತ್‌ ಚುನಾವಣಾ ಅಖಾಡದ ಬಗ್ಗೆ ಇರುವ ಅಳಕನ್ನು ತೋರಿಸುತ್ತಿದೆ.

ಅದರಲ್ಲೂ, ಗುಜರಾತ್‌ನ ವ್ಯಾಪಾರಿ ಸಮುದಾಯ ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಜಾರಿ ನಂತರ ಬಿಜೆಪಿ ವಿರುದ್ಧ ನೇರವಾಗಿಯೇ ಬೀದಿಗೆ ಇಳಿದಿದ್ದಾರೆ. ಸಣ್ಣ ವ್ಯಾಪಾರಿಗಳಲ್ಲಿ ತಾವು ತಲೆತಲಾಂತರಗಳಿಂದ ಪ್ರತಿನಿಧಿಸಿದ ಪಕ್ಷ ಬಿಜೆಪಿ ಬಗ್ಗೆ ಅಸಮಾಧಾನ ಇದೆ. ಇವುಗಳ ಜತೆಗೆ, ಜಾತಿಯೂ ಇಲ್ಲಿನ ಚುನಾವಣೆಯ ಪ್ರಮುಖ ಅಜೆಂಡಾ ಆಗಿ ಬದಲಾಗಿರುವುದು ಬಿಜೆಪಿ ಅನಾಯಾಸ ಗೆಲುವಿಗೆ ಸಮಸ್ಯೆಯಾಗಿ ಕಾಣಿಸುತ್ತಿದೆ.

ಮೋದಿ ಅಲೆ, ಕೇಂದ್ರ ಸರಕಾರದ ಸಾಧನೆಗಳು, ಅಭಿವೃದ್ಧಿಯ ಮಂತ್ರಗಳು, ಧರ್ಮಾಧಾರಿತ ದೃವೀಕರಣ ಈ ಬಾರಿ ಗುಜರಾತ್‌ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡುವುದು ಕಷ್ಟ ಎಂಬುದು ಮೋಲ್ನೋಟಕ್ಕೆ ಕಾಣಿಸುತ್ತಿದೆ. ಇಂತಹ ಸಮಯದಲ್ಲಿ, ಹಿಂದೆಂದೂ ಇಲ್ಲದಷ್ಟು ಚುರುಕಾಗಿರುವ ರಾಹುಲ್‌ ಗಾಂಧಿ ಗುಜರಾತ್‌ನ ಜಾತಿ ಚಳುವಳಿಗಳ ಯುವ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರುವುದು ಬಿಜೆಪಿಗೆ ಎಚ್ಚರಿಕೆ ಗಂಟೆಯಾಗಿ ಕೇಳಿಸುತ್ತಿದೆ.

ಹಾಗಂತ, ಕೊನೆಯ ಕ್ಷಣದಲ್ಲಿ ಮತದಾರರ ಮೇಲೆ ಜಾತಿ ಆಂದೋಲನಗಳು ಬೀರಿದ ಪ್ರಭಾವ ಮತಗಳಾಗಿ ಬದಲಾಗುತ್ತಾ? “ಇಷ್ಟು ಬೇಗ ಹೇಳುವುದು ಕಷ್ಟ. ಸದ್ಯದ ಪರಿಸ್ಥಿತಿಯಲ್ಲಿ ಯಾವುದೂ ಸ್ಪಷ್ಟವಾಗುತ್ತಿಲ್ಲ. ಆದರೆ ಒಂದಂತೂ ಹೇಳಬಹುದು; ಈ ಬಾರಿ ಮೋದಿ ಮತ್ತು ಅಮಿತ್‌ ಶಾ ಅವರಿಗೆ ತಮ್ಮ ತವರು ರಾಜ್ಯ ಗುಜರಾತ್‌ ಸುಲಭದ ತುತ್ತಲ್ಲ,” ಎನ್ನುತ್ತಾರೆ ಹಿರಿಯ ಪತ್ರಕರ್ತ ಅಮಿನ್.

Leave a comment

FOOT PRINT

Top