An unconventional News Portal.

‘ಸಂಬಳ ಕೊಡಿ; ಇಲ್ಲವೇ ಪ್ರತಿಭಟನೆ ಎದುರಿಸಿ’: ಜನಾರ್ಧನ ರೆಡ್ಡಿಗೆ ‘ಜನಶ್ರೀ’ ಸಿಬ್ಬಂದಿ ಡೆಡ್‌ಲೈನ್

‘ಸಂಬಳ ಕೊಡಿ; ಇಲ್ಲವೇ ಪ್ರತಿಭಟನೆ ಎದುರಿಸಿ’: ಜನಾರ್ಧನ ರೆಡ್ಡಿಗೆ ‘ಜನಶ್ರೀ’ ಸಿಬ್ಬಂದಿ ಡೆಡ್‌ಲೈನ್

‘ಸಂಬಳ ಕೊಡಿ; ಇಲ್ಲವೇ ಪ್ರತಿಭಟನೆ ಎದುರಿಸಿ…’ 

ಇದು ಬೆಂಗಳೂರಿನ ಕೋರಮಂಗಲದಲ್ಲಿರುವ ‘ಜನಶ್ರೀ ನ್ಯೂಸ್‌’ ಕಚೇರಿಯಲ್ಲಿ ನಿನ್ನೆಯಿಂದ ಪ್ರತಿಭಟನೆ ಆರಂಭಿಸಿರುವ 123 ಸಿಬ್ಬಂದಿಗಳು ಹಾಗೂ ಪತ್ರಕರ್ತರು ನೀಡಿರುವ ಕೊನೆಯ ಎಚ್ಚರಿಕೆ. ಬಿಜೆಪಿ ನಾಯಕ, ಮಾಜಿ ಸಚಿವ, ಅಕ್ರಮ ಗಣಿ ಹಗರಣದ ಪ್ರಮುಖ ಆರೋಪಿ ಜನಾಧರ್ನ ರೆಡ್ಡಿ ಮಾಲೀಕತ್ವದ ಸುದ್ದಿ ವಾಹಿನಿಯಲ್ಲಿ ಸಂಬಳ ಇಲ್ಲದೆ ಸಿಬ್ಬಂದಿಗಳು ಹಾಗೂ ಪತ್ರಕರ್ತರು ಪರದಾಡುತ್ತಿರುವ ಸ್ಥಿತಿಯನ್ನು ‘ಸಮಾಚಾರ’ ನಿಮ್ಮೆದುರಿಗೆ ಇಟ್ಟಿತ್ತು. ಇದರ ಮುಂದುವರಿದ ಬೆಳವಣಿಗೆಯಲ್ಲಿ, ಗಾಂಧಿ ಜಯಂತಿಯ ದಿನ, ಅಕ್ಟೋಬರ್‌ 2ರಿಂದ ಸುದ್ದಿ ಪ್ರಸಾರವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ಆರಂಭಿಸಿದ್ದಾರೆ.

“ನಮಗೆ 6 ತಿಂಗಳಿನಿಂದ ಸಂಬಳ ನೀಡಿಲ್ಲ. ಜಿಲ್ಲಾ ವರದಿಗಾರರಿಗೆ ಸುಮಾರು 1 ವರ್ಷದಿಂದ ಸಂಬಳ ನೀಡಿಲ್ಲ. ಇವತ್ತು (ಅ.3) ಸಂಬಳ ನೀಡಲು ಗಡವು ನೀಡಿದ್ದೇವೆ. ಒಂದು ವೇಳೆ, ಸಂಬಳ ನೀಡದೆ ಹೋದರೆ ನಾಳೆ ಬೆಂಗಳೂರಿನಲ್ಲಿರುವ ಜನಾರ್ಧನ ರೆಡ್ಡಿ ಮನೆಗೆ ಮೆರವಣಿಗೆ ಹೊರಡುತ್ತೇವೆ. ಇದನ್ನು ಫೇಸ್‌ಬುಕ್‌ ಲೈವ್ ಕೂಡ ನೀಡುತ್ತೇವೆ. ನಮ್ಮ ಇವತ್ತಿನ ಸ್ಥಿತಿಯಲ್ಲಿ ಬೇರೆ ದಾರಿ ಕಾಣುತ್ತಿಲ್ಲ,” ಎಂದು ಜನಶ್ರೀ ನ್ಯೂಸ್‌ ಸಿಬ್ಬಂದಿಯೊಬ್ಬರು ‘ಸಮಾಚಾರ’ದ ಜತೆ ಅಳಲು ತೋಡಿಕೊಂಡರು.

“ನಾವು ಹುಲಿವೇಷ ಹಾಕಿಕೊಂಡು ಅವರ ಎದುರಿಗೆ ಹೋಗಿ ನಿಲ್ಲುತ್ತೇವೆ. ಈಗಾಗಲೇ ಎಲ್ಲಾ ಜಿಲ್ಲಾ ಪತ್ರಕರ್ತರು ಬೆಂಗಳೂರಿಗೆ ಬರುತ್ತಿದ್ದಾರೆ. ಇಂದು ರಾತ್ರಿ ಕಚೇರಿಯಲ್ಲಿಯೇ ಉಳಿಯಲಿದ್ದೇವೆ,” ಎಂದು ತಿಳಿಸಿದರು. ಇತ್ತೀಚೆಗೆ ಜನಾರ್ಧನ ರೆಡ್ಡಿ ಬನ್ನೇರುಘಟ್ಟದ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಾಣಿಗಳನ್ನು ದತ್ತು ತೆಗೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಹುಸಿ ಭರವಸೆ: 

ಸುಮಾರು 20 ದಿನಗಳ ಹಿಂದೆ ಜನಾರ್ಧನ ರೆಡ್ಡಿ ಖುದ್ದಾಗಿ ಜನಶ್ರೀ ನ್ಯೂಸ್ ಕಚೇರಿಗೆ ಭೇಟಿ ನೀಡಿದ್ದರು. “ಹಿಂದಿನ ಸಂಪಾದಕರಿಗೆ 10 ಕೋಟಿ ನೀಡಿದ್ದೆ. ಆದರೆ ಅವರು ಅದನ್ನು ಸರಿಯಾಗಿ ನಿರ್ವಹಿಸಲಿಲ್ಲ. ನಿಮ್ಮ ಸಂಬಳ ಬಾಕಿ ಇದೆ. ವಾರದೊಳಗೆ ಎಲ್ಲವನ್ನೂ ಕ್ಲಿಯರ್ ಮಾಡುತ್ತೇವೆ. ಎಲ್ಲರೂ ಉತ್ಸಾಹದಿಂದ ಕೆಲಸ ಮಾಡಿ,” ಎಂದು ಸಿಬ್ಬಂದಿ ಹಾಗೂ ಪತ್ರಕರ್ತರಿಗೆ ಭರವಸೆ ನೀಡಿ ಹೋಗಿದ್ದರು. ಅದಾಗಿ 2 ವಾರ ಕಳೆದರೂ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವರಿಗೆ ಸಂಬಳದ ಬಾಕಿ ಚುಕ್ತಾ ಮಾಡಲಾಗಿಲ್ಲ.

ಈ ಹಿನ್ನೆಲೆಯಲ್ಲಿ ಕಳೆದ ವಾರ ಜನಶ್ರೀ ನ್ಯೂಸ್ ಸಿಬ್ಬಂದಿ ಜನಾರ್ಧನ ರೆಡ್ಡಿ ಅವರಿಗೆ ಪತ್ರ ಬರೆದಿದ್ದರು. ಅದಕ್ಕೂ ಅವರು ಉತ್ತರಿಸುವ ಗೋಜಿಗೆ ಹೋಗಿರಲಿಲ್ಲ. ‘ಸಮಾಚಾರ’ ಕೂಡ ಈ ಸಂಬಂಧ ಜನಾರ್ಧನ ರೆಡ್ಡಿ ಹಾಗೂ ಅವರ ಸಹೋದರ ಸೋಮಶೇಖರ ರೆಡ್ಡಿ ಅವರನ್ನು ಸಂಪರ್ಕಿಸಲು ಪ್ರಯತ್ನ ಮಾಡಿತಾದರೂ, ಪ್ರತಿಕ್ರಿಯೆ ಲಭ್ಯವಾಗಲಿಲ್ಲ.

ಇದೀಗ, ಬೇಸತ್ತಿರುವ ಸಿಬ್ಬಂದಿ ಹಾಗೂ ಪತ್ರಕರ್ತರು ಪ್ರತಿಭಟನೆಯ ಹಾದಿ ತುಳಿಯಲು ಮುಂದಾಗಿದ್ದಾರೆ.

ಸ್ವಾಮಿ ಸಂಧಾನ: 

janashri-protest-1

ಜನಶ್ರೀ ನ್ಯೂಸ್ ಒಳಗಿನ ಇಂತಹ ಬೆಳವಣಿಗೆಗಳ ನಡುವೆಯೇ, ಆಡಳಿತ ಮಂಡಳಿ ಹೊಸ ಸಂಪಾದಕರನ್ನು ಕರೆತರುವ ಪ್ರಯತ್ನ ಮಾಡಿದೆ. ಇತ್ತೀಚೆಗೆ ‘ಪಬ್ಲಿಕ್ ಟಿವಿ’ ತೊರೆದಿದ್ದ ಹಿರಿಯ ಪತ್ರಕರ್ತ ಶಿವಸ್ವಾಮಿ ಜನಶ್ರೀಯ ನೇತೃತ್ವವಹಿಸಿಕೊಳ್ಳಲು ಮುಂದಾಗಿದ್ದರು. ಆ ಸಮಯದಲ್ಲಿ ಅಲ್ಲಿನ ಸಿಬ್ಬಂದಿಗಳಿಗೆ ಹಾಗೂ ಪತ್ರಕರ್ತರಿಗೆ ಬಾಕಿ ಸಂಬಳ ನೀಡುವ ಭರವಸೆಯನ್ನು ವ್ಯಕ್ತಪಡಿಸಿದ್ದರು.

ಅ.2ರಂದು ಪ್ರತಿಭಟನೆ ಆರಂಭವಾಗುತ್ತಿದ್ದಂತೆ ಶಿವಸ್ವಾಮಿ ಸಿಬ್ಬಂದಿಗಳಿಗೆ ಸಮಾಧಾನಪಡಿಸುವ ಕೆಲಸ ಮಾಡಿದ್ದಾರೆ. ಇದರ ದೃಶ್ಯಾವಳಿಗಳು ‘ಸಮಾಚಾರ’ಕ್ಕೆ ಲಭ್ಯವಾಗಿವೆ. ಇವುಗಳಲ್ಲಿ ಸಿಬ್ಬಂದಿಗಳು ಶಿವಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜನಶ್ರೀ ನ್ಯೂಸ್‌ ‘ಯಶ್ ಬ್ರಾಡ್‌ಕಾಸ್ಟಿಂಗ್ ಇಂಡಸ್ಟ್ರೀಸ್‌ ಪ್ರೈ. ಲಿ.’ ಎಂಬ ಸಂಸ್ಥೆಯ ಮಾಲೀಕತ್ವದಲ್ಲಿರುವ ಸುದ್ದಿ ವಾಹಿನಿ. ಅದರ ನಿರ್ದೇಶಕರುಗಳಾಗಿ ಇರುವವರು ಸಂಜೀವ್ ಬೆಟಗೆರೆ ಹಾಗೂ ಬಾಲನರಸಿಂಹ ಮೂರ್ತಿ. ಸಂಸ್ಥೆಯಲ್ಲಿ ನೇರವಾಗಿ ಜನಾರ್ಧನ ರೆಡ್ಡಿ ಅವರ ಪಾಲುದಾರಿಕೆ ಕಾಣಿಸದಿದ್ದರೂ, ಇದು ಗಣಿ ಧಣಿಯ ಬೇನಾಮಿ ಆಸ್ತಿ ಎಂಬ ಆರೋಪಗಳಿವೆ. ಅವರೇ ಖುದ್ದಾಗಿ ಕಚೇರಿಗೂ ಭೇಟಿ ನೀಡಿ, ಸಿಬ್ಬಂದಿಗಳಿಗೆ ಭರವಸೆ ನೀಡುವುದು ಇದಕ್ಕೆ ಪುಷ್ಠಿಯನ್ನೂ ನೀಡುತ್ತಿದೆ.

ಇದು ಸಂಸ್ಥೆಯ ಆಂತರಿಕ ವಿಚಾರ. ಬರೆಯಲು ಹೋಗಬೇಡಿ ಎಂದ ವಾಹಿನಿಯ ಮಾರುಕಟ್ಟೆಯ ವಿಭಾಗವನ್ನು ನೋಡಿಕೊಳ್ಳುತ್ತಿರುವ ರಂಗಾ ರೆಡ್ಡಿ, “ಸಿಬ್ಬಂದಿಗಳಿಗೆ ಹಾಗೂ ಪತ್ರಕರ್ತರಿಗೆ ಸಂಬಳವಾಗಿಲ್ಲ ನಿಜ. ಈ ಬಗ್ಗೆ ನಿರ್ದೇಶಕರ ಜತೆ ಮಾತುಕತೆ ನಡೆಯುತ್ತಿದೆ. ಇದಕ್ಕೂ ಜನಾರ್ಧನರೆಡ್ಡಿ ಅವರಿಗೂ ನೇರ ಸಂಬಂಧ ಇಲ್ಲ,” ಎಂದರು.

ಜನಶ್ರೀ ನ್ಯೂಸ್‌ಗೂ ಜನಾರ್ಧನ ರೆಡ್ಡಿ ಅವರಿಗೂ ನೇರ ಸಂಬಂಧ ಇದೆಯೋ? ಇಲ್ಲವೋ? ಎಂಬುದು ತಾಂತ್ರಿಕ ವಿಚಾರ. ಆದರೆ ಆರು ತಿಂಗಳಿನಿಂದ ಸಂಬಳ ಇಲ್ಲದೆ ಬೆಂಗಳೂರು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಬದುಕುತ್ತಿರುವ ಪತ್ರಕರ್ತರಿಗೆ ತಾಂತ್ರಿಕತೆಗಳ ಆಚೆಗೆ ತುರ್ತಾಗಿ ಬಾಕಿ ಸಂಬಳ ಬೇಕಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಮಿಷನ್‌- 150 ಕನಸಿಗೆ ನೀರೆರೆಯಲು ಮುಂದಾಗಿರುವ ಗಣಿ ಧಣಿ ರೆಡ್ಡಿ ಕುಟುಂಬ, ತಮ್ಮ ಕನಸಿನ ಸುದ್ದಿ ವಾಹಿನಿಯ ಸಿಬ್ಬಂದಿಗಳು ಬೀದಿಗೆ ಬರುವುದನ್ನು ನೋಡಬೇಕಾಗಿದೆ.

Leave a comment

FOOT PRINT

Top