An unconventional News Portal.

ಕಾಫಿ ಕುಟುಂಬದ ಹಿನ್ನೆಲೆ, ಮಾವನ ರಾಜಕೀಯ ಪ್ರಭಾವ: ‘ಕಾಫಿ ಡೇ ಸಿದ್ದಾರ್ಥ್’ ಉದ್ಯಮಿಯಾಗಿದ್ದು ಹೇಗೆ?

ಕಾಫಿ ಕುಟುಂಬದ ಹಿನ್ನೆಲೆ, ಮಾವನ ರಾಜಕೀಯ ಪ್ರಭಾವ: ‘ಕಾಫಿ ಡೇ ಸಿದ್ದಾರ್ಥ್’ ಉದ್ಯಮಿಯಾಗಿದ್ದು ಹೇಗೆ?

“ಎಂಟು ವರ್ಷದ ಕೆಳಗೆ, ನಾನು ಅಮೆರಿಕಾದ ಉದ್ಯಮಿ ಮೈಕೆಲ್ ಮೊರಿಟ್ಜ್‌ ಜತೆ ಊಟ ಮಾಡುತ್ತಿದ್ದೆ. ಈ ಸಮಯದಲ್ಲಿ ಅವರು ಅವತ್ತಿಗೆ ಎರಡು ಹೊಸ ಕಂಪನಿಗಳ ಮೇಲೆ ತಲಾ 5 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ ಕತೆಯನ್ನು ಹೇಳಿದರು. ಯಾರೂ ಹೂಡಿಕೆ ಮಾಡಲು ಮುಂದೆ ಬಾರದಿದ್ದ ಸಮಯದಲ್ಲಿ ಮೈಕೆಲ್ ಹಣ ಹೂಡಿದ್ದರು. ಮುಂದೆ ಅವು ಸಿಸ್ಕೊ ಮತ್ತು ಗೂಗಲ್ ಹೆಸರಿನಲ್ಲಿ ಬೃಹತ್ ಪ್ರಮಾಣದಲ್ಲಿ ಬೆಳೆದವು. ನನಗೆ ಅಂತಹ ಕತೆಗಳು ಸ್ಫೂರ್ತಿ ನೀಡುತ್ತವೆ. ಇವತ್ತು ಯಾರಾದರೂ ಶ್ರೀಮಂತರಿದ್ದರೆ, ಮುಂದಿನ 10 ವರ್ಷಗಳಲ್ಲಿ ಅವರಿಗಿಂತ ದೊಡ್ಡವರು ಯಾರೂ ಆಗುವುದಿಲ್ಲ ಅಂತ ಅರ್ಥ ಅಲ್ಲ. ಅದೇ ರೀತಿ ನಾವು ಕೂಡ. ಮುಂದಿನ ಐದು ವರ್ಷಗಳಲ್ಲಿ ಇದೇ ಸ್ಥಿತಿಯಲ್ಲಿ ಇರುತ್ತೇವೆ ಅಂತಲ್ಲ. ಯಾವಾಗಲೂ ದೊಡ್ಡ ಕನಸು ಕಾಣಬೇಕು, ಸಾಮಾನ್ಯ ಜ್ಞಾನ ಬಳಸಬೇಕು, ಖರ್ಚಿನ ಮೇಲೆ ಹಿಡಿತ ಇರಬೇಕು…”

2015ರ ಅಕ್ಟೋಬರ್ ತಿಂಗಳಿನಲ್ಲಿ ‘ಎಕನಾಮಿಕ್ ಟೈಮ್ಸ್‌’ಗೆ ನೀಡಿದ ಸಂದರ್ಶನದಲ್ಲಿ ಕಾಫಿ ಡೇ ಖ್ಯಾತಿಯ ಉದ್ಯಮಿ ವಿ. ಜಿ. ಸಿದ್ದಾರ್ಥ್ ಹೇಳಿದ ಮಾತುಗಳು ಇವು. ಅವತ್ತಿಗೆ ಅವರೇ ಹೇಳಿಕೊಂಡ ಪ್ರಕಾರ ಕಾಫಿ ಡೇ ಒಟ್ಟು 1550 ಸ್ಟೋರ್ಸ್‌ ಹೊಂದಿತ್ತು. 43 ಸಾವಿರ ಕಾಫಿ ವೆಂಡಿಂಗ್‌ ಮಷೀನ್‌ಗಳು ಜನರಿಗೆ ಬಿಸಿಬಿಸಿ ಹಾಗೂ ತಣ್ಣನೆಯ ಕಾಫಿ ತಯಾರಿಸಿ ನೀಡುತ್ತಿದ್ದವು.

ಚಿಕ್ಕಮಗಳೂರು ಜಿಲ್ಲೆಯ ಒಕ್ಕಲಿಗ ಕುಟುಂಬದಲ್ಲಿ ಹುಟ್ಟಿದ ಸಿದ್ದಾರ್ಥ್ ಇವತ್ತು ದೇಶದ ಉದ್ಯಮಿಪತಿಗಳ ಸಾಲಿನಲ್ಲಿ ಜಾಗ ಪಡೆದುಕೊಂಡಿದ್ದಾರೆ. ಜತೆಗೆ, ಹಲವು ಆರೋಪಗಳನ್ನೂ ಹೊತ್ತುಕೊಂಡಿದ್ದಾರೆ. ಅವರ ಮೇಲೆ ಆದಾಯ ತೆರಿಗೆ ಇಲಾಖೆ ಗುರುವಾರ ದಾಳಿ ನಡೆಸಿದೆ.

ಇವತ್ತಿಗೆ ದೇಶದ ಬಹುದೊಡ್ಡ ಸರಣಿ ಕಾಫಿ ಶಾಪ್‌ ‘ಕಾಫಿ ಡೇ’ ಮಾಲೀಕ, ಹಣಕಾಸು ವ್ಯವಹಾರ ಸಂಸ್ಥೆಯ ಹೂಡಿಕೆದಾರ, ಆಸ್ಪತ್ರೆ, ಪೀಠೋಪಕರಣ ಉದ್ಯಮಿ, ಲಾಜಿಸ್ಟಿಕ್, ರಿಯಲ್ ಎಸ್ಟೇಟ್ ಹೀಗೆ ನಾನಾ ಕ್ಷೇತ್ರಗಳಲ್ಲಿ ಉದ್ಯಮ ನಡೆಸುತ್ತಿರುವ ಸಿದ್ದಾರ್ಥ್ ಉದ್ಯಮಿಯಾಗಿ ಬೆಳೆದಿದ್ದು ಹೇಗೆ? ಇವುಗಳ ಜತೆಗೆ ಸುಮಾರು 1.09 ಬಿಲಿಯನ್ ಡಾಲರ್‌ ನಿವ್ವಳ ಹೂಡಿಕೆ ಮಾಡಿರುವ ಸಿದ್ದಾರ್ಥ್ ಅವರ ಬೆಳವಣಿಗೆ ಹಿಂದೆ ಹೆಣ್ಣು ಕೊಟ್ಟ ಮಾವ, ಸದ್ಯ ಬಿಜೆಪಿಯಲ್ಲಿರುವ ಎಸ್‌. ಎಂ. ಕೃಷ್ಣ ಅವರ ಪಾತ್ರ ಏನು? ಖ್ಯಾತಿಯ ಆಚೆಗೆ ಸಿದ್ದಾರ್ಥ್ ಅವರ ವಿರುದ್ಧ ಇರುವ ಗುರುತರದ ಆರೋಪಗಳೇನು? ಈ ಎಲ್ಲವನ್ನೂ ‘ಸಮಾಚಾರ’ದ ಈ ವರದಿ ವಿವರವಾಗಿ ನಿಮ್ಮ ಮುಂದಿಡುವ ಪ್ರಯತ್ನ ಮಾಡಿದೆ.

ಹಣ ಮಾಡುವ ಹಾದಿಯಲ್ಲಿ:

 

 

ಮಲೆನಾಡಿನ ಭಾಗದಲ್ಲಿ ಭೂಮಿಯ ಒಡೆತನವನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವವರು ಒಕ್ಕಲಿಗರು. ಅದರಲ್ಲೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಕ್ಕಲಿಗರ ಕುಟುಂಬಗಳು ಕಾಫಿ ಬೆಳೆಯನ್ನು ಹಿಂದಿನಿಂದಲೇ ವಾಣಿಜ್ಯ ಬೆಳೆಯಾಗಿ ಬೆಳೆಯುವ ಸಂಪ್ರದಾಯ ರೂಢಿಸಿಕೊಂಡು ಬಂದವರು. ಅಂತಹ ಕುಟುಂಬವೊಂದರಲ್ಲಿ ಹುಟ್ಟಿದವರು ಸಿದ್ದಾರ್ಥ್. ಮಂಗಳೂರಿನಲ್ಲಿ ಅರ್ಥಶಾಸ್ತ್ರದ ಪದವಿ ಮುಗಿಸಿದ ನಂತರ ಸಿದ್ದಾರ್ಥ್ ಮನೆಯಿಂದ 5 ಲಕ್ಷ ತೆಗೆದುಕೊಂಡು ಹೋಗಿದ್ದು ವಾಣಿಜ್ಯ ನಗರಿ ಮುಂಬೈಗೆ. ಅವರ ಮೊದಲ ಉದ್ಯೋಗ ಜೆ ಎಂ ಫೈನಾನ್ಸಿಯಲ್ ಸರ್ವಿಸಸ್ ಎಂಬ ಸ್ಟಾಕ್‌ ಬ್ರೋಕರ್ ಕಚೇರಿಯಲ್ಲಿ. ಮುಂದೆ, ಸಿದ್ದಾರ್ಥ್ ತಮಗೆ ಮೊದಲು ಕೆಲಸ ನೀಡಿದ ಕಂಪನಿಯನ್ನೇ ಖರೀದಿಸಿ, ವೇ 2 ವೆಲ್ತ್‌ ಎಂಬ ಹಣಕಾಸು ವ್ಯವಹಾರದ ಸಂಸ್ಥೆಯಾಗಿ ಬದಲಾಯಿಸಿದರು ಎನ್ನುತ್ತವೆ ವರದಿಗಳು.

ಮುಂಬೈನಲ್ಲಿ ಕೆಲಕಾಲ ಕೆಲಸ ಮಾಡಿದ ನಂತರ ಸಿದ್ದಾರ್ಥ್ ತಮ್ಮ ಕುಟುಂಬದ ಕಾಫಿ ವ್ಯವಸಾಯಕ್ಕೆ ಮಾರುಕಟ್ಟೆಯ ವ್ಉವಹಾರಿಕ ಸ್ಪರ್ಶ ನೀಡಲು ಮುಂದಾದರು. ಅದು ಸುಮಾರು 1988-90ರ ಕಾಲಘಟ್ಟ. ಕಾಫಿ ಕ್ಯೂರಿಂಗ್ ಯೂನಿಟ್‌ ಒಂದನ್ನು ಮೊದಲ ಖರೀದಿ ಮಾಡಿದರು. ಈ ಸಮಯದಲ್ಲಿ ಸಿದ್ದಾರ್ಥ್ ನೀಡಿದ ಹಲವು ಚೆಕ್‌ಗಳು ಬೌನ್ಸ್ ಕೂಡ ಆಗಿದ್ದವು ಎಂದು ಇವರನ್ನು ಹತ್ತಿರದಿಂದ ಬಲ್ಲವರು ನೆನಪಿಸಿಕೊಳ್ಳುತ್ತಾರೆ.

ಮುಂದೆ, ಅವತ್ತಿಗೆ ಕಾಂಗ್ರೆಸ್‌ನಲ್ಲಿ ಪ್ರಭಾವಿಯಾಗಿದ್ದ ರಾಜಕಾರಣಿ ಎಸ್‌. ಎಂ. ಕೃಷ್ಣ ಅವರ ಮಗಳು ಮಾಳವಿಕಾರನ್ನು ಮದುವೆಯಾದರು. ಮಾವನ ಪ್ರಭಾವ ಬಳಸಿ ಬ್ಯಾಂಕ್‌ಗಳಿಂದ ಸಾಲ ಪಡೆದರು ಎನ್ನುತ್ತಾರೆ ಕೆಲವರು. ವಿಶೇಷವಾಗಿ ಎಸ್‌. ಎಂ. ಕೃಷ್ಣ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಅವಧಿ, ಸಿದ್ದಾರ್ಥ್ ಆರ್ಥಿಕವಾಗಿ ಬೆಳೆದ ಕಾಲ ಕೂಡ. ಚಿಕ್ಕಮಗಳೂರು ಭಾಗದಲ್ಲಿ ಸಾವಿರಾರು ಎಕರೆ ಕಾಫಿ ತೋಟವನ್ನು ಖರೀದಿಸಿದರು. ಇದರಲ್ಲಿ ಸುಮಾರು 200 ಎಕರೆಗಳಷ್ಟು ಅರಣ್ಯ ಭೂಮಿಯ ಒತ್ತುವರಿಯೂ ಆಗಿದೆ ಎಂಬುದಕ್ಕೆ ದಾಖಲೆಗಳಿವೆ.

ಕಾಫಿ ತೋಟಗಳ ಜತೆಗೆ ರೆಸಾರ್ಟ್‌, ಶಾಲೆ, ವೈದ್ಯಕೀಯ ಕ್ಷೇತ್ರಕ್ಕೂ ಸಿದ್ದಾರ್ಥ್ ಕಾಲಿಟ್ಟರು. ಜತೆಗೆ, ಕೆಂಗೇರಿ ಸಮೀಪದ ‘ಗ್ಲೋಬಲ್ ವಿಲೇಜ್’ ಟೆಕ್ನಾಲಜಿ ಪಾರ್ಕ್‌ ಅಭಿವೃದ್ಧಿಪಡಿಸಿದರು. “2004ರಲ್ಲಿ ಬೆಂಗಳೂರಿನಲ್ಲಿ ನಷ್ಟಕ್ಕೆ ಒಳಗಾಗಿ ಸರಕಾರಿ ಸ್ವಾಮ್ಯದ ವಾಚ್‌ ಕಂಪನಿ ಎಚ್‌ಎಂಟಿಯ ಜಾಗವನ್ನು ಇವರು 20 ಕೋಟಿಗೆ ಖರೀದಿ ಮಾಡಿದರು. ಕೆಲವೇ ತಿಂಗಳುಗಳ ಅಂತರದಲ್ಲಿ ಅದನ್ನು ಹೆಚ್ಚಿನ ಬೆಲೆಗೆ ಮಾರಿದರು ಕೂಡ. ಇವತ್ತು ಬೈಯಪ್ಪನಹಳ್ಳಿ ಮೆಟ್ರೊ ಡಿಪೋ ಆಗಿರುವ, ಒಂದು ಕಾಲದಲ್ಲಿ ಸರಕಾರಿ ಸ್ವಾಮ್ಯದ ಎನ್‌ಜಿಇಫ್‌ಗೆ ಸೇರಿದ ಜಾಗದ ಖರೀದಿ ‘ಡೀಲ್‌’ಗೂ ಕೈಹಾಕಿದ್ದರಾದರೂ ಯಶಸ್ಸು ಆಗಲಿಲ್ಲ,” ಎನ್ನುತ್ತಾರೆ ಸಾಮಾಜಿಕ ಹೋರಾಟಗಾರರೊಬ್ಬರು.

ಸಾಲು ಸಾಲು ಕಂಪನಿಗಳು:

ಸುಮಾರು ಎರಡು ದಶಕಗಳ ಅಂತರದಲ್ಲಿ ಸಿದ್ದಾರ್ಥ್ ಬೆಳೆದ ಪರಿ ಎಂತವರನ್ನು ದಂಗಾಗಿಸುತ್ತದೆ. ಅಮಲ್ಗಮೇಟೆಡ್ ಬೀನ್ ಕಾಫಿ ಟ್ರೇಡಿಂಗ್ ಕಂಪನಿ ಲಿ. ಹೆಸರಿನಲ್ಲಿ ಆರಂಭವಾದ ಸಿದ್ದಾರ್ಥ್ ಅವರ ಕಾಫಿ ಉದ್ಯಮ, ಇವತ್ತು ಕಾಫಿ ಡೇ ಹೆಸರಿನಲ್ಲಿ ಬೃಹತ್ ಪ್ರಮಾಣದಲ್ಲಿ ಬೆಳೆದು ನಿಂತಿದೆ. ಇದರ ಜತೆಗೆ, ನಾನಾ ಕ್ಷೇತ್ರಗಳಿಗೆ ಚಾಚಿಕೊಂಡಿರುವ ಉದ್ಯಮ ಮತ್ತು ಹೂಡಿಕೆ ಅವರನ್ನು ಶ್ರೀಮಂತ ಉದ್ಯಮಿ ಮಾತ್ರವಲ್ಲ, ಪ್ರಭಾವಿ ಎಂದು ಗುರುತಿಸುತ್ತಿವೆ. ಫೋರ್ಬ್ಸ್‌ನಿಂದ ಆರಂಭಗೊಂಡು ಬ್ಲೂಂಬರ್ಗ್‌ವರೆಗೆ ಅವರ ಪ್ರೊಫೈಲ್‌ ಲಭ್ಯವಿದೆ.

 

ಆದರೆ, ಇವೆಲ್ಲವುಗಳ ಹಿಂದೆ ಅಕ್ರಮ ವ್ಯವಹಾರದ ಅನುಮಾನಗಳಿವೆ ಎಂದು ಕರ್ನಾಟಕ ಮೂಲದ ‘ಸಮಾಜ ಪರಿವರ್ತನ ಸಮುದಾಯ’ ಈ ಹಿಂದೆ ಕಪ್ಪು ಹಣದ ವಿರುದ್ಧ ರಚನೆಗೊಂಡ ‘ವಿಶೇಷ ತನಿಖಾ ತಂಡ'(ಎಸ್‌ಐಟಿ)ಗೆ ದೂರು ನೀಡಿತ್ತು.

ಎಸ್‌ಐಟಿಗೆ ನೀಡಿದ ದೂರಿನ ಪ್ರತಿ.

ಎಸ್‌ಐಟಿಗೆ ನೀಡಿದ ದೂರಿನ ಪ್ರತಿ.

ಈ ದೂರಿನಲ್ಲಿ ಸಿದ್ದಾರ್ಥ್ ಹಾಗೂ ಅವರ ಸಂಬಂಧಿಗಳಾದ ನಿತಿನ್ ಬಾಗ್‌ಮನೆ, ರಾಜಾ ಬಾಗ್‌ಮನೆ, ನಾಗವೇಣಿ ಹಾಗೂ ಗುರುಚರಣ್‌ ಎಂಬುವವರ ಹೆಸರುಗಳನ್ನು ಉಲ್ಲೇಖಿಸಲಾಗಿತ್ತು. ಜತೆಗೆ, ಇವರುಗಳ ಹೆಸರಿನಲ್ಲಿ ಬೆಂಗಳೂರಿನ ಕಸದ ನಿರ್ವಹಣೆಯಿಂದ ಹಿಡಿದು ಹಲವು ಉದ್ಯಮಗಳನ್ನು ನಡೆಸಲು ಸ್ಥಾಪಿಸಿರುವ ಸುಮಾರು 21 ಕಂಪನಿಗಳನ್ನು ಹೆಸರಿಸಲಾಗಿತ್ತು.

ಎಸ್‌ಐಟಿಗೆ ನೀಡಿದ ದೂರಿನ ಪ್ರತಿಯಲ್ಲಿರುವ ಕಂಪನಿಗಳ ಪಟ್ಟಿ.

ಎಸ್‌ಐಟಿಗೆ ನೀಡಿದ ದೂರಿನ ಪ್ರತಿಯಲ್ಲಿರುವ ಕಂಪನಿಗಳ ಪಟ್ಟಿ.

ಕೆಲವು ತಿಂಗಳ ಹಿಂದೆ ಎಸ್‌. ಎಂ. ಕೃಷ್ಣ ತಮ್ಮ ಇಳೀ ವಯಸ್ಸಿನಲ್ಲಿ ಭಾರತೀಯ ಜನತಾ ಪಕ್ಷ ಸೇರಿಕೊಂಡರು. “ಇದು ಅಳಿಯ ಸಿದ್ದಾರ್ಥ್ ಕಟ್ಟಿದ ಬೃಹತ್ ಉದ್ಯಮ ಸಾಮ್ರಾಜ್ಯದ ರಕ್ಷಣೆ ಹಿನ್ನೆಲೆಯಲ್ಲಿ ತೆಗೆದುಕೊಂಡ ಕ್ರಮ,” ಎಂದು ಸಾಮಾಜಿಕ ಹೋರಾಟಗಾರ ಎಸ್‌. ಆರ್. ಹಿರೇಮಠ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು.

ಇವತ್ತು ಸಿದ್ದಾರ್ಥ್ ಹಾಗೂ ಅವರ ಸಂಬಂಧಿಗಳ ಆಸ್ತಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಇಲಾಖೆ ದಾಳಿ ನಡೆದಿದೆ. ಕೇಂದ್ರ ಸರಕಾರದ ಅಡಿಯಲ್ಲಿರುವ ಐಟಿ ಇಲಾಖೆಯ ಈ ದಾಳಿ ಅನಿರೀಕ್ಷಿತ ಅಲ್ಲದಿದ್ದರೂ, “ಚುನಾವಣೆ ಹಿನ್ನೆಲೆಯಲ್ಲಿ ನಡೆದ ಕಣ್ಣೊರೆಸು ತಂತ್ರ,” ಎಂಬ ಮಾತುಗಳೂ ಕೇಳಿ ಬರುತ್ತಿವೆ.

ಇವೆಲ್ಲವುಗಳ ಆಚೆಗೆ, ಮಲೆನಾಡಿನ ಕೃಷಿ ಕುಟುಂಬದಲ್ಲಿ ಹುಟ್ಟಿದ ಸಿದ್ದಾರ್ಥ್ ಬೆಳೆದ ಹಾದಿಯಲ್ಲಿ ಐಟಿ ದಾಳಿ ಮಹತ್ವದ ತಿರುವು ಏನಲ್ಲ. ಆದರೆ ಈ ದೇಶದಲ್ಲಿ ಉತ್ತಮ ಕೌಟುಂಬಿಕ ಹಿನ್ನೆಲೆ, ರಾಜಕೀಯ ಸಂಬಂಧಗಳ ಪ್ರಭಾವ ಹಾಗೂ ದೊಡ್ಡ ಕನಸುಗಳಿದ್ದರೆ ಒಬ್ಬ ಮನುಷ್ಯ ಹೇಗೆಲ್ಲಾ ಬೆಳೆಯಬಹುದು ಎಂಬುದಕ್ಕೆ ಸಿದ್ದಾರ್ಥ್ ಉತ್ತಮ ಉದಾಹರಣೆ. ಬೆಳವಣಿಗೆಗಳ ಪ್ರಭೆಯಲ್ಲಿ ಅವರ ಮೇಲಿನ ಆರೋಪಗಳನ್ನು ಮೀರಿಯೂ, ‘ಸೋ ಕಾಲ್ಡ್ ಸಕ್ಸಸ್ ಕತೆ’ಗೆ ನಾಯಕರಾಗಲೂ ಸಾಧ್ಯ ಎಂಬುದನ್ನು ಅವರು ನಿರೂಪಿಸಿದ್ದಾರೆ. ಇಷ್ಟನ್ನು ನೆನಪಿಸಿಕೊಳ್ಳು ಐಟಿ ದಾಳಿ ಒಂದು ನೆಪ ಅಷ್ಟೆ.

Leave a comment

FOOT PRINT

Top