An unconventional News Portal.

‘ಈ ಚಿತ್ರಗಳು ಏನನ್ನು ಹೇಳುತ್ತಿವೆ?’: ಅಂದು ಅಲನ್ ಕುರ್ದಿ; ಇಂದು ರೊಹಿಂಗ್ಯಾ ಕಂದ…

‘ಈ ಚಿತ್ರಗಳು ಏನನ್ನು ಹೇಳುತ್ತಿವೆ?’: ಅಂದು ಅಲನ್ ಕುರ್ದಿ; ಇಂದು ರೊಹಿಂಗ್ಯಾ ಕಂದ…

ಕಳೆದ ಮೂರು ದಿನಗಳಿಂದ ಕರ್ನಾಟಕದ ಫೇಸ್ಬುಕ್ ಬಳಕೆದಾರರ ಒಂದು ವಲಯದಲ್ಲಿ, ‘ಈ ಚಿತ್ರ ಏನನ್ನು ಹೇಳುತ್ತಿದೆ?’ ಎಂಬ ವಾಕ್ಯ ಹಾಸ್ಯಕ್ಕೆ, ಆರೋಪಕ್ಕೆ, ಪ್ರತಿಕ್ರಿಯೆಗೆ ಕಾರಣವಾಗಿದೆ.

ಮಾಜಿ ಕಾನೂನು ಸಚಿವ ಸುರೇಶ್ ಕುಮಾರ್ ಎಸ್‌. ಅವರು ತಮ್ಮ ಫೇಸ್ಬುಕ್‌ ಖಾತೆಯಲ್ಲಿ ಗೌರಿ ಲಂಕೇಶ್ ಹತ್ಯೆಗೆ ಪ್ರತಿರೋಧ ವ್ಯಕ್ತಪಡಿಸುವ ಸಮಾವೇಶದಲ್ಲಿ ಪಾಲ್ಗೊಂಡ ತಾಯಂದಿರ ಚಿತ್ರವನ್ನು ಪೋಸ್ಟ್ ಮಾಡಿದ್ದಲ್ಲದೆ; ಮತ್ತು ಅದಕ್ಕೆ ‘ಈ ಚಿತ್ರ ಏನು ಹೇಳುತ್ತಿದೆ?’ ಎಂಬ ಟ್ಯಾಗ್‌ಲೈನ್‌ ಬರೆದಿದ್ದರು.

ಇದಕ್ಕೆ ಪ್ರತಿಕ್ರಿಯೆ ರೂಪದಲ್ಲಿ, ಉತ್ತರ ಕರ್ನಾಟಕ ಮೂಲಕ ಸಾಮಾಜಿಕ ಹೋರಾಟಗಾರ್ತಿ, ಪ್ರತಿರೋಧ ಸಮಾವೇಶದಲ್ಲಿ ಪ್ರಾಸ್ತಾವಿಕ ಮಾತುಗಳನ್ನು ಆಡಿದ ಕೆ. ನೀಲಾ ತಮ್ಮ ಖಾತೆಯಲ್ಲಿ ಚಿತ್ರದಲ್ಲಿರುವ ತಾಯಂದಿರನ್ನು ಪರಿಚಯಿಸಿದರು.

ಕೆ. ನೀಲಾ ಅವರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆ, ‘ಈ ಚಿತ್ರ ಏನನ್ನು ಹೇಳುತ್ತದೆ’ ಎಂಬ ಟ್ಯಾಗ್‌ ಲೈನ್ ಜನಪ್ರಿಯವಾಯಿತು. ಇದೇ ವಾಕ್ಯವನ್ನು ಬಳಸಿ ಬಲಪಂಥೀಯ ರಾಜಕೀಯವನ್ನು ಅಣಕಿಸುವ ಚಿತ್ರಗಳನ್ನು ‘ಕುರೇಶ್ ಸುಮಾರ್ ಎಸ್‌’ ಎಂಬ ಪೇಜ್‌ನಲ್ಲಿ ಪೋಸ್ಟ್‌ಗಳು ಸೃಷ್ಟಿಯಾದವು.

ಶನಿವಾರ ಮುಂಜಾನೆ, ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಸುರೇಶ್ ಕುಮಾರ್ ಎಸ್‌:

‘ನನ್ನ “ಈ ಚಿತ್ರ ಏನು ಹೇಳುತ್ತದೆ” ಆ ಫಲಕ ಹಿಡಿದಿರುವ ಅವ್ವಂದಿರನ್ನು ಅವಹೇಳನಗೊಳಿಸಲು ಖಂಡಿತ ಅಲ್ಲ. ಅವರು ನನ್ನ ಅವ್ವಂದಿರೂ ಸಹ.

ನರೇಂದ್ರ ಮೋದಿಯವರ ಅವ್ವನನ್ನೂ ಸೇರಿಸಿಕೊಂಡು ಈ ಮುಗ್ದರನ್ನು ನಿಜವಾಗಿಯೂ ಅವಮಾನಿಸಿದವರೇ ನನ್ನ ಆ ಪೋಸ್ಟನ್ನು ಅಪಾರ್ಥಗೊಳಿಸುವ ಅಭಿಯಾನ ನಡೆಸಿದ್ದಾರೆ. ಇದಕ್ಕೆ ವಿಷಾದಿಸುತ್ತೇನೆ.’ ಎಂದಿದ್ದಾರೆ.

‘ಚಿತ್ರಗಳು ಏನು ಹೇಳುತ್ತವೆ?’ ಅಭಿಯಾನ:  

ಸಾವಿರ ಪದಗಳನ್ನು ಒಂದು ಚಿತ್ರ ಹೇಳುತ್ತದೆ ಎಂಬ ಮಾತಿದೆ. ಆಗಾಗ ಚಿತ್ರಗಳು ಜಗತ್ತನ್ನು ಅಣುಕಿಸಿವೆ; ಅಳಿಸಿವೆ; ಮಾತನಾಡಿಸಿವೆ. ಎರಡು ವರ್ಷಗಳ ಹಿಂದೆ 2015ರ ಸೆ. 2ರಂದು ಅಲನ್ ಕುರ್ದಿ ಎಂಬ ಸಿರಿಯಾದ ನಿರಾಶ್ರಿತ ಪುಟ್ಟ ಕಂದಮ್ಮನ ಸಾವು, ಇಡೀ ಜಗತ್ತನ್ನೇ ಮಮ್ಮಲ ಮರುಗಿಸಿತ್ತು. ಸಮುದ್ರ ದಂಡೆಯ ಮೇಲೆ ಬೋರಲಾಗಿ ಬಿದ್ದ ಮೂರು ವರ್ಷದ ಪುಟ್ಟ ಕಂದ ಅಲನ್ ಕುರ್ದಿಯ ಚಿತ್ರ ನೋಡುಗರ ಮನ ಕಲಕಿಸಿತ್ತು. ಇದಾದ ಬೆನ್ನಿಗೆ ಮಧ್ಯ ಪೂರ್ವ ದೇಶಗಳ ನಿರಾಶ್ರಿತರ ಬಗ್ಗೆ, ವಿಶ್ವದಾದ್ಯಂತ ವಿಶೇಷ ಅನುಕಂಪ ಸೃಷ್ಟಿಯಾಗಿತ್ತು. ಇವತ್ತಿಗೂ ನಿರಾಶ್ರಿತರ ಪರಿಪಾಟಲು ನಿಂತಿಲ್ಲ. ಆದರೆ ಅವತ್ತಿಗೆ ಜಗತ್ತಿನ ಗಮನವನ್ನು ಈ ಕಡೆ ಸೆಳೆಯಲು ಒಂದು ಚಿತ್ರ ಕಾರಣವಾಗಿತ್ತು.

ಮೆಡಿಟೇರಿಯನ್ ಸಮುದ್ರದಲ್ಲಿ ಸಿಕ್ಕ ಅಲನ್ ಮೃತ ದೇಹ.

ಮೆಡಿಟೇರಿಯನ್ ಸಮುದ್ರ ದಂಡೆಯಲ್ಲಿ ಸಿಕ್ಕ ಅಲನ್ ಮೃತ ದೇಹ.


ಹೆಚ್ಚಿನ ಮಾಹಿತಿ: ‘ಅಲನ್ ಕುರ್ದಿ ಸಾವಿನ ವರ್ಷದ ಸ್ಮರಣೆ’: ಬದಲಾಗದ ಪರಿಸ್ಥಿತಿಯನ್ನು ಮುಂದಿಡುತ್ತಿರುವ ಅಂಕಿಅಂಶಗಳು!


ಇವತ್ತು ಇಂತಹದೇ ಮತ್ತೊಂದು ಚಿತ್ರ, ಜಗತ್ತಿನ ಈ ಮೂಲೆಯಿಂದ ಬಂದಿದೆ. ಅದು ಗುಳೇ ಹೊರಟಿರುವ ರೊಹಿಂಗ್ಯಾ ಕುಟುಂಬವೊಂದು ಪುಟ್ಟ ಕಂದಮ್ಮನನ್ನು ಕಳೆದುಕೊಂಡು ಅಳುತ್ತಿರುವುದು.


ರೊಹಿಂಗ್ಯಾ ನಿರಾಶ್ರಿತರ ಕುರಿತು:

‘ಬೌದ್ಧ ದೇಶದ ಅಲ್ಪಸಂಖ್ಯಾತರು’: ರೋಹಿಂಗ್ಯಾ ಮುಸ್ಲಿಂರು, ಧರ್ಮ ಮತ್ತು ಮಿತಿ ಮೀರಿದ ದಾಳಿಗಳು…


 

ಕೃಪೆ: ಸಿಎನ್‌ಎನ್‌.

ಕೃಪೆ: ಸಿಎನ್‌ಎನ್‌.

ಈ ಚಿತ್ರದ ಹಿಂದಿರುವ ಕತೆಯನ್ನು ‘ಡಿ ಟೆಲಿಗ್ರಾಫ್’ ಶನಿವಾರ ಪ್ರಕಟಿಸಿದೆ.

ಕೃಪೆ: ಟೆಲಿಗ್ರಾಫ್ ಇ- ಪೇಪರ್.

ಕೃಪೆ: ಟೆಲಿಗ್ರಾಫ್ ಇ- ಪೇಪರ್.

ಇಲ್ಲಿಯೂ ಕೂಡ ಒಂದು ಮಾನವೀಯ ಬಿಕ್ಕಟ್ಟು ಸೃಷ್ಟಿಯಾಗಿದೆ.

ಮಯನ್ಮಾರ್ ಸೇನೆಯ ಹಿಂಸಾಚಾರಕ್ಕೆ ಬೆದರಿ ದೇಶ ಬಿಟ್ಟ ರೊಹಿಂಗ್ಯಾ ಮುಸ್ಲಿಂರು, ಬಾಂಗ್ಲಾದೇಶ ಮತ್ತು ಮಯನ್ಮಾರ್ ಗಡಿಗಳ ಮಧ್ಯದ ‘ನೋ ಮ್ಯಾನ್ಸ್ ಲ್ಯಾಂಡ್’ (ಎರಡೂ ದೇಶಗಳಿಗೆ ಸೇರದ ಖಾಲಿ ಪ್ರದೇಶ) ಜಾಗದಲ್ಲಿ ನಿಂತಿದ್ದಾರೆ. ಅತ್ತ ಬಾಂಗ್ಲಾ ತನ್ನ ಗಡಿಯೊಳಕ್ಕೆ ಇವರನ್ನು ಬರಲು ಬಿಡುತ್ತಿಲ್ಲ. ಮಯನ್ಮಾರ್‌ಗೆ ಮತ್ತೆ ಮರಳಲು ಅವಕಾಶ ನೀಡುತ್ತಿಲ್ಲ.

ಇವರಲ್ಲದೆ 1970ರಿಂದ ಆರಂಭಿಸಿ ವಲಸೆ ಹೋದ ಸುಮಾರು 10 ಲಕ್ಷ ರೋಹಿಂಗ್ಯಾ ಮುಸ್ಲಿಮರು ಬೇರೆ ಬೇರೆ ದೇಶಗಳಲ್ಲಿದ್ದಾರೆ. ಇವರು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾರಾದರೂ ಅಪಾಯ, ಅನಿಶ್ಚಿತತೆಗಳಲ್ಲೇ ಬದುಕಿನ ಬಂಡಿ ಎಳೆಯುತ್ತಿದ್ದಾರೆ.

ಭಾರತದ ವಿಚಾರವನ್ನೇ ತೆಗೆದುಕೊಂಡರೆ ಇಲ್ಲಿ ಸುಮಾರು 14,000 ರೋಹಿಂಗ್ಯಾ ಮುಸ್ಲಿಮರಿದ್ದಾರೆ ಎಂದು ವರದಿಗಳು ಹೇಳುತ್ತವೆ. ಇವರನ್ನು ವಾಪಾಸ್ ಕಳುಹಿಸುವ ಕುರಿತು ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದರು. ಜತೆಗೆ ಜಮ್ಮು ಕಾಶ್ಮೀರವೂ ಸೇರಿದಂತೆ ದೇಶದ ಹಲವು ಭಾಗಗಲ್ಲಿ ರೋಹಿಂಗ್ಯಾ ಮುಸ್ಲಿಮರನ್ನು ಗಡಿಪಾರು ಮಾಡುವಂತ ಪ್ರತಿಭಟನೆಗಳೂ ನಡೆಯುತ್ತಿವೆ. ಹೀಗಾಗಿ ಭಾರತದಲ್ಲಿ ತಾತ್ಕಾಲಿಕ ನೆಲೆ ಸಿಕ್ಕಿದ್ದರೂ ಅದಕ್ಕೆ ದೀರ್ಘ ಕಾಲದ ಗ್ಯಾರೆಂಟಿಯಂತೂ ಇಲ್ಲ. ಸದ್ಯ, ರೊಹಿಂಗ್ಯಾ ಮುಸ್ಲಿಂರನ್ನು ‘ಭಯೋತ್ಪಾದನೆ’ಯ ನೆಪ ಮುಂದಿಟ್ಟು ಆಶ್ರಯ ನೀಡಲು ನಿರಾಕರಿಸುವ ಸಾದ್ಯತೆಗಳೂ ಇವೆ.

ಇದೇ ವೇಳೆಯಲ್ಲಿ ಮಾಜಿ ಕಾನೂನು ಸಚಿವ, ಬಿಜೆಪಿ ನಾಯಕ, ಸಜ್ಜನ ರಾಜಕಾರಣಿ ಎಂದು ಕರೆಸಿಕೊಳ್ಳುವ ಸುರೇಶ್ ಕುಮಾರ್ ಎಸ್‌ ‘ಈ ಚಿತ್ರಗಳು ಏನನ್ನು ಹೇಳುತ್ತಿವೆ?’ ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ. ಚಿತ್ರಗಳು ಅಂದು ಅಲನ್‌ ಕುರ್ದಿಯನ್ನು, ಇಂದು ರೊಹಿಂಗ್ಯಾ ಕಂದನ ಕತೆಗಳನ್ನು ಹೇಳುತ್ತಿವೆ.

Leave a comment

FOOT PRINT

Top