An unconventional News Portal.

ಜಪಾನ್‌ ಯಾಕೆ ಬುಲೆಟ್‌ ರೈಲು ಯೋಜನೆಗೆ ಭಾರತದಲ್ಲಿ ಲಕ್ಷ ಕೋಟಿಗಳ ಹೂಡಿಕೆ ಮಾಡುತ್ತಿದೆ?

ಜಪಾನ್‌ ಯಾಕೆ ಬುಲೆಟ್‌ ರೈಲು ಯೋಜನೆಗೆ ಭಾರತದಲ್ಲಿ ಲಕ್ಷ ಕೋಟಿಗಳ ಹೂಡಿಕೆ ಮಾಡುತ್ತಿದೆ?

ಇದು ಭಾರತ- ಜಪಾನ್‌ ಭಾಯಿ ಭಾಯಿ ಅನ್ನೋ ಕಾಲ.

ಕಳೆದ 6 ವರ್ಷಗಳ ಅಂತರದಲ್ಲಿ ಭಾರತ ಮತ್ತು ಜಪಾನ್ ನಡುವೆ ಆರಂಭಗೊಂಡ ಹೊಸ ಆರ್ಥಿಕ ಸಂಬಂಧ ಇವತ್ತು ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಭಾರತದಲ್ಲಿ ನಡೆಯುತ್ತಿರುವ ಮೆಟ್ರೊ ರೈಲು ಯೋಜನೆಯಿಂದ ಆರಂಭಗೊಂಡು, ಮಹಾನಗರಗಳ ನೀರು ಸರಬರಾಜು, ಒಳಚರಂಡಿ ವ್ಯವಸ್ಥೆವರೆಗೆ ಜಪಾನ್‌ ಹಣ ಹರಿದು ಬಂದಿದೆ. ಇದೀಗ ಗುಜರಾತಿನ ಅಹ್ಮದಾಬಾದ್‌ ಮತ್ತು ಮುಂಬೈ ನಡುವೆ ಬುಲೆಟ್‌ ರೈಲು ಯೋಜನೆಗೆ ದೀರ್ಘಾವಧಿ ಸಾಲವನ್ನು ನೀಡಲು ಜಪಾನ್ ಮುಂದೆ ಬಂದಿದೆ.

ಹೀಗೆ, ಭಾರತದ ನಗರ ಕೇಂದ್ರಿತ ಯೋಜನೆಗಳಿಗೆ ಹಣ ಹೂಡುತ್ತಿರುವ ಜಪಾನ್‌ ಮನಸ್ಸಿನಲ್ಲಿ ನಿಜಕ್ಕೂ ಏನಿದೆ?

ಬುಲೆಟ್‌ ರೈಲು:

ಅಹ್ಮದಾಬಾದ್ ಮತ್ತು ವಾಣಿಜ್ಯ ನಗರಿಯನ್ನು ಸಂಪರ್ಕಿಸುವ ಬುಲೆಟ್ ರೈಲು ಯೋಜನೆಯ ಕಾಮಗಾರಿಗೆ ಚಾಲನೆ ಸಿಗುತ್ತಿದೆ. ಇದು ಸುಮಾರು 1.10 ಲಕ್ಷ ಕೋಟಿ ರೂಪಾಯಿ ವೆಚ್ಚದ ಯೋಜನೆ. ಇದರಲ್ಲಿ ಜಪಾನ್ ದೇಶದ ಹಣ ಶೇ. 81ರಷ್ಟು. ಅತ್ಯಲ್ಪ ಕಡಿಮೆ ಬಡ್ಡಿ ದರದಲ್ಲಿ (0.1%)ದಲ್ಲಿ ಜಪಾನ್ 50 ವರ್ಷಗಳ ದೀರ್ಘಾವಧಿ ಸಾಲವನ್ನು ಭಾರತಕ್ಕೆ ನೀಡುತ್ತಿದೆ. ಸುಮಾರು 508 ಕಿ. ಮೀ ರೈಲು ಯೋಜನೆ ಇದಾಗಿದ್ದು, ಕಾಮಗಾರಿಯಲ್ಲಿ ಕೊರಿಯಾ ಮತ್ತು ಜಪಾನ್ ದೇಶದ ಕಂಪನಿಗಳು ಪ್ರಮುಖ ಪಾತ್ರವನ್ನು ವಹಿಸಲಿವೆ.

ಇದನ್ನು ಹೊರತುಪಡಿಸಿ, ಜಪಾನ್ ಭಾರತದ ಹಲವು ಮೆಟ್ರೊ ರೈಲು ಯೋಜನೆಗಳಿಗೆ, ಬೆಂಗಳೂರಿನ ಜಲಮಂಡಳಿಯೂ ಸೇರಿದಂತೆ ನಾನಾ ನಗರಗಳ ನೀರು ಸರಬರಾಜು ಯೋಜನೆಗಳಿಗೆ ಸಾಲ ನೀಡಿದೆ. “ಕಳೆದ 6 ವರ್ಷಗಳಲ್ಲಿ ಜಪಾನ್ ಮತ್ತು ಭಾರತದ ನಡುವೆ ವಾಣಿಜ್ಯ ಸಂಬಂಧ ಗಟ್ಟಿಯಾಗಿದೆ. ಇದಕ್ಕೆ ಕಾರಣ ಬೆಳೆದು ನಿಂತ ಚೈನಾ ಆರ್ಥಿಕತೆ,” ಎನ್ನುತ್ತಾರೆ ವಿದೇಶಾಂಗ ಸಚಿವಾಲಯದ ಅಧಿಕಾರಿಯೊಬ್ಬರು.

2005ರ ಹೊತ್ತಿಗೆ ಭಾರತಕ್ಕೆ ಜಪಾನ್‌ ದೇಶದಿಂದ ಆಮದು ಆಗುತ್ತಿದ್ದ ಸರಕು ಮತ್ತು ಸೇವೆಗಳ ಪ್ರಮಾಣ 22,900 ಕೋಟಿಯಷ್ಟಿತ್ತು. ಇದು 2015ರ ಹೊತ್ತಿಗೆ 57,800 ಕೋಟಿ ಮುಟ್ಟಿದೆ. ಭಾರತದ ಸಣ್ಣ ಕಾರುಗಳ ಉತ್ಪಾದನೆ ಹಾಗೂ ರೈಲು ಯೋಜನೆಗಳಲ್ಲಿ ಜಪಾನ್ ಪ್ರಮುಖ ಪಾತ್ರವನ್ನು ವಹಿಸುತ್ತಿದೆ.

2015ರಲ್ಲಿ ಪ್ರಧಾನಿ ಮೋದಿ ಜಪಾನ್‌ಗೆ ಭೇಟಿ ನೀಡಿದ್ದ ಸಮಯದಲ್ಲಿ ಹೊಸ ವಾಣಿಜ್ಯ ಒಪ್ಪಂದಗಳಿಗೆ ಸಹಿ ಹಾಕಲಾಗಿತ್ತು. ಅದರ ಪ್ರಕಾರ 2019ರ ಹೊತ್ತಿಗೆ ಭಾರತದಲ್ಲಿ ಜಪಾನ್‌ ದೇಶದ ಕಂಪನಿಗಳಿಗೆ ಹೆಚ್ಚಿನ ಅವಕಾಶ ಮತ್ತು ವಾಣಿಜ್ಯ ವ್ಯವಹಾರವನ್ನು 2.1 ಲಕ್ಷ ಕೋಟಿಗೆ ಏರಿಸುವ ಭರವಸೆ ನೀಡಲಾಗಿತ್ತು. ಸದ್ಯ ಯುವ ತಲೆಮಾರಿನ ಅಲಭ್ಯತೆಯಿಂದಾಗಿ ಜಪಾನ್‌ ಆರ್ಥಿಕತೆ ಸಂಕಷ್ಟದಲ್ಲಿದೆ. ಈ ಸಮಯದಲ್ಲಿ ಜನಸಂಖ್ಯೆಯಿಂದ ತುಂಬಿ ತುಳುಕುತ್ತಿರುವ ಭಾರತ ಪುಟ್ಟ ದೇಶ ಜಪಾನ್‌ ಪಾಲಿಗೆ ಹೊಸ ಹೂಡಿಕೆ ತಾಣವಾಗಿ, ಮಾರುಕಟ್ಟೆಯಾಗಿ ಬದಲಾಗಿದೆ.

ಒಪ್ಪಂದಗಳ ಹಿನ್ನೆಲೆ:

ಜಪಾನ್‌ ಕಡಿಮೆ ಬಡ್ಡಿಗೆ, ದೀರ್ಘಾವಧಿ ನೆಲೆಯಲ್ಲಿ ಭಾರತಕ್ಕೆ ದೊಡ್ಡ ಮೊತ್ತದ ಸಾಲ ನೀಡುತ್ತಿದೆ. ಆದರೆ ಪ್ರತಿ ಬಾರಿ ಸಾಲ ನೀಡುವಾಗಲೂ ವಿಚಿತ್ರ ಒಪ್ಪಂದಗಳಿಗೆ ಸಹಿ ಹಾಕಬೇಕಾಗುತ್ತದೆ. “ಬೆಂಗಳೂರು ಮೆಟ್ರೊ ರೈಲು ಯೋಜನೆ ವಿಚಾರಕ್ಕೆ ಬಂದರೆ, ಮೊದಲ ಹಂತಕ್ಕೆ ಸುಮಾರು 13 ಸಾವಿರ ಕೋಟಿ ಖರ್ಚಾಗಿತ್ತು. ಇದರಲ್ಲಿ ಶೇ. 30ರಷ್ಟು ಜಪಾನ್‌ ಹಣಕಾಸು ಸಂಸ್ಥೆ ಜೈಕಾ ಸಾಲ ನೀಡಿತ್ತು. ಆದರೆ, ಸಾಲ ನೀಡವ ಮುನ್ನ ಮೆಟ್ರೊ ರೈಲಿನ ಆಸ್ತಿ ಪಾಸ್ತಿಗಳನ್ನು ಅಡಮಾನ ಇಡುವಂತೆ ತಿಳಿಸಲಾಗಿತ್ತು. ಇವತ್ತು ಬೆಂಗಳೂರು ಮೆಟ್ರೊ ರೈಲು ನಿಗಮದ ಬಹುತೇಕ ಆಸ್ತಿ ಜಪಾನ್‌ ಹಣಕಾಸು ಸಂಸ್ಥೆಗೆ ಬರೆದು ಕೊಡಲಾಗಿದೆ,” ಎನ್ನುತ್ತಾರೆ ಹೆಸರು ಹೇಳಲು ಇಚ್ಚಿಸದ ಬಿಎಂಆರ್‌ಸಿಎಲ್‌ ಅಧಿಕಾರಿಯೊಬ್ಬರು.

ಬೆಂಗಳೂರು ಮೆಟ್ರೊ ಯೋಜನೆಗೆ ಜಪಾನ್‌ನಿಂದ ಪಡೆದ ಸಾಲದ ವಿವರಗಳು ಈವರೆಗೂ ಬಹಿರಂಗವಾಗಿಲ್ಲ. ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಕೋರಲಾದ ವಿವರಗಳನ್ನು ‘ಎಕನಾಮಿಕ್ ಕಾನ್ಫಿಡೆನ್ಷಿಯಾಲಿಟಿ’ ಅಡಿಯಲ್ಲಿ ನಿರಾಕರಿಸಲಾಗಿದೆ ಎಂಬುದು ಗಮನಾರ್ಹ.

ಹೆಚ್ಚು ಕಡಿಮೆ, ಇದೇ ಮಾದರಿಯಲ್ಲಿ ಚೈನಾ ಕೂಡ ಅಮೆರಿಕಾದ ರಿಯಲ್‌ ಎಸ್ಟೇಟ್ ಮೇಲೆ 20ನೇ ಶತಮಾನದ ಅಂತ್ಯದಲ್ಲಿ ಹೇರಳ ಹೂಡಿಕೆ ಮಾಡಿತ್ತು. ಅಲ್ಲಿ ರಿಯಲ್ ಎಸ್ಟೇಟ್ ನೆಲಕ್ಕಚ್ಚಿದ ಹಿನ್ನೆಲೆಯಲ್ಲಿ ಇವತ್ತು ಅಮೆರಿಕಾದ ಭೂಭಾಗಗಳ ಮೇಲೆ ಚೈನಾ ಪರೋಕ್ಷವಾಗಿ ಅಧಿಪತ್ಯ ಸ್ಥಾಪಿಸಿದೆ. ಇದೀಗ, ಭಾರತದ ರೈಲು ಯೋಜನೆಗಳ ಹೆಸರಿನಲ್ಲಿ ಸಾಲ ನೀಡುತ್ತಿರುವ ಜಪಾನ್‌ ಮುಂದೊಂದು ದಿನ ಸಾಲ ಮರುಪಾವತಿ ಸಾಧ್ಯವಾಗದಿದ್ದರೆ ಅಡಮಾನವನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಗಳೂ ಇವೆ.

ಸದ್ಯ, 1 ಲಕ್ಷ ಕೋಟಿ ವೆಚ್ಚದ ಬುಲೆಟ್‌ ರೈಲು ಯೋಜನೆ ನೆಪದಲ್ಲಿ ಮತ್ತೆ ಜಪಾನ್ ಮತ್ತು ಭಾರತದ ನಡುವಿನ ಆರ್ಥಿಕ ಸಂಬಂಧ ಚರ್ಚೆಗೆ ಬಂದಿದೆ. “ಸಾಲಗಳನ್ನು ಮಾಡದೆ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಆದರೆ ಸಾಲ ಮಾಡಿ ರೂಪಿಸಿದ ಯೋಜನೆಗಳಿಂದ ಹಣ ವಾಪಾಸ್ ಬರುತ್ತದಾ ಎಂಬುದು ಮುಖ್ಯ,” ಎನ್ನುತ್ತಾರೆ ವಿದೇಶಾಂಗ ಸಚಿವಾಲಯದ ಅಧಿಕಾರಿಯೊಬ್ಬರು. ಬುಲೆಟ್‌ ರೈಲು ಪಕ್ಕಕ್ಕಿರಲಿ, ದಿಲ್ಲಿ ಮೆಟ್ರೊ ಒಂದನ್ನು ಹೊರತುಪಡಿಸಿದರೆ, ಉಳಿದ ಮೆಟ್ರೊ ನಿಗಮಗಳು ಇವತ್ತು ನಷ್ಟದಲ್ಲಿವೆ ಎಂಬುದನ್ನು ಗಮನಿಸಬೇಕಿದೆ.

Leave a comment

FOOT PRINT

Top