An unconventional News Portal.

‘ಬಾಂಬ್ ಸಮಾಚಾರ’: ಉತ್ತರ ಕೊರಿಯದ ‘ಪ್ರಬಲ ಕಂಪನ’ ಮೂರನೇ ಮಹಾಯುದ್ಧಕ್ಕೆ ನಾಂದಿ ಹಾಡುತ್ತಾ?

‘ಬಾಂಬ್ ಸಮಾಚಾರ’: ಉತ್ತರ ಕೊರಿಯದ ‘ಪ್ರಬಲ ಕಂಪನ’ ಮೂರನೇ ಮಹಾಯುದ್ಧಕ್ಕೆ ನಾಂದಿ ಹಾಡುತ್ತಾ?

ಯುದ್ಧವನ್ನು ಮೈಮೇಲೆ ಎಳೆದುಕೊಂಡಿರುವ ಅಣ್ಣ; ಅದನ್ನು ಪಕ್ಕದಲ್ಲಿ ಆತಂಕದಿಂದಲೇ ಗಮನಿಸುತ್ತಿರುವ, ಅದೇ ವೇಳೆ ಏನೂ ಸಮಸ್ಯೆಯಾಗಲ್ಲ ಎಂಬ ಭರವಸೆಯನ್ನು ಉಳಿಸಿಕೊಂಡಿರುವ ತಮ್ಮ. ಇದು ಎರಡನೇ ಮಹಾಯುದ್ಧದ ಸಮಯದಲ್ಲಿ ಬೇರ್ಪಡೆಗೊಂಡ, ಇವತ್ತು ಒಂದಾಗುವ ಮುಂಚೆಯೇ ಮೂರನೇ ವಿಶ್ವಯುದ್ಧ ಆರಂಭಕ್ಕೆ ನಾಂದಿ ಹಾಡಲು ಹೊರಟು ನಿಂತಿರುವ ಎರಡು ಅವಳಿ ದೇಶಗಳ ಕತೆ. ಒಂದು ನಾರ್ತ್ ಕೊರಿಯಾ/ ಉತ್ತರ ಕೊರಿಯ ಎಂದು ಜನಪ್ರಿಯವಾಗಿ ಗುರುತಿಸುವ ಡೆಮಾಕ್ರಟಿಕ್ ಪೀಪಲ್ ರಿಪಬ್ಲಿಕ್ ಆಫ್ ಕೊರಿಯ. ಮತ್ತೊಂದು ದಕ್ಷಿಣ ಕೊರಿಯ ಅಥವಾ ಅಧಿಕೃತ ಹೆಸರು ರಿಪಬ್ಲಿಕ್ ಆಫ್ ಕೊರಿಯ.

ಎರಡನೇ ಮಹಾಯುದ್ಧದ ಸಮಯದಲ್ಲಿ ಕೊರಿಯ ದೇಶ ಉತ್ತರ ಮತ್ತು ದಕ್ಷಿಣ ಎಂಬ ಭೂಭಾಗಗಳ ರೂಪದಲ್ಲಿ ಒಡೆದು ಹೋಗಿದ್ದು ಒಂದು ದೊಡ್ಡ ಕತೆ. ಇದಕ್ಕೂ ಮುಂಚೆ ಸುಮಾರು 50 ವರ್ಷಗಳ ಕಾಲ ಇದನ್ನು ಭೂ ಭಾಗವನ್ನು ಜಪಾನ್ ಆಕ್ರಮಿಸಿಕೊಂಡಿತ್ತು. ಎರಡನೇ ಮಹಾಯುದ್ಧದ ಸಮಯದಲ್ಲಿ ರಷ್ಯಾ ದೇಶ ಜಪಾನ್ ಮೇಲೆ ಯುದ್ಧ ಘೋಷಣೆ ಮಾಡುತ್ತಿದ್ದಂತೆ ಅಮೆರಿಕಾ ಜಾಗೃತವಾಯಿತು. ಇಡೀ ಕೊರಿಯ ಭೂ ಭಾಗ ರಷ್ಯಾ ಪಾಲಾಗುವುದನ್ನು ತಪ್ಪಿಸುವ ಹಿನ್ನೆಲೆಯಲ್ಲಿ ಕೊರಿಯಾದ ಸಿಯೋಲ್ ನಗರ ಮತ್ತು ಅದರ ಕೆಳಗಿನ ಭೂ ಭಾಗಕ್ಕೆ ಅಮೆರಿಕಾ ಸೇನೆಯನ್ನು ಕಳಿಸಿತು. ಅತ್ತ ಪ್ಯಾಂಗ್‌ಯಾಂಗ್ ನಗರದಲ್ಲಿ ರಷ್ಯಾ ಸೇನೆ ಬಿಡಾರ ಹೂಡಿತು.

ಕೊನೆಗೆ ಎರಡೂ ದೇಶಗಳ ನಡುವಿನ ಶೀತಲ ಸಮಯ ಕೊನೆಗೊಳ್ಳುತ್ತಿದ್ದ ಸಮಯದಲ್ಲಿ ಅತ್ತ ಉತ್ತರದಲ್ಲಿ ರಷ್ಯಾದ ಕಮ್ಯುನಿಸ್ಟ್ ಆಲೋಚನೆಗೆ ಪೂರಕವಾಗಿರುವವರಿಗೆ ಅಧಿಕಾರ ನೀಡಲಾಯಿತು. ಇತ್ತ ಕೊರಿಯಾದ ದಕ್ಷಿಣ ಭಾಗದಲ್ಲಿ ಕಮ್ಯುನಿಸ್ಟ್ ಆಲೋಚನೆಗೆ ವಿರುದ್ಧವಾಗಿ ಬೆಳೆದ ರಾಜಕೀಯ ನಾಯಕರ ಕೈಗೆ ದೇಶವನ್ನು ಕೊಡಲಾಯಿತು. 1947ರ ಹೊತ್ತಿಗೆ ಅಮೆರಿಕಾದ ಮನವಿ ಮೇಲೆಗೆ ವಿಶ್ವಸಂಸ್ಥೆ ಮಧ್ಯ ಪ್ರವೇಶ ಮಾಡಿತು. ರಷ್ಯಾದ ವಿರೋಧದ ನಡುವೆಯೂ ಕೊರಿಯ ಸಂಬಂಧಪಟ್ಟ ಹಾಗೆ ತಾತ್ಕಾಲಿಕ ಆಯೋಗವೊಂದನ್ನು ರಚಿಸಲಾಯಿತು. ಮುಂದೆ ನಡೆದ ಮಾತುಕತೆಗಳ ನಂತರ ಎರಡು ಪ್ರತ್ಯೇಕ ದೇಶಗಳನ್ನು ಸೃಷ್ಟಿಸಿ, ಅಧಿಕಾರವನ್ನು ಎರಡು ತದ್ವಿರುದ್ಧ ಸಿದ್ಧಾಂತಗಳನ್ನು ನಂಬುವ ಜನರ ಕೈಗೆ ಕೊಟ್ಟು ರಷ್ಯಾ ಮತ್ತು ಅಮೆರಿಕಾ ಹೊರಬಂದವು.

 

1950ರ ಮೇ ತಿಂಗಳಿನಲ್ಲಿ ಉತ್ತರ ಕೊರಿಯ ದಕ್ಷಿಣ ಕೊರಿಯ ಮೇಲೆ ಯುದ್ಧವನ್ನು ಸಾರಿತು. ಮುಂದಿನ ಮೂರು ವರ್ಷಗಳ ಕಾಲ ನಡೆದ ಯುದ್ಧದಲ್ಲಿ ದಕ್ಷಿಣ ಕೊರಿಯ ಪರವಾಗಿ ಅಮೆರಿಕಾ ಸೇನೆ ಮತ್ತು ಉತ್ತರ ಕೊರಿಯ ಪರವಾಗಿ ಸೈನಾ ಸೇನೆಗಳು ಯುದ್ಧದಲ್ಲಿ ಪಾಲ್ಗೊಂಡವು. ಇದಾದ ನಂತರ ಎರಡೂ ದೇಶಗಳ ನಡುವೆ ಯುದ್ಧ ಭೂಮಿಯಲ್ಲಿ, ಆರ್ಥಿಕತೆಯಲ್ಲಿ, ಕೃಷಿ ಭೂಮಿಯಲ್ಲಿ ಹೀಗೆ ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಪೈಪೋಟಿ ನಡೆಯುತ್ತಲೇ ಬಂದಿದೆ. ಅದೇ ವೇಳೆ ಎರಡರ ನಡುವೆ ಶಾಂತಿ ಮಾತುಕತೆಗಳಿಗೂ ಪೂರಕ ವಾತಾವರಣ ಕಾಣಿಸಿಕೊಂಡಿದ್ದವು. ಎಲ್ಲವೂ ಸರಿಯಾಗಿ ನಡೆಯುತ್ತಿದೆ ಎನ್ನುವಾಗಲೇ ಮತ್ತಿನ್ನೇನೋ ಬಿಕ್ಕಟ್ಟುಗಳು ಸೃಷ್ಟಿಯಾಗಿ ಸಂಬಂಧವನ್ನು ಹಳಸುವಂತೆ ಮಾಡುತ್ತ ಬಂದಿವೆ. ಇದೊಂತರ ಇಬ್ಬರು ಸಹೋದರರ ನಡುವಿನ ಲವ್ ಅಂಡ್ ಹೇಟ್ರೆಡ್ ರಿಲೇಶನ್‌ಶಿಪ್.

ಮತ್ತೆ ಸಂಘರ್ಷ: 

ಇದೀಗ ಮತ್ತೆ ಜಾಗತಿಕ ಯುದ್ಧವೊಂದರ ಸನ್ನಿವೇಶ ಸೃಷ್ಟಿಯಾಗಿದೆ. ಅದರ ಕೇಂದ್ರದಲ್ಲಿ ಉತ್ತರ ಕೊರಿಯ ನಿಂತಿದೆ. ಕಳೆದ ವಾರದ ಕೊನೆಯಲ್ಲಿ ಉತ್ತರ ಕೊರಿಯ ಪ್ರಚಂಡ ಶಕ್ತಿಯ ಜಲಜನಕ ಬಾಂಬ್‌ನ ಪರೀಕ್ಷಾರ್ಥ ಸ್ಫೋಟ ನಡೆಸಿತು. ಸ್ಫೋಟದಿಂದ ರಿಕ್ಟರ್‌ ಮಾಪಕದಲ್ಲಿ 6.3ರಷ್ಟು ತೀವ್ರತೆಯ ಕಂಪನ ದಾಖಲಾಗಿದ್ದವು. ‘ಇದು ಈವರೆಗೆ ಜಲಜನಕ ಬಾಂಬ್‌ ಉಂಟು ಮಾಡಿದ ಅತ್ಯಂತ ಪ್ರಬಲ ಕಂಪನ’ ಎಂದು ಉತ್ತರ ಕೊರಿಯ ಹೇಳಿಕೊಂಡಿತ್ತು.

ಉತ್ತರ ಕೊರಿಯ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರು ಪ್ರಯೋಗಾಲಯ ಒಂದರಲ್ಲಿ ಬಾಂಬ್‌ ರೀತಿಯ ಸಾಧನವೊಂದನ್ನು ಪರೀಕ್ಷಿಸುತ್ತಿರುವ ಚಿತ್ರವನ್ನು ಸರ್ಕಾರಿ ಸುದ್ದಿ ವಾಹಿನಿ ಪ್ರಸಾರ ಮಾಡಿತ್ತು. (ಅಲ್‌ ಜಝೀರಾ)

ಉತ್ತರ ಕೊರಿಯ ಅಧ್ಯಕ್ಷ ಕಿಮ್ ಜಾಂಗ್ ಉನ್ ಪ್ರಯೋಗಾಲಯದಲ್ಲಿ ಬಾಂಬ್‌ ರೀತಿಯ ಸಾಧನವೊಂದನ್ನು ಪರೀಕ್ಷಿಸುತ್ತಿರುವ ಚಿತ್ರವನ್ನು ಸರಕಾರಿ ಸುದ್ದಿ ವಾಹಿನಿ ಪ್ರಸಾರ ಮಾಡಿತ್ತು. (ಅಲ್‌ ಜಝೀರಾ)

ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಉತ್ತರ ಕೊರಿಯ ಜತೆ ಆರ್ಥಿಕ ಸಂಬಂಧ ಇಟ್ಟುಕೊಂಡ ದೇಶಗಳ ಜತೆಗೆ ಅಮೆರಿಕಾ ಸಂಬಂಧ ಕಡಿದುಕೊಳ್ಳಲು ಸಿದ್ಧ ಎಂದು ಟ್ರಂಪ್ ಜಲಜನಕದ ಬಾಂಬ್‌ ಸ್ಫೋಟದ ನಂತರ ಪ್ರತಿಕ್ರಿಯೆ ನೀಡಿದರು. ಇದು ಪರೋಕ್ಷವಾಗಿ ಉತ್ತರ ಕೊರಿಯ ಜತೆ ಆರ್ಥಿಕ ಸಂಬಂಧ ಇಟ್ಟುಕೊಂಡಿರುವ ಚೈನಾಗೆ ನೀಡಿದ ಎಚ್ಚರಿಕೆ ಎಂದು ಅಂತಾರಾಷ್ಟ್ರೀಯ ವಿಶ್ಲೇಷಣೆಗಳು ಹೇಳುತ್ತವೆ. ಇದರ ನಂತರ ಅಮೆರಿಕಾ ಉತ್ತರ ಕೊರಿಯಾ ನಡುವಿನ ಸಂಘರ್ಷ ಬರೀ ತನ್ನ ಜತೆಗೆ ಮಾತ್ರವಲ್ಲ; ಜಾಗತಿಕ ಶಾಂತಿಗಾಗಿ ಎಂದು ಬಿಂಬಿಸಲು ಹೊರಟಿದೆ. ವಿಶ್ವಸಂಸ್ಥೆಯನ್ನು ಅಖಾಡಕ್ಕೆ ಅಹ್ವಾನಿಸಿದೆ. ವಿಶ್ವಸಂಸ್ಥೆಗೆ ಅಮೆರಿಕಾದ ರಾಯಭಾರಿಯಾಗಿರುವ ನಿಕ್ಕಿ ಹಾಲೆ, “ಉತ್ತರ ಕೊರಿಯ ಯುದ್ಧಕ್ಕಾಗಿ ಬೇಡಿಕೊಳ್ಳುತ್ತಿದೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಚೈನಾ ನಿಲುವು: 

ಉತ್ತರ ಕೊರಿಯ ಜತೆ ಉತ್ತಮ ವಾಣಿಜ್ಯ ಸಂಬಂಧವನ್ನು ಹೊಂದಿರುವ ಚೈನಾ ಸಂಘರ್ಷವನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಿ ಎಂದು ಹೇಳಿದೆ. “ಅಣು ಬಾಂಬ್ ಮುಕ್ತ ವಿಶ್ವ ನಿರ್ಮಾಣದ ವಿಚಾರದಲ್ಲಿ ಅಂತಾರಾಷ್ಟ್ರೀಯ ಸಮುದಾಯವನ್ನು ಉತ್ತರ ಕೊರಿಯ ಎದುರುಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ತೀರ್ಮಾನಗಳಿಗೆ ಬದ್ಧವಾಗಿರಬೇಕು,” ಎಂದು ಪ್ರತಿಕ್ರಿಯೆ ನೀಡಿದೆ. ವಿಶ್ವಸಂಸ್ಥೆಗೆ ಚೈನಾ ರಾಯಭಾರಿಯಾಗಿರುವ ಲಿಯೂ ಜೈಯಿ, “ಕೊರಿಯ ಭೂ ಭಾಗದಲ್ಲಿ ಯುದ್ಧ ಮತ್ತು ಅಶಾಂತಿಗೆ ಅವಕಾಶ ಮಾಡಿಕೊಳ್ಳುವುದಿಲ್ಲ,” ಎಂದು ಹೇಳಿದೆ. ರಷ್ಯಾ ಕೂಡ ರಾಜಕೀಯ ರಾಜತಾಂತ್ರಿಕ ಮಾತುಕತೆ ಮೂಲಕ ಪರಿಹರಿಸಿಕೊಳ್ಳಲು ತಿಳಿಸಿದೆ.

ದಕ್ಷಿಣ ಕೊರಿಯದಲ್ಲಿ: 

ಪಕ್ಕದ ದೇಶ, ಸಂಬಂಧದಲ್ಲಿ ಅಣ್ಣ ಸ್ಥಾನದಲ್ಲಿರುವ ಉತ್ತರ ಕೊರಿಯದಲ್ಲಿ ಈಗಾಗಲೇ ಶೇ. 90ರಷ್ಟು ಭೂ ಸೇನೆ ಗಡಿಯಲ್ಲಿ ಜಮಾವಣೆಗೊಂಡಿದೆ. ಯುದ್ಧಕ್ಕೆ ಸನ್ನದ್ಧವಾಗಿ ನಿಂತಿದೆ. ಒಂದು ಸಣ್ಣ ಆದೇಶ ಹೊರಬಿದ್ದರೂ ಮುಂದಿನ ಒಂದು ಗಂಟೆಯೊಳಗೆ ದಕ್ಷಿಣ ಕೊರಿಯದ ರಾಜಧಾನಿ ಸಿಯೋಲ್ ತಲುಪಲು ಸಿದ್ಧರಾಗಿದ್ದಾರೆ. ಒಂದು ಅಂದಾಜಿನ ಪ್ರಕಾರ ಈಗೇನಾದರೂ ಯುದ್ಧ ನಡೆದರೆ ವಾರದ ಅಂತರದಲ್ಲಿ ಸಿಯೋಲ್‌ನ ಸುಮಾರು 10 ಲಕ್ಷ ಜನ ಸಾವನ್ನಪ್ಪುವ ಸಾಧ್ಯತೆ ಇದೆ. ಸದ್ಯ ಸಿಯೋಲ್ ಮೆಟ್ರೊದಲ್ಲಿರುವ ಜನಸಂಖ್ಯೆ ಎರಡೂವರೆ ಕೋಟಿ. ಪರಿಸ್ಥಿತಿ ಹೀಗಿರುವಾಗ ದಕ್ಷಿಣ ಕೋರಿಯಾದ ಜನರ ಮನಸ್ಥಿತಿ ಹೇಗಿರಬಹುದು? ಈ ಕುರಿತು ‘ವೋಕ್ಸ್’ ಜಾಲತಾಣ ಆಸಕ್ತಿಕರ ವರದಿಯೊಂದನ್ನು ಪ್ರಕಟಿಸಿದೆ. ದಕ್ಷಿಣ ಕೊರಿಯದ ರಾಜಧಾನಿಯಲ್ಲಿರುವ ಪತ್ರಕರ್ತೆಯೊಬ್ಬರ ಅಭಿಪ್ರಾಯವನ್ನು ಪ್ರಕಟಿಸಿದೆ.

“ದಕ್ಷಿಣ ಕೊರಿಯದಲ್ಲಿ ಇದು ಅತ್ಯಂತ ವೈಯಕ್ತಿಕ ವಿಚಾರ. ಮತ್ತು ಅತ್ಯಂತ ಸಂಕೀರ್ಣವಾಗಿರುವ ಸಂಗತಿ ಕೂಡ. ನಾವು ಉತ್ತರ ಕೊರಿಯವನ್ನು ಬೇರೆಯಾದ ಹೊರದೇಶ ಎಂದು ಹೇಳಲು ಸಾಧ್ಯವಿಲ್ಲ. ಅದು ನಮ್ಮ ಕುಟುಂಬದ ಸದಸ್ಯ, ಅಣ್ಣ ಮತ್ತು ಇವತ್ತಲ್ಲ ನಾಳೆ ನಾವು ಮತ್ತೆ ಒಟ್ಟಾಗುತ್ತೇವೆ. ನಮ್ಮ ನಡುವೆ ಇಂತಹ ಕೌಟುಂಬಿಕ ಸಂಬಂಧದ ಜತೆಗೆ ಉತ್ತರ ಕೊರಿಯದ ಸೇನಾ ಕಾರ್ಯಚರಣೆಗಳ ಬಗ್ಗೆ ಅತ್ಯಂತ ಅಸಹ್ಯಕರ ಭಾವನೆಯೂ ಇದೆ,” ಎಂಬ ಪ್ರತಿಕ್ರಿಯೆಯನ್ನು ವರದಿ ಮಾಡಿದೆ.

ಸದ್ಯ ಬಿಕ್ಕಟ್ಟು ಜಾರಿಯಲ್ಲಿದೆ. ವಿಶ್ವಸಂಸ್ಥೆಯ ಮಧ್ಯ ಪ್ರವೇಶ ಆಗಿದೆ. ಸಂದಾನ ಮತ್ತು ಶಾಂತಿಯುತ ಪರಿಹಾರ ಜಾಗತಿಕ ಶಾಂತಿಯನ್ನು ಉಳಿಸಲಿದೆ.


ಹೆಚ್ಚುವರಿ ಮಾಹಿತಿ: 

ಉತ್ತರ ಕೊರಿಯ ಈವರೆಗೆ ನಡೆಸಿರುವ ಜಲಜನಕ ಬಾಂಬ್‌ ಸ್ಫೋಟದ ಹಿನ್ನೆಲೆಯಲ್ಲಿ ಜಾಗತಿಕವಾಗಿ ನಡೆದ ಅಣ್ವಸ್ತ್ರ ಪ್ರಯೋಗಗಳು ಮತ್ತು ಆ ಸಮಯದಲ್ಲಿ ಬಳಸಿದ ರಾಸಾಯನಕಗಳ ತೂಕ. (ಟನ್‌ಗಳಲ್ಲಿ)

ಕೃಪೆ: ಆಲ್‌ ಜಝೀರಾ.

major-nuclear-detonations-aj

 

 

 

 

Leave a comment

FOOT PRINT

Top