An unconventional News Portal.

Journey of Nirmala: 1991- ಆಸ್ಪತ್ರೆಯಲ್ಲಿ ಪ್ರಸವ ವೇದನೆ; 2017- ರಕ್ಷಣಾ ಇಲಾಖೆ ಹೊಣೆ ಹೊತ್ತ ಎರಡನೇ ಮಹಿಳೆ!

Journey of Nirmala: 1991- ಆಸ್ಪತ್ರೆಯಲ್ಲಿ ಪ್ರಸವ ವೇದನೆ; 2017- ರಕ್ಷಣಾ ಇಲಾಖೆ ಹೊಣೆ ಹೊತ್ತ ಎರಡನೇ ಮಹಿಳೆ!

ಅದು 1991ರ ಇಸವಿ, ಮೇ 21ನೇ ತಾರೀಖು…

ಮಧ್ಯಂತರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ದೇಶಾದ್ಯಂತ ರ್ಯಾಲಿಗಳಲ್ಲಿ ಪಾಲ್ಗೊಳ್ಳುತ್ತ ತಮಿಳುನಾಡಿಗೆ ಕಾಲಿಟ್ಟರು. ಆಂಧ್ರ ಪ್ರದೇಶದ ವಿಶಾಖಪಟ್ಣಂನಲ್ಲಿ ಭಾಷಣ ಮುಗಿಸಿದವರು ಗಡಿಬಿಡಿಯಲ್ಲಿ ಹೊರಟು ಬಂದರು. ಆದರೆ ವಿಶೇಷ ವಿಮಾನ ಹಾಳಾಗಿತ್ತು. ಇನ್ನೇನು ತಮಿಳುನಾಡು ಪ್ರವಾಸ ಮುಂದಕ್ಕೆ ಹೋಗುತ್ತೆ ಅನ್ನೋ ಸಮಯದಲ್ಲಿ ವಿಶೇಷ ವಿಮಾನ ರೆಡಿಯಾಗಿದೆ ಎಂಬ ಮಾಹಿತಿ ಸಿಕ್ಕಿತು. ತಮ್ಮ ವೈಯಕ್ತಿಕ ಬೆಂಗಾವಲು ಪಡೆಯನ್ನು ಹಿಂದೆ ಬಿಟ್ಟು ಚೆನ್ನೈಗೆ (ಅವತ್ತಿನ ಮದ್ರಾಸ್) ಬಂದಿಳಿದರು. ಅಲ್ಲಿಂದ ರಸ್ತೆ ಮಾರ್ಗವಾಗಿ ಅವರನ್ನು ಶ್ರೀಪೆಣಂಬದೂರಿಗೆ ಬೆಂಗಾವಲು ಪಡೆ ಜತೆ ಕರೆದುಕೊಂಡು ಬರಲಾಯಿತು. ಅಲ್ಲಿ ಅವರು ವೇದಿಕೆ ಏರಿ ಭಾಷಣವನ್ನು ಮಾಡಿದರು. ಮುಗಿಸಿ ಕೆಳಗೆ ಬಂದವರು ತಮ್ಮನ್ನು ಅಭಿನಂದಿಸಲು ವೇದಿಕೆ ಮುಂಭಾಗಕ್ಕೆ ಬಂದ ಮಹಿಳೆಯರನ್ನು ಮಾತನಾಡಿಸಲು ಮುಂದೆ ಬಂದರು.

ಸರಿಯಾಗಿ ರಾತ್ರಿ 10 ಗಂಟೆ 21 ನಿಮಿಷ. ಧನು ಎಂಬ ತಮಿಳು ಯುವತಿ ಬಂದು ಎದುರಿಗೆ ನಿಂತಳು. ಅವಳನ್ನು ತಡೆಯಲು ಸ್ಥಳದಲ್ಲಿದ್ದ ಮಹಿಳಾ ಪೊಲೀಸ್ ಪೇದೆಯೊಬ್ಬರು ಮುಂದಾದರೂ, ಸ್ವತಃ ರಾಜೀವ್ ಗಾಂಧಿ ಅವರೇ ಹತ್ತಿರಕ್ಕೆ ಬಿಡುವಂತೆ ಹೇಳಿದರು. ಅದು ಅವರು ಆಡಿದ ಕೊನೆಯ ಮಾತುಗಳಾಗಿದ್ದವು. ಮಾತನಾಡಿಸಲು ಬಂದ ಯುವತಿ ರಾಜೀವ್ ಗಾಂಧಿಯನ್ನು ಅಭಿನಂದಿಸಿದಳು. ಅವರ ಕಾಲು ಮುಟ್ಟಲು ಬಗ್ಗಿದಳು. ಸೊಂಟದಲ್ಲಿದ್ದ ಆರ್‌ಡಿಎಕ್ಸ್‌ ಬಾಂಬ್‌ನ ಟ್ರಿಗರ್ ಒತ್ತಿದಳು. ಇದನ್ನು ಹತ್ತಿರದಲ್ಲಿದ್ದ ಒಂದು ಕ್ಯಾಮೆರಾ ಸೆರೆ ಹಿಡಿದಿತ್ತು. ಅದನ್ನು ಸೆರೆ ಹಿಡಿದ ಫೊಟೋ ಗ್ರಾಫರ್ ಸ್ಥಳದಲ್ಲೇ ಮೃತಪಟ್ಟಿದ್ದ. ಅದು ದೇಶ ಕಂಡ ರಾಜಕಾರಣಿಯೊಬ್ಬರ ಮೇಲೆ ನಡೆದ ಮೊಟ್ಟ ಮೊದಲು ಪ್ಲಾಸ್ಟಿಕ್ ಬಾಂಬ್ ಪ್ರಯೋಗ. ಅಜ್ಜಿ ಇಂದಿರಾ ಗಾಂಧಿ ರೀತಿಯಲ್ಲಿಯೇ ರಾಜೀವ್ ಗಾಂಧಿ ಕೂಡ ರಾಜಕೀಯ ಧ್ವೇಷಕ್ಕೆ ಬಲಿಯಾದ ದಿನ. ಇಡೀ ದೇಶ ಅವಕ್ಕಾಗಿ ಹೋಗಿತ್ತು. ಶ್ರೀಪೆಣಂಬದೂರಿನಲ್ಲಿ ನಡೆದ ಘಟನೆಯಾದ್ದರಿಂದ ರಾಜಧಾನಿ ಚೆನ್ನೈನಲ್ಲಿ ಪರಿಣಾಮ ಬಿಸಿಯಾಗಿಯೇ ಇತ್ತು.

ಅಂತಹದೊಂದು ಕರಾಳ ರಾತ್ರಿ ನಿರ್ಮಲ ಸೀತಾರಾಮನ್ ಚೆನ್ನೈನ ಆಸ್ಪತ್ರೆಯೊಂದರಲ್ಲಿ ಪ್ರಸವ ವೇದನೆಯಿಂದ ನರಳುತ್ತಿದ್ದರು. ತಾಯಿಯಾಗುವ ಕನಸಿನಲ್ಲಿದ್ದರು. ಅವರ ವೈಯಕ್ತಿಕ ಬದುಕಿನ ಮಾಹಿತಿ ನೀಡುವ ಅವರ ಹೆಸರಿನ ವಿಕಿಪೀಡಿಯಾದಲ್ಲಿ ಹೀಗೊಂದು ಮಾಹಿತಿ ಸಿಗುತ್ತದೆ. (ಇದನ್ನು ಸ್ವತಂತ್ರವಾಗಿ ‘ಸಮಾಚಾರ’ ಪರಿಶೀಲನೆ ನಡೆಸಿಲ್ಲ).


ಮೂರು ವರ್ಷಗಳಲ್ಲಿ ನಾಲ್ಕನೇ ರಕ್ಷಣಾ ಸಚಿವೆ | ಅತ್ತೆ ಕಾಂಗ್ರೆಸ್ ಶಾಸಕಿ; ಸೊಸೆ ಬಿಜೆಪಿ ಪ್ರಚಾರಕಿ | ರಕ್ಷಣಾ ಖಾತೆ ಹೊಣೆ ಹೊತ್ತ ದೇಶದ ಎರಡನೇ ಮಹಿಳೆ

ಕೃಪೆ: ವಿಕಿಪೀಡಿಯಾ.

ಕೃಪೆ: ವಿಕಿಪೀಡಿಯಾ.

ಇವತ್ತು ರಕ್ಷಣಾ ಖಾತೆ ಸಚಿವೆಯಾಗಿ ಅಧಿಕಾರದ ವಹಿಸಿಕೊಂಡಿರುವ ನಿರ್ಮಲಾ ಸೀತಾರಾಮನ್‌ ಅವರಿಗೂ ಕರ್ನಾಟಕಕ್ಕೂ ಒಂದು ಲಿಂಕ್ ಇದೆ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದವರು. ಜತೆಗೆ, ದಕ್ಷಿಣ ಭಾರತದ ಹಲವು ನಗರಗಳಲ್ಲಿ ಬದುಕು ಕಟ್ಟಿಕೊಂಡವರು. ಹುಟ್ಟಿದ್ದು ತಮಿಳುನಾಡಿನ ಮದುರೈ; 1959ರ ಆಗಸ್ಟ್ 18ರಲ್ಲಿ. ತಂದೆ ನಾರಾಯಣ್ ಸೀತಾರಾಮನ್, ತಾಯಿ ಸಾವಿತ್ರಿ. ತಿರುಚಿರಪಳ್ಳಿಯ ಸೀತಾಲಕ್ಷ್ಮಿ ರಾಮಸ್ವಾಮಿ ಕಾಲೇಜಿನಲ್ಲಿ ಬಿಎ ಮುಗಿಸಿದರು. ಸ್ನಾತ್ತಕೋತ್ತರ ಪದವಿಗೆ ದಿಲ್ಲಿಯ ಪ್ರತಿಷ್ಠಿತ ಜವಹರ್‌ಲಾಲ್ ವಿಶ್ವವಿದ್ಯಾನಿಲಯಕ್ಕೆ ಬಂದರು. ಅಲ್ಲಿಯೇ ಅರ್ಥ ಶಾಸ್ತ್ರದಲ್ಲಿ ಎಂ. ಎ ಮತ್ತು ಎಂಫಿಲ್ ಮುಗಿಸಿದರು. ಕೆಲವು ಕಾಲ ಬಿಬಿಸಿ ವರ್ಲ್ಡ್‌ ಸರ್ವಿಸಸ್‌ಅಗೂ ಕೆಲಸ ಮಾಡಿದರು. ಈ ಸಮಯದಲ್ಲಿ ಆಂಧ್ರ ಕಾಂಗ್ರೆಸ್‌ನಲ್ಲಿ ಸಕ್ರಿಯವಾಗಿದ್ದ ಪದವೀದರ ಯುವಕನ ಜತೆ ಪ್ರೇಮಾಂಕುರವಾಯಿತು.

ರಾಜಕೀಯ ಬದುಕು:

ಅವರ ಮದುವೆ ಅವರ ರಾಜಕೀಯ ಬದುಕಿನ ಜತೆ ದಾಂಪತ್ಯಕ್ಕೂ ನಾಂದಿ ಹಾಡಿತು. 1986ರಲ್ಲಿ ಆಂಧ್ರ ಮೂಲದ ಪರಕಾಲ ಪ್ರಕಾಶ್ ಜತೆ ವೈವಾಹಿಕ ಬದುಕಿಗೆ ಕಾಲಿಟ್ಟರು. ಅಷ್ಟರಲ್ಲಾಗಲೇ ಪ್ರಭಾಕರ್ ತಾಯಿ ಕಾಂಗ್ರೆಸ್ ಪಕ್ಷದಿಂದ ಶಾಸಕಿಯಾಗಿದ್ದರು. ಮಾವ ಕಾಂಗ್ರೆಸ್ ಸರಕಾರದಲ್ಲಿ ಸಚಿವರಾಗಿದ್ದರು. ಇಂತಹ ಕಾಂಗ್ರೆಸ್ ಅಧಿಕಾರದ ರಾಜಕಾರಣದ ಹಿನ್ನೆಲೆಯ ಕುಟುಂಬದಿಂದ ಬಂದ ನಿರ್ಮಲಾ 2006ರಲ್ಲಿ ಬಿಜೆಪಿ ಸೇರ್ಪಡೆಗೊಂಡರು. ಅದಾದ ಮರುವರ್ಷವೇ ಗಂಡ ಪ್ರಭಾಕರ್ ಚಿರಂಜೀವಿ ನೇತೃತ್ವದ ಪ್ರಜಾರಾಜ್ಯಂ ಪಕ್ಷ ಸೇರಿದರು.

ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಳ್ಳುವ ಮುಂಚೆಯೇ ನಿರ್ಮಲಾ, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದರು. ಅದಕ್ಕೆ ಅವರ ರಾಜಕೀಯ ಹಿನ್ನೆಲೆಯ ಕುಟುಂಬದ ನೆರವೂ ಇತ್ತು. ಆದರೆ ರಾಷ್ಟ್ರಮಟ್ಟದಲ್ಲಿ ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಪರಿಚಯವಾದ ನಂತರ ಬಿಜೆಪಿಯ ಉನ್ನತ ನಾಯಕತ್ವ ಸ್ಥಾನದ ಕಡೆಗೆ ಹೆಜ್ಜೆ ಇಟ್ಟರು.

ನಿರ್ಮಲಾ ಬಿಜೆಪಿ ಸೇರ್ಪಡೆ ಕಾಲಘಟ್ಟ ಬಿಜೆಪಿ ಪಾಲಿಗೆ ಮನ್ವಂತರಗಳನ್ನು ಹುಟ್ಟು ಹಾಕಿತ್ತು. ಅದ್ವಾನಿ ಅವರನ್ನು ಪಕ್ಕಕ್ಕೆ ಸರಿಸಿ, ಅವರ ಜಾಗದಲ್ಲಿ ಗುಜರಾತ್ ಮೂಲದ ‘ಉಗ್ರ ಹಿಂದುತ್ವದ ಬ್ರಾಂಡ್’ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಸ್ಥಾನಕ್ಕೆ ತಂದು ಕೂರಿಸಿತ್ತು. ಸಹಜವಾಗಿಯೇ ಪ್ರತಿಷ್ಠಿತ ವಿಶ್ವವಿದ್ಯಾನಿಲಯದ ರಿಪೋರ್ಟ್ ಕಾರ್ಡ್, ಒಂದಷ್ಟು ಆಡಳಿತಾನುಭವ, ರಾಜಕೀಯ ವಿರೋಧಿ ಕುಟುಂಬದ ಹಿನ್ನೆಲೆ ಎಲ್ಲವನ್ನೂ ಇಟ್ಟುಕೊಂಡು ಬಂದ ನಿರ್ಮಲಾಗೆ ಇದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೇನೂ ಆಗಲಿಲ್ಲ. ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ಟಿವಿಗಳ ಪ್ಯಾನಲ್‌ ಚರ್ಚೆಗಳಿಗೆ ಪಾಲ್ಗೊಳ್ಳತೊಡಗಿದರು. ಮೋದಿ ಬ್ರಾಂಡ್ ಇಮೇಜ್ ಕಟ್ಟುವ ಕೆಲಸದಲ್ಲಿ ನಿರ್ಮಲಾ ತಮ್ಮ ಮಾತಿನ ಕೊಡುಗೆ ನೀಡಿದರು. ಅದರ ಫಲವಾಗಿ, ನೇರವಾಗಿ ಚುನಾವಣೆ ಮೂಲಕ ಆಯ್ಕೆಯಾಗದಿದ್ದರೂ, ರಾಜ್ಯಸಭೆಯ ಹಿಂಬಾಗಿಲಿ ಪ್ರವೇಶದ ಮೂಲಕ ಸಂಪುಟ ಸ್ಥಾನಕ್ಕೆ ಏರಿದರು. ಎರಡನೇ ಅವಧಿಯ ಸಂಪುಟ ವಿಸ್ತರಣೆ ವೇಳೆ 2016ರಲ್ಲಿ ನಿರ್ಮಲಾ ವಾಣಿಜ್ಯ ಹಾಗೂ ಕೈಗಾರಿಕಾ ಖಾತೆ ಸಚಿವೆಯಾಗಿ ಅಧಿಕಾರವಹಿಸಿಕೊಂಡರು.

ಇದೀಗ, ನಡೆದ ಸಂಪುಟ ಪುನಾರಚನೆಯ ಪ್ರಕ್ರಿಯೆಯಲ್ಲಿ ರಕ್ಷಣಾ ಖಾತೆಯ ಹೊಣೆ ಹೊತ್ತುಕೊಂಡಿದ್ದಾರೆ. ಅದೂ ರಕ್ಷಣಾ ಖಾತೆ ಎಂಬ ಪುರುಷತ್ವದ ಲೇಪನ ಹೊದ್ದ ಇಲಾಖೆಯೊಂದು ಕಾಣಿಸುತ್ತಿರುವ ಎರಡನೇ ಮಹಿಳಾ ಮಂತ್ರಿಯಾಗಿ. ರಕ್ಷಣಾ ಖಾತೆಯನ್ನು ಸ್ವಾತಂತ್ರ್ಯ ನಂತರ ಹಲವು ಪಕ್ಷಗಳ ಹಲವು ನಾಯಕರು ನಿಭಾಯಿಸಿ ಹೋಗಿದ್ದಾರೆ. ಅದರಲ್ಲಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಪಿ. ವಿ. ನರಸಿಂಹ ರಾವ್ ತರದವರು ಪ್ರಧಾನ ಮಂತ್ರಿಗಳಾಗಿಯೂ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರಪತಿಯಾಗಿದ್ದ ಪ್ರಣವ್ ಮುಖರ್ಜಿ ಕೂಡ ಒಂದಷ್ಟು ಕಾಲ ರಕ್ಷಣಾ ಸಚಿವರಾಗಿದ್ದವರು. ಅತ್ಯಂತ ಸರಳ ರಾಜಕಾರಣಿ ಅನ್ನಿಸಿಕೊಂಡಿದ್ದ ಜಾರ್ಜ್ ಫರ್ನಾಂಡೀಸ್ ರಕ್ಷಣಾ ಇಲಾಖೆ ಕಂಡ ‘ಸೆಲೆಬ್ರೇಟೆಡ್ ಸಚಿವ’ರಾಗಿದ್ದರು.

ಎನ್‌ಡಿಎ ಮೊದಲ ಅವಧಿಯಲ್ಲಿ ಬಿಜೆಪಿ ಹಿನ್ನೆಲೆಯ, ಕೊನೆಗೆ ಸಹೋದರನಿಂದಲೇ ಕೊಲೆಯಾಗಿ ಹೋದ, ಅಂದಿನ ಅಂಬಾನಿಗಳ ಸ್ನೇಹಿತರೂ ಆಗಿದ್ದ ಪ್ರಮೋದ್ ಮಹಾಜನ್ ಕೂಡ ಕಡಿಮೆ ಅವಧಿಗೆ ರಕ್ಷಣಾ ಖಾತೆಯನ್ನು ವಹಿಸಿಕೊಂಡಿದ್ದರು. ಬಿಜೆಪಿ ಪೂರ್ಣ ಪ್ರಮಾಣದಲ್ಲಿ 2014ರಲ್ಲಿ ಮರಳಿ ಅಧಿಕಾರಕ್ಕೆ ಬಂದ ನಂತರ ಮೊದಲು ಅರುಣ್ ಜೇಟ್ಲಿ ಅಧಿಕಾರ ವಹಿಸಿಕೊಂಡಿದ್ದರು. ನಂತರ ಶುದ್ಧ ಹಸ್ತರು ಅನ್ನಿಸಿಕೊಂಡ ರಾಜಕಾರಣಿ ಮನೋಹರ್ ಪರಿಕ್ಕರ್ ರಕ್ಷಣಾ ಸಚಿವರಾಗಿ ಬಂದರು. ಅವರು ರಕ್ಷಣಾ ಖಾತೆಯ ಹೊಣೆ ಹೊತ್ತುಕೊಳ್ಳುತ್ತಿದ್ದಂತೆ ಒಂದೂವರೆ ದಶಕಗಳ ಕಾಲ ನನೆಗುದಿಗೆ ಬಿದ್ದಿದ್ದ ಗುತ್ತಿಗೆಗಳನ್ನೆಲ್ಲಾ ಕ್ಲಿಯರ್ ಮಾಡಿದ್ದರು. ಗೋವಾ ಹೊಣೆಗಾರಿಕೆಗೆ ಮರಳಿದ ನಂತರ ಒಂದಷ್ಟು ಕಾಲ ಮತ್ತೆ ಅರುಣ್ ಜೇಟ್ಲಿ ಅವರೇ ಹೊಣೆ ಹೊತ್ತುಕೊಂಡಿದ್ದರು. ಹಾಗೆ ನೋಡಿದರೆ, ಮೂರು ವರ್ಷಗಳ ಅವಧಿಯಲ್ಲಿ ನಿರ್ಮಲಾ ನಾಲ್ಕನೇ ರಕ್ಷಣಾ ಸಚಿವರು.

ಆದರೆ ಇದು ದೇಶದ ಗಡಿ ಮತ್ತು ಆಂತರಿಕ ಭದ್ರತಾ ವಿಚಾರಕ್ಕೆ ಬಂದರೆ ಸವಾಲಿನ ದಿನಗಳು ಇವು. ಕಾಶ್ಮೀರದ ಗಡಿ ಮಾತ್ರವಲ್ಲ, ಇತ್ತೀಚೆಗೆ ಭೂತಾನ್ ಗಡಿಯಲ್ಲೂ ಸಮಸ್ಯೆ ದೀರ್ಘಕಾಲೀನ ಸಮಸ್ಯೆಯಾಗುವ ನಿಟ್ಟಿನಲ್ಲಿದೆ. ಇತ್ತೀಚೆಗೆ ಯುಎಸ್ ಕಾಂಗ್ರೆಸ್ ಬಿಡುಗಡೆ ಮಾಡಿರುವ ವರದಿಯಲ್ಲಿ ಪಕ್ಕದ ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತದಲ್ಲಿ ಅತಿ ಹೆಚ್ಚು ಭಯೋತ್ಪಾದನಾ ದಾಳಿಗಳು ಕಳೆದ ವರ್ಷ ನಡೆದಿವೆ. ನೋಟುಗಳ ಅಮಾನ್ಯೀಕರಣದ ನಂತರವೂ ಕಾಶ್ಮೀರಾ ಸಮಸ್ಯೆ ಬಗೆಹರಿದಿಲ್ಲ. ಗಡಿಯಲ್ಲಿ ಒಳನುಸುಳುವಿಕೆ ಕಡಿಮೆಯಾಗಿಲ್ಲ. ನಕ್ಸಲೀಯರ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿಲ್ಲ. ಇಂತಹ ಸಮಯದಲ್ಲಿಯೇ ವಿದ್ಯಾವಂತ, ರಾಜಕೀಯ ಹಿನ್ನೆಲೆಯ ನಿರ್ಮಲಾ ಅಧಿಕಾರವಹಿಸಿಕೊಂಡಿದ್ದಾರೆ. ಅಧಿಕಾರಿಗಳ ನೆರಳಿನಿಂದ ರಕ್ಷಣಾ ಖಾತೆಯನ್ನು ಹೊರತರುವುದು ಮತ್ತು ಅದು ಇವತ್ತಿಗೆ ಆರೋಪಿಸಿಕೊಂಡಿರುವ ದೇಶಪ್ರೇಮದ ಅಸ್ಮಿತೆಗಳನ್ನು ಸಂಭಾಳಿಸುವ ಗುರುತರ ಹೊಣೆಗಾರಿಕೆ ನಿರ್ಮಲಾ ಅವರ ಮೇಲಿದೆ. ಅವರೇ ಈಶ್ವರನ ಮೇಲೆ ಶಪಥ ಮಾಡಿ ಸಂವಿಧಾನದ ಪ್ರತಿಜ್ಞಾ ವಿಧಿಯನ್ನು ಓದುವ ಮೂಲಕ ಅಣಿಯಾಗಿರುವುದರಿಂದ ಕಾದು ನೋಡಬೇಕಿದೆ.

 

Leave a comment

FOOT PRINT

Top