An unconventional News Portal.

ಸೋಮನಾಥ ನಾಯಕ್ vs ವೀರೇಂದ್ರ ಹೆಗ್ಗಡೆ: ಧರ್ಮಸ್ಥಳಕ್ಕೆ ಅವಮಾನ; ಏನಿದು ಪ್ರಕರಣ?

ಸೋಮನಾಥ ನಾಯಕ್ vs ವೀರೇಂದ್ರ ಹೆಗ್ಗಡೆ: ಧರ್ಮಸ್ಥಳಕ್ಕೆ ಅವಮಾನ; ಏನಿದು ಪ್ರಕರಣ?

ಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನೂ ಮೀರಿ ಧರ್ಮಸ್ಥಳ, ಧರ್ಮಾಧಿಕಾರಿ ಹಾಗೂ ಅವರ ಸಂಸ್ಥೆಗಳ ಮೇಲೆ ಆರೋಪಗಳನ್ನು ಮಾಡಿದ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್‌ನ ಕೆ. ಸೋಮನಾಥ ನಾಯಕ್‌ಗೆ ಸ್ಥಳೀಯ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ…

ಹೀಗೊಂದು ಸುದ್ದಿ ಹೊರ ಬಿದ್ದಿದೆ ಮತ್ತು ಅದು ಸತ್ಯದ ಒಂದು ಮುಖ ಅಷ್ಟೆ.

ಧರ್ಮಸ್ಥಳದ ಆಡಳಿತಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬ ಸದಸ್ಯರ ಮೇಲೆ ಆರೋಪ ಮಾಡಿಕೊಂಡು ಬಂದ ಈ ಸೋಮನಾಥ ನಾಯಕ್ ಯಾರು? ಅವರ ಹಿನ್ನೆಲೆ ಏನು? ಅವರು ಆರೋಪಗಳನ್ನು ಮಾಡಬಾರದು ಎಂದು ಧರ್ಮಸ್ಥಳ ದೇವಸ್ಥಾನದ ಆಡಳಿತದ ಹೊಣೆ ಹೊತ್ತವರು ಯಾಕೆ ನ್ಯಾಯಾಲಯದ ಮೊರೆ ಹೋಗಿದ್ದರು? ಇಂತಹ ಕೆಲವು ಪ್ರಶ್ನೆಗಳಿಗೆ ಉತ್ತರ ಈ ವರದಿಯಲ್ಲಿದೆ; ಮತ್ತು ಅದು ಸತ್ಯದ ಇನ್ನೊಂದು ಮುಖವನ್ನು ಅನಾವರಣಗೊಳಿಸುತ್ತಿದೆ.

ಏನಿದು ಪ್ರಕರಣ?:

2013 ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಪರವಾಗಿ ವರ್ಧಮಾನ್ ಎಂಬುವವರು ಬೆಳ್ತಂಡಿಯ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿಯೊಂದನ್ನು ಸಲ್ಲಿಸಿದ್ದರು. ಸದರಿ ಅರ್ಜಿಯಲ್ಲಿ ಧರ್ಮಸ್ಥಳ, ಧರ್ಮಾಧಿಕಾರಿ ಹಾಗೂ ಅವರ ಸಂಸ್ಥೆಗಳ ವಿರುದ್ಧ ಸೋಮನಾಥ ನಾಯಕ್ ಅವಮಾನಕಾರಿಯಾಗಿ ಹೇಳಿಕೆ ನೀಡಬಾರದು ಎಂದು ಕೋರಿದ್ದರು. ಇದನ್ನು ಎತ್ತಿ ಹಿಡಿದಿದ್ದ ನ್ಯಾಯಾಲಯ ಸೋಮನಾಥ ನಾಯಕ್ ಧರ್ಮಸ್ಥಳದ ವಿರುದ್ಧ ಅವಮಾನಕಾರಿ ಹೇಳಿಕೆ ನೀಡುವುದಕ್ಕೆ ತಡೆಯಾಜ್ಞೆ ನೀಡಿತ್ತು. “2015ರಲ್ಲಿ ವರ್ಧಮಾನ್ ಸಲ್ಲಿಸಿದ ಅರ್ಜಿಯಲ್ಲಿ ಸೋಮನಾಥ ನಾಯಕ್ ಮೇಲೆ ಅವಮಾನಕರವಾಗಿ ಮಾತನಾಡದಂತೆ ತಡೆಯಾಜ್ಞೆ ಇದ್ದರೂ ಮಾಧ್ಯಮಗಳಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ವಿರುದ್ಧ ಅವಮಾನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ‘ನ್ಯಾಯಾಂಗ ನಿಂದನೆ’ಯಾಗಿದೆ ಎಂದು ಎರಡು ಪ್ರಕರಣಗಳಲ್ಲಿ ತಲಾ ಮೂರು ತಿಂಗಳ ಜೈಲು ಶಿಕ್ಷೆ, 4.93 ಲಕ್ಷ ರೂ. ಪರಿಹಾರ ನೀಡುವಂತೆ ತೀರ್ಪು ನೀಡಿದೆ,” ಎಂದು ಮಾಹಿತಿ ನೀಡಿದರು ಸೋಮನಾಥ ನಾಯಕ್ ಪರ ವಕೀಲ ಭಾಸ್ಕರ್ ಹೊಳ್ಳ.

“ಇದು ಕೆಳಗಿನ ನ್ಯಾಯಾಲಯದ ತೀರ್ಪು. ಮೇನ್ಮನವಿ ಸಲ್ಲಿಸಲಾಗುವುದು. ಸೋಮನಾಥ ನಾಯಕ್, ತಾವು ಧರ್ಮಸ್ಥಳದ ವಿರುದ್ಧ ಇರುವ ಸರಕಾರಿ ದಾಖಲೆಗಳನ್ನು ಸಾರ್ವಜನಿಕವಾಗಿ ನೀಡಿದ್ದೇ ಹೊರತು, ಅವಮಾನಕಾರಿಯಾಗಿ ಮಾತನಾಡಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಇದನ್ನೇ ಮೇಲಿನ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಗುವುದು,” ಎಂದು ಹೊಳ್ಳ ತಿಳಿಸಿದರು.

ಅದು ಹಳೆಯ ಸಂಘರ್ಷ:

ಧರ್ಮಸ್ಥಳದ ಸಮೀಪದ ಗುರುವಾಯನಕೆರೆಯಲ್ಲಿ ನಾಗರಿಕ ಸೇವಾ ಸಮಿತಿ ಹೆಸರಿನಲ್ಲಿ ಸೋಮನಾಥ ನಾಯಕ್ ಮತ್ತಿತರರು ಸಾಮಾಜಿಕ ಕೆಲಸಗಳನ್ನು ಆರಂಭಿಸಿದ್ದು 1976ರಲ್ಲಿ. 1980ರಲ್ಲಿ ‘ಉದಯವಾಣಿ’ ಪತ್ರಿಕೆ ಈ ಸಂಸ್ಥೆಯ ಕೆಲಸವನ್ನು ಗಮನಿಸಿ ‘ಟಿಎಂಎಪೈ ಪ್ರಶಸ್ತಿ’ಯನ್ನೂ ನೀಡಿತ್ತು. ನಂತರದ ದಿನಗಳಲ್ಲಿ ಮಂಗನ ಕಾಯಿಲೆ ಬಗ್ಗೆ ಜನ ಜಾಗೃತಿ, ಪಶ್ಚಿಮ ಘಟ್ಟ ಉಳಿಸಿ ಹೋರಾಟ ಹೀಗೆ ಹಲವು ಆಯಾಮಗಳಲ್ಲಿ ನಾಗರಿಕ ಸೇವಾ ಸಮಿತಿ ಸಕ್ರಿಯವಾಗಿ ತೊಡಗಿಸಿಕೊಂಡಿತ್ತು. ಈ ಹಂತದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕೂಡ ಸಂಸ್ಥೆಯ ವೇದಿಕೆಯಲ್ಲಿ ಪಾಲ್ಗೊಂಡಿದ್ದಕ್ಕೆ ಸಾಕ್ಷಿಗಳಿವೆ.

ಹೀಗಿರುವಾಗಲೇ 1988ರಲ್ಲಿ ಧರ್ಮಸ್ಥಳದ ಕಮ್ಯುನಿಸ್ಟ್ ಪಕ್ಷದ ದೇವಾನಂದ ಎಂಬುವವರ ಮಗಳು ಪದ್ಮಲತಾ ಅಪಹರಣ ಮತ್ತು ಕೊಲೆ ಪ್ರಕರಣ ಬೆಳಕಿಗೆ ಬಂತು. ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಂತೆಯೇ ಆ ಸಮಯದಲ್ಲಿಯೂ ಆರೋಪದ ಮೊನೆಗಳು ಧರ್ಮಸ್ಥಳದ ಕಡೆಗೆ ನೆಟ್ಟಿದ್ದವು. ಅಲ್ಲಿಂದ ಮುಂದೆ, ಸೋಮನಾಥ ನಾಯಕ್ ಹಾಗೂ ವೀರೇಂದ್ರ ಹೆಗ್ಗಡೆ ಅವರ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿತು ಎನ್ನುತ್ತಾರೆ ಇಬ್ಬರನ್ನೂ ಹತ್ತಿರದಿಂದ ಬಲ್ಲವರು. ಅವತ್ತಿಗಾಗಲೇ ನಾಗರಿಕ ಸೇವಾ ಸಮಿತಿ, ‘ನಾಗರಿಕ ಸೇವಾ ಟ್ರಸ್ಟ್’ ಆಗಿ ಬದಲಾಗಿತ್ತು.

ಪದ್ಮಲತಾ ಕೊಲೆ ಪ್ರಕರಣದ ನಂತರ ನಾಗರಿಕ ಸೇವಾ ಟ್ರಸ್ಟ್ ಮತ್ತು ಧರ್ಮಸ್ಥಳದ ಆಡಳಿತಾಧಿಕಾರಿಗಳು ಸಾಮಾಜಿಕ ಕ್ಷೇತ್ರಗಳ ಕೆಲಸಗಳ ವಿಚಾರಗಳಲ್ಲಿ ಪರಸ್ಪರ ಮುಖಾಮುಖಿಯಾದರು. ಧರ್ಮಸ್ಥಳದ ದೇವಸ್ಥಾನದ ಹೆಸರಿನಲ್ಲಿ ‘ಮಹಿಳಾ ಜ್ಞಾನ ವಿಕಾಸ ಕೇಂದ್ರ’ದ ವಿರುದ್ಧದ ನೆಲೆಯಲ್ಲಿ ನಾಗರಿಕ ಸೇವಾ ಟ್ರಸ್ಟ್ ಕೂಡ ಮಹಿಳೆಯರನ್ನು ಸಂಘಟಿಸುವ ಕೆಲಸ ಮಾಡತೊಡಗಿತು. ಆ ವೇಳೆಗಾಗಲೇ ವೀರೇಂದ್ರ ಹೆಗ್ಗಡೆ ಆರಂಭಿಸಿದ ಮಹಿಳಾ ಸ್ವಸಹಾಯ ಗುಂಪುಗಳಿಗೆ ಹೆಚ್ಚಿನ ಬಡ್ಡಿದರದಲ್ಲಿ ಸಾಲ ನೀಡುವುದನ್ನು ವಿರೋಧಿಸುವ ಕೆಲಸವೂ ಸೋಮನಾಥ ನಾಯಕ್ ಕಡೆಯಿಂದ ನಡೆದಿತ್ತು.

ಹೀಗಿರುವಾಗಲೇ 2000 ಸುಮಾರಿಗೆ ಅಳದಂಗಡಿಯಲ್ಲಿನ ಸ್ವಸಹಾಯ ಸಂಘವೊಂದರಲ್ಲಿ ಮಹಿಳೆಯೊಬ್ಬರಿಗೆ ಮೇಲಾಧಿಕಾರಿಯಿಂದ ಕಿರುಕುಳದ ಆರೋಪ ಕೇಳಿಬಂತು. ಈ ಪ್ರಕರಣವನ್ನು ನಾಗರಿಕ ಸೇವಾ ಟ್ರಸ್ಟ್ ಕೈಗೆತ್ತಿಕೊಂಡಿತು. ಅವರ ಹೋರಾಟ ಫಲವಾಗಿ ಅನ್ಯಾಯಕ್ಕೊಳಗಾಗಿದ್ದ ಮಹಿಳೆಗೆ ನ್ಯಾಯವೂ ದೊರಕಿತ್ತು. ಆದರೆ, ಅದು ನಾಗರಿಕ ಕ್ರಿಯಾ ಸಮಿತಿ ಮತ್ತು ಧರ್ಮಸ್ಥಳದ ದೇವಸ್ಥಾನದ ಆಡಳಿತ ನಡೆಸುವವರ ನಡುವೆ ಅದಾಗಲೇ ಹುಟ್ಟಿಕೊಂಡಿದ್ದ ಸಂಘರ್ಷವನ್ನು ಮತ್ತೊಂದು ನೆಲೆಗೆ ತೆಗೆದುಕೊಂಡು ಹೋಗಿದ್ದು ಇತಿಹಾಸ. “ನಾಗರಿಕ ಸೇವಾ ಟ್ರಸ್ಟ್ ವಿರುದ್ಧ ಸ್ವಸಹಾಯ ಸಂಘವನ್ನು ಎತ್ತಿಕಟ್ಟುವ ಪ್ರಯತ್ನ ನಡೆಯಿತು. ಈ ಸಮಯದಲ್ಲಿ ಸಮಿತಿಯು ‘ಅಭಿನಂದನಾ ಸಮಾವೇಶ’ದ ಹೆಸರಿನಲ್ಲಿ ಬಲ ಪ್ರದರ್ಶನವನ್ನು ನಡೆಸಿತು,” ಎಂದು ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ.

ಸೌಜನ್ಯ ಪ್ರಕರಣದ ತಿರುವು: 

ಸಾಮಾಜಿಕ ನೆಲೆಯಲ್ಲಿದ್ದ ಈ ಸಂಘರ್ಷ ಕಾನೂನಿನ ನೆರಳಿಗೆ ಬಂದಿದ್ದು ಸೌಜನ್ಯ ಪ್ರಕರಣ ನಡೆದ ಸಮಯದಲ್ಲಿ; 2012ರಲ್ಲಿ. ಈ ಸಮಯದಲ್ಲಿ ನಾಗರಿಕ ಸೇವಾ ಟ್ರಸ್ಟ್ ಪರವಾಗಿ ಸೋಮನಾಥ ನಾಯಕ್ ಮತ್ತಿತರರು ಸೌಜನ್ಯ ಮನೆಗೆ ಭೇಟಿ ನೀಡಿದ್ದರು. ನಂತರ, ಸೋಮನಾಥ ನಾಯಕ್, “ಧರ್ಮಸ್ಥಳದ ದೊರೆ” ಎಂಬ ಪದವನ್ನು ಬಳಸಿ, ಎಸ್‌ಎಂಎಸ್‌ ಒಂದನ್ನು ತಮ್ಮ ಆಪ್ತರಿಗೆ ಕಳುಹಿಸಿದ್ದರು. ಇದನ್ನು ಇಟ್ಟುಕೊಂಡು ಧರ್ಮಸ್ಥಳದ ಆಡಳಿತಾಧಿಕಾರಿಗಳ ಕಡೆಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜತೆಗೆ, 25 ಲಕ್ಷ ರೂಪಾಯಿಗಳ ಮಾನನಷ್ಟ ಮೊಕದ್ದಮೆಯನ್ನೂ ದಾಖಲಿಸಲಾಯಿತು. ಅಲ್ಲಿಂದ ಮುಂದೆ, ಪರಸ್ಪರ ಕೇಸುಗಳು ದಾಖಲಾದವು.

ಸದ್ಯ, ಲಭ್ಯ ಮಾಹಿತಿ ಪ್ರಕಾರ ಸೋಮನಾಥ್ ನಾಯಕ್ ಮತ್ತು ಅವರ ಜತೆಗಾರರ ಮೇಲೆ ಧರ್ಮಸ್ಥಳದ ಕಡೆಯಿಂದ 7 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 5 ಪ್ರಕರಣಗಳು ಬಿದ್ದು ಹೋಗಿವೆ. ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ 2 ಪ್ರಕರಣಗಳಲ್ಲಿ ಬಿ- ರಿಪೋರ್ಟ್ ಕೂಡ ಬಿದ್ದಿದೆ.

ಅದೇ ವೇಳೆಯಲ್ಲಿ, ಸೋಮನಾಥ್ ನಾಯಕ್ ಹಾಗೂ ಅವರ ನಾಗರಿಕ ಸೇವಾ ಟ್ರಸ್ಟ್ ಸದಸ್ಯರ ಕಡೆಯಿಂದ ಧರ್ಮಸ್ಥಳದ ಆಡಳಿತಾಧಿಕಾರಿಗಳ ವಿರುದ್ಧ 3 ಪ್ರತ್ಯೇಕ ಕ್ರಿಮಿನಲ್ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ‘ಖಾಸಗಿ ದೂರಿ’ನ ರೂಪದಲ್ಲಿ ದಾಖಲಿಸಲಾಗಿದೆ. ಪುತ್ತೂರಿನ ಎಸಿ ಕೋರ್ಟ್‌ನಲ್ಲಿ ಕನಿಷ್ಟ 12 ಪ್ರಕರಣಗಳನ್ನು ಧರ್ಮಸ್ಥಳದ ವಿರುದ್ಧ ದಾಖಲಿಸಲಾಗಿದೆ. ಡಿಸಿ ಕೋರ್ಟ್‌ನಲ್ಲಿ 4 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಮೈಸೂರು ಹಾಗೂ ಬೆಂಗಳೂರಿನ ಎಸಿ ನ್ಯಾಯಾಲಯಗಳಲ್ಲಿ ತಲಾ ಒಂದು ಪ್ರಕರಣ ದಾಖಲಿಸಲಾಗಿದೆ.

ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರಗಳ ಪೈಕಿ ಧರ್ಮಸ್ಥಳ ಕೂಡ ಒಂದು. ಅಲ್ಲಿಗೆ ರಾಜ್ಯದ ನಾನಾ ಭಾಗಗಳಿಂದ ಪ್ರತಿದಿನ ದೊಡ್ಡ ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಾರೆ. ಮಂಜುನಾಥೇಶ್ವರ ದೇವರಿಗೆ ತಮ್ಮ ಹರಕೆ ತೀರಿಸುತ್ತಾರೆ. ಈ ದೇವಸ್ಥಾನದ ಆಡಳಿತ ನೋಡಿಕೊಳ್ಳುತ್ತಿರುವ ವೀರೇಂದ್ರ ಹೆಗ್ಗಡೆ ಅವರನ್ನು ‘ನಡೆದಾಡುವ ಮಂಜುನಾಥ’ ಎಂದೇ ಕರೆಯಲಾಗುತ್ತಿದೆ.  ಇವು ಒಂದು ಆಯಾಮದಲ್ಲಿ ಗೋಚರವಾಗುವ ಅಂಶಗಳಾದರೆ, ಧರ್ಮಸ್ಥಳದ ಮಂಜುನಾಥೇಶ್ವರನ ಹೆಸರಿನಲ್ಲಿ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬ ಸದಸ್ಯರು ಹಣಕಾಸಿನ ವ್ಯವಹಾರ, ಭೂಮಿ ವ್ಯವಹಾರ ಮಾಡುತ್ತಿದ್ದಾರೆ. ಈ ವ್ಯವಹಾರಗಳಲ್ಲಿ ಕೆಲವು ಕಾನೂನು ಚೌಕಟ್ಟನ್ನು ಮೀರಿವೆ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ. ಇಂತಹ ಆರೋಪಗಳ ಕೇಂದ್ರದಲ್ಲಿ ಇರುವವರು ಸೋಮನಾಥ ನಾಯಕ್. ಇದೀಗ ಅವರ ವಿರುದ್ಧದ ಒಂದು ಪ್ರಕರಣದಲ್ಲಿ ತೀರ್ಪು ಬಂದಿದೆ. ಮತ್ತು ಅದು ರಾಜ್ಯ ಮಟ್ಟದಲ್ಲಿ ದೊಡ್ಡ ಪ್ರಚಾರ ಪಡೆದುಕೊಂಡಿದೆ.

ಇದು ನ್ಯಾಯಾಲಯದ ಅಂಗಳದಲ್ಲಿ ಧಾರ್ಮಿಕ ಸಂಸ್ಥೆ ಮತ್ತು ಸಾಮಾನ್ಯ ನಾಗರಿಕರೊಬ್ಬರ ನಡುವೆ ನಡೆಯುತ್ತಿರುವ ಸಂಘರ್ಷದ ಬಹಿರಂಗ ಸ್ವರೂಪ ಅಷ್ಟೆ. ಮಾಹಿತಿ ಯುದ್ಧ ಗೆಲ್ಲುವುದು ಒಂದು ಕಡೆಗಾದರೆ, ನ್ಯಾಯಾಂಗ ಹೋರಾಟ ಗೆಲ್ಲುವ ಅನಿವಾರ್ಯತೆ ಇಬ್ಬರಿಗೂ ಇದೆ.

Leave a comment

FOOT PRINT

Top