An unconventional News Portal.

‘ಅತ್ಯಾಚಾರಗಳ ಮಹರಾಜ್’ಗೆ 20 ವರ್ಷ ಜೈಲು: 15 ವರ್ಷಗಳ ನಂತರ ಸಾಧ್ವಿಗಳಿಗೆ ಧಕ್ಕಿತು ನ್ಯಾಯ

‘ಅತ್ಯಾಚಾರಗಳ ಮಹರಾಜ್’ಗೆ 20 ವರ್ಷ ಜೈಲು: 15 ವರ್ಷಗಳ ನಂತರ ಸಾಧ್ವಿಗಳಿಗೆ ಧಕ್ಕಿತು ನ್ಯಾಯ

ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟಿದ್ದ, ಹರಿಯಾಣದ ಸ್ವಘೋಷಿತ ದೇವಮಾವನ ಗುರ್ಮೀತ್ ರಾಮ್ ರಹೀಮ್ಗೆ 20 ವರ್ಷಗಳ ಶಿಕ್ಷೆ ಪ್ರಮಾಣವನ್ನು ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಿಸಿತು.

ಭಾರಿ ಬಿಗಿ ಭದ್ರತೆ ನಡುವೆ ರಾಮ್ ರಹೀಮ್ ಬಂಧನಕ್ಕೆ ಒಳಪಟ್ಟಿರುವ ರೋಹ್ಟಾಕ್ ಜೈಲಿಗೆ ಭೇಟಿ ನೀಡಿದ ನ್ಯಾಯಾಧೀಶ ಜಗ್ದೀಪ್ ಸಿಂಗ್ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದರು. ಶುಕ್ರವಾರ ಪಂಚಕುಲಾದ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಇದೇ ನ್ಯಾಯಾಧೀಶರು, ಇಬ್ಬರು ಸಾಧ್ವಿಗಳ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ರಾಮ್ ರಹೀಮ್ ತಪ್ಪಿತಸ್ಥ ಎಂದು ತೀರ್ಪು ನೀಡಿದ್ದರು. ಶಿಕ್ಷೆ ಪ್ರಮಾಣ ಘೋಷಣೆ ಹೊರಬೀಳುತ್ತಿದ್ದಂತೆ ದೇವಮಾನವನ ಅನುಯಾಯಿಗಳು ಮಾಧ್ಯಮ ಸಂಸ್ಥೆಗಳ ವಾಹನಗಳ ಮೇಲೆ ಹಲ್ಲೆಗೆ ಮುಂದಾದರು. “ಸದ್ಯ ಪರಿಸ್ಥಿತಿ ಸಂಪೂರ್ಣ ಹತೋಟಿಯಲ್ಲಿದೆ,” ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ.

ಶಿಕ್ಷೆ ಪ್ರಮಾಣ ಪ್ರಕಟಕ್ಕೂ ಮುನ್ನ ರಾಮ್ ರಹೀಮ್ ಪರ ವಕೀಲರು, ”ಡೇರಾ ಸಚ್ಚಾ ಸೌಧದ ಹೆಸರಿನಲ್ಲಿ ರಾಮ್ ರಹೀಮ್ ಹಾಗೂ ಆತನ ಅನುಯಾಯಿಗಳು ನಡೆಸಿದ ಸಾಮಾಜಿಕ ಕೆಲಸಗಳನ್ನು ಗಮನದಲ್ಲಿ ಇಟ್ಟುಕೊಂಡು ಶಿಕ್ಷೆ ಕಡಿಮೆ ಮಾಡುವಂತೆ,” ಕೋರಿಕೆ ಸಲ್ಲಿಸಿದರು. ಆದರೆ ಇದನ್ನು ವಿರೋಧಿಸಿದ ಸಿಬಿಐ, “ಇದೊಂದು ವಿಶೇಷ ಪ್ರಕರಣವಾಗಿರುವ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ,” ನೀಡಬೇಕು ಎಂದು ವಾದ ಮಂಡಿಸಿತು. ಕೊನೆಗೆ, ಅತ್ಯಾಚಾರ ಪ್ರಕರಣದಲ್ಲಿ ಅತಿ ಹೆಚ್ಚಿನ 10 ವರ್ಷಗಳ ಶಿಕ್ಷೆಯನ್ನು ನ್ಯಾಯಾಧೀಶರು ಪ್ರಕಟಿಸಿದರು.

2002ರಲ್ಲಿ ಬಹಿರಂಗಗೊಂಡ ಪ್ರಕರಣದಲ್ಲಿ ಸಿಬಿಐ 18ಕ್ಕೂ ಹೆಚ್ಚು ಸಾಧ್ವಿ (ಡೇರಾದಲ್ಲಿಯೇ ವಾಸ್ತವ್ಯ ಕಲ್ಪಸಿ, ದೀಕ್ಷೆ ನೀಡಿದ್ದ ಮಹಿಳೆಯರು)ಯರನ್ನು ಸಾಕ್ಷಿಗಳನ್ನಾಗಿ ಹೆಸರಿಸಿತ್ತು. ಆದರೆ ಇದರಲ್ಲಿ ಕೇವಲ ಇಬ್ಬರು ಮಾತ್ರವೇ ನ್ಯಾಯಾಲಯಕ್ಕೆ ಬಂದು ಹೇಳಿಕೆ ನೀಡಿದ್ದರು. ಇದರಲ್ಲಿ ಒಬ್ಬರು ಇವತ್ತಿಗೂ ಭೂಗತರಾಗಿಯೇ ಬದುಕುತ್ತಿದ್ದಾರೆ. ಇನ್ನೊಬ್ಬರಿಗೆ ‘ಸಾಕ್ಷಿಧಾರರ ರಕ್ಷಣಾ ಕಾಯ್ದೆ’ ಅಡಿಯಲ್ಲಿ ಭದ್ರತೆ ನೀಡಲಾಗಿದೆ.

ರಾಮ್ ರಹೀಮ್ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಎಂದು ನ್ಯಾಯಾಲಯ ತೀರ್ಪು ನೀಡುತ್ತಿದ್ದಂತೆ ಶುಕ್ರವಾರ ಹರಿಯಾಣ ಹಾಗೂ ಪಂಜಾಬ್ ರಾಜ್ಯಗಳ ಹಲವು ಕಡೆಗಳಲ್ಲಿ ಹಿಂಸಾಚಾರ ನಡೆದಿತ್ತು. ಸುಮಾರು 36 ಜನ ಪ್ರಾಣ ಕಳೆದುಕೊಂಡು, ಅಪಾರ ಪ್ರಮಾಣದ ಆಸ್ತಿಪಾಸ್ತಿಗಳು ಹಾನಿಗೆ ಒಳಗಾಗಿದ್ದವು. ಇದಕ್ಕೆ ಸ್ಥಳೀಯ ಬಿಜೆಪಿ ಸರಕಾರದ ನಿಷ್ಕ್ರಿಯತೆಯೇ, ಪಕ್ಷಪಾತಿ ಧೋರಣೆಯೇ ಕಾರಣ ಎಂಬ ಆರೋಪ ಕೇಳಿಬಂದಿತ್ತು. ಮುಖ್ಯಮಂತ್ರಿ ಖಟ್ಟರ್ ರಾಜೀನಾಮೆಗೆ ಒತ್ತಾಯಿಸಲಾಗಿತ್ತು. ಹರಿಯಾಣ ಹೈಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಪ್ರಧಾನಿ ನರೇಂದ್ರ ಮೋದಿಗೆ, ‘ನೀವು ಬಿಜೆಪಿ ಪ್ರಧಾನಿ ಅಲ್ಲ; ದೇಶದ ಪ್ರಧಾನಿ’ ಎಂದು ಕಟು ಮಾತುಗಳಲ್ಲಿ ಚಾಟಿ ಬೀಸಿತ್ತು. ಭಾನುವಾರ ಪ್ರಧಾನಿ ತಮ್ಮ ‘ಮನ್ ಕಿ ಬಾತ್’ನಲ್ಲಿ ಹರಿಯಾಣದಲ್ಲಿ ನಡೆದ ಹಿಂಸಾಚಾರವನ್ನು ಸಹಿಸುವುದಿಲ್ಲ ಎಂದು ರಾಮ್ ರಹೀಮ್ ಹೆಸರನ್ನು ಉಲ್ಲೇಖಿಸಿದರೆ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಡೇರಾ ಸಂಸ್ಕೃತಿ:

ಡೇರಾ ಸಂಸ್ಕೃತಿ ಹರಿಯಾಣ ಅಥವಾ ಪಂಜಾಬ್ ರಾಜ್ಯಗಳ ಪಾಲಿಗೆ ಹೊಸತೇನಲ್ಲ. ಈ ರಾಜ್ಯಗಳಲ್ಲಿ ಒಂದು ಅಂದಾಜಿನ ಪ್ರಕಾರ ಸುಮಾರು 5 ಸಾವಿರಕ್ಕೂ ಹೆಚ್ಚು ಡೇರಾಗಳು ಕೆಲಸ ಮಾಡುತ್ತಿವೆ. ಜಾತಿ ಮತ್ತು ಧರ್ಮಗಳನ್ನು ಮೀರಿ, ‘ನಾವೆಲ್ಲಾ ಮನುಷ್ಯರು’ ಎಂಬ ಘೋಷಣೆ ಮತ್ತು ಮದ್ಯಪಾನ ಹಾಗೂ ಡ್ರಗ್ಸ್ ನಿಷೇಧದಿಂದಾಗಿ ಡೇರಾಗಳ ಕಡೆಗೆ ಜನ ಆಕರ್ಷಿಸುತ್ತಿರುವುದು ಇಲ್ಲಿನ ಸಾಮಾಜಿಕ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ. “ಡೇರಾಗಳು ನಶಾ ಮುಕ್ತಿ ಅಭಿಯಾನ, ಗಿಡ ನೆಡುವ ಕೆಲಸ, ವಿಕೋಪಗಳ ನಿರ್ವಹಣೆ ಹೀಗೆ ಸಾಕಷ್ಟು ಸಾಮಾಜಿಕ ಕೆಲಸಗಳನ್ನು ಮಾಡುತ್ತವೆ. ಇದರಲ್ಲಿ ಗಿನ್ನಿಸ್ ದಾಖಲೆಗಳನ್ನೂ ಮಾಡಿವೆ,” ಎನ್ನುತ್ತಾರೆ ಪಂಜಾಬ್ ಕೇಸರಿ ಪತ್ರಿಕೆಯ ಚಂಡೀಘಡ ಸಿಟಿ ಎಡಿಟರ್ ರಮೇಶ್ ಹಂಡಾ.

‘ಸಮಾಚಾರ’ದ ಜತೆ ಅಲ್ಲಿನ ಡೇರಾ ಸಂಸ್ಕೃತಿ ಮತ್ತು ರಾಮ್ ರಹೀಮ್ ಪ್ರಕರಣದ ಕುರಿತು ಒಳನೋಟಗಳ ಜತೆ ಮಾತನಾಡಿದ ಅವರು, “ಡೇರಾಗಳಿಗೆ ತಮ್ಮದೇ ಆದ ಇತಿಹಾಸ ಇದೆ. ವಿಶೇಷವಾಗಿ 60-70ರ ದಶಕದಲ್ಲಿ ಡೇರಾಗಳ ಸ್ವರೂಪ ಬದಲಾಗಲು ಆರಂಭವಾಯಿತು. ಅವು ಸಾಮಾಜಿಕ ಕೆಲಸಗಳ ಮೂಲಕ ಗಳಿಸಿದ ರಾಜಕೀಯ ಜನಪ್ರಿಯತೆ ರಾಜಕೀಯ ಶಕ್ತಿಯ ಆಯಾಮ ಪಡೆದುಕೊಳ್ಳಲು ಶುರುವಾಯಿತು,” ಎಂದರು.

ಅಂತಹ ಸಾವಿರಾರು ಡೇರಾಗಳ ನಡುವೆ ಡೇರಾ ಸಚ್ಚಾ ಸೌಧ ಕೂಡ ಒಂದಾಗಿತ್ತು. “90ರಲ್ಲಿ ಅಖಾಲಿದಳದ ಭಯೋತ್ಪಾದಕ ಎಂಬ ಆರೋಪ ಹೊತ್ತಿದ್ದ ಗುರುಚರಣ್ ಸಿಂಗ್ ರಾಜಸ್ತಾನಿ ಎಂಬಾತ ಸಚ್ಚಾ ಸೌಧದಲ್ಲಿದ್ದ. ಅಲ್ಲಿನ ಮುಖ್ಯಸ್ಥರ ಮರಣಾ ನಂತರ ಅಧಿಕಾರಕ್ಕಾಗಿ ಕಿತ್ತಾಟ ನಡೆಯಿತು. ಈ ಸಮಯದಲ್ಲಿ ಗುರುಚರಣ್ ತಮ್ಮೂರಿನವನಾದ ರಾಮ್ ರಹೀಮ್ ಸಿಂಗ್ ಎಂಬ 23 ವರ್ಷದ ಯುವಕನನ್ನು ಮುಖ್ಯಸ್ಥನನ್ನಾಗಿ ಮಾಡುವಲ್ಲಿ ಯಶಸ್ವಿಯಾದ. ಆಗ ನಡೆದ ಗಲಾಟೆಯಲ್ಲಿ 18 ಜನ ಸತ್ತು ಹೋಗಿದ್ದರು. ಸರಕಾರ, ಪೊಲೀಸರು ಇದು ಡೇರಾ ಒಳಗೆ ನಡೆದ ಘಟನೆ ಎಂಬ ಕಾರಣಕ್ಕೆ ಹೆಚ್ಚು ಮುತುವರ್ಜಿ ವಹಿಸಿ ತನಿಖೆ ನಡೆಸಲಿಲ್ಲ,” ಎಂದು ರಮೇಶ್ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತಾರೆ.

ರಾಮ್ ರಹೀಮ್ ನೇತೃತ್ವದಲ್ಲಿ ಡೇರಾ ಸಚ್ಚಾ ಸೌಧ ಸಾವಿರಾರು ಡೇರಾಗಳ ಪೈಕಿ ಅತ್ಯಂತ ಬಲಿಷ್ಠ, ಪ್ರಭಾವಿ ಡೇರಾ ಆಗಿ ಬೆಳೆಯಿತು. ಕಳೆದ ಚುನಾವಣೆಯಲ್ಲಿ ಚಂಡೀಘಡದ 20 ವಿಧಾನಸಭಾ ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಸಚ್ಚಾ ಸೌಧದ ಅನುಯಾಯಿಗಳೇ ನಿರ್ಣಾಯಕವಾಗಿದ್ದರು.

ಡೇರಾ ಸಚ್ಚಾ ಸೌಧದಲ್ಲಿ ಯುವತಿಯರಿಗೆ ದೀಕ್ಷೆ ನೀಡುವ ಮೂಲಕ ಸಾಧ್ವಿಗಳು ಎಂದು ಕರೆಯಲಾಗುತ್ತಿತ್ತು. ದೀಕ್ಷೆ ಪಡೆದ ಯುವಕರನ್ನು ಸಾಧುಗಳು ಎನ್ನುತ್ತಿದ್ದರು. ಕೆಲವು ಸಾಧುಗಳ ಲೈಂಗಿಕ ಶಕ್ತಿ ಹರಣಕ್ಕೆ ಶಸ್ತ್ರ ಚಿಕಿತ್ಸೆಗಳನ್ನೂ ನಡೆಸಲಾಗಿತ್ತು. ಒಂದು ಕಡೆ ಜನಪ್ರಿಯತೆ, ಹಣಬಲ, ರಾಜಕೀಯ ಪ್ರಭಾವಗಳ ಮೂಲಕ ಡೇರಾವನ್ನು ಮುನ್ನಡೆಸಿಕೊಂಡು ಬಂದ ರಾಮ್ ರಹೀಮ್ ಮೇಲೆ 15 ವರ್ಷಗಳ ಹಿಂದೆ ಅತ್ಯಾಚಾರದ ಆರೋಪ ಬಂದಿತ್ತು. ಇದೀಗ 15 ವರ್ಷಗಳ ನಂತರ ತೀರ್ಪು ಹೊರಬಿದ್ದಿದ್ದು 10 ವರ್ಷಗಳ ಶಿಕ್ಷೆ ವಿಧಿಸಲಾಗಿದೆ. ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಆದರೆ, ಈಗಾಗಲೇ ಪ್ರಜಾಪ್ರಭುತ್ವ ವ್ಯವಸ್ಥೆಗಿಂತ ದೊಡ್ಡದಾಗಿ ಬೆಳೆದಿದ್ದ ರಾಮ್ ರಹೀಮ್ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಹೀಗಾಗಿ ಒಂದಷ್ಟ ವರ್ಷಗಳ ಕಾಲ ಆತ ಜೈಲಿಂದ ಹೊರಬರುವ ಸಾಧ್ಯತೆ ಕಡಿಮೆ ಇದೆ.

ಇಂತಹದೇ ಮತ್ತೊಂದು ಪ್ರಭಾವಿ ಡೇರಾವಾಗಿರುವ ದಿವ್ಯ ಜ್ಯೋತಿ ಜಾಗೃತಿ ಸಂಸ್ಥಾನದಲ್ಲಿ ಮುಖ್ಯಸ್ಥರ ಮರಣಾ ನಂತರ ದೇಹವನ್ನು ಇನ್ನೂ ಸಂರಕ್ಷಿಸಿ ಇಡಲಾಗಿದೆ. ಕೆಲವು ತಿಂಗಳ ಹಿಂದೆ, ನ್ಯಾಯಾಲಯ ದೇಹದ ರಕ್ಷಿಸಲು ಅನುಮತಿಯನ್ನೂ ನೀಡಿದೆ. ಅನುಯಾಯಿಗಳು ಇವತ್ತಲ್ಲ ನಾಳೆ ಮುಖ್ಯಸ್ಥರು ಎದ್ದು ಬರುತ್ತಾರೆ ಎಂದು ನಂಬಿದ್ದಾರೆ.

Leave a comment

FOOT PRINT

Top