An unconventional News Portal.

ರಾಷ್ಟ್ರಗೀತೆ ಕಡ್ಡಾಯಗೊಳಿಸಿದ್ದ ನ್ಯಾ. ದೀಪಕ್ ಮಿಶ್ರಾ ಈಗ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ

ರಾಷ್ಟ್ರಗೀತೆ ಕಡ್ಡಾಯಗೊಳಿಸಿದ್ದ ನ್ಯಾ. ದೀಪಕ್ ಮಿಶ್ರಾ ಈಗ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ

ಸುಪ್ರಿಂ ಕೋರ್ಟ್ 45ನೇ ಮುಖ್ಯ ನಾಯಮೂರ್ತಿಯಾಗಿ ಒರಿಸ್ಸಾ ಮೂಲದ ದೀಪಕ್ ಮಿಶ್ರಾ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

64 ವರ್ಷದ ಮಿಶ್ರಾ, ಫೆ. 14, 1977ರಲ್ಲಿ ವಕೀಲರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದವರು. 1996ರಲ್ಲಿ ಅವರನ್ನು ಒರಿಸ್ಸಾದ ಹೈಕೋರ್ಟ್ಗೆ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕ ಮಾಡಲಾಗಿತ್ತು. ವರ್ಷದ ನಂತರ ಮಧ್ಯಪ್ರದೇಶ ಹೈಕೋರ್ಟ್ಗೆ ವರ್ಗಾವಣೆ ಮಾಡಲಾಯಿತು. 2009ರಲ್ಲಿ ಪಾಟ್ನಾ ಹೈಕೋರ್ಟ್ ಮುಖ್ಯನಾಯಮೂರ್ತಿಯಾಗಿ ಮಿಶ್ರಾ ನೇಮಕಗೊಂಡರು. 2010ರಲ್ಲಿ ಅವರು ದಿಲ್ಲಿ ಹೈಕೋರ್ಟ್ಗೆ ವರ್ಗಾವಣೆಗೊಂಡರು. 2011, ಅಕ್ಟೋಬರ್ ತಿಂಗಳಿನಲ್ಲಿ ಸುಪ್ರಿಂ ಕೋರ್ಟ್ ನ್ಯಾಯಾಧೀಶರಾಗಿ ಅಧಿಕಾರ ಸ್ವೀಕರಿಸಿದರು. ಇದೀಗ, ಜೆ. ಎಸ್. ಖೇಹರ್ ಅವರಿಂದ ತೆರವಾದ ನ್ಯಾಯಾಂಗ ಅತ್ಯುನ್ನತ ಸ್ಥಾನಕ್ಕೆ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ.

ನ್ಯಾ. ಮಿಶ್ರಾ ಅವರಿಗೆ 14 ತಿಂಗಳ ಕಾಲಾವಕಾಶವಿದೆ. ಸದ್ಯ ದೇಶಾದ್ಯಂತ ಖಾಲಿ ಇರುವ ನ್ಯಾಯಾಧೀಶರ ಸ್ಥಾನಗಳಿಗೆ ನೇಮಕಾತಿ ಮಾಡುವ ಹೊಣೆಗಾರಿಗೆ ಅವರ ಹೆಗಲಿಗೆ ಬಿದ್ದಿದೆ. ನ್ಯಾಯಾಂಗ ನೇಮಕಾತಿ ವಿವಾದದ ಸ್ವರೂಪವನ್ನು ಪಡೆದುಕೊಂಡಿರುವ ಈ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ನ್ಯಾ. ಮಿಶ್ರಾ ನ್ಯಾಯಾಂಗ ಮತ್ತು ಸರಕಾರದ ನಡುವಿನ ತಿಕ್ಕಾಟಕ್ಕೆ ಕೊನೆಹಾಡಬೇಕಿದೆ. ಈಗಾಗಲೇ ದೇಶದ ಹೈಕೋರ್ಟ್ಗಳು ಹಾಗೂ ಸುಪ್ರಿಂ ಕೋರ್ಟ್ನಲ್ಲಿ ನ್ಯಾಯಾಧೀಶರ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿಯೇ, ನ್ಯಾಯದಾನ ವಿಳಂಬಗತಿಯಲ್ಲಿ ಸಾಗುತ್ತಿದೆ. ಇವೆಲ್ಲಕ್ಕೂ ನ್ಯಾ. ಮಿಶ್ರಾ ಅವರ 14 ತಿಂಗಳ ಅವಧಿಯಲ್ಲಿ ಪರಿಹಾರ ಸಿಗಬಹುದು ಎಂಬ ನಿರೀಕ್ಷೆಗಳಿವೆ.

ನ್ಯಾ. ದೀಪಕ್ ಮಿಶ್ರಾ ತಮ್ಮ ಮೃದು ಸ್ವಭಾವದ ಕಾರಣದಿಂದಲೇ ಗುರುತಿಸಿಕೊಂಡವರು. ಆದರೆ ಅವರ ಕೆಲವು ಆದೇಶಗಳು ಚರ್ಚೆಗೆ ಕಾರಣವಾಗಿದ್ದವು. ಸಿನೆಮಾ ಥಿಯೇಟರ್ಗಳಲ್ಲಿ ಪ್ರದರ್ಶನಕ್ಕೂ ಮುನ್ನ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಿ ಆದೇಶ ನೀಡಿದವರು ನ್ಯಾ. ದೀಪಕ್ ಮಿಶ್ರಾ. ರಾಷ್ಟ್ರೀಯತೆ ಹೆಸರಿನಲ್ಲಿ ನಾಗರಿಕ ಹಕ್ಕುಗಳ ಮೇಲೆ ದಾಳಿಗಳು ಹೆಚ್ಚುತ್ತಿದ್ದ ದಿನಗಳಲ್ಲೇ ನೀಡಿದ ಈ ಆದೇಶ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಮಾನನಷ್ಟ ಮೊಕದ್ದಮೆಗಳ ಬಗ್ಗೆ ಅವರು ನೀಡಿದ ಆದೇಶ ವಾಕ್ ಸ್ವಾತಂತ್ರ್ಯದ ಹರಣಕ್ಕೆ ನಾಂದಿ ಹಾಡುತ್ತದೆ ಎಂಬ ಟೀಕೆಗೆ ಗುರಿಯಾಗಿತ್ತು ಕೂಡ. ಇದೇ ವೇಳೆ, ಉತ್ತರಖಾಂಡ್ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆಯಲು ಕೇಂದ್ರ ಸರಕಾರ ಪ್ರಯತ್ನ ನಡೆಸಿದಾಗ ನ್ಯಾ. ದೀಪಕ್ ಮಿಶ್ರಾ ನೀಡಿದ ತೀರ್ಪು ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಸ್ಥಾನಮಾನವನ್ನು ಎತ್ತಿ ಹಿಡಿದಿತ್ತು ಮತ್ತು ಪ್ರಶಂಸೆಗೆ ಕಾರಣವಾಗಿತ್ತು.

ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಯಾಕೂಬ್ ಮೆಮೊನ್ ಪರ ವಕೀಲರು ಕೊನೆಯ ಪ್ರಯತ್ನದ ಭಾಗವಾಗಿ ಅರ್ಜಿಯೊಂದನ್ನು ನ್ಯಾ. ದೀಪಕ್ ಮಿಶ್ರಾ ಮುಂದೆ ಸಲ್ಲಿಸಿದ್ದರು. ಇದರ ವಿಚಾರಣೆಗೆ ನಸುಕಿನ ವೇಳೆಯಲ್ಲಿ ಅವಕಾಶ ಮಾಡಿಕೊಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಕೊನೆಗೆ, ಇವರ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಯಾಕೂಬ್ ಮೆಮೋನ್ಗೆ ಗಲ್ಲು ಶಿಕ್ಷೆಯನ್ನು ಖಾಯಂಗೊಳಸಿದ್ದು ಇತಿಹಾಸ.

ಮುಂದಿನ 14 ತಿಂಗಳ ಅವಧಿಯಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ದೀಪಕ್ ಮಿಶ್ರಾ ನ್ಯಾಯಾಂಗ ನೇಮಕಾತಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ಅದರ ಜತೆಗೆ, ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು, ಕಾವೇರಿ ಜಲವಿವಾದದ ತೀರ್ಪು, ಶಬರಿಮಲ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶದ ಕುರಿತು ನಡೆಯುತ್ತಿರುವ ಪ್ರಕರಣದ ತೀರ್ಪು, ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನ ಪ್ರಶ್ನಿಸಿ ಸಲ್ಲಿಕೆಯಾಗಿರುವ ಪ್ರಕರಣಗಳ ತೀರ್ಪುಗಳನ್ನು ನೀಡಬೇಕಿದೆ. ಇವೆಲ್ಲವೂ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುವ ತೀರ್ಪುಗಳಾಗಲಿವೆ ಎಂಬ ನಿರೀಕ್ಷೆ ಇದೆ.

ದೀಪಕ್ ಮಿಶ್ರಾ ತಮ್ಮ ಹಿಂದಿನ ಅಧಿಕಾರವಧಿಗಳಲ್ಲಿ ಸಾಮಾನ್ಯ ಜನರಿಗೆ ನ್ಯಾಯದಾನ ನೀಡುವ ಸಂಬಂಧ ಹಲವು ತೀರ್ಮಾನಗಳನ್ನು ಪ್ರಕಟಿಸಿರುವ ಇತಿಹಾಸವನ್ನೂ ಹೊಂದಿದ್ದಾರೆ. ದಿಲ್ಲಿ ಹೈಕೋರ್ಟ್ನಲ್ಲಿದ್ದಾಗ, ಅಲ್ಲಿನ ಪೊಲೀಸರು ಪ್ರಥಮ ಮಾಹಿತಿ ವರದಿ ದಾಖಲಿಸಿ 24 ಗಂಟೆಯೊಳಗೆ ಆನ್’ಲೈನ್ ಮೂಲಕ ಸಾರ್ವಜನಿಕವಾಗಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ತೀರ್ಪು ನೀಡಿದ್ದರು. ಇದು ನಂತರ ದಿನಗಳಲ್ಲಿ ದೇಶದ ಇತರೆ ರಾಜ್ಯಗಳ ಪೊಲೀಸರು ಕೂಡ ಪ್ರಥಮ ಮಾಹಿತಿ ವರದಿಗಳನ್ನು ಸಾರ್ವಜನಿಕವಾಗಿ ನೀಡುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಅನಿವಾರ್ಯತೆಯನ್ನು ಸೃಷ್ಟಿಸಿತು.

ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ವೇಳೆಯಲ್ಲಿ ನ್ಯಾ. ಮಿಶ್ರಾ ಬಡ ಕಕ್ಷಿದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮಗಳನ್ನು ಸೂಚಿಸಿದ್ದರು. ವಿಶೇಷ ಕಾನೂನು ಸೇವೆ ನೀಡಲು ಸಂಸ್ಥೆಗಳನ್ನು ರಚಿಸುವಲ್ಲಿ ಇವರು ಪ್ರಮುಖ ಪಾತ್ರವಹಿಸಿದ್ದರು. ವಿಚಾರಣೆ ವೇಳೆಯಲ್ಲಿ ಕವನಗಳು, ಪ್ರಾಸಗಳನ್ನು ಹೆಚ್ಚಾಗಿ ಬಳಸುವ ಮೂಲಕ ಮೆರಗು ತುಂಬುತ್ತಿದ್ದ ಮಿಶ್ರಾ ಈಗ ನ್ಯಾಯಾಂಗ ವ್ಯವಸ್ಥೆಯ ಉನ್ನತಸ್ಥಾನಕ್ಕೆ ಏರಿದ್ದಾರೆ. ಮುಂದಿನ ದಿನಗಳಲ್ಲಿ ಅವರ ತೀರ್ಪುಗಳು ಅವರ ಅವಧಿಯನ್ನು ಗುರುತಿಸುವಂತೆ ಮಾಡಬೇಕಿದೆ.

Leave a comment

FOOT PRINT

Top