An unconventional News Portal.

ಸಂದರ್ಶನಕ್ಕೆ ಹೋದವರಿಗೆ ಸಿಕ್ಕಿತ್ತು ‘ಸ್ಕೂಪ್’: ಹರತಾಳು ಹಾಲಪ್ಪ ಅತ್ಯಾಚಾರ ಪ್ರಕರಣದ ‘ಸೆನ್ಸೇಷನ್ ಸ್ಟೋರಿ’ ಹಿಂದಿನ ಅಸಲಿ ಕತೆ!

ಸಂದರ್ಶನಕ್ಕೆ ಹೋದವರಿಗೆ ಸಿಕ್ಕಿತ್ತು ‘ಸ್ಕೂಪ್’: ಹರತಾಳು ಹಾಲಪ್ಪ ಅತ್ಯಾಚಾರ ಪ್ರಕರಣದ ‘ಸೆನ್ಸೇಷನ್ ಸ್ಟೋರಿ’ ಹಿಂದಿನ ಅಸಲಿ ಕತೆ!

ಇದು, ಏಳು ವರ್ಷಗಳ ಹಿಂದೆ ಮೇ ತಿಂಗಳ ಮೊದಲ ಭಾನುವಾರ ರಾಜ್ಯದಲ್ಲಿ ಸೆನ್ಸೇಷನ್ ಹುಟ್ಟುಹಾಕಿದ್ದ ವರದಿಯೊಂದರ ಬಗೆಗಿನ ವರದಿ. ಅಂದು ಸಚಿವರಾಗಿದ್ದ ಹರತಾಳು ಹಾಲಪ್ಪ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಿದ ‘ತನಿಖಾ ವರದಿ’ಯೊಂದರ ಅಸಲಿ ಕತೆ. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಸರಕಾರದ ಮೊದಲ ವಿಕೆಟ್ ಪತನಕ್ಕೆ ಕಾರಣವಾದ ಸುದ್ದಿ ಹುಟ್ಟಲು ಕಾರಣವಾದ ಘಟನಾವಳಿಗಳನ್ನು ‘ಸಮಾಚಾರ’ ಇಲ್ಲಿ ಕಟ್ಟಿಕೊಡಲಿದೆ.

ಅದು, ಮೇ. 2, 2010. ಭಾನುವಾರ. ಬೆಳಗ್ಗೆ ‘ವಿಜಯ ಕರ್ನಾಟಕ’ ಪತ್ರಿಕೆ ಮಾರುಕಟ್ಟೆಗೆ ಹೋಗುತ್ತಿದ್ದಂತೆ ರಾಜ್ಯದ ಸೆನ್ಸೇಷನ್ ಸುದ್ದಿಯೊಂದು ಸ್ಫೋಟಗೊಂಡಿತ್ತು. ಅಂದಿನ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಖಾತೆ ಸಚಿವರಾಗಿದ್ದವರು ಶಿವಮೊಗ್ಗ ಜಿಲ್ಲೆ ಸಾಗರ ಮೂಲದ ಹರತಾಳು ಹಾಲಪ್ಪ. ಅವರ ಹೆಸರನ್ನು ಎಲ್ಲಿಯೂ ಪ್ರಸ್ತಾಪಿಸದೆ ‘ವಿಕ’ ಸುದ್ದಿಯೊಂದನ್ನು ಪ್ರಕಟಿಸಿತ್ತು. ಅದರಲ್ಲಿ ಸಚಿವರು, ಶಿವಮೊಗ್ಗದಲ್ಲಿ ಲೇವಾದೇವಿ ಮಾಡುತ್ತಿದ್ದ ವೆಂಕಟೇಶ್ ಮೂರ್ತಿ ಎಂಬುವವರ ಪತ್ನಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂಬುದನ್ನು ಪರೋಕ್ಷವಾಗಿ ಉಲ್ಲೇಖಿಸಲಾಗಿತ್ತು. ಸುದ್ದಿ ಹೊರಬೀಳುತ್ತಿದ್ದಂತೆ ಬೆಳಗ್ಗೆ 7. 30ರ ಸುಮಾರಿಗೆ ಹರತಾಳು ಹಾಲಪ್ಪ ಬೆಂಗಳೂರಿನ ಬಸವೇಶ್ವರ ನಗರದ ಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ರಾಜೀನಾಮೆ ನೀಡಿದರು. ಬಿಜೆಪಿ ಅಧಿಕಾರಕ್ಕೆ ಬಂದ ವರ್ಷದೊಳಗೆ ಮೊದಲ ವಿಕೆಟ್ ಪತನವಾಯಿತು.

ಏಳು ವರ್ಷಗಳ ನಂತರ ಗುರುವಾರ ಶಿವಮೊಗ್ಗದ 2ನೇ ಸೆಶನ್ಸ್ ನ್ಯಾಯಾಲಯ ಹಾಲಪ್ಪರನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.

ಈ ಪ್ರಕರಣಕ್ಕೆ ನಾಂದಿ ಹಾಡಿದ, ದಕ್ಷಿಣ ಭಾರತದ ಮೊದಲ ಬಿಜೆಪಿ ಸರಕಾರಕ್ಕೆ ಭಾರಿ ಪ್ರಮಾಣದಲ್ಲಿ ಮುಖಭಂಗವನ್ನು ಉಂಟುಮಾಡಿದ ‘ತನಿಖಾ ವರದಿ’ ಹುಟ್ಟಿದ್ದು ಹೇಗೆ? ಅದು ಈವರೆಗೂ ಎಲ್ಲಿಯೂ ಬಹಿರಂಗವಾದ ವಿಚಾರ. ಅಂದು ನಡೆದ ಒಟ್ಟಾರೆ ಘಟನಾವಳಿಗಳನ್ನು ಹತ್ತಿರದಿಂದ ಬಲ್ಲವರು ನೀಡಿದ ಮಾಹಿತಿಯನ್ನು ಇಟ್ಟುಕೊಂಡು ‘ಸಮಾಚಾರ’ ಸುದ್ದಿ ಮೂಲವನ್ನು ಇಲ್ಲಿ ಅನಾವರಣಗೊಳಿಸುತ್ತಿದೆ.

ಕುಮಾರಸ್ವಾಮಿ ಕೃಪೆ:

bhat-tyagaraj-lpಅಂದು ‘ವಿಜಯ ಕರ್ನಾಟಕ’ ಪತ್ರಿಕೆಯ ಸಂಪಾದಕರಾಗಿದ್ದವರು ವಿಶ್ವೇಶ್ವರ ಭಟ್. ಪತ್ರಿಕೆಗಾಗಿ ಕುಮಾರಸ್ವಾಮಿ ಜತೆ ಸಂದರ್ಶನಕ್ಕೆ ಎಂಎಲ್ಸಿಯಾಗಿದ್ದ ಶ್ರೀನಿವಾಸ್ ಏಪ್ರಿಲ್ 30ರಂದು ರಾತ್ರಿ ಏಟ್ರಿಯಾ ಹೋಟೆಲ್ನಲ್ಲಿ ವೇದಿಕೆಯೊಂದನ್ನು ಸಿದ್ಧಪಡಿಸಿದ್ದರು. ವಿಶ್ವೇಶ್ವರ ಭಟ್, ತಮ್ಮ ಸಹೋದ್ಯೋಗಿಗಳಾದ ಚೀಫ್ ರಿಪೋರ್ಟರ್ ಪಿ. ತ್ಯಾಗರಾಜ್ ಹಾಗೂ ಅಂದು ಜೆಡಿಎಸ್ ‘ಬೀಟ್’ ಹಿರಿಯ ವರದಿಗಾರರಾಗಿದ್ದ ಎಲ್. ಪ್ರಕಾಶ್ ಅವರುಗಳ ಜತೆ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ರಾತ್ರಿ 8 ಎಂಟು ಗಂಟೆಗೆ ಹೋಟೆಲ್ ತಲುಪಿದ್ದರು. ಆದರೆ ಕುಮಾರಸ್ವಾಮಿ ಸಮಯಕ್ಕೆ ಸರಿಯಾಗಿ ಬರಲಿಲ್ಲ. ಕೆಲ ಹೊತ್ತು ಕಾದ ನಂತರ ಕುಮಾರಸ್ವಾಮಿ ಅವರ ಆಗಮನವಾಯಿತು. “ಸಾರಿ ಬ್ರದರ್ಸ್, ಸ್ವಲ್ಪ ತಡವಾಯಿತು. ಮಧು ಬಂಗಾರಪ್ಪ ಬಂದಿದ್ದ. ಯಾವುದೋ ಸಚಿವರ ರೇಪ್ ಕೇಸ್ ಅಂತೆ. ಮುಂದಿನ ವಾರ ಪ್ರೆಸ್ ಮೀಟ್ ಮಾಡ್ಬೇಕು ಅಂತಿದಾರೆ. ಅದನ್ನು ಮುಗಿಸಿಕೊಂಡು ಬರಲು ಇಷ್ಟೊತ್ತಾಯಿತು. ಮತ್ತೇನು ಸಮಾಚಾರ?,” ಎಂದರು ಕುಮಾರಸ್ವಾಮಿ.

ಎದುರಿಗೆ ಕುಳಿತವರು ಮೂವರು ಪತ್ರಕರ್ತ. ಸಹಜವಾಗಿಯೇ ‘ಸಚಿವರೊಬ್ಬರ ರೇಪ್ ಕೇಸ್’ ಎಂಬ ಪದಗಳು ಕಿವಿ ಮೇಲೆ ಬೀಳುತ್ತಲೆ ಕಿವಿಗಳು ಚುರುಕಾದವು. ಸಂದರ್ಶನ ಮಾಡಲು ಹೋದವರು, ಅದನ್ನು ಪಕ್ಕಕ್ಕಿರಿಸಿ ‘ರೇಪ್ ಕೇಸ್’ ವಿಚಾರವನ್ನು ಇನ್ನಷ್ಟು ಕೆದಕಿದರು. ಅಲ್ಲಿಂದಲೇ ಮಧು ಬಂಗಾರಪ್ಪಗೆ ಕರೆ ಮಾಡಿದ ಕುಮಾರಸ್ವಾಮಿ ಇನ್ನೊಂದಿಷ್ಟು ಮಾಹಿತಿ ಪಡೆದುಕೊಂಡು ಎದುರಿಗೆ ಕೂತಿದ್ದವರಿಗೆ ವಿವರಿಸಿದರು. ಜತೆಗೆ, ಮೊಬೈಲ್ನಲ್ಲಿ ಸೆರೆಯಾಗಿರುವ ವಿಡಿಯೋ ನೋಡಿದ್ದಾಗಿ ಕುಮಾರಸ್ವಾಮಿ ಖಾತ್ರಿ ಪಡಿಸಿದರು ಕೂಡ.

ಮಾತುಕತೆ ಮುಗಿಸಿ ಹೊರಬಂದ ವಿಶ್ವೇಶ್ವರ ಭಟ್, ಪಿ. ತ್ಯಾಗರಾಜ್ ಹಾಗೂ ಎಲ್. ಪ್ರಕಾಶ್ ಶನಿವಾರ ರಾತ್ರಿ ‘ಸ್ಫೋಟಕ ಸುದ್ದಿ’ಯನ್ನು ಅಚ್ಚಿಗೆ ಕಳುಹಿಸುವ ತೀರ್ಮಾನಕ್ಕೆ ಬಂದರು. ಶನಿವಾರ ಬೆಳಗ್ಗೆಯೇ ಶಿವಮೊಗ್ಗದ ತಮ್ಮ ಮೂಲಗಳಿಂದ ಮಾಹಿತಿ ಸಂಗ್ರಹಿಸಿದರು. ಅಷ್ಟೊತ್ತಿಗಾಗಲೇ ಶಿವಮೊಗ್ಗದ ರಾಜಕೀಯ ವಲಯದಲ್ಲಿ ಹರತಾಳು ಹಾಲಪ್ಪದ ‘ಸ್ನೇಹಿತನ ಮನೆಯ ಪ್ರಸಂಗ’ ಚಲಾವಣೆಯಲ್ಲಿತ್ತು ಎಂಬುದು ಅವರುಗಳ ಅರಿವಿಗೂ ಬಂತು. ಹೀಗೆ, ನಾನಾ ಮೂಲಗಳಿಂದ ಮಾಹಿತಿ ಪಡೆದವರು ಶನಿವಾರ ರಾತ್ರಿ ಸುದ್ದಿಯನ್ನು ಅಚ್ಚಿಗೆ ಕಳುಹಿಸಿದರು. ಭಾನುವಾರ ಬೆಳಗ್ಗೆ ಪಿ. ತ್ಯಾಗರಾಜ್ ಬೈಲೈನ್ನಲ್ಲಿ ಸುದ್ದಿ ಮಾರುಕಟ್ಟೆಯನ್ನು ಪ್ರವೇಶಿಸಿತು. ಹೈದ್ರಾಬಾದ್ನಲ್ಲಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ಪಡೆದಕೊಳ್ಳಲು ಮುಂದಾದರು. ಹಾಗೆ,  ಬಿಜೆಪಿ ಸರಕಾರದ ಮೊದಲ ವಿಕೆಟ್ ಪತನಗೊಂಡಿತ್ತು. ಇದಿಷ್ಟು ‘ಸಮಾಚಾರ’ಕ್ಕೆ ಲಭ್ಯವಾಗಿರುವ ಮಾಹಿತಿ. ಸದ್ಯ ವಿಶ್ವೇಶ್ವರ ಭಟ್ ‘ವಿಶ್ವವಾಣಿ’ ಪತ್ರಿಕೆಯನ್ನು ಹೊರತರುತ್ತಿದ್ದಾರೆ. ಪಿ. ತ್ಯಾಗರಾಜ್ ಅವರ ಜತೆಯಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಎಲ್. ಪ್ರಕಾಶ್ ‘ಸುದ್ದಿ ಟಿವಿ’ಯ ಕಾರ್ಯನಿರ್ವಾಹಕ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ.

ನಂತರದ ಪರಿಣಾಮಗಳು:

ಹರತಾಳು ಹಾಲಪ್ಪ ರಾಜೀನಾಮೆ ನೀಡಿದ ನಂತರ, “ಸುದ್ದಿಯ ಹಿಂದೆ ಬಂಗಾರಪ್ಪ ಅವರ ಕೈವಾಡ ಇದೆ. ಇದು ರಾಜಕೀಯ ವಿರೋಧಿಗಳು ನನ್ನ ವಿರುದ್ಧ ನಡೆಸಿದ ಪಿತೂರಿ,” ಎಂದು ಹೇಳಿಕೆ ನೀಡಿದ್ದರು. ಇದಾದ ಮಾರನೇ ದಿನ ಶಿವಮೊಗ್ಗದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಬಿಜೆಪಿ ನಾಯಕ ಕೆ. ಎಸ್. ಈಶ್ವರಪ್ಪ, “ಇದು ಹಳೆಯ ಸುದ್ದಿ. ಆ ವೆಂಕಟೇಶ್ ಮೂರ್ತಿ ನನ್ನ ಬಳಿ ಬಂದಿದ್ದ. ಬಿಜೆಪಿ ಮರ್ಯಾದೆ ಹೋಗುತ್ತೆ ಅಂತ ಸುಮ್ಮನಿದ್ದೀನಿ ಎಂದಿದ್ದ. ನಾನೇ ಪೊಲೀಸರಿಗೆ ದೂರು ನೀಡಲು ಹೇಳಿ ಕಳುಹಿಸಿದ್ದೆ,” ಎಂಬರ್ಥದಲ್ಲಿ ಹೇಳಿಕೆ ನೀಡಿದ್ದರು.

ಹಾಗೆ ನೋಡಿದರೆ, ಇದೊಂದು ಘಟನೆ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಸರಕಾರದ ನಂತರ ಸರಣಿ ಅಪಸವ್ಯಗಳಿಗೆ ಮುನ್ನುಡಿ ಬರೆಯಿತು. ಹರತಾಳು ಹಾಲಪ್ಪ ರಾಜೀನಾಮೆ ನಂತರ ಮುಂದಿನ ದಿನಗಳಲ್ಲಿ ಒಂದೊಂದೆ ವಿಕೆಟ್ ಪತನಗೊಳ್ಳತೊಡಗಿದವು. ಕೊನೆಗೊಮ್ಮೆ ಸ್ವತಃ ಯಡಿಯೂರಪ್ಪ ಅಧಿಕಾರವನ್ನು ಕಳೆದುಕೊಂಡರು; ಜೈಲಿಗೂ ಹೋಗಿ ಬಂದರು.

ಸೆನ್ಸೇಷನ್ ಮೂಡಿಸಬಹುದಾದ, ಸರಕಾರಗಳಿಗೆ ಮರ್ಮಾಘಾತ ನೀಡುಬಹುದಾದ ಸುದ್ದಿಯೊಂದು ಹೇಗೆಲ್ಲಾ ಸೃಷ್ಟಿಯಾಗಬಹುದು ಎಂಬುದಕ್ಕೆ ‘ಹರತಾಳು ಹಾಲಪ್ಪ ಅತ್ಯಾಚಾರ ಪ್ರಕರಣ’ದ ಕುರಿತಾದ ಮೂಲ ವರದಿಯೇ ಸಾಕ್ಷಿ.

Leave a comment

FOOT PRINT

Top