An unconventional News Portal.

ಬಾಯಲ್ಲಿ ಕಪ್ಪು ಹಣ; ಬಗಲಲ್ಲಿ ಉದ್ಯಮಿ ಗೌತಮ್ ಅದಾನಿ: 1500 ಕೋಟಿ ವಂಚನೆ ಬಗ್ಗೆ ಪ್ರಧಾನಿ ಮೋದಿ ಏನಂತಾರೆ?

ಬಾಯಲ್ಲಿ ಕಪ್ಪು ಹಣ; ಬಗಲಲ್ಲಿ ಉದ್ಯಮಿ ಗೌತಮ್ ಅದಾನಿ: 1500 ಕೋಟಿ ವಂಚನೆ ಬಗ್ಗೆ ಪ್ರಧಾನಿ ಮೋದಿ ಏನಂತಾರೆ?

‘ಕಪ್ಪು ಹಣ’ದ ವಿರುದ್ಧ ಸಮರ ಸಾರಿರುವ ಪ್ರಧಾನಿ ನರೇಂದ್ರ ಮೋದಿ ಅವರ ಉದ್ಯಮಿ ಗೆಳೆಯ ಗೌತಮ್ ಅದಾನಿ ಸುಮಾರು 1500 ಕೋಟಿ ಹಣವನ್ನು ‘ತೆರಿಗೆ ಕಳ್ಳರ ಸ್ವರ್ಗ’ಕ್ಕೆ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿದೆ.

ಈ ಸಂಬಂಧ ತೆರಿಗೆ ಗುಪ್ತಚರ ನಿರ್ದೇಶನಾಲಯ (ಡಿಐಆರ್)ದ 97 ಪುಟಗಳ ವರದಿಯನ್ನು ‘ದಿ ಗಾರ್ಡಿಯನ್’ ಬಹಿರಂಗಪಡಿಸಿದ್ದು, ಅದಾನಿ ಗ್ರೂಪ್ ಕಂಪನಿಗಳು ಕೃತಕ ಬಿಲ್ ಸೃಷ್ಟಿಸಿ 1500 ಕೋಟಿ ರೂಪಾಯಿಗಳನ್ನು ವಿದೇಶಗಳಿಗೆ ರವಾನಿಸಿರುವುದು ಡಿಐಆರ್ ತನಿಖೆ ಬಯಲಿಗೆಳೆದಿದೆ. ವಿದ್ಯುತ್ ವಾಹಕ (ಎಲೆಕ್ಟ್ರಿಸಿಟಿ ಟ್ರಾನ್ಸ್’ಮಿಷನ್) ಉಪಕರಣಗಳ ಖರೀದಿಯಲ್ಲಿ ನಡೆದಿರುವ ಈ ವಂಚನೆಯ ಕುರಿತು 2014 ಹಾಗೂ 2015ರಲ್ಲಿ ಅದಾನಿ ಕಂಪನಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಈ ಕುರಿತು ‘ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ’ (ಇಪಿಡಬ್ಲ್ಯೂ) ಸರಣಿ ವರದಿಗಳನ್ನು ಪ್ರಕಟಿಸಿತ್ತು.

ಗೌತಮ್ ಅದಾನಿ ಒಡೆತನದ ಮೂರು ಕಂಪನಿಗಳು- ಅದಾನಿ ಪವರ್ ಮಹಾರಾಷ್ಟ್ರ ಲಿಮಿಟೆಡ್, ಅದಾನಿ ಪವರ್ ರಾಜಸ್ತಾನ ಲಿಮಿಟೆಡ್, ಮಹಾರಾಷ್ಟ್ರ ಪವರ್ ಈಸ್ಟರ್ನ್ ಗ್ರಿಡ್ ಪವರ್ ಟ್ರಾನ್ಸ್’ಮಿಶನ್ ಕಂಪನಿ-ಗಳು ವಿದ್ಯುತ್ ವಾಹಕ ಉಪಕರಣಗಳ ಖರೀದಿಗೆ ಕೃತಕವಾಗಿ ಬೆಲೆ ಹೆಚ್ಚಳ ಮಾಡಿ ಬಿಲ್ ನೀಡಿದ್ದವು. ಈ ಸಂಬಂಧ ಡಿಐಆರ್ ನೀಡಿದ ನೋಟಿಸ್ ಆಧಾರದ ಮೇಲೆ 6 ಸಾವಿರ ಕೋಟಿ ಹಗರಣ ನಡೆದಿದೆ ಎಂದು ಇಪಿಡಬ್ಲ್ಯೂ ವರದಿ ಮಾಡಿತ್ತು. ವರದಿಗಳ ವಿರುದ್ಧ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದರು ಅದಾನಿ ವಕೀಲರ ಮೂಲಕ ನೋಟಿಸ್ ನೀಡಿದ್ದರು. ಇದು ಪ್ರತಿಷ್ಠಿತ ಪತ್ರಿಕೆಯ ಸಂಪಾದಕರ ರಾಜೀನಾಮೆಗೆ ನಾಂದಿ ಹಾಡಿತ್ತು.

ಇದೀಗ, ‘ದಿ ಗಾರ್ಡಿಯನ್’ ವಿದ್ಯುತ್ ವಾಹಕ ಉಪಕರಣಗಳ ಖರೀದಿ ಸಂಬಂಧ ಅದಾನಿ ಗ್ರೂಪ್ ಕೃತಕ ಬೆಲೆ ಹೆಚ್ಚಳ ಮಾಡಿದ್ದರ ಬಗ್ಗೆ ಡಿಐಆರ್ ತನಿಖಾ ವರದಿಯ ಪ್ರತಿಯನ್ನು ಇದೇ ಮೊದಲ ಬಾರಿಗೆ ಬಹಿರಂಗಪಡಿಸಿದೆ. ಕಳೆದ ಮೂರು ವರ್ಷಗಳಿಂದ ಗೌತಮ್ ಅದಾನಿ ವಿರುದ್ಧ ಆರೋಪಗಳ ರೂಪದಲ್ಲಿದ್ದ ತೆರಿಗೆ ವಂಚನೆ ಪ್ರಕರಣಕ್ಕೆ ಪ್ರಮುಖ ಸಾಕ್ಷಿಯೊಂದು ಲಭ್ಯವಾದಂತಾಗಿದೆ.

ವರದಿಯಲ್ಲಿ ಏನಿದೆ?:

ತೆರಿಗೆ ಗುಪ್ತಚರ ನಿರ್ದೇಶನಾಲಯದ 97 ಪುಟಗಳ ವರದಿಯಲ್ಲಿ ಅದಾನಿ ಕಂಪನಿ ಸೌತ್ ಕೋರಿಯಾ ಮೂಲಕ ದುಬೈಗೆ ಹಣದ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿದೆ. “ಗೌತಮ್ ಶಾಂತಿಲಾಲ್ ಅದಾನಿ (ಗೌತಮ್ ಅದಾನಿ ಸಹೋದರ) ಹಾಗೂ ಅವರ ಮೂರು ಕಂಪನಿಗಳು ಹಣವನ್ನು ವಿದೇಶಗಳಿಗೆ ವರ್ಗಾವಣೆ ಮಾಡಲು ಸಂಚು ರೂಪಿಸಿದ್ದಾರೆ. ಇದಕ್ಕಾಗಿ ವಿದ್ಯುತ್ ವಾಹಕ ಉಪಕರಣಗಳನ್ನು ಆಮದು ಮಾಡಿಕೊಳ್ಳುವ ಸಮಯದಲ್ಲಿ ಕೃತಕ ಬೆಲೆ ಹೆಚ್ಚಳ ಮಾಡಿದ್ದಾರೆ,” ಎಂದು ವರದಿ ಹೇಳಿದೆ.

ಗಮನಾರ್ಹ ಸಂಗತಿ ಏನೆಂದರೆ, ದುಬೈ ಹಾಗೂ ಸೌತ್ ಕೋರಿಯಾದ ಕಂಪನಿಗಳ ಮೂಲಕ ಭಾರತದಲ್ಲಿರುವ ಅದಾನಿ ಗ್ರೂಪ್ ಕಂಪನಿಗಳು ಉಪಕರಣಗಳ ಖರೀದಿ ಒಪ್ಪಂದಗಳನ್ನು ಮಾಡಿಕೊಂಡಿವೆ. ದುಬೈ ಹಾಗೂ ಸೌತ್ ಕೋರಿಯಾ ಕಂಪನಿಗಳೂ ಕೂಡ ವಿನೋದ್ ಅದಾನಿ ಅವರಿಗೇ ಸೇರಿವೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅಂದರೆ, ಭಾರತಕ್ಕೆಆಮದು ಮಾಡಿಕೊಳ್ಳುವ ಮುನ್ನ ಕೃತಕವಾಗಿ ಬೆಲೆ ಹೆಚ್ಚಳಕ್ಕಾಗಿಯೇ ವಿದೇಶಗಳಲ್ಲಿನ ತಮ್ಮ ಕಂಪನಿಗಳ ಮೂಲಕ ಮಾರುಕಟ್ಟೆಗಿಂತ 8- 10 ಪಟ್ಟು ಬೆಲೆ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ದೇಶದ ಸುಮಾರು 1500 ಕೋಟಿ ರೂಪಾಯಿ ತೆರಿಗೆ ನಿಯಮಗಳನ್ನು ವಂಚಿಸಿ, ವಿದೇಶದ ‘ಟ್ಯಾಕ್ಸ್ ಹೆವನ್’ಗಳನ್ನು ತಲುಪಿದೆ.

‘ದಿ ಗಾರ್ಡಿಯನ್’ ವರದಿ ಪ್ರಕಾರ, “ಈ 1500 ಕೋಟಿ ರೂಪಾಯಿ ಅಂತಿಮವಾಗಿ ಮಾರಿಷಸ್ನಲ್ಲಿರವ ಟ್ರಸ್ಟ್ ಖಾತೆಗೆ ವರ್ಗಾವಣೆಗೊಂಡದೆ. ಅಕ್ಷಯ ರಿಸೋರ್ಸಸ್ ಫ್ಯಾಮಿಲಿ ಟ್ರಸ್ಟ್ ಹೆಸರಿನ ಸಂಸ್ಥೆಗೆ ಹಣ ಸಂದಾಯಾಗಿದೆ. ಇದರ ನೇತೃತ್ವವನ್ನು ವಿನೋದ್ ಅದಾನಿ ವಹಿಸಿಕೊಂಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಗೌತಮ್ ಅದಾನಿ ತಮ್ಮ ಕಂಪನಿಗಳು ಕೃತಕ ಬೆಲೆ ಹೆಚ್ಚಳ ಮಾಡಿರುವುದನ್ನು ಅಲ್ಲಗೆಳೆಯುತ್ತಲೇ ಬಂದಿದ್ದಾರೆ. ಹೀಗಿರವಾಗಲೇ ಸರಕಾರ ಅದೀನದಲ್ಲಿರುವ ಡಿಐಆರ್ ತನಿಖಾ ವರದಿ ಅದಾನಿ ಕಂಪನಿ ನಡೆಸಿರುವ ಆರ್ಥಿಕ ವಂಚನೆಗೆ ಪ್ರಮುಖ ಸಾಕ್ಷಿಯಾಗಿ ನಿಲ್ಲುತ್ತಿದೆ.

ಭ್ರಷ್ಟಾಚಾರದ ವಿರುದ್ಧ ಹೋರಾಟ:

ಕಳೆದ ವರ್ಷ ನವಂಬರ್ ತಿಂಗಳಿನಲ್ಲಿ ಭ್ರಷ್ಟಾಚಾರ ಹಾಗೂ ಕಪ್ಪು ಹಣದ ವಿರುದ್ಧ ಹೋರಾಟದ ಹೆಸರಿನಲ್ಲಿ 500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಳ್ಳಲಾಯಿತು. ಪ್ರಧಾನಿ ಮೋದಿ ನೋಟುಗಳ ಅಮಾನ್ಯೀಕರಣ ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ಮೊನ್ನೆಯ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿಯೂ ಪ್ರಸ್ತಾಪಿಸಿದ್ದರು.

ಸದ್ಯ ಆಸ್ಟ್ರೇಲಿಯಾದಲ್ಲಿ ಕಲ್ಲಿದ್ದಲ ಗಣಿಗೆ ಪರವಾನಗಿ ಪಡೆದುಕೊಳ್ಳುವ ತಯಾರಿಯಲ್ಲಿ ಅದಾನಿ ಇದ್ದಾರೆ. ಅದಕ್ಕೆ ಅಲ್ಲಿ ಭಾರಿ ಪ್ರತಿರೋಧವೂ ವ್ಯಕ್ತವಾಗುತ್ತಿದೆ. ಇಂತಹ ಸಮಯದಲ್ಲಿಯೇ ಕೇಂದ್ರ ಸರಕಾರದ ಅಡಿಯಲ್ಲಿರುವ ಸಂಸ್ಥೆಯೊಂದರ ತನಿಖೆ ದಾಖಲೆ ಸಮೇತ ಅದಾನಿ ಗ್ರೂಪ್ ಭಾರತದಲ್ಲಿ ನಡೆಸಿರುವ ಆರ್ಥಿಕ ವಂಚನೆಯನ್ನು ಬಯಲಿಗೆ ಎಳೆದಿದೆ.

ತಮ್ಮ ಆಪ್ತ ವಲಯದಲ್ಲಿರುವ ಉದ್ಯಮಿಯೊಬ್ಬರ ಮೇಲೆ ಬಂದಿರುವ ಈ ಗುರುತರ ಆರೋಪದ ಬಗ್ಗೆ ಪ್ರಧಾನಿ ಕಠಿಣ ನಿಲುವನ್ನು ಸಾರ್ವಜನಿಕವಾಗಿ ಪ್ರದರ್ಶಿಸಬೇಕಿದೆ. ಆಗ ಮಾತ್ರವೇ ಕಪ್ಪು ಹಣದ ವಿರುದ್ಧ ಅವರು ಸಾರಿರುವ ಸಮರದ ಸಾರ್ಥಕತೆಯನ್ನು ಜನ ಮನಗಾಣುತ್ತಾರೆ.

ಚಿತ್ರ: ಡೈಲಿ ಓ

Leave a comment

FOOT PRINT

Top