An unconventional News Portal.

ಮೂರು ದಿನಗಳಲ್ಲಿ ಸಾಲು ಸಾಲು ಸಭೆಗಳು: ‘ಒಡೆದ ಮನೆ’ಗೆ ಅಮಿತ್ ಶಾ ಭೇಟಿ ನೀಡಿದ ಭವಿಷ್ಯದ ಸೂಚನೆಗಳು!

ಮೂರು ದಿನಗಳಲ್ಲಿ ಸಾಲು ಸಾಲು ಸಭೆಗಳು: ‘ಒಡೆದ ಮನೆ’ಗೆ ಅಮಿತ್ ಶಾ ಭೇಟಿ ನೀಡಿದ ಭವಿಷ್ಯದ ಸೂಚನೆಗಳು!

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮೂರು ದಿನಗಳ ರಾಜ್ಯ ಭೇಟಿ, ಕೇಸರಿ ಪಕ್ಷದ ಇವತ್ತಿನ ಮನಸ್ಥಿತಿ ಹಾಗೂ ಭವಿಷ್ಯದಲ್ಲಿ ರಾಜ್ಯ ಬಿಜೆಪಿ ನಾಯಕರ ಪರಿಸ್ಥಿತಿಗೆ ಮುನ್ನುಡಿ ಬರೆಯುವ ಪ್ರವಾಸದಂತಿದೆ.

ಶನಿವಾರ ಬೆಳಗ್ಗೆಯಿಂದ ಅಮಿತ್ ಶಾ ಸಾಲು ಸಾಲು ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ; ಜಾತಿ ಮಠಗಳಿಗೆ ಭೇಟಿ ನೀಡುತ್ತಿದ್ದಾರೆ. ಪಕ್ಷದ ನಾಯಕರು ಹಾಗೂ ಪ್ರಮಖರ ಜತೆ ಸಮಾಲೋಚಿಸುತ್ತಿದ್ದಾರೆ. ಮಾರ್ಗ ಮಧ್ಯೆ ಸಿಗುವ ಜನರ ಮಾತುಗಳಿಗೆ ಕವಿಯಾಗುತ್ತಿದ್ದಾರೆ. ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅನುಸರಿಸಬೇಕಾದ ಕಾರ್ಯತಂತ್ರಗಳನ್ನು ಬಿಚ್ಚಿಡುತ್ತಿದ್ದಾರೆ. ‘ಉತ್ತರ ಪ್ರದೇಶ ಮಾದರಿ’ಯನ್ನು ರಾಜ್ಯದಲ್ಲಿಯೂ ಅನುಷ್ಠಾನಕ್ಕೆ ತರುವ ಆಶಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಗುಜರಾತ್ ಚುನಾವಣೆಗಿಂತಲೂ, ಕರ್ನಾಟಕದ ವಿಧಾನಸಭೆಯ ಗೆಲುವು ಮುಖ್ಯ ಎಂದು ಹೇಳುತ್ತಿದ್ದಾರೆ. ಯಡಿಯೂರಪ್ಪ ಅವರೇ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದಾರೆ. ಭಿನ್ನಮತ ಹೊಂದಿದವರ ಭಾವನೆಗೆ ಯಾವ ಬೆಲೆಯೂ ಸಿಗುವುದಿಲ್ಲ ಎಂಬದನ್ನು ಸೂಚ್ಯವಾಗಿ ಮನದಟ್ಟು ಮಾಡಿಸುತ್ತಿದ್ದಾರೆ. ಸಂಘಪರಿವಾರದ ಸಂಘಟನೆಗಳ ಪ್ರಮುಖರ ಅಭಿಪ್ರಾಯಗಳನ್ನು ಸಂಗ್ರಹಿಸುತ್ತಿದ್ದಾರೆ. ಒಟ್ಟಾರೆ, ದಕ್ಷಿಣ ಭಾರತದ ಹೆಬ್ಬಾಗಿಲಿನಲ್ಲಿ ಮತ್ತೆ ಅಧಿಕಾರ ಹಿಡಿಯುವ ಮೂಲಕ ‘ಕಾಂಗ್ರೆಸ್ ಮುಕ್ತ ಭಾರತ’ದ ಕನಸನ್ನು ನನಸು ಮಾಡಲು ಶಾ ರಣತಂತ್ರಗಳ ಮೂಲಕ ಅಖಾಡಕ್ಕೆ ಇಳಿದಿರುವುದನ್ನು ಅವರ ಭೇಟಿಗಳು ನಿಚ್ಚಳವಾಗಿಸಿವೆ.

ಕರ್ನಾಟಕ ಬಿಜೆಪಿಯ ಇಬ್ಬರು ಪ್ರಮಖ ನಾಯಕರ ನಡುವಿನ ಗುದ್ದಾಟ ಎಲ್ಲೆಗಳನ್ನು ಮೀರಿದೆ. ಒಂದು ಕಾಲದಲ್ಲಿ ಶಿವಮೊಗ್ಗದಲ್ಲಿ ಸ್ಕೂಟರ್ ಹತ್ತಿ ಪಕ್ಷವನ್ನು ಕಟ್ಟಿದ್ದ ಕೆ. ಎಸ್. ಈಶ್ವರಪ್ಪ ಮತ್ತು ಬಿ. ಎಸ್. ಯಡಿಯೂರಪ್ಪ ಇವತ್ತು ಹಾವು- ಮುಂಗಸಿಯಂತಾಗಿದ್ದಾರೆ. ಚುನಾವಣೆ ಹೊಸ್ತಿಲಿನಲ್ಲಿ ಇರುವಾಗ ಇಬ್ಬರ ನಡುವಿನ ಕಿತ್ತಾಟ ಬಿಜೆಪಿಗೆ ದುಬಾರಿಯಾಗಿ ಪರಿಣಮಿಸಿದೆ. ಈಶ್ವರಪ್ಪ ಆಪ್ತ ಸಹಾಯಕನನ್ನು ಯಡಿಯೂರಪ್ಪ ಆಪ್ತ ಸಹಾಯಕ ಅಪಹರಿಸಲು ಯತ್ನಿಸಿದ ಘಟನೆ ಈಗ ತನಿಖೆ ಹಂತದಲ್ಲಿದೆ. ಹೀಗಿರುವಾಗಲೇ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿ, ಪಕ್ಷವನ್ನು ಅಧಿಕಾರಕ್ಕೆ ತರುವ ತಂತ್ರಗಾರಿಕೆ ಆರಂಭಿಸಿದ್ದಾರೆ.

ಅದೇ ಘೋಷಣೆಗಳು:

ಕಳೆದ ಮೂರು ದಿನಗಳಲ್ಲಿ ಅಮಿತ್ ಶಾ ಬಿಜೆಪಿ ಶಾಸಕರು, ಸಂಸದರು ಹಾಗೂ ಪರಿಷತ್ ಸದಸ್ಯರ ಭೇಟಿ ಮಾಡಿದ್ದಾರೆ. ಜಿಲ್ಲಾ ಮಟ್ಟದ, ಮೋರ್ಚಾ ನಾಯಕರ ಹಾಗೂ ವಿಸ್ತಾರಕ ಯೋಜನೆಯ ಪ್ರಮುಖರ ಸಭೆ ನಡೆಸಿದ್ದಾರೆ. ಬಿಜೆಪಿ ರಾಜಕೀಯ ವ್ಯವಹಾರಗಳ ಸಮಿತಿ ಜತೆ ಮಾತುಕತೆ, ಸಂಘಪರಿವಾರದ ನಾಯಕರ ಜತೆ ಸಭೆಗಳಲ್ಲಿ ಪಾಲ್ಗೊಂಡಿದ್ದಾರೆ. ಹೀಗೆ, ಸಾಲು ಸಾಲು ಸಭೆಗಳ ನಂತರ ಹೊರಬಿದ್ದಿರುವ ಮಾಹಿತಿ ಆಧಾರದ ಮೇಲೆ ಹೇಳುವುದಾರೆ, ಅಮಿತ್ ಶಾ ಕೆಲವೊಂದು ವಿಚಾರದಲ್ಲಿ ಸ್ಪಷ್ಟ ನಿಲುವು ತಳೆದಿರುವುದು ಸ್ಪಷ್ಟವಾಗುತ್ತಿದೆ.

ಒಂದು, ಯಡಿಯೂರಪ್ಪ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದನ್ನು ಅವರು ನಾಯಕರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಸ್ಪಷ್ಟಪಡಿಸಿದ್ದಾರೆ. ಎರಡು, ರಾಜ್ಯ ಕಾಂಗ್ರೆಸ್ ಪಕ್ಷವನ್ನು ಚುನಾವಣಾ ಅಖಾಡದಲ್ಲಿ ಎದುರಿಸಲು ‘ಭ್ರಷ್ಟಾಚಾರ’ದ ಅಸ್ತ್ರವನ್ನು ಬಳಸುವುದು ನಿಚ್ಚಳವಾಗಿದೆ. ಮೂರು, ಕೇಂದ್ರದಲ್ಲಿ ಮೋದಿ ನೇತೃತ್ವದ ಸರಕಾರದ ಯೋಜನೆಗಳ ಪ್ರಚಾರವೇ ಚುನಾವಣೆಯ ಪ್ರಮುಖ ಅಜೆಂಡಾ ಆಗಿರಲಿದೆ ಎಂಬುದನ್ನು ಶಾ ಬಿಡಿಸಿಟ್ಟಿದ್ದಾರೆ. ನಾಲ್ಕು, ಈ ಬಾರಿ ಟಿಕೆಟ್ ಹಂಚಿಕೆಯಲ್ಲಿ ರಾಜ್ಯ ನಾಯಕರ ಪಾತ್ರ ಇರುವುದಿಲ್ಲ ಎಂಬುದನ್ನು ನೇರವಾಗಿ ಹೇಳಿದ್ದಾರೆ.

ಯಡಿಯೂರಪ್ಪ ಮುಖ್ಯಮಂತ್ರಿ ಅಭ್ಯರ್ಥಿ ಎನ್ನುವ ಮೂಲಕ ಲಿಂಗಾಯತ ಸಮುದಾಯ ಬಿಜೆಪಿಗೆ ಬೆಂಬಲಿಸಲಿದೆ ಎಂಬ ಆಶಯ ಶಾಗೆ ಇರುವುದು ಸ್ಪಷ್ಟವಾಗಿದೆ. ಇದರ ಜತೆಗೆ ಮತ್ತೊಂದು ಪ್ರಮಖ ಜಾತಿಯಾದ ಒಕ್ಕಲಿಗರ ಮಠಕ್ಕೆ ಭೇಟಿ ನೀಡಿದ್ದಾರೆ. ಒಕ್ಕಲಿಗ ಸಮುದಾಯದ ಮತಗಳ ಬಗ್ಗೆಯೂ ಆಸಕ್ತಿ ಇರುವ ಹಾಗಿದೆ. ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಸಮಯದಲ್ಲಿ ಅಮಿತ್ ಶಾ ನಿರ್ಮಲಾನಂದ ಸ್ವಾಮಿ ಮುಂದೆ ಕಾಲು ಮೇಲೆ ಕಾಲು ಹಾಕಿ ಕುಳಿತಿರುವ ಚಿತ್ರ ವೈರಲ್ ಆಗಿದೆ. ಆದರೆ, ಆದಿಚುಂಚನಗಿರಿ ಮಠದ ವಿದ್ಯಾ ಸಂಸ್ಥೆಗಳಿಗೆ ದಿಲ್ಲಿ ಹೊರವಲಯದಲ್ಲಿ ಜಾಗ ಕೊಡಿಸಲು ಪ್ರಮುಖ ಪಾತ್ರವಹಿಸಿದ್ದವರು ಅನಂತ್ ಕುಮಾರ್. ಹೀಗಾಗಿ, ಮಠ ಬಿಜೆಪಿ ವಿರುದ್ಧ ನಿಲ್ಲುವ ಸಾಧ್ಯತೆಗಳಿಲ್ಲ ಎಂಬುದು ಈ ಸಮಯದಲ್ಲಿ ಮುಖ್ಯ.

amith-sha-matt

ಇವತ್ತಿನ ಬಿಜೆಪಿ ಮನಸ್ಥಿತಿ:

ಅಮಿತ್ ಶಾ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಮೂರು ವರ್ಷ ಪೂರೈಕೆ ಮಾಡಿದ್ದಾರೆ. ಈ ಸಮಯದಲ್ಲಿ ಅವರು ಉತ್ತರ ಪ್ರದೇಶದಂತಹ ಪ್ರಮುಖ ರಾಜ್ಯದಲ್ಲಿ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರ ಹಿಡಿಯುವಂತೆ ಮಾಡಿದ್ದಾರೆ. ಇದರ ಜತೆಗೆ ಸಾಲು ಸಾಲು ಗೆಲುವುಗಳು, ಕೆಲವು ಸೋಲುಗಳ ಆಚೆಗೂ ಅವರನ್ನು ಪ್ರಶ್ನಾತೀತ ನಾಯಕನನ್ನಾಗಿ ಮಾಡಿವೆ. ಇದರ ಪ್ರತಿಫಲನ ಅವರ ಪ್ರತಿ ನಡೆಯಲ್ಲಿಯೂ, ಮಾತುಗಳಲ್ಲಿಯೂ ಕಾಣಿಸುತ್ತಿದೆ. “ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಮದುಮಗ ಇದ್ದಂತೆ. ನಾವು ಚಪ್ಪರ ಹಾಕುವುದರಿಂದ ಹಿಡಿದು ಉಳಿದ ಮದುವೆ ಕೆಲಸವನ್ನು ನೋಡಿಕೊಳ್ಳುತ್ತೇವೆ,”( ಪ್ರಜಾವಾಣಿ ವರದಿ) ಎಂದು ಅವರು ಭಾನುವಾರ ಹೇಳುವ ಮೂಲಕ ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ರಾಜ್ಯ ನಾಯಕರ ಪಾತ್ರ ಮಹತ್ವದ್ದೇನೂ ಅಲ್ಲ ಎಂಬ ಸಂದೇಶ ರವಾನಿಸಿದ್ದಾರೆ.

“ಕೇಂದ್ರ ಸರಕಾರ ವಿದ್ಯುತ್ ಉತ್ಪಾದನಾ ಕಂಪನಿ ಇದ್ದಂತೆ. ರಾಜ್ಯಗಳು ಟ್ರಾನ್ಸ್’ಫಾರ್ಮರ್ಸ್ ಇದ್ದ ಹಾಗೆ,” ಎನ್ನುವ ಮೂಲಕ ಒಕ್ಕೂಟ ವ್ಯವಸ್ಥೆಯ ವಿರೋಧಿ ಮನಸ್ಥಿತಿ ಹೇಗೆ ಕೆಲಸ ಮಾಡುತ್ತದೆ ಎಂಬುದರ ಚಹರೆಯೊಂದನ್ನು ಬಿಡಿಸಿಟ್ಟಿದ್ದಾರೆ. ಮೋದಿ ಸರಕಾರದ ಯೋಜನೆಗಳ ಫಲ ಕರ್ನಾಟಕದಲ್ಲಿ ಮತಗಳ ರೂಪದಲ್ಲಿ ಸಿಗಲಿದೆ ಎಂಬ ಭರವಸೆ ಅವರಿಗೆ ಇದ್ದಂತಿದೆ. ಟಿಕೆಟ್ ಹಂಚಿಕೆಯನ್ನು ಹತೋಟಿಗೆ ತೆಗೆದುಕೊಳ್ಳುವ ಮೂಲಕ ಭವಿಷ್ಯದಲ್ಲಿ ಏಳುವ ಅಪಸ್ವರಗಳ ಬಗ್ಗೆ ಖಾತ್ರಿ ಇದ್ದಂತಿಲ್ಲ.

ಭವಿಷ್ಯದ ಸಾಧ್ಯತೆಗಳು:

‘ಉತ್ತರ ಪ್ರದೇಶದ ಮಾದರಿ’ಯನ್ನೂ ಕರ್ನಾಟಕದಲ್ಲಿಯೂ ಅನುಷ್ಠಾನಕ್ಕೆ ತರಲು ಅಮಿತ್ ಶಾ ಹೊರಟಿದ್ದಾರೆ. ಭ್ರಷ್ಟಾಚಾರದ ಅಜೆಂಡಾವನ್ನೇ ಪ್ರಮುಖ ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳಲು ತೀರ್ಮಾನಿಸಿದ್ದಾರೆ. ಯುಪಿಎ-2ರ ಕೊನೆಯ ದಿನಗಳಲ್ಲಿ ಹಾಗೂ ಹಿಂದಿನ ಬಿಜೆಪಿ ಸರಕಾರದಲ್ಲಿ ಕೇಳಿಬಂದ ಗುರತರವಾದ ಭ್ರಷ್ಟಾಚಾರದ ಆರೋಪಗಳು ಸದ್ಯ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಅವಧಿಯಲ್ಲಿ ಕೇಳಿಬಂದಿಲ್ಲ. ಹೀಗಿದ್ದರೂ, ಗುಜರಾತ್ ಚುನಾವಣೆಗಿಂತ ಕರ್ನಾಟಕ ಚುನಾವಣೆ ಮುಖ್ಯ ಎನ್ನುವ ಮೂಲಕ ಅಗತ್ಯಕ್ಕಿಂತಲೂ ಹೆಚ್ಚಿನ ಹೊಣೆಗಾರಿಕೆಯನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.

ಒಂದು ವೇಳೆ, ಅಮಿತ್ ಶಾ ತಂತ್ರಗಾರಿಕೆ ಫಲಿಸಿದರೆ ಅವರ ಕಿರೀಟಕ್ಕೆ ಇನ್ನೊಂದು ಗರಿ ಸೇರ್ಪಡೆಯಾಗುತ್ತದೆ. ಅಕಸ್ಮಾತ್ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ವ್ಯತಿರಿಕ್ತ ಫಲಿತಾಂಶ ಬಂದರೆ, ಸೋಲಿನ ಹೊಣೆಭಾರ ಅಮಿತ್ ಶಾ ಅವರೇ ಹೊರಬೇಕಾಗುತ್ತದೆ. ಅದು ಅವರ ಇಷ್ಟು ದಿನಗಳ ಜೈತ್ಯಯಾತ್ರೆಯ ಅಂತ್ಯಕ್ಕೆ ಮುನ್ನುಡಿ ಬರೆಯುವ ಸಾಧ್ಯತೆಯೂ ಇದೆ.

ಇವೆಲ್ಲವನ್ನು ಪಕ್ಕಕ್ಕಿಟ್ಟು ನೋಡಿದರೂ, ರಾಜ್ಯ ಬಿಜೆಪಿಗೆ ಇವತ್ತಿಗೆ ಇಂತಹದೊಂದು ಬಾಹ್ಯ ಚೈತನ್ಯದ ಅಗತ್ಯವಿತ್ತು. ಮನೆ ಮನೆಗಳಿಗೆ ಭೇಟಿ ನೀಡುವ ‘ವಿಸ್ತಾರಕ ಯೋಜನೆ’ಯ ಮೊದಲ ಹಂತದ ಸೋಲಿನ ನಂತರ ಪಕ್ಷ ಶೋಷನೀಯ ಸ್ಥಿತಿಗೆ ತಲುಪಿತ್ತು. ನಾಯಕರ ನಡುವಿನ ಕಿತ್ತಾಟ ಪಕ್ಷ ಫೋಕಸ್ ಮಿಸ್ ಆಗುವಂತೆ ಮಾಡಿತ್ತು. ಅವೆಲ್ಲವೂ ಅಮಿತ್ ಶಾ ಮೂರು ದಿನಗಳ ಭೇಟಿಯಿಂದ, ಒಂದೇ ಏಟಿಗೆ ಪರಿಹಾರವಾಗಿಬಿಟ್ಟವು ಎಂದು ಹೇಳಲು ಸಾಧ್ಯವಿಲ್ಲವಾದರೂ, ಆ ದಿಕ್ಕಿನಲ್ಲಿ ಪಕ್ಷದೊಳಗಿನ ಪ್ರಕ್ರಿಯೆಗಳಿಗೆ ಚಾಲನೆ ನೀಡಿವೆ. ಇದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವನ್ನುವಹಿಸುವ ವಿರೋಧ ಪಕ್ಷವೊಂದು, ಚುನಾವಣೆಯಲ್ಲಿ ಪೈಪೋಟಿ ನೀಡಲು ಅಗತ್ಯವಾಗಿದ್ದ ಬೆಳವಣಿಗೆ. ‘ಉತ್ತರ ಪ್ರದೇಶದ ಮಾದರಿ’ ಎಂದರೇನು? ಅದು ರಾಜ್ಯದಲ್ಲಿ ಅನುಷ್ಠಾನಗೊಳ್ಳುತ್ತಾ? ಅದು ಬೇರೆಯದೇ ವಿಚಾರ.

Leave a comment

FOOT PRINT

Top