An unconventional News Portal.

ರಾಜ್ಯಸಭಾ ಚುನಾವಣೆ: ಬಾಪೂ ನಾಡಿನಲ್ಲಿ ಫಲ ನೀಡದ ಬಿಜೆಪಿಯ ‘ಸಾಮ ದಾನ ಭೇದ ದಂಡ’ದ ತಂತ್ರಗಾರಿಕೆ

ರಾಜ್ಯಸಭಾ ಚುನಾವಣೆ: ಬಾಪೂ ನಾಡಿನಲ್ಲಿ ಫಲ ನೀಡದ ಬಿಜೆಪಿಯ ‘ಸಾಮ ದಾನ ಭೇದ ದಂಡ’ದ ತಂತ್ರಗಾರಿಕೆ

ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ; ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಜೋಡಿಯ ‘ಸಾಮ ದಾನ ಭೇದ ದಂಡ’ದ ಕಾರ್ಯತಂತ್ರ ನೆಲಕಚ್ಚಿದೆ. ಚುನಾವಣೆ ನಡೆದ ಮೂರು ಸ್ಥಾನಗಳ ಪೈಕಿ ಒಂದರಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಹಮದ್ ಪಟೇಲ್ ಜಯಗಳಿಸಿದ್ದಾರೆ. ಇನ್ನೆರಡು ಸ್ಥಾನಗಳಿಗೆ ನಿರೀಕ್ಷೆಯಂತೆಯೇ ಬಿಜೆಪಿ ಅಭ್ಯರ್ಥಿಗಳಾದ ಅಮಿತ್ ಶಾ ಹಾಗೂ ಸ್ಮೃತಿ ಇರಾನಿ ಆಯ್ಕೆಯಾಗಿದ್ದಾರೆ.

ಗುಜರಾತ್ ಕಾಂಗ್ರೆಸ್ ಪಕ್ಷದ 44 ಶಾಸಕರು ಬೆಂಗಳೂರಿನ ಹೊರವಲಯದ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡುವ ಮೂಲಕ ರಾಜ್ಯದಲ್ಲಿಯೂ ಈ ಚುನಾವಣೆ ಗಮನ ಸೆಳೆದಿತ್ತು. ಬಿಜೆಪಿ ರಾಜ್ಯಸಭೆಗೆ ತನ್ನ ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಸಲುವಾಗಿ ತನ್ನ ಶಾಸಕರ ‘ಕುದುರೆ ವ್ಯಾಪಾರ’ಕ್ಕೆ ಮುಂದಾಗಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಇದರಿಂದ ತಪ್ಪಿಸಿಕೊಳ್ಳಲು ತನ್ನ ಜತೆಗೆ ಉಳಿದುಕೊಂಡಿದ್ದ 44 ಶಾಸಕರನ್ನು ಬೆಂಗಳೂರಿಗೆ ಕಳುಹಿಸಿ ಕೊಟ್ಟಿತ್ತು. ಅವರ ‘ಅತಿಥಿ ಸತ್ಕಾರ’ಕ್ಕೆ ನಿಂತ ಇಂಧನ ಸಚಿವ ಡಿ. ಕೆ. ಶಿವಕುಮಾರ್ ಮೇಲೆ ಐಟಿ ದಾಳಿ ನಡೆದಿತ್ತು. ಅಮಿತ್ ಶಾ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಗುಜರಾತ್ ರಾಜ್ಯಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ನಡೆಸಿದ ‘ರಾಜಕೀಯ ದಾಳಿ’ ಇದು ಎಂದು ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ಬಿಂಬಿಸಿತ್ತು.

ಗುಜರಾತ್ ವಿಧಾನಭೆಯಲ್ಲಿ ಕಾಂಗ್ರೆಸ್ ಒಟ್ಟು 57 ಶಾಸಕರ ಬಲವನ್ನು ಹೊಂದಿತ್ತು. ಆದರೆ ಇದರಲ್ಲಿ ಮೊದಲು 6 ಶಾಸಕರು ಪಕ್ಷವನ್ನು ತೊರೆಯುವ ಮೂಲಕ ಸಂಖ್ಯಾಬಲ 51ಕ್ಕೆ ಇಳಿಯಿತು. ಇದರಲ್ಲಿ ಮೂವರು ಬಿಜೆಪಿ ಸೇರ್ಪಡೆಯಾದರು. ಇತ್ತೀಚೆಗೆ ಹಿರಿಯ ನಾಯಕ ಶಂಕರ್ ಸಿನ್ಹಾ ವಘೇಲಾ ಕೂಡ ಪಕ್ಷ ತೊರೆದರು. ಜತೆಗೆ ಇನ್ನೂ 6 ಶಾಸಕರನ್ನು ಕರೆದುಕೊಂಡು ಹೊರಗೆ ಹೋದರು. ಪರಿಣಾಮ ಕಾಂಗ್ರೆಸ್ ಸದಸ್ಯರ ಬಲ 44ಕ್ಕೆ ಇಳಿಕೆಯಾಗಿತ್ತು. ರಾಜ್ಯಸಭೆಗೆ ಗುಜರಾತ್ ವಿಧಾನ ಸಭೆಯಿಂದ ಮೂರು ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗುತ್ತಲೆ, ಕಾಂಗ್ರೆಸ್ ‘ಮ್ಯಾಜಿಕ್ ನಂಬರ್ 45’ ತಲುಪಲು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಇದನ್ನು ಉಪಯೋಗಿಸಿಕೊಳ್ಳಲು ಬಿಜೆಪಿ ಮುಂದಾಯಿತು. ಹೀಗಾಗಿ, ರಾಜ್ಯಸಭಾ ಚುನಾವಣೆಯ ನೆಪದಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಜಿದ್ದಾಜಿದ್ದಿಗೆ ಕಣ ಅಣಿಯಾಯಿತು.

ಬಿಜೆಪಿಯಿಂದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಸ್ಮೃತಿ ಇರಾನಿ ಸ್ಮರ್ಧಿಸಲು ಸಿದ್ಧರಾದರು. ಮೂರನೇ ಅಭ್ಯರ್ಥಿಯಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡ ಬಲವಂತ್ ಸಿನ್ಹಾ ರಾಜಪೂತ್ ಅವರನ್ನು ಕಣಕ್ಕಳಿಸಲಾಯಿತು. ಕಾಂಗ್ರೆಸ್ ಕಡೆಯಿಂದ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಅವರನ್ನು ಚುನಾವಣೆಗೆ ನಿಲ್ಲಿಸಲಾಯಿತು. ಮೂರನೇ ಸ್ಥಾನ ಗೆಲ್ಲಲು 45 ಶಾಸಕರ ಮತಗಳ ಗಡಿಯನ್ನು ಕಾಂಗ್ರೆಸ್ ಮುಟ್ಟುವ ಅಗತ್ಯವಿತ್ತು.

ಮಂಗಳವಾರ ಚುನಾವಣೆಗೆ ಮತದಾನ ಶುರುವಾದ ನಂತರ ಬೆಂಗಳೂರಿಗೆ ಬಂದ ರೆಸಾರ್ಟ್ ಆತಿಥ್ಯ ಪಡೆದ 44 ಶಾಸಕರು ಸೇರಿದಂತೆ ಒಟ್ಟು 176 ಜನಪ್ರತಿನಿಧಿಗಳು ಮತ ಚಲಾವಣೆ ಮಾಡಿದರು. ಇದರಲ್ಲಿ ಬೆಂಗಳೂರಿಗೆ ಬಂದಿದ್ದ ಕಾಂಗ್ರೆಸ್ ಶಾಸಕರೊಬ್ಬರು ಮಾತ್ರ ತಮ್ಮ ಬ್ಯಾಲೆಟ್ ಪೇಪರ್ನ್ನು ಪಕ್ಷದ ವೀಕ್ಷಕರಿಗೆ ತೋರಿಸದೆ ಮತಪೆಟ್ಟಿಗೆಗೆ ಹಾಕಿದರು. ಇದೊಂದು ‘ಕ್ರಾಸ್ ಓಟಿಂಗ್’ ಆಗಿದೆ ಎಂಬ ಗುಮಾನಿ ಇತ್ತು. ಉಳಿದಂತೆ ಎನ್ಸಿಪಿ ಪಕ್ಷದ ಇಬ್ಬರು ಶಾಸಕರ ಪೈಕಿ ಒಬ್ಬರು ಹಾಗೂ ಜೆಡಿ(ಯು)ನ ಒಬ್ಬರು ಶಾಸಕರು ಕಾಂಗ್ರೆಸ್ ಅಭ್ಯರ್ಥಿ ಅಹಮದ್ ಪಟೇಲ್ ಪರ ಮತ ಚಲಾಯಿಸಿದ್ದಾರೆ ಎಂದು ಮಧ್ಯಾಹ್ನದ ವರದಿಗಳು ಹೇಳಿದ್ದವು.

ಹಗ್ಗ ಜಗ್ಗಾಟ:

ಸಂಜೆ ಐದು ಗಂಟೆ ವೇಳೆಗೆ ಮತ ಎಣಿಕೆ ಆರಂಭವಾಯಿತು. ಈ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಇಬ್ಬರು ಬಂಡಾಯ ಶಾಸಕರು ಬಿಜೆಪಿ ಅಭ್ಯರ್ಥಿ ಅಮಿತ್ ಶಾಗೆ ತಮ್ಮ ಬ್ಯಾಲೆಟ್ ತೋರಿಸಿದರು. ಹೀಗಾಗಿ, ಈ ಇಬ್ಬರ ಮತಗಳನ್ನು ಪರಿಗಣಿಸಬಾರದು ಎಂದು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿತು. ಮತದಾನದ ವಿಡಿಯೋ ನೋಡಿದ ನಂತರ ದೂರನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ವರ್ಗಾಯಿಸಲಾಯಿತು. ಕೊನೆಯ ಹಂತದಲ್ಲಿ ಇಂತಹದೊಂದು ತಿರುವು ಪಡೆದುಕೊಳ್ಳುತ್ತಿದ್ದಂತೆ ಮತ ಎಣಿಕೆ ಸ್ಥಗಿತಗೊಂಡಿತು.

ಗುಜರಾತ್ ಬೆಳವಣಿಗಳು ರಾಜಧಾನಿ ದಿಲ್ಲಿಯಲ್ಲಿಯೂ ಪ್ರತಿಫಲಿಸಿದವು. ಕಾಂಗ್ರೆಸ್ ತನ್ನ ಕಾರ್ಯಕಾರಿ ಸಮಿತಿಯ ತುರ್ತು ಸಭೆ ಕರೆಯಿತು. ಕೇಂದ್ರ ಸಚಿವರ ಮುಂದಾಳತ್ದ ಬಿಜೆಪಿ ನಾಯಕರು ಕೇಂದ್ರ ಚುನಾವಣಾ ಆಯುಕ್ತ ಎ. ಕೆ. ಜ್ಯೋತಿಯವರನ್ನು ಭೇಟಿ ಮಾಡಿದರು. ಇದಾದ ನಂತರ ಕಾಂಗ್ರೆಸ್ ನಾಯಕರು ಕೂಡ ಕೇಂದ್ರ ಚುನಾವಣಾ ಆಯೋಗವನ್ನು ಭೇಟಿ ಮಾಡಿದರು. ಇದೇ ಪರಿಪಾಠ ಮೂರು ಬಾರಿ ಪುನರಾವರ್ತನೆಯಾಯಿತು. ಎರಡು ಗಂಟೆ ಅಂತರದಲ್ಲಿ ದಿಲ್ಲಿಯ ಚುನಾವಣಾ ಆಯೋಗದ ಕಚೇರಿ ಮಂದೆ ಮಾಧ್ಯಮಗಳ ಮುಂದೆ ಮಾತನಾಡಿದ ಉಬಯ ಪಕ್ಷಗಳ ನಾಯಕರು ಪರಸ್ಪರ ಆರೋಪಿಸಿಕೊಂಡರು.

ಮತದಾನದ ವಿಡಿಯೋ ಪರಿಶೀಲನೆ ನಡೆಸಿದ ಚುನಾವಣಾ ಆಯೋಗ ರಾತ್ರಿ 11. 30ರ ಸುಮಾರಿಗೆ ಕಾಂಗ್ರೆಸ್ ಪಕ್ಷದ ಇಬ್ಬರು ಬಂಡಾಯ ಶಾಸಕರ ಮತಗಳನ್ನು ಅನೂರ್ಜಿತಗೊಳಿತು. ಹೀಗಾಗಿ ಒಟ್ಟು ಪರಿಗಣನೆಗೆ ತೆಗೆದುಕೊಂಡಗಳ ಮತಗಳ ಸಂಖ್ಯೆ 174ಕ್ಕೆ ಇಳಿಯಿತು. ಗೆಲುವಿನ ಮ್ಯಾಜಿಕ್ ನಂಬರ್ ಕೂಡ 44ಕ್ಕೆ ಇಳಿಕೆಯಾಯಿತು. ರಾತ್ರಿ1. 30ರ ಸುಮಾರಿಗೆ ಮತ ಎಣಿಕೆ ಕಾರ್ಯ ಪೂರ್ಣಗೊಂಡು ಫಲಿತಾಂಶ ಹೊರಬಿತ್ತು. ಅಹಮದ್ ಪಟೇಲ್ 44 ಮತಗಳನ್ನು ಗಳಿಸುವ ಮೂಲಕ ರಾಜ್ಯಸಭೆಯನ್ನು ಪ್ರವೇಶಿಸಿದರು. ಕಾಂಗ್ರೆಸ್ ಜತೆಗಿದ್ದ 44 ಶಾಸಕರಲ್ಲಿ ಒಂದು ಅಡ್ಡ ಮತದಾನವಾಗಿದೆ. ಅದನ್ನು ಜೆಡಿ (ಯು) ಪಕ್ಷದ ಶಾಸಕ ಚೋಟು ಬವಾಸ ತುಂಬಿಕೊಟ್ಟಿದ್ದಾರೆ ಎಂಬ ಅಂದಾಜಿದೆ. ಒಟ್ಟಾರೆ, ಒಂದು ರಾಜ್ಯ ಸಭಾ ಸ್ಥಾನಕ್ಕಾಗಿ ಪ್ರತಿಷ್ಠೆಗಳನ್ನು ಪಣಕ್ಕಿಟ್ಟು ಅಖಾಡಕ್ಕೆ ಇಳಿದಿದ್ದ ಕಾಂಗ್ರೆಸ್ ಗೆಲುವು ಸಾಧಿಸಿದೆ. ‘ಮೋದಿ ವರ್ಸಸ್ ಸೋನಿಯಾ’ ಎಂದು ಬಿಂಬಿಸ್ಪಲ್ಪಟ್ಟಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯತಂತ್ರ ಕೆಲಸ ಮಾಡಿದ್ದು ಸ್ಪಷ್ಟವಾಗಿದೆ.

ಗುಜರಾತಿನಲ್ಲಿ ವರ್ಷದ ಕೊನೆಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಪ್ರಧಾನಿ ಮೋದಿ ಅವರ ತವರು ರಾಜ್ಯವೂ ಇದಾದ್ದರಿಂದ ಸಹಜವಾಗಿಯೇ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಪ್ರತಿಷ್ಠೆಯ ಕಣವೂ ಆಗಿದೆ. ಹೀಗಾಗಿಯೇ, ರಾಜ್ಯಸಭಾ ಚುನಾವಣೆಯ ನೆಪದಲ್ಲಿ ಕಾಂಗ್ರೆಸ್ ಪಕ್ಷದ ನೈತಿಕ ಬಲವನ್ನು ಕುಂದಿಸಲು ‘ಸಾಮ ದಾನ ಭೇದ ದಂಡ’ದ ತಂತ್ರಗಾರಿಕೆಯನ್ನು ಬಳಸಲಾಯಿತು ಎಂದು ರಾಜಕೀಯ ವಿಶ್ಲೇಷಣೆಗಳು ಹೇಳುತ್ತವೆ. ಸದ್ಯ ಮೂರು ರಾಜ್ಯಸಭಾ ಸ್ಥಾನಗಳ ಫಲತಾಂಶವನ್ನು ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷ, ಹೇಗ ಬಳಸಿಕೊಳ್ಳಲಿದೆ ಹಾಗೂ ಅದರ ಪರಿಣಾಮಗಳೇನು ಎಂಬುದು ಡಿಸೆಂಬರ್ ವೇಳೆಗೆ ನಿಚ್ಚಳವಾಗಲಿದೆ.

Leave a comment

FOOT PRINT

Top