An unconventional News Portal.

‘ಪ್ರತಿಯೊಬ್ಬರಿಗೂ ಉತ್ತರ ನೀಡುತ್ತೇನೆ’: ಐಟಿ ದಾಳಿ ನಂತರ ಡಿಕೆಶಿ ನೀಡಿದ ಹೇಳಿಕೆ ಹಿಂದಿರುವ ನಿಗೂಢಾರ್ಥಗಳು!

‘ಪ್ರತಿಯೊಬ್ಬರಿಗೂ ಉತ್ತರ ನೀಡುತ್ತೇನೆ’: ಐಟಿ ದಾಳಿ ನಂತರ ಡಿಕೆಶಿ ನೀಡಿದ ಹೇಳಿಕೆ ಹಿಂದಿರುವ ನಿಗೂಢಾರ್ಥಗಳು!

ಕಳೆದ ಮೂರು ದಿನಗಳಿಂದ ನನ್ನ ಮನೆ, ನನ್ನ ಸ್ನೇಹಿತರ ಮನೆ, ನನ್ನ ಸಂಬಂಧಿಕರ ಮನೆಗಳನ್ನು ಹಗಲೂ ರಾತ್ರಿ ಕಾಯ್ದಿದ್ದೀರಿ. ತಮ್ಮದೇ ವಿಚಾರಗಳನ್ನು ಮಾಧ್ಯಮಗಳ ಮೂಲಕ ಚಿತ್ರಿಸಿದ್ದೀರಿ. ಒಂದನ್ನು ಸ್ಪಷ್ಟಪಡಸುತ್ತೇನೆ; ನನ್ನ ಕಷ್ಟಕಾಲದಲ್ಲಿ ಜತೆಗಿದ್ದು ಪ್ರೋತ್ಸಾಹ ನೀಡಿದ, ಬೆಂಬಲ ನೀಡಿದ ಮಾಧ್ಯಮಗಳಿಗೆ, ಪಕ್ಷದ ನಾಯಕರಿಗೆ, ಕಾರ್ಯಕರ್ತರಿಗೆ ಹಾಗೂ ನಾನಾ ಪಕ್ಷಗಳ ನಾಯಕರು ಮತ್ತು ಅಧಿಕಾರಿಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಾನು ಕಾನೂನು ಬಿಟ್ಟು, ಸಂವಿಧಾನವನ್ನು ಬಿಟ್ಟು ನಡೆದುಕೊಂಡಿಲ್ಲ. ನನ್ನ ದೆಹಲಿ ಮನೆಯಲ್ಲಿ, ಎಲ್ಲೆಲ್ಲಿ ಐಟಿ ದಾಳಿ ನಡೆದಿದೆಯೋ, ಅದರ ಪಂಚನಾಮದ ಪ್ರತಿಗಳು ಬರಲಿ, ಆಮೇಲೆ ದಾಖಲೆಗಳನ್ನು ಇಟ್ಟುಕೊಂಡು ಮಾತನಾಡುತ್ತೇನೆ. ನಾನು ಮಾತನಾಡುವುದಕ್ಕಿಂತ ದಾಖಲೆಗಳು ಮಾತನಾಡಬೇಕು. ಅವು ಬಂದ ಮೇಲೆ ಪ್ರತಿಯೊಬ್ಬರಿಗೂ ಉತ್ತರ ನೀಡುತ್ತೇನೆ. ರಾತ್ರಿ ಪೂರ್ತಿ ಮನೆ ಕಾಯ್ದಿದ್ದೀರಿ. ನಿಮ್ಮ ಮನಸ್ಸು ನೋಯಿಸಬಾರದು ಎಂಬ ಕಾರಣಕ್ಕೆ ಇಷ್ಟು ಮಾತನಾಡುತ್ತಿದ್ದೇನೆ. ನಾನೀಗ ನಾನು ನಂಬಿದ ದೇವರನ್ನು ನೋಡಲು ಹೋಗುತ್ತಿದ್ದೇನೆ. ನನ್ನ ನಂಬಿ ಬಂದ ಶಾಸಕರ ಜತೆ ಮಾತನಾಡಬೇಕಿದೆ…

ಇದು ಸತತ ನಾಲ್ಕು ದಿನಗಳ ಕಾಲ ಐಟಿ ದಾಳಿಗೆ ಗುರಿಯಾಗಿದ್ದ ಡಿ. ಕೆ. ಶಿವಕುಮಾರ್ ಶನಿವಾರ ಬೆಳಗ್ಗೆ ತಮ್ಮ ಸದಾಶಿವನಗರದ ಮನೆಯ ಮುಂದೆ ನೆರೆದಿದ್ದ ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆ.

ಬುಧವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಡಿ. ಕೆ. ಶಿವಕುಮಾರ್ ಹಾಗೂ ಅವರ ಆಪ್ತರ ಮನೆಗಳ ಮೇಲೆ ರಾಜ್ಯದ ಹಲವು ಕಡೆಗಳಲ್ಲಿ ಹಾಗೂ ದೆಹಲಿಯಲ್ಲಿ ಐಟಿ ದಾಳಿ ಏಕಕಾಲದಲ್ಲಿ ಆರಂಭವಾಗಿತ್ತು. ಆ ನಂತರ ಡಿ. ಕೆ. ಶಿವಕುಮಾರ್ ಸಾರ್ವಜನಿಕ ಪ್ರತಿಕ್ರಿಯೆ ನೀಡದ ಸ್ಥಿತಿಯಲ್ಲಿದ್ದರು. ಶನಿವಾರ ಬೆಳಗ್ಗೆ ಐಟಿ ದಾಳಿ ಮುಗಿಸಿ, ಅಧಿಕಾರಿಗಳು ಹೊರ ಹೋಗುತ್ತಿದ್ದಂತೆ ಸದಾಶಿವನಗರದ ಮನೆಯಿಂದ ಹೊರಬಂದ ಇಂಧನ ಸಚಿವ ಮಾಧ್ಯಮಗಳಿಗೆ ಚುಟುಕು ಪ್ರತಿಕ್ರಿಯೆ ನೀಡಿದರು.

ಆಕ್ರಮಣಕಾರಿ ಪ್ರತಿಕ್ರಿಯೆ:

ಸಂಕ್ಷಿಪ್ತವಾಗಿ ಪ್ರತಿಕ್ರಿಯೆ ನೀಡಿದರೂ, ಡಿ. ಕೆ. ಶಿವಕುಮಾರ್ ಅವರ ಪ್ರತಿಕ್ರಿಯೆಯಲ್ಲಿ ಎಂದಿನ ಆಕ್ರಮಣಕಾರಿ ಶೈಲಿ ಎದ್ದು ಕಾಣುವಂತಿತ್ತು. ಒಂದು ಹಂತದಲ್ಲಿ ‘ನಾನು ಬೆಂಗಳೂರಿಗೆ ಕಿವಿ ಮೇಲೆ ಹೂವು ಇಟ್ಟುಕೊಂಡು ಬಂದವನಲ್ಲ’ ಎನ್ನುವ ಮೂಲಕ ಸತತ ನಾಲ್ಕು ದಿನಗಳ ಐಟಿ ದಾಳಿ ಅವರನ್ನು ಯಾವ ಪ್ರಮಾಣದಲ್ಲಿ ಕೆಣಕಿದೆ ಎಂಬುದನ್ನು ಸ್ಪಷ್ಟಪಡಿಸಿದರು.

‘ನನ್ನ ಕಷ್ಟಕಾಲದಲ್ಲಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಜತೆಗಿದ್ದಾರೆ’ ಎಂದ ಶಿವಕುಮಾರ್, ಅದೇ ವೇಳೆಯಲ್ಲಿ ವಿರೋಧ ಪಕ್ಷದ ನಾಯಕರನ್ನು ಸ್ಮರಿಸಿಕೊಳ್ಳುವುದನ್ನು ಮರೆಯಲಿಲ್ಲ.

ಡಿಕೆಶಿ ಮೇಲೆ ಐಟಿ ದಾಳಿ ನಡೆದ ತಕ್ಷಣ, ಅದು ನಡೆದ ಸಮಯ ಮತ್ತು ಸಂದರ್ಭದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ‘ದ್ವೇಷ ರಾಜಕಾರಣ’ದ ಆರೋಪ ಕೇಳಿ ಬಂದಿತ್ತು. ಇದು ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ಬಿಜೆಪಿ ನಡೆಸುತ್ತಿರುವ ದಾಳಿ ಎಂದು ಸಂಸತ್ನಲ್ಲಿಯೂ ಗದ್ದಲ ಎಬ್ಬಿಸಲಾಗಿತ್ತು. ಆದರೆ ರಾಜ್ಯದಲ್ಲಿ ಪ್ರತಿಪಕ್ಷ ಬಿಜೆಪಿ ಡಿ. ಕೆ. ಶಿವಕುಮಾರ್ ಮೇಲಿನ ಐಟಿ ದಾಳಿಯಿಂದ ‘ಸುರಕ್ಷಿತ ಅಂತರ’ವನ್ನು ಕಾಪಾಡಿಕೊಂಡಿತ್ತು. ಅದು ಡಿ. ಕೆ. ಶಿವಕುಮಾರ್ ನೀಡಿದ ಪ್ರತಿಕ್ರಿಯೆಯಲ್ಲಿಯೂ ಸ್ಪಷ್ಟವಾಗಿದೆ.

‘ನನ್ನ ದೆಹಲಿ ಮನೆ ಸೇರಿದಂತೆ ಎಲ್ಲೆಲ್ಲಿ ದಾಳಿ ನಡೆದಿದೆಯೋ, ಅದರ ಪಂಚನಾಮದ ಪ್ರತಿಗಳು ಬಂದ ನಂತರ ಮಾತನಾಡುತ್ತೇನೆ, ಪ್ರತಿಯೊಬ್ಬರಿಗೂ ಉತ್ತರ ನೀಡುತ್ತೇನೆ,’ ಎಂದು ಡಿ. ಕೆ. ಶಿವಕುಮಾರ್ ಹೇಳಿದ್ದಾರೆ. ಐಟಿ ದಾಳಿ ವೇಳೆ ಮಹತ್ವದ, ಗುರುತರವಾದ ದಾಖಲೆಗಳು ಸಿಕ್ಕಿಲ್ಲ ಎಂಬ ಭರವಸೆ ಈ ಹೇಳಿಕೆಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಅದೇ ವೇಳೆ, ‘ಪ್ರತಿಯೊಬ್ಬರಿಗೂ ಉತ್ತರ ನೀಡುತ್ತೇನೆ’ ಎನ್ನುವ ಮೂಲಕ ಅವರ ಮುಂದಿನ ನಡೆಗಳನ್ನು ಸೂಕ್ಷ್ಮವಾಗಿಯೇ ಬಿಡಿಸಿಟ್ಟಿದ್ದಾರೆ.

ಮೂರು ದಿನ ನೂರು ಆಯಾಮ:

ರಾಜ್ಯದ ಪ್ರಭಾವಿ ಹಾಗೂ ಶ್ರೀಮಂತ ಸಚಿವ ಡಿ. ಕೆ. ಶಿವಕುಮಾರ್. ಅವರ ಮೇಲೆ ನಿರೀಕ್ಷಿತ ಐಟಿ ದಾಳಿ ಆರಂಭವಾದ ಮೊದಲ ದಿನ, ಅದು ನಡೆದ ಸಮಯ ಮತ್ತು ಸಂದರ್ಭದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ವಿರುದ್ಧ ಆರೋಪಗಳು ಕೇಳಿಬಂದಿದ್ದವು. ಎರಡನೇ ದಿನದ ಹೊತ್ತಿಗೆ ಐಟಿ ದಾಳಿಯ ಬಗೆಗೆ ಭಿನ್ನ ಪ್ರತಿಕ್ರಿಯೆಗಳು ಹುಟ್ಟಿಕೊಂಡಿದ್ದವು. ಮಾಧ್ಯಮಗಳೂ ಸೇರಿದಂತೆ ಸಾಮಾನ್ಯ ಜನರಲ್ಲಿ ಐಟಿ ದಾಳಿಯ ಪರ- ವಿರೋಧ- ಮಧ್ಯಮದ ನಿಲುವುಗಳು ಸ್ಪಷ್ಟವಾಗಿ ಕಾಣಿಸಿಕೊಂಡಿತು. ಆದಾಯ ತೆರಿಗೆ ಇಲಾಖೆ ಮೂರನೇ ದಿನವೂ ದಾಳಿ ಮುಂದುವರಿಸುತ್ತಿದ್ದಂತೆ ಡಿಕೆಶಿ ಬಂಧನ ಸುತ್ತ ಚರ್ಚೆಗಳು ಹುಟ್ಟಿಕೊಂಡವು. ಈ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಡಿ. ಕೆ. ಶಿವಕುಮಾರ್ ಮೇಲೆ ನಡೆದ ಐಟಿ ದಾಳಿಯಿಂದ ಅಂತರ ಕಾಪಾಡಿಕೊಳ್ಳುವಂತೆ ಪಕ್ಷ ಉಪಾಧ್ಯಕ್ಷ ರಾಹುಲ್ ಗಾಂಧಿ ತಿಳಿಸಿದ್ದಾರೆ ಎಂಬ ಸುದ್ದಿಯೂ ಆಗಿತ್ತು.

ನಾಲ್ಕನೆ ದಿನ ಶನಿವಾರ ಮುಂಜಾನೆ ಹೊತ್ತಿಗೆ ಡಿ. ಕೆ. ಶಿವಕುಮಾರ್ ಬಂಧನ ನಿಚ್ಚಳ ಎಂಬಂತೆ ಕೆಲವು ವಾಹಿನಿಗಳು ಸುದ್ದಿಯನ್ನು ಭಿತ್ತರಿಸಲು ಶುರುಮಾಡಿದ್ದವು. ಆದರೆ 10 ಗಂಟೆ ಸುಮಾರಿಗೆ ಡಿ. ಕೆ. ಶಿವಕುಮಾರ್ ಮನೆಯಿಂದ ಅಧಿಕಾರಿಗಳು ದಾಖಲೆಗಳ ಜತೆ ಹೊರನಡೆಯುತ್ತಿದ್ದಂತೆ ಇಡೀ ಬೆಳವಣಿಗೆ ಬೇರೆಯದೇ ಆಯಾಮಕ್ಕೆ ಹೊರಳಿಕೊಂಡಿದ್ದು ಗಮನಾರ್ಹ.

ಸದ್ಯ, ಡಿ. ಕೆ. ಶಿವಕುಮಾರ್ ತಮ್ಮ ವಿರುದ್ಧ ನಡೆದ ಮ್ಯಾರಥಾನ್ ಐಟಿ ದಾಳಿಯಿಂದ ಈ ಹಂತದಲ್ಲಿ ಬೀಸೊ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾರೆ. ಅವರ ರಾಜಕೀಯ ಆಯಸ್ಸು ಇನ್ನಷ್ಟು ಹೆಚ್ಚುವ ಮುನ್ಸೂಚನೆಯೂ ಸಿಕ್ಕಿದೆ.

ಈ ಸಮಯದಲ್ಲಿ ಇಂಗ್ಲಿಷ್ ಸುದ್ದಿ ವಾಹಿನಿಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ನನ್ನ ಪಕ್ಷದ ನಾಯಕರಿಗೆ ಸಮಸ್ಯೆಯನ್ನು ತಂದೊಡ್ಡುವ ಕೆಲಸವನ್ನು ಮಾಡುವುದಿಲ್ಲ,” ಎಂದು ಹೇಳಿದ್ದಾರೆ. ಪಕ್ಷದ ಹೈಕಮಾಂಡ್ ಶಿವಕುಮಾರ್ ಅವರನ್ನು ಇನ್ನಷ್ಟು ಹತ್ತಿರಕ್ಕೆ ಎಳೆದುಕೊಳ್ಳುವ ಸಾಧ್ಯತೆಯೂ ಇದರ ಹಿಂದಿದೆ. ಹಿಂದೆ, ಎಸ್. ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಡಿ. ಕೆ. ಶಿವಕುಮಾರ್ ಆರ್ಥಿಕವಾಗಿಯೂ, ರಾಜಕೀಯವಾಗಿಯೂ ಅಗಾಧ ಪ್ರಮಾಣದಲ್ಲಿ ಬೆಳವಣಿಗೆ ಸಾಧಿಸಿದ್ದರು. ಇದೀಗ, ಐಟಿ ದಾಳಿ ನಂತರ ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಅವರ ನಂಟು ಇನ್ನಷ್ಟು ಬೆಳೆಯಲಿದೆ. ಇದನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದರ ಮೇಲೆ, ಡಿ. ಕೆ. ಶಿವಕುಮಾರ್ ರಾಜಕೀಯ ಭವಿಷ್ಯ ನಿಂತಿದೆ.

ಸಾಂದರ್ಭಿಕ ಚಿತ್ರ: ಹಿಂದೂಸ್ತಾನ್ ಟೈಮ್ಸ್.

Leave a comment

FOOT PRINT

Top