An unconventional News Portal.

ರೆಸಾರ್ಟ್ ರಾಜಕೀಯಕ್ಕೆ ಐಟಿ ದಾಳಿಯ ಟ್ವಿಸ್ಟ್: ಒಂದೇ ಒಂದು ರಾಜ್ಯಸಭಾ ಸ್ಥಾನಕ್ಕಾಗಿ ಇಷ್ಟೆಲ್ಲಾ ನಡೆಸಬೇಕಾ?

ರೆಸಾರ್ಟ್ ರಾಜಕೀಯಕ್ಕೆ ಐಟಿ ದಾಳಿಯ ಟ್ವಿಸ್ಟ್: ಒಂದೇ ಒಂದು ರಾಜ್ಯಸಭಾ ಸ್ಥಾನಕ್ಕಾಗಿ ಇಷ್ಟೆಲ್ಲಾ ನಡೆಸಬೇಕಾ?

ರಾಜ್ಯಕ್ಕೆ ಚಿರಪರಿಚಿತವಾಗಿದ್ದ ‘ರೆಸಾರ್ಟ್ ರಾಜಕಾರಣ’ಕ್ಕೆ ಬುಧವಾರ ಬೆಳಗ್ಗೆ ಐಟಿ ದಾಳಿಯ ‘ಶಾಕ್’ ನೀಡಲಾಗಿದೆ.

ಗುಜರಾತ್ ಕಾಂಗ್ರೆಸ್ ಶಾಸಕರು ಬಿಡಾರ ಹೂಡಿದ್ದ ಬಿಡದಿಯ ಈಗಲ್ಟನ್ ರೆಸಾರ್ಟ್ ಮೇಲೆ ಐಟಿ ಅಧಿಕಾರಿಗಳು ಬೆಳಗ್ಗೆ 7 ಗಂಟೆ ಸುಮಾರಿಗೆ ದಾಳಿ ನಡೆಸಿದ್ದಾರೆ. ಜತೆಗೆ, ಅವರ ಉಪಚಾರಕ್ಕೆ ನಿಂತಿದ್ದ ಇಂಧನ ಸಚಿವ ಡಿ. ಕೆ. ಶಿವಕುಮಾರ್ ಮನೆಗಳ ಮೇಲೆ ದಾಳಿ ನಡೆದಿದೆ. ಶಿವಕುಮಾರ್ ತಮ್ಮ, ಸಂಸದ ಡಿ. ಕೆ. ಸುರೇಶ್ ಹಾಗೂ ಅವರ ಆಪ್ತರ ಮನೆಗಳ ಮೇಲೂ ದಾಳಿ ನಡೆದಿದೆ ಎಂದು ವರದಿಗಳು ಹೇಳುತ್ತಿವೆ. ಐಟಿ ಅಧಿಕಾರಿಗಳು ಪರಿಶೋಧನೆ ಮುಂದುವರಿಸಿದ್ದಾರೆ.

ಗುಜರಾತ್ ರಾಜ್ಯದಲ್ಲಿ ಪ್ರವಾಹ ಬಂದಿದ್ದು, ಈವರೆಗೆ ಸುಮಾರು 30 ಜನರನ್ನು ಬಲಿ ತೆಗೆದುಕೊಂಡಿದೆ. ಅದೇ ವೇಳೆ, ರಾಜ್ಯ ಸಭಾ ಚುನಾವಣೆಗೂ ಅಲ್ಲಿ ಅಖಾಡ ರೆಡಿಯಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ಕಣಕ್ಕಿಳಿದಿರುವುದು ಅಖಾಡ ಕಾವೇರುವಂತೆ ಮಾಡಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಕೂಡ ಕಣದಲ್ಲಿದ್ದಾರೆ. ಹೀಗಾಗಿ, ರಾಜ್ಯಸಭಾ ಚುನಾವಣೆಯ ಸೋಲು ಗೆಲುವುಗಳು ಎರಡೂ ರಾಷ್ಟ್ರೀಯ ಪಕ್ಷಗಳಿಗೂ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ.

ಐದು ದಿನಗಳ ಹಿಂದೆ, ಗುಜರಾತ್ನಲ್ಲಿ ಬಿಜೆಪಿ ಕಾಂಗ್ರೆಸ್ ಶಾಸಕರನ್ನು ಖರೀದಿ ಮಾಡಲು ಮುಂದಾಗಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಬೆನ್ನಿಗೇ, 44 ಶಾಸಕರನ್ನು ಬೆಂಗಳೂರಿನ ಹೊರವಲಯದ ಖಾಸಗಿ ರೆಸಾರ್ಟ್ಗೆ ಸ್ಥಳಾಂತರ ಮಾಡಿಸಿತ್ತು. ಅವರಿಗೆ ವಸತಿ, ಊಟೋಪಚಾರಗಳನ್ನು ನೋಡಿಕೊಳ್ಳುವ ಹೊಣೆಯನ್ನು ಹೊತ್ತುಕೊಂಡಿದ್ದವರು ಡಿ. ಕೆ. ಶಿವಕುಮಾರ್. ಅವರನ್ನು ಗುರಿಯಾಗಿಸಿಕೊಂಡು ನಡೆಸಿರುವ ಆದಾಯ ತೆರಿಗೆ ಇಲಾಖೆಯ ದಾಳಿಯ ಹಿಂದೆ ಸಹಜವಾಗಿಯೇ ರಾಜಕೀಯದ ನೆರಳು ಢಾಳಾಗಿ ಕಾಣಿಸುತ್ತಿದೆ. ಆದಾಯ ತೆರಿಗೆ ಇಲಾಖೆ ಕೇಂದ್ರ ಸರಕಾರದ ಅಡಿಯಲ್ಲಿ ಬರುತ್ತದೆ. ಐಟಿ, ಜಾರಿ ನಿರ್ದೇಶನಾಲಯ ಹಾಗೂ ಸಿಬಿಐನಂತಹ ತನಿಖಾ ಸಂಸ್ಥೆಗಳು ಕೇಂದ್ರದಲ್ಲಿ ಆಡಳಿತ ನಡೆಸುವವರ ಕೈಗೊಂಬೆಗಳು ಎಂಬ ಆರೋಪವನ್ನು ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ ಹೊತ್ತುಕೊಂಡಿದ್ದವು. ಇದೀಗ ಬಿಜೆಪಿ ಅಧಿಕಾರಕ್ಕೆ ಬಂದ ನಂತರವೂ ಅದೇ ಆರೋಪಗಳು ಮುಂದುವರಿದಿವೆ. ಇದೀಗ, ಗುಜರಾತ್ ರಾಜ್ಯಸಭಾ ಚುನಾವಣೆಯನ್ನು ಗೆಲ್ಲಲೇ ಬೇಕು ಎಂದು ಹಠಕ್ಕೆ ಬಿದ್ದಿರುವ ಬಿಜೆಪಿ, ಬೆಂಗಳೂರಿನಲ್ಲಿ ಐಟಿ ದಾಳಿಗೆ ಕುಮ್ಮಕ್ಕು ನೀಡಿದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. “ಬಿಜೆಪಿ ಅಧಿಕಾರಕ್ಕಾಗಿ ಯಾವ ಮಟ್ಟಕ್ಕೂ ಬೇಕಾದರೂ ಇಳಿಯಬಲ್ಲದು,” ಎಂದು ಕಾಂಗ್ರೆಸ್ ಪಕ್ಷದ ನಾಯಕರು ದೂರುತ್ತಿದ್ದಾರೆ.

ಆದರೆ, ಐಟಿ ದಾಳಿಗೂ ಗುಜರಾತ್ ಕಾಂಗ್ರೆಸ್ ಶಾಸಕರಿಗೂ ಯಾವುದೇ ಸಂಬಂಧ ಇಲ್ಲ ಎಂದು ಕೇಂದ್ರ ಸರಕಾರ ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದೆ.

ಬುಧವಾರ ಬೆಳಗ್ಗೆಯೇ ಐಟಿ ದಾಳಿ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಆಸಕ್ತಿದಾಯಕ ಅಭಿಪ್ರಾಯಗಳನ್ನು ಸಾಮಾನ್ಯ ಜನ ಹಂಚಿಕೊಂಡಿದ್ದಾರೆ.

ಈ ಹಿಂದೆ ತಮಿಳುನಾಡಿನ ರಾಜಕೀಯ ಪಲ್ಲಟಗಳ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆ ಶಶಿಕಲಾ ಕೂಡ ಶಾಸಕರನ್ನು ರೆಸಾರ್ಟ್ನಲ್ಲಿ ಉಳಿಸಿದ್ದರು. ಈ ಸಮಯದಲ್ಲಿ ನಡೆಯದ ದಾಳಿ, ಕರ್ನಾಟಕದಲ್ಲೇಕೆ ನಡೆಯಿತು ಎಂದು ಸಾಧ್ವಿ ಕೋಸ್ನಾ ಎಂಬ ಟ್ವಿಟರ್ ಹ್ಯಾಂಡಲ್ ಟ್ವೀಟ್ ಮಾಡಲಾಗಿದೆ.

ಎಂಎಸ್ಆರ್ ಎಂಬ ಟ್ವಿಟರ್ ಖಾತೆಯಿಂದ ಮಾಡಿರುವ ಟ್ವೀಟ್ ಒಂದು ಬಳ್ಳಾರಿಯ ಗಣಿ ಧಣಿಗಳ ಮೇಲೆ ನಡೆದ ಐಟಿ ದಾಳಿಯ ಕುರಿತು ಗಮನ ಸೆಳೆದಿದೆ. ‘ರೆಡ್ಡಿ ಮಗಳ ಮದುವೆ ಮುಗಿದ ಮೇಲೆ ಉಳಿದ ಬೂಂದಿ ಕಾಳುಗಳನ್ನು ಹುಡುಕಲು ದಾಳಿ ನಡೆಸಲಾಗಿತ್ತು. ಮದುವೆಗೂ ಮುಂಚೆ ಯಾಕೆ ದಾಳಿ ನಡೆಯಲಿಲ್ಲ’ ಎಂಬರ್ಥದಲ್ಲಿ ಟ್ವೀಟ್ ಪ್ರಶ್ನಿಸಿದೆ.

‘ಮೊದಲು ಎಎಪಿ, ನಂತರ ಟಿಎಂಸಿ, ಎನ್ಡಿಟಿವಿ, ಆರ್ಜೆಡಿ, ಈಗ ಕಾಂಗ್ರೆಸ್. ಐಟಿ/ಸಿಬಿಐ/ ಈಡಿ/ ಎಸಿಬಿಗಳಿಗೆ ತಮ್ಮ ಗುರಿಗಳು ಯಾರು ಎಂಬುದು ಸ್ಪಷ್ಟವಾಗಿ ಗೊತ್ತಿದೆ. ಎಐಎಡಿಎಂಕೆ ಎನ್ಡಿಎ ಸೇರುವ ಮೂಲಕ ತಪ್ಪಿಸಿಕೊಂಡಿತು. ಮುಂದೆ ಬಿಜೆಡಿ ಇರಬಹುದು’ ಎಂದು ಅಮಿತ್ ತ್ಯಾಗಿ ಎಂಬುವವರು ಟ್ವೀಟ್ ಮಾಡಿದ್ದಾರೆ.

ವಿರೇಂದ್ರ ರಾಜ್ ಎಂಬ ಟ್ವಿಟರ್ ಖಾತೆಯಲ್ಲಿ, ಐಟಿ ದಾಳಿಯ ನಂತರ ನಡೆಯುತ್ತಿರುವ ಪ್ರತಿಭಟನೆಗಳನ್ನು ಟೀಕಿಸಲಾಗಿದೆ. ಇದು ‘ದುಷ್ಟ ರಾಜಕಾರಣಿಗಳು ಬೆಳೆಯಲು ಕಾರಣವಾಗುತ್ತಿದೆ’ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇಂಧನ ಸಚಿವರ ಮೇಲೆ ನಡೆದ ಐಟಿ ದಾಳಿಯ ಸಂದರ್ಭವನ್ನು ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯುತ್ ವ್ಯತ್ಯಯಗಳ ಜತೆ ಹೋಲಿಕೆ ಮಾಡಿರುವ ರಾಜೀವ್ ಹೆಗಡೆ ಎಂಬುವವರು, ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ.

ಪತ್ರಕರ್ತ ಡಿ. ಪಿ. ಸತೀಶ್, ‘ಇವೆಲ್ಲವೂ ಒಂದು ರಾಜ್ಯಸಭಾ ಸ್ಥಾನಕ್ಕಾಗಿ ನಡೆಯುತ್ತಿರುವ ಘಟನಾವಳಿಗಳು’ ಎನ್ನುವ ಮೂಲಕ ಬೆಳವಣಿಗೆಯ ಕ್ಷುಲ್ಲಕತೆಯನ್ನು ಎತ್ತಿ ತೋರಿಸುವ ಪ್ರಯತ್ನ ಮಾಡಿದ್ದಾರೆ.

ಇನ್ನು, ಸಾಮಾಜಿಕ ಜಾಲತಾಣ ಫೇಸ್ ಬುಕ್ ಕೂಡ ಐಟಿ ದಾಳಿಯ ಪ್ರತಿಕ್ರಿಯೆಗಳಿಂದ ತುಂಬಿ ಹೋಗಿದೆ. ಕೆಲವು ಪೋಸ್ಟ್ಗಳು ಹೀಗಿವೆ:

ಚಿತ್ರ ಕೃಪೆ: ದಿ ನ್ಯೂಸ್ ಮಿನಿಟ್.

Leave a comment

FOOT PRINT

Top