An unconventional News Portal.

‘ಕಪ್ಪು ಹಣ’ದ ವಿರುದ್ಧ ಪ್ರಧಾನಿ ಮೋದಿ ಹೋರಾಟ: ಪಾಕ್‌ನಲ್ಲಿ ಶಿಕ್ಷೆ; ಭಾರತದಲ್ಲಿ…?

‘ಕಪ್ಪು ಹಣ’ದ ವಿರುದ್ಧ ಪ್ರಧಾನಿ ಮೋದಿ ಹೋರಾಟ: ಪಾಕ್‌ನಲ್ಲಿ ಶಿಕ್ಷೆ; ಭಾರತದಲ್ಲಿ…?

ಮಳೆ ನಿಂತ ಮೇಲೂ ಹನಿಗಳು ಉದುರುವುದು ಇನ್ನೂ ನಿಂತಿಲ್ಲ. ‘ಪನಾಮ ಪೇಪರ್ಸ್‌’ ಹೆಸರಿನಲ್ಲಿ ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ ಜಾಗತಿಕ ಮಟ್ಟದಲ್ಲಿ ಬಿಡುಗಡೆಗೊಂಡ ದಾಖಲೆಗಳು ಪಾಕಿಸ್ತಾನದ ಪ್ರಧಾನಿಯ ಹುದ್ದೆಯನ್ನೇ ಈಗ ಬಲಿ ತೆಗೆದುಕೊಂಡಿವೆ.

ಪಾಕ್‌ ಆಡಳಿತ ಪಕ್ಷದ ಚುಕ್ಕಾಣಿ ಹಿಡಿದಿದ್ದ ನವಾಝ್‌ ಷರೀಫ್‌ ಅವರನ್ನು ಹುದ್ದೆಯಿಂದ ಅಲ್ಲಿನ ಸುಪ್ರಿಂ ಕೋರ್ಟ್‌ ಕೆಳಗಿಳಿಸಿದೆ. ನವಾಝ್‌ ಷರೀಪ್‌ ಅವರ ರೀತಿಯಲ್ಲಿಯೇ ಭಾರತದ ಪ್ರಭಾವಿಗಳ ಹೆಸರುಗಳನ್ನೂ ಈ ‘ಪನಾಮ ಪೇಪರ್ಸ್‌’ ಒಳಗೊಂಡಿದ್ದವು. ನೆರೆಯ ದೇಶದಲ್ಲಿಆ ಕುರಿತು ತನಿಖೆ ನಡೆದು ತೀರ್ಪು ಹೊರಬಿದ್ದಿದೆ. ಆದರೆ ಭಾರತದಲ್ಲಿ ಏನಾಗುತ್ತಿದೆ? ಭ್ರಷ್ಟಾಚಾರದ ವಿರುದ್ದ ಎಂದು ಹೇಳಿಕೊಳ್ಳುತ್ತಿರುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ತೆಗೆದುಕೊಂಡ ಕ್ರಮಗಳೇನಿವೆ? ಇಂತಹ ಪ್ರಶ್ನೆಗಳನ್ನು ಎದುರಿಗೆ ಇಟ್ಟುಕೊಂಡು ‘ಪನಾಮ ಪೇಪರ್ಸ್‌’ ಹಿನ್ನೆಲೆಯಲ್ಲಿ ಭಾರತದಲ್ಲಿ ನಡೆಯುತ್ತಿರುವ ಬೆಳವಣಿಗೆಳನ್ನು ಗಮನಿಸಿದರೆ, ನಿರಾಸೆ ಮೂಡುವಂತಿದೆ.

ಕಪ್ಪು ಕುಳಗಳು ಇವು:

ಸದ್ಯ ಬಿಹಾರದಲ್ಲಿ ನಡೆದ ರಾಜಕೀಯ ಬದಲಾವಣೆಯ ಹಿಂದೆ ಪ್ರಮುಖವಾಗಿ ಕೇಳಿಬಂದ ವಿಚಾರ ಭ್ರಷ್ಟಾಚಾರ. ಜೆಡಿಯು ನಾಯಕ ನಿತೀಶ್ ಕುಮಾರ್‌ ತಮ್ಮ ಮೈತ್ರಿಕೂಟದಲ್ಲಿದ್ದ ಆರ್‌ಜೆಡಿ ಪಕ್ಷದ ಭ್ರಷ್ಟಾಚಾರದ ವಿರುದ್ಧ ಆರೋಪ ಮಾಡಿ, ರಾಜೀನಾಮೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರಧಾನಿ ಮೋದಿ, “ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ ನಿತೀಶ್ ಕುಮಾರ್‌ಜಿ ಅವರಿಗೆ ಧನ್ಯವಾದಗಳು,” ಎಂದು ಟ್ವೀಟ್‌ ಮಾಡಿದ್ದರು.

ಕಳೆದ ವರ್ಷ, ‘ಇಂಟರ್ನ್ಯಾಷನಲ್ ಕನ್ಸ್ಷಾರ್ಷಿಯಂ ಆಫ್ ಇನ್ವೆಸ್ಟಿಗೇಟಿವ್ ಜರ್ನಲಿಸ್ಟ್ಸ್’ ಸಂಸ್ಥೆ ಒಂದು ವರ್ಷ ತನಿಖಾ ನಡೆಸಿ ಪನಾಮ ಮೂಲದ ಹೂಡಿಕೆ ಸಂಸ್ಥೆ ‘ಮೊಸಾಕ್ ಫೋನ್ಸೆಕಾ’ಗೆ ಸೇರಿದ ದಾಖಲೆಗಳನ್ನು ಬಿಡುಗಡೆ ಮಾಡಿತ್ತು. ಸುಮಾರು 11 ಮಿಲಿಯನ್ ದಾಖಲೆಗಳನ್ನು ಒಳಗೊಂಡ ಇದು ಬಹುದೊಡ್ಡ ತನಿಖಾ ವರದಿ ಎನ್ನಿಸಿಕೊಂಡಿತ್ತು. ಲಂಚ, ಶಸ್ತ್ರಾಸ್ತ್ರ ಖರೀದಿ, ತೆರಿಗೆ ವಂಚನೆ, ಮಾದಕ ದ್ರವ್ಯ ದಂಧೆಗೆ ಬಳಕೆಯಾದ ‘ಕಪ್ಪು ಹಣ’ದ ಮಾಹಿತಿಯನ್ನು ಈ ದಾಖಲೆಗಳು ಒಳಗೊಂಡಿದ್ದವು. ಸುಮಾರು 110 ದೇಶಗಳ ಪ್ರಮುಖ ನಾಯಕರು ಹಾಗೂ ಅವರ ಸಂಬಂಧಿಗಳು ತಮ್ಮ ದೇಶದ ಗಡಿಯಾಚೆಗೆ ನಡೆಸುತ್ತಿದ್ದ ಕಳ್ಳ ವ್ಯವಹಾರವನ್ನು ‘ಪನಾಮ ಪೇಪರ್’ಗಳು ಬಹಿರಂಗಪಡಿಸಿದ್ದವು. ಅದರಲ್ಲಿ ಪ್ರಭಾವಿ ಭಾರತೀಯರ ಪಟ್ಟಿಯೂ ಇತ್ತು.

ನಟ ಅಮಿತಾಬ್‌ ಬಚ್ಚನ್, ನಟಿ ಐಶ್ವರ್ಯ ರೈ, ಉದ್ಯಮಿ ಗೌಮತ್ ಅದಾನಿ ತಮ್ಮ ವಿನೋದ್ ಅದಾನಿ, ಡಿಎಲ್ಎಫ್ ಸಂಸ್ಥೆಯ ಮಾಲೀಕ ಕೆ. ಪಿ. ಸಿಂಗ್ ಸೇರಿದಂತೆ ಸುಮಾರು 500 ಭಾರತೀಯರು ತೆರಿಗೆ ವಂಚಿಸಲು ನಡೆಸಿದ ಪ್ರಯತ್ನಗಳ ದಾಖಲೆಗಳು ಹೊರಬಿದ್ದಿದ್ದವು. ಇದರಲ್ಲಿ ಕರ್ನಾಟಕ ಸರಕಾರದ ತೋಟಗಾರಿಕಾ ಸಚಿವ ಶಾಮನೂರು ಶಿವಶಂಕರಪ್ಪ ಅವರ ಅಳಿಯ ರಾಜೇಂದ್ರ ಪಾಟೀಲ್ ಹೆಸರು ಕೂಡ ಇತ್ತು.

ಭಾರತದ ಕ್ರಮಗಳೇನಿವೆ?: 

‘ಪನಾಮ ಪೇಪರ್ಸ್‌’ ಹೆಸರಿನಲ್ಲಿ ತನಿಖಾ ವರದಿ ಹೊರಬೀಳುತ್ತಲೆ ಹಣಕಾಸು ಸಚಿವ ಅರುಣ್‌ ಜೈಟ್ಲಿ ನಾನಾ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡು ಸಮಿತಿ ರಚಿಸಿ, ತನಿಖೆ ನಡೆಸುವುದಾಗಿ ಹೇಳಿದ್ದರು. ನಂತರದ ದಿನಗಳಲ್ಲಿ ಅಂತಹ ಯಾವ ಕ್ರಮಕ್ಕೂ ಕೇಂದ್ರ ಸರಕಾರ ಮುಂದಾಗಲಿಲ್ಲ. ಆದರೆ, ಅದೇ ವೇಳೆಯಲ್ಲಿ ಪಾಕಿಸ್ತಾನದಲ್ಲಿ ಪ್ರಧಾನಿ ನವಾಝ್‌ ಷರೀಫ್‌ ವಿರುದ್ಧ ತನಿಖೆಯೂ ನಡೆದು, ತೀರ್ಪು ಹೊರಬಿದ್ದಿದೆ.

ಷರೀಫ್‌ ವಿರುದ್ಧ ತೀರ್ಪು ಪ್ರಕಟವಾಗುತ್ತಿದ್ದಂತೆ, “ಅಲ್ಲಿ ಅಪರಾಧಿಗಳಿಗೆ ಶಿಕ್ಷೆ ನೀಡಲಾಯಿತು. ನಮ್ಮಲ್ಲಿ ಅಪರಾಧಿಗಳನ್ನು ಜಿಎಸ್‌ಟಿ ಜಾಹೀರಾತಿನಲ್ಲಿ ಬಿಂಬಿಸಲಾಗುತ್ತಿದೆ,” ಎಂದು ಟ್ವೀಟ್‌ಗಳು ಹರಿದಾಡಿದವು. ‘ಪನಾಮ ಪೇಪರ್ಸ್‌’ ವರದಿಯಲ್ಲಿ ಹೆಸರಿಸಿದ ನಟ ಅಮಿತಾಬ್‌ ಬಚ್ಚನ್‌ ಕೇಂದ್ರ ಸರಕಾರ ಮಹತ್ವದ ತೆರಿಗೆ ಸುಧಾರಣೆ ಯೋಜನೆಗೆ ರಾಯಭಾರಿಯಾಗಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಕ್ರಮ ಎಂದು ಬಿಂಬಿಸ್ಪಟ್ಟ ಜಿಎಸ್‌ಟಿಗೆ, ಭ್ರಷ್ಟಾಚಾರದ, ‘ಕಪ್ಪು ಹಣ’ದ ಆರೋಪ ಹೊತ್ತ ನಟನನ್ನೇ ಪ್ರಚಾರಕ್ಕೆ ಬಳಸಿಕೊಂಡಿದ್ದು ವಿಪರ್ಯಾಸ.

ಕಳೆದ ಏಪ್ರಿಲ್‌ ತಿಂಗಳಿನಲ್ಲಿ ‘ಪನಾಮ ಪೇಪರ್ಸ್‌’ ಕುರಿತು ವಿಚಾರಣೆ ನಡೆಸಿದ ಸುಪ್ರಿಂ ಕೋರ್ಟ್‌ ‘ವಿಶೇಷ ತನಿಖಾ ತಂಡ’ ರಚಿಸುವ ನಿಟ್ಟಿನಲ್ಲಿ ಆಲೋಚನೆ ಮಾಡುವಂತೆ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿತ್ತು. ಈ ಕುರಿತು ಕೇಂದ್ರ ಸರಕಾರ ಇನ್ನೂ ತನ್ನ ನಿಲುವನ್ನು ಪ್ರಕಟಿಸಿಲ್ಲ.

ಒಂದು ಕಡೆ ‘ಕಪ್ಪು ಹಣ’ದ ವಿರುದ್ಧ ಹೋರಾಟ, ಭ್ರಷ್ಟಾಚಾರದ ವಿರುದ್ಧ ಕಹಳೆ ಮೊಳಗಿಸುತ್ತಿರುವ ಪ್ರಧಾನಿ ಮೋದಿ, ‘ಪನಾಮ ಪೇಪರ್ಸ್‌’ನಂತಹ ವಿಚಾರಗಳು ಬಂದಾಗ ಮೌನವಹಿಸುತ್ತಿದ್ದಾರೆ. ಮಾತಿಗಿಂತ ಕೃತಿ ಮುಖ್ಯ ಎಂಬುದನ್ನು ಪಾಕಿಸ್ತಾನದಲ್ಲಿ ನಡೆದ ಮಹತ್ವದ ಬೆಳವಣಿಗೆ ಸಾರಿ ಹೇಳುತ್ತಿದೆ.


‘ಪನಾಮ ಪೇಪರ್ಸ್’ ಕುರಿತು ಇನ್ನಷ್ಟು ವರದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ. 


Leave a comment

FOOT PRINT

Top