An unconventional News Portal.

‘ನಮ್ಮ ಮೆಟ್ರೊ’ ಸ್ಥಗಿತ: ಬಿಎಂಆರ್‌ಸಿಎಲ್‌ ಸಿಬ್ಬಂದಿ ಕಾನೂನನ್ನು ಏಕೆ ಕೈಗೆತ್ತಿಕೊಂಡರು?

‘ನಮ್ಮ ಮೆಟ್ರೊ’ ಸ್ಥಗಿತ: ಬಿಎಂಆರ್‌ಸಿಎಲ್‌ ಸಿಬ್ಬಂದಿ ಕಾನೂನನ್ನು ಏಕೆ ಕೈಗೆತ್ತಿಕೊಂಡರು?

ಮೊನ್ನೆಮೊನ್ನೆಯಷ್ಟೆ ಮೊದಲ ಹಂತದ ಅದ್ಧೂರಿ ಉದ್ಘಾಟನೆಗೆ ಸಾಕ್ಷಿಯಾಗಿದ್ದ, ಅನಾವಶ್ಯಕವಾಗಿ ಹಿಂದಿ ಫಲಕಗಳನ್ನು ಬಳಸಿ ಸುದ್ದಿಯಲ್ಲಿದ್ದ ‘ನಮ್ಮ ಮೆಟ್ರೊ’ದ ರೈಲುಗಳ ಸೇವೆ ಶುಕ್ರವಾರ ಮುಂಜಾನೆ ಸ್ಥಗಿತಗೊಂಡಿದೆ.

ವಿಶ್ವೇಶ್ವರಯ್ಯ ನಿಲ್ದಾಣದಲ್ಲಿ ಗುರುವಾರ ಬೆಳಗ್ಗೆ ನಡೆದ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆಎಸ್‌ಐಎಸ್‌ಎಫ್‌) ಹಾಗೂ ಮೆಟ್ರೊ ಸಿಬ್ಬಂದಿ ನಡುವಿನ ಮಾರಾಮಾರಿ ಹಾಗೂ ನಂತರ ನಡೆದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯ ನಿರ್ಲಕ್ಷ್ಯತನವನ್ನು ವಿರೋಧಿಸಿ ಸಿಬ್ಬಂದಿಗಳು ರೈಲು ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ಮುಂದುವರಿಸಿದ್ದಾರೆ. ಮೇಲ್ನೋಟಕ್ಕೆ ಇದು ಕೆಎಸ್ಐಎಸ್‌ಎಫ್‌ ಹಾಗೂ ಮೆಟ್ರೊ ಸಿಬ್ಬಂದಿಗಳ ನಡುವಿನ ಸಂಘರ್ಷದಂತೆ ಕಂಡು ಬಂದರೂ, ಆಳದಲ್ಲಿಇದು ನಿಗಮದ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ನಡುವೆ ನಡೆಯುತ್ತಿದ್ದ ಸಂಘರ್ಷದ ಮುಂದುವರಿದ ಭಾಗದಂತೆ ಕಾಣಿಸುತ್ತಿದೆ. ‘ನಮ್ಮ ಮೆಟ್ರೊ ಎಂಪ್ಲಾಯೀಸ್‌ ಯೂನಿಯನ್’ ಹೆಸರಿನಲ್ಲಿ ಇತ್ತೀಚೆಗೆ ನಿಗಮದ ಸಿಬ್ಬಂದಿಗಳು ಸಂಘವೊಂದನ್ನು ಸ್ಥಾಪಿಸಿದ್ದರು. ದಿಲ್ಲಿ ಮೆಟ್ರೊ ಮಾದರಿಯಲ್ಲಿ ತಮಗೂ ಕೂಡ ಭತ್ಯೆ ಹಾಗೂ ಇತರೆ ಸವಲತ್ತುಗಳನ್ನು ನೀಡಬೇಕು ಎಂಬ ಆಂತರಿಕ ಒತ್ತಾಯವೊಂದು ಹುಟ್ಟಿಕೊಂಡಿತ್ತು. ಜತೆಗೆ, ಭದ್ರತಾ ಸಿಬ್ಬಂದಿ ಹಾಗೂ ಮೆಟ್ರೊ ಸಿಬ್ಬಂದಿ ನಡುವೆ ಘರ್ಷಣೆಗಳು ನಡೆಯುತ್ತಿದ್ದವು. ಆದರೆ ಇವೆಲ್ಲವುಗಳ ಕುರಿತು ಆಡಳಿತ ಮಂಡಳಿ ನಿರ್ಲಕ್ಷ್ಯ ಧೋರಣೆ ಪ್ರದರ್ಶಿಸಿದ ಪರಿಣಾಮ ಈಗ ರೈಲು ಸೇವೆಯೇ ಸ್ಥಗಿತಗೊಳ್ಳುವ ಹಂತ ತಲುಪಿದೆ.

ಈ ಹಿನ್ನೆಲೆಯಲ್ಲಿ, ಸುಮಾರು 13 ಸಾವಿರ ಕೋಟಿ ವೆಚ್ಚದಲ್ಲಿ 42. 3 ಕಿ.ಮೀ ಅತ್ಯಾಧುನಿಕ ನಗರ ರೈಲು ಸೇವೆಯನ್ನು ನೀಡುವ ಹೊಣೆಹೊತ್ತಿರುವ ‘ಬೆಂಗಳೂರು ಮೆಟ್ರೊ ರೈಲು ನಿಗಮ’ (ಬಿಎಂಆರ್‌ಸಿಎಲ್‌) ಅಂತರಂಗದ ಬೆಳವಣಿಗೆಗಳ ಮೇಲೆ ‘ಸಮಾಚಾರ’ ಬೆಳಕು ಚೆಲ್ಲುತ್ತಿದೆ.

ಏನಿದು ಘಟನೆ?: 

ಎಲೆಕ್ಟ್ರಿಕಲ್ ಮೇಂಟೆನೆನ್ಸ್ ವಿಭಾಗದ ಸಿಬ್ಬಂದಿ ರಾಕೇಶ್ ಗುರುವಾರ  ಮುಂಜಾನೆ 6 ಗಂಟೆ ಸುಮಾರಿಗೆ ವಿಶ್ವೇಶ್ವರಯ್ಯ ನಿಲ್ದಾಣಕ್ಕೆ ಬಂದಾಗ ಲಗೇಜುಗಳ ತಪಾಸಣೆಗೆ ಬಳಸುವ ಯಂತ್ರ ಇನ್ನೂ ಕಾರ್ಯಾರಂಭ ಮಾಡಿರಲಿಲ್ಲ. ಹೀಗಾಗಿ ರಾಕೇಶ್ ತಮ್ಮ ಬ್ಯಾಗನ್ನು ತಪಾಸಣೆಗೆ ಒಳಪಡಿಸದೆ ಕೆಲಸಕ್ಕೆ ಒಳಬಂದಿದ್ದಾರೆ. ಎಲವೇಟರ್ ಇಳಿದು ತಮ್ಮ ಕಚೇರಿಗೆ ಹೋಗುವ ಸಮಯದಲ್ಲಿ ಭದ್ರತಾ ಪಡೆಯ ಪೇದೆ ಲಕ್ಷ್ಮಣ್ ಅವರ ಮೇಲೆ ಹಲ್ಲೆ ನಡೆಸಿದರು. ಇವೆಲ್ಲವೂ ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ರಾಕೇಶ್ ಮೇಲೆ ಹಲ್ಲೆ ನಡೆದ ಸುದ್ದಿ ತಿಳಿದ ನಂತರ ಮೆಟ್ರೊ ಸಿಬ್ಬಂದಿಗಳು ಒಟ್ಟಾಗಿ ಪೇದೆ ಲಕ್ಷ್ಮಣ್‌ ಅವರನ್ನು ಹೊರೆಗೆ ಕರೆದುಕೊಂಡು ಬಂದು ಹಲ್ಲೆ ನಡೆಸಿದ್ದಾರೆ. ಇದನ್ನು ಸಾರ್ವಜನಿಕರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

(ಕೃಪೆ: ಪ್ರಜಾವಾಣಿ)

ಠಾಣೆಯಲ್ಲಿ ದೂರು:

ಘಟನೆ ಬಹಿರಂಗವಾಗುತ್ತಿದ್ದಂತೆ ರಾಕೇಶ್ ಸೇರಿದಂತೆ ಎಲೆಕ್ಟ್ರಿಕಲ್ ಮೇಂಟೆನೆನ್ಸ್‌ ವಿಭಾಗದ ವಸಂತ್‌ ಕುಮಾರ್, ಧನ್ ಸಿಂಗ್, ರಘು, ಕಿರಣ್ ಹಾಗೂ ವಿಶ್ವೇಶ್ವರಯ್ಯ ನಿಲ್ದಾಣದ ಕಂಟ್ರೋಲರ್‌ ಹರೀಶ್ ಕುಮಾರ್‌ ಅವರುಗಳನ್ನು ಅಲಸೂರು ಗೇಟ್ ಪೊಲೀಸ್‌ ಠಾಣೆಗೆ ತರೆತರಲಾಗಿದೆ. “ಭದ್ರತಾ ಪಡೆ ಮತ್ತು ನಮ್ಮ ನಡುವೆ ಹಲವು ದಿನಗಳಿಂದ ಸಂಘರ್ಷ ನಡೆಯುತ್ತಲೇ ಇತ್ತು. ಈ ಕುರಿತು ಹಲವು ಬಾರಿ ದೂರನ್ನು ಮೇಲಾಧಿಕಾರಿಗಳಿಗೆ ನೀಡಿದ್ದೆವು. ಆದರೆ ಅವರು ಅದನ್ನು ಕಸದ ಬಿಟ್ಟಿಗೆ ಎಸೆದಿದ್ದರು. ಗುರುವಾರ ಬೆಳಗ್ಗೆ ಘಟನೆ ನಡೆದ ನಂತರ ಒಟ್ಟು 6 ಜನರನ್ನು ಅಲಸೂರು ಗೇಟ್ ಪೊಲೀಸ್‌ ಠಾಣೆಗೆ ಕರೆದುಕೊಂಡು ಹೋಗಿ ಪೊಲೀಸರು ಹೊಡೆದಿದ್ದಾರೆ. ಇಷ್ಟಾದರೂ ಯಾವ ಮೇಲಾಧಿಕಾರಿಯೂ ನಮ್ಮ ಸಮಸ್ಯೆಗೆ ಕಿವಿಕೊಡಲಿಲ್ಲ. ಹೀಗಾಗಿ ಗುರುವಾರ ರಾತ್ರಿ ಬಯ್ಯಪ್ಪನಹಳ್ಳಿ ಡಿಪೋದಲ್ಲಿ ಎಲ್ಲರೂ ಸೇರಿ ಪ್ರತಿಭಟನೆ ನಡೆಸಿದೆವು,” ಎಂದು ಮೆಟ್ರೊ ಸಿಬ್ಬಂದಿಯೊಬ್ಬರು ‘ಸಮಾಚಾರ’ಕ್ಕೆ ಮಾಹಿತಿ ನೀಡಿದರು.

ಗುರುವಾರ ಸಂಜೆ ವೇಳೆ ಪೊಲೀಸರು ಹರೀಶ್ ಕುಮಾರ್ ಹಾಗೂ ರಾಕೇಶ್‌ ಅವರನ್ನು ಹೊರತುಪಡಿಸಿ ಉಳಿದ ನಾಲ್ವರನ್ನು ಮನೆಗೆ ಕಳುಹಿಸಿದ್ದಾರೆ. ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, “ಪೊಲೀಸರು ಹೊಡೆದ ಕಾರಣ ಅವರಿಗೆ ವಿಶ್ರಾಂತಿಯ ಅಗತ್ಯವಿದೆ. ನಮ್ಮ ಕಡೆಯಿಂದ ತಪ್ಪಾಗಿದೆ. ಆದರೆ ತಪ್ಪಿಗೆ ಕಾರಣ ಏನು ಎಂಬುದನ್ನು ಆಲೋಚನೆ ಮಾಡಬೇಕು. ಮೇಲಾಧಿಕಾರಿಗಳನ್ನು ನಂಬಿಕೊಂಡ ತಪ್ಪಿಗೆ ಈಗ ನಾವು ಶಿಕ್ಷೆ ಅನುಭವಿಸುತ್ತಿದ್ದೇವೆ,” ಎಂಬ ಉತ್ತರ ಲಭ್ಯವಾಯಿತು.

ಬಯ್ಯಪ್ಪನಹಳ್ಳಿ ಡಿಪೋದಲ್ಲಿ ಮೆಟ್ರೊ ಸಿಬ್ಬಂದಿಗಳು ನಡೆಸಿದ ಆಹೋರಾತ್ರಿ ಪ್ರತಿಭಟನೆ.

ಬಯ್ಯಪ್ಪನಹಳ್ಳಿ ಡಿಪೋದಲ್ಲಿ ಮೆಟ್ರೊ ಸಿಬ್ಬಂದಿಗಳು ನಡೆಸಿದ ಆಹೋರಾತ್ರಿ ಪ್ರತಿಭಟನೆ.

ಐರಾವತದ ಅಂತರಂಗ: 

ಮೇಲ್ನೋಟಕ್ಕೆ ಐಶಾರಾಮಿ ಸಾರಿಗೆ ವ್ಯವಸ್ಥೆಯಂತೆ ಕಾಣುವ ‘ನಮ್ಮ ಮೆಟ್ರೊ’ದೊಳಗೆ ಸಾಕಷ್ಟು ಸಮಸ್ಯೆಗಳಿವೆ. ಮೊದಲ ಹಂತ ಉದ್ಘಾಟನೆಯ ಹೊತ್ತಿಗೆ ನಿಗಮದ ಸಿಬ್ಬಂದಿಗಳು ‘ಎಂಪ್ಲಾಯೀಸ್ ಯೂನಿಯನ್’ ಒಂದನ್ನು ರಚಿಸಿಕೊಂಡಿದ್ದಾರೆ. ಅದರ ಅಡಿಯಲ್ಲಿ ಸಂಬಳದ ಜತೆಗೆ ಭತ್ಯೆ ಹಾಗೂ ಸವಲತ್ತುಗಳನ್ನು ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಆದರೆ ಇದ್ಯಾವುದನ್ನೂ ನಿಗಮದ ಸಾರ್ವಜನಿಕ ಸಂಪರ್ಕ ವಿಭಾಗ ಮಾಧ್ಯಮಗಳಿಗೆ ತಲುಪದಂತೆ ನೋಡಿಕೊಳ್ಳುವ ಪ್ರಯತ್ನ ಮಾಡುತ್ತಿದೆ.

ನಿಗಮದ ಸಿಬ್ಬಂದಿ ನಡುವೆ ಹರಿದಾಡುತ್ತಿರುವ ಮಾಹಿತಿ ಪತ್ರ.

ನಿಗಮದ ಸಿಬ್ಬಂದಿ ನಡುವೆ ಹರಿದಾಡುತ್ತಿರುವ ಮಾಹಿತಿ ಪತ್ರ.

ಮೇಲಿನ ಚಿತ್ರದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿರುವಂತೆ, ಬೆಂಗಳೂರು ಮೆಟ್ರೊ ನಿಗಮದ ಸಿಬ್ಬಂದಿ ದೇಶದ ಇತರೆ ಮೆಟ್ರೊ ನಿಗಮಗಳು ತಮ್ಮ ಸಿಬ್ಬಂದಿಗೆ ನೀಡುತ್ತಿರುವ ಸವಲತ್ತು ಹಾಗೂ ಭತ್ಯೆಗಳ ನಡುವೆ ಹೋಲಿಕೆಯೊಂದನ್ನು ಮಾಡಿದ್ದಾರೆ. ವಿಶೇಷವಾಗಿ ದಿಲ್ಲಿ ಮೆಟ್ರೊ ನಿಗಮದ ಮಾಹಿತಿಯನ್ನು ಅವರು ಮಾದರಿಯಾಗಿ ಬಳಸಿಕೊಂಡಿದ್ದಾರೆ. ಅದೇ ಮಾದರಿಯಲ್ಲಿ ತಮಗೂ ಕೂಡ ಭತ್ಯೆಗಳನ್ನು ನೀಡಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ.

ಒಂದು ಕಡೆ ಸವಲತ್ತು ಹಾಗೂ ಭತ್ಯೆಗಳಿಗಾಗಿ ಬೇಡಿಕೆ ಮುಂದಿಟ್ಟಿರುವ ಮೆಟ್ರೊ ಸಿಬ್ಬಂದಿಗಳಲ್ಲಿ ಕೆಎಸ್‌ಐಎಸ್‌ಎಫ್‌ ಸಿಬ್ಬಂದಿಗಳ ಬಗ್ಗೆ ನಕಾರಾತ್ಮಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತು ಹಿಂದೆಯೇ ದೂರುಗಳು ದಾಖಲಾದರೂ ಆಡಳಿತ ಮಂಡಳಿ ಕಣ್ಮುಚ್ಚಿ ಕುಳಿತಿದ್ದು ಪರಿಸ್ಥಿತಿ ವಿಕೋಪಕ್ಕೆ ಹೋಗಲು ಕಾರಣವಾಗಿದೆ. “ನಮ್ಮಲ್ಲಿ ಅಧಿಕಾರಿಗಳಿಗೆ ನೀಡುತ್ತಿರುವ ಸವಲತ್ತು ಹಾಗೂ ಅದಕ್ಕೆ ಆಗುತ್ತಿರುವ ಖರ್ಚು ವೆಚ್ಚಗಳಿಗೆ ಹೋಲಿಸಿದರೆ ಸಿಬ್ಬಂದಿಗಳಿಗೆ ಸಿಗುತ್ತಿರುವ ಅತ್ಯಂತ ಕಡಿಮೆ ಸಂಬಳ. ಆಡಳಿತ ವರ್ಗದ ವೆಚ್ಚದ ಬಗ್ಗೆ ಮಾಹಿತಿ ಬಹಿರಂಗಗೊಂಡರೆ ಎಲ್ಲವೂ ಗೊತ್ತಾಗುತ್ತದೆ,” ಎಂಬುದು ಸಿಬ್ಬಂದಿಯೊಬ್ಬರ ಆರೋಪ.

Leave a comment

FOOT PRINT

Top