An unconventional News Portal.

‘ಸ್ವಾಮಿಜಿ ಸತ್ತಿಲ್ಲ; ಸಮಾಧಿ ಸ್ಥಿತಿಯಲ್ಲಿದ್ದಾರೆ’: ಮೃತ ದೇಹದ ಸಂರಕ್ಷಣೆಗೆ ಒಪ್ಪಿದ ನ್ಯಾಯಾಲಯ!

‘ಸ್ವಾಮಿಜಿ ಸತ್ತಿಲ್ಲ; ಸಮಾಧಿ ಸ್ಥಿತಿಯಲ್ಲಿದ್ದಾರೆ’: ಮೃತ ದೇಹದ ಸಂರಕ್ಷಣೆಗೆ ಒಪ್ಪಿದ ನ್ಯಾಯಾಲಯ!

‘ಸ್ವಾಮಿಜಿ ಇನ್ನೂ ಸತ್ತಿಲ್ಲ. ಸಮಾಧಿ ಸ್ಥಿತಿಯಲ್ಲಿದ್ದಾರೆ. ಇವತ್ತಲ್ಲ ನಾಳೆ ಎದ್ದು ಬರುತ್ತಾರೆ. ಹಾಗಾಗಿ ಅವರ ದೇಹವನ್ನು ರಕ್ಷಿಸಿ ಇಡಬೇಕು’ ಎಂಬ ಅನುಯಾಯಿಗಳ ಬೇಡಿಕೆಯೊಂದನ್ನು ಪಂಜಾಬ್- ಹರಿಯಾಣ ಹೈಕೋರ್ಟ್‌ ಬುಧವಾರ ಎತ್ತಿಹಿಡಿದಿದೆ.

ಈ ಮೂಲಕ ಕಳೆದ ಮೂರು ವರ್ಷಗಳಿಂದ ವಿವಾದಕ್ಕೆ ಕಾರಣವಾಗಿದ್ದ ಗುರು, ಸತ್ಸಂಗಿ, ನಾನಾ ದೇಶಗಳಲ್ಲಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ಹೊಂದಿದ್ದ ಅಶುತೋಶ್ ಮಹರಾಜ್‌ ಸಾವಿನ ಪ್ರಕರಣಕ್ಕೆ ಹೊಸ ತಿರುವುದು ಲಭ್ಯವಾಗಿದೆ. ನ್ಯಾಯಾಲಯ ವೈದ್ಯರಿಂದ ಮೃತಪಟ್ಟಿದ್ದಾರೆ ಎಂದು ಘೋಷಿಸ್ಪಟ್ಟ ಸ್ವಾಮಿ ದೇಹವನ್ನು ರಕ್ಷಿಸಿ ಇಡಲು ಒಪ್ಪಿಗೆ ಸೂಚಿಸಿದೆ ಆದರೂ, ಅದು ಅವರ ಅನುಯಾಯಿಗಳು ಹೇಳುತ್ತಿರುವ ‘ಸಮಾಧಿ ಸ್ಥಿತಿಯಲ್ಲಿದ್ದಾರೆ’ ಎಂಬ ವಾದದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಏನಿದು ಪ್ರಕರಣ?:

ಪಂಜಾಬ್‌ನಲ್ಲಿ 1983ರಲ್ಲಿ ‘ದಿವ್ಯ ಜ್ಯೋತಿ ಜಾಗೃತಿ ಸಂಸ್ಥಾನ’ದ ಹೆಸರಿನಲ್ಲಿ ಆಶ್ರಮವನ್ನು ಶುರು ಮಾಡಿದವರು ಅಶುತೋಶ್. ಮೂಲತಃ ಬಿಹಾರ್ ರಾಜ್ಯದ ಅಶುತೋಶ್ ಜರ್ಮನಿ ಸೇರಿದಂತೆ ಜಗತ್ತಿನ ನಾನಾ ಭಾಗಗಳಲ್ಲಿ ಸುತ್ತಾಟದ ನಂತರ ಪಂಜಾಬ್‌ನಲ್ಲಿ ಆಶ್ರಮವೊಂದನ್ನು ಸ್ಥಾಪಿಸಿದ್ದರು. ‘ವಿಶ್ವಶಾಂತಿ’, ಸತ್ಸಂಗದ ಹೆಸರಿನಲ್ಲಿ ಪ್ರವಚನಗಳನ್ನು ನೀಡತೊಡಗಿದರು. ದೊಡ್ಡ ಸಂಖ್ಯೆಯಲ್ಲಿ ಅನುಯಾಯಿಗಳೂ ಹುಟ್ಟಿಕೊಂಡರು. ಹೀಗಿರುವಾಗ 2014ರ ಜನವರಿಯಲ್ಲಿ ಅಶುತೋಶ್ ಹೃದಯಾಘಾತದಿಂದ ಸಾವನ್ನಪ್ಪಿದರು. ಆದರೆ ಅವರು ಅನುಯಾಯಿಗಳು ಅದು ಸಾವಲ್ಲ, ಸಮಾಧಿ ಸ್ಥಿತಿಗೆ ಹೋಗಿದ್ದಾರೆ. ಭ್ರಹ್ಮಜ್ಞಾನವನ್ನು ಪಡೆಯಲು ಅವರು ಹೀಗೆ ದಿನಗಳ ಲೆಕ್ಕದಲ್ಲಿ, ತಿಂಗಳುಗಳ ಲೆಕ್ಕದಲ್ಲಿ, ವರ್ಷಗಳ ಲೆಕ್ಕದಲ್ಲಿ ಧ್ಯಾನಸ್ಥಿತಿಯಲ್ಲಿ ಇರುತ್ತಾರೆ. ಹೀಗಾಗಿ ಅವರ ದೇಹಕ್ಕೆ ಅಂತ್ಯಕ್ರಿಯೆ ನೆರವೇರಿಸಲು ಸಾಧ್ಯವಿಲ್ಲ ಎಂದು ಮಂಜುಗಡ್ಡೆ ಸಹಾಯದಿಂದ ದೇಹವನ್ನು ರಕ್ಷಿಸಿ ಇಟ್ಟರು.

 ಈ ನಡುವೆ, ದಿಲೀಪ್ ಕುಮಾರ್ ಝಾ ಎಂಬುವವರು, ‘ಅಶುತೋಶ್ ಮಹಾರಾಜ್ ತನ್ನ ತಂದೆ, ಅವರ ದೇಹವನ್ನು ಬಿಹಾರದ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆಗೆ ಒಳಪಡಿಸಲು ಅವಕಾಶ ನೀಡಿವಂತೆ’ ನ್ಯಾಯಾಲಯದ ಮೊರೆಹೋಗಿದ್ದರು. 15 ದಿನಗಳ ಒಳಗಾಗಿ ಅಂತ್ಯಕ್ರಿಯೆ ನಡೆಸುವಂತೆ ಕೆಳ ನ್ಯಾಯಾಲಯ 2014 ಡಿಸೆಂಬರ್‌ ತಿಂಗಳಿನಲ್ಲಿ ಆದೇಶವನ್ನೂ ನೀಡಿತ್ತು. ಆದರೆ ದಿವ್ಯಜ್ಯೋತಿ ಜಾಗೃತಿ ಸಂಸ್ಥಾನದ ಆಡಳಿತ ಮಂಡಳಿ ಮೇಲ್ಮನವಿ ಸಲ್ಲಿಸುವ ಮೂಲಕ ಕೆಳಹಂತದ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆ ತಂದಿತ್ತು. ಇದೀಗ ಮೂರು ವರ್ಷಗಳ ನಂತರ ಹೈಕೋರ್ಟ್‌ ದೇಹವನ್ನು ಸಂರಕ್ಷಿಸಿ ಇಡಲು ಅನುಮತಿ ನೀಡಿದೆ. ಜತೆಗೆ, ಕಾಲಕಾಲಕ್ಕೆ ತಜ್ಞ ವೈದ್ಯರಿಂದ ತಪಾಸಣೆಯನ್ನು ನಡೆಸಲು ಸೂಚಿಸಿದೆ. ತಪಾಸೆಣೆ ವೆಚ್ಚವನ್ನು ಸಂಸ್ಥಾನವೇ ಭರಿಸಬೇಕು ಎಂದು ತೀರ್ಪಿನಲ್ಲಿ ಹೇಳಿದೆ.

ವಿವಾದಿತ ಸ್ವಾಮಿ:

ಬಿಹಾರದ ಮೂಲದಿಂದ ಬಂದು ಪಂಜಾಬ್‌ನಲ್ಲಿ ಆಶ್ರಮ ಸ್ಥಾಪಿಸಿದ್ದ ಅಶುತೋಶ್ ಪ್ರವಚನಗಳು ಸಿಖ್‌ ಸಮುದಾಯವನ್ನು ರೊಚ್ಚಿಗೆಬ್ಬಿಸಿದ್ದವು. ಸಿಖ್ ಧಾರ್ಮಿಕ ಭಾವನಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಾರೆ ಎಂಬ ಆರೋಪ ಅವರ ಮೇಲಿತ್ತು. 2009ರಲ್ಲಿ ಅಶುತೋಶ್ ಮಹರಾಜ್‌ ಅನುಯಾಯಿಗಳು ಮತ್ತು ಸಿಖ್‌ ಧರ್ಮೀಯರ ನಡುವೆ ಘರ್ಷಣೆ ನಡೆದು ಹೆಣಗಳೂ ಉರುಳಿದ್ದವು. ಆ ನಂತರ ಅಶುತೋಶ್‌ಗೆ ಝೆಡ್‌ ಪ್ಲಸ್‌ ಸೆಕ್ಯುರಿಟಿಯನ್ನು ನೀಡಲಾಗಿತ್ತು.

ಅವರ ದಿವ್ಯಜ್ಯೋತಿ ಜಾಗೃತಿ ಸಂಸ್ಥಾನದ ವೆಬ್‌ಸೈಟ್‌ ನೀಡುವ ಪ್ರಕಾರ, ಮಹರಾಜ್‌ ಸುಮಾರು 15 ದೇಶಗಳಲ್ಲಿ 30 ಕೋಟಿ ಅನುಯಾಯಿಗಳನ್ನು ಹೊಂದಿದ್ದಾರೆ. ಸುಮಾರು 350 ಶಾಖೆಗಳು ಪ್ರಪಂಚದಾದ್ಯಂತ ಸ್ಥಾಪಿಸಿದ್ದಾರೆ. ಇವತ್ತಿಗೆ ದಿವ್ಯಜ್ಯೋತಿ ಜಾಗೃತಿ ಸಂಸ್ಥಾನದ ಒಟ್ಟು ಆಸ್ತಿ 1 ಸಾವಿರ ಕೋಟಿಗೂ ಮೀರುತ್ತದೆ. ”ಅಶುತೋಶ್ ಮಹಾರಾಜ್‌ ಸಮಾಧಿ ಸ್ಥಿತಿಯಲ್ಲಿ ಉಸಿರಾಡುತ್ತಿದ್ದಾರೆ. ಅದನ್ನು ಕಂಡುಹಿಡಿಯಲು ಆಧುನಿಕ ವೈದ್ಯಕೀಯ ಉಪಕರಣಗಳಿಂದ ಸಾಧ್ಯವಾಗುತ್ತಿಲ್ಲ,” ಎಂಬುದು ಆಶ್ರಮದ ಆಡಳಿತ ಮಂಡಿಯ ಆರೋಪ. ಅದೇ ಆಡಳಿತ ಮಂಡಳಿ ಈಗ ಅವರ ದೇಹವನ್ನು ಆಧುನಿಕ ತಂತ್ರಜ್ಞಾನದ ಮೂಲಕ ಸಂರಕ್ಷಿಸಿ ಇಡಲು ತೀರ್ಮಾನಿಸಿದೆ. ಆ ಜಾಗವನ್ನು ಈಗ ಹಿಮಾಲಯದ ಮಾದರಿಯಲ್ಲಿ ರೂಪಿಸಿ, ಅನುಯಾಯಿಗಳ ಪ್ರಾರ್ಥನೆಗೆ ಅನುವು ಮಾಡಿಕೊಡಲು ಮುಂದಾಗಿದೆ.

ಕೆಲವು ಉದಾಹರಣೆಗಳು: 

ಧಾರ್ಮಿಕ ಹಾಗೂ ಆರಾಧನಾ ಮನೋಭಾವದಿಂದ ಸತ್ತ ನಾಯಕರ ದೇಹಗಳನ್ನು ಸಂರಕ್ಷಿಸಿ ಇಡುವ ಕೆಲಸ ಜಗತ್ತಿನ ಹಲವು ಕಡೆಗಳಲ್ಲಿ ದಾಖಲಾಗಿದೆ. ಮೃತ ದೇಹಗಳ ಸಂರಕ್ಷಣೆ ಹಾಗೂ ಪ್ರಾರ್ಥನೆ ವಿಚಾರದಲ್ಲಿ ಗೋವಾದಲ್ಲಿರುವ ಸಂತ ಬೆಸಿಲಿಕಾ ಚರ್ಚ್‌ನಲ್ಲಿ ಇಡಲಾಗಿರುವ ದೇಹ ಗಮನ ಸೆಳೆಯುತ್ತದೆ. ಸುಮಾರು 500 ವರ್ಷಗಳಷ್ಟು ಹಳೆಯದು ಎಂಬ ನಂಬಲಾದ ಸಂತರ ದೇಹ ಇವತ್ತಿಗೂ ಆರಾಧನೆಗೆ ಒಳಗಾಗುತ್ತಿದೆ. ಇದೇ ಮಾದರಿಯಲ್ಲಿ ಉತ್ತರ ಕೋರಿಯಾದ ಸರ್ವಾಧಿಕಾರಿಯ ದೇಹವನ್ನು ಅಲ್ಲಿನ ಅರಮನೆಯಲ್ಲಿಯೇ ಸಂರಕ್ಷಿಸಿ ಇಡಲಾಗಿದೆ. ರಷ್ಯಾದಲ್ಲಿ ಕಮ್ಯುನಿಸ್ಟ್ ಕ್ರಾಂತಿಯ ಹರಿಕಾರಿ ಲೆನಿನ್‌ ದೇಹವನ್ನೂ ಕೂಡ ಸಂರಕ್ಷಿಸಿ ಇಡಲಾಗಿದೆ. ಇನ್ನು, ಮನುಷ್ಯ ದೇಹಗಳನ್ನು ಸತ್ತ ನಂತರವೂ ಸಂರಕ್ಷಿಸುವ ವಿಚಾರದಲ್ಲಿ ಈಜಿಪ್ಟ್‌ ಮಮ್ಮಿಗಳದ್ದು ಬಹುದೊಡ್ಡ ಇತಿಹಾಸವೇ ಇದೆ.

ನಾನಾ ಕಾರಣಗಳಿಗಾಗಿ ಮೃತ ದೇಹವನ್ನು ಸಂರಕ್ಷಿಸಿ ಆರಾಧಿಸುವ ಕೆಲಸ ನಡೆದುಕೊಂಡು ಬಂದಿದೆ. ಆದರೆ ಇದೇ ಮೊದಲ ಬಾರಿಗೆ ‘ಮೃತರೊಬ್ಬರು ಇನ್ನೂ ಸತ್ತಿಲ್ಲ, ಸಮಾಧಿ ಸ್ಥಿತಿಯಲ್ಲಿದ್ದಾರೆ. ಇವತ್ತಲ್ಲ ನಾಳೆ ಎದ್ದು ಬರುತ್ತಾರೆ’ ಎಂದು ಹೇಳುತ್ತಿರುವುದು ಮತ್ತು ಅದಕ್ಕೆ ನ್ಯಾಯಾಲಯದ ಕಡೆಯಿಂದ ಪರೋಕ್ಷವಾಗಿ ಒಪ್ಪಿಗೆಯೂ ಸಿಕ್ಕಿರುವುದು ಕುತೂಹಲಕ್ಕೆ ಕಾರಣವಾಗಿದೆ.

Leave a comment

FOOT PRINT

Top