An unconventional News Portal.

‘ನಿಧಾನ ಸೌಧ’ಕ್ಕೆ ತಲುಪಿದ ಅಂತಿಮ ಪಟ್ಟಿ: ಸಹಾಯಕ ಪ್ರಾಧ್ಯಾಪಕರ ನೇಮಕ ಯಾವಾಗ?

‘ನಿಧಾನ ಸೌಧ’ಕ್ಕೆ ತಲುಪಿದ ಅಂತಿಮ ಪಟ್ಟಿ: ಸಹಾಯಕ ಪ್ರಾಧ್ಯಾಪಕರ ನೇಮಕ ಯಾವಾಗ?

“ನಮ್ಮ ಕಡೆಯಿಂದ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಕಾತಿ ಸಂಬಂಧ ದಾಖಲೆಗಳ ಪರಿಶೀಲನೆ ನಡೆದು ಸರಕಾರಕ್ಕೆ ಕಳುಹಿಸಿದ್ದೇವೆ. ಇನ್ನೊಂದು ವಾರದೊಳಗೆ ಕೌನ್ಸಿಲಿಂಗ್ ನಡೆಸಲು ದಿನಾಂಕ ನಿಗದಿಯಾಗಲಿದೆ,” ಎಂದು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಅಜಯ್‌ ನಾಗಭೂಷಣ್ ತಿಳಿದರು.

ನೇಮಕಾತಿ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಸುಮಾರು 2 ಸಾವಿರ ಉದ್ಯೋಗ ಆಕಾಂಕ್ಷಿಗಳು ಮತ್ತೊಮ್ಮೆ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ‘ಸಮಾಚಾರ’ ಸಂಪರ್ಕಿಸಿದಾಗ ಪ್ರತಿಕ್ರಿಯೆ ನೀಡಿದ ಅವರು, “ದಾಖಲೆಗಳ ಪರಿಶೀಲನೆ ಪೂರ್ಣಗೊಂಡಿದೆ. ಇನ್ನೂ 213 ಅಭ್ಯರ್ಥಿಗಳಿಂದ ಪೂರ್ಣ ಪ್ರಮಾಣದ ದಾಖಲೆಗಳನ್ನು ನಿರೀಕ್ಷೆ ಮಾಡುತ್ತಿದ್ದೇವೆ. ಈಗ ಸಲ್ಲಿಕೆಯಾಗಿರುವ ದಾಖಲೆಗಳಲ್ಲಿ ಕೆಲವು ನಕಲಿ ಎಂಬುದು ಕಂಡು ಬಂದಿದೆ. ಈ ಎಲ್ಲಾ ಮಾಹಿತಿಗಳನ್ನು ಸರಕಾರಕ್ಕೆ ಸಲ್ಲಿಸಿದ್ದೇವೆ. ಇನ್ನೊಂದು ವಾರದಲ್ಲಿ ಕೌನ್ಸಿಲಿಂಗ್ ದಿನಾಂಕ ಘೋಷಣೆಯಾಗಬಹುದು,” ಎಂದರು.

ಹಿನ್ನೆಲೆ: 

ರಾಜ್ಯದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು ಅಕ್ಟೋಬರ್ 2014ರಲ್ಲಿ. ಅದೇ ವರ್ಷದ ನವೆಂಬರ್‌ ತಿಂಗಳಿನಲ್ಲಿ ಕರ್ನಾಟಕದ ಪರೀಕ್ಷಾ ಪ್ರಾಧಿಕಾರವನ್ನು ರಚನೆ ಮಾಡಲಾಯಿತು. 2015ರ ಜನವರಿಯಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಸಂಬಂಧ ಅಧಿಸೂಚನೆ ಹೊರಡಿಸಲಾಯಿತು. ಎರಡು ತಿಂಗಳ ನಂತರ 862 ಹುದ್ದೆಗಳನ್ನು ಹೆಚ್ಚುವರಿಯಾಗಿ ಸೇರಿಸಿಕೊಳ್ಳಲಾಯಿತು. ಈ ಮೂಲಕ ಒಟ್ಟು 2034 ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ಸಂಬಂಧ ಪಟ್ಟಂತೆ ಮಾರ್ಚ್‌ 2016ರಲ್ಲಿ ಪರೀಕ್ಷೆಯೂ ನಡೆಯಿತು. ಅದೇ ವರ್ಷ ಜುಲೈ ತಿಂಗಳಿನಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲನೆ ನಡೆಸಿ ಅದಕ್ಕೆ ಹಿಂಬರಹವನ್ನೂ ಇಲಾಖೆ ನೀಡಿತು. ಅಂತಿಮವಾಗಿ ಜ. 2017ರಲ್ಲಿ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಯಿತು. ಫೆಬ್ರವರಿ ತಿಂಗಳ ಗೆಜೆಟ್‌ನಲ್ಲಿಯೂ ಅದು ಪ್ರಕಟವಾಯಿತು.

“ಆದರೆ ಈ ಪ್ರಕ್ರಿಯೆ ವಿಳಂಬವಾದ್ದರಿಂದ ಕೆಲವು ಅಭ್ಯರ್ಥಿಗಳು ಅದಾಗಲೇ ಬೇರೆ ಕೆಲಸ ಹುಡುಕಿಕೊಂಡಿದ್ದರು. ಅಂತವರು ಪೊಲೀಸ್‌ ಪರಿಶೀಲನಾ ಪತ್ರ, ವೈದ್ಯಕೀಯ ಪ್ರಮಾಣ ಪತ್ರದಂತಹ ಕೆಲವು ದಾಖಲೆಗಳನ್ನು ಸಲ್ಲಿಸಲು ಹೋಗಲೇ ಇಲ್ಲ. ಇದನ್ನೇ ನೆಪವಾಗಿಟ್ಟುಕೊಂಡ ಇಲಾಖೆ 2 ಸಾವಿರಕ್ಕೂ ಅಧಿಕ ಆಕಾಂಕ್ಷಿಗಳಿಗೆ ನೇಮಕಾತಿ ಪತ್ರವನ್ನು ನೀಡದೆ ಸತಾಯಿಸಿಕೊಂಡು ಬರುತ್ತಿದೆ,” ಎನ್ನುತ್ತಾರೆ ಉದ್ಯೋಗ ಆಕಾಂಕ್ಷಿ ರಮೇಶ್.

ಅಂತರಾಳ ಏನು?: 

ಸಹಾಯಕರ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಗಳು ಉನ್ನತ ಶಿಕ್ಷಣ ಇಲಾಖೆ ಅಡಿಯಲ್ಲಿ ಬರುತ್ತದೆ. ಇಲಾಖೆ ಸಚಿವರಾಗಿರುವ ಬಸವರಾಜ ರಾಯರೆಡ್ಡಿ ವಿದೇಶ ಪ್ರವಾಸದಲ್ಲಿದ್ದಾರೆ. ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕರಾಗಿರುವ ಜಾವೇದ್ ಅಖ್ತರ್‌ ಅವರಿಗೆ ಹೆಚ್ಚುವರಿ ಹೊಣೆಯನ್ನು ನೀಡಲಾಗಿದೆ. “ಇಷ್ಟು ದೊಡ್ಡ ಇಲಾಖೆಯ ಗುರುತರ ಹುದ್ದೆಗೆ ಹೆಚ್ಚುವರಿ ಹೊಣೆ ನೀಡಿರುವುದು ಇಲಾಖೆಯೊಳಗಿನ ಹಲವು ಸಮಸ್ಯೆಗಳ ಮೂಲ,” ಎನ್ನುತ್ತಾರೆ ಇಲಾಖೆ ಕಿರಿಯ ಅಧಿಕಾರಿಯೊಬ್ಬರು. ಈ ಕುರಿತು ‘ಸಮಾಚಾರ’ ಅಖ್ತರ್‌ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, “ಸಭೆಯಲ್ಲಿದ್ದೇನೆ. ಆಮೇಲೆ ಮಾತನಾಡುತ್ತೇನೆ,” ಎಂಬ ಉತ್ತರ ಬಂತು. ನಂತರ ಅವರ ಸಂಪರ್ಕ ಸಾಧ್ಯವಾಗಲಿಲ್ಲ. ಅತ್ತ ಅವರು ಕೆಪಿಟಿಸಿಎಲ್ ಕಚೇರಿಯಲ್ಲಿಯೂ ಸಿಗಲಿಲ್ಲ, ಇತ್ತ ಉನ್ನತ ಶಿಕ್ಷಣ ಇಲಾಖೆಯ ಕಚೇರಿಯಲ್ಲಿಯೂ ಇರಲಿಲ್ಲ.

“ದಾಖಲೆಗಳ ಪರಿಶೀಲನೆಗೆ ಕಾಲಮಿತಿ ಎಂಬುದು ಇಲ್ಲ. ಅಭ್ಯರ್ಥಿಗಳು ಸಲ್ಲಿಸಿರುವ ದಾಖಲೆಗಳನ್ನು ಸಂಬಂಧಪಟ್ಟ ವಿಶ್ವವಿದ್ಯಾನಿಲಯಗಳಿಗೆ ಕಳುಹಿಸಲಾಗಿತ್ತು. ದೇಶಾದ್ಯಂತ ಸುಮಾರು 50 ವಿಶ್ವವಿದ್ಯಾನಿಲಯಗಳಿಂದ ಮರುತ್ತರದ ನಿರೀಕ್ಷೆಯಲ್ಲಿದ್ದೆವು. ಆದರೆ ಇದನ್ನು ವಿಳಂಬ ಎಂದು ಹೇಳಲು ಹೇಗೆ ಸಾಧ್ಯ?,” ಎಂದು ಪ್ರಶ್ನಿಸುತ್ತಾರೆ ಆಯುಕ್ತ ಅಜಯ್‌ ನಾಗಭೂಷಣ್.

ಕಳೆದ ವಾರ, ಪ್ರತಿಭಟನೆ ನಡೆಸಿದ ಅಭ್ಯರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಅವರು ನೋಟಿಸ್‌ ಹೊರಡಿಸಿದ್ದರು. “ಯುವ ಅಭ್ಯರ್ಥಿಗಳು ಉದ್ಯೋಗದ ಬಗ್ಗೆ ಅಭದ್ರತೆ ಹೊಂದಿರುವ ಕಾರಣ ಸಹಜವಾಗಿಯೇ ಪ್ರತಿಭಟನೆ ದಾರಿ ಹಿಡಿದಿದ್ದರು. 2 ಸಾವಿರ ಅಭ್ಯರ್ಥಿಗಳು ದಿನಾ ಬಂದು ವಿಚಾರಣೆ ನಡೆಸಿದರೆ ನಾವು ಕೆಲಸ ಮಾಡುವುದು ಹೇಗೆ. ಆ ಕಾರಣಕ್ಕೆ ಶಿಸ್ತು ಕ್ರಮದ ಎಚ್ಚರಿಕೆ ನೀಡಲಾಗಿತ್ತು,” ಎಂದು ಅವರು ಸ್ಪಷ್ಟನೆ ನೀಡಿದರು.

ಸದ್ಯ ಕಾಲೇಜು ಶಿಕ್ಷಣ ಇಲಾಖೆ ಕಡೆಯಿಂದ ದಾಖಲೆ ಪೂರ್ಣಗೊಂಡಿದೆ ಎಂಬ ಮಾಹಿತಿ ಹೊರಬಿದ್ದಿದೆ. ಆದರೆ ಸರಕಾರದ ಮಟ್ಟದಲ್ಲಿ ಕೌನ್ಸೆಲಿಂಗ್ ದಿನಾಂಕ ನಿಗದಿ ಹಾಗೂ ನೇಮಕಾತಿ ಆದೇಶ ಹೊರಬೀಳಲು ಇನ್ನೆಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಕಾದುನೋಡಬೇಕಿದೆ. ಈಗಾಗಲೇ ಶೈಕ್ಷಣಿಕ ವರ್ಷ ಆರಂಭವಾಗಿರುವ ಹಿನ್ನೆಲೆಯಲ್ಲಿ ಶೀಘ್ರವಾಗಿ ಪ್ರಕ್ರಿಯೆ ಪೂರ್ಣಗೊಳಿಸುವ ಹೊಣೆ ಉನ್ನತ ಶಿಕ್ಷಣ ಇಲಾಖೆ ಮೇಲಿದೆ. ಹೆಚ್ಚುವರಿ ಹೊಣೆಯನ್ನು ತೆಗೆದುಕೊಂಡಿರುವ ಪ್ರಧಾನ ಕಾರ್ಯದರ್ಶಿ ಹಾಗೂ ವಿದೇಶ ಪ್ರವಾಸದಲ್ಲಿರುವ ಸಚಿವರು ಇದನ್ನು ಗಮನಿಸಬೇಕಿದೆ. ಎರಡು ಸಾವಿರ ಹುದ್ದೆ ಭರ್ತಿಗೆ ಎರಡೂವರೆ ವರ್ಷದ ಪ್ರಕ್ರಿಯೆ ನಡೆಸುವ ಸಂಪ್ರದಾಯಕ್ಕೆ ಪರಿಹಾರವನ್ನೂ ಕಂಡುಕೊಳ್ಳುವ ಅಗತ್ಯವಿದೆ.

Leave a comment

FOOT PRINT

Top