An unconventional News Portal.

ಬ್ರಾಹ್ಮಣ್ಯದಿಂದ ಬಸವತತ್ವದೆಡೆಗೆ: ‘ನಿಷ್ಠೂರವಾದಿ ನಿಜಗುಣಾನಂದ’ ಸ್ವಾಮಿ ನಿಜಕ್ಕೂ ಯಾರು?

ಬ್ರಾಹ್ಮಣ್ಯದಿಂದ ಬಸವತತ್ವದೆಡೆಗೆ: ‘ನಿಷ್ಠೂರವಾದಿ ನಿಜಗುಣಾನಂದ’ ಸ್ವಾಮಿ ನಿಜಕ್ಕೂ ಯಾರು?

ನೀವು ದೇವರನ್ನು ಪೂಜೆ ಮಾಡುವ ಮೊದಲು; ತಂದೆ ತಾಯಿಗಳನ್ನು ಪೂಜೆ ಮಾಡಿ… ಗುರು ಹೇಳುವ ಎಲ್ಲಾ ಮಾತುಗಳನ್ನು ನಂಬಬೇಡಿ… ಮೂಢ ನಂಬಿಕೆಗಳನ್ನು ಆಹಾರ ಮಾಡಿಕೊಂಡ ಪಂಚಾಂಗ ಹೇಳುವವರನ್ನು ವಿರೋಧಿಸಿ, ಅಪ್ಲಿಕೇಶನ್ ಹಾಕಿಕೊಂಡು ಯಾರೂ ಜಾತಿಯಲ್ಲಿ ಹುಟ್ಟುವುದಿಲ್ಲ; ಅಷ್ಟಕ್ಕೂ ಜಾತಿ ಪದ್ಧತಿ ಎಂಬುದೇ ಇಲ್ಲ… ಜನಿವಾರ ಹಾಕಿದಾಕ್ಷಣ ಬ್ರಾಹ್ಮಣ ಆಗುವುದಿಲ್ಲ…ಈ ದೇಶದ ಸಮಸ್ಯೆಗಳಿಗೆ ತುಪ್ಪ ತಿನ್ನುವವರೇ ಕಾರಣ…ನನ್ನನ್ನು ಸ್ವಾಮಿ ಎಂದು ಯಾರೂ ಕರೆಯುವುದಿಲ್ಲ; ಯಾಕೆಂದರೆ ನಾನು ಗುಡಿ- ಗುಂಡಾರ, ಪಾದಪೂಜೆಗಳನ್ನು ನಂಬುವವನಲ್ಲ…

ವಯಸ್ಸು 60ರ ಸಮೀಪದಲ್ಲಿದ್ದೂ ಆರೋಗ್ಯಪೂರ್ಣವಾಗಿರುವ ದೇಹ, ಮುಖದಲ್ಲಿ ಕುರಚಲು ಗಡ್ಡ, ಸದಾ ಕಾವಿ ಜುಬ್ಬ ಮತ್ತು ಪಂಚೆ, ತಲೆಯ ಮೇಲೆಯೂ ಅದೇ ಬಣ್ಣದ ವಸ್ತ್ರ ತೊಟ್ಟು ಬಹಿರಂಗವಾಗಿ ಕಾಣಿಸಿಕೊಳ್ಳುವವರು ನಿಜಗುಣಾನಂದ ಸ್ವಾಮಿ. ಮಾತಿಗೆ ನಿಂತರೆ ತಮ್ಮದೇ ಶೈಲಿಯಲ್ಲಿ ವಿಚಾರಗಳನ್ನು ಮಂಡಿಸುವ ಕಲೆ ಅವರಿಗೆ ಸಿದ್ಧಿಸಿದಂತಿದೆ. ಈ ಕಾರಣಕ್ಕೆ ಚಿತ್ರದುರ್ಗ ಭಾಗದಲ್ಲಿ ‘ಬುಲೆಟ್ ಸ್ವಾಮಿ’ ಎಂದೇ ಹೆಸರುವಾಸಿಯಾಗಿದ್ದಾರೆ. ಬುಲೆಟ್ ರೈಲಿನ ವೇಗದಲ್ಲಿ ವಿಚಾರಗಳನ್ನು ದಾಟಿಸುತ್ತಾರೆ ಎಂಬುದನ್ನು ಜನ ಸೂಚ್ಯವಾಗಿ ಒಪ್ಪಿಕೊಂಡಿದ್ದಕ್ಕೆ ಇದು ನಿದರ್ಶನ. ಇಂತಹ ಸ್ವಾಮಿ ತಮ್ಮ ಪ್ರವಚನ ಮೂಲಕ ಜನರ ನಂಬಿಕೆ, ಧರ್ಮ, ಸಾಮಾಜಿಕ ಸಮಸ್ಯೆಗಳು, ರಾಜಕೀಯ ವಿಚಾರಗಳನ್ನು ಮಂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಮೇಲಿನವು ಅವರ ಭಾಷಣದಿಂದ ಆಯ್ದ ಕೆಲವು ಹೇಳಿಕೆಗಷ್ಟೆ. ಇತ್ತೀಚೆಗೆ ಅವರ ಭಾಷಣದ ಕೆಲವು ವಿಡಿಯೋಗಳು ಯೂ- ಟ್ಯೂಬ್‌ಗೂ ಅಪ್‌ಲೋಡ್ ಆಗಿವೆ. ಲಕ್ಷ ಲಕ್ಷ ಜನರಿಂದ ವೀಕ್ಷಣೆಗೆ ಒಳಪಟ್ಟಿವೆ. ಅವರ ವೈಚಾರಿಕ ಅಭಿಪ್ರಾಯಗಳು ಸಹಜವಾಗಿಯೇ ಕೆಲವರ ನಿದ್ದೆಗೆಡಿಸಿವೆ. ವಿರೋಧಗಳೂ ವ್ಯಕ್ತವಾಗಿವೆ.

ಇಷ್ಟಕ್ಕೂ, ಯಾರು ಈ ನಿಜಗುಣಾನಂದ ಸ್ವಾಮಿ? ಅವರ ಪೂರ್ವಾಶ್ರಮದ ಕತೆ ಏನು? ಭಾಷಣ ಮೂಲಕ ರಾಜ್ಯದ ಜನರನ್ನು ತಲುಪುವ ಅವರ ಉದ್ದೇಶಗಳೇನಿವೆ? ಅವರನ್ನು ಹತ್ತಿರದಿಂದ ಬಲ್ಲವರು ಹೇಳುವ ಮಾತುಗಳೇನು? ಈ ಕುರಿತು ‘ಸಮಾಚಾರ’ದ ವರದಿ ಬೆಳಕು ಚೆಲ್ಲಲಿದೆ.

ಅದು ನಿಷ್ಕಲ ಮಂಟಪ:

ಬೆಳಗಾವಿ ಜಿಲ್ಲೆಯ ಬೈಲೂರಿನಲ್ಲಿ ‘ನಿಷ್ಕಲ ಮಂಟಪ’ ನಿಜಗುಣಾನಂದರ ಸದ್ಯದ ನೆಲೆ. ಮಂಗಳೂರಿನ ಕಾಸರಗೋಡಿನ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಅವರ ತಂದೆ ಕೆಇಬಿಯಲ್ಲಿ ಕೆಲಸ ಮಾಡುತ್ತಿದ್ದವರು. “ತಂದೆಗೆ ಆಗಾಗ್ಗೆ ವರ್ಗಾವಣೆಯಾಗುತ್ತಲೇ ಇರುತ್ತಿತ್ತು. ಮಂಗಳೂರು ಬಿಟ್ಟು ಮೈಸೂರಿಗೆ ಬರುವಾಗ ನಾನು ಎಸ್‌ಎಸ್‌ಎಲ್‌ಸಿಯಲ್ಲಿದ್ದೆ,” ಎನ್ನುತ್ತಾರೆ ನಿಜಗುಣಾನಂದ ಸ್ವಾಮಿ. “ನಾನು ನನ್ನ ಪೂರ್ವಾಶ್ರಮವನ್ನು ಸಂಪೂರ್ಣವಾಗಿ ಬಿಟ್ಟಿದ್ದೇನೆ. ಈಗ ಅವರ ಜತೆಗೆ ಯಾವ ಸಂಬಂಧವೂ ಇಲ್ಲ. ಅವರು ಹುಟ್ಟಿಸಿದರು, ಬೆಳೆಸಿದರು. ಅದರ ಆಚೆಗೆ ನಾನು ಇವತ್ತು ಮಾಡುತ್ತಿರುವ ಕೆಲಸದಲ್ಲಿ ಅವರ ಸಂಬಂಧಗಳೇನೂ ಇಲ್ಲ. ಹೀಗಾಗಿ ಈ ಕುರಿತು ಹೆಚ್ಚಿನ ಮಾಹಿತಿ ಅಗತ್ಯವಿಲ್ಲ,” ಎನ್ನುತ್ತಾರೆ ಅವರು.

ಅವರನ್ನು ಸಮೀಪದಿಂದ ನೋಡಿದವರ ಪ್ರಕಾರ, ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಮಯದಲ್ಲಿ ಲಿಂಗಾನಂದ ಸ್ವಾಮಿಗಳ ಪ್ರವಚನಕ್ಕೆ ಮಾರು ಹೋಗಿ ಲಿಂಗದೀಕ್ಷೆಯನ್ನು ಪಡೆದವರು ನಿಜಗುಣಾನಂದ ಸ್ವಾಮಿ. “ಲಿಂಗಾನಂದ ಸ್ವಾಮಿಗಳು ಅವರ ಕ್ರಾಂತಿಕಾರಿ ಪ್ರವಚನಗಳ ಕಾರಣಕ್ಕೆ ದೊಡ್ಡ ಸಮೂಹವನ್ನು ಹಿಂಬಾಲಕರಾಗಿ ಪಡೆದುಕೊಂಡವರು. ಇವತ್ತು ದೇಶದಲ್ಲಿ ವಚನ ಚಳವಳಿ ಜೀವಂತವಾಗಿದ್ದರೆ ಅದಕ್ಕೆ ಕಾರಣ ಲಿಂಗಾನಂದ ಸ್ವಾಮಿ. ಅಂತವರ ಗರಡಿಯಲ್ಲಿ ಬೆಳೆದವರು ನಿಜಗುಣಾನಂದ ಸ್ವಾಮಿ,” ಎನ್ನುತ್ತಾರೆ ಗಜೇಂದ್ರಘಡದ ರವೀಂದ್ರ ಹೊನವಾಡ.

ಲಿಂಗಾನಂದ ಸ್ವಾಮಿ.

ಲಿಂಗಾನಂದ ಸ್ವಾಮಿ.

ನಿಜಗುಣಾನಂದ ಸ್ವಾಮಿ ತೋಂಟದಾರ್ಯ ಮಠದ ಮಂಡರಗಿ ಶಾಖಾ ಮಠದ ಉಸ್ತುವಾರಿಯನ್ನೂ ನೋಡಿಕೊಳ್ಳುತ್ತಿದ್ದಾರೆ. ಜತೆಗೆ, ಮಠದ ಉತ್ತರಾಧಿಕಾರಿ ಎಂಬ ಮಾತುಗಳೂ ಕೇಳಿಬರುತ್ತವೆ.

ಮಾತಿಗಿಂತ ಕ್ರಿಯೆಗೆ ಒತ್ತು:

ನಿಜಗುಣಾನಂದ ಸ್ವಾಮಿ ಮಾತುಗಳಿಗಳಿಂತ ಕೆಲಸಗಳ ಕಾರಣಕ್ಕೆ ಈ ಭಾಗದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ್ದಾರೆ ಎಂಬುದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುವ ಮಾತುಗಳು. “ಶ್ರಾವಣ ಮಾಸಗಳಲ್ಲಿ ಅವರ ಪ್ರವಚನಗಳಿಗೆ ಸಾವಿರಾರು ಜನ ಸೇರುತ್ತಾರೆ. ಈ ಸಮಯದಲ್ಲಿ ಕೇವಲ ಭಾಷಣಗಳಿಗೆ ಮಾತ್ರವೇ ಅವರು ಸೀಮಿತರಾಗಿರುವುದಿಲ್ಲ. ಜತೆಗೆ, ಕ್ರಿಯೆಗಳಲ್ಲಿಯೂ ತಾವು ನಂಬಿದ ಸಿದ್ಧಾಂತವನ್ನು ಪ್ರತಿಪಾದನೆ ಮಾಡುವ ಕೆಲಸ ಮಾಡುತ್ತಾರೆ. ಉದಾಹರಣೆಗೆ; ಈ ಸಮಯದಲ್ಲಿ ನಡೆಯುವ ಕುಂಭಮೇಳ, ಮೆರವಣಿಗೆಯ ಉದ್ಘಾಟನೆಯನ್ನು ವಿಧವೆಯರಿಂದ ಮಾಡಿಸುತ್ತಾರೆ. ಸಾಮೂಹಿಕ ಭೋಜನಕ್ಕೆ ಉತ್ತೇಜನ ನೀಡುತ್ತಾರೆ,” ಎನ್ನುತ್ತಾರೆ ಬಳ್ಳಾರಿಯ ಹಿರಿಯ ಪತ್ರಕರ್ತ ಇಮಾಮ್‌ಸಾಬ್ ಗೋಡೆಕರ್.

“ಇತ್ತಿಚೆಗೆ ಆನ್‌ಲೈನ್‌ ಮೀಡಿಯಾ ಬಂದ ನಂತರ ಸ್ವಾಮಿಜಿ ಮಾತುಗಳು ಹೆಚ್ಚು ಹೊಸ ತಲೆಮಾರಿಗೆ ತಲುಪಿವೆ. ಆದರೆ ಸುಮಾರು ಎರಡು ದಶಕಗಳಿಂದ ಈ ಭಾಗಗಳಲ್ಲಿ ಅವರ ಪ್ರವಚನಗಳು ನಡೆದುಕೊಂಡು ಬಂದಿವೆ. ಬಸವತತ್ವವನ್ನು ಬ್ರಾಹ್ಮಣ್ಯದ ನೆಲೆಯಿಂದ ಬೇರ್ಪಡಿಸುವ ಅವರ ಮಾತುಗಳು ಹಿಂದಿನಿಂದಲೂ ವೈಚಾರಿಕ ಸಂಘರ್ಷಕ್ಕೆ ಅನುವು ಮಾಡಿಕೊಟ್ಟಿವೆ. ಅವರ ಮಾತುಗಳನ್ನು ತಡೆಯುವ ಪ್ರಯತ್ನಗಳೂ ನಡೆದಿದ್ದವು. ಇತ್ತೀಚೆಗೆ ವಿರೋಧ ಜಾಸ್ತಿಯಾಗಿದೆ,” ಎನ್ನುತ್ತಾರೆ ಇಮಾಮ್‌ಸಾಬ್.

ನಿಜಗುಣಾನಂದ ಸ್ವಾಮಿ ಮಾತುಗಳ ಜತೆಗೆ ಅವರ ನಡವಳಿಕೆ ಕೂಡ ಜನರ ಆಕರ್ಷಿಸಲು ಕಾರಣ ಎನ್ನುತ್ತಾರೆ ರವೀಂದ್ರ ಹೊನವಾಡ. “ಗಜೇಂದ್ರಘಡದಲ್ಲಿ ಪ್ರವಚನ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಿದ್ದೆವು. ಈ ಸಮಯದಲ್ಲಿ ಇಲ್ಲಿರುವ 40- 50 ಪೌರ ಕಾರ್ಮಿಕರಿಗೆ ಸನ್ಮಾನ ಮಾಡುವ ಯೋಜನೆ ಹಾಕಿಕೊಂಡಿದ್ದೆವು. ಇದನ್ನು ಸ್ವಾಮಿಜಿಗೂ ಹೇಳಿದ್ದೆವು. ಈ ಕುರಿತು ವಿಚಾರ ಮಾಡಿದ ಅವರು, ತಾವು ಉಳಿದುಕೊಂಡಿದ್ದ ಜಾಗದಲ್ಲಿ ಪೌರ ಕಾರ್ಮಿಕರಿಗೆ ಊಟ ಹಾಕಲು ಆಲೋಚನೆ ಮಾಡಿದರು. ಅವರೇ ಖುದ್ದಾಗಿ ಅಡುಗೆ ಮಾಡಿ ಅವತ್ತು ಪೌರಕಾರ್ಮಿಕರಿಗೆ ಬಡಿಸಿದ್ದರು,” ಎಂದು ಘಟನೆಯೊಂದನ್ನು ನೆನಪು ಮಾಡಿಕೊಳ್ಳುತ್ತಾರೆ ಅವರು.

ನಿಷ್ಠೂರವಾದಿ ಸ್ವಾಮಿ:

ಕರ್ನಾಟಕದ ಮಠಾದೀಶದ ಪೈಕಿ ಅನೇಕರು ಜನಪರವಾಗಿರುವ ವಿಚಾರಗಳ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಅಂತವರ ಸಾಲಿನಲ್ಲಿ ನಿಜಗುಣಾನಂದ ಸ್ವಾಮಿ ಕೂಡ ಸದ್ಯ ಸದ್ದು ಮಾಡುತ್ತಿದ್ದಾರೆ. “ಇವರ ಮಾತುಗಳು ಮೌಢ್ಯವನ್ನು ವಿರೋಧಿಸುತ್ತವೆ. ದೇವರ ಹೆಸರಿನಲ್ಲಿ ಕಂದಾಚಾರವನ್ನು ತೊಡೆಯುವ ಪ್ರಯತ್ನ ಮಾಡುತ್ತವೆ. ಜನರನ್ನು ಜಾಗೃತಿ ಮಾಡುವ ಪ್ರಯತ್ನ ಅವರ ಪ್ರತಿ ಹೆಚ್ಚೆಯಲ್ಲಿಯೂ ಕಾಣಿಸುತ್ತದೆ. ತಮ್ಮ ವಿಚಾರಗಳನ್ನು ಜನರಿಗೆ ತಲುಪಿಸಲು ಏನು ಮಾಡಬೇಕು ಎಂಬ ವ್ಯವಹಾರ ಜ್ಞಾನವೂ ಅವರಲ್ಲಿದೆ. ಕಳೆದ 10 ವರ್ಷಗಳಲ್ಲಿ ಅವರ ಪ್ರವಚನಗಳಿಗೆ ಸಿಗುತ್ತಿರುವ ಮನ್ನಣೆ ಇಮ್ಮಡಿಯಾಗಿದೆ,” ಎನ್ನುತ್ತಾರೆ ಮಲ್ಲಿಕಾರ್ಜುನ್ ದೇವರು. ನಿಜಗುಣಾನಂದ ಸ್ವಾಮಿ ಅವರ ವಿಚಾರಗಳ ಕುರಿತು ಬರೆದ ‘ನಿಷ್ಠೂರ ವಾದಿ’ ಹೆಸರಿನ ಪುಸ್ತಕದ ಲೇಖಕರು ಅವರು.

ಇತ್ತೀಚೆಗೆ ಕರ್ನಾಟಕ ಸರಕಾರ ಲಿಂಗಾಯತ ಧರ್ಮದ ಸ್ಥಾನಮಾನಕ್ಕಾಗಿ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದೆ. ಹಿಂದೂ ಧರ್ಮದಿಂದ ಹೊರತಾದ, ಬಸವಣ್ಣ ಪ್ರತಿಪಾದಿಸಿದ ಮೌಲ್ಯಗಳನ್ನು ಪ್ರತ್ಯೇಕ ಧರ್ಮ ಎಂದೇ ಪರಿಗಣಿಸಬೇಕು ಎಂಬ ಒತ್ತಾಯಗಳು ಸಮುದಾಯದ ಒಳಗೇ ಕೇಳಿಬರುತ್ತಿವೆ. ಇದಕ್ಕೆ ನಿಜಗುಣಾನಂದ ಸ್ವಾಮಿ ಕೂಡ ದನಿಗೂಡಿಸಿದ್ದಾರೆ. “ಬಸವಣ್ಣ ಹೇಳಿದ್ದನ್ನು ತಪ್ಪಾಗಿ ಅರ್ಥೈಸು ಕೆಲಸ ವ್ಯವಸ್ಥಿತವಾಗಿ ನಡೆದುಕೊಂಡು ಬಂದಿದೆ. ಗುರು ಎಂದರೆ ವ್ಯಕ್ತಿ ಅಲ್ಲ; ಬದಲಿಗೆ ಅರಿವು. ಲಿಂಗ ಎಂದರೆ ಕಲ್ಲು ಅಲ್ಲ; ಬದಲಿಗೆ ನಿರೀಕ್ಷಣೆ. ಜಂಗಮ ಎಂದರೆ ಅನುಭಾವ. ವಿಭೂತಿ ಎಂದರೆ ಭಸ್ಮ ಅಲ್ಲ. ಆದರೆ ಇವನ್ನೆಲ್ಲವನ್ನೂ ವ್ಯವಸ್ಥಿತವಾಗಿ ವೈದಿಕ ಪರಂಪರೆಯ ನೆಲೆಯಲ್ಲಿ ಜನರಿಗೆ ತಲುಪಿಸುವ ಹುನ್ನಾರ ನಡೆದಿದೆ. ಇದಕ್ಕಾಗಿ ಹಿಂದೂ ಧರ್ಮದಿಂದ ಹೊರತಾದ ಸ್ಥಾನಮಾನದ ಅಗತ್ಯವಿದೆ,” ಎನ್ನುತ್ತಾರೆ ನಿಜಗುಣಾನಂದ ಸ್ವಾಮಿ.

ಇವರ ಇಂತಹ ನಿಲುವು ಸಹಜವಾಗಿಯೇ ವಿರೋಧದ ಅಲೆಯನ್ನು ಎಬ್ಬಿಸುತ್ತಿವೆ. ಈವರೆಗೂ ಇದ್ದ ನಂಬಿಕೆಗಳಿಗೆ ಇವು ಪೆಟ್ಟು ನೀಡುತ್ತಿವೆ. “ಇಂತಹ ವಿರೋಧ ಕರ್ಬುರ್ಗಿಯರಿಗೂ ಬಂದಿತ್ತು. ಇದೀಗ ನಿಜಗುಣಾನಂದ ಸ್ವಾಮಿ ಬಗ್ಗೆ ಬರುತ್ತಿದೆ. ಇದರಲ್ಲಿ ಅಚ್ಚರಿ ಏನಿಲ್ಲ. ಸ್ವಾಮಿಜಿ ಭಾ‍ಷಣದ ಓಘದಲ್ಲಿ ಹೇಳಿದ ಕೆಲವು ಅಂಕಿ ಅಂಶಗಳನ್ನು ಇಟ್ಟುಕೊಂಡು ಸುಳ್ಳು ಹೇಳುತ್ತಿದ್ದಾರೆ ಎಂಬ ಅಪಪ್ರಚಾರ ನಡೆಸುವ ಕೆಲಸ ಆಗುತ್ತಿದೆ. ಆದರೆ ಅವರು ವೈಚಾರಿಕ ನೆಲೆಯಲ್ಲಿ ಪ್ರಸ್ತಾಪಿಸಿ, ಮೌಢ್ಯದ ನಂಬಿಕೆಗಳ ಬಗ್ಗೆ ಆಡಿದ ಮಾತುಗಳ ಕುರಿತು ಯಾರೂ ಮಾತನಾಡುವ ಎದೆಗಾರಿಕೆ ತೋರಿಸುತ್ತಿಲ್ಲ,” ಎನ್ನುತ್ತಾರೆ ಲೇಖಕರಾದ ಜಗದೀಶ್ ಪಾಟೀಲ್.

ಒಟ್ಟಾರೆ, ಬ್ರಾಹ್ಮಣ ಕುಟುಂಬವೊಂದರಲ್ಲಿ ಹುಟ್ಟಿ, ನಂತರ ದಿನಗಳಲ್ಲಿ ಬಸವ ತತ್ವದದೆಡೆಗೆ ಆಕರ್ಷಿತರಾದ ನಿಜಗುಣಾನಂದ ಸ್ವಾಮಿ ಬ್ರಾಹ್ಮಣ್ಯದ ವಿರುದ್ಧ ತಮ್ಮ ಪ್ರವಚನದ ಕಾರಣಕ್ಕೇ ಆಸಕ್ತಿ ಮೂಡಿಸುತ್ತಿದ್ದಾರೆ. “ನಾನು ಎಸ್‌ಎಸ್‌ಎಲ್‌ಸಿ ನಂತರ ಓದಲಿಲ್ಲ. ಇಂಗ್ಲಿಷ್ ಜ್ಞಾನ ಸ್ವಲ್ಪ ಕಡಿಮೆ. ನನ್ನ ತಿಳಿವಳಿಕೆ ಮಿತಿಯಲ್ಲಿಯೇ ನಿಜವಾದ ಬಸವಣ್ಣನನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇನೆ. ಇದನ್ನು ಜನ ಒಪ್ಪಲಿ ಅಥವಾ ವಿರೋಧ ಮಾಡಲಿ ಎಂಬ ಕಾರಣಕ್ಕೆ ಅಲ್ಲ; ಬದಲಿಗೆ ಅದು ನನ್ನ ಕರ್ತವ್ಯ,” ಎನ್ನುತ್ತಾರೆ ನಿಜಗುಣಾನಂದ.

“ಕಾವಿಯನ್ನು ಹಾಕಲೇಬೇಕು ಎಂದು ಯಾವ ಧರ್ಮವೂ ಹೇಳಿಲ್ಲ. ಜೈನ ಧರ್ಮದಲ್ಲಿ ಕಾವಿಯೇ ಇಲ್ಲ. ಆದರೂ, ಇವತ್ತಿನ ಪರಿಸ್ಥಿತಿಯಲ್ಲಿ ಕಾವಿ ಹಾಕದಿದ್ದರೆ ಜನರನ್ನು ತಲುಪುವುದು ಕಷ್ಟ. ಹೀಗಾಗಿ ನಾನೂ ಕೂಡ ಕಾವಿ ಹಾಕುತ್ತೇನೆ. ಮುಂದೊಂದು ದಿನ ಕಾವಿ ಇಲ್ಲದೆಯೇ ಬಸವಣ್ಣನ ವಿಚಾರವನ್ನು ಜನರಿಗೆ ತಲುಪಿಸುವ ವಾತಾವರಣ ಸಿದ್ಧಗೊಂಡರೆ ನನಗೆ ಕಾವಿಯ ಅಗತ್ಯವೇ ಇಲ್ಲ,” ಎಂದು ‘ಸಮಾಚಾರ’ದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು ನಿಜಗುಣಾನಂದ ಸ್ವಾಮಿ.

 

Leave a comment

FOOT PRINT

Top