An unconventional News Portal.

‘ಕುಚ್‌ ಕಟ್ಟಾ- ಕುಚ್ ಮೀಟಾ’: ಜಿಎಸ್‌ಟಿ ಜಾರಿ ವೇಳೆಯಲ್ಲಿ ಒಂದಿಷ್ಟು ಪ್ರಮುಖ ಅಂಶಗಳು

‘ಕುಚ್‌ ಕಟ್ಟಾ- ಕುಚ್ ಮೀಟಾ’: ಜಿಎಸ್‌ಟಿ ಜಾರಿ ವೇಳೆಯಲ್ಲಿ ಒಂದಿಷ್ಟು ಪ್ರಮುಖ ಅಂಶಗಳು

‘ಒಂದು ದೇಶ; ಒಂದೇ ತೆರಿಗೆ’…

ಇದು ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಹೆಸರಿನ ಹೊಸ ತೆರಿಗೆ ಪದ್ಧತಿ ದೇಶದಲ್ಲಿ ಜಾರಿಗೆ ಬರುತ್ತಿರುವ ಹೊತ್ತಿನಲ್ಲಿ ಕೇಳಿಬರುತ್ತಿರುವ ಟ್ಯಾಗ್‌ಲೈನ್. ಸುಮಾರು 6 ಕೋಟಿ ಸಣ್ಣ ವರ್ತಕರನ್ನು ಹೊಂದಿರುವ, ದೊಡ್ಡ ಸಂಖ್ಯೆಯಲ್ಲಿ ಇನ್ನೂ ಡಿಜಿಟಲೀಕರಣಕ್ಕೆ ಒಳಗಾಗದ ಮಾರುಕಟ್ಟೆಯನ್ನು ಬಳಸುತ್ತಿರುವ ಜನರಿರುವ, ತೆರಿಗೆ ವ್ಯವಸ್ಥೆಯ ಕುರಿತು ದೊಡ್ಡ ಸಂಖ್ಯೆಯಲ್ಲಿ ಯೋಚನೆಯನ್ನೇ ಮಾಡದ ಭಾರತದಲ್ಲಿ ಜಿಎಸ್‌ಟಿ ದೊಡ್ಡ ಸದ್ದಿನೊಂದಿಗೆ ಶುಕ್ರವಾರ ಮಧ್ಯರಾತ್ರಿ ಜಾರಿಗೆ ಬರಲಿದೆ. ಈ ಹಿಂದೆ ಮೌಲ್ಯವರ್ಧಿತ ತೆರಿಗೆ ಪದ್ಧತಿಯ ಜಾಗವನ್ನು ಜಿಎಸ್‌ಟಿ ಆಕ್ರಮಿಸಿಕೊಳ್ಳಲಿದೆ.

ಇದನ್ನು ಜಾರಿಗೊಳಿಸುವ ಮೂಲಕ ಬೃಹತ್ ದೇಶವನ್ನು ಒಂದೇ ಮಾದರಿಯ ತೆರಿಗೆ ಪದ್ಧತಿಗೆ ಒಳಪಡಿಸಲಾಗುತ್ತದೆ. ತೆರಿಗೆ ವ್ಯವಸ್ಥೆಯಿಂದ ಹೊರಗುಳಿದ ವ್ಯಕ್ತಿಗಳನ್ನು, ಉದ್ಯಮಗಳನ್ನು ಒಳಕ್ಕೆ ಎಳೆದುಕೊಳ್ಳಲಾಗುತ್ತದೆ. ಸರಕಾರಗಳ (ಕೇಂದ್ರ ಮತ್ತು ರಾಜ್ಯ) ಆದಾಯ ಹೆಚ್ಚಾಗುತ್ತದೆ. ದೇಶದ ಜಿಡಿಪಿ (ಒಟ್ಟು ರಾಷ್ಟ್ರೀಯ ಉತ್ಪನ್ನ) ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತಿದೆ. ಅದೇ ವೇಳೆಯಲ್ಲಿ ಹೊಸ ತೆರಿಗೆ ಪದ್ಧತಿಯಲ್ಲಿಯೂ ನ್ಯೂನತೆಗಳಿವೆ. ಇದು ಮಧ್ಯಮ ವರ್ಗದ ಜನರನ್ನು ಇನ್ನಷ್ಟು ಸುಲಿಯುವ ಕೆಲಸ ಎಂಬ ವಿಶ್ಲೇಷಣೆಗಳು ಚಾಲ್ತಿಯಲ್ಲಿವೆ. ಈ ಹಿಂದೆ ಕಪ್ಪು ಹಣ ಹಾಗೂ ನಕಲಿ ನೋಟುಗಳ ವಿರುದ್ಧದ ಸಮರ ಎಂದು ಬಿಂಬಿಸಲ್ಪಟ್ಟಿದ್ದ ನೋಟುಗಳ ಅಮಾನ್ಯೀಕರಣ ಪ್ರಕ್ರಿಯೆ ದೇಶದ ಸಾಮಾನ್ಯ ಜನರನ್ನು ದೊಡ್ಡ ಪ್ರಮಾಣದಲ್ಲಿ ಗೋಳು ಹೊಯ್ದುಕೊಂಡಿತ್ತು. ಇವತ್ತಿಗೂ ಅದರ ಪರಿಣಾಮಗಳನ್ನು ಸಾಮಾನ್ಯ ಜನ ನಾನಾ ರೂಪಗಳಲ್ಲಿ ಅನುಭವಿಸುತ್ತಿದ್ದಾರೆ. ಇಂತಹ ವೇಳೆಯಲ್ಲಿಯೇ, ಜಿಎಸ್‌ಟಿ ಜಾರಿಗೆ ಬರುತ್ತಿದೆ. ಇದು ಬೀರುವ ಪರಿಣಾಮಗಳಿಂದ ದೇಶದ ಅರ್ಥ ವ್ಯವಸ್ಥೆ ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತದೆ ಎಂಬ ಆತಂಕಗಳು ಸಹಜವಾಗಿಯೇ ಗಮನ ಸೆಳೆಯುತ್ತಿವೆ.

ಈಗಾಗಲೇ ತೃಣಮೂಲ ಕಾಂಗ್ರೆಸ್, ಕಾಂಗ್ರೆಸ್ ಮತ್ತಿತರ ರಾಜಕೀಯ ಪಕ್ಷಗಳು ಜಿಎಸ್‌ಟಿ ಜಾರಿಗೆ ನಿಗದಿಯಾಗಿರುವ ಮಧ್ಯರಾತ್ರಿ ಕಾರ್ಯಕ್ರಮವನ್ನು ಬಹಿಷ್ಕರಿಸಿವೆ. ಅದೆಲ್ಲಕ್ಕಿಂತ ಹೆಚ್ಚಾಗಿ ಪ್ರಧಾನಿ ಮೋದಿ ಅವರ ತವರು ಕ್ಷೇತ್ರ ವಾರಣಾಸಿಯಲ್ಲಿಯೇ ವರ್ತಕರು ಶನಿವಾರ ಒಂದು ದಿನ ಬಂದ್ ಆಚರಣೆಗೆ ಕರೆ ನೀಡಿದ್ದಾರೆ. ಇಂತಹ ರಾಜಕೀಯ ಹಾಗೂ ಜನರ ವಿರೋಧಗಳ ನಡುವೆಯೂ ಸುಮಾರು 17 ವರ್ಷಗಳಿಂದ ನಾನಾ ಮಾರ್ಪಾಟುಗಳಿಗೆ ಒಳಗಾದ ಜಿಎಸ್‌ಟಿ ಕೊನೆಗೂ ಜಾರಿಗೆ ಬರುತ್ತಿದೆ. ಈಗಾಗಲೇ ಮುಂದುವರಿದ ದೇಶಗಳಲ್ಲಿ ಇಂತಹದ್ದೇ ಏಕರೂಪ ತೆರಿಗೆ ಪದ್ಧತಿ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಭಾರತ ಕೂಡ ಆ ನಿಟ್ಟಿನಲ್ಲಿ ಮಹತ್ವದ ನಿರ್ಣಯಕ್ಕೆ ಮುಂದಾಗಿದೆ ಎಂಬ ಸಹಜ ಸಂತೋಷ ವ್ಯಕ್ತವಾಗುತ್ತಿದೆ.

ಈಗಾಗಲೇ ಜಿಎಸ್‌ಟಿ ಎಂದರೇನು ಎಂಬುದನ್ನು ಸರಳವಾಗಿ ವಿವರಿಸುವ ನಾನಾ ಪ್ರಯತ್ನಗಳನ್ನು ನಡೆದಿವೆ. ಈ ಕುರಿತು ಒಂದು ತಮಾಷೆಯ ಸಂದೇಶ ಹೀಗಿದೆ; ಹಳೆಯ ತೆರಿಗೆ ಪದ್ಧತಿ ಎಂದರೆ; ನೀವು ಬ್ಯಾಚುಲರ್ ಆಗಿದ್ದು ಕುಡಿದು ಮನೆಗೆ ಹೋದರೆ, ಮೊದಲು ತಂಗಿಗೆ, ನಂತರ ತಾಯಿಗೆ, ಕೊನೆಯಲ್ಲಿ ತಂದೆಗೆ ಉತ್ತರ ನೀಡಬೇಕಾಗುತ್ತಿತ್ತು. ಜಿಎಸ್‌ಟಿ ಬಂದ ಮೇಲೆ ನೀವು ಮದುವೆಯಾದ ಗೃಹಸ್ಥನಂತೆ. ಕುಡಿದು ಮನೆಗೆ ಹೋದರೆ ಪತ್ನಿಗೆ ಮಾತ್ರವೇ ಉತ್ತರ ನೀಡಿದರೆ ಸಾಕು! ಈ ಮೂಲಕ ಜಿಎಸ್‌ಟಿ ಎಂದರೆ ಒಂದು ದೇಶ; ಏಕರೂಪದ ತೆರಿಗೆ ವ್ಯವಸ್ಥೆ ಎಂಬುದನ್ನು ಸೂಚ್ಯವಾಗಿ ವಿವರಿಸುವ ಕೆಲಸ ನಡೆಯುತ್ತಿದೆ. ಹಾಗಾದರೆ ಜಿಎಸ್‌ಟಿ ಏಕರೂಪದ ತೆರಿಗೆ ರೂಪದ ವ್ಯವಸ್ಥೆನಾ? ಇದರಿಂದ ಜಿಡಿಪಿ ಮೇಲೆ ಆಗುವ ಪರಿಣಾಮಗಳೇನು? ಸರಕಾರಗಳ ಆದಾಯ ಹೆಚ್ಚಾಗುತ್ತಾ? ಜಿಎಸ್‌ಟಿ ಜಾರಿಗೆ ಮುನ್ನಾ ಯಾರ ಹಿತಾಸಕ್ತಿಗಳನ್ನೂ ಕಾಪಾಡಿಲ್ಲವಾ? ಇದರ ಜಾರಿಯಿಂದ ತಕ್ಷಣದ ಪರಿಣಾಮಗಳೇನಾಗುತ್ತವೆ? ಇಂತಹ ಕೆಲವು ಪ್ರಮುಖ ಪ್ರಶ್ನೆಗಳಿಗೆ ‘ಸಮಾಚಾರ’ ಇಲ್ಲಿ ಖಚಿತ ಉತ್ತರ ನೀಡಿದೆ.

ಏಕರೂಪದ ತೆರಿಗೆ ಹೇಗೆ?: 

ಜಿಎಸ್‌ಟಿಯಲ್ಲಿರುವ ತೆರಿಗೆ ಸ್ಥರಗಳು ಹೀಗಿವೆ. (ಕೃಪೆ: ಗೂಗಲ್)

ಜಿಎಸ್‌ಟಿಯಲ್ಲಿರುವ ತೆರಿಗೆ ಸ್ಥರಗಳು ಹೀಗಿವೆ. (ಕೃಪೆ: ಸ್ಟಡಿ ದಾಬಾ)

ಇತರೆ ದೇಶಗಳಂತೆ ಭಾರತದಲ್ಲಿ ಜಿಎಸ್‌ಟಿ ಏಕರೂಪದ ತೆರಿಗೆ ವ್ಯವಸ್ಥೆ ಅಲ್ಲ ಎಂಬುದನ್ನು ಮೊದಲು ಗಮನಿಸಬೇಕಿದೆ. ಪ್ರಮುಖವಾಗಿ ನಾಲ್ಕು ಸ್ಥರಗಳ (5%, 12%, 18%, 28%) ತೆರಿಗೆ ವ್ಯವಸ್ಥೆಯನ್ನು ಜಿಎಸ್‌ಟಿ ಹೊಂದಿದೆ.

ಹಿಂದೆ ಜಾರಿಯಲ್ಲಿದ್ದ ಎಕ್ಸೈಸ್ ಡ್ಯೂಟಿ, ಕಸ್ಟಮ್ಸ್ ಡ್ಯೂಟಿ, ಆಯಾ ರಾಜ್ಯ ಸರಕಾರಗಳು ವಿಧಿಸುತ್ತಿದ್ದ ನಾನಾ ತೆರಿಗೆಗಳ ಬದಲಿಗೆ ದೇಶಾದ್ಯಂತ ಎಲ್ಲಾ ಸರಕು ಹಾಗೂ ಸೇವೆಗಳಿಗೆ ಈ ನಾಲ್ಕು ಸ್ಥರಗಳ ತೆರಿಗೆ ಅಳವಡಿಸಲಾಗುತ್ತದೆ.

ಈ ಹಿಂದೆ ಯಾವುದೋ ನಿರ್ದಿಷ್ಟ ಬ್ರ್ಯಾಂಡ್‌ ಸೋಪಿನ ಬೆಲೆ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯಲ್ಲಿತ್ತು. ಆದರೆ ಇದೀಗ ಅದೇ ಸೋಪು ಶೇ. 18ರ ತೆರಿಗೆ ಅಡಿಯಲ್ಲಿ ಬರುವುದರಿಂದ ಎಲ್ಲಾ ರಾಜ್ಯಗಳಲ್ಲೂ ಆ ಸೋಪಿನ ಬೆಲೆ ಒಂದೇ ಆಗಿರಲಿದೆ.

ಈ ನಾಲ್ಕು ಸ್ಥರಗಳನ್ನು ಹೊರತು ಪಡಿಸಿಯೂ ಕೆಲವು ಉತ್ಪನ್ನಗಳಿಗೆ ಶೇ. ಸೊನ್ನೆ ತೆರಿಗೆ ಹಾಗೂ ಶೇ. 28ಕ್ಕಿಂತ ಹೆಚ್ಚು ತೆರಿಗೆಯನ್ನು ವಿಧಿಸಲಾಗುತ್ತದೆ. ಅಂದರೆ, ಜಿಎಸ್‌ಟಿ ಎಂದರೆ ಸಮಾನ ತೆರಿಗೆ ಅಲ್ಲ; ಬದಲಿಗೆ ನಿರ್ದಿಷ್ಟ ತೆರಿಗೆಯನ್ನು ದೇಶಾದ್ಯಂತ ಜಾರಿಗೆ ತರುವ ಪ್ರಕ್ರಿಯೆ ಅಷ್ಟೆ.

ಈ ಕುರಿತು ಕೊಂಚ ಹಿನ್ನೆಲೆಯನ್ನು ಗಮನಿಸುವುದಾದರೆ 2000ದಲ್ಲಿ ವಾಜಪೇಯಿ ಸರಕಾರ ಮೊದಲ ಬಾರಿಗೆ ಜಿಎಸ್‌ಟಿ ಜಾರಿಯ ಕುರಿತು ಪ್ರಸ್ತಾಪ ಮಾಡಿತ್ತು. 2009ರಲ್ಲಿಯೇ ಹಣಕಾಸು ಆಯೋಗ ಶೇ. 12ರ ಏಕರೂಪ ತೆರಿಗೆ ವ್ಯವಸ್ಥೆ ಜಾರಿಗೆ ಸಲಹೆ ನೀಡಿತ್ತು. ಆದರೆ ಆರು ವರ್ಷಗಳ ನಂತರ ಜಿಎಸ್‌ಟಿ ತೆರಿಗೆ ಪದ್ಧತಿ ಅಳವಡಿಕೆ ಸಂಬಂಧ ರೂಪಿಸಿದ ತಜ್ಞರ ಸಮಿತಿಯು ಮೂರು ಸ್ಥರಗಳ ತೆರಿಗೆ ಪದ್ಧತಿಯನ್ನು ಅಳವಡಿಸಿಕೊಳ್ಳಲು ಸಲಹೆ ನೀಡಿತ್ತು. ಇದೀಗ ಪ್ರಮುಖವಾಗಿ ನಾಲ್ಕು ಸ್ಥರಗಳ ತೆರಿಗೆ ಪದ್ಧತಿ ಜಾರಿಗೆ ತರಲಾಗುತ್ತಿದೆ. ಒಂದೊಂದು ವಸ್ತುಗೆ ಒಂದೊಂದು ತೆರಿಗೆಯನ್ನು ಯಾಕೆ ರೂಪಿಸಲಾಯಿತು?

ಜಿಎಸ್‌ಟಿ ಅಡಿಯಲ್ಲಿ ಶೇ. 60ರಷ್ಟು ಸರಕುಗಳು ಶೇ. 18 ತೆರಿಗೆ ಸ್ಥರದ ಅಡಿಯಲ್ಲಿಯೂ, ಶೇ. 20ರಷ್ಟು ಸರಕುಗಳು ಶೇ. 28ರ ಸ್ಥರದ ಅಡಿಯಲ್ಲಿಯೂ ಬರುತ್ತಿವೆ. ಉದಾಹರಣೆಗೆ; ಗೋಡಂಬಿಗೆ ಶೇ. 5ರಷ್ಟು ತೆರಿಗೆ ಬಿದ್ದರೆ, ಆಲ್ಮಂಡ್‌ಗೆ ಶೇ. 28ರಷ್ಟು ತೆರಿಗೆ ಹೊರೆ ಬೀಳಲಿದೆ. ಸಿನೆಮಾ ಟಿಕೆಟ್‌ ವಿಚಾರದಲ್ಲಿ ನೋಡುವುದಾರೆ, 100 ರೂಪಾಯಿ ಒಳಗಿನ ಟಿಕೆಟ್‌ ಪಡೆದುಕೊಂಡರೆ ಶೇ. 18ರಷ್ಟು ತೆರಿಗೆ, 100 ರೂಪಾಯಿಗಿಂತ ಹೆಚ್ಚಿನ ಟಿಕೆಟ್‌ ತೆಗೆದುಕೊಂಡರೆ ಶೇ. 28ರಷ್ಟು ತೆರಿಗೆ ಬೀಳಲಿದೆ. ಸೋಪು, ತಲೆಗೆ ಹಾಕುವ ಎಣ್ಣೆಗೆ ಶೇ. 18ರಷ್ಟು ತೆರಿಗೆ ಬಿದ್ದರೆ, ಶಾಂಪುಗೆ ಶೇ. 28ರಷ್ಟು ತೆರಿಗೆ ಹೊರೆ ಬೀಳಲಿದೆ. ಅದೇ ಪರಿಸರ ಸ್ನೇಹಿ ಕಾರ್‌ಗಳಿಗೂ, ಐಶಾರಾಮಿ ಎಸ್‌ಯುವಿ ಕಾರ್‌ಗಳಿಗೂ ಒಂದೇ ತೆರಿಗೆ ಪದ್ಧತಿ ಅಳವಡಿಸಲಾಗಿದೆ. ಯಾಕೆ?

ಸಾಮಾನ್ಯ ಜನರ ಮೇಲೆ ಹೆಚ್ಚಿನ ತೆರಿಗೆ ಹೊರೆಯನ್ನು ತಪ್ಪಿಸುವುದು ಮೇಲ್ನೋಟಕ್ಕೆ ಕಂಡು ಬರುವ ಅಂಶವಾದರೂ, ಆಳದಲ್ಲಿ ರಾಜಕೀಯ ಹಾಗೂ ಉದ್ಯಮದ ಹಿತಾಸಕ್ತಿಗಳು ಏಕರೂಪ ತೆರಿಗೆ ಅಡಿಯಲ್ಲಿಯೇ ಸ್ಥರಗಳ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.

ಪೆಟ್ರೋಲ್, ಮದ್ಯಕ್ಕಿಲ್ಲ ಜಿಎಸ್‌ಟಿ:

ದೇಶದ ನಾನಾ ಸರಕು ಮತ್ತು ಸೇವೆಗಳಿಗೆ ಜಿಎಸ್‌ಟಿ ಅಡಿಯಲ್ಲಿ ನಾನಾ ತೆರಿಗೆಗಳು ಅನ್ವಯವಾಗುತ್ತಿವೆ. ಆದರೆ ಪೆಟ್ರೋಲ್ ಮತ್ತು ಮದ್ಯದ ಮೇಲೆ ಜಿಎಸ್‌ಟಿ ನೆರಳು ಇನ್ನೂ ಬಿದ್ದಿಲ್ಲ. ಇದಕ್ಕಿರುವ ಪ್ರಮುಖ ಕಾರಣ, ಈ ಎರಡೂ ಉತ್ಪನ್ನಗಳು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಪ್ರಮುಖ ತೆರಿಗೆ ಮೂಲಗಳಾಗಿರುವುದು. ಕೇಂದ್ರ ಸರಕಾರ ಮತ್ತು ಆಯಾ ರಾಜ್ಯ ಸರಕಾರಗಳು ಬಜೆಟ್‌ ಮಂಡನೆ ವೇಳೆ ಖರ್ಚು ಮತ್ತು ವೆಚ್ಚದ ನಡುವೆ ಸಮತೋಲನ ತರಲು ಈ ಉತ್ಪನ್ನಗಳ ಮೇಲಿನ ತೆರಿಗೆಯನ್ನೂ ನೆಚ್ಚಿಕೊಂಡಿವೆ. ಕಳೆದ 6 ವರ್ಷಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆಯಲ್ಲಿ ಇಳಿಕೆಯಾಗಿದೆ. ಆದರೆ ಮೋದಿ ಅಧಿಕಾರಕ್ಕೆ ಬಂದ ಮೂರು ವರ್ಷಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಶೇ. 150ರಷ್ಟು ಹೆಚ್ಚಿನ ತೆರಿಗೆ ವಿಧಿಸಲಾಗಿದೆ.  ಇದೀಗ ಜಿಎಸ್‌ಟಿಯಿಂದ ಇವುಗಳನ್ನು ಹೊರಗಿಟ್ಟಿರುವ ಕಾರಣಕ್ಕೆ ಸಾಮಾನ್ಯ ಜನರ ಮೇಲಿನ ತೆರಿಗೆ ಭಾರ ದೊಡ್ಡ ಮಟ್ಟದಲ್ಲಿ ಇಳಿಯುವ ಸಾಧ್ಯತೆಗಳೇ ಇಲ್ಲವಾಗಿದೆ. ಹೀಗಾಗಿಯೇ, ಜಿಎಸ್‌ಟಿ ಬಂದ ನಂತರವೂ ಹಳೆಯ ತೆರಿಗೆ ವ್ಯವಸ್ಥೆಗೆ ಹೋಲಿಸಿದರೆ ಕ್ರಾಂತಿಕಾರಕ ಬದಲಾವಣೆಗಳು ಕಷ್ಟ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿರುವುದು.

gst-petrol-1

ಜಿಡಿಪಿ ಹೆಚ್ಚಾಗುತ್ತಾ?:

ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಬಂದ ತಕ್ಷಣ ದೇಶದ ಜಿಡಿಪಿಯಲ್ಲಿ ದೊಡ್ಡ ಬದಲಾವಣೆಯಾಗುತ್ತೆ ಎಂದು ಘೋಷಣೆಗಳು ಮೊಳಗುತ್ತಿವೆ. ಈ ಕುರಿತು ಎರಡು ಭಿನ್ನವಾದ ವಿಶ್ಲೇಷಣೆಗಳು ಕೇಳಿಬರುತ್ತಿವೆ ಎನ್ನುತ್ತದೆ ‘ದಿ ವೈರ್’ ವರದಿ. ಒಂದು ಜಿಎಸ್‌ಟಿ ಜಾರಿಗೆ ಬಂದರೆ ಶೇ. 0.4- ಶೇ. 1ರಷ್ಟು ಜಿಡಿಪಿ ಹೆಚ್ಚಳವಾಗಬಹುದು ಎಂಬುದು ಒಂದು ವಾದ. ಇನ್ನೊಂದು ಜಿಎಸ್‌ಟಿಯಿಂದ ಜಿಡಿಪಿ ಬೆಳವಣಿಗೆ ಪ್ರಮಾಣ ಶೇ. 5- ಶೇ. 7ರಷ್ಟು ಆಗಬಹುದು ಇನ್ನೊಂದು ವಾದ. ಈ ಎರಡೂ ವಾದಗಳು ಹೈಪಾಥಿಟಿಕಲ್ ಆಗಿರುವುದರಿಂದ, ಇಷ್ಟು ಬೇಗ ಜಿಡಿಪಿ ವಿಚಾರದಲ್ಲಿ ತಲೆಕೆಡಿಸಿಕೊಳ್ಳಬೇಕಿಲ್ಲ.

ಜಿಎಸ್‌ಟಿ ಜಾರಿಯ ನಂತರ ತೆರಿಗೆ ವಿಚಾರದಲ್ಲಿ ಕಾನೂನು ವ್ಯಾಜ್ಯಗಳ ಸಂಖ್ಯೆ ಹೆಚ್ಚಾಗಬಹುದು ಎಂಬ ವಾದವೂ ಇದೆ. ಮಾರ್ಚ್‌ 2015ರ ಅಂತ್ಯಕ್ಕೆ ದೇಶದಲ್ಲಿ ಬಾಕಿ ಇರುವ ತೆರಿಗೆ ವ್ಯಾಜ್ಯಗಳ ಸಂಖ್ಯೆಯೇ ಸುಮಾರು 1 ಲಕ್ಷ ದಾಟಿತ್ತು. ಈ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಯಾಕೆಂದರೆ ಒಂದೇ ವಿಭಾಗದಲ್ಲಿ ಬರುವ ಸರಕುಗಳಿಗೆ ಒಂದೊಂದು ಸ್ಥರದ ತೆರಿಗೆ ವಿಧಿಸಿರುವುದು ಇದಕ್ಕಿರುವ ಪ್ರಮುಖ ಕಾರಣ. ಒಟ್ಟಾರೆ, ಜಿಎಸ್‌ಟಿ ಜಾರಿಯ ನಂತರದ ಬೆಳವಣಿಗೆಗಳು ಈ ಕುರಿತು ಸ್ಪಷ್ಟತೆ ನೀಡಬಹುದು, ಅಷ್ಟೆ.

ಆದಾಯ ಹೆಚ್ಚಾಗುತ್ತಾ?:

ಸರಕು ಮತ್ತು ಸೇವಾ ತೆರಿಗೆ ಜಾರಿಯ ನಂತರ ದೇಶದ ಆದಾಯ ಪ್ರಮಾಣ ದೊಡ್ಡ ಮಟ್ಟದಲ್ಲಿ ಹೆಚ್ಚಾಗಲಿದೆ. ಹೀಗಾಗಿಯೇ ಇದು ಕ್ರಾಂತಿಕಾರಿಯಾದ ತೆರಿಗೆ ಪದ್ಧತಿ ಎಂದು ಆರ್ಥಿಕ ತಜ್ಞರು ಹೇಳುತ್ತಾರೆ. ಇವರ ಪ್ರಕಾರ, ಈಗಿರುವ ತೆರಿಗೆ ವ್ಯವಸ್ಥೆಯ ಅಡಿಯಲ್ಲಿ ಬರದ ಹಲವು ಕೈಗಾರಿಕೆಗಳು ಮತ್ತು ಉತ್ಪಾದನೆಗಳು ಜಿಎಸ್‌ಟಿ ಅಡಿಯಲ್ಲಿ ಅನಿವಾರ್ಯವಾಗಿ ಬರುತ್ತವೆ. ಸಹಜವಾಗಿಯೇ ಸರಕಾರದ ಆದಾಯ ಹೆಚ್ಚುತ್ತದೆ ಎಂದು ಹೇಳಲಾಗುತ್ತಿದೆ. ಒಂದು ಆಯಾಮದಲ್ಲಿ ಇದು ನಿಜ ಕೂಡ. ಸದ್ಯ ಅಸಂಘಟಿತ ವಲಯದಲ್ಲಿರುವ ಹಲವು ಸಣ್ಣ ಕೈಗಾರಿಕೆಗಳು ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ಅಡಿಯಲ್ಲಿ ನೋಂದಣಿ ಮಾಡಿಸಿಕೊಳ್ಳುವ ಅನಿವಾರ್ಯತೆ ಇದೆ. ಇದರಿಂದ ತೆರಿಗೆದಾರರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತದೆ.

ಅದೇ ವೇಳೆ, ಒಂದು ಸಮಸ್ಯೆಯೂ ಇದೆ. ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಅಡಿಯಲ್ಲಿ ವಾರ್ಷಿಕ 20 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ವಹಿವಾಟು ನಡೆಸುವ ಉದ್ಯಮಗಳಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿತ್ತು. ಇದನ್ನು ದೊಡ್ಡ ಪ್ರಮಾಣದಲ್ಲಿ ವರ್ತಕರು, ಸಣ್ಣ ಉದ್ಯಮಿಗಳು ದುರುಪಯೋಗಪಡಿಸಿಕೊಂಡಿದ್ದರು. ಉದಾಹರಣೆಗೆ ಒಂದು ಉದ್ಯಮ ವಾರ್ಷಿಕ 60 ಲಕ್ಷ ವಹಿವಾಟು ನಡೆಸುತ್ತಿದ್ದರೆ, ತಮ್ಮದೇ ಕುಟುಂಬ ಸದಸ್ಯರ ಹೆಸರಿನಲ್ಲಿ ಮೂರು ಪ್ರತ್ಯೇಕ ಕೈಗಾರಿಕೆಗಳನ್ನು ನೋಂದಣಿ ಮಾಡಿಸುವ ಮೂಲಕ ತೆರಿಗೆಯಿಂದ ತಪ್ಪಿಸಿಕೊಳ್ಳುವ ಪ್ರಕರಣಗಳು ನಡೆಯುತ್ತಿದ್ದವು.

ಸದ್ಯ ಜಿಎಸ್‌ಟಿ ಕೂಡ 20 ಲಕ್ಷದವರೆಗಿನ ವಹಿವಾಟಿಗೆ ತೆರಿಗೆ ವಿನಾಯಿತಿ ನೀಡಿದೆ. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ತೆರಿಗೆ ತಪ್ಪಿಸುವ ಕೆಲಸ ಮುಂದುವರಿಯುವ ಎಲ್ಲಾ ಸೂಚನೆಗಳಿವೆ. ಇದರ ಆಚೆಗೂ, ಒಂದಷ್ಟು ಪ್ರಮಾಣದಲ್ಲಿ ಆದಾಯ ಹೆಚ್ಚಾಗುವುದರಲ್ಲಿ ಅನುಮಾನ ಇಲ್ಲ. ಹೆಚ್ಚಳವಾಗುವ ಆದಾಯ ಯಾವ ಉಪಯೋಗಕ್ಕೆ ಬಳಕೆಯಾಗುತ್ತದೆ? ಅದನ್ನು ಕಾದು ನೋಡಬೇಕಿದೆ.

ಪ್ರಧಾನಿ ಜತೆ ದೇಶದ ಉದ್ಯಮಪತಿಗಳು.

ಪ್ರಧಾನಿ ಜತೆ ದೇಶದ ಉದ್ಯಮಪತಿಗಳು.

ಇದರ ಆಚೆಗೂ, ಜಿಎಸ್‌ಟಿಯಲ್ಲಿ ಸಾವಿರಾರು ಅರ್ಥವಾಗದ, ಇನ್ನೂ ವಿಶ್ಲೇಷಣೆಗೆ ಸಿಗದ ಅಂಶಗಳಿವೆ. ಇತ್ತೀಚೆಗಷ್ಟೆ ಭಾರತದ ಟೆಲಿಕಾಂ ಕಂಪನಿಗಳ ಮುಖ್ಯಸ್ಥರು ಜಿಎಸ್‌ಟಿಯಲ್ಲಿ ದೊಡ್ಡ ಮಟ್ಟದ ತೆರಿಗೆ ವಿನಾಯಿತಿ ನೀಡುವಂತೆ ಕೋರಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿ ಲಾಬಿ ನಡೆಸಿದ್ದರು. ಪ್ರಧಾನಿ ಆಪ್ತ ಉದ್ಯಮಿ ಗೌತಮ್ ಅದಾನಿಗೆ 500 ಕೋಟಿ ರೂಪಾಯಿಗಳ ತೆರಿಗೆ ವಿನಾಯಿತಿ ನೀಡಲು ನಿಯಮಾವಳಿಯನ್ನೇ ಬದಲಿಸುವ ಕೆಲಸವೂ ನಡೆದಿತ್ತು. ಹೀಗಾಗಿ ಜಿಎಸ್‌ಟಿ ಜಾರಿಗೆ ಬಂದ ನಂತರ ದೊಡ್ಡ ಉದ್ಯಮಿಪತಿಗಳಿಗೆ ಆಗುವ ಲಾಭ ಏನು? ಸಣ್ಣ ಜನರಿಗೆ ಆಗುವ ಲಾಭ ಏನು? ಇವುಗಳ ನಡುವೆ ಇರುವ ಅಂತರ ಎಷ್ಟು? ಮತ್ತಿತರ ವಿಚಾರಗಳಿಗೆ ಭವಿಷ್ಯವೇ ಉತ್ತರ ಹೇಳಬೇಕಿದೆ. ಸದ್ಯಕ್ಕೆ ಜಿಎಸ್‌ಟಿ ಕುರಿತು ಇಷ್ಟು ಮಾಹಿತಿ.

Leave a comment

FOOT PRINT

Top