An unconventional News Portal.

‘ಎಂಡ್ ಗೇಮ್’: ಏರ್‌ ಇಂಡಿಯಾ ಖಾಸಗಿಕರಣ; ಕೊಚ್ಚಿ ಹೋಗಿದ್ದು 30 ಸಾವಿರ ಕೋಟಿ ತೆರಿಗೆ ಹಣ

‘ಎಂಡ್ ಗೇಮ್’: ಏರ್‌ ಇಂಡಿಯಾ ಖಾಸಗಿಕರಣ; ಕೊಚ್ಚಿ ಹೋಗಿದ್ದು 30 ಸಾವಿರ ಕೋಟಿ ತೆರಿಗೆ ಹಣ

ಇದು ಖಾಸಗಿ ಉದ್ಯಮಿಯೊಬ್ಬರಿಂದ ಕೇವಲ 2 ಲಕ್ಷ ಹೂಡಿಕೆಯಲ್ಲಿ ಹುಟ್ಟಿಕೊಂಡ ಉದ್ಯಮ. ಸ್ವಾತಂತ್ರ್ಯ ನಂತರ ನೆಹರೂ ಕಾಲದಲ್ಲಿ ಇದನ್ನು ರಾಷ್ಟ್ರೀಕರಣ ಪ್ರಕ್ರಿಯೆಗೆ ಒಳಪಡಿಸಲಾಯಿತು. ಅಲ್ಲಿಂದ ಮುಂದಿನ ನಾಲ್ಕು ದಶಕಗಳ ಕಾಲ ಉದ್ಯಮ ಬೃಹತ್ ಪ್ರಮಾಣದಲ್ಲಿ ಬೆಳೆದು ನಿಂತಿತು. ಆದರೆ 90ರ ದಶಕದ ನಂತರ ಜಾಗತಿಕರಣ- ಖಾಸಗಿಕರಣ- ಉದಾರಿಕರಣದ ಯುಗ ಆರಂಭವಾಗುತ್ತಿದ್ದಂತೆ ಆಗಸದಲ್ಲಿದ್ದ ಉದ್ಯಮ ನಿಧಾನವಾಗಿ ಭೂಮಿಗೆ ಇಳಿಯತೊಡಗಿತು. ಯುಪಿಎ ಸರಕಾರದ ಮೊದಲ ಅವಧಿಯಲ್ಲಿ ಇದನ್ನು ಪಾತಾಳಕ್ಕೆ ತಳ್ಳಲಾಯಿತು. ಇದೀಗ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಇದರ ಸಹವಾಸವೇ ಬೇಡ ಎಂದು ಖಾಸಗಿ ಹೂಡಿಕೆಗೆ ಅನುವು ಮಾಡಿಕೊಡಲು ಮುಂದಾಗಿದೆ. ಮುಂದಿನ ಕೆಲವು ದಿನಗಳಲ್ಲಿ ‘ಭಾರತದ ಮಹರಾಜ್‌’ ಎಂದೇ ಕರೆಸಿಕೊಳ್ಳುತ್ತಿದ್ದ ಸರಕಾರಿ ಸ್ವಾಮ್ಯದ ಏರ್‌ ಇಂಡಿಯಾ ಖಾಸಗಿಯವರ ತೆಕ್ಕೆಗೆ ಹೋಗಲಿದೆ. ಆ ಮೂಲಕ ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ತನ್ನದೇ ಆದ ದಂತಕತೆಯನ್ನು ಹೊಂದಿದ್ದ ವಿಮಾನಯಾನ ಸಂಸ್ಥೆ ಕೊನೆಗೂ ಜನರ ಮಾಲೀಕತ್ವದಿಂದ ದೂರವಾಗಲಿದೆ. ಮತ್ತೊಂದು ಸರಕಾರಿ ಸ್ವಾಮ್ಯದ ಉದ್ಯಮ ನೋಡ ನೋಡುತ್ತಿದ್ದಂತೆ ನಷ್ಟದ ಆರೋಪ ಹೊತ್ತುಕೊಂಡು ಖಾಸಗಿಯವರ ಬಾಯಿ ಬೀಳಲಿದೆ.

ಕಳೆದ ಮೂರು ದಶಕಗಳಿಂದ ಸತತವಾಗಿ ನಷ್ಟಕ್ಕೆ ಬಿದ್ದಿದ್ದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಖಾಸಗಿಕರಣಕ್ಕೆ ಕೇಂದ್ರ ಸರಕಾರ ಮುಂದಾಗಿದೆ. ಬುಧವಾರ ನಡೆದ ಸಂಪುಟ ಸಭೆಯಲ್ಲಿ ಈ ಪ್ರಕ್ರಿಯೆಗೆ ಒಪ್ಪಿಗೆ ಸೂಚಿಸಲಾಗಿದೆ. ವಿಮಾನಯಾನ ಸಂಸ್ಥೆ ಹೊತ್ತುಕೊಂಡಿರುವ ಸುಮಾರು 52 ಸಾವಿರ ಕೋಟಿ ಸಾಲದ ಕುರಿತು ಹಾಗೂ ಅದರ ಆಸ್ತಿಗಳು, ಹೋಟೆಲ್‌ಗಳ ಮೇಲೆ ಖಾಸಗಿ ಹೂಡಿಕೆ ಕುರಿತು ತೀರ್ಮಾನ ತೆಗೆದುಕೊಳ್ಳಲು ಸಮಿತಿಯೊಂದನ್ನು ರಚಿಸಲು ಇದೇ ವೇಳೆಯಲ್ಲಿ ತೀರ್ಮಾನಿಸಲಾಗಿದೆ. ಹಿಂದಿನ ಯುಪಿಎ ಸರಕಾರ ಏರ್‌ ಇಂಡಿಯಾವನ್ನು ಲಾಭದ ಹಾದಿಗೆ ತರುವ ನಿಟ್ಟಿನಲ್ಲಿ ಸುಮಾರು 30 ಸಾವಿರ ಕೋಟಿ ರೂಪಾಯಿಗಳ ನೆರವಿನ ಪ್ಯಾಕೇಜ್ ಘೋಷಿಸಿತ್ತು. ಇದರಲ್ಲಿ 23 ಸಾವಿರ ಕೋಟಿ ರೂಪಾಯಿ ಜನರ ತೆರಿಗೆ ಹಣವನ್ನು ವಿನಿಯೋಗ ಮಾಡಲಾಗಿತ್ತು ಕೂಡ. ಹೀಗಿದ್ದೂ ಏರ್‌ ಇಂಡಿಯಾದ ಒಟ್ಟಾರೆ ಸಾಲ 52 ಸಾವಿರ ಕೋಟಿಗೆ ಏರಿಕೆಯಾಗಿತ್ತು. ಪರಿಹಾರ ಎಂಬಂತೆ ಈಗ ಸಂಸ್ಥೆಯಲ್ಲಿ ಖಾಸಗಿಯವರಿಗೆ ಬಂಡವಾಳ ಹೂಡಲು ಅನುವು ಮಾಡಿಕೊಡಲು ಸರಕಾರ ತೀರ್ಮಾನಿಸಿದೆ.

ಹಿನ್ನೆಲೆ:

ಅದು ಬ್ರಿಟಿಷ್‌ ಆಡಳಿತ ಇದ್ದ ಭಾರತ. ಅವತ್ತಿಗಾಗಲೇ ಉದ್ಯಮಿಯಾಗಿ ಬೆಳೆದಿದ್ದ ಜೆಆರ್‌ಡಿ ಟಾಟಾ 1932ರಲ್ಲಿ ‘ಟಾಟಾ ಏರ್‌ಲೈನ್ಸ್’ ಹೆಸರಿನಲ್ಲಿ ವಿಮಾನಯಾನ ಸಂಸ್ಥೆಯನ್ನು ಸ್ಥಾಪಿಸಿದರು. ಒಂಟಿ ಎಂಜಿನ್‌ ಹೊಂದಿದ್ದ ಎರಡು ವಿಮಾನಗಳನ್ನು ಖರೀಸಿದ ಅವರು ಅವತ್ತಿಗೆ ಹೂಡಿಕೆ ಮಾಡಿದ ಮೊತ್ತ ಕೇವಲ 2 ಲಕ್ಷ ರೂಪಾಯಿ. ಇದು ದೇಶದ ಮೊದಲ ವಿಮಾನಯಾನ ಸಂಸ್ಥೆ ಎಂಬ ಹೆಗ್ಗಳಿಕೆಯನ್ನೂ ಗಳಿಸಿತ್ತು. ಕರಾಚಿಯಿಂದ 25 ಕೆ.ಜಿ ಅಂಚೆ ಪತ್ರಗಳನ್ನು ಹಾಗೂ ಸ್ವತಃ ಜೆಆರ್‌ಡಿ ಟಾಟಾ ಅವರನ್ನು ಹೊತ್ತಿದ್ದ ವಿಮಾನ ಬಾಂಬೆಗೆ ಬಂದಿಳಿದಿತ್ತು. ಸ್ವಾತಂತ್ರ್ಯ ನಂತರ ನೆಹರೂ ಟಾಟಾ ಏರ್‌ಲೈನ್ಸ್‌ ವಿಮಾನಯಾನ ಸಂಸ್ಥೆಯನ್ನು ರಾಷ್ಟ್ರೀಕರಣಗೊಳಿಸಿದರು. ಮುಂದಿನ ನಾಲ್ಕು ದಶಕಗಳ ಅಂತರದಲ್ಲಿ ಏರ್‌ ಇಂಡಿಯಾ ಹೆಸರಿನಲ್ಲಿ ವಿಮಾನಯಾನ ಸಂಸ್ಥೆ ಬೃಹತ್ ಪ್ರಮಾಣದಲ್ಲಿ ಬೆಳೆಯಿತು.

ಇವತ್ತಿಗೆ ವಿಮಾನಯಾನ ಸಂಸ್ಥೆ ಬಳಿ ಸುಮಾರು 140 ವಿಮಾನಗಳಿವೆ. ದೇಶದ ಒಳಗೆ 72 ನಗರಗಳಿಗೆ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ 41 ನಗರಗಳ ನಡುವೆ ಇವು ಹಾರಾಟ ನಡೆಸುತ್ತಿವೆ. ಸರಕಾರಿ ಸ್ವಾಮ್ಯದ ಈ ಸಂಸ್ಥೆ ನಷ್ಟವನ್ನು ಮೊದಲ ಬಾರಿಗೆ ಕಂಡಿದ್ದು 90ರ ದಶಕದಲ್ಲಿ. ನಂತರದ ವರ್ಷಗಳಲ್ಲಿ ನಷ್ಟದ ಪ್ರಮಾಣ ಹೆಚ್ಚಾಗುತ್ತಲೇ ಬಂತು. ಈ ಹಿನ್ನೆಲೆಯಲ್ಲಿ ಯುಪಿಎ ಸರಕಾರ ಸುಮಾರು 30 ಸಾವಿರ ಕೋಟಿ ಆರ್ಥಿಕ ನೆರವಿನ ಪ್ಯಾಕೇಜ್‌ ಘೋಷಣೆ ಮಾಡಿತು. ಹೀಗಿದ್ದೂ 2017ರ ಹೊತ್ತಿಗೆ ಇದನ್ನು ಖಾಸಗಿ ಅವರಿಗೆ ವಹಿಸಿಕೊಡದೆ ಬೇರೆ ದಾರಿಗಳಿಲ್ಲ ಎಂದು ಕೇಂದ್ರ ಸರಕಾರ ತೀರ್ಮಾನಕ್ಕೆ ಬಂದಿದೆ. ಹಾಗಿದ್ದ ಮೇಲೆ 30 ಸಾವಿರ ಕೋಟಿ ಜನರ ತೆರಿಗೆ ಹಣವನ್ನು ನೀರಲ್ಲಿ ಹೋಮ ಮಾಡಿದ್ಯಾಕೆ? ಉತ್ತರ ಯಾರ ಬಳಿಯಲ್ಲೂ ಇಲ್ಲ.

ಯಾರು ಹೊಣೆ?:

ಇದೇ ವರ್ಷದ ಮೇ ತಿಂಗಳಿನಲ್ಲಿ ಸಿಬಿಐ ಏರ್‌ ಇಂಡಿಯಾಗೆ ಸಂಬಂಧಪಟ್ಟಂತೆ ಒಟ್ಟು ಮೂರು ಪ್ರಥಮ ಮಾಹಿತಿ ವರದಿಗಳನ್ನು ದಾಖಲಿಸಿತ್ತು. 2004- 05ರ ಅವಧಿಯಲ್ಲಿ ಏರ್‌ ಇಂಡಿಯಾಗಾಗಿ ತರಾತುರಿಯಲ್ಲಿ ಖರೀಸಿದ 50 ವಿಮಾನಗಳ ವ್ಯವಹಾರದಲ್ಲಿ ಅವ್ಯವಹಾರ ಆಗಿದೆ ಎಂದು ಒಂದು ಎಫ್‌ಐಆರ್‌ ಆರೋಪಿಸಿತ್ತು. ಇದರ ಜತೆಗೆ, ಸರಕಾರಿ ವಿಮಾನಯಾನ ಸಂಸ್ಥೆಯನ್ನು ಉದ್ದೇಶಪೂರ್ವಕವಾಗಿ ನಷ್ಟದ ಹಾದಿಗೆ ಕೊಂಡೊಯ್ಯುವ ತೀರ್ಮಾನ ತೆಗೆದುಕೊಳ್ಳಲಾಯಿತು ಎಂದು ಮತ್ತೊಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿತ್ತು. ಗಲ್ಫ್‌ ದೇಶಗಳ ಲಾಭದಾಯಕ ವಿಮಾನಯಾನ ಮಾರ್ಗಗಳಲ್ಲಿ ಏರ್‌ ಇಂಡಿಯಾ ಹಾರಾಟಕ್ಕೆ ಮನಸ್ಸು ಮಾಡದ ಹಾಗೂ ವಿಮಾನಯಾನ ಸಂಸ್ಥೆಗಳನ್ನು ಯಾವುದೇ ದೂರದೃಷ್ಟಿ ಇಲ್ಲದೆ ವಿಲೀನ ಪ್ರಕ್ರಿಯೆಗೆ ಒಳಪಡಿಸಿದ ಆರೋಪದ ಮೇಲೆ ಅಂದಿನ ವಿಮಾನಯಾನ ಖಾತೆ ಸಚಿವ ಎನ್‌ಸಿಪಿಯ ಪ್ರಫುಲ್ ಪಟೇಲ್‌ ಮೇಲೆ ಗಂಭೀರ ಆರೋಪ ಮಾಡಲಾಗಿತ್ತು.

ಇವುಗಳ ಜತೆಗೆ ಏರ್‌ ಇಂಡಿಯಾಗೆ ನೀಡಿದ ಆರ್ಥಿಕ ನೆರವಿನ ಪ್ಯಾಕೇಜ್‌ನಲ್ಲಿಯೂ ಅವ್ಯವಹಾರಗಳು ನಡೆದ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು. 2015ರಲ್ಲಿ ಸಲ್ಲಿಕೆಯಾದ ಮಾಹಿತಿ ಹಕ್ಕು ಅರ್ಜಿಯೊಂದು ಭಾರತದ ಪ್ರಧಾನಿಗಳು (ಮನಮೋಹನ್ ಸಿಂಗ್ ಮತ್ತು ನರೇಂದ್ರ ಮೋದಿ) ತಮ್ಮ ವಿದೇಶ ಪ್ರವಾಸಗಳಿಗೆ ಏರ್‌ ಇಂಡಿಯಾದ ಒಟ್ಟು 8 ವಿಮಾನಗಳನ್ನು ಬಳಸಿಕೊಂಡಿದ್ದಕ್ಕೆ ಹಣವನ್ನು ಪಾವತಿ ಮಾಡಿಲ್ಲ ಎಂಬುದನ್ನು ಬಹಿರಂಗಪಡಿಸಿತ್ತು. ಇದಾದ ನಂತರ ಪ್ರಧಾನಿ ಮೋದಿ ಕಾರ್ಯಾಲಯ 119.70 ಕೋಟಿ ರೂಪಾಯಿ ಪಾವತಿ ಮಾಡಿದ್ದಾಗಿ ಪ್ರಕಟಣೆ ನೀಡಿತ್ತು. ಆದರೆ, ವಿದೇಶ ಪ್ರವಾಸಗಳ ಸಮಯದಲ್ಲಿ ಬಳಸಿದ ವಿಮಾನಗಳಿಗೆ ಯಾವ ಮಾನದಂಡದವನ್ನು ಬಳಸಿ ಶುಲ್ಕ ನಿಗದಿ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಲು ನಿರಾಕರಿಸಲಾಗಿತ್ತು.

ಒಂದು ಕಡೆ ಉದ್ದೇಶಪೂರ್ವಕವಾಗಿ ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ನೆರವಾಗುವಂತಹ ತೀರ್ಮಾನಗಳನ್ನು ತೆಗೆದುಕೊಂಡಿದ್ದು, ಸರಕಾರಿ ಸ್ವಾಮ್ಯದ ವಿಮಾನ ಸಂಸ್ಥೆಯನ್ನು ಬೇಕಾಬಿಟ್ಟಿಯಾಗಿ ಬಳಸಿಕೊಂಡಿದ್ದ ಆರೋಪಗಳ ನೆರಳಿನಲ್ಲಿಯೇ ಸಾಲದ ಹೊರೆ ಬೆಳೆದು ನಿಂತಿತ್ತು. ಇದರ ಮೇಲೆ ಕಳಸ ಇಟ್ಟಂತೆ 30 ಸಾವಿರ ಕೋಟಿ ನೆರವಿನ ಪ್ಯಾಕೇಜ್‌ ನೀಡುವ ಮೂಲಕ ತೆರಿಗೆದಾರರ ಕಣ್ಣಿಗೆ ಮಣ್ಣೆರೆಚಲಾಯಿತು. ಇದೀಗ, ಇದ್ಯಾವುದೂ ಲೆಕ್ಕಕ್ಕೆ ಇಲ್ಲದಂತೆ ವಿಮಾನಯಾನ ಸಂಸ್ಥೆಯನ್ನು ಖಾಸಗಿ ಹೂಡಿಕೆಗೆ ತೆರೆದಿಡಲಾಗುತ್ತಿದೆ.

ಲಾಭ ಯಾರಿಗೆ?: 

ಅವತ್ತು ನೆಹರೂ ರಾತ್ರೋರಾತ್ರಿ ದೇಶದ ಏಕೈಕ ವಿಮಾನಯಾನ ಸಂಸ್ಥೆಯನ್ನು ರಾಷ್ಟ್ರೀಕರಣ ಮಾಡಿದಾಗ ಆರ್‌ಜೆಡಿ ಟಾಟಾ ವಿರೋಧ ವ್ಯಕ್ತಪಡಿಸಿದ್ದರು. ನಂತರದ ವರ್ಷಗಳಲ್ಲಿ ಟಾಟಾ ಕುಟುಂಬದ ಉದ್ಯಮಿಗಳು ದೇಶದಲ್ಲಿ ವಿಮಾನಯಾನ ಸಂಸ್ಥೆ ಸ್ಥಾಪಿಸುವ ಕನಸು ಕಾಣುತ್ತಲೇ ಬಂದಿದ್ದರು. ಸದ್ಯ ಮಲೇಷಿಯಾ ಏರ್‌ಲೈನ್ಸ್ ಸಹಯೋಗದಲ್ಲಿ ಏರ್‌ ಏಷಿಯಾ ಮತ್ತು ಸಿಂಗಪೂರ್‌ ಸಹಯೋಗದಲ್ಲಿ ವಿಸ್ತಾರ್ ಹೆಸರಿನ ವಿಮಾನಯಾನ ಸಂಸ್ಥೆಗಳಲ್ಲಿ ಟಾಟಾ ಸಂಸ್ಥೆ ವಿಮಾನಗಳ ಹಾರಾಟ ನಡೆಸುತ್ತಿದೆ. ಏರ್‌ ಇಂಡಿಯಾದಲ್ಲಿಯೂ ಪರೋಕ್ಷವಾಗಿ ಹೂಡಿಕೆ ಮಾಡುವ ಸಾಧ್ಯತೆಗಳಿವೆ. ಹೀಗಾಗಿ, ಒಂದು ಕಾಲದಲ್ಲಿ ಕಡಿಮೆ ವೆಚ್ಚದಲ್ಲಿ ಸೀನಿಯರ್ ಟಾಟಾ ಆರಂಭಿಸಿದ ಸಂಸ್ಥೆ ಮತ್ತದೇ ಟಾಟಾ ಸಮೂಹ ಸಂಸ್ಥೆಗಳ ತೆಕ್ಕೆಗೆ ಬರುವ ಸಾಧ್ಯತೆಗಳಿಗೆ. ಆದರೆ ಅದನ್ನು ಇಷ್ಟು ವರ್ಷಗಳ ಕಾಲ ಬೆಳೆಸಿದ ಸಾಮಾನ್ಯ ಭಾರತೀಯರ ತೆರಿಗೆ ಹಣ ಮಾತ್ರ ನಷ್ಟದ ಹೆಸರಿನಲ್ಲಿ, ಸಾಲದ ನೆಪದಲ್ಲಿ ಕೊಚ್ಚಿ ಹೋಗುವುದು ನಿಶ್ಚಿತವಾಗಿದೆ.

ಚಿತ್ರ: ಇಂಡಿಯಾ ಟುಡೆ. 

Leave a comment

FOOT PRINT

Top