An unconventional News Portal.

‘ಸಂಪಾದಕರು ವರ್ಸಸ್ ವಿಧಾನಸಭೆ’: ಪ್ರತಿಷ್ಠೆ ಪಕ್ಕಕ್ಕಿಟ್ಟು ‘ಹಕ್ಕುಚ್ಯುತಿ’ಯನ್ನು ವಿವರಿಸುವ ಕೆಲಸವಾಗಲಿ

‘ಸಂಪಾದಕರು ವರ್ಸಸ್ ವಿಧಾನಸಭೆ’: ಪ್ರತಿಷ್ಠೆ ಪಕ್ಕಕ್ಕಿಟ್ಟು ‘ಹಕ್ಕುಚ್ಯುತಿ’ಯನ್ನು ವಿವರಿಸುವ ಕೆಲಸವಾಗಲಿ

 ಎತ್ತು ಏರಿಗೆ ಎಳೆದರೆ; ಕೋಣ ನೀರಿಗೆ ಎಳೀತಂತೆ…

ಹೀಗೊಂದು ಗಾದೆಮಾತು ಕನ್ನಡದಲ್ಲಿ ಚಾಲ್ತಿಯಲ್ಲಿದೆ. ಸಾಮಾನ್ಯವಾಗಿ ಒಂದು ಒಳ್ಳೆಯ ಕಡೆಗೂ, ಇನ್ನೊಂದು ಕೆಟ್ಟದರ ಕಡೆಗೂ ಎಳೆದಾಡುತ್ತಿದ್ದರೆ, ಅದನ್ನು ಬಣ್ಣಿಸಲು ಇದನ್ನು ಬಳಸುತ್ತಾರೆ. ಆದರೆ ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಬೆಳವಣಿಗೆಯಲ್ಲಿ ಟ್ಯಾಬ್ಲಾಯ್ಡ್ ಪತ್ರಿಕೆಗಳ ಸಂಪಾದಕರು ಮತ್ತು ಕರ್ನಾಟಕದ ವಿಧಾನಸಭೆ ಎರಡೂ ಕೂಡ ನೀರಿನ ಕಡೆಗೇ ಎಳೆಯುತ್ತಿದ್ದಾರೆ. ಹೀಗಾಗಿ, ಏರಿಗೆ ಬರಬೇಕಿದ್ದ ಪ್ರಜಾಪ್ರಭುತ್ವದಲ್ಲಿ ಸಹಜವಾದ ಗೊಂದಲವೊಂದು ಹುಟ್ಟಿಕೊಂಡಿದೆ.

ಜೂನ್ 21ರಂದಯ ಮುಗಿದ ಅಧಿವೇಶನದ ಕೊನೆಯ ದಿನ ಕರ್ನಾಟಕದ ವಿಧಾನ ಸಭೆ ‘ಹಾಯ್ ಬೆಂಗಳೂರು’ ವಾರಪತ್ರಿಕೆ ಸಂಪಾದಕ ರವಿ ಬೆಳಗೆರೆ ಮತ್ತು ‘ಯಲಹಂಕ ವಾಯ್ಸ್’ ಪತ್ರಿಕೆಯ ಸಂಪಾದಕ ಅನಿಲ್ ರಾಜ್‌ ಅವರುಗಳಿಗೆ ಪ್ರತ್ಯೇಕ ಪ್ರಕರಣಗಳಲ್ಲಿ ಒಂದು ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಲು ಒಪ್ಪಿಗೆ ಸೂಚಿಸಿದೆ. ತಮ್ಮ ಪತ್ರಿಕೆಗಳಲ್ಲಿ ಜನಪ್ರತಿನಿಧಿಗಳ ವಿರುದ್ಧ ತೇಜೋವಧೆಯಾಗುವಂತಹ ಸುದ್ದಿ ಪ್ರಕಟಿಸಿದ, ಹಕ್ಕು ಬಾಧ್ಯತಾ ಸಮಿತಿಗೆ ಎದುರಿಗೆ ಉಡಾಫೆಯ ನಡವಳಿಕೆ ತೋರಿಸಿದ ಹಿನ್ನೆಲೆಯಲ್ಲಿ ಇಬ್ಬರಿಗೂ ಸಮಿತಿ ಜೈಲು ಶಿಕ್ಷೆಗೆ ಶಿಫಾರಸು ಮಾಡಿತ್ತು. ಇದನ್ನು ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ.

ಈ ಬೆಳವಣಿಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪತ್ರಿಕೆಗಳಲ್ಲಿ ಜನಪ್ರತಿನಿಧಿಗಳ ವಿರುದ್ಧ ಪ್ರಕಟವಾಗುವ ಸುದ್ದಿಗಳು ಹಕ್ಕು ಚ್ಯುತಿಗೆ ಒಳಪಡುತ್ತವಾ? ಹಕ್ಕು ಚ್ಯುತಿ ಎಂದರೇನು? ಇದಕ್ಕಿರುವ ನಿಯಮಾವಳಿಗಳು ಏನು ಹೇಳುತ್ತವೆ? ಪತ್ರಿಕೆಗಳ ಸಂಪಾದಕರು ಎಸಗಿದ ತಪ್ಪಾದರೂ ಏನು? ಇಷ್ಟಕ್ಕೂ ಶಾಸನ ಸಭೆಗೆ ಜೈಲು ಶಿಕ್ಷೆ ವಿಧಿಸುವ ನ್ಯಾಯಾಂಗದ ಅಧಿಕಾರ ಇದೆಯಾ? ಹೀಗೆ ಹಲವು ಪ್ರಶ್ನೆಗಳ ಸುತ್ತ ಚರ್ಚೆ ನಡೆಯುತ್ತಿದೆ. ಇದಕ್ಕಿಂತ ಹೆಚ್ಚಾಗಿ ಇದು ಮಾಧ್ಯಮ ಸ್ವಾತಂತ್ರ್ಯದ ಮೇಲೆ ಕರ್ನಾಟಕದ ಕಾಂಗ್ರೆಸ್ ಸರಕಾರ ನಡೆಸುತ್ತಿರುವ ದಾಳಿ ಎಂದು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಬೆಳವಣಿಗೆಯ ಎಲ್ಲಾ ಆಯಾಮಗಳನ್ನು ‘ಸಮಾಚಾರ’ ವಸ್ತುನಿಷ್ಟವಾಗಿ ಪರಿಶೀಲನೆಗೆ ಒಳಪಡಿಸುವ ಪ್ರಯತ್ನ ಮಾಡಿದೆ.

ಏನಿದು ಬೆಳವಣಿಗೆ?:

‘ಹಾಯ್‌ ಬೆಂಗಳೂರು’ ಪತ್ರಿಕೆಯ ಸಂಪಾದಕ ರವಿ ಬೆಳೆಗರೆ ಸದ್ಯ ವಿಧಾನಸಭೆಯ ಸ್ಪೀಕರ್ ಆಗಿರುವ ಕೆ. ಬಿ. ಕೋಳಿವಾಡ ವಿರುದ್ಧ ಸೆ. 11, 2014ರಲ್ಲಿ ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ್ದ ಸುದ್ದಿಯು ತೇಜೋವಧೆ ಮಾಡುವಂತಹ ಅಂಶಗಳನ್ನು ಒಳಗೊಂಡಿತ್ತು. ಈ ಕುರಿತು ಹಕ್ಕು ಚ್ಯುತಿ ಮಂಡನೆಯಾಗಿತ್ತು. ಮೂಲಗಳ ಪ್ರಕಾರ ಸಮಿತಿ ಮುಂದೆ ಹಾಜರಾಗುವಂತೆ ರವಿ ಬೆಳಗೆರೆಗೆ ಸುಮಾರು 11 ಬಾರಿ ನೋಟಿಸ್ ಕೂಡ ನೀಡಲಾಗಿತ್ತು. ಆದರೆ ಹಕ್ಕು ಬಾಧ್ಯತಾ ಸಮಿತಿ ಮುಂದೆ ರವಿ ಬೆಳಗೆರೆ  ಹಾಜರಾಗದೆ ಉದ್ದಟತನವನ್ನು ತೋರಿಸಿದ ಹಿನ್ನೆಲೆಯಲ್ಲಿ ಒಂದು ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡವನ್ನು ವಿಧಿಸಿ ಸಮಿತಿ ಮಾರ್ಚ್‌ ತಿಂಗಳಿನಲ್ಲಿಯೇ ಶಿಫಾರಸು ಮಾಡಿತ್ತು.

ಪ್ರತ್ಯೇಕ ಪ್ರಕರಣಗಳಲ್ಲಿ ಹಕ್ಕು ಬಾಧ್ಯತಾ ಸಮಿತಿ ಜೈಲು ಶಿಕ್ಷೆ ವಿಧಿಸಿದ ಶಿಫಾರಸುಗಳು.

ಪ್ರತ್ಯೇಕ ಪ್ರಕರಣಗಳಲ್ಲಿ ಹಕ್ಕು ಬಾಧ್ಯತಾ ಸಮಿತಿ ಜೈಲು ಶಿಕ್ಷೆ ವಿಧಿಸಿದ ಶಿಫಾರಸುಗಳು.

ಇದೇ ರೀತಿ, ಯಲಹಂಕ ಕ್ಷೇತ್ರದ ಶಾಸಕ ಎಸ್. ಆರ್. ವಿಶ್ವನಾಥ್ ವಿರುದ್ಧ ತೇಜೋವಧೆ ಮಾಡುವಂತಹ ಸುದ್ದಿಗಳನ್ನು ವ್ಯಂಗ್ಯಚಿತ್ರಗಳ ಸಮೇತ ಪದೇ ಪದೇ ಪ್ರಕಟಿಸಿದ ‘ಯಲಹಂಕ ವಾಯ್ಸ್’ ಪತ್ರಿಕೆ ಸಂಪಾದಕ ಅನಿಲ್ ರಾಜ್ ವಿರುದ್ಧವೂ ಒಂದು ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿ ಸಮಿತಿ ಶಿಫಾರಸು ಮಾಡಿತ್ತು. ಈ ಪ್ರಕರಣದಲ್ಲಿ ಒಮ್ಮೆ ಸಮಿತಿ ಮುಂದೆ ಹಾಜರಾದ ಅನಿಲ್ ರಾಜ್ ಕ್ಷಮಾಪಣೆ ಕೂಡ ಕೋರಿದ್ದರು. ಆದರೆ ಮತ್ತೆ ತಮ್ಮ ಪತ್ರಿಕೆಯಲ್ಲಿ ಅದೇ ವರದಿಯಲ್ಲಿ ಮರು ಮುದ್ರಣ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶಿಕ್ಷೆಗೆ ಗುರಿಪಡಿಸಲು ತೀರ್ಮಾನಿಸಲಾಯಿತು ಎನ್ನುತ್ತಾರೆ ಸಮಿತಿಯ ಅಧ್ಯಕ್ಷರಾದ ಶಾಸಕ ಕಿಮ್ಮನೆ ರತ್ನಾಕರ್.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಧಾನಸಭೆಗೆ ತನ್ನದೇ ಆದ ಘನತೆ ಇದೆ. ಅದರ ಒಂದು ಅಂಗವಾಗಿರುವ ಹಕ್ಕು ಬಾಧ್ಯತಾ ಸಮಿತಿ ಕರೆದಾಗ ಪತ್ರಕರ್ತರು ಹಾಜರಾಗದೇ ಇದ್ದರೆ, ಹಾಜರಾಗಿ ಕ್ಷಮಾಪಣೆ ಕೋರಿದ ನಂತರವೂ ತಪ್ಪನ್ನು ಮುಂದುವರಿಸಿದರೆ ಶಿಕ್ಷೆ ವಿಧಿಸದೇ ಇರಲು ಸಾಧ್ಯವಾ? ಈ ವಿಚಾರದಲ್ಲಿ ವಿಧಾನಸಭೆ ಜೈಲಿಗೆ ಕಳುಹಿಸುವ ಶಿಕ್ಷೆಯನ್ನು ವಿಧಿಸುವುದಕ್ಕಿಂತ ವಾಗ್ದಂಡನೆ, ಛೀಮಾರಿಯಂತಹ ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳಬಹುದಿತ್ತು ಎಂದು ಅಭಿಪ್ರಾಯಗಳು ಕೇಳಿಬರುತ್ತಿದೆ.

ವಿಧಾನಸಭೆಯ ಜೈಲು ಶಿಕ್ಷೆಯ ತೀರ್ಮಾನವನ್ನು ವಿರೋಧಿಸಿದ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್, “ಸದನದಲ್ಲಿ ಆ ಇಬ್ಬರು ಸಂಪಾದಕರ ವಿಷಯವನ್ನು ಇಟ್ಟ ತರಾತುರಿಯ ರೀತಿ, ಅತ್ಯಂತ ತೀವ್ರತರ ತೀರ್ಪು ಕೊಟ್ಟ ವೇಗ ಇವೆಲ್ಲ ಸಂಸದೀಯ ನಡವಳಿಕೆಗೆ ತಕ್ಕದಲ್ಲ. ಅಲ್ಲಿದ್ದ ಸದಸ್ಯರಿಗೆ ಏನಾಗುತ್ತಿದೆ ಎಂದು ಗೊತ್ತಾಗುವ ಮುನ್ನವೇ ಮುಗಿದೇಹೋಯಿತು,” ಎಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. “ಈ ತೀರ್ಪನ್ನು ಕೂಡಲೇ ಹಿಂತೆಗೆದುಕೊಳ್ಳಬೇಕಾದ ಅತ್ಯವಶ್ಯಕತೆಯನ್ನು (ಕಿಮ್ಮನೆ ರತ್ನಾಕರ್‌ ಅವರಿಗೆ) ತಿಳಿಸಿದ್ದೇನೆ,” ಎಂದು ಅವರು ಒತ್ತಾಯಿಸಿದ್ದಾರೆ.

ಹಕ್ಕುಚ್ಯುತಿ ಎಂದರೇನು?: 

ಜನರಿಂದ ಚುನಾಯಿತರಾಗುವ ಪ್ರತಿನಿಧಿಗಳ ಹಕ್ಕುಗಳನ್ನು ರಕ್ಷಣೆಗೆ ‘ಕರ್ನಾಟಕ ವಿಧಾನಸಭೆ ಕಾರ್ಯವಿಧಾನ ಮತ್ತು ನಡವಳಿಕೆಗಳ ನಿಯಮ’ಗಳ ಅಡಿಯಲ್ಲಿ ಪರಿಷ್ಕರಿಸಲಾಗಿದೆ. ಇದರ ಅಧ್ಯಾಯ 21ರಲ್ಲಿ ನಿಯಮ 191ರಿಂದ ನಿಯಮ 201ರವರೆಗೆ ಹಕ್ಕು ಬಾಧ್ಯತಾ ನಿಯಮಗಳನ್ನು ಪಟ್ಟಿಮಾಡಲಾಗಿದೆ. ಶಾಸನ ಸಭೆಯ ಪ್ರತಿನಿಧಿಗಳು ಹಕ್ಕುಚ್ಯುತಿಯನ್ನು ಎತ್ತುವುದು ಹೇಗೆ? ಇದನ್ನು ಯಾವ ನಮೂನೆಯಲ್ಲಿ ಮಂಡಿಸಬೇಕು? ಹೀಗೆ ಹಲವು ಪ್ರಕ್ರಿಯೆಗಳನ್ನು ಈ ನಿಯಮಗಳು ವಿವರಿಸುತ್ತವೆ. ಆದರೆ ಎಲ್ಲಿಯೂ ಹಕ್ಕುಚ್ಯುತಿ ಎಂದರೇನು ಎಂಬ ಬಗ್ಗೆ ಮಾಹಿತಿ ಇಲ್ಲ. “ಹಕ್ಕುಚ್ಯುತಿ ನಿಯಮಗಳಿವೆ. ಆದರೆ ಹಾಗೆಂದರೆ ಏನು ಎಂದು ವಿವರಣೆ ಇಲ್ಲ. ಅದನ್ನು ನಾವೀಗ ವಿವರಿಸುವ ಕೆಲಸ ಮಾಡಬೇಕಿದೆ,” ಎನ್ನುತ್ತಾರೆ ಹಕ್ಕುಬಾಧ್ಯತಾ ಸಮಿತಿ ಅಧ್ಯಕ್ಷ ಕಿಮ್ಮನೆ ರತ್ನಾಕರ್.

ಇದೇ ನಿಮಯಗಳಲ್ಲಿ ಹಕ್ಕುಚ್ಯುತಿಯನ್ನು ಮಂಡಿಸುವಾಗ ‘ಅದು ತಕ್ಷಣದ ಘಟನೆಯಾಗಿರಬೇಕು’ ಎಂಬ ಒಂದು ಸಾಲಿದೆ. ಹಾಗಾದರೆ, ಪತ್ರಿಕೆಗಳಲ್ಲಿ ಪ್ರಕಟವಾಗುವ ಸುದ್ದಿಗಳು ‘ತಕ್ಷಣದ ಘಟನೆ’ ಹೇಗಾಗುತ್ತದೆ? ಎಂಬ ಪ್ರಶ್ನೆ ಮೂಡುತ್ತದೆ. “ಪತ್ರಿಕೆಗಳಲ್ಲಿ ತೇಜೋವಧೆಯಾಗುವಂತಹ ಸುದ್ದಿ ಪ್ರಕಟವಾದರೆ ಮಾನನಷ್ಟ ಮೊಕದ್ದಮೆ ಕೆಳಗೆ ಬರುತ್ತದೆ. ಅದನ್ನು ಹಕ್ಕುಚ್ಯುತಿ ಎಂದು ಹೇಳಲು ಸಾಧ್ಯವಿಲ್ಲ. ಸದನದ ಒಳಗೆ ಶಾಸಕರಿಗೆ ತಮ್ಮ ಹಕ್ಕುಗಳನ್ನು ನಿರ್ವಹಿಸಲು ಅಡ್ಡಿ ಪಡಿಸಿದ ಘಟನೆಗಳು ಮಾತ್ರವೇ ಇದರ ಅಡಿಯಲ್ಲಿ ಬರುತ್ತವೆ,” ಎನ್ನುತ್ತಾರೆ ಹಿರಿಯ ವಕೀಲ ಬಿ. ವಿ. ಆಚಾರ್ಯ. ಇದರ ಜತೆಗೆ, ಜೈಲು ಶಿಕ್ಷೆಯನ್ನು ವಿಧಿಸುವ ಮೂಲಕ ನ್ಯಾಯಾಂಗದ ಅಧಿಕಾರವನ್ನು ಶಾಸನ ಸಭೆ ಕೈಗೆತ್ತುಕೊಂಡಿದೆ ಎಂದವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಹೀಗಿದ್ದರೂ, ಕರ್ನಾಟಕದ ವಿಧಾನಸಭೆ ಯಾಕೆ ಇಬ್ಬರು ಸಂಪಾದಕರಿಗೆ ಜೈಲು ಶಿಕ್ಷೆಯನ್ನು ವಿಧಿಸಿತು? “ಹಕ್ಕು ಬಾಧ್ಯತಾ ಸಮಿತಿ ಜೈಲು ಶಿಕ್ಷೆ ವಿಧಿಸಿ ಶಿಫಾರಸು ಮಾಡಿತ್ತು. ಅದನ್ನು ವಿಧಾನಸಭೆ ಅಂಗೀಕರಿಸಿದೆ. ಇದರಲ್ಲಿ ತಪ್ಪಿದ್ದರೆ ಸಂಬಂಧಪಟ್ಟವರು ನ್ಯಾಯಾಲಯದ ಮೊರೆ ಹೋಗಬಹುದು,” ಎನ್ನುತ್ತಾರೆ ಸ್ಪೀಕರ್ ಕೆ. ಬಿ. ಕೋಳಿವಾಡ.

“ಇಂತಹ ಘಟನೆಗಳು ನಡೆದಾಗಲೇ ಹಕ್ಕುಚ್ಯುತಿ ಬಗ್ಗೆ ಚರ್ಚೆಗೆ ಅವಕಾಶ ಸಿಗುತ್ತದೆ. ನಾವೀಗಾಗಲೇ ಇದನ್ನು ವಿಸ್ತರಿಸುವ ಕೆಲಸ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಈ ಕುರಿತು ಚರ್ಚೆಗಳು ನಡೆಯಲಿವೆ,” ಎನ್ನುತ್ತಾರೆ ಕಿಮ್ಮನೆ ರತ್ನಾಕರ್. “ಹಕ್ಕು ಚ್ಯುತಿ ಎಂದರೇನು ಎಂಬುದನ್ನು ಮೊದಲು ಸ್ಪಷ್ಟವಾಗಿ ವಿವರಿಸುವ ಕೆಲಸ ಆಗಬೇಕು. ಶಾಸಕರು ಹಕ್ಕು ಚ್ಯುತಿಯನ್ನು ಮುಂದಿಟ್ಟುಕೊಂಡು ಮಾಧ್ಯಮಗಳ ಮೇಲೆ ಮುಗಿಬೀಳುವುದನ್ನು ತಪ್ಪಿಸಲು ಇಂತಹದೊಂದು ಕ್ರಮ ಅನಿವಾರ್ಯ. ಈ ಕುರಿತು ಸದ್ಯದಲ್ಲಿಯೇ ಸಂಪೂರ್ಣ ಮಾಹಿತಿ ಒಳಗೊಂಡ ಮನವಿಯೊಂದನ್ನು ವಿಧಾನಸಭೆಯ ಸ್ಪೀಕರ್ ಅವರಿಗೆ ನೀಡಲು ತೀರ್ಮಾನಿಸಿದ್ದೇವೆ,” ಎನ್ನುತ್ತಾರೆ ಪತ್ರಕರ್ತರ ಅಧ್ಯಯನ ಕೇಂದ್ರದ ನವೀನ್ ಸೂರಿಂಜೆ.

ಈಗಾಗಲೇ ಕರ್ನಾಟಕದಲ್ಲಿ ಸುದ್ದಿವಾಹಿನಿಗಳ ಮೇಲೆ ನಿರ್ಬಂಧ ಹೇರಲು ಸದನ ಸಮಿತಿಯೊಂದು ರಚನೆಯಾಗಿದೆ. ಇದೀಗ ಹಕ್ಕು ಬಾಧ್ಯತಾ ಸಮಿತಿ ಕೂಡ ಹಕ್ಕು ಚ್ಯುತಿ ಎಂದರೇನು ಎಂದು ವಿವರಿಸಲು ಹೊರಟಿದೆ. ಆದರೆ ಇದು ಏಕಪಕ್ಷೀಯವಾಗಿ ನಡೆಯುವ ಪ್ರಕ್ರಿಯೆಗಳಾಗುವ ಆತಂಕವೂ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆ ಸಂಘರ್ಷ, ಚರ್ಚೆಗಳ ಮೂಲಕವೇ ಬೆಳೆಯಬೇಕು. ಆದರೆ ಅದರಲ್ಲಿ ಪ್ರತಿಷ್ಠೆಗಳು ಕೆಲಸ ಮಾಡದಂತೆ ಎಚ್ಚರಿಕೆ ವಹಿಸಬೇಕಿರುವ ಅಗತ್ಯ ಇರುವುದನ್ನು ಈ ಬೆಳವಣಿಗೆ ಸಾರಿ ಹೇಳುತ್ತಿದೆ.

ಇವೆಲ್ಲವುಗಳ ಆಚೆಗೆ, ಈ ಪ್ರಕರಣಗಳಲ್ಲಿ ಪತ್ರಿಕೆಗಳ ಸಂಪಾಕರು ಹಾಗೂ ಹಕ್ಕುಚ್ಯುತಿಯನ್ನು ಮಂಡಿಸಿದ ಜನಪ್ರತಿನಿಧಿಗಳು ಪ್ರತಿಷ್ಠೆಗೆ ಬಿದ್ದಿರುವುದು ಸ್ಪಷ್ಟವಾಗಿ ಎದ್ದು ಕಾಣಿಸುತ್ತಿದೆ. ಇಬ್ಬರೂ ವ್ಯವಸ್ಥೆಯ ಚೌಕಟ್ಟುಗಳನ್ನು ಮೀರಿದ್ದು ಢಾಳಾಗಿ ಕಾಣಿಸುತ್ತಿದೆ. ಅಂತಿಮವಾಗಿ ವಿಧಾನಮಂಡಲ ಮತ್ತು ಮಾಧ್ಯಮಗಳ ನಡುವೆ ಇರುವ ಕಂದಕವನ್ನು ಇನ್ನಷ್ಟು ಹೆಚ್ಚಿಸಲು ಕೊಡುಗೆಗಳನ್ನು ನೀಡುತ್ತಿದ್ದಾರೆ, ಅಷ್ಟೆ.

Leave a comment

FOOT PRINT

Top