An unconventional News Portal.

ಸರಕಾರಿ ಆದೇಶಕ್ಕಾಗಿ ಕಾಯುತ್ತಿರುವ ಸಹಕಾರಿ ಕ್ಷೇತ್ರ; ಸಾಲ ಮನ್ನಾ ಹಿಂದಿರುವ ‘ಸಂಖ್ಯಾಶಾಸ್ತ್ರ’!

ಸರಕಾರಿ ಆದೇಶಕ್ಕಾಗಿ ಕಾಯುತ್ತಿರುವ ಸಹಕಾರಿ ಕ್ಷೇತ್ರ; ಸಾಲ ಮನ್ನಾ ಹಿಂದಿರುವ ‘ಸಂಖ್ಯಾಶಾಸ್ತ್ರ’!

ದೇಶಾದ್ಯಂತ ಕೃಷಿ ಬಿಕ್ಕಟ್ಟು ಬಿಗಡಾಯಿಸುತ್ತಿರುವ ದಿನಗಳಲ್ಲಿಯೇ ಕರ್ನಾಟಕ ಸರಕಾರ 50 ಸಾವಿರದವರೆಗಿನ ಬೆಳೆ ಸಾಲ ಮನ್ನಾ ಘೋಷಿಸಿದೆ. ಘೋಷಣೆ ಮಾತ್ರವಲ್ಲ; ಇನ್ನೆರಡು ದಿನಗಳಲ್ಲಿ ಈ ಸಂಬಂಧಪಟ್ಟಂತೆ ಸರಕಾರದ ಆದೇಶವೂ ಹೊರಬೀಳಲಿದೆ ಎಂದು ಸಿಎಂ ಸಿದ್ದರಾಮಯ್ಯ ಬುಧವಾರ ಅಧಿವೇಶನದಲ್ಲಿ ಹೇಳಿದ್ದಾರೆ. ಹಾಗೇನಾದರೂ ಆದರೆ, ಪ್ರಸಕ್ತ ಸಾಲಿನಲ್ಲಿ ಸಾಲ ಮನ್ನಾ ಘೋಷಣೆಯನ್ನು ಅನುಷ್ಠಾನಕ್ಕೆ ತಂದ ದೇಶದ ಮೊದಲ ರಾಜ್ಯ ಎನ್ನಿಸಿಕೊಳ್ಳುತ್ತದೆ- ಕರ್ನಾಟಕ. 

ಸಾಲ ಮನ್ನಾ ಸುತ್ತ ಗುರುವಾರದ ಬೆಳವಣಿಗೆಗಳಲ್ಲಿ, ಕೇಂದ್ರ ಸಚಿವ ವೆಂಕಯ್ಯ ನಾಯ್ಡು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. “ರೈತರ ಸಾಲ ಮನ್ನಾ ಮಾಡುವುದು ಫ್ಯಾಷನ್ ಆಗಿದೆ. ಅತ್ಯಂತ ಸಂಕಷ್ಟದ ಸಮಯದಲ್ಲಿ ಮಾತ್ರವೇ ಸಾಲ ಮನ್ನಾ ಮಾಡಬೇಕು. ಅದೇ (ಕೃಷಿ ಬಿಕ್ಕಟ್ಟಿಗೆ) ಅಂತಿಮ ಪರಿಹಾರ ಅಲ್ಲ,” ಎಂಬ ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಹೊಣೆಯನ್ನು ಹೊತ್ತುಕೊಂಡಿರುವ ನಾಯ್ಡು ಹೇಳಿಕೆಯನ್ನು ಮಾಧ್ಯಮಗಳು ವರದಿ ಮಾಡಿವೆ.

ಬಿಜೆಪಿ ಅಧಿಕಾರದಲ್ಲಿರುವ ಉತ್ತರ ಪ್ರದೇಶದಲ್ಲಿ ಸುಮಾರು 36 ಸಾವಿರ ಕೋಟಿ ರೂಪಾಯಿ ಸಣ್ಣ ಹಾಗೂ ಅತಿ ಸಣ್ಣ ರೈತರ ಸಾಲ ಮನ್ನಾ ಮಾಡಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಣೆ ಮಾಡಿದ್ದರು. ಅದಿನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಮಹಾರಾಷ್ಟ್ರದಲ್ಲಿ ಜೂನ್ ತಿಂಗಳ ಆರಂಭದಲ್ಲಿ ನಡೆದ ಭಾರಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ರೈತರ ಸಾಲ ಮನ್ನಾ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಮಿತಿಯೊಂದನ್ನು ರಚಿಸಲಾಗಿದೆ.

ಈ ನಡುವೆ, ಕರ್ನಾಟಕದ ಕಾಂಗ್ರೆಸ್ ಸರಕಾರ 8, 165 ಕೋಟಿ ಸಹಕಾರಿ ಸಂಸ್ಥೆಗಳಲ್ಲಿ ರೈತರು ಪಡೆದ ಅಲ್ಪಾವಧಿ ಬೆಳೆ ಸಾಲವನ್ನು ಮನ್ನಾ ಮಾಡಿದೆ. ಅದನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಸಹಕಾರ ಇಲಾಖೆ, ಅಪೆಕ್ಸ್ ಬ್ಯಾಂಕ್ ಸೇರಿದಂತೆ ಸಂಬಂಧಪಟ್ಟ ಸಂಸ್ಥೆಗಳ ಪ್ರತಿನಿಧಿಗಳ ಜತೆಯಲ್ಲಿ ಮಾತುಕತೆ ನಡೆಸುತ್ತಿದೆ. ಸರಕಾರಿ ಆದೇಶ ಹೊರಬಿದ್ದರೆ, ಅಧಿವೇಶನದಲ್ಲಿ ಹೇಳಿದಂತೆ ರಾಜ್ಯದಲ್ಲಿರುವ ಸುಮಾರು 5 ಸಾವಿರ ಸಹಕಾರಿ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದ 22. 27 ಲಕ್ಷ ರೈತರಿಗೆ ಅನುಕೂಲವಾಗಲಿದೆ.

ಇದು ಸಹಕಾರಿ ಸಂರಚನೆ: 

ರಾಜ್ಯದಲ್ಲಿ ಸುಮಾರು 5,098 ಸರಕಾರಿ ಸಂಸ್ಥೆಗಳಿವೆ. ಇವೆಲ್ಲವೂ ಜಿಲ್ಲಾ ಮಟ್ಟದಲ್ಲಿರುವ 21 ಡಿಸಿಸಿ ಬ್ಯಾಂಕ್‌ಗಳ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿವೆ. ಡಿಸಿಸಿ ಬ್ಯಾಂಕ್‌ಗಳಿಗೆ ಅಪೆಕ್ಸ್‌ ಬ್ಯಾಂಕ್‌ ಆರ್ಥಿಕ ನೆರವು ನೀಡುತ್ತಿದೆ. ಅಪೆಕ್ಸ್‌ ಬ್ಯಾಂಕ್‌ಗೆ ನಬಾರ್ಡ್‌ ಕಡೆಯಿಂದ ವರ್ಷಕ್ಕೆ ಹೆಚ್ಚು ಕಡಿಮೆ 3 ಸಾವಿರ ಕೋಟಿ ರೂಪಾಯಿ ಆರ್ಥಿಕ ನೆರವು ಸಿಗುತ್ತಿದೆ. “ಇತ್ತೀಚೆಗೆ ನಬಾರ್ಡ್‌ ನೀಡುತ್ತಿರುವ ಆರ್ಥಿಕ ನೆರವು ಕಡಿಮೆಯಾಗುತ್ತಿದೆ. ಅಪೆಕ್ಸ್‌ ಬ್ಯಾಂಕ್‌ನಿಂದ ಡಿಸಿಸಿ ಬ್ಯಾಂಕ್‌ಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಅವುಗಳು ಸಣ್ಣ ಸಹಕಾರಿ ಸಂಸ್ಥೆಗಳಿಗೆ ಹಣ ನೀಡುತ್ತಿವೆ. ಅವುಗಳು ರೈತರಿಗೆ ಸಾಲ ನೀಡುತ್ತಿವೆ. ಕರ್ನಾಟಕದಲ್ಲಿ ಅತಿ ಹೆಚ್ಚು ಬೆಳೆ ಸಾಲ ನೀಡುತ್ತಿರುವುದು ಬೆಳಗಾವಿ, ಬಾಗಲಕೋಟೆ, ವಿಜಯಪುರ ಹಾಗೂ ಮಂಗಳೂರು ಜಿಲ್ಲೆಗಳಲ್ಲಿ. ಕೋಲಾರದಂತಹ ಜಿಲ್ಲೆಗಳಲ್ಲಿ ಪ್ರತಿ ರೈತರಿಗೆ 15- 20 ಸಾವಿರ ಸಾಲ ನೀಡಿದರೆ ಹೆಚ್ಚು. ಇದೀಗ, ಸರಕಾರ ಸಾಲ ಮನ್ನಾ ಮಾಡಿರುವುದರಿಂದ ಸಾಕಷ್ಟು ರೈತರಿಗೆ ನೆರವಾಗುವುದರಲ್ಲಿ ಅನುಮಾನ ಇಲ್ಲ. ಆದರೆ, 8 ಸಾವಿರ ಕೋಟಿ ಮೊತ್ತವನ್ನು ಸರಕಾರ ಹೇಗೆ ಒದಗಿಸುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಕುರಿತು ಚರ್ಚೆ ನಡೆಯುತ್ತಿದೆ,” ಎಂದರು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಅಪೆಕ್ಸ್ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕರು.

‘ಸಮಾಚಾರ’ದ ಜತೆ ಮಾತನಾಡಿದ ಅವರು, “ಕಳೆದ 15 ದಿನಗಳಿಂದ ಉತ್ತರ ಪ್ರದೇಶದಲ್ಲಿ ಸಾಲ ಮನ್ನಾ ಘೋಷಣೆ ಸಂಬಂಧಪಟ್ಟಂತೆ ಮಾಹಿತಿಗಾಗಿ ಸಂಪರ್ಕಿಸುತ್ತಲೇ ಇದ್ದೇವೆ. ಆದರೆ ಸ್ಪಷ್ಟತೆ ಲಭ್ಯವಾಗುತ್ತಿಲ್ಲ,” ಎಂದರು.

ಕರ್ನಾಟಕದಲ್ಲಿ ಜೂನ್. 20ರ ಅಂತ್ಯಕ್ಕೆ ಸಾಲ ಪಡೆದವರ ಮೊತ್ತದಲ್ಲಿ 50 ಸಾವಿರದವರೆಗೆ ಸರಕಾರ ತುಂಬಿಕೊಡಲಿದೆ. “ಜೂನ್ ಮೊದಲ ವಾರದಲ್ಲಿ ಸಾಲ ಪಡೆದ ರೈತರು ಸಾಲ ಮನ್ನಾ ಆಗುತ್ತಿದ್ದಂತೆ ಮತ್ತೆ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಅಂತಹ ಸಮಯದಲ್ಲಿ ಯಾವ ನೀತಿಯನ್ನು ಅನುಸರಿಸಬೇಕು ಎಂದು ಇನ್ನೂ ಸ್ಪಷ್ಟವಾಗಿಲ್ಲ. ಈ ಕುರಿತು ಸರಕಾರದ ಆದೇಶ ಹೊರಬೀಳುವವರೆಗೆ ಕಾದು ನೋಡಬೇಕಿದೆ,” ಎಂದವರು ಪ್ರತಿಕ್ರಿಯೆ ನೀಡಿದರು.

ರಾಜಕೀಯದ ಆಚೆಗೆ: 

ಸಾಲ ಮನ್ನಾ ವಿಚಾರ ಈಗಾಗಲೇ ರಾಜಕೀಯ ಬಣ್ಣವನ್ನು ತೆಗೆದುಕೊಂಡಿದೆ. ಪ್ರತಿಪಕ್ಷ ಬಿಜೆಪಿ, ಅದರಲ್ಲೂ ವಿಶೇಷವಾಗಿ ಪಕ್ಷದ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ, ತಮ್ಮ ಹೋರಾಟದ ಫಲವಾಗಿ ಕಾಂಗ್ರೆಸ್ ಸರಕಾರ ಸಾಲ ಮನ್ನಾ ಮಾಡಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, “ರಾಷ್ಟ್ರೀಕೃತ ಬ್ಯಾಂಕ್‌ಗಳು ನೀಡಿರುವ ಸಾಲ ಮನ್ನಾ ಸಂಬಂಧಪಟ್ಟ ಹಾಗೆ ಸದ್ಯ ಯಾವುದೇ ಹೇಳಿಕೆ ನೀಡುವುದಿಲ್ಲ,” ಎಂದಿದ್ದಾರೆ. ಸಹಕಾರಿ ಸಂಸ್ಥೆಗಳ ಮೂರು ಪಟ್ಟು ಬೆಳೆಸಾಲವನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ರೈತರು ಪಡೆದಿದ್ದಾರೆ ಎಂಬ ಅಂದಾಜಿದೆ. ಅದನ್ನು ಕೇಂದ್ರ ಸರಕಾರ ಮನ್ನಾ ಮಾಡಬೇಕು ಎಂದು ರಾಜ್ಯ ಸರಕಾರ ದಾಳ ಉರುಳಿಸಿದೆ. ಈ ಹಿನ್ನೆಲೆಯಲ್ಲಿ ರೈತರ ಈ ಸಾಲ ಮನ್ನಾ ಸಂಬಂಧಪಟ್ಟ ಹಾಗೆ ಬಿಜೆಪಿಯ ಮುಂದಿನ ನಡೆ ಏನಾಗಿರಲಿದೆ ಎಂಬುದನ್ನೂ ಕಾದು ನೋಡಬೇಕು.

“ಸಿಎಂ ಸಿದ್ದರಾಮಯ್ಯ ಡಿಸೆಂಬರ್‌ ವೇಳೆಗೆ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ರೈತರ ಸಾಲ ಮನ್ನಾ ಘೋಷಣೆ ಮಾಡಬೇಕು ಎಂದು ತೀರ್ಮಾನಿಸಿದ್ದರು. ಅದೇ ವೇಳೆಗೆ ಪ್ರತಿಪಕ್ಷಗಳು ಅಧಿವೇಶನದಲ್ಲಿಯೇ ಹಗಲು ರಾತ್ರಿ ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ ಧರಣಿ ನಡೆಸಲು ನಿರ್ಧರಿಸಿದ್ದವು. ಒಂದು ವೇಳೆ ಹಾಗೇನಾದರೂ ಆಗಿದ್ದರೆ, ಸರಕಾರ ಸಾಲ ಮನ್ನಾ ಮಾಡಿದರೂ, ಅದರ ರಾಜಕೀಯ ಫಲ ಲಭ್ಯವಾಗುತ್ತಿರಲಿಲ್ಲ. ಹೀಗಾಗಿ ಸಿದ್ದರಾಮಯ್ಯ ಇದೇ ಅಧಿವೇಶನದಲ್ಲಿ ಸಾಲ ಮನ್ನಾ ಘೋಷಣೆ ಮಾಡಿದರು,” ಎನ್ನುತ್ತಾರೆ ರಾಜಕೀಯ ವರದಿಗಾರರೊಬ್ಬರು. ಒಟ್ಟಾರೆ, ರಾಜ್ಯ ಸರಕಾರದ ಸಾಲ ಮನ್ನಾ ಸುತ್ತ ರಾಜಕೀಯದ ಚರ್ಚೆಗಳು ನಡೆಯುತ್ತಿವೆ.

“ಬೆಳೆ ಸಾಲ ಮನ್ನಾ ಮಾಡಿದ್ದರಿಂದ ರೈತರಿಗೆ ಆರ್ಥಿಕ ನೆರವು ಸಿಕ್ಕಂತಾಗುತ್ತೆ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ ಅದೊಂದೇ ಪರಿಹಾರ ಅಲ್ಲ. ಪ್ರತಿ ಹೋಬಳಿಗೊಂದು ಕೋಲ್ಡ್ ಸ್ಟೋರೇಜ್ ಸ್ಥಾಪಿಸಬೇಕು. ರೈತ ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗಬೇಕು. ಹಾಗಾದಾಗ ಮಾತ್ರವೇ ಕೃಷಿ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ರೈತರೂ ಸಾಲ ಮನ್ನಾ ಮಾಡಿ ಎಂದು ಎದುರು ನೋಡುವುದು ತಪ್ಪುತ್ತದೆ ಎನ್ನುತ್ತಾರೆ,” ಅಪೆಕ್ಸ್‌ ಬ್ಯಾಂಕ್‌ನ ಅಧಿಕಾರಿ.

ರೈತರ ಸಾಲ ಮನ್ನಾ ಮುಂದಿನ ಚುನಾವಣೆಗೆ ಅಸ್ತ್ರವಾಗಿ ರಾಜ್ಯದಲ್ಲಿ ಬಳಕೆಯಾಗಬಹುದು. ಆದರೆ, ಅದರ ಆಚೆಗೂ ಇರುವ ಪರ್ಯಾಯ ದಾರಿಗಳ ಬಗ್ಗೆ ಮುಖ್ಯಮಂತ್ರಿ ಗಮನಹರಿಸಿದಲ್ಲಿ ಮಾತ್ರವೇ ರಾಜ್ಯದ ಕೃಷಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸರಕಾರದ ಜನಪ್ರಿಯತೆ ಶಾಶ್ವತವಾಗಿ ಉಳಿಯಬಹುದು. ಆ ನಿಟ್ಟಿನಲ್ಲಿ ಆಲೋಚನೆ ಮಾಡಬೇಕಿದೆ. ಕೃಷಿ ಮಾರುಕಟ್ಟೆ ಮೇಲಿನ ನಿಯಂತ್ರಣಕ್ಕೆ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ.

ಚಿತ್ರ: ಇಂಡಿಯನ್ ಎಕ್ಸ್‌ಪ್ರೆಸ್.

 

Leave a comment

FOOT PRINT

Top