An unconventional News Portal.

ಭಾರತೀಯರಿಗೆ ಯಾಕೆ ರಾಷ್ಟ್ರಪತಿಯನ್ನು ನೇರವಾಗಿ ಆಯ್ಕೆ ಮಾಡುವ ಅವಕಾಶ ಇಲ್ಲ?

ಭಾರತೀಯರಿಗೆ ಯಾಕೆ ರಾಷ್ಟ್ರಪತಿಯನ್ನು ನೇರವಾಗಿ ಆಯ್ಕೆ ಮಾಡುವ ಅವಕಾಶ ಇಲ್ಲ?

ಮುಂದಿನ ಒಂದು ತಿಂಗಳ ಅಂತರದಲ್ಲಿ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ತನ್ನ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಿರುತ್ತದೆ. ಆದರೆ ಇದರಲ್ಲಿ ಪ್ರಜೆಗಳ ನೇರ ಪಾತ್ರ ಇರುವುದಿಲ್ಲ; ಜನಸಾಮಾನ್ಯರು ಮತ ಹಾಕುವುದಿಲ್ಲ. ಇಷ್ಟಕ್ಕೂ ನಾವು (ಪ್ರಜೆಗಳು) ಯಾಕೆ ದೇಶದ ಅಧ್ಯಕ್ಷರನ್ನು ನೇರ ಚುನಾವಣೆಯ ಮೂಲಕ ಆಯ್ಕೆ ಮಾಡುವುದಿಲ್ಲ?

ಹೀಗೊಂದು ಪ್ರಶ್ನೆ ನಿಮ್ಮೊಳಗೂ ಮೂಡಿದ್ದರೆ, ಅದಕ್ಕೆ ‘ಸಮಾಚಾರ’ದ ಈ ವರದಿ ಉತ್ತರ ನೀಡುತ್ತದೆ.

ಸಂವಿಧಾನದ ಅಡಿಯಲ್ಲಿ ಭಾರತದ ಅಧ್ಯಕ್ಷರನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಅವರು ದೇಶದ ಮುಖ್ಯಸ್ಥರಾಗಿರುತ್ತಾರೆ; ಮೊದಲ ಪ್ರಜೆ ಎಂದು ಕರೆಸಿಕೊಳ್ಳುತ್ತಾರೆ. ಸಹಜವಾಗಿಯೇ ಅವರು ಜನರಿಂದ ಚುನಾಯಿತರಾಗುವ ಪ್ರತಿನಿಧಿಗಳ (ಸಂಸದರು, ಶಾಸಕರು) ಮುಖ್ಯಸ್ಥರೂ ಆಗಿರುತ್ತಾರೆ. ಅಮೆರಿಕಾದಲ್ಲಿಯೂ ಕೂಡ ಅಲ್ಲಿನ ಅಧ್ಯಕ್ಷರೇ ದೇಶದ ಮುಖ್ಯಸ್ಥರ ಸ್ಥಾನದಲ್ಲಿ ಇರುತ್ತಾರೆ. ಆದರೂ, ಅಲ್ಲಿಯ ಹಾಗೆ ನಮ್ಮಲ್ಲಿ ಅಧ್ಯಕ್ಷರನ್ನು ಮಾತ್ರ ನೇರ ಚುನಾವಣೆಯ ಮೂಲಕ ಆಯ್ಕೆ ಮಾಡುವುದಿಲ್ಲ.

ನಮ್ಮಲ್ಲಿ ಅಧ್ಯಕ್ಷರ ಚುನಾವಣೆಗೆ ಯಾರು ಮತ ಚಲಾವಣೆ ಮಾಡುತ್ತಾರೆ? ಅವರ ಮತಗಳ ಮೌಲ್ಯವನ್ನು ಹೇಗೆ ನಿರ್ಧರಿಸಲಾಗುತ್ತದೆ? ಎಂಬ ಕುರಿತು ಈಗಾಗಲೇ ಮಾಹಿತಿ ನೀಡಲಾಗಿದೆ. ಸದ್ಯ, ನಾವೇಕೆ ನೇರವಾಗಿ ಅಧ್ಯಕ್ಷರನ್ನು ಚುನಾಯಿಸುವುದಿಲ್ಲ ಎಂಬುದನ್ನು ನೋಡುವುದಾದರೆ, ಇದೇ ಪ್ರಶ್ನೆ ದೇಶದ ಸಂವಿಧಾನವನ್ನು ಜಾರಿಗೆ ತರುವ ಮುನ್ನ ನಡೆದ ರಚನಾ ಸಭೆಯ ಅಧಿವೇಶನದಲ್ಲಿಯೂ ಪ್ರಮುಖ ಚರ್ಚೆಯನ್ನು ಹುಟ್ಟುಹಾಕಿತ್ತು ಎಂಬ ಮಾಹಿತಿ ಸಿಗುತ್ತದೆ.

ನೇರ ಚುನಾವಣೆ ಯಾಕಿಲ್ಲ?: 

ಸಂವಿಧಾನ ರಚನಾ ಸಭೆಯ ಒಂದು ಚಿತ್ರ.

ಸಂವಿಧಾನ ರಚನಾ ಸಭೆಯ ಒಂದು ಚಿತ್ರ.

ದೇಶಕ್ಕೆ ಸ್ವಾತಂತ್ರ್ಯ ಬಂದು ಒಂದು ವರ್ಷ. 1948ರ ಡಿಸೆಂಬರ್‌ ತಿಂಗಳ ಕೊನೆಯ ವಾರದಲ್ಲಿ ಸಂವಿಧಾನ ರಚನಾ ಸಭೆಯ ಅಧಿವೇಶನದಲ್ಲಿ ಚರ್ಚೆಗೆ ಬಂದಿದ್ದು ಭಾರತಕ್ಕೆ ಎಂತಹ ಅಧ್ಯಕ್ಷೀಯ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂಬ ಕುರಿತು. “ಕೆ. ಟಿ. ಶಾ ಎಂಬ ವಕೀಲರೊಬ್ಬರು ಸಂಸದೀಯ ವ್ಯವಸ್ಥೆಯಲ್ಲಿ ರಾಷ್ಟ್ರಪತಿಗಳನ್ನು ಆಯ್ಕೆ ಮಾಡುವುದು ಭ್ರಷ್ಟಾಚಾರಕ್ಕೆ ನಾಂದಿ ಹಾಡುತ್ತದೆ ಎಂದು ಪ್ರಸ್ತಾಪಿಸಿದರು. ಈ ಕುರಿತು ಭಾರಿ ಚರ್ಚೆಗಳೂ ನಡೆದವು. ಇದರಲ್ಲಿ ಹೊಸದೇನೂ ಇಲ್ಲ; ಇಂಗ್ಲೆಂಡ್‌ನಿಂದ ನೇರವಾಗಿ ಅಧ್ಯಕ್ಷೀಯ ಪದ್ಧತಿಯನ್ನು ಆಮದು ಮಾಡಿಕೊಂಡಿದ್ದೀರಿ ಎಂದು ದೂರುಗಳೂ ಕೇಳಿಬಂದಿದ್ದವು. ಆದರೆ ಪರೋಕ್ಷ ಚುನಾವಣೆ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡುವ ಇಂಗಿತವನ್ನು ಗಟ್ಟಿ ದನಿಯಲ್ಲಿ ಅಂಬೇಡ್ಕರ್ ಮತ್ತು ನೆಹರೂ ಸಮರ್ಥಿಸಿಕೊಂಡರು,” ಎನ್ನುತ್ತಾರೆ ರಾಜಕೀಯ ಶಾಸ್ತ್ರದ ಪ್ರಾಧ್ಯಪಕರಾಗಿರುವ ಬಿ. ಎಚ್. ಸತ್ಯನಾರಾಯಣ್.

ನಾವು ಆಯ್ಕೆ ಮಾಡಿಕೊಂಡಿರುವ ಸಂಸದೀಯ ವ್ಯವಸ್ಥೆ ಹೊರಗಿನಿಂದ ಆಮದು ಮಾಡಿಕೊಂಡಿದ್ದು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಅಂಬೇಡ್ಕರ್ ನೀಡಿದ ಸಮರ್ಥನೆಯನ್ನು ಅವರು ನೆನಪಿಸಿಕೊಳ್ಳುತ್ತಾರೆ. “ಭಾರತಕ್ಕೆ ಸಂಸದೀಯ ವ್ಯವಸ್ಥೆ ಎಂಬುದು ಹೊಸತೇನೂ ಅಲ್ಲ. ಭಗವಾನ್ ಬುದ್ಧನ ಕಾಲ ಮತ್ತು ಅದಕ್ಕಿಂತ ಹಿಂದೆ ವೇದಗಳ ಕಾಲದಲ್ಲಿಯೇ ಜನರ ಪ್ರತಿನಿಧಿಗಳ ಮೂಲಕ ಆಡಳಿತ ನಡೆಸುವ ಪದ್ಧತಿ ಆಚರಣೆಯಲ್ಲಿತ್ತು. ಸಂವಿಧಾನ ಆಶಯಗಳು ಭಾರತದ ನೆಲದಲ್ಲಿ ಆಳವಾಗಿ ಬೇರೂರಿವೆ ಎಂಬುದನ್ನು ಅಂಬೇಡ್ಕರ್ ಅಧಿವೇಶನದಲ್ಲಿ ವಿವರವಾಗಿ ಮನವರಿಕೆ ಮಾಡಿಕೊಟ್ಟಿದ್ದರು. ಸಂಸದೀಯ ವ್ಯವಸ್ಥೆ ಎಂದರೆ ಚರ್ಚೆಯ ಮೂಲಕ ನಡೆಯುವಂತದ್ದು, ಮುಷ್ಟಿ ಯುದ್ಧ ಅಲ್ಲ ಎಂದವರು ಹೇಳಿದ್ದರು,” ಎನ್ನುತ್ತಾರೆ ಸತ್ಯನಾರಾಯಣ್.

ಹೀಗೆ, ಚರ್ಚೆಗಳು ನಡೆದು ದೇಶದ ಅಧ್ಯಕ್ಷರನ್ನು ಆಯ್ಕೆ ಮಾಡಲು ಪರೋಕ್ಷ ಚುನಾವಣೆ ಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಅದಕ್ಕೆ ನೀಡಿದ ಕಾರಣಗಳು ಹೀಗಿದ್ದವು:

(1) ಅಷ್ಟೊತ್ತಿಗಾಗಲೇ ಸಂಸದೀಯ ಪ್ರಜಾಪ್ರಭುತ್ವವನ್ನು ದೇಶ ಅಳವಡಿಸಿಕೊಳ್ಳಲು ಒಪ್ಪಿಗೆ ಸೂಚಿಸಿ ಆಗಿತ್ತು. ಅಧ್ಯಕ್ಷ ಪದವಿಯಂತಹ ಅತ್ಯುನ್ನತ ಸ್ಥಾನಕ್ಕೆ ಆಯ್ಕೆ ಮಾಡುವ ಅಭ್ಯರ್ಥಿಗೆ ಅದನ್ನು ನಿಭಾಯಿಸಲು ನಿರ್ಧಿಷ್ಟ ಗುಣಲಕ್ಷಣಗಳ ಅಗತ್ಯವಿತ್ತು. ಹೀಗಾಗಿ, ದೇಶದ ಎಲ್ಲಾ ಜನರು ತಾಂತ್ರಿಕವಾಗಿ ಆಲೋಚನೆ ಮಾಡಿ ಆಯ್ಕೆ ಮಾಡುವ ಪರಿಸ್ಥಿತಿ ಇಲ್ಲ ಎಂದು ತೀರ್ಮಾನಿಸಲಾಯಿತು. ಕೊನೆಗೆ, ಜನರಿಂದ ಆಯ್ಕೆಯಾಗಿ ಬಂದ ಸಂಸದರು ಹಾಗೂ ಶಾಸಕರಿಗೆ ಆ ಅವಕಾಶ ನೀಡಲಾಯಿತು. 

(2) ಒಂದು ವೇಳೆ ನೇರ ಚುನಾವಣೆಯನ್ನು ಆಯ್ಕೆ ಮಾಡಿಕೊಂಡರೆ, ಅಧ್ಯಕ್ಷ ಪದವಿಗೆ ಸ್ಪರ್ಧಿಸುವವರು ದೇಶದ ಉದ್ದಗಲಕ್ಕೂ ಸಂಚರಿಸಿ ಪ್ರಚಾರವನ್ನು ಮಾಡಬೇಕಾಗುತ್ತದೆ. ಇದು ಪಕ್ಷದ ಅಥವಾ ಇನ್ಯಾವುದೇ ಬೆಂಬಲವಿಲ್ಲದೆ ವ್ಯಕ್ತಿಯೊಬ್ಬರ ಕೈಲಿ ಆಗುವ ಕೆಲಸ ಅಲ್ಲ. ಅಧ್ಯಕ್ಷೀಯ ಪದವಿ ಪಕ್ಷಾತೀತವಾಗಿ ಇಡಬೇಕು ಎಂಬ ಆಶಯಕ್ಕೆ ಇದು ಧಕ್ಕೆ ತರುತ್ತದೆ. ಹೀಗಾಗಿ ಎಲ್ಲಾ ಪಕ್ಷಗಳೂ (ಬಹುಮತಕ್ಕಾಗಿ) ಬೆಂಬಲಿಸುವ ವ್ಯಕ್ತಿಯನ್ನು ಪರೋಕ್ಷವಾಗಿ ಆಯ್ಕೆ ಮಾಡುವುದು ಸೂಕ್ತ ಎಂದು ತೀರ್ಮಾನಕ್ಕೆ ಬರಲಾಯಿತು. 

(3)ಕೊನೆಯದಾಗಿ, ಒಂದು ವೇಳೆ ಅಧ್ಯಕ್ಷರನ್ನು ಜನರೇ ನೇರವಾಗಿ ಚುನಾವಣೆಯ ಮೂಲಕ ಆಯ್ಕೆ ಮಾಡಿದರೆ, ಅವರು ಕೇವಲ ಸಂವಿಧಾನದ ಮುಖ್ಯಸ್ಥನ ಸ್ಥಾನಕ್ಕೆ ಸೀಮಿತರಾಗಿ ಇರುವುದಿಲ್ಲ. ಬದಲಿಗೆ, ಆಡಳಿತಾಧಿಕಾರವನ್ನೂ ಬಯಸುವ ಸಾಧ್ಯತೆಗಳು ಹೆಚ್ಚಿರುತ್ತವೆ. ಇದರಿಂದ ಸಂಪುಟ ಮತ್ತು ಇತರೆ ಶಾಸಕಾಂಗದ ಪ್ರತಿನಿಧಿಗಳ ಜತೆ ಅಧ್ಯಕ್ಷ ಪದವಿ ಸಂಘರ್ಷಕ್ಕೆ ಎಡೆಮಾಡಿಕೊಡುತ್ತಿತ್ತು. 

“ಈ ಸಮಯದಲ್ಲಿ ನಡೆದ ಚರ್ಚೆಗಳನ್ನು ಗಮನಿಸಿದರೆ, ಮುಖ್ಯವಾಗಿ ಒಬ್ಬ ವ್ಯಕ್ತಿಯ ಕೈಲಿ ಇಡೀ ದೇಶದ ಆಡಳಿತಾಧಿಕಾರ ಕೇಂದ್ರಿಕೃತವಾಗಿರದಂತೆ ನೋಡಿಕೊಳ್ಳುವ ಹೊಣೆಯನ್ನು ಸಂವಿಧಾನ ರಚಿಸಿದವರು ನೋಡಿಕೊಂಡರು. ಎಷ್ಟೋ ದೇಶಗಳಲ್ಲಿ ಜನರಿಂದ ಆಯ್ಕೆಯಾದ ಅಧ್ಯಕ್ಷರು ನಂತರ ಸರ್ವಾಧಿಕಾರಿಗಳಾದ ಉದಾಹರಣೆ ಇರುವಾಗ, ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಲು ತೆಗೆದುಕೊಂಡ ಉತ್ತಮ ತೀರ್ಮಾನ ಇದಾಗಿತ್ತು,” ಎನ್ನುತ್ತಾರೆ ಬಿ. ಎಚ್. ಸತ್ಯನಾರಾಯಣ್.

ಪಕ್ಷಾತೀತ ವ್ಯಕ್ತಿತ್ವ:

ಹಾಗೆ ನೋಡಿದರೆ, ಸಂವಿಧಾನ ರಚನಾ ಸಭೆಯಲ್ಲಿ ನಡೆದ ಚರ್ಚೆಗಳಲ್ಲಿ ಭಾರತದ ಅಧ್ಯಕ್ಷೀಯ ಪದವಿ ಪಕ್ಷಾತೀತವಾಗಿರಬೇಕು ಎಂದು ಬಯಸಿದ್ದು ಎದ್ದು ಕಾಣಿಸುತ್ತದೆ. “1969ರಲ್ಲಿ ಕಾಂಗ್ರೆಸ್ ಎರಡು ಹೋಳಾಗಿತ್ತು. ಈ ಸಮಯದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ವಿವಿ ಗಿರಿ ಅಧ್ಯಕ್ಷರಾಗಿ ಆಗಿ ಆಯ್ಕೆ ಆದರು. ಕಾಂಗ್ರೆಸ್ ಬೆಂಬಲದೊಂದಿಗೆ ಚುನಾವಣೆಗೆ ನಿಂತಿದ್ದ ನೀಲಂ ಸಂಜೀವ್ ರೆಡ್ಡಿ ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋದರು. ಅಂತಿಮವಾಗಿ ಸ್ವತಂತ್ರ ಅಭ್ಯರ್ಥಿಯಾಗಿದ್ದ ವಿವಿ ಗಿರಿ ಅವರ ಪರವಾಗಿ ತೀರ್ಪು ಹೊರಬಿತ್ತು. ಆದರೆ ಅಲ್ಲಿಂದ ರಾಷ್ಟ್ರಪತಿ ಚುನಾವಣೆಯಲ್ಲಿ ರಾಜಕೀಯ ಪ್ರಭಾವಳಿ ಆರಂಭವಾಯಿತು,” ಎನ್ನುತ್ತಾರೆ ಹಿರಿಯ ರಾಜಕೀಯ ವಿಶ್ಲೇಷಕ ಡಾ. ಆರ್. ಆರ್. ಕುಲಕರ್ಣಿ.

ಸದ್ಯ ನಡೆಯುತ್ತಿರುವ ರಾಷ್ಟ್ರಪತಿ ಆಯ್ಕೆ ಸಂಬಂಧದ ಪ್ರಕ್ರಿಯೆಗಳನ್ನು ಗಮನಿಸುತ್ತಿರುವ ಅವರು, “ನಮ್ಮಲ್ಲಿ ಶೇ. 90 ಜನರಿಗೆ ರಾಷ್ಟ್ರಪತಿ ಹುದ್ದೆ ಎಂಬುದು ಪಕ್ಷಾತೀತವಾಗಿರುವ ಪದವಿ ಎಂಬುದು ಗೊತ್ತೇ ಇಲ್ಲ. ಈ ಕಾರಣಕ್ಕೆ, ರಾಷ್ಟ್ರಪತಿ ಚುನಾವಣೆಯ ಸೋಲು ಗೆಲುವು ರಾಜಕೀಯ ಪಕ್ಷಗಳ, ಅವುಗಳ ಮೈತ್ರಿಕೂಟಗಳ ಸೋಲು ಗೆಲುವು ಎಂದು ವಿಶ್ಲೇಷಣೆ ಕೇಳಿಬರುತ್ತಿದೆ. ಇದು ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಮಾರಕ,” ಎನ್ನುತ್ತಾರೆ.

ಬಿಜೆಪಿ ನೇತೃತ್ವದಲ್ಲಿ ಎನ್‌ಡಿಎ ಮೈತ್ರಿಕೂಟ ತನ್ನ ಅಭ್ಯರ್ಥಿಯನ್ನು ಅಧ್ಯಕ್ಷೀಯ ಚುನಾವಣೆಗೆ ಇಳಿಸುವ ಮುನ್ನ ಶಿಷ್ಟಾಚಾರಕ್ಕೆ ಎಂಬಂತೆ ಪ್ರತಿಪಕ್ಷಗಳನ್ನು ಭೇಟಿ ಮಾಡಿತ್ತು. ಅದರ ಆಚೆಗೆ, ಅಧ್ಯಕ್ಷೀಯ ಚುನಾವಣೆ ಕೂಡ ರಾಜಕೀಯ ಬಣ್ಣವನ್ನು ಬಳಿದುಕೊಂಡಿದ್ದು ಢಾಳಾಗಿ ಕಾಣಿಸುತ್ತಿದೆ. ಜು. 20ರಂದು ಅಧ್ಯಕ್ಷೀಯ ಚುನಾವಣೆಯಲ್ಲಿ ಯಾರೇ ಗೆದ್ದರೂ, ಸಂವಿಧಾನ ಸೋಲುವುದು ಖಚಿತವಾಗಿದೆ.

 

Leave a comment

FOOT PRINT

Top