An unconventional News Portal.

‘ದಲಿತ ಪರ- ಅಲ್ಪಸಂಖ್ಯಾತರ ವಿರೋಧಿ’: ಇದು ರಾಮನಾಥ್ ಕೋವಿಂದ್ ನಂಬಿರುವ ‘ಸಂವಿಧಾನ’!

‘ದಲಿತ ಪರ- ಅಲ್ಪಸಂಖ್ಯಾತರ ವಿರೋಧಿ’: ಇದು ರಾಮನಾಥ್ ಕೋವಿಂದ್ ನಂಬಿರುವ ‘ಸಂವಿಧಾನ’!

“ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿ ಭಾರತದ ಪಾಲಿಗೆ ಏಲಿಯನ್‌ (ಹೊರಗಿನವು)ಗಳು. ಹೀಗಾಗಿ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿದ್ದರೂ, ಅಲ್ಪಸಂಖ್ಯಾತ ಸಮುದಾಯಗಳಿಗೆ ಮೀಸಲಾತಿ ನೀಡಲು ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರೋಧ ವ್ಯಕ್ತಪಡಿಸುತ್ತದೆ…”

ಹೀಗಂತ ಹೇಳಿಕೆಯೊಂದನ್ನು ನೀಡಿದ್ದು ಬೇರೆ ಯಾರೂ ಅಲ್ಲ; ಸದ್ಯ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ರಾಮನಾಥ್ ಕೋವಿಂದ್.

2010ರಲ್ಲಿ ಬಿಜೆಪಿಯ ರಾಷ್ಟ್ರೀಯ ವಕ್ತಾರರಾಗಿ ಅವರನ್ನು ಪಕ್ಷ ಆಯ್ಕೆ ಮಾಡಿತ್ತು. ಈ ಸಮಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಅವರಿಗೆ ಸರಕಾರಿ ಉದ್ಯೋಗಗಳಲ್ಲಿ ಧಾರ್ಮಿಕ ಹಾಗೂ ಭಾಷಾ ಅಲ್ಪಸಂಖ್ಯಾತರಿಗೆ ಶೇ. 15ರಷ್ಟು ಮೀಸಲಾತಿ ನೀಡಬೇಕು ಎಂದು ವರದಿ ನೀಡಿದ್ದ ರಂಗನಾಥ್ ಮಿಶ್ರಾ ಸಮಿತಿಯ ಶಿಫಾರಸುಗಳ ಕುರಿತು ಪ್ರಶ್ನಿಸಲಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ಕೋವಿಂದ್, “ಅದು ಸಾಧ್ಯವೇ ಇಲ್ಲ (ಮಿಶ್ರಾ ಸಮಿತಿ ಶಿಫಾರಸುಗಳ ಅನುಷ್ಟಾನ), ಪರಿಶಿಷ್ಟ ಜಾತಿಗಳ ಜತೆ ಮುಸ್ಲಿಂ ಹಾಗೂ ಕ್ರಿಶ್ನಿಯನ್ನರನ್ನು ಸೇರಿಸಿಕೊಂಡರೆ ಅದು ಸಂವಿಧಾನದ ವಿರೋಧಿಯಾಗುತ್ತದೆ,” ಎಂದಿದ್ದರು.

ಸ್ವತಃ ವಕೀಲರೂ ಆಗಿರುವ ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವ ಮೂಲಕ ಬಿಜೆಪಿ ‘ದಲಿತ ಪರ’ ಟ್ರಂಪ್ ಕಾರ್ಡ್‌ ಬಳಸಿದೆ ಎಂದು ‘ರೆಡಿಫ್ ಡಾಟ್ ಕಾಂ’ ವರದಿ ಹೇಳುತ್ತಿದೆ. ‘ಈವರೆಗೆ ಮೇಲ್ಜಾತಿ, ವ್ಯಾಪಾರಿ ವರ್ಗದ ಮತಗಳನ್ನು ನೆಚ್ಚಿಕೊಂಡಿದ್ದ ಬಿಜೆಪಿ, ಇತರೆ ಸಮುದಾಯಗಳಿಗೂ ಪಕ್ಷದ ನೆಲೆಯನ್ನು ವಿಸ್ತರಿಸುವ ಪ್ರಯತ್ನದಲ್ಲಿದೆ. ಈ ಹಿನ್ನೆಲೆಯಲ್ಲಿ ಕಾನ್ಪುರದ ದಲಿತ ಕುಟುಂಬದ ಹಿನ್ನೆಲೆಯಿಂದ ಬಂದ ರಾಮನಾಥ್ ಕೋವಿಂದ್ ಅವರನ್ನು ಸಂವಿಧಾನದ ಅತ್ಯುನ್ನತ ಹುದ್ದೆಗೆ ಅಭ್ಯರ್ಥಿಯನ್ನಾಗಿ ಪ್ರಕಟಿಸಲಾಗಿದೆ,’ ಎಂದು ವರದಿ ವಿಶ್ಲೇಷಿಸಿದೆ.

ಯಾರೂ ಈ ಕೋವಿಂದ್?:

ಉತ್ತರ ಪ್ರದೇಶದ ಕಾನ್ಪುರ ದೇಹತ್ ಜಿಲ್ಲೆಯಲ್ಲಿ 1945ರಲ್ಲಿ ಜನಿಸಿದ ರಾಮನಾಥ್ ಕೋವಿಂದ್ ತಂದೆ ಕೃಷಿಕರಾಗಿದ್ದರು ಎಂಬುದು ವಿಕಿಪೀಡಿಯಾ ನೀಡುವ ಮಾಹಿತಿ. ಅವರ ಕುಟುಂಬ ವ್ಯಾಪಾರದಲ್ಲಿ ತೊಡಗಿತ್ತು ಎಂದೂ ಕೆಲವು ವರದಿಗಳು ಹೇಳುತ್ತವೆ. ಅಲ್ಲಿಯೇ ವಿದ್ಯಾಭ್ಯಾಸ ಆರಂಭಿಸಿದ ಅವರು ಕಾನೂನು ಪದವಿಯನ್ನೂ ಪಡೆದರು. 1977ರಲ್ಲಿ ದಿಲ್ಲಿ ಹೈಕೋರ್ಟ್‌ನಲ್ಲಿ ಕೇಂದ್ರ ಸರಕಾರದ ವಕೀಲರಾಗಿ ಕೆಲಸ ನಿರ್ವಹಿಸಿದರು. ಸುಪ್ರಿಂ ಕೋರ್ಟ್‌ನಲ್ಲಿಯೂ ವಕೀಲ ವೃತ್ತಿ ನಿರ್ವಹಿಸಿದ ಅವರು 1980- 93ರ ನಡುವೆ ಕೇಂದ್ರದ ಕಾನೂನು ಸ್ಥಾಯಿ ಸಮಿತಿಯಲ್ಲಿದ್ದರು. ಮುರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದಾಗ ಅವರ ಆಪ್ತ ಕಾರ್ಯದರ್ಶಿಯಾಗಿಯೂ ಕೋವಿಂದ್ ಕೆಲಸ ಮಾಡಿದ್ದರು.

1991ರಲ್ಲಿ ಬಿಜೆಪಿ ಸೇರಿದ ಅವರು, ಪಕ್ಷದ ದಲಿತ್ ಮೋರ್ಚಾದ ಅಧ್ಯಕ್ಷರಾಗಿ, ಅಖಿಲ ಭಾರತೀಯ ಕೋಲಿ ಸಮಾಜದ ಮುಂದಾಳುವಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌)ದ ಅನುಯಾಯಿಯಾದ ಅವರು ತಮ್ಮ ಹಿರಿಯರಿಂದ ಬಳುವಳಿಯಾಗಿ ಬಂದ ಮನೆಯನ್ನು ಸಂಘಕ್ಕೆ ದಾನ ನೀಡಿದ್ದಾರೆ. ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರಾದರೂ, ಎರಡು ಬಾರಿ ಅವರು ಚುನಾವಣಾ ರಾಜಕಾರಣದಲ್ಲಿ ಸೋಲನ್ನಪ್ಪಿದ್ದರು.

ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾದ ಅವರು ಬಿಜೆಪಿ ಸಂಸದರಾಗಿ ಎರಡು ಅವಧಿಗೆ ಕಾರ್ಯನಿರ್ವಹಿಸಿದರು. ಈ ಸಮಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸ್ಥಾಯಿ ಸಮಿತಿ ಸೇರಿದಂತೆ ನಾನಾ ಹೊಣೆಗಳನ್ನು ನಿಭಾಯಿಸಿದ್ದರು. 2015ರಿಂದ ಬಿಹಾರ ರಾಜ್ಯಪಾಲರಾಗಿ ಕಾರ್ಯನಿರ್ವಹಿಸುತ್ತಿರುವ ಕೋವಿಂದ್, ಸದ್ಯ ಬಿಜೆಪಿ ಮೂಲಕ ರಾಷ್ಟ್ರಪತಿ ಹುದ್ದೆಗೆ ನಾಮಪತ್ರ ಸಲ್ಲಿಸಲಿದ್ದಾರೆ.

ಬಿಜೆಪಿ ಮಿತ್ರಪಕ್ಷಗಳು ಎನ್‌ಡಿಎ ಅಡಿಯಲ್ಲಿ ಅವರಿಗೆ ಬೆಂಬಲವನ್ನು ಘೋಷಿಸಿವೆ. ಈ ನಡುವೆ ತೆಲಂಗಾಣದ ರಾಷ್ಟ್ರೀಯ ಸಮಿತಿ ಹಾಗೂ ಇತರೆ ಪ್ರಾದೇಶಿಕ ಪಕ್ಷಗಳು ಕೋವಿಂದ್ ಅವರ ಬೆಂಬಲಕ್ಕೆ ಬಂದಿರುವುದರಿಂದ ಅವರು ರಾಷ್ಟ್ರಪತಿಯಾಗಿ ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಿವೆ.

ಆರೋಪಗಳು:

ರಾಮನಾಥ್ ಕೋವಿಂದ್ ಅವರ ಮೇಲಿರುವ ಪ್ರಮುಖ ಆರೋಪ, ಬಿಜೆಪಿ ಅಧ್ಯಕ್ಷರಾಗಿದ್ದ ಬಂಗಾರು ಲಕ್ಷ್ಮಣ್ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿದಾಗ ಅವರ ಪರವಾಗಿ ಸಾಕ್ಷಿ ಹೇಳಿದ್ದರು ಎಂಬುದು. 2001ರಲ್ಲಿ ತೆಹೆಲ್ಕಾ ಡಾಟ್ ಕಾಮ್ ನಡೆಸಿದ ‘ಅಗಸ್ಟಾ ವೆಸ್ಟ್‌ಲ್ಯಾಂಡ್’ ಹೆಸರಿನ ಕುಟುಕು ಕಾರ್ಯಾಚರಣೆಯಲ್ಲಿ ಖಾಸಗಿ ಕಂಪನಿಯೊಂದಕ್ಕೆ ಸೇನಾ ಗುತ್ತಿಗೆ ನೀಡಲು ಲಂಚ ಪಡೆಯುವುದು ಬಹಿರಂಗವಾಗಿತ್ತು. ಪ್ರಕರಣ ನ್ಯಾಯಾಂಗ ತನಿಖೆಗೆ ನಂತರ ಸಿಬಿಐ ತನಿಖೆಗೆ ಒಳಪಟ್ಟಿತ್ತು. ಈ ಸಮಯದಲ್ಲಿ ಬಿಜೆಪಿ ಕಡೆಯಿಂದ ಅಂದಿನ ಅಧ್ಯಕ್ಷ ಬಂಗಾರು ಲಕ್ಷ್ಮಣ್ ಅವರ ಪರವಾಗಿ ಸಾಕ್ಷಿ ಹೇಳಿದ ಇಬ್ಬರ ಪೈಕಿ ಕೋವಿಂದ್ ಕೂಡ ಒಬ್ಬರಾಗಿದ್ದರು. ದಲಿತರ ಶೈಕ್ಷಣಿಕ ಉನ್ನತಿಗಾಗಿ ಕೆಲಸ ಮಾಡಿದ ಕೋವಿಂದ್ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಡಿಯಲ್ಲಿ ಅಲ್ಪಸಂಖ್ಯಾತ ಸಮುದಾಯಗಳನ್ನು ‘ಭಾರತೀಯರೇ ಅಲ್ಲ’ ಎಂದು ವಾದಿಸಿಕೊಂಡು ಬಂದವರು. ಇದೀಗ ಸಂವಿಧಾನವನ್ನು ಒಪ್ಪಿಕೊಂಡಿರುವ ದೇಶದ ಅತ್ಯುನ್ನತ ಹುದ್ದೆಗೆ ಸಂಭವನೀಯ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ವೈಚಾರಿಕವಾಗಿ ಭಿನ್ನ ನಿಲುವನ್ನು ಹೊಂದಿದ್ದರೂ, ತೆರೆಮರೆಯಲ್ಲಿಯೂ ಹೆಚ್ಚು ಕಾಣಿಸಿಕೊಂಡ ಅವರು ರಾಷ್ಟ್ರಪತಿಯಾಗುವ ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆ ಬಾಕಿ ಉಳಿಸಿಕೊಂಡಿದ್ದಾರೆ.

Leave a comment

FOOT PRINT

Top