An unconventional News Portal.

ಪಾಕ್ ಗೆಲುವಿನ ನೆರಳಿನಲ್ಲಿ ಅರಳಿದ ಅಮೀರ್: ಇದು ಅವಮಾನಗಳನ್ನು ಮೀರಿದ ಬದುಕಿನ ಕತೆ!

ಪಾಕ್ ಗೆಲುವಿನ ನೆರಳಿನಲ್ಲಿ ಅರಳಿದ ಅಮೀರ್: ಇದು ಅವಮಾನಗಳನ್ನು ಮೀರಿದ ಬದುಕಿನ ಕತೆ!

“ಜೈಲು ಎಂದರೆ ಏನು ಎಂಬುದು ಎಲ್ಲರಿಗೂ ಗೊತ್ತು. ಜೈಲಿನಲ್ಲಿ ಇದ್ದು ಬಂದವನು ಎಂದರೆ ಯಾರೂ ಕೂಡ ಗೌರವ ಕೊಡುವುದಿಲ್ಲ. ಆದರೂ ಈ ಸಮಯದಲ್ಲಿ ಹೇಳಬೇಕು, ನಾನು ಜೈಲಿನಲ್ಲಿ ಇದ್ದಷ್ಟು ದಿನ ನನ್ನನ್ನು ಚೆನ್ನಾಗಿಯೇ ನೋಡಿಕೊಂಡರು…”

ಚಿಕ್ಕವಯಸ್ಸಿನಲ್ಲಿಯೇ ದೊಡ್ಡ ಹೆಸರು ಮಾಡಿ, ಅಷ್ಟೇ ವೇಗವಾಗಿ ಅಡ್ಡದಾರಿಯನ್ನೂ ತುಳಿದು, ‘ಸ್ಪಾಟ್ ಫಿಕ್ಸಿಂಗ್‌’ ಅಪರಾಧ ಪ್ರಕರಣದಲ್ಲಿ ಮೂರು ತಿಂಗಳು ಜೈಲು ಶಿಕ್ಷೆ ಅನುಭವಿಸಿದ ಹೊರಬಂದ ಮಹಮದ್ ಅಮೀರ್ ‘ಸ್ಕೈ ಸ್ಪೂರ್ಟ್ಸ್‌’ ವಾಹಿನಿಗೆ ನೀಡಿದ ಸಂದರ್ಶನದ ಆರಂಭದಲ್ಲಿ ಹೇಳಿದ ಮಾತಿದು.

ಭಾನುವಾರ ಲಂಡನ್‌ನ ಓವೆಲ್‌ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ಭರ್ಜರಿ ಜಯ ದಾಖಲಿಸಿದೆ. ಇದಕ್ಕೆ ವಿರಾಟ್ ಕೋಹ್ಲಿ ತಂಡದ ‘ಅತಿಯಾದ ಆತ್ಮವಿಶ್ವಾಸ’ವೇ ಕಾರಣ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ. ನೆರೆಯ ದೇಶ ಪಾಕಿಸ್ತಾನದಲ್ಲಿ ಜಯದ ಸಂತಸ ಮನೆ ಮಾಡಿದೆ.

ಕ್ರಿಕೆಟ್ ಎಂಬ ಕ್ರೀಡೆ ಹೊಂದಿರುವ ಮಾರುಕಟ್ಟೆ ಮತ್ತು ಅದು ಹೊಂದಿರುವ ವ್ಯಾಪ್ತಿಯ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಈ ಗೆಲುವು ಹೊಸ ಹುರುಪನ್ನು ನೀಡಿದೆ. ವಿಶೇಷವಾಗಿ ಯುವಕರ ತಂಡವನ್ನು ಕಟ್ಟಿಕೊಂಡು ಅಂತಾರಾಷ್ಟ್ರೀಯ ಟ್ರೋಫಿ ಗೆದ್ದಿರುವ ತಂಡ, ಭವಿಷ್ಯದಲ್ಲಿ ಭಾರಿ ಕನಸಗಳನ್ನು ಕಟ್ಟಿಕೊಂಡಿದೆ. ಇದೇ ವೇಳೆಯಲ್ಲಿ, ತಂಡದ ಎಡಗೈ ವೇಗದ ಬೌಲರ್ ಮಹಮದ್ ಅಮೀರ್ ಕಮರಿದ ತನ್ನ ಭವಿಷ್ಯವನ್ನು ಮರಳಿ ಕಟ್ಟುವ ಪ್ರಯತ್ನದಲ್ಲಿದ್ದಾರೆ. ಚಿಕ್ಕವಯಸ್ಸಿನಲ್ಲಿಯೇ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿ, ಅಷ್ಟೇ ವೇಗವಾಗಿ ‘ಸ್ಪಾಟ್ ಫಿಕ್ಸಿಂಗ್‌’ ಆರೋಪದ ಮೇಲೆ ಜೈಲು ಶಿಕ್ಷೆಗೆ ಗುರಿಯಾಗಿ, ಕ್ರಿಕೆಟ್ ಆಟದಿಂದ ನಿಷೇಧಕ್ಕೆ ಒಳಗಾಗಿ, ಕ್ರೀಡಾಂಗಣದಲ್ಲಿ ಬದುಕು ಮುಗಿಯಿತು ಎನ್ನುವಾಗಲೇ ಫೀನಿಕ್ಸ್‌ನಂತೆ ಎದ್ದು ಬಂದ ಅಮೀರ್ ಕತೆ; ಕ್ರಿಕೆಟ್ ಆಟದ ಸೋಲು ಗೆಲುವುಗಳ ಆಚೆಗೆ ಒಂದಷ್ಟು ಪಾಠಗಳನ್ನು ಹೇಳುತ್ತದೆ.

ಆತ ಬುಡಕಟ್ಟು ಬಾಲಕ: 

ಹೆಸರು ಮಹಮದ್ ಅಮೀರ್. ಪಾಕಿಸ್ತಾನ ರಾವಲ್ಪಿಂಡಿಯ ಹೊರವಲಯದ ಬುಡಕಟ್ಟು ಪ್ರಾಂಥ್ಯದಲ್ಲಿ ಹುಟ್ಟಿದ ಈತನಿಗೆ ಪಾಕಿಸ್ತಾನದ ಒಂದು ಕಾಲದ ವೇಗದ ಬೌಲರ್ ವಾಸೀಮ್ ಅಕ್ರಂ ರೋಲ್ ಮಾಡೆಲ್. ಚಿಕ್ಕವಯಸ್ಸಿನಲ್ಲಿ ಬೀದಿಯಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಅಮೀರ್ ಬೌಲಿಂಗ್ ಮಾಡುತ್ತಿದ್ದ. ಆತನೇ ಹೇಳಿಕೊಂಡಂತೆ, ಚಿಕ್ಕ ಹುಡುಗನಾಗಿದ್ದರೂ, ದೊಡ್ಡವರ ಜತೆಗೆ ಆತ ಆಟ ಆಡುತ್ತಿದ್ದ. ಅದಕ್ಕೆ ಕಾರಣ ಆತನ ಎಸೆತದಲ್ಲಿದ್ದ ವೇಗ. ಅಕ್ರಂ ರೀತಿಯಲ್ಲಿಯೇ ಎಡಗೈ ವೇಗದ ಬೌಲಿಂಗ್ ಆತನನ್ನು ಸ್ಥಳೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿತ್ತು. ತನ್ನ 11ನೇ ವಯಸ್ಸಿಗೆ ಆತ ರಾವಲ್ಪಿಂಡಿಯಲ್ಲಿದ್ದ ಸ್ಪೋರ್ಟ್ಸ್ ಅಕಾಡೆಮಿಗೆ ಆಯ್ಕೆಯಾದ.

2007ರಲ್ಲಿ ಪಾಕಿಸ್ತಾನದ ತಂಡ ಇಂಗ್ಲೆಂಡ್ ಪ್ರವಾಸಕ್ಕೆ ಹೊರಟಾದ ತಂಡದಲ್ಲಿ ಅಮೀರ್ ಕೂಡ ಇದ್ದ. ಆಗ ಆತನ ವಯಸ್ಸು ಕೇವಲ 15. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಚಿಕ್ಕ ವಯಸ್ಸಿನ ಆಟಗಾರ ಆತ. ಆತ ಆಡಿದ ಮೊದಲ 10 ಟೆಸ್ಟ್ ಪಂದ್ಯಗಳಲ್ಲಿ 32 ವಿಕೆಟ್ ಪಡೆಯುವ ಮೂಲಕ ಭರವಸೆ ಮೂಡಿಸಿದ್ದ. ವಾಸೀಮ್ ಅಕ್ರಂ ನಂತರ ಪಾಕಿಸ್ತಾನ ತಂಡಕ್ಕೆ ಮತ್ತೊಬ್ಬ ಎಡಗೈ ವೇಗದ ಬೌಲರ್ ಸಿಕ್ಕಿದ್ದ. ಅಷ್ಟೊತ್ತಿಗೆ ಲಂಡನ್ ಮೂಲದ ಯುವತಿ ಜತೆಗೆ ಅಮೀರ್ ಮದುವೆಯೂ ಆಗಿತ್ತು.

ಸ್ಪಾಟ್ ಫಿಕ್ಸಿಂಗ್ ಆರೋಪ:

ಮಾಧ್ಯಮ ದೊರೆ ರೂಪರ್ಟ್‌ ಮುರ್ಡೋಕ್ ಒಡೆತನದಲ್ಲಿ ಲಂಡನ್‌ನಲ್ಲಿ ‘ನ್ಯೂಸ್ ಆಫ್‌ ದಿ ವರ್ಲ್ಡ್‌’ ನಿಯತಕಾಲಿಕೆ 2010ರಲ್ಲಿ ಆರಂಭವಾಯಿತು. ಟ್ಯಾಬ್ಲಾಯ್ಡ್ ಶೈಲಿಯ ಪತ್ರಿಕೆ ಆರಂಭದಲ್ಲಿಯೇ ಕ್ರಿಕೆಟ್‌ನಲ್ಲಿ ನಡೆಯುವ ಸ್ಪಾಟ್ ಫಿಕ್ಸಿಂಗ್ ಬಗ್ಗೆ ತನಿಖಾ ವರದಿಯನ್ನು ಪ್ರಕಟಿಸಿತ್ತು. 2010ರಲ್ಲಿ ಲಂಡನ್‌ನಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ಪಾಕಿಸ್ತಾನದ ಮೂವರು ಆಟಗಾರರು ಮಾರುವೇಷದಲ್ಲಿದ್ದ ‘ನ್ಯೂಸ್ ಆಫ್‌ ದಿ ವರ್ಲ್ಡ್‌’ ಪತ್ರಿಕೆಯ ವರದಿಗಾರನಿಂದ ಹಣವನ್ನು ಪಡೆದುಕೊಂಡರು. ಅದರ ಬದಲಿಗೆ ನಿರ್ದಿಷ್ಟ ಸಮಯದಲ್ಲಿ ‘ನೋ ಬಾಲ್’ ಎಸೆಯಲು, ಕ್ಯಾಚ್ ಬಿಡಲು ಒಪ್ಪಿಕೊಂಡರು. ಅವತ್ತು ಅಮೀರ್ ಎಸೆದ ಮೊದಲ ಓವರ್‌ನ ಮೂರನೇ ಬಾಲ್‌ ‘ನೋ ಬಾಲ್’ ಆಗಿತ್ತು. ವಿಪರ್ಯಾಸ ಏನೆಂದರೆ, ಅದೇ ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿತ್ತು. 9 ವರ್ಷಗಳ ನಂತರ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ಸಂತಸ ಹಂಚಿಕೊಂಡಿತ್ತು. ಪಂದ್ಯದ ಮ್ಯಾನ್‌ ಆಫ್ ದಿ ಮ್ಯಾಚ್ ಆಗಿದ್ದು ಮತ್ಯಾರೂ ಅಲ್ಲ; ಇದೇ ಮಹಮದ್ ಅಮೀರ್.

ಅದಾದ ಮಾರನೇ ದಿನ ‘ನ್ಯೂಸ್ ಆಫ್ ದಿ ವರ್ಲ್ಡ್‌’ ಮಾರುಕಟ್ಟೆಗೆ ಬಂತು. ಕ್ರಿಕೆಟ್‌ನಲ್ಲಿ ನಡೆಯುವ ಸ್ಪಾಟ್‌ ಫಿಕ್ಸಿಂಗ್ ಬಗ್ಗೆ ವಿಸ್ತೃತ ವರದಿ ಪ್ರಕಟಿಸಿತ್ತು. “ನನಗೆ ದೂರವಾಣಿ ಕರೆಗಳು ಬರಲು ಶುರುವಾದವು. ನನಗೆ ಏನು ನಡೆಯುತ್ತಿದೆ ಎಂದು ಗೊತ್ತಾಗುವ ಮುನ್ನವೇ ನಾನು ಜಗತ್ತಿನ ಕಣ್ಣಲ್ಲಿ ಕ್ರಿಮಿನಲ್ ಆಗಿ ಹೋಗಿದ್ದೆ,” ಎಂದು ಅಮೀರ್ ನಂತರದ ಸಂದರ್ಶನವೊಂದರಲ್ಲಿ ನೆನಪಿಸಿಕೊಂಡ.

ಇನ್ನೂ ಚಿಕ್ಕ ವಯಸ್ಸು, ಜತೆಗೆ ತಪ್ಪೊಪ್ಪಿಗೆ ಕಾರಣಕ್ಕೆ ಮಹಮದ್ ಅಮೀರ್‌ಗೆ ಐದು ವರ್ಷ ಕ್ರಿಕೆಟ್‌ ಆಡುವುದರ ಮೇಲೆ ನಿಷೇಧ ಹೇರಲಾಯಿತು. ಚಿಕ್ಕವಯಸ್ಸಿನಲ್ಲಿಯೇ ಭರವಸೆ ಮೂಡಿಸಿದ್ದ ಯುವಕನ ಕ್ರಿಕೆಟ್ ಭವಿಷ್ಯ ಮುಗಿದೇ ಹೋಯಿತು ಎಂದು ಎಲ್ಲರೂ ಆಡಿಕೊಂಡರು. “ನನಗೆ ಕೆಲಸ ಇರಲಿಲ್ಲ. ಹೊರಗೆ ಹೋದರೆ ಜನರ ಬೈಗುಳ ಕೇಳಬೇಕಿತ್ತು. ನಾನು ಮತ್ತೆ ನನ್ನ ಗಲ್ಲಿಗೆ ವಾಪಾಸಾದೆ. ಅಲ್ಲಿಯೇ ಬೌಲಿಂಗ್ ಮಾಡಲು ಶುರುಮಾಡಿದೆ. ಆ ಸಮಯದಲ್ಲಿ ಕುಟುಂಬದವರು ಜತೆಗಿದ್ದರು. ಒಳ್ಳೆಯತನ ಎಂದರೇನು ಆಗ ನನಗೆ ಗೊತ್ತಾಯಿತು,” ಎಂದು ಅಮೀರ್ ಹೇಳಿಕೊಂಡ.

ಕಮ್ ಬ್ಯಾಕ್: 

ಇದಾದ ಐದು ವರ್ಷಗಳ ನಂತರ ಮಹಮದ್ ಅಮೀರ್ ಸ್ಥಳೀಯ ಮಟ್ಟದ ಲೀಗ್ ಪಂದ್ಯಾವಳಿಯ ಮೂಲಕ 2015ರಲ್ಲಿ ಮತ್ತೆ ಔಪಚಾರಿಕವಾಗಿ ಕ್ರಿಕೆಟ್‌ ಅಂಗಳಕ್ಕೆ ಕಾಲಿಟ್ಟ. ಮೊದಲ ಪಂದ್ಯದಲ್ಲಿಯೇ ವಿಕೆಟ್‌ಗಳನ್ನು ಉರುಳಿಸುವ ಮೂಲಕ ತಾನಿನ್ನೂ ಫಾರ್ಮ್‌ನಲ್ಲಿ ಇರುವ ಸಂದೇಶವನ್ನು ರವಾನಿಸಿದ. ಅದೇ ವರ್ಷದ ಕೊನೆಯಲ್ಲಿ ಆತನ ಮೇಲಿದ್ದ ಎಲ್ಲಾ ನಿರ್ಬಂಧಗಳನ್ನು ಮುಕ್ತಗೊಳಿಸಲಾಯಿತು. 2016ರಲ್ಲಿ ನಡೆದ ಟಿ- 20 ಪಂದ್ಯಾವಳಿಯಲ್ಲಿ ಪಾಕಿಸ್ತಾನ ತಂಡದಲ್ಲಿ ಸ್ಥಾನ ಪಡೆದ. ಇಂಗ್ಲೆಂಡ್ ವಿರುದ್ಧದ ಪಂದ್ಯವೊಂದರಲ್ಲಿ ಬೌಲಿಂಗ್ ಮಾಡಲು ಹೊರಟಾದ, ಕ್ರೀಡಾಂಗಣದಲ್ಲಿ ‘ನೋ ಬಾಲ್; ನೋ ಬಾಲ್’ ಎಂಬ ಕೂಗು ಕೇಳಿ ಬಂತು ಕೂಡ.

ಆದರೆ ಅವೆಲ್ಲಾ ಅವಮಾನಗಳನ್ನು ಮೀರಿ ನಿಂತ ವೇಗದ ಬೌಲರ್ ಅಮೀರ್ ಭಾನುವಾರ ಭಾರತದ ವಿರುದ್ಧದ ಪಂದ್ಯದಲ್ಲಿ ಆರಂಭದಲ್ಲಿಯೇ ಪ್ರಮುಖ ವಿಕೆಟ್ ಉರುಳಿಸುವ ಮೂಲಕ ಪಾಕಿಸ್ತಾನಕ್ಕೆ ಗೆಲುವನ್ನು ತಂದುಕೊಟ್ಟಿದ್ದಾನೆ. ಈ ಗೆಲುವು ಆತನಿಗೆ ಮಾತ್ರವಲ್ಲ; ಪಾಕಿಸ್ತಾನದ ಕ್ರಿಕೆಟ್ ಭವಿಷ್ಯಕ್ಕೂ ಹೊಸ ಮುನ್ನಡಿ ಬರೆಯಲಿದೆ ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ.

ಅಪೂರ್ವ ಅವಕಾಶ, ಮೂಡಿಸುವ ಭರವಸೆ, ಮತ್ತೊಂದು ತಪ್ಪು ಹೆಜ್ಜೆ, ಜೈಲು ಶಿಕ್ಷೆ, ಅವಮಾನಗಳ ನಂತರ ಮತ್ತೆ ಭವಿಷ್ಯವನ್ನು ಕಟ್ಟಿಕೊಳ್ಳುವುದು ಸುಲಭದ ಮಾತಲ್ಲ. ಮಹಮದ್ ಅಮೀರ್‌ ಬದುಕಿನ ಈ ಏರಿಳಿತಗಳ ಪಾಠ, ಗಡಿ, ಕ್ರೀಡೆಯ ಆಚೆಗೂ ಒಂದಷ್ಟು ಜನರಿಗೆ ಮಾದರಿಯಾಗಿ ನಿಲ್ಲುತ್ತದೆ.

Leave a comment

FOOT PRINT

Top