An unconventional News Portal.

‘ಬಡವರು ಬರುತ್ತಿದ್ದಾರೆ; ಬೆಂಬಲ ಕೊಡಿ’: ಜೂನ್ 15ರಿಂದ ರಾಜಧಾನಿಯಲ್ಲಿ ಆದಿವಾಸಿಗಳ ವಾಸ್ತವ್ಯ

‘ಬಡವರು ಬರುತ್ತಿದ್ದಾರೆ; ಬೆಂಬಲ ಕೊಡಿ’: ಜೂನ್ 15ರಿಂದ ರಾಜಧಾನಿಯಲ್ಲಿ ಆದಿವಾಸಿಗಳ ವಾಸ್ತವ್ಯ

ಕೆಲವು ದಿನಗಳ ಹಿಂದೆ ಅಂಗನವಾಡಿ ಕಾರ್ಯಕರ್ತೆಯ ಹಗಲು- ರಾತ್ರಿ ಪ್ರತಿಭಟನೆಗೆ ಸಾಕ್ಷಿಯಾದ ಸಿಲಿಕಾನ್ ಸಿಟಿಗೆ ಈ ಬಾರಿ ಆದಿವಾಸಿಗಳು, ವಸತಿರಹಿತರು ಬರುತ್ತಿದ್ದಾರೆ.

ಗುರುವಾರ, ಜೂನ್ 15ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್‌ ಮುಂಭಾಗ ಭೂಮಿ ಹಾಗೂ ವಸತಿ ಹಕ್ಕಿಗಾಗಿ ಆಗ್ರಹಿಸಿ ದೊಡ್ಡ ಮಟ್ಟದ ಪ್ರತಿಭಟನೆ ಆರಂಭವಾಗಲಿದೆ. ಸರಕಾರ ಬೇಡಿಕೆಗಳನ್ನು ಈಡೇರಿಸುವವರೆಗೂ ಸತ್ಯಾಗ್ರಹ ಜಾರಿಯಲ್ಲಿರಲಿದೆ ಎಂದು ಆಯೋಜಕರು ಈಗಾಗಲೇ ಪ್ರಕಟಿಸಿದ್ದಾರೆ. ಹೀಗಾಗಿ, ಒಂದಷ್ಟು ದಿನಗಳ ಕಾಲ ಹಗಲು ಹಾಗೂ ರಾತ್ರಿ ರಾಜಧಾನಿಯ ಬೀದಿಯಲ್ಲಿ ಸುಮಾರು 21 ಜಿಲ್ಲೆಗಳ ಭೂಮಿ ಹಾಗೂ ವಸತಿ ರಹಿತ ಬಡಜನರು ಧರಣಿ, ಪ್ರತಿಟನೆ ನಡೆಸಲಿದ್ದಾರೆ.

ಯಾಕೀ ಪ್ರತಿಭಟನೆ?:

“ಕೊಟ್ಟ ಮಾತು ತಪ್ಪದಿರಿ – ಜನತೆಗೆ ದ್ರೋಹ ಮಾಡದಿರಿ” ಎಂಬ ಘೋಷಣೆಯೊಂದಿಗೆ ಭೂಮಿ ಮತ್ತು ವಸತಿಗಾಗಿ ಅನಿರ್ಧಿಷ್ಟ ಅವಧಿಯ ಸತ್ಯಾಗ್ರಹ ಆರಂಭವಾಗುತ್ತಿದೆ. ರಾಜ್ಯದಾದ್ಯಂತ ಭೂಮಿ ಮತ್ತು ವಸತಿಗಾಗಿ ಆಗ್ರಹ ಹೆಚ್ಚಾಗಿದೆ. ದಿಡ್ಡಳ್ಳಿ ಜನರ ತುಂಡು ಜಾಗಕ್ಕಾಗಿ ಒಂದು ವರ್ಷದ ಕಾಲ ಮಳೆ- ಚಳಿಯಲ್ಲಿ ಪರದಾಡಬೇಕಾಯಿತು. ರಾಮ ನಗರದಲ್ಲಿ ಇರುಳರು ಕಳೆದ 20 ದಿನಗಳಿಂದ ಬೀದಿಯಲ್ಲೇ ಕೂತಿದ್ದಾರೆ. ಹಾವೇರಿಯಲ್ಲಿ ರೈತರು ಹತಾಶರಾಗಿ ಬೆತ್ತಲೆ ಪ್ರತಿಭಟನೆ ಮಾಡಿದ್ದಾರೆ. ತನ್ನ ಆದಿವಾಸಿ ಬಂಧುಗಳ ಪರ ದನಿ ಎತ್ತಿದ ಮುತ್ತಮ್ಮರಂಥವರ ಮೇಲೆ ಕೇಸು ಹಾಕಿ ಮೂಲೆಗುಂಪು ಮಾಡುವ ಕುತಂತ್ರಗಳು ನಡೆದಿವೆ. ಎಲ್ಲಾ ಕಡೆ ಜನ ಸರ್ಕಾರಿ ಕಚೇರಿಗಳಿಗೆ ಅಲೆದಲೆದು, ಶಾಸಕರ – ಅವರ ಚೇಲಾಗಳ ಕೈಕಾಲು ಹಿಡಿದು ರೋಸತ್ತಿದ್ದಾರೆ. ಸರ್ಕಾರ ಆಗಾಗ ದೊಡ್ಡ ದೊಡ್ಡ ಘೋಷಣೆಗಳನ್ನು ಮಾಡುತ್ತಿದೆ ಬಿಟ್ಟರೆ ಬಡವರ ಕೈಗೆ ದಕ್ಕಿದ್ದು ಹೆಚ್ಚೇನೂ ಇಲ್ಲ. ಪರ್ಯಾಯ ಒದಗಿಸದೆ ಬಡವರನ್ನು ಒಕ್ಕಲೆಬ್ಬಿಸಬಾರದು ಎಂಬ ಸರ್ಕಾರಿ ಸುತ್ತೋಲೆ ಇದ್ದರೂ ಎಲ್ಲಾ ಕಡೆ ಅಧಿಕಾರಿಗಳು ಬಡವರನ್ನು ಪೀಡಿಸುತ್ತಿದ್ದಾರೆ, ಬೀದಿಪಾಲು ಮಾಡುತ್ತಿದ್ದಾರೆ, ಸುಳ್ಳು ಕೇಸು ಹಾಕುತ್ತಿದ್ದಾರೆ. ಈ ಅಕ್ರಮವನ್ನು, ಅನ್ಯಾಯವನ್ನು, ಕ್ರೌರ್ಯವನ್ನು ಇನ್ನು ಸಹಿಸಲು ಸಾಧ್ಯವಿಲ್ಲ ಎಂಬ ಘೋಷಣೆಯೊಂದಿಗೆ ಪ್ರತಿಭಟನೆ ಆರಂಭವಾಗುತ್ತಿದೆ.

ಯಾರು ಪಾಲ್ಗೊಳ್ಳುತ್ತಿದ್ದಾರೆ?:

ಪ್ರತಿಭಟನೆಯ ಆಯೋಜಕರಲ್ಲಿ ಒಬ್ಬರಾದ ಸಿರಿಮನೆ ನಾಗರಾಜ್ ‘ಸಮಾಚಾರ’ದ ಜತೆ ಮಾತನಾಡಿ, “ಸರಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಈ ಬಾರಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಮೊದಲ ದಿನ ಜೂನ್ 15ರಂದು ಸುಮಾರು ಒಂದೂವರೆಯಿಂದ ಎರಡು ಸಾವಿರ ಜನ ಸುಮಾರು 21 ಜಿಲ್ಲೆಗಳಿಂದ ಆಗಮಿಸುತ್ತಿದ್ದಾರೆ. ಇವರಲ್ಲಿ ಆದಿವಾಸಿ ಸಮುದಾಯಗಳಾದ ಜೂನು ಕುರುಬ, ಬೆಟ್ಟ ಕುರುಬ, ಎರವರಲ್ಲಿ ಪಣಿ ಎರವರು, ಪಿಂಚಣಿ ಎರವರು, ಸೋಲಿಗ, ಮಲೆಕುಡಿಯ, ಇರುಳಿಗರು ಪಾಲ್ಗೊಳ್ಳುತ್ತಿದ್ದಾರೆ. ವಿಶೇಷ ಅಂದರೆ, ಭೂಮಿ ಹಾಗೂ ವಸತಿ ಇಲ್ಲದ ಮೇಲ್ವರ್ಗದ ಲಿಂಗಾಯಿತ ಮತ್ತು ಒಕ್ಕಲಿಗ ಸಮುದಾಯದವರೂ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ,” ಎಂದರು.

ಹಗಲು- ರಾತ್ರಿ ಪ್ರತಿಟನೆಯಾದ್ದರಿಂದ ರಾಜ್ಯದ ನಾನಾ ಕಡೆಯಿಂದ ಆಗಮಿಸುವವರಿಗೆ ಕನಿಷ್ಟ ಸೌಕರ್ಯಗಳನ್ನು ನೀಡುವ ವ್ಯವಸ್ಥೆಯೂ ಆಗಿದೆ. “ಮಳೆ ಬೇರೆ ಆರಂಭವಾಗಿದೆ. ಹೀಗಾಗಿ, ದೊಡ್ಡ ಮಟ್ಟದಲ್ಲಿ ಜನರಲ್ಲಿ ಕರೆತಂದು ಇಲ್ಲಿ ಪ್ರತಿಭಟನೆ ನಡೆಸುವುದು ಕಷ್ಟವಾಗಬಹುದು. ಹೀಗಾಗಿ, ಮುನ್ನೂರರಿಂದ ನಾನೂರು ಜನರಿಗೆ ಮಾತ್ರವೇ ವ್ಯವಸ್ಥೆ ಮಾಡಿದ್ದೇವೆ. ಅವರೇ ಎಲ್ಲರ ಪ್ರತಿನಿಧಿಗಳಾಗಿ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲಿದ್ದಾರೆ,” ಎಂದು ನಾಗರಾಜ್ ತಿಳಿಸಿದರು.

adivasi-2

ಬೇಡಿಕೆಗಳೇನಿವೆ?:

ಪ್ರತಿಭಟನಾಕಾರರ ಪ್ರಮುಖ ಹಕ್ಕೋತ್ತಾಯಗಳು ಹೀಗಿವೆ:

  1. ರಾಜ್ಯಾದ್ಯಂತ ಇರುವ ಬಡಜನರ ಭೂಮಿ-ವಸತಿ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಲು ಏಕಗವಾಕ್ಷಿ ವ್ಯವಸ್ಥೆಯ ರೀತಿಯಲ್ಲಿ ಒಂದು ಉನ್ನತಾಧಿಕಾರ ಸಮಿತಿ ರಚಿಸಬೇಕು.

  2. ಬಡಜನರು ಹೋರಾಟಗಳ ಮೂಲಕ ಎತ್ತಿರುವ ಭೂಮಿ-ವಸತಿ ಸಂಬಂಧಿತ ಪ್ರಕರಣಗಳನ್ನು ಒಂದು ತಿಂಗಳೊಳಗಾಗಿ ಬಡಜನರ ಪರವಾಗಿ ಇತ್ಯರ್ಥಪಡಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸಾರ್ವತ್ರಿಕವಾದ ಆದೇಶ ಜಾರಿ ಮಾಡಬೇಕು.

  3. ಅಂತಹ ಎಲ್ಲಾ ಹೋರಾಟಗಳ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಬಡಜನರ ಮೇಲೆ ಹಾಕಿರುವ ಎಲ್ಲಾ ಪೊಲೀಸ್ ಕೇಸುಗಳನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು.

 

Leave a comment

FOOT PRINT

Top