An unconventional News Portal.

ಪೋಷಕರೇ ಎಚ್ಚರ; ಅಂತರ್ಜಾಲದಲ್ಲಿ ಮಕ್ಕಳನ್ನು ಬಲಿ ತೆಗೆದುಕೊಳ್ಳುತ್ತಿದೆ ‘ಸ್ಯೂಸೈಡ್ ಗೇಮ್’!

ಪೋಷಕರೇ ಎಚ್ಚರ; ಅಂತರ್ಜಾಲದಲ್ಲಿ ಮಕ್ಕಳನ್ನು ಬಲಿ ತೆಗೆದುಕೊಳ್ಳುತ್ತಿದೆ ‘ಸ್ಯೂಸೈಡ್ ಗೇಮ್’!

ಸಾಮಾಜಿಕ ಜಾಲತಾಣಗಳನ್ನು ಬಳಸುವ ಮಕ್ಕಳನ್ನು ಗುರಿಯಾಗಿಸಿಕೊಂಡು ‘ಸಾವಿನ ಆಟ’ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ರಷ್ಯಾ ಪೊಲೀಸರು ಬಂಧಿಸಿದ್ದಾರೆ. 26 ವರ್ಷದ ಇಲ್ಯಾ ಸಿಡೊರೊವ್ ಬಂಧಿತ ಆರೋಪಿಯಾಗಿದ್ದು, ಈವರೆಗೆ ಸುಮಾರು 130 ಮಕ್ಕಳು ಈತನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಗಳು ಹೇಳುತ್ತಿವೆ.

‘ಬ್ಯೂ ವೇಲ್’ (ನೀಲಿ ತಿಮಿಂಗಿಲ) ಹೆಸರಿನಲ್ಲಿ ಅಂತರ್ಜಾಲದಲ್ಲಿ ಆಟವೊಂದು ಜಾರಿಯಲ್ಲಿದ್ದ ಬಗ್ಗೆ ಈ ಹಿಂದೆಯೇ ಬಹಿರಂಗವಾಗಿತ್ತು. ವಿಶೇಷವಾಗಿ ರಷ್ಯಾದಲ್ಲಿ ನವೆಂಬರ್‌ 2015 ರಿಂದ ಏಪ್ರಿಲ್ 2016ರ ನಡುವೆ ನೂರಕ್ಕೂ ಹೆಚ್ಚು ಹದಿಹರೆಯದ ಯುವಕ ಯುವತಿಯರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರೆಲ್ಲರ ಸಾವು, ಅಂತರ್ಜಾಲದಲ್ಲಿ ನಿಗೂಢವಾಗಿ ನಡೆಯುತ್ತಿದ್ದ ‘ಆತ್ಮಹತ್ಯೆ’ ಆಟದ ಜತೆ ತಳಕು ಹಾಕಿಕೊಂಡಿತ್ತು.

ಇದೇ ಮಾದರಿ ‘ಆಟ’ದ ಗುಂಪುಗಳು ಯುರೋಪಿನ ಹಲವು ದೇಶಗಳು ಹಾಗೂ ಬ್ರಿಟನ್‌ನಲ್ಲಿಯೂ ಕಾರ್ಯನಿರ್ವಹಿಸುತ್ತಿರುವುದರ ಬಗ್ಗೆಯೂ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಆತಂಕ ಮನೆಮಾಡಿದೆ. ಇದೀಗ ರಷ್ಯಾ ಪೊಲೀಸರು ಅಂತರ್ಜಾಲದಲ್ಲಿ ನಡೆಯುತ್ತಿದ್ದ ವಿಕೃತ ಆಟದ ಶಂಕಿತ ‘ಮಾಸ್ಟರ್‌ ಮೈಂಡ್’ ಇಲ್ಯಾನನ್ನು ಬಂಧಿಸಿದ್ದಾರೆ. ಈತ ಅಲ್ಲಿನ ಸರಕಾರಿ ಪೋಸ್ಟ್‌ ಆಫೀಸ್‌ನಲ್ಲಿ ಕೆಲಸ ಮಾಡುತ್ತಿದ್ದ.

ಏನಿದು ‘ಬ್ಲೂ ವೇಲ್’?: 

ನಮ್ಮಲ್ಲಿ ಫೇಸ್‌ಬುಕ್ ಇವುವಂತೆಯೇ ರಷ್ಯಾದಲ್ಲಿ ವಿಕೆ ಹೆಸರಿನ ಸಾಮಾಜಿಕ ಜಾಲತಾಣ ಹೆಚ್ಚು ಬಳಕೆಯಲ್ಲಿದೆ. ಇಲ್ಲಿ ಮಕ್ಕಳೂ ಕೂಡ ಇದರ ಸದಸ್ಯರಾಗಬಹುದು. ಇದರಲ್ಲಿ ‘ಬ್ಯೂ ವೇಲ್’ ಹೆಸರಿನ ನಿಗೂಢ ಗುಂಪೊಂದು ಕಾರ್ಯನಿರ್ವಹಿಸುತ್ತಿದೆ. ತನ್ನನ್ನು ತಾನು ‘ಆನ್‌ಲೈನ್ ಗೇಮ್’ ಎಂದು ಕರೆದುಕೊಂಡಿರುವ ‘ಬ್ಲೂ ವೇಲ್’ಗೆ 12 ರಿಂದ 16ರ ನಡುವಿನ ಯುವಕ ಯುವತಿಯರು ಸದಸ್ಯರಾಗುತ್ತಾರೆ. ನಂತರ ಅವರಿಗೆ 50 ದಿನಗಳ ಆಟಕ್ಕೆ ಅಹ್ವಾನ ನೀಡಲಾಗುತ್ತದೆ. ಒಮ್ಮೆ ಆಟಕ್ಕೆ ಒಪ್ಪಿಕೊಂಡ ನಂತರ ಹಿಂದಕ್ಕೆ ಹೋಗುವಂತಿಲ್ಲ ಎಂಬ ಷರತ್ತನ್ನೂ ವಿಧಿಸಲಾಗುತ್ತದೆ.

ಒಮ್ಮೆ ಷರತ್ತಿಗೆ ಒಪ್ಪಿ ಹದಿಹರಿಯದ ವಯಸ್ಸಿನ ಯುವಕ ಯುವತಿಯರು ಅಖಾಡಕ್ಕೆ ಇಳಿದರೆ, ದಿನಕ್ಕೊಂದರಂತೆ ‘ಟಾಸ್ಕ್‌’ಗಳನ್ನು ನೀಡಲಾಗುತ್ತದೆ. ಮೊದಲಿಗೆ ತಮ್ಮ ಕೈ ಮೇಲೆ #ಎಫ್ 59 ಎಂದು ರೇಝರ್‌ನಿಂದ ಕೊಯ್ದುಕೊಳ್ಳಬೇಕು. ಅದರ ಫೊಟೋ ಕಳುಹಿಸಬೇಕು. ನಂತರ ದಿನಗಳಲ್ಲಿ ಪ್ರತಿ ದಿನ ಬೆಳಗ್ಗೆ ಎದ್ದು ಎತ್ತರ ಸ್ಥಳಕ್ಕೆ ಹೋಗಿ ಗುಂಪಿನಲ್ಲಿ ಕಳುಹಿಸುವ ಸಂಗೀತ ಕೇಳಬೇಕು. ದಿನವಿಡೀ ಹಾರರ್ ಸಿನೆಮಾಗಳನ್ನು ನೋಡುತ್ತಿರಬೇಕು.

ಹೀಗೆ, ಮೊದಲ 49 ದಿನಗಳ ಅಂತರದಲ್ಲಿ ಎಳೆವಯಸ್ಸಿನ ಮಕ್ಕಳ ಮೇಲೆ ಭಾರಿ ಪರಿಣಾಮ ಬೀರುವಂತಹ ಚಟುವಟಿಕೆಗಳನ್ನು ನೀಡಲಾಗುತ್ತದೆ. ಅಷ್ಟೊತ್ತಿಗಾಗಲೇ ಗುಂಪಿನ ನಿರ್ವಾಹಕರು ಆಟಕ್ಕೆ ಒಪ್ಪಿದ ಸದಸ್ಯರ ಮೇಲೆ ಮಾನಸಿಕ ಹಿಡಿತ ಸಾಧಿಸುತ್ತಾರೆ. 50ನೇ ದಿನ ಸದಸ್ಯರಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಸೂಚನೆ ಬರುತ್ತದೆ. ಹೀಗೆ ಈವರೆಗೆ 130 ಯುವಕ ಯುವತಿಯರು ಸಾವನ್ನಪ್ಪಿದ್ದಾರೆ ಎಂಬುದು ಅವರ ಸಾಮಾಜಿಕ ಜಾಲತಾಣದ ಕೊನೆಯ ಸ್ಟೇಟಸ್‌ಗಳು ಹೇಳುತ್ತಿವೆ.

ಆತ್ಮಹತ್ಯೆಗೂ ಮುನ್ನ ಕೊನೆಯ ಸ್ಟೇಟಸ್.

ಆತ್ಮಹತ್ಯೆಗೂ ಮುನ್ನ ಕೊನೆಯ ಸ್ಟೇಟಸ್.

‘ಬ್ಯೂ ವೇಲ್’ ಹೆಸರಿನ ಆಪ್‌ಗಳೂ ಕೂಡ ಕಾರ್ಯನಿರ್ವಹಿಸುತ್ತಿವೆ. ಆಪ್‌ ಮೂಲಕವೂ ಆತ್ಮಹತ್ಯೆಗೆ ಪ್ರಚೋದನೆ ನೀಡುವ ಆಟ ನಡೆಯುತ್ತಿದೆ ಎಂದು ಕೆಲವು ವರದಿಗಳು ಹೇಳುತ್ತವೆ.

ಇದರಿಂದ ಲಾಭ ಏನು?: 

ಇದರಿಂದ ‘ಬ್ಯೂ ವೇಲ್’ ನಿರ್ವಾಹಕರಿಗೆ ಆಗುವ ಲಾಭಗಳೇನು? ಎಂಬ ಬಗ್ಗೆ ನಿಖರ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಮೇಲ್ನೋಟಕ್ಕೆ ಇದು ಅಂತರ್ಜಾಲದಲ್ಲಿ ಜಾರಿಯಲ್ಲಿರುವ ‘ಸೈಕೋ’ ಮನಸ್ಥಿತಿಗೆ ಹಿಡಿದ ಕನ್ನಡಿಯಂತಿದೆ. ಚಲಿಸುವ ರೈಲಿನಿಂದ ಹಾರುವುದು, ಎತ್ತರ ಕಟ್ಟಡದಿಂದ ಹಾರುವುದು, ರಕ್ತನಾಳಗಳನ್ನು ಕೊಯ್ದುಕೊಳ್ಳುವುದು ಹೀಗೆ ಭೀಕರ ಎನ್ನಿಸುವ ದೃಶ್ಯಾವಳಿಗಳಿಂದ ಅಂತರ್ಜಾಲದ ಗುಂಪುಗಳನ್ನು ಹೆಚ್ಚು ಜನಪ್ರಿಯಗೊಳಿಸುವ ತಂತ್ರವೂ ಇದರ ಹಿಂದಿದೆ ಎನ್ನುತ್ತವೆ ಕೆಲವು ವರದಿಗಳು.

ರಷ್ಯಾದಿಂದ ಆರಂಭಗೊಂಡ ಈ ಆತ್ಯಹತ್ಯೆ ಮಾಡಿಕೊಳ್ಳುವ ‘ಆಟ’ ಯುರೋಪಿನ ಹಲವು ದೇಶಗಳಲ್ಲಿಯೂ ನಿಗೂಢವಾಗಿ ಕಾರ್ಯನಿರ್ವಹಿಸುತ್ತಿದೆ. ಲಂಡನ್‌ ಸೇರಿದಂತೆ ಹಲವು ದೊಡ್ಡ ನಗರಗಳಲ್ಲಿ ಮಕ್ಕಳನ್ನೇ ಗುರಿಯಾಗಿಸಿಕೊಂಡು ಜಾಲವೊಂದು ಕಾರ್ಯನಿರ್ವಹಿಸುತ್ತಿದೆ. ಈ ಕುರಿತು ಭಾರತದಲ್ಲಿ ಯಾವುದೇ ವರದಿಗಳು ಬಂದಿಲ್ಲವಾದರೂ, ಅಂತರ್ಜಾಲ ಬಳಸುವ ಮಕ್ಕಳ ಪೋಷಕರು ಎಚ್ಚರಿಕೆ ವಹಿಸುವುದು ಸೂಕ್ತ ಎಂಬ ಸಂದೇಶವನ್ನು ‘ಅನಾನಿಮಸ್’ ಶನಿವಾರಷ್ಟೆ ಬಿಡುಗಡೆ ಮಾಡಿದೆ.

 

Leave a comment

FOOT PRINT

Top