An unconventional News Portal.

‘ವಿಶ್ವದ ಬೃಹತ್ ಪ್ರಾಣಿ ಬಲಿ ಜಾತ್ರೆ’ಗೆ ಬ್ರೇಕ್ ಹಾಕಿದಷ್ಟು ಸುಲಭನಾ ದೇಶದಲ್ಲಿ ಗೋ ಹತ್ಯೆ ನಿಷೇಧ?

‘ವಿಶ್ವದ ಬೃಹತ್ ಪ್ರಾಣಿ ಬಲಿ ಜಾತ್ರೆ’ಗೆ ಬ್ರೇಕ್ ಹಾಕಿದಷ್ಟು ಸುಲಭನಾ ದೇಶದಲ್ಲಿ ಗೋ ಹತ್ಯೆ ನಿಷೇಧ?

ಪ್ರಾಣಿಗಳ ಬಲಿಗೂ, ಮನುಷ್ಯನ ನಂಬಿಕೆಗಳಿಗೂ ಹತ್ತಿರ ಸಂಬಂಧವೊಂದಿದೆ ಎಂಬುದನ್ನು ದೊಡ್ಡ ಮಟ್ಟದಲ್ಲಿ ಜಗತ್ತಿಗೆ ಸಾರಿ ಹೇಳಿದ್ದು ಹಿಂದೂಗಳ ಗುಡಿಮೈ ಉತ್ಸವ.

ಭಾರತದ ಗಡಿಭಾಗಕ್ಕೆ ಹೊಂದಿಕೊಂಡಿರುವ ದಕ್ಷಿಣ ನೇಪಾಳದಲ್ಲಿ ಇತ್ತೀಚಿನವರೆಗೂ ನಡೆದುಕೊಂಡು ಬಂದ ಈ ಉತ್ಸವ ಅಕ್ಷರಶಃ ಬಹಿರಂಗ ಕಸಾಯಿಖಾನೆ. ವಿಶ್ವದ ಬೃಹತ್‌ ಪ್ರಾಣಿ ಬಲಿ ಜಾತ್ರೆಎಂಬುದು ಈ ಗಡಿಮೈ ಜಾತ್ರೆಗೆ ಅಂಟಿಕೊಂಡಿದ್ದ ಕಳಂಕ.

ಕಳೆದ ಮೂರು ಶತಮಾನಗಳಿಂದ ಪ್ರತಿ 5 ವರ್ಷಗಳಿಗೊಮ್ಮೆ ನೇಪಾಳದ ಬಾರಾ ಜಿಲ್ಲೆಯ ಬರಿಯಾರ್‌ಪುರದಲ್ಲಿ ಈ ಜಾತ್ರೆ ನಡೆದುಕೊಂಡು ಬಂದಿತ್ತು. ರಾಜಧಾನಿ ಕಾಠ್ಮಂಡುವಿನಿಂದ 160 ಕಿಲೋಮೀಟರ್ ದೂರದಲ್ಲಿದೆ ಈ ಪ್ರದೇಶ. ಜಾತ್ರೆಯಲ್ಲಿ ಹಲವು ವಿಶೇಷತೆಗಳಿದ್ದರೂ ಸುದ್ದಿಯಾಗಿದ್ದು ಇಲ್ಲಿನ ಶಕ್ತಿ ದೇವತೆ ಗಡಿಮೈಗೆ ಬಲಿ ಕೊಡಲಾಗುವ ಪ್ರಾಣಿಗಳು ಮತ್ತು ಅವುಗಳ ಸಂಖ್ಯೆ. 2009ರಲ್ಲಿ ಗಡಿಮೈ ಜಾತ್ರೆ ನಡೆದಾಗ ಎರಡು ದಿನಗಳಲ್ಲಿಅಂದಾಜು 5 ಲಕ್ಷಕ್ಕೂ ಹೆಚ್ಚು ಎಮ್ಮೆ, ಕೋಣ, ಕೋಳಿ, ಕುರಿಗಳನ್ನು ಬಲಿ ಕೊಡಲಾಗಿತ್ತು. 2014ರಲ್ಲಿ ಈ ಸಂಖ್ಯೆ 2. 5 ಲಕ್ಷಕ್ಕೆ ಇಳಿದಿತ್ತು. ನಂತರದ ದಿನಗಳಲ್ಲಿ ಉತ್ಸವದಲ್ಲಿ ಪ್ರಾಣಿ ಬಲಿಯನ್ನು ನಿಷೇಧಿಸಲಾಯಿತು. 

ಸದ್ಯ ಇಲ್ಯಾಕೆ ಗುಡಿಮೈ ಉತ್ಸವದ ನೆನಪು ಮಾಡಿಕೊಳ್ಳಬೇಕಿದೆ ಎಂದರೆ, ಸದ್ಯ ಭಾರತದಲ್ಲಿ ಗೋ ಹತ್ಯಾ ನಿಷೇಧ ಸಂಬಂಧ ಹೊರಬಿದ್ದಿರುವ ಹೊಸ ಅಧಿಸೂಚನೆಗೂ, ಈ ಗುಡಿಮೈ ಉತ್ಸವಕ್ಕೂ ಹತ್ತಿರದ ಸಂಬಂಧವೊಂದಿದೆ. ಭಾರತ ಮತ್ತು ನೇಪಾಳದ ಗಡಿಭಾಗದಲ್ಲಿ ನಡೆಯುವ ಈ ಉತ್ಸವದಲ್ಲಿ ನೇಪಾಳದ ಹಿಂದೂಗಳು, ಬಿಹಾರದ ಹಿಂದೂಗಳು ದೊಡ್ಡ ಸಂಖ್ಯೆಯಲ್ಲಿ ಸೇರುತ್ತಿದ್ದರು. ಸುಮಾರು 50 ಲಕ್ಷ ದಾಟುವ ಭಕ್ತಾಧಿಗಳ ಸಂಖ್ಯೆ ಪ್ರಾಣಿಗಳ ಸಾಮೂಹಿಕ ಮಾರಣ ಹೋಮ ನಡೆಸುತ್ತಿತ್ತು. ಇದನ್ನು ನಿಲ್ಲಿಸಲು ಕೋರಿ ಸುಪ್ರಿಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಗುಡಿಮೈ ಉತ್ಸವದ ಹಿನ್ನೆಲೆಯಲ್ಲಿ ಪ್ರಾಣಿ ಬಲಿಯನ್ನು ನಿಲ್ಲಿಸಲು ಆರಂಭಗೊಂಡ ಕಾನೂನು ಹೋರಾಟ, ಕೊನೆಗೆ ಭಾರತದಲ್ಲಿ ಕಸಾಯಿಖಾನೆಗಳಿಗೆ ಜಾನುವಾರುಗಳನ್ನು ಮಾರಾಟ ಮಾಡದಂತೆ ನಿರ್ಬಂಧ ಹೇರುವ ರಾಜಕೀಯ ತಿರುವನ್ನು ಪಡೆದುಕೊಂಡಿತು.

gudhimai-fest-3


ಹಿನ್ನಲೆ: ಬೀಫ್ ಬ್ಯಾನ್: ಸುಪ್ರಿಂಕೋರ್ಟ್ ಚಾಪೆ ಕೆಳಗೆ ಕೇಂದ್ರ ಸರಕಾರ ರಂಗೋಲಿ ಹಾಕಿದ್ದು ಹೀಗೆ…


 ಹಿಂದೂಗಳ ಹಬ್ಬ ಇದು: 

ಗಡಿಮೈ ಜಾತ್ರೆ ನೇಪಾಳದ ಮಾದೇಶಿಗಳು ಮತ್ತು ಭಾರತದ ಬಿಹಾರಿಗಳ ಪ್ರಮುಖ ಧಾರ್ಮಿಕ ಆಚರಣೆಗಳಲ್ಲಿ ಒಂದು2009ರಲ್ಲಿ ಇಲ್ಲಿ ಜಾತ್ರೆಯಾದಾಗ ಸುಮಾರು 50 ಲಕ್ಷ ಜನ ಬಂದು ಸೇರಿದ್ದರು ಎಂದರೆ ಈ ಜಾತ್ರೆಯ ಜನಪ್ರಿಯತೆಯನ್ನು ಅಂದಾಜು ಮಾಡಿಕೊಳ್ಳಬಹುದು. ಇಂಥಹದ್ದೊಂದು ಭಯಂಕರ ಜಾತ್ರೆ ನಡೆಯುವುದು ನೇಪಾಳದಲ್ಲಾದರೂ ಬರಿಯಾರ್‌ಪುರ ನಮ್ಮ ಬಿಹಾರಕ್ಕೆ ಹೊಂದಿಕೊಂಡ ಪ್ರದೇಶ. ಭಾರತದ ಗಡಿಯಿಂದ ಸ್ವಲ್ಪವೇ ದೂರ; ಹಾಗಾಗಿ ಗಡಿಮೈ ಶಕ್ತಿದೇವತೆಯ ಆರಾಧನೆ ಭಾರತೀಯರಲ್ಲೂ ಪರಂಪರೆಯಾಗಿ ನಡೆದುಕೊಂಡು ಬಂದಿದೆ. ದೊಡ್ಡ ಸಂಖ್ಯೆಯಲ್ಲಿ ಭಾರತೀಯರೂ ಹೋಗಿ ಗಡಿಮೈ ಜಾತ್ರೆಯಲ್ಲಿ ತಮ್ಮ ಬಲಿ ಸಮರ್ಪಿಸಿ ಬರುತ್ತಾರೆಈ ಜಾತ್ರೆಯಲ್ಲಿ ಬಲಿ ನೀಡಲಾಗುವ ಶೇಕಡಾ 70ರಷ್ಟು ಪ್ರಾಣಿಗಳು ಅದರಲ್ಲೂ ಎಮ್ಮೆಗ ಸರಬರಾಜು ಭಾರತದಿಂದಲೇ ನಡೆಯುತ್ತದೆ. ಈ ಅಕ್ರಮ ಸಾಗಣೆ ಸಮಯದಲ್ಲಿ ಕಾನೂನುಗಳನ್ನು ಗಾಳಿ ತೂರಲಾಗುತ್ತಿತ್ತು. ಈ ಹಬ್ಬ ಬಂತು ಎಂದರೆ ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳದಿಂದ ಪ್ರಾಣಿಗಳ ಅಕ್ರಮ ಸಾಗಣೆ ಜೋರಾಗಿಯೇ ನಡೆದುಕೊಂಡು ಬರುತ್ತಿತ್ತು. 

ಮೂರು ಶತಮಾನಗಳ ಹಿನ್ನೆಲೆಯಿರುವ ಈ ಉತ್ಸವ ಪ್ರಾಣಿ, ಪಕ್ಷಿಗಳನ್ನು ಬಲಿಕೊಟ್ಟರೆ ಸುಖ, ಸಮೃದ್ಧಿ ನೆಲೆಸುತ್ತದೆಂಬ ಹಿಂದೂಗಳ ಕುರುಡು ನಂಬಿಕೆ ಮೇಲೆಯೇ ನಿಂತಿತ್ತು. ಆ ಸಮಯದಲ್ಲಿ ಬಹಿರಂಗ ವಾತಾವರಣದಲ್ಲಿ ಪ್ರಾಣಿಗಳನ್ನು ಕಡಿದು ಉರುಳಿಸುವ ಭೀಬತ್ಸ ದೃಶ್ಯಗಳಿಗಾಗಿ ಗಮನ ಸೆಳೆಯುತ್ತಿತ್ತು. ಈ ಹಬ್ಬ ನಡೆದ ನಂತರ ಇಡೀ ದೇವಸ್ಥಾನದ ಆವರಣವೇ ರಕ್ತಮಯವಾಗಿರುತ್ತಿತ್ತು. ಎಲ್ಲಿ ನೋಡಿದರೂ ಪ್ರಾಣಿಗಳ ಕಳೇಬರವೇ ಕಾಣಿಸುತ್ತಿತ್ತು. ಅವುಗಳು ಕೊಳೆತು ಇಡೀ ಊರಿಗೆ ಊರೇ ರೋಗಗಳ ಆವಾಸ ಸ್ಥಾನಗಳಾಗುತ್ತಿದ್ದವುವಿಶೇಷ ಎಂದರೆ ಇಲ್ಲಿ ಕೊಂದ ಪ್ರಾಣಿಗಳು ಮೂಳೆ, ಮಾಂಸ, ಕಳೇಬರಗಳನ್ನು ಭಾರತ ಮತ್ತು ನೇಪಾಳದ ಪ್ರಖ್ಯಾತ ಕಂಪೆನಿಗಳು ಹರಾಜಿನ ಮೂಲಕ ಕೊಂಡುಕೊಳ್ಳುತ್ತಿದ್ದವು.

ಪಂಚ ಬಲಿ + ಕೋಣ ಬಲಿ:

ಇಂಥಹದ್ದೊಂದು ಹಬ್ಬದಲ್ಲಿ ಪಂಚ ಬಲಿ ಹೆಸರಿನಲ್ಲಿ ಹಂದಿ, ಪಾರಿವಾಳ, ಬಾತುಕೋಳಿ, ಹೇಂಟೆ (ಕೋಳಿ) ಮತ್ತು ಇಲಿಗಳನ್ನು ಮೊದಲ ದಿನ ಬಲಿ ಕೊಡಲಾಗುತ್ತಿತ್ತು. ಎರಡನೇ ದಿನ ಎಮ್ಮೆ, ಮೇಕೆಗಳಿಗೆ ಮೀಸಲು. ಅದರಲ್ಲೂ ಕರುಗಳನ್ನು ಗಡಿಮೈಗೆ ಬಲಿಕೊಡುವುದು ಹೆಚ್ಚು ಬಳಕೆಯಲ್ಲಿದೆ.

gudhimai-fest-2

ಇಲ್ಲಿನ ಬಲಿ ಕೊಡುವ ವಾತಾವರಣ ಯಾವ ಮಟ್ಟಕ್ಕೆ ಇತ್ತು ಎಂದರೆ 2009ರಲ್ಲಿ ಕುರಿಗಳ ಸಂಖ್ಯೆ ಕಡಿಮೆಯಾದಾಗ ಮಾದೇಶಿ ಸಮುದಾಯ ರಾಜಕಾರಣಿಗಳು ರೇಡಿಯೋ ಮೂಲಕ ಕುರಿಗಳನ್ನು ಮಾರುವಂತೆ ರೈತರಲ್ಲಿ ಮನವಿ ಮಾಡಿಕೊಂಡಿದ್ದರು. ಹೀಗೆ ಗುಡಿಮೈ ಉತ್ಸವದಲ್ಲಿ ಬಲಿ ಎಂಬುದು ಭಕ್ತಾಧಿಗಳ ಪರಂಪರೆ ಜತೆ ಬೆರೆತು ಹೋಗಿತ್ತು.

2009ರಲ್ಲಿ ಗಡಿಮೈ ಜಾತ್ರೆ ನಡೆಯುವಾಗಲೇ ಈಗ ಕೇಂದ್ರ ಸಚಿವೆಯಾಗಿರುವ ಮೇನಕಾ ಗಾಂಧಿ ಮತ್ತಿತರರು ನೇಪಾಳ ಸರಕಾರಕ್ಕೆ ಪತ್ರ ಬರೆದು ಇದನ್ನು ನಿಲ್ಲಿಸಲು ಹೇಳಿದ್ದರು. ಆದರೆ ಸರಕಾರ, ಶಮಾನದಷ್ಟು ಹಳೆಯ ಸಂಪ್ರದಾಯಗಳಲ್ಲಿ ಮೂಗು ತೂರಿಸುವುದಿಲ್ಲ ಎಂದು ಇದನ್ನು ತಳ್ಳಿ ಹಾಕಿತು.

ನಂತರ ಹುಮ್ಯಾನೇ ಸೊಟೈಟಿ ಇಂಡಿಯಾ (HSI) ದ ಸಲಹೆಗಾರ್ತಿಯೂ ಆದ ಗೌರಿ ಮೌಲೇಖಿ. ಇವರ ಒತ್ತಡದ ಹಿನ್ನೆಲೆಯಲ್ಲಿ 2015ರಲ್ಲಿ ನೇಪಾಳದ ಗುಡಿಮೈ ದೇವಸ್ಥಾನ ಟ್ರಸ್ಟ್ ಪ್ರಕಟಣೆಯೊಂದನ್ನು ಹೊರಡಿಸಿತು. “ಬಲಿ ಮತ್ತು ಹಿಂಸೆಯ ಜಾಗದಲ್ಲಿ ಆರಾಧನೆ ಮತ್ತು ಸಂಭ್ರಮಾಚರಣೆಯನ್ನು ಸ್ಥಾಪಿಸಲು ಸಮಯ ಬಂದಿದೆ,” ಎಂದು ಅದರಲ್ಲಿ ಹೇಳಲಾಯಿತು. ಈ ಮೂಲಕ ಲಕ್ಷ ಲಕ್ಷ ಸಂಖ್ಯೆಯಲ್ಲಿ ನಡೆಯುತ್ತಿದ್ದ ಪ್ರಾಣಿ ಬಲಿ ಆಚರಣೆಗೆ ಕೊನೆ ಹಾಡಲಾಯಿತು. ಇದನ್ನು ನಿಲ್ಲಿಸಲು ಆರಂಭಗೊಂಡ ಪ್ರಯತ್ನ ಮಾತ್ರ ಭಾರತದಲ್ಲಿ ಗೋ ಹತ್ಯಾ ನಿಷೇಧದ ಹಿನ್ನೆಲೆಯಲ್ಲಿ ಹೊಸ ಅಧಿಸೂಚನೆಗೆ ನಾಂದಿ ಹಾಡಿತು; ಜತೆಗೆ ವಿವಾದವನ್ನೂ ಹುಟ್ಟುಹಾಕಿದೆ. ಧಾರ್ಮಿಕ ನಂಬಿಕೆ ಹಿನ್ನೆಲೆಯಲ್ಲಿ ಪ್ರಾಣಿ ಬಲಿಯನ್ನು ನಿಲ್ಲಿಸಿದಷ್ಟು ಸುಲಭವಾಗಿ ದೇಶಾದ್ಯಂತ ಜಾನುವಾರುಗಳ ಹತ್ಯೆಯನ್ನು ನಿಲ್ಲಿಸಲು ಸಾಧ್ಯನಾ? ಕಸಾಯಿಖಾನೆಗಳು ಸ್ಥಗಿತಗೊಂಡರೆ ಅದರ ಪರಿಣಾಮಗಳೇನಾಗಬಹುದು? ಇದು ಸದ್ಯ ದೇಶದ ಮುಂದಿರುವ ಪ್ರಶ್ನೆಗಳು.  

ಚಿತ್ರಗಳು: ಡೈಲಿಮೇಲ್

Leave a comment

FOOT PRINT

Top