An unconventional News Portal.

‘ದೊಡ್ಮನೆಯ ನಿಜವಾದ ಯಜಮಾನಿ’, ಗಟ್ಟಿ ಮಹಿಳೆ ಪಾರ್ವತಮ್ಮ ರಾಜ್‌ಕುಮಾರ್; ಇನ್ನಿಲ್ಲ

‘ದೊಡ್ಮನೆಯ ನಿಜವಾದ ಯಜಮಾನಿ’, ಗಟ್ಟಿ ಮಹಿಳೆ ಪಾರ್ವತಮ್ಮ ರಾಜ್‌ಕುಮಾರ್; ಇನ್ನಿಲ್ಲ

ದಕ್ಷಿಣ ಭಾರತದ ಸಿನೆಮಾ ಪೈಕಿ ಕನ್ನಡದ ಇಂಡಸ್ಟ್ರಿಯನ್ನು ಒಂದಷ್ಟು ದಿನಗಳ ಕಾಲ ಅಕ್ಷರಶಃ ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡಿದ್ದವರು ಪಾರ್ವತಮ್ಮ ರಾಜ್‌ಕುಮಾರ್. 1939ರಲ್ಲಿ ಜನಿಸಿದ ಅವರು ಬುಧವಾರ ಮುಂಜಾನೆ ಅನಾರೋಗ್ಯದ ಹಿನ್ನೆಲೆಯಲ್ಲಿ ಕೊನೆಉಸಿರು ಎಳೆದಿದ್ದಾರೆ. ಬಹುಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ 78 ವರ್ಷ ವಯಸ್ಸಿನ ಪಾರ್ವತಮ್ಮ ರಾಜ್ ಕುಮಾರ್ ಕಳೆದ ಎರಡು ವಾರಗಳಿಂದ ಬೆಂಗಳೂರಿನ ಎಂ. ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಪಾರ್ವತಮ್ಮ ಪಾರ್ಥೀವ ಶರೀರವನ್ನು ಆಸ್ಪತ್ರೆಯಿಂದ ರಾಘವೇಂದ್ರ ರಾಜ್‌ಕುಮಾರ್ ನಿವಾಸಕ್ಕೆ ತರಲಾಗಿದೆ. ಸದಾಶಿವ ನಗರದ ಪೂರ್ಣಪ್ರಜ್ಞ ಮೈದಾನದಲ್ಲಿ ಬೆಳಗ್ಗೆ 10 ಗಂಟೆ ನಂತರ ಸಾರ್ವಜನಿಕರು ಅಂತಿಮ ದರ್ಶನಕ್ಕೆ ಇಡಲಾಗುತ್ತಿದೆ. ಕಂಠೀರವ ಸ್ಟುಡಿಯೋದಲ್ಲಿ ಸಂಜೆ ವೇಳೆಗೆ ಅಂತಿಮ ಸಂಸ್ಕಾರ ನಡೆಸಲಾಗುವುದು ವರದಿಗಳು ಹೇಳುತ್ತಿವೆ.

ಮೈಸೂರಿನ ಸಾಲಿಗ್ರಾಮದಲ್ಲಿ ಜನಿಸಿದ ಪಾರ್ವತಮ್ಮ ಕನ್ನಡ ಚಲನಚಿತ್ರರಂಗದ ವರನಟ ಡಾ. ರಾಜ್ ಕುಮಾರ್ ಅವರ ಪತ್ನಿಯಾಗಿ, ನಂತರದ ದಿನಗಳಲ್ಲಿ ವಿತರಕಿಯಾಗಿ, ನಿರ್ಮಾಪಕಿಯಾಗಿ ಹೆಸರು ಮಾಡಿದವರು. ಪುತ್ರರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್, ಇಬ್ಬರು ಪುತ್ರಿಯರಾದ ಪೂರ್ಣಿಮಾ, ಲಕ್ಷ್ಮಿ ಹಾಗೂ ಕುಟುಂಬ ವರ್ಗದವರನ್ನು ಅವರು ಅಗಲಿದ್ದಾರೆ.

ಈ ಸಮಯದಲ್ಲಿ, ಪಾರ್ವತಮ್ಮ ರಾಜ್‌ಕುಮಾರ್ ಅವರ ವ್ಯಕ್ತಿತ್ವ ಬೆಳೆದು ಬಂದ ಬಗೆಯನ್ನು ಹಿರಿಯ ಪತ್ರಕರ್ತ, ‘ಲಂಕೇಶ್ ಪತ್ರಿಕೆ’ಯಲ್ಲಿ ಸಿನೆಮಾ ವರದಿಗಾರರಾಗಿದ್ದ ಸತ್ಯಮೂರ್ತಿ ಆನಂದೂರು ಇಲ್ಲಿ ಕಟ್ಟಿಕೊಟ್ಟಿದ್ದಾರೆ. 


  • ಸತ್ಯಮೂರ್ತಿ ಆನಂದೂರು

ಸತ್ಯಮೂರ್ತಿ ಆನಂದೂರು

ಸತ್ಯಮೂರ್ತಿ ಆನಂದೂರು

ಅದು 70ರ ದಶಕದ ಕೊನೆಯ ಭಾಗ. ನನಗೆ ನೆನಪಿರುವ ಹಾಗೆ ‘ಶಂಕರ್ ಗುರು’ ಅನ್ಸುತ್ತೆ. ಮೊದಲ ಬಾರಿಗೆ ಪಾರ್ವತಮ್ಮ ರಾಜ್‌ಕುಮಾರ್ ದಾಕ್ಷಾಯಿಣಿ ಕಂಬೈನ್ಸ್ ಹೆಸರಿನಲ್ಲಿ ಸಿನೆಮಾ ನಿರ್ಮಾಣಕ್ಕೆ ಕೈ ಹಾಕಿದರು. ಅದಕ್ಕೂ ಮುಂಚೆ, ಅವರು ನಟ ರಾಜ್‌ಕುಮಾರ್ ಅವರ ಪತ್ನಿ ಅಷ್ಟೆ. ಕುಟುಂಬ ನಿರ್ವಹಣೆಯಲ್ಲಿಯೇ ಅವರು ಮುಳುಗಿ ಹೋಗಿದ್ದರು. ‘ಶಂಕರ್ ಗುರು’ ಚಿತ್ರದಲ್ಲಿ ರಾಜ್‌ಕುಮಾರ್ ತ್ರಿ ಪಾತ್ರದಲ್ಲಿ ನಟಿಸಿದ್ದರು. ಜಯಮಾಲ, ಪದ್ಮಪ್ರಿಯ, ಕಾಂಚನಾ ವೈಶಾಲಿ ಕಾಸರವಳ್ಳಿ, ವಜ್ರಮುನಿ, ತೂಗುದೀಪ ಶ್ರೀನಿವಾಸ್ ಮತ್ತಿತರ ದೊಡ್ಡ ತಾರಾಬಳಗವೇ ಚಿತ್ರದಲ್ಲಿತ್ತು. ಈ ಸಿನೆಮಾದ ವಿತರಣೆಗೂ ಆಗ ಯಾರೂ ಮುಂದೆ ಬರಲಿಲ್ಲ. ಹೀಗಾಗಿ ಪಾರ್ವತಮ್ಮ ಅವರೇ ವಿತರಣೆಯ ಹೊಣೆಯನ್ನೂ ನಿಭಾಯಿಸಿದರು.  ನಿರೀಕ್ಷೆ ಮೀರಿ ಚಿತ್ರ ಭರ್ಜರಿ ಹಿಟ್ ಆಯಿತು. ಗೃಹಿಣಿಯಾಗಿದ್ದವರೊಬ್ಬರು ತೆಗೆದುಕೊಂಡ ರಿಸ್ಕ್‌ಗೆ ಅಲ್ಲಿ ಪ್ರತಿಫಲ ಸಿಕ್ಕಿತು. ಸಿನೆಮಾ ಕ್ಷೇತ್ರದಲ್ಲಿ ರಾಜ್ ಕುಟುಂಬ ಸ್ವಾವಲಂಭಿಯಾಗಿ ಬೆಳೆಯುವ ಮುನ್ಸೂಚನೆ ಅದಾಗಿತ್ತು.

ಅಷ್ಟೊತ್ತಿಗಾಗಲೇ ರಾಜ್‌ಕುಮಾರ್ ನಟರಾಗಿ ಹೆಸರು ಮಾಡಿದ್ದರು. ಅಭಿಮಾನಿ ಬಳಗ ಬೆಳೆಯಲಾರಂಭಿಸಿತ್ತು. ಆದರೆ ಒಬ್ಬ ನಟನಿಗೆ ಆಗ ಎಷ್ಟು ಸಂಭಾವನೆ ಸಿಗುತ್ತಿತ್ತು? 40- 50 ಸಾವಿರ ಸಿಕ್ಕರೆ ಹೆಚ್ಚು. ಆದರೆ ಪಾರ್ವತಮ್ಮ ಅವರೇ ನಿರ್ಮಾಣ ಮಾಡಿ, ಸಿನೆಮಾ ವಿತರಣೆಗೆ ಇಳಿದ ಮೇಲೆ ಕೋಟಿ ಕೋಟಿ ಹಣವನ್ನು ರಾಜ್ ಕುಟುಂಬ ನೋಡಿತು. ಬಹುಶಃ ಅದು ಪಾರ್ವತಮ್ಮ ಅವರ ಜೀವನಕ್ಕೆ ಟರ್ನಿಂಗ್ ಪಾಯಿಂಟ್ ಕೂಡ.

ನಂತರ ಪಾರ್ವತಮ್ಮ ಶಾಲೆಯೊಂದಲ್ಲಿ ಮೇಷ್ಟ್ರಾಗಿದ್ದ ತಮ್ಮ ಸಹೋದರ ಚಿನ್ನೇಗೌಡರನ್ನು ಕರೆತಂದರು. ಅವರಿಗೆ ಸಿನೆಮಾ ನಿರ್ಮಾಣದ ಹೊಣೆಗಾರಿಕೆಯನ್ನು ವಹಿಸಿದರು. ವಜ್ರೇಶ್ವರ್ ಕಂಬೈನ್ಸ್ ಎದ್ದು ನಿಂತಿತು. ಮುಂದಿನ ಒಂದು, ಒಂದೂವರೆ ದಶಕ ಕನ್ನಡ ಚಿತ್ರರಂಗವನ್ನು ಅಕ್ಷರಶಃ ಆಳಿದ್ದು ವಜ್ರೇಶ್ವರಿ ಕಂಬೈನ್ಸ್ ಮತ್ತು ಅದರ ರುವಾರಿ ಪಾರ್ವತಮ್ಮ ರಾಜ್‌ಕುಮಾರ್. ರಾಜ್ಯದ ನಾಲ್ಕೈದು ಕಡೆ ಡಿಸ್ಟ್ರಿಬ್ಯೂಷನ್ ಸಂಸ್ಥೆಯನ್ನು ಹುಟ್ಟುಹಾಕಿದರು. ರಾಜ್‌ಕುಮಾರ್ ಪ್ರತಿ ಸಿನೆಮಾಗಳ ಕತೆಯಿಂದ ಹಿಡಿದು, ಹಿರೋಇನ್‌ವರೆಗೆ ಪಾರ್ವತಮ್ಮ ಅವರೇ ನಿರ್ಧಾರ ಮಾಡಲು ಆರಂಭಿಸಿದರು. ಒಂದು ಕಡೆ ಹಣ, ಇನ್ನೊಂದು ಕಡೆ ಹೆಸರು ಹೀಗೆ ರಾಜ್ ಕುಟುಂಬ ಸಿನೆಮಾ ಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲೆ ನಿಲ್ಲಲು ಕಾರಣವಾದವು. ಪಾರ್ವತಮ್ಮ ರಾಜ್‌ಕುಮಾರ್ ಅದರ ಬೆನ್ನೆಲುಬಾಗಿದ್ದರು.

ಅಲ್ಲೀವರೆಗೂ ಸಿನೆಮಾ ಸಂಬಂಧಿತ ವಾಣಿಜ್ಯ ಚಟುವಟಿಕೆಯಲ್ಲಿದ್ದ ಪಾರ್ವತಮ್ಮರ ಬಗ್ಗೆ ಮೊದಲ ಬಾರಿಗೆ ಅಪಸ್ವರ ಶುರುವಾಗಿದ್ದು ಪತ್ರಕರ್ತರೊಬ್ಬರ ಕಿಡ್ನಾಪ್ ಪ್ರಕರಣ. ಅದು 80ರ ದಶಕ. ‘ಪ್ರಜಾವಾಣಿ’ಯಲ್ಲಿ ಕೆಲಸ ಮಾಡುತ್ತಿದ್ದ ಗಂಗಾಧರ್ ಮೊದಲಿಯಾರ್ ಬಸವಣ್ಣನ ಪಾತ್ರಕ್ಕೆ ಯಾರು ಹೊಂದುತ್ತಾರೆ ಎಂಬ ತಮಾಷೆಯ ವರದಿಯೊಂದನ್ನು ಬರೆದಿದ್ದರು. ಅದನ್ನು ಸಹಿಸದೆ ಮೊದಲಿಯಾರ್‌ರನ್ನು ಕಿಡ್ನಾಪ್ ಮಾಡಿಸಿ, ಒಂದು ದಿನ ಇಟ್ಟುಕೊಂಡು ಬಿಟ್ಟು ಕಳುಹಿಸಿದ್ದರು. ಯಾವಾಗ ಸಹ ಪತ್ರಕರ್ತನ ಕಿಡ್ನಾಪ್ ಪ್ರಕರಣ ಬಯಲಿಗೆ ಬಂತೋ, ಪಾರ್ವತಮ್ಮ ರಾಜ್‌ಕುಮಾರ್ ಅವರ ಬಗ್ಗೆ ಮಾಧ್ಯಮಗಳು ತಿರುಗಿ ಬಿದ್ದವು. ಈ ಸಮಯದಲ್ಲಿ ‘ಲಂಕೇಶ್ ಪತ್ರಿಕೆ’ ವಿಸ್ತೃತ ವರದಿ ಪ್ರಕಟಿಸಿತು. ಮೊದಲ ಬಾರಿಗೆ ತೆರೆಮರೆಯಿಂದ ಪಾರ್ವತಮ್ಮ ರಾಜ್‌ಕುಮಾರ್ ಸುದ್ದಿಯಾಗಬಾರದಿದ್ದ ಕಾರಣಕ್ಕೆ ಸುದ್ದಿಯಾದರು.

ನಾನು ಪತ್ರಕರ್ತನಾಗಿ ಅವರನ್ನು ಹಲವು ಬಾರಿ ಭೇಟಿ ಮಾಡಿದ್ದೇನೆ. ಮೊದಲ ಬಾರಿಗೆ ಅವರನ್ನು ನೋಡಿದ್ದು ಪತ್ರಿಕಾಗೋಷ್ಠಿಯೊಂದರಲ್ಲಿ. ಎಲ್ಲರನ್ನೂ ಪರಿಚಯಿಸುತ್ತಾ, “ಇವರು ಸತ್ಯಮೂರ್ತಿ, ಲಂಕೇಶ್ ಪತ್ರಿಕೆ,” ಎಂದರು. ಅಲ್ಲೀವರೆಗೆ ಮಂದಹಾಸ ಬೀರುತ್ತ ಕುಳಿತಿದ್ದ ಪಾರ್ವತಮ್ಮ ಅವರ ಮುಖ ಗಡುಸಾಯಿತು, “ಸರಿ,” ಎಂದರು. ಪಾರ್ವತಮ್ಮ ಅವರಿಗೆ ಲಂಕೇಶ್ ಬಗ್ಗೆ ಭಯ ಇತ್ತು. ಆ ಸಮಯದಲ್ಲಿ ಲಂಕೇಶ್ ಕೂಡ ಸಿನೆಮಾ ಇಂಡಸ್ಟ್ರಿಯಲ್ಲಿ ವಜ್ರೇಶ್ವರಿ ಕಂಬೈನ್ಸ್ ಹೊಂದಿದ್ದ ಹಿಡಿತವನ್ನು ವಿರೋಧಿಸಿ ವರದಿಗಳನ್ನು ಪ್ರಕಟಿಸುತ್ತಿದ್ದರು. ಆದರೆ ಮುಂದಿನ ದಿನಗಳಲ್ಲಿ ಪಾರ್ವತಮ್ಮ ಜತೆಗೆ ನವಿರಾದ ಸಂಬಂಧವೂ ಬೆಳೆಯಿತು ಎಂಬುದು ಬೇರೆ ಮಾತು.

ಇವತ್ತಿಗೆ ಸುಮ್ಮನೆ ಕುಳಿತು ಆಲೋಚನೆ ಮಾಡಿದರೆ, ಪಾರ್ವತಮ್ಮ ಎಂತಹ ಗಟ್ಟಿ ಹೆಣ್ಣು ಮಗಳು ಇರಬಹುದು ಅನ್ನಿಸುತ್ತದೆ. ನಾಲ್ಕನೇ ಕ್ಲಾಸ್ ಓದಿದ್ದ, ಹಳ್ಳಿಯ ಹೆಣ್ಣುಮಗಳು ಅವರು. ಚಿಕ್ಕ ವಯಸ್ಸಿನಲ್ಲಿಯೇ ರಾಜ್‌ಕುಮಾರ್ ಅವರಿಗೆ ಮದುವೆ ಮಾಡಿಕೊಡಲಾಯಿತು. ಮುಂದಿನ ಕೆಲವು ವರ್ಷ ಕುಟುಂಬ, ಮನೆ, ಮಕ್ಕಳು ಇದರಲ್ಲಿಯೇ ಕಳೆದು ಹೋದವರು. ಅಂತವರು ವಜ್ರೇಶ್ವರಿ ಕಂಬೈನ್ಸ್ ಕಟ್ಟುತ್ತಾರೆ, ಸಾಲು ಸಾಲು ನಿರ್ಮಾಣ ಮಾಡುತ್ತಾರೆ, ಕೂಡು ಕುಟುಂಬವನ್ನು ಸಲಹುತ್ತಾರೆ ಮತ್ತು ಎಲ್ಲಾ ಬೆಳವಣಿಗೆಗಳಿಗೆ ಕೇಂದ್ರಬಿಂದುವಾಗುತ್ತಾರೆ ಎಂಬುದು ಅಚ್ಚರಿ ಮೂಡಿಸುವ ಸಂಗತಿ. ಇವತ್ತಿಗೂ ಹೆಣ್ಣು ಮಕ್ಕಳು ಚೌಕಟ್ಟಿನಾಚೆಗೆ ಏನಾದರೂ ಮಾಡಲು ಮುಂದಾದರೆ ಸಮಾಜ ಕಾಲೆಳೆಯುತ್ತದೆ. ಅಂತಹದರಲ್ಲಿ ಆ ಕಾಲದಲ್ಲಿಯೇ ಪಾರ್ವತಮ್ಮ ತೆಗೆದುಕೊಂಡ ದಿಟ್ಟ ನಿರ್ಧಾರಗಳಲ್ಲಿ ಕೆಲವು ಇವತ್ತಿಗೂ ಮಾದರಿಯಾಗುತ್ತವೆ. ಈ ಕಾರಣಕ್ಕಾಗಿಯಾದರೂ, ಅವರ ನೆನಪು ಚಿರಸ್ಥಾಯಿಯಾಗಿ ಉಳಿದು ಹೋಗುತ್ತದೆ.


ಚಿತ್ರ ಕೃಪೆ: ದಿ ಹಿಂದೂ.

Leave a comment

FOOT PRINT

Top